ಮಾನವೀಯತೆಗೆ ಹಂಬಲಿಸುವ ಚೇತನ ಸೋಮೇಶ್ವರ

 ಚೇತನ ಸೋಮೇಶ್ವರ ಅವರ ವಿಮರ್ಶಾ ನೋಟಗಳ ಸಂಕಲನ -ಮಾನವ್ಯ.
ಖ್ಯಾತ ವಿದ್ವಾಂಸರಾದ ಡಾ ಎ ಸುಬ್ಬಣ್ಣ ರೈ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ-
ಡಾ. ಎ. ಸುಬ್ಬಣ್ಣ ರೈ
ನನ್ನ ವಿದ್ಯಾರ್ಥಿ ಮಿತ್ರರಾದ ಡಾ. ಚೇತನ ಸೋಮೇಶ್ವರ ಅವರು ಕವಿ ಹೃದಯದ ಸೂಕ್ಷ್ಮ ಸಂವೇದನಾಶೀಲ ಬರಹಗಾರರು. ಅದನ್ನು ಸಾಬೀತುಪಡಿಸಲೆಂಬಂತೆ ಈಗಾಗಲೇ ಅವರು ಮೂರು ಕವನ ಸಂಕಲಗಳನ್ನು ಹೊರತಂದಿದ್ದಾರೆ. ಸಾಹಿತ್ಯದ ಓದಿಗೂ ಇಂತಹುದೇ ಸಂವೇದನಾಶೀಲ ಮನಸ್ಸು ಅಗತ್ಯ. ಹಾಗಿದ್ದಾಗ, ಸಾಹಿತ್ಯ ಕೃತಿಯೊಂದಿಗೆ ಹೃದಯ ಸಂವಾದ ಸಾಧ್ಯವಾಗುತ್ತದೆ, ಸಹೃದಯ ಸ್ಪಂದನ ಏರ್ಪಡುತ್ತದೆ. ಚೇತನ ಸೋಮೇಶ್ವರ ಅವರ ಪ್ರಸ್ತುತ ಸಂಕಲನದ ಬಹುಪಾಲು ಬರಹಗಳು ಇಂತಹ ಸೂಕ್ಷ್ಮ ಸಂವೇದನಾಶೀಲ ಓದಿನ ಫಲವಾಗಿ ಹುಟ್ಟಿಕೊಂಡ ಸಹೃದಯ ಸ್ಪಂದನಗಳು.
ಹಾಗಂತ ಇಲ್ಲಿರುವ ಎಲ್ಲಾ ಬರಹಗಳೂ ಸಾಹಿತ್ಯಾಧ್ಯಯನಗಳೇ ಎಂದು ಹೇಳಲಾಗದು. ಸಾಹಿತ್ಯಾಧ್ಯಯನದ ಜತೆಗೆ ಕಲಾ ಮೀಮಾಂಸೆ, ವೈಚಾರಿಕ ಚಿಂತನೆ, ಅನುಭವ ಕಥನದಂತಹ ಬರಹಗಳೂ ಇಲ್ಲಿವೆ. ಸಾಹಿತ್ಯಾಧ್ಯಯನ ಸಂದರ್ಭದಲ್ಲಿ ಎಲ್ಲಾ ಕಾಲದ, ಎಲ್ಲಾ ಪ್ರದೇಶದ, ಎಲ್ಲಾ ಮಾದರಿಯ ಸಾಹಿತ್ಯ ಕೃತಿಗಳೂ ಚೇತನ ಅವರ ಓದಿನ ವ್ಯಾಪ್ತಿಗೆ ಒಳಪಟ್ಟಿವೆ. ಮೌಖಿಕ ಸಾಹಿತ್ಯ, ಗ್ರಂಥಸ್ಥ ಸಾಹಿತ್ಯ, ಪ್ರಾಚೀನ ಸಾಹಿತ್ಯ, ಮಧ್ಯಕಾಲೀನ ಸಾಹಿತ್ಯ, ಆಧುನಿಕ ಸಾಹಿತ್ಯ, ಜನಪ್ರಿಯ ಸಾಹಿತ್ಯ, ಪದ್ಯ ಸಾಹಿತ್ಯ, ಗದ್ಯ ಸಾಹಿತ್ಯ – ಹೀಗೆ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಎಲ್ಲಾ ಬಗೆಯ ಸಾಹಿತ್ಯವೂ ಅವರಿಗೆ ಪ್ರಿಯವೆನಿಸುತ್ತದೆ.
ಸಾಹಿತ್ಯ ಅಧ್ಯಯನವಾಗಲಿ, ವೈಚಾರಿಕ ಬರಹವಾಗಲಿ, ಅವೆಲ್ಲವೂ ಮಾನವ ಸಮುದಾಯದ ಶ್ರೇಯೋಭಿವೃದ್ಧಿಯತ್ತ ತುಡಿಯಬೇಕೆಂಬ ಕಾಳಜಿ ಚೇತನ ಸೋಮೇಶ್ವರರ ಬರಹಗಳಲ್ಲಿ ಎದ್ದು ಕಾಣುತ್ತದೆ. ಜೊತೆಗೆ ಸಾಹಿತ್ಯದಲ್ಲಿನ ಜನಪರ ನಿಲುವು, ಪ್ರಗತಿಪರ ಮನೋಧರ್ಮಗಳನ್ನು ಗುರುತಿಸುವ ಪ್ರವೃತ್ತಿಯೂ ಇಲ್ಲಿ ಕಂಡುಬರುತ್ತದೆ. “ಕುವೆಂಪು ಅವರ ಪ್ರಗತಿಪರ ನಿಲುವು-ಒಂದು ತೌಲನಿಕ ವಿವೇಚನೆ” – ಎಂಬ ಲೇಖನದಲ್ಲಿ ಮುಖ್ಯವಾಗಿ ಕುವೆಂಪು ಅವರ ವಿಶ್ವ ಮಾನವ ಕಲ್ಪನೆಯ ಬಗೆಗೆ ಪ್ರಸ್ತಾಪಿಸುತ್ತಾ, ಅವರ ಮಾನವತಾವಾದ, ಪ್ರಗತಿಪರ ನಿಲುವನ್ನು ಹಿಂದಿ ಸಾಹಿತಿ ಪ್ರೇಮಚಂದ್, ಕನ್ನಡದ ಚಿಂತನಶೀಲ ಲೇಖಕ ಎ. ಎನ್. ಮೂರ್ತಿರಾವ್ ವಿಚಾರಧಾರೆಗಳೊಂದಿಗೆ ತುಲನೆ ಮಾಡುತ್ತಾರೆ.
ಸಾಹಿತ್ಯ ಕೃತಿಯೊಂದು ಮೌಲಿಕವೆನಿಸುವುದು ಅದರಲ್ಲಿನ ಸಾರ್ವಕಾಲಿಕ, ಸಾರ್ವತ್ರಿಕ ಮೌಲ್ಯ ಹಾಗೂ ಗುಣ – ಲಕ್ಷಣಗಳಿಂದ. ಅದಕ್ಕೆ ಪೂರಕವೆಂಬಂತೆ ಪೂರ್ವಕಾಲದ, ಅನ್ಯದೇಶಗಳ ಕೃತಿಗಳನ್ನು ನಮ್ಮ ಕಾಲ-ದೇಶಕ್ಕೆ ಪ್ರಸ್ತುತಗೊಳಿಸುವ ಕೆಲಸವೂ ಅಧ್ಯಯನಕಾರರಿಂದ ನಡೆಯಬೇಕಾಗುತ್ತದೆ. ಚೇತನ ಅವರ ಇಲ್ಲಿನ ಬಹುಪಾಲು ಬರಹಗಳು ಆ ಕೆಲಸವನ್ನು ಯಶಸ್ವಿಯಾಗಿ ಮಾಡಿವೆ. ‘ಬೆಟ್ಟದ ಜೀವ – ಒಂದು ಸೀಮಿತ ಗ್ರಹಿಕೆ’ ಎಂಬ ಲೇಖನವನ್ನೇ ಇಲ್ಲಿ ಉದಾಹರಿಸಬಹುದು. ಲೇಖನದ ಕೊನೆಯ ವಾಕ್ಯ ಅಂತಹ ಪ್ರಯತ್ನದ ಪ್ರತೀಕವಾಗಿದೆ. “ಕೃತಿಯಲ್ಲಿ ಬರುವ ಅಡ್ಡ ಬಲಿಪ್ಪ, ಬೇಂಗಪ್ಪಲ್ಲಿ, ಪಾರಂಬೆಕ್ಕುಗಳು ಒಂದೊಂದಾಗಿ ಮಾಯವಾಗುತ್ತಾ ಒಟ್ಟಾರೆ ಕಾಡು-ಬೆಟ್ಟಗಳೇ ಇಲ್ಲವಾಗುತ್ತಿರುವ ಬೋಳು ವರ್ತಮಾನದಲ್ಲಿ ಬೆಟ್ಟದ ಜೀವ ವಿಶಿಷ್ಟ ಓದಿನ ಅನುಭವ ಹಾಗೂ ಜೀವನ ದರ್ಶನ ನೀಡುತ್ತಾ ಮನಸಿನಲ್ಲಿ ಉಳಿಯುತ್ತದೆ.” ಸಾಹಿತ್ಯದ ಪಠ್ಯವೊಂದನ್ನು ವರ್ತಮಾನಕ್ಕೆ ಪ್ರಸ್ತುತಗೊಳಿಸಿಕೊಳ್ಳುವ ಬಗೆಯಿದು.
ಸಾಹಿತ್ಯ ಕೃತಿಯೊಂದರ ಓದಿಗೆ ಹಲವು ಆಯಾಮಗಳಿರುತ್ತವೆ. ಅದೇ ರೀತಿ ಒಂದು ಕೃತಿಯಿಂದ ಇನ್ನೊಂದು ಕೃತಿಗೆ ಓದಿನ ವಿಧಾನ, ಓದುಗರ ಮಾನಸಿಕ ಸಿದ್ಧತೆಗಳು ಬದಲಾಗುತ್ತಾ ಹೋಗುತ್ತವೆ. ಇಂತಹ ಬಹು ಆಯಾಮಗಳಿಂದ ಸಾಹಿತ್ಯ ಕೃತಿಗಳನ್ನು ಓದುವ ಗುಣ ಚೇತನ ಸೋಮೇಶ್ವರ ಅವರಿಗೆ ಸಿದ್ಧಿಸಿದೆಯೆನ್ನಬಹುದು. ಆ ಸಿದ್ಧಿಯ ಫಲಗಳೇ ಇಲ್ಲಿಯ ಬರಹಗಳು. ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತ್ತಿರುವ ಇಲ್ಲಿಯ ಪ್ರತಿಯೊಂದು ಲೇಖನವನ್ನೂ ಉದಾಹರಿಸಿ ವಿಶ್ಲೇಷಿಸುವುದು ಅಷ್ಟೊಂದು ಸಮಂಜಸವೆನಿಸಲಾರದು. ಸ್ವತಃ ಸಂಕಲನದಲ್ಲಿನ ಬರಹಗಳು ಸಹೃದಯ ಓದುಗರಿಗೆ ಪ್ರಮಾಣಗಳಾಗಿರಬೇಕೇ ಹೊರತು ಇಂತಹ ಮುನ್ನುಡಿ ಬೆನ್ನುಡಿಗಳಲ್ಲ.
ಒಟ್ಟಾರೆಯಾಗಿ ಸಾಹಿತ್ಯವನ್ನು ಪ್ರೀತಿಸುವ, ಮಾನವೀಯತೆಗಾಗಿ ಹಂಬಲಿಸುವ ಸಂವೇದನಾಶೀಲ ಸಹೃದಯ ಸ್ಪಂದನಗಳಾಗಿ ಇಲ್ಲಿನ ಬರಹಗಳು ನಮಗೆ ಪ್ರಸ್ತುತವೆನಿಸುತ್ತವೆ. ಅಂತಹ ಗುಣಗಳುಳ್ಳ ಎಲ್ಲರಿಗೂ ಇವು ಇಷ್ಟವಾಗಬಹುದು. ಇಂತಹ ಗುಣಾತ್ಮಕ ಅಂಶಗಳಿಂದ ಕೂಡಿದ ಚೇತನ ಅವರ ಗದ್ಯ ಬರಹಗಳ ಈ ಚೊಚ್ಚಲ ಸಂಕಲನಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಲೆಂದೂ, ಆ ಮೂಲಕ ಮುಂದಿನ ಅವರ ಸಾಹಿತಿಕ ಬರವಣಿಗೆಗಳು ಇನ್ನಷ್ಟು ಚೇತೋಹಾರಿಯಾಗಿ ಮೂಡಿ ಬರಲೆಂದೂ ಮನಸಾ ಹಾರೈಸುತ್ತೇನೆ.

‍ಲೇಖಕರು avadhi

July 25, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: