ಮಾಧ್ಯಮ ಸಂಕಿರಣದಲ್ಲಿ ಪಂಡಿತಾರಾಧ್ಯ

-ಪಂಡಿತಾರಾಧ್ಯ

ಮೈಸೂರಿನಲ್ಲಿ ಜರುಗಿದ ಮಾಧ್ಯಮ ವಿಚಾರ ಸಂಕಿರಣದಲ್ಲಿ ಪಂಡಿತಾರಾಧ್ಯ ಅವರು ವಿತರಿಸಿದ ಕರಪತ್ರ

ಕನ್ನಡ ಅಂಕಿಗಳನ್ನೇ ಬಳಸಿ

0 1 2 3 4 5 6 7 8 9

ಕನ್ನಡ ಅಂಕಿಗಳು ಕನ್ನಡ ಭಾಷೆಯ ಅವಿಭಾಜ್ಯ ಅಂಗ. ಕ್ರಿ.ಶ. 8ನೆಯ ಶತಮಾನದಿಂದಲೇ ಶಾಸನಗಳಲ್ಲಿ ಕನ್ನಡ ಅಂಕಿಗಳು ಕಾಣಿಸುತ್ತವೆ. ದಕ್ಷಿಣ ಭಾರತದಲ್ಲಿ ಕನ್ನಡ ಮಾತ್ರ ತನ್ನ ಅಂಕಿಗಳನ್ನು ಉಳಿಸಿಕೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಬ್ರಿಟಿಷರು, ಹೈದರಾಬಾದಿನ ನಿಜಾಮರು ತಮ್ಮ ನೋಟುಗಳಲ್ಲಿ ಕನ್ನಡ ಅಂಕಿಗಳನ್ನು ಬಳಸಿದ್ದರು. ಇಂದು ಕನ್ನಡ ಅಂಕಿಗಳ ಸ್ಥಾನವನ್ನು ಇಂಗ್ಲಿಷ್ ಅಂಕಿಗಳು ಆಕ್ರಮಿಸಿವೆ. ಆಡಳಿತ ಮತ್ತು ಮಾಧ್ಯಮಗಳ ಕೇಂದ್ರವಾಗಿರುವ ರಾಜಧಾನಿ ಬೆಂಗಳೂರಿನಲ್ಲಿ ಇದು ಹೆಚ್ಚಾಗಿದೆ. ಇದು ನಮ್ಮ ಭಾಷಿಕ ಸಂಸ್ಕೃತಿಗೆ ಅಪಾಯಕಾರಿ.

ಚಿತ್ರ: ಆಯಾಮ

ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ(1842)ವನ್ನು ಆರಂಭಿಸಿದ ಜರ್ಮನ್ ಪಾದ್ರಿಗಳು ಕನ್ನಡ ಅಂಕಿಗಳನ್ನೇ ಬಳಸಿದ್ದಾರೆ. ರಾಜ್ಯದ ಹಲವು ಪತ್ರಿಕೆಗಳು ಕನ್ನಡ ಅಂಕಿಗಳನ್ನೇ ಬಳಸುತ್ತಿವೆ. ಬೆಂಗಳೂರಿನ ಕರ್ಮವೀರ, ಕಸ್ತೂರಿ ಹಾಗೂ ಹೊಸತು, ಸಂವಾದ ಮತ್ತು ಸಂಯುಕ್ತ ಕರ್ನಾಟಕ, ಹೊಸ ದಿಗಂತಗಳ ಪುರವಣಿಗಳಲ್ಲಿ ಕನ್ನಡ ಅಂಕಿಗಳಿವೆ. ಕನ್ನಡ ಪ್ರಭದ ಅಂತರಜಾಲ ಆವೃತ್ತಿಯಲ್ಲಿ ಕನ್ನಡ ಅಂಕಿಗಳಿವೆ. ದೇಶಕಾಲದ ಸಹಯೋಗದಲ್ಲಿ ಪ್ರಜಾವಾಣಿ ಆರಂಭಿಸಿರುವ ಸಾಹಿತ್ಯ ಪುರವಣಿಯಲ್ಲಿ ಕನ್ನಡ ಅಂಕಿಗಳಿರುವುದು ಮೆಚ್ಚುವಂಥದು. ಕನ್ನಡ ಪತ್ರಿಕೆಗಳಲ್ಲಿ ಎಲ್ಲ ಕಡೆ ಕನ್ನಡ ಅಂಕಿಗಳೇ ಬಳಕೆಯಾಗಲಿ.

ರಾಜ್ಯಮಟ್ಟದ ಪತ್ರಿಕೆಗಳು ಜಿಲ್ಲಾ ಕೇಂದ್ರಗಳಲ್ಲಿ ಮುದ್ರಣವಾಗಿ ಜಿಲ್ಲಾ ಮಟ್ಟದ ಸಣ್ಣ ಪತ್ರಿಕೆಗಳ ಜೊತೆ ಸ್ಪರ್ಧಿಸುತ್ತಿವೆ. ಅವು ಸುದ್ದಿಗಳಿಗೆ ಜಿಲ್ಲೆಯ ಬೇಲಿಯನ್ನು ಹಾಕಿರುವುದಲ್ಲದೆ ರಾಜಧಾನಿಯ ಭಾಷಾವಿಕಾರಗಳನ್ನು ರಾಜ್ಯಾದ್ಯಂತ ಹರಡುತ್ತಿರುವುದು ಆತಂಕದ ಸಂಗತಿ. ಕನ್ನಡ ಅಂಕಿಗಳ ಜೊತೆ ಆರೋಗ್ಯಕರವೂ ಜೀವಂತವೂ ಆದ ಪ್ರಾದೇಶಿಕ ವೈಶಿಷ್ಟ್ಯಗಳನ್ನು ಉಳಿಸಿ ಬೆಳಸುತ್ತಿರುವ ಜಿಲ್ಲಾಮಟ್ಟದ ಹಲವು ಪತ್ರಿಕೆಗಳು ಈ ಅಸಮಾನ ಸ್ಪರ್ಧೆಯಿಂದ ಪ್ರಕಟಣೆಯನ್ನು ನಿಲ್ಲಿಸುವ ಹಂತ ತಲುಪಿವೆ. ರಾಜಧಾನಿಯ ಮಾಧ್ಯಮಗಳ ಕನ್ನಡವು ಪ್ರತಿರೋಧ ಸಾಮಥ್ರ್ಯವನ್ನು ಕಳೆದುಕೊಂಡ ಏಡ್ಸ್ ರೋಗಿಯಂತಾಗಿರುವುದರಿಂದ ಅದು ಕರ್ನಾಟಕದ ವಿವಿಧ ಪ್ರದೇಶಗಳಿಂದ ಆರೋಗ್ಯಕರ ರಕ್ತದಾನ ಪಡೆಯುವ ತುರ್ತು ಇದೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಮತ್ತು ಹಲವು ಜಿಲ್ಲೆಗಳ ಸಣ್ಣ ಪತ್ರಿಕೆಗಳು ತಮ್ಮ ಜಿಲ್ಲ್ಲಾ ಆವೃತ್ತಿಗಳ ಬೇಲಿಯನ್ನು ತೆಗೆದುಹಾಕಿ ಅಖಂಡ ಆವೃತಿಗಳನ್ನು ಪ್ರಾರಂಭಿಸಿರುವುದು ಸ್ವಾಗತಾರ್ಹ. ಮೈಸೂರಿನ ಆಂದೋಲನ, ಮೈಸೂರು ಮಿತ್ರ ಪತ್ರಿಕೆಗಳು ಕನ್ನಡ ಅಂಕಿಗಳನ್ನೇ ಬಳಸುತ್ತಿರುವುದು ಅಭಿಮಾನದ ಸಂಗತಿ. ಸರಕಾರದ ಮಾಸಪತ್ರಿಕೆ  ಜನಪದ ಇಂಗ್ಲಿಷ್ ಅಂಕಿಗಳನ್ನೇ ಬಳಸುತ್ತಿರುವುದು ಖಂಡನೀಯ.

ಕನ್ನಡ ಭಾಷೆಯ ಸೂಕ್ಷ್ಮಗಳನ್ನು ಓದುಗರಿಗೆ ಪರಿಚಯಿಸಬೇಕಾದ ಕನ್ನಡ ಪತ್ರಿಕೆಗಳು ಕನ್ನಡದಲ್ಲಿ ಅನಗತ್ಯವಾಗಿ ಇಂಗ್ಲಿಷ್ ಪದಗಳನ್ನು ಬಳಸುತ್ತಿರುವುದು ಆತಂಕದ ಸಂಗತಿ. ನಿರ್ಧಿಷ್ಟ ವ್ಯಕ್ತಿಗಳ ಎದುರು ನೇರವಾಗಿ ಮಾತನಾಡುವಾಗ ಅವರ ಭಾಷಿಕ ಸಾಮಥ್ರ್ಯದ ಅರಿವು ನಮಗಿರುತ್ತದೆ. ಅವರಿಗೆ ಅರ್ಥವಾಗುವ ಎಷ್ಟು ಭಾಷೆಗಳಲ್ಲಿಯೂ ನಾವು ಮಾತನಾಡಬಹುದು. ಆದರೆ ನಮ್ಮ ಎದುರು ಇಲ್ಲದವರನ್ನು ಉದ್ದೇಶಿಸಿ ಮಾತನಾಡುವಾಗ, ಬರೆಯುವಾಗ ಸಾಮಾನ್ಯ ಕನ್ನಡವನ್ನೇ ಬಳಸಬೇಕು. ಶಾಲಾ ಪತ್ರಿಕೆಯಲ್ಲಿ ಎಳೆಯರು ವಿನೋದಕ್ಕಾಗಿ `ತಾEA ದೇವರು!’ ಎಂದು ಬರೆಯುವುದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಕನ್ನಡದ ದೊಡ್ಡ ಪತ್ರಿಕೆ ತನ್ನ ಹೆಸರಿನ ಇಂಗ್ಲಿಷ್ ಆದ್ಯಕ್ಷರಗಳಾದ ವಿ ಮತ್ತು ಕೆ ಗಳನ್ನು ಕನ್ನಡ ಪದ `ಲವಲವಿಕೆ’ಯಲ್ಲಿರುವ `ವಿಕೆ’ ಜೊತೆ ಕಸಿಮಾಡಿ ಕನ್ನಡ ಪದವನ್ನು `ಲವಲ’ ಎಂದು ಅರ್ಥಹೀನವಾಗಿಸಿ ಅಂಗವಿಕಲ (`ವಿಕಲಚೇತನ’?)ಗೊಳಿಸಿರುವುದು ಹಾಸ್ಯಾಸ್ಪದ. ಇಂಥ ಕನ್ನಡ ಮುರುಕತನವನ್ನು ರಾಜಧಾನಿಯ ಮಾಧ್ಯಮಗಳು ಎಗ್ಗಿಲ್ಲದೆ ಮಾಡುತ್ತಿವೆ. ಕನ್ನಡ ಪತ್ರಿಕೆಯ ಹೆಸರಿನಲ್ಲಿಯೇ ವಿಜಯ Next (ನೆಕ್ಸ್ಟ್) ಎಂದು ಕಲಬೆರಕೆ ಮಾಡಿ ಕನ್ನಡ ಪತ್ರಿಕೆಯಲ್ಲಿ ಇಂಗ್ಲಿಷ್ ಪದಪುಂಜ, ವ್ಯಾಕರಣ ರಚನೆಗಳನ್ನು ಬಳಸಲಾಗುತ್ತಿದೆ. ಕೆಲವು ಕನ್ನಡ ಸಂಪಾದಕರು (‘ಆಫ್ ಕೋರ್ಸ್’ ಇತ್ಯಾದಿ) ಇಂಗ್ಲಿಷ್ ಪದಗಳನ್ನು ಅನಗತ್ಯವಾಗಿ ಬೆರಸುವ ರೋಗದಿಂದ ನರಳುತ್ತಿರುವಂತಿದೆ. ಇಂಗ್ಲಿಷಿನಲ್ಲಿ ಮಾತನಾಡುವಾಗ, ಬರೆಯುವಾಗ ಒಂದು ಕನ್ನಡ ಪದವೂ ನುಸುಳದಂತೆ ಎಚ್ಚರವಹಿಸುವ ನಾವು ಕನ್ನಡದ ಬಗ್ಗೆಯೂ ಅಷ್ಟೇ ಪ್ರಬುದ್ಧರಾಗಿ ವರ್ತಿಸುವುದು ಯಾವಾಗ?

ಕನ್ನಡ ಅಂತರಜಾಲ ತಾಣಗಳಲ್ಲಿ ಹೆಚ್ಚಿನವು ಕನ್ನಡತನದ ತಾಣಗಳಲ್ಲದಿರುವುದು ವಿಷಾದದ ಸಂಗತಿ. ಇಲ್ಲಿ ಕನ್ನಡಿಗರ ಜೊತೆ ಕನ್ನಡದ ಬಗ್ಗೆ ಮಾತನಾಡುವಾಗ ಅನಗತ್ಯವಾಗಿ ಇಂಗ್ಲಿಷ್ ಬಳಸುವ ಪ್ರವೃತ್ತಿ ಹೆಚ್ಚಿದೆ. ಕೆಲವು ಜಾಲತಾಣಗಳು ತಮ್ಮ ಹೆಸರುಗಳನ್ನೇ ಇಂಗ್ಲಿಷಿನಲ್ಲಿ ಹೇಳಿಕೊಂಡು ಧನ್ಯತೆಯನ್ನು ಅನುಭವಿಸುತ್ತಿವೆ (`ದಟ್ಸ್ ಕನ್ನಡ.ಕಾಂ’, `ಕನ್ನಡ ಬ್ಲಾಗರ್ಸ್!’). ಎಫ್.ಎಂ. ತಂತ್ರಜ್ಞಾನದ ಪರಿಣಾಮವಾಗಿ ಆಕಾಶವಾಣಿಯು ಕೇಳುಗರನ್ನು ಮತ್ತೆ ಆಕರ್ಷಿಸುತ್ತಿದೆ. ಇಲ್ಲಿಯವರೆಗೆ ಆಕಾಶವಾಣಿಯಲ್ಲಿ ಸ್ವಚ್ಛ ಕನ್ನಡ ಭಾಷಾರೂಪಗಳನ್ನು ಕೇಳಲು ಅವಕಾಶವಿತ್ತು. ಈಗ ಅನಗತ್ಯ ಇಂಗ್ಲಿಷ್ ಕಲಬೆರಕೆಯ ರೂಪಗಳು ಮೊಳಗುತ್ತಿವೆ. ಸರಕಾರಿ ಸ್ವಾಮ್ಯದ ಆಕಾಶವಾಣಿಯ `ರೇನ್ಬೊ ಎಫ್ ಎಂ ‘ (ಕನ್ನಡ ಕಾಮನಬಿಲ್ಲು!) ಎಂಬ ವಾಹಿನಿಯಲ್ಲಿ `ಲಂಚ್ ಬಾಕ್ಸ್’. `ಡಿನ್ನರ್ ಟೈಮ್’ ಹೆಸರಿನ ಕನ್ನಡ ಕಾರ್ಯಕ್ರಮಗಳಲ್ಲದೆ ಇಂಗ್ಲಿಷ್ ಕಾರ್ಯಕ್ರಮಗಳೂ ಸಾಕಷ್ಟು ಇರುವುದು ಸಖೇದಾಶ್ಚರ್ಯದ ಸಂಗತಿ. ಖಾಸಗಿ ಎಫ್ ಎಂ ವಾಹಿನಿಗಳ ಕನ್ನಡದ ಸ್ಥಿತಿಯಂತೂ ಶೋಚನೀಯ. ಕಾರ್ಯಕ್ರಮ ನಿರೂಪಕರು ಅನಗತ್ಯವಾಗಿ ಅರ್ಧವಾಕ್ಯ ಕನ್ನಡ, ಅರ್ಧವಾಕ್ಯ ಇಂಗ್ಲಿಷ್ ಬೆರೆಸಿ ಮಾತನಾಡುವುದರಿಂದ ಕೇಳಲು ಜುಗುಪ್ಸೆಯಾಗುತ್ತದೆ. `ಸಖತ್ ಹಾಟ್ ಮಗಾ!’, `ಕೇಳಿ ಕೇಳಿಸಿ `ಲೈಫ್ ‘ ನಿಮ್ಮದಾಗಿಸಿ’ ಎಂದು ಉಲಿಯುವ ಈ ವಾಹಿನಿಗಳು ಕನ್ನಡತನದ `ಬದುಕ’ನ್ನು ನಮ್ಮದಾಗಿಸುವುದು ಯಾವಾಗ? ಇವುಗಳಿಗೆ ಕನ್ನಡತನದ `ಚುರುಕು’ ಮುಟ್ಟಿಸುವುದು ಹೇಗೆ?

ದೃಶ್ಯ ಮಾಧ್ಯಮದ ವಿವಿಧ ಕನ್ನಡ ವಾಹಿನಿಗಳ ಕಾರ್ಯಕ್ರಮಗಳ ಹೆಸರುಗಳು `ನ್ಯೂಸ್’, `ಟ್ವೆಂಟಿಫೋರ್ ಸೆವೆನ್’, `ಬ್ರೇಕಿಂಗ್ ನ್ಯೂಸ್’, `ಗ್ಲೋಬ್ ಟ್ರಾಟಿಂಗ್’, `ಜಸ್ಟ್ ಬೆಂಗಳೂರು’ ಇತ್ಯಾದಿ ಇಂಗ್ಲಿಷ್ನಲ್ಲಿವೆ. ಎಲ್ಲ ವಾಹಿನಿಗಳಲ್ಲಿ ಕನ್ನಡ ಪದಗಳು ಮತ್ತು ಕನ್ನಡ ಅಂಕಿಗಳನ್ನೇ ಬಳಸಬೇಕು.

ರಾಜಧಾನಿಯ ಮಾಧ್ಯಮಗಳು ಕನ್ನಡದಲ್ಲಿ ಅನಗತ್ಯವಾಗಿ ಇಂಗ್ಲಿಷನ್ನು ಬೆರೆಸಿ ಕನ್ನಡಿಗರಲ್ಲಿ ಗೊಂದಲ, ಕೀಳರಿಮೆಗಳನ್ನು ಬೆಳೆಸುತ್ತಿವೆ. ಕನ್ನಡವನ್ನು ಚೆನ್ನಾಗಿ ಕಲಿಯಬೇಕು ಎನ್ನುವುದಕ್ಕಿಂತ ಇಂಗ್ಲಿಷ್ ಬೆರಸಿ ಮಾತನಾಡುವುದೇ ದೊಡ್ಡದು ಎಂಬ ತಪ್ಪು ಸಂದೇಶವನ್ನು ನೀಡುತ್ತಿವೆ. ಕನ್ನಡವನ್ನು ಚೆನ್ನಾಗಿ ಕಲಿಯದಿರುವುದರಿಂದ ಇಂಗ್ಲಿಷನ್ನೂ ಸಮರ್ಪಕವಾಗಿ ಕಲಿಯಲು ಸಾಧ್ಯವಾಗುತ್ತಿಲ್ಲ ಎಂಬ ಸತ್ಯವನ್ನು ಮರೆಮಾಚಲಾಗುತ್ತಿದೆ. ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವ ಮೂಲಕ ಭಾಷಾಕಲಿಕೆಯ ಕೌಶಲಗಳನ್ನು ಗಳಿಸಿಕೊಂಡರೆ ಅನಂತರ ಎಷ್ಟೂ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು ಎಂಬ ಶೈಕ್ಷಣಿಕ ಸತ್ಯವನ್ನು ಮರೆಮಾಚಿ ಒಂದನೆಯ ತರಗತಿಯಿಂದಲೇ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಸಬೇಕೆಂಬ ಭ್ರಮೆಯನ್ನು ಬೆಳೆಸಲಾಗುತ್ತಿದೆ.

ಗೋಕಾಕ್ ವರದಿಯ ಫಲವಾಗಿ ಒಂದನೆಯ ತರಗತಿಯಿಂದ ರಾಜ್ಯಭಾಷೆ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆಂಬ ಸರಕಾರದ ಆದೇಶವನ್ನು ಭಾಷಾ ಅಲ್ಪಸಂಖ್ಯಾತರು ವಿರೋಧಿಸಿದರು. ಸಂವಿಧಾನ ನೀಡಿರುವ ರಕ್ಷಣೆಯಂತೆ ತಮ್ಮ ಮಕ್ಕಳಿಗೆ ಒಂದನೆಯ ತರಗತಿಯಲ್ಲಿ ಮಾತೃಭಾಷೆಯನ್ನು ಮಾತ್ರ ಕಲಿಸಬೇಕೆಂದೂ ಕನ್ನಡ ಮಾತೃಭಾಷೆಯ ಮಕ್ಕಳು ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ, ಅಂದರೆ ಮೂರನೆಯ ತರಗತಿಯಿಂದ ಐಚ್ಛಿಕವಾಗಿ ಮತ್ತು ಐದನೆಯ ತರಗತಿಯಿಂದ ಮಾತ್ರ ಕಡ್ಡಾಯವಾಗಿ ರಾಜ್ಯಭಾಷೆಯಾದ ಕನ್ನಡವನ್ನು ಕಲಿಸಬಹುದೆಂದೂ ಉಚ್ಚ ನ್ಯಾಯಾಲಯದಿಂದ ರಕ್ಷಣೆ ಪಡೆದರು. ಆದರೆ ಆಂಗ್ಲೋ ಇಂಡಿಯನ್ನರನ್ನು ಬಿಟ್ಟು ಬೇರೆ ಯಾರ ಮಾತೃಭಾಷೆಯೂ ಅಲ್ಲದ ರಾಜ್ಯಭಾಷೆಯೂ ಅಲ್ಲದ ಇಂಗ್ಲಿಷನ್ನು ಒಂದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಸಲು ಭಾಷಾ ಅಲ್ಪಸಂಖ್ಯಾತರ ಮತ್ತು ಕೆಲವು ಕನ್ನಡಿಗರ ಆಕ್ಷೇಪವಿಲ್ಲ!

ಸರ್ವೋನ್ನತ ನ್ಯಾಯಾಲಯ ಎತ್ತಿ ಹಿಡಿದಿದ್ದ, ಪ್ರಾಥಮಿಕ ತರಗತಿಗಳಲ್ಲಿ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಅಧ್ಯಯನದ ವಿಷಯ ಮತ್ತು ಮಾಧ್ಯಮ ಎಂಬ ರಾಜ್ಯ ಸರಕಾರದ ಭಾಷಾನೀತಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಸರಕಾರಿ ಶಾಲೆಗಳಿಗೆ ಮಾತ್ರ ಅನ್ವಯಿಸಿ ಖಾಸಗಿ ಶಾಲೆಗಳಿಗೆ ಇಂಗ್ಲಿಷ್ ಭಾಷೆಯ ಕಲಿಕೆ ಮತ್ತು ಮಾಧ್ಯಮಕ್ಕೆ ಮುಕ್ತ ಅವಕಾಶ ನೀಡಿರುವ ತೀರ್ಪಿನ ವಿರುದ್ಧ ರಾಜ್ಯ ಸರಕಾರವು ಸಲ್ಲಿಸಿರುವ ಮೇಲ್ಮನವಿಯು ಸರ್ವೋನ್ನತ ನ್ಯಾಯಾಲಯದಲ್ಲಿ ಬೇಗ ಇತ್ಯರ್ಥವಾಗಿ ಎಲ್ಲ ಬಗೆಯ ಶಾಲೆಗಳ ಪ್ರಾಥಮಿಕ ತರಗತಿಗಳಲ್ಲಿ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಲಿಕೆಯ ವಿಷಯ ಮತ್ತು ಮಾಧ್ಯಮವಾಗಬೇಕು. ಒಂದನೆಯ ತರಗತಿಯಲ್ಲಿ ಮಾತೃಭಾಷೆ ಕಲಿಕೆಗೆ ಮಾತ್ರ ಅವಕಾಶರುವುದರಿಂದ ಆಂಗ್ಲೋ ಇಂಡಿಯನ್ನರನ್ನು ಬಿಟ್ಟು ಉಳಿದ ಎಲ್ಲರಿಗೆ ಒಂದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆ ಕಡ್ಡಾಯ ಎನ್ನುವ ಧರ್ಮಸಿಂಗ್ ಸರಕಾರದ ಆದೇಶ ಮತ್ತು ಉಚ್ಚ ನ್ಯಾಯಾಲಯದ ತೀರ್ಪುಗಳು ರದ್ದಾಗಬೇಕು. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಐಚ್ಛಿಕವಾಗಿ ಮತ್ತು ಐದನೆಯ ತರಗತಿಯಿಂದ ಮಾತ್ರ ಕಡ್ಡಾಯವಾಗಿ ಇಂಗ್ಲಿಷ್ ಕಲಿಕೆ ಎಂಬ ಶೈಕ್ಷಣಿಕ ನೀತಿಯ ಸ್ಪಷ್ಟ ಅನುಷ್ಠಾನವಾಗಬೇಕು.

ರಾಜ್ಯ ಸರಕಾರದ ಎಲ್ಲ ವಾಹನಗಳು ಕಡ್ಡಾಯವಾಗಿ ಕನ್ನಡದಲ್ಲಿಯೂ ನೋಂದಣಿ ಫಲಕಗಳನ್ನು ಪ್ರದಶರ್ಿಸಬೇಕೆಂದು ಕನರ್ಾಟಕ ಸರಕಾರ ಆದೇಶ ನೀಡಿರುವುದು ಸ್ತುತ್ಯರ್ಹ(ಸುತ್ತೋಲೆ ಸಂಖ್ಯೆ: ಸಾ ಆ: ನೋಂದಣಿ-2: ವೈವ : 78:2000-01 ದಿನಾಂಕ 31-8-2001). ರಾಜ್ಯದಲ್ಲಿ ನೋಂದಣಿಯಾಗುವ ಎಲ್ಲ ಖಾಸಗೀ ವಾಹನಗಳೂ ನೋಂದಣಿ ಫಲಕಗಳನ್ನು ರಾಜ್ಯದ ಆಡಳಿತ ಭಾಷೆಯ ಅಕ್ಷರ ಮತ್ತು ಅಂಕಿಗಳಲ್ಲಿಯೂ ಕಡ್ಡಾಯವಾಗಿ ಪ್ರದರ್ಶಿಸಲು ಸರಕಾರ ಕ್ರಮಗಳನ್ನು ಕೈಗೊಳ್ಳಬೇಕು. ಕರ್ನಾಟಕದ ಎಲ್ಲ ಸಾರಿಗೆ ಬಸ್ಸುಗಳ ಚೀಟಿ ಮತ್ತು ಮಾರ್ಗಫಲಕಗಳಲ್ಲಿ ಮಾರ್ಗ ಸಂಖ್ಯೆಯನ್ನು ದೊಡ್ಡ ಗಾತ್ರದಲ್ಲಿ ಕನ್ನಡ ಅಂಕಿಗಳಲ್ಲಿರಬೇಕು.

ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗಗಳ ಆವರಣವನ್ನು 28ನೇ ಏಪ್ರಿಲ್ 1960ರಂದು ಅಂದಿನ ಕುಲಪತಿ ಕುವೆಂಪು ಅವರು `ಮಾನಸಗಂಗೋತ್ರಿ’ ಎಂದು ಹೆಸರಿಟ್ಟು ಉದ್ಘಾಟಿಸಿದ್ದರು; `ಇಟ್ಟ ಹೆಸರೇ ಕೊಟ್ಟ ಮಂತ್ರ; ಆದ್ದರಿಂದ ಅದೇ ತೊಟ್ಟ ದೀಕ್ಷೆಯೂ ಆಗಲಿ’ ಎಂದು ಹಾರೈಸಿದ್ದರು. ಮಾನಸಗಂಗೋತ್ರಿಗೆ ಅವತರಿಸುವ ಮಾನಸ-ಅತಿಮಾನಸ ಗಂಗೆ ಯಾವ ದೇಶ, ಭಾಷೆ, ಮತಧರ್ಮ, ವಿಜ್ಞಾನಗಳಿಂದಲಾದರೂ ಬರಲಿ ಅದನ್ನು ಇಲ್ಲಿನ ವಿದ್ವದುಪಾಸಕರು ಸ್ವೀಕರಿಸಬೇಕು. ಆದರೆ ಅವರಿಂದ ಹೊರಬರಬೇಕಾದ ಜ್ಞಾನಗಂಗೆ ಮೊದಲು ನಮ್ಮ ನೆಲದಲ್ಲಿ ಹರಿಯಬೇಕು. ನಮ್ಮ ನುಡಿಯಲ್ಲಿ ಮೂಡಿಬರಬೇಕು. ಇನ್ನು ಐವತ್ತು ವರ್ಷಗಳಲ್ಲಿ ಮಾನಸಗಂಗೋತ್ರಿ ಹೇಗಿರುತ್ತದೆ ಎಂಬ ತಮ್ಮ ಕಲ್ಪನೆಯನ್ನೂ ಅವರು ಹೇಳಿದ್ದರು. ಅವರ ಕಲ್ಪನೆಯ ಸಾಕಾರವಾಗಿ ಇಂದು ಈ ವಸ್ತುಪ್ರದರ್ಶನ ನಡೆಯುತ್ತಿದೆ.

ಕನ್ನಡ, ಮಾಧ್ಯಮ ಮತ್ತು ಕನ್ನಡ ಮಾಧ್ಯಮಗಳ ಬಗ್ಗೆ ನಮ್ಮ ಆಲೋಚನೆ, ವರ್ತನೆಗಳು ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವ ಸಂವಿಧಾನದ ಆಶಯಕ್ಕೆ ಅನುಗುಣವಾಗಿರಬೇಕು. ಕುವೆಂಪು ಅವರು ಹೇಳಿರುವಂತೆ, `ಗುಡಿ ಚರ್ಚು ಮಸಜೀದುಗಳನ್ನು ಬಿಟ್ಟು ಹೊರಬಂದು’ ಕನ್ನಡವನ್ನು ವೈಚಾರಿಕವಾಗಿ, ವೈಜ್ಞಾನಿಕವಾಗಿ ಬಳಸುವ, ಬೆಳೆಸುವ ಹೊಣೆ ನಮ್ಮ ಮೇಲಿದೆ.

ಕನ್ನಡದಲ್ಲಿಯೇ ಯೋಚಿಸಿ ಬರೆಯಿರಿ ಮಾತನಾಡಿ

ಕನ್ನಡ ಅಂಕಿಗಳ ವಿಕಾಸ

(ಆಕರ: ಕನ್ನಡ ಲಿಪಿಯ ಉಗಮ ಮತ್ತು ವಿಕಾಸ ಪ್ರೊ ಎ ವಿ ನರಸಿಂಹಮೂತರ್ಿ 1999)

‍ಲೇಖಕರು G

February 21, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. unicode

    ಈ ಲೇಖನದಲ್ಲಿ ಒಂದೂ ಕನ್ನಡ ಅಂಕಿ ಕಾಣುತ್ತಿಲ್ಲ. ಯುನಿಕೋಡಿನಲ್ಲಿ ಕನ್ನಡ ಅಂಕಿಗಳು ಇವೆ – ೦ ೧ ೨ ೩

    ಪ್ರತಿಕ್ರಿಯೆ
    • ಲಕ್ಷ್ಮೀನಾರಾಯಣ ವಿ.ಎನ್

      ನೀವು ಗಮನಿಸಿರುವುದು ಸಂಗತವಾದ ಅಂಶ.ಮಾನ್ಯ ಪಂಡಿತಾರಾಧ್ಯರೂ ದಯಮಾಡಿ ಗಮನಿಸಲಿ

      ಪ್ರತಿಕ್ರಿಯೆ
  2. test

    ಕನ್ನಡ ಅಂಕಿಗಳನ್ನೇ ಬಳಸಿ anta baredu 0 1 2 3 4 5 6 7 8 9 barediddeeralla!

    ಕನ್ನಡ ಅಂಕಿ ಅಂದರೆ ೦ ೧ ೨ ೩ ೪ ೫ ೬ ೭ ೮ ೯ ಅಲ್ವಾ?

    ಪ್ರತಿಕ್ರಿಯೆ
  3. ಪಂಡಿತಾರಾಧ್ಯ

    ಮಾನ್ಯರೆ,
    ನನ್ನ ಮೂಲ ಲೇಖನದಲ್ಲಿ ಕನ್ನಡ ಅಂಕಿಗಳೇ ಇವೆ.
    ನೀವು ಈ ತಾಣದಲ್ಲಿ ನೋಡಿ ಹೀಗೆ ಪ್ರತಿಕ್ರಿಯಿಸಿರುವುದು ಸಹಜ.
    ದಯವಿಟ್ಟು ನನ್ನ ಪ್ರಕಟಣೆಯನ್ನು ಪಂಡಿತಪುಟದಲ್ಲಿ ನೋಡಿ.
    panditaputa.wordpress.com

    ಅಂಕಿಗಳಲ್ಲದೆ ಇನ್ನೂ ಹಲವು ವಿಷಯಗಳನ್ನು ಅಲ್ಲಿ ಪ್ರಸ್ತಾಪಿಸಿದ್ದೇನೆ.
    ಅವುಗಳ ಬಗ್ಗೆಯೂ ನಿಮ್ಮಿಂದ ಮುಕ್ತ ಪ್ರತಿಕ್ರಿಯೆಯನ್ನು ನಿರೀಕ್ಷಿಸುವೆ.
    ಪ್ರೀತಿಯಿಂದ
    ಪಂಡಿತಾರಾಧ್ಯ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: