ಅಲ್ಲಿ ಸೂಫಿ ರಾಗ..

ಚೈತ್ರಿಕಾ ನಾಯ್ಕ್ ಹರ್ಗಿ ಅವರಿಗೆ ಸುತ್ತಾಟ ತುಂಬಾ ಇಷ್ಟ. ಬೆನ್ನಿಗೆ ಬ್ಯಾಕ್ ಪ್ಯಾಕ್ ಏರಿಸಿ ಹೊರಟರೆ ಇಡೀ ಜಗತ್ತು ಅವರ ನೆಲ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರಾದ ಇವರ ಬೀಡು ಸಧ್ಯ ದೆಹಲಿಯಲ್ಲಿ.   

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಚೈತ್ರಿಕಾ ಈಗ ಡಿಜಿಟಲ್ ಕಂಟೆಂಟ್ ರೈಟರ್ ಮತ್ತು ಅನುವಾದಕಿ, ಫ್ರಿಲಾನ್ಸ್ ಜರ್ನಲಿಸ್ಟ್

ತಾವು ಸುತ್ತಿದ ಕಡೆಯ ಅನುಭವಗಳನ್ನೆಲ್ಲಾ ‘ಅವಧಿ’ಯಲ್ಲಿ ಮೊಗೆದು ಕೊಡಲಿದ್ದಾರೆ. ಹಾಗಾಗಿಯೇ ಇದು ಬ್ಯಾಕ್ ಪ್ಯಾಕ್ ಡೈರಿ. ಈಗಾಗಲೇ ಮೂರು ಕಂತು ಅವಧಿಯಲ್ಲಿ ಪ್ರಕಟವಾಗಿದ್ದು ಈಗ ಅಂಕಣದ ಸ್ವರೂಪ ಪಡೆದುಕೊಳ್ಳುತ್ತಿದೆ. 

ಸೂಫಿ ಬಾದಷಹ ನಿಜಾಮುದ್ದೀನ್ ದರ್ಗಾ

ಇಲ್ಲಿ ಮುಸ್ಲಿಂಮರು, ಸಿಖ್ಖರು, ಹಿಂದೂಗಳು  ಒಂದೇ ಜಾಗದಲ್ಲಿ ಸೇರಿ ಪ್ರಾರ್ಥನೆ ಮಾಡುತ್ತಾರೆ. ಏಕತೆಯ ಅರ್ಥಾತ್ ದರ್ಶನ ಇದೆ ಅಲ್ಲವೆ ? ಅಂದೆನಿಸಿಬಿಡುವ ಈ ಸ್ಥಳ ಇರುವುದು ದೆಹಲಿಯ ದಕ್ಷಿಣದಲ್ಲಿ. ಹೆಸರು ನಿಜಾಮುದ್ದೀನ್ ದರ್ಗಾ. ಸೂಫಿ ಸಂತ ಶೇಖ್ ನಿಜಾಮುದ್ದೀನ್ ಔಲಿಯಾರ ಸಮಾಧಿಯ ಸ್ಥಳ ಇದು.  ‘ಸೂಫಿ ಸಂತರ ಬಾದಷಹ’ ಎಂದೆ ಕರೆಯಲ್ಪಡುವ ನಿಜಾಮುದ್ದೀನ್, ತುಘಲಕ್ ಸಂತತಿಯ ಘಿಯಾಸುದ್ದೀನ್ ತುಘಲಕ್ ನ ಸಮಕಾಲೀನನು ಹೌದು.

1238 ರಲ್ಲಿ ಉತ್ತರಪ್ರದೇಶದಲ್ಲಿ ಜನನ. ಐದನೆ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಾಗ ತಾಯಿ ನಿಜಾಮುದ್ದೀನ್ ನನ್ನು ದೆಹಲಿಗೆ ಕರೆದುಕೊಂಡು ಬರುತ್ತಾಳೆ.  ಆ ನಂತರ ಪಂಜಾಬ್ ಪ್ರಾಂತ್ಯದಲ್ಲಿದ್ದ  ಸೂಫಿ ಸಂತ ಬಾಬಾ ಫರೀದ್  ಬಳಿ ಹೋಗಿ ಅಲ್ಲಿಂದಲೆ ಸೂಫಿಸಂ ತತ್ವಗಳ ಪ್ರಭಾವಕ್ಕೆ ನಿಜಾಮುದ್ದೀನ್ ಒಳಗಾಗುತ್ತಾರೆ. ಬಾಬಾ ಫರೀದ್ ತನ್ನ ಉತ್ತರಾಧಿಕಾರಿಯಾಗಿ ನಿಜಾಮುದ್ದೀನ್ ನನ್ನು ನೇಮಿಸಿದರು ಸಹ ದೆಹಲಿಯ ಸೆಳೆತದಿಂದ  ನಿಜಾಮುದ್ದೀನ್ ವಾಪಸ್ಸು ದೆಹಲಿಯತ್ತ ಮುಖ ಮಾಡುತ್ತಾರೆ.

ಹಾಗಾದರೆ ಕಾಂತೀಯ ಸೆಳೆತ ಹೊಂದಿರುವ ಸೂಫಿಸಂ ಹುಟ್ಟನ್ನು ನೋಡುವುದಾದರೆ, ಇಸ್ಲಾಂ  ಹುಟ್ಟಿದಾಗಲೆ ಸೂಫಿಸಂ ಕೂಡ ಹುಟ್ಟಿತು ಎನ್ನಲಾಗುತ್ತದೆ. ಹಾಗೆ ಭಾರತಕ್ಕೆ ಯಾವಾಗ ಟರ್ಕರು ಮುಸ್ಲಿಂ ದೊರೆಗಳು ಬಂದರೊ ಅವರ ಜೊತೆಗೆ ಸೂಫಿಸಂ ಕೂಡ ಭಾರತಕ್ಕೆ ಕಾಲಿಟ್ಟಿತು. ಆದರೆ ಭಾರತದಲ್ಲಿ ಸೂಫಿಸಂ ಇಸ್ಲಾಂ ನ ಕಟ್ಟರ್ ನಿಯಮಗಳನ್ನು ದೂರತಳ್ಳಿ ಬೆಳೆಯಿತು. ಮಧ್ಯಯುಗದಲ್ಲಿ  ದರವೇಶಿಗಳು, ನಿರಾಶ್ರಿತರು, ಬಡವರ, ಉದಾತ್ತ ನಿಲುವಿನ ಜನರಿಗೆ ಸೂಫಿಸಂ ಊರುಗೋಲಿನಂತೆ ಕಂಡಿತು. ಸೂಫಿ ಸಂತ ನಿಜಾಮುದ್ದೀನ್  ಹೇಳುವಂತೆ  ‘ಸೂಫಿಸಂ ಎಂದರೆ ಟೊಳ್ಳು ಸಂಪ್ರಾದಾಯಗಳಲ್ಲ, ಶುಕ್ರವಾರದ ಪ್ರಾರ್ಥನೆಯಲ್ಲ, ಅದೊಂದು ಮಾನವೀಯ ಮೌಲ್ಯದ ಸಾರೋಕ್ತಿ’

ಭಾರತದೆಲ್ಲೆಡೆ ಹಬ್ಬಿದ ಸೂಫಿಸಂ ಕರ್ನಾಟದಲ್ಲಿ ಇತ್ತೆ ? ಎಂದು ನೋಡಿದರೆ ಹೌದು. ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸೂಫಿ ದರ್ಗಾಗಳು ಕಂಡುಬರುತ್ತವೆ. ಉಳಿದೆಡೆಗಳಲ್ಲಿ ತುಂಬಾ ವಿರಳವಾಗಿ ಕಾಣಸಿಗುತ್ತವೆ.

ಉತ್ತರ ಕರ್ನಾಟಕದಲ್ಲಿ ನಿಜಾಮರ ಆಳ್ವಿಕೆ ಸಮಯ ಸೂಫಿ ಪಂಥ ಆರಂಭವಾಗುತ್ತದೆ. ಇದು ಹಿಂದೂ ಮುಸ್ಲಿಂ ಏಕತೆಯ ಪಂಥದಂತೆ ಕೂಡ ಕಾಣುತ್ತದೆ. ಇಂದು ಕರ್ನಾಟಕದ ದರ್ಗಾಗಳಲ್ಲಿ ಜಂಗಮರು ಕುರುಬರು ಕೂಡಾ ಪೂಜೆಸಲ್ಲಿಸುವುದನ್ನು ಸಿಂಧನೂರು ಮತ್ತು ತಿಂಥಿಣಿಯಲ್ಲಿ ಕಾಣಬಹುದು. ಕರ್ನಾಟಕದಲ್ಲಿ ಇದರ ಗುರುಶಿಷ್ಯ ಪರಂಪರೆಯನ್ನು ನೋಡಿದರೆ ಆಶ್ಚರ್ಯ ಎನಿಸುತ್ತದೆ.  ನಾಸಿರುದ್ದೀನ್ –ಸಿದ್ದಲಿಂಗ, ಬಂದೇನವಾಜ್ –ಶರಣಬಸವೇಶ್ವರ, ಮುರ್ತುಜಾಖಾದ್ರಿ-ಮಹಾಂತಯೋಗಿ, ಕಡಕೋಳ ಮಡಿವಾಳಪ್ಪ-ಚನ್ನೂರ ಜಲಾಲಸಾಬ ಹೀಗೆ..! ಉತ್ತರ ಕರ್ನಾಟಕದಲ್ಲಿ ಮೊಹರಂ ಹಬ್ಬವನ್ನು ಇಂದು ಕೂಡ ಹಿಂದೂಗಳು ಮುಸ್ಲಿಂಮರ ಜೊತೆ ಸೇರಿ ಆಚರಿಸುತ್ತಾರೆ.

ಮತ್ತೆ ಕರ್ನಾಟಕದಿಂದ ದೆಹಲಿಯ ನಿಜಾಮುದ್ದೀನ್ ದರ್ಗಾದ ದಾರಿಗೆ ಬಂದರೆ, ದರ್ಗಾದ ರಸ್ತೆಯ ಆಚೆ ಈಚೆ ಬಿರಿಯಾನಿ ಮತ್ತು ಕಬಾಬ್ ಗೂಡಂಗಡಿಗಳು ಕಾಣ ಸಿಗುತ್ತವೆ. ದರ್ಗಾದ ಬಾಗಿಲಲ್ಲಿ ಗುಲಾಬಿ ಹೂಗಳ ಪಕಳೆಯನ್ನು ರಾಶಿ ರಾಶಿ ಹಾಕಿಕೊಂಡು ಕೂತವರು, ಹಾಗೆ ಚಾದರ್ ಅಂಗಡಿಗಳು ಸಹ. ದರ್ಗಾದ ಒಳ ಹೋಗುವ ಬಾಗಿಲು ಹೊಕ್ಕರೆ ನಡೆಯುವ ಜಾಗದ ಬದಿ ಭಿಕ್ಷೆಗಾಗಿ ವಯಸ್ಸಾದವರ ನಿರಾಶ್ರಿತರ ಅಂಗವೈಕಲ್ಯರ ಸಾಲು.

ಹಾಗೆ ಒಳ ಹೋದರೆ ಮೊದಲು ಸಿಗುವುದೆ  ಶ್ರೇಷ್ಠ ಸೂಫಿ ಸಂಗೀತಗಾರ ಮತ್ತು ಕವಿ ಅಮಿರ್ ಖುಸ್ರೋವಿನ ಸಮಾಧಿ. ನಿಜಾಮುದ್ದೀನ್ ನ ಶಿಷ್ಯನಾಗಿದ್ದ ಖುಸ್ರೋ, ತನ್ನನ್ನು ಸೂಫಿ ಬಾದಷಹ ನಿಜಾಮುದ್ದೀನ್ ಜೊತೆಗೆ ಸಮಾಧಿ ಮಾಡಿ ಎಂದಿದ್ದನಂತೆ. ಆದ್ದರಿಂದ ಸ್ವಲ್ಪ ಜಾಗದ ಅಂತರದಲ್ಲಿ ಖುಸ್ರೋ ಸೂಫಿ ಸಂಗೀತ ಆಲಿಸುತ್ತಾ ಮಲಗಿದ್ದಾನೆ.  ಹಾಗೆ ಮುಂದೆ ಹೋದರೆ ನಿಜಾಮುದ್ದೀನ್ ದರ್ಗಾ. ಅದರ ಒಂದು ಭಾಗದ ಆಚೆ ಅಲ್ಲಾವುದ್ದೀನ್ ಖಿಲ್ಜಿ ಕಟ್ಟಿಸಿದ ಬೃಹದಾಕಾರದ ಮಸೀದಿಯಿದೆ. ಇದನ್ನು ಕಟ್ಟಿಸಲು ಖಿಲ್ಜಿಗೆ 15 ವರ್ಷ ತಗುಲಿತ್ತಂತೆ !

ಅಂದು ಗುರುವಾರವಾದ್ದರಿಂದ ರಾತ್ರಿ ಕವ್ವಾಲಿಗಳ ಧ್ಯಾನವಿದೆ ಅದಕ್ಕೆ ರಾಶಿ ರಾಶಿ ಜನರು. ಸೂಫಿಗಳು ಸಂಗೀತದಲ್ಲಿ ಪರಮಾತ್ಮನನ್ನು ಕಾಣಲು ಬಯಸಿದವರು. ಇಂದು ಜಗತ್ತಿನ ಅನೇಕ ಮುಸ್ಲಿಂ ರಾಷ್ಟ್ರಗಳಲ್ಲಿ ಕಟ್ಟರ್ ಮುಸ್ಲಿಂಮರು ಸೂಫಿಗಳನ್ನು ವಿರೋಧಿಸಲು ಸೂಫಿಗಳ  ಸಂಗೀತ ಮತ್ತು ಅವರ ಉದಾತ್ತ ವಿಚಾರಗಳೆ ಪ್ರಮುಖ ಕಾರಣ. ಆದ್ದರಿಂದ ದಕ್ಷಿಣ ಏಷ್ಯಾದ ಅತಿ ದೊಡ್ಡ ಸೂಫಿ ದರ್ಗಾ ಲಾಹೋರ್ ನ ‘ದಾತಾ ದರ್ಬಾರ್’ ನ ಮೇಲೆ ಭಯೋತ್ಪಾದಕರು ಆಗಾಗ ದಾಳಿಮಾಡುತ್ತಲೆ ಇರುತ್ತಾರೆ. ಮೇ ನಲ್ಲಿ ದಾಳಿಯಾದಾಗ 10 ಜನರನ್ನು ಕೊಂದರು. ಉದಾತ್ತ ನಂಬಿಕೆ ಉಳಿಯಬಾರದು ಎಂಬುದು ಕಟ್ಟರ್ ಗಳ ನಿಲುವು. ಹಾಗೆ ಅನೇಕ ಪರ್ಶಿಯನ್ ರಾಷ್ಟ್ರಗಳಲ್ಲು ಇದೇ ಸಮಸ್ಯೆ.

ಆದರೆ ಭಾರತದಲ್ಲಿ ನಾವಿನ್ನು ಆ ಹಂತ ತಲುಪದಿರುವುದರಿಂದ ಸಮಾಧಾನ ಪಟ್ಟುಕೊಂಡು ನಿರಾಳತೆಯಿಂದ ಸಮಾಧಿಯ ಬಳಿ ಬಂದರೆ, ಹೆಣ್ಣುಮಕ್ಕಳು ದರ್ಗಾದ ಹೊರಗಿನಿಂದ ಮಾತ್ರ ಪ್ರಾರ್ಥನೆ ಸಲ್ಲಿಸಬಹುದು. ಕಾರಣ ನಿಜಾಮುದ್ದೀನ್ ಒಬ್ಬ ಬ್ರಹ್ಮಚಾರಿಯಾಗಿದ್ದನಂತೆ. ಹೊರಗಿನಿಂದ ನೋಡಿದರೆ ಸಮಾಧಿಯ ಇಂಚು ಸಹ ಕಾಣದಂತೆ ಚದ್ದರಗಳನ್ನು ಹೊದಿಸಿ ಗುಲಾಬಿ ಪಕಳೆಗಳಿಂದ ತುಂಬಿಸಿ ಬಿಟ್ಟಿರುತ್ತಾರೆ.  ದೊಡ್ಡ ಷಾಂಡಿಲೀರ್ ಒಂದು ಹಳದಿ ಬೆಳಕನ್ನು ಚೆಲ್ಲುತ್ತಾ ನಾನೆ ಇಲ್ಲಿನ ದೀಪ ಎಂಬಂತೆ ಬೀಗುತ್ತಾ ತೂಗುತ್ತಿದೆ.

ಒಂಬತ್ತು ಗಂಟೆಗೆ ಕವ್ವಾಲಿ ಆರಂಭ.  ಕವ್ವಾಲಿಯನ್ನು ನೋಡಲು ಬಂದವರಲ್ಲಿ ಅನೇಕರು ಯುವ ಜನರು ಅದರಲ್ಲೂ ಸಿಖ್ಖರು ಹಿಂದೂ ಮುಸ್ಲಿಂಮರು ವಿದೇಶಿಗರು ಯಾವ್ಯಾವುದೋ ರಾಜ್ಯದವರು ಎಂಬುದು ಖುಷಿ. ಬೇರೆ ಬೇರೆ ದೇಶಗಳಲ್ಲಿ ಸೂಫಿ ಸಂಗೀತ ಮತ್ತು ವಾದ್ಯಗಳು ಬೇರೆ ಬೇರೆಯೆ ಇವೆ. ಇಲ್ಲಿ ಹಾರ್ಮೋನಿಯಂ ಮತ್ತು ತಬಲ.  ಕೆಲ ನಿಮಿಷಗಳಲ್ಲಿ, ಈ ಸಂಗೀತಗಾರರ ಸುತ್ತ ಜನ ಸಮೂಹ ಜಮಾ ಆಗಿ ಅರ್ಧವೃತ್ತಾಕಾರದಲ್ಲಿ ಕುಳಿತರು. ಎಲ್ಲರೂ ಮಗ್ನರಾಗಿ ಸಂಗೀತದದಲ್ಲಿ ಮುಳುಗಿದ್ದರು. ನಿಧಾನವಾಗಿ ಆರಂಭವಾಗುವ ಕವ್ವಾಲಿ, ಮಧ್ಯದಲ್ಲಿ ಗತಿಯ ಜೊತೆ ಧ್ವನಿಯು ಹೆಚ್ಚಿಸಿಕೊಳ್ಳುತ್ತದೆ. ಕವ್ವಾಲಿಯ ಕೊನೆಯ ಸಾಲುಗಳನ್ನು, ಮತ್ತಿಬ್ಬರು ಹಾಡುಗಾರರು ರಾಗಕ್ಕೆ ಪರವಶತೆಗೆ ತಕ್ಕಂತೆ ಕೈ ಎತ್ತುತ್ತ ಆ ಸಾಲುಗಳನ್ನು ಮತ್ತೆ ಹಾಡುತ್ತಾರೆ. ನಂತರ ಸ್ಥಾಯಿ ಭಾವ ಮೌನ… ಕ್ಷಣದಲ್ಲೆ ತಬಲಾ ಸದ್ದು ಕೊನೆಯ ಪಂಕ್ತಿಯೊಂದಿಗೆ  ಕವ್ವಾಲಿ ಕೊನೆಯಾಗುತ್ತದೆ.

ಜನಸಮೂಹದ ಮಧ್ಯದಲ್ಲಿ ಮತ್ತು ಬದಿಗೆ ಇಬ್ಬರು ತಾದ್ಯಾತ್ಮರಾಗಿ ಬೀಸಣಿಕೆ ಬೀಸುತ್ತಲೆ ಇದ್ದರು. ಅನುಯಾಯಿಗಳೆಲ್ಲರು ಪರವಶತೆಯಿಂದ ಎಲ್ಲೋ ಕಳೆದುಹೋದಂತಿದ್ದರು. ಹಾಡು ಮುಗಿದಾಗ ಮುಗಿದೆ ಹೋಯಿತೆ ! ಎಂಬತಹ ಭಾವ ಮನೆಗೆ ಬಂದರೂ ಕಾಡುತ್ತಿರುತ್ತದೆ.

‍ಲೇಖಕರು avadhi

July 25, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. Prabhakar Kamble

    ಬಹಳಷ್ಟು ಸೂಫಿಸಂ ಕುರಿತು ಮಾಹಿತಿ ‌ನೀಡಿತು …ಚೆನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: