ಚಂದ್ರಶೇಖರ ಆಲೂರು ಕಾಲಂ

ಮಲಯಾಳಿಗಳ ಮೂರು ಮಮಕಾರಗಳು

ಇದು ಚಂದ್ರಶೇಖರ ಆಲೂರು ಬರೆಯುತ್ತಿರುವ ಕೇರಳ ಪ್ರವಾಸ ಕಥನದ ಎರಡನೆಯ ಭಾಗ. ಮೊದಲ ಭಾಗ ಇಲ್ಲಿದೆ

ಒಂದು ಕಾಲದಲ್ಲಿ ಕೇರಳದ ಬಗ್ಗೆ ಪ್ರೀತಿಯೊಂದಿಗೇ ಅಪಾರ ಹೆಮ್ಮೆಯೂ ನನಗಿತ್ತು. ಪ್ರೀತಿಗೆ ಕಾರಣ ಕೇರಳದ ಕಾಡು-ಕಡಲು- ಕಣಿವೆಯ ಚೆಲುವು ಹಾಗೂ ನಮ್ಮ ಕವಿಗಳು ಬಣ್ಣಿಸಿದ ಕೇರಳದ ಹೆಣ್ಣಿನ ಸೌಂದರ್ಯ. ಭಾರತೀಯನಾಗಿ, ನೆರೆಯವನಾಗಿ ಕೇರಳದ ಬಗ್ಗೆ ಹೆಮ್ಮೆ ಪಡಲು ಕಾರಣ: ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು almost ಸಮ ಪ್ರಮಾಣದಲ್ಲಿರುವ ರಾಜ್ಯ ನಮ್ಮ ದೇಶದಲ್ಲಿ ಇದೊಂದೇ ಇರಬೇಕು. ಅದೊಂದು ಸುರಸುಂದರ ನೇಯ್ಗೆಯಂತೆ ನನಗೆ ಕಾಣುತ್ತಿತ್ತು.

ತೀರಾ ಈಚಿನವರೆಗೂ ಮಲಯಾಳ ಎಂಬುದೇ ಒಂದು ಧರ್ಮವೇನೋ ಎಂಬಂತೆ ನನಗೆ ಭಾಸವಾಗು ತ್ತಿತ್ತು. ಆದರೆ ಈಗ ಹಾಗಿಲ್ಲ. ಕಮ್ಯುನಿಸ್ಟ್ ರಾಜ್ಯದಲ್ಲಿಯೂ ಧಾರ್ಮಿಕ ಸಂಘಟನೆಗಳು ತಮ್ಮ ಹೆಡೆ ಎತ್ತಿವೆ. ಕೇರಳದ ಸಾಕ್ಷರತೆ ಮತ್ತು ಕೊಲ್ಲಿ ರಾಷ್ಟ್ರಗಳಿಂದ ಹರಿದು ಬರುತ್ತಿರುವ ಹಣ ಜಾತಿ ಮತ್ತು ಧರ್ಮದ ದ್ವೀಪಗಳನ್ನು ಸೃಷ್ಟಿಸುತ್ತಿರುವುದು ಒಂದು ವಿಪರ್ಯಾಸ. ಮೊನ್ನೆ ಕೆಲವು ಮತಾಂಧ ಮುಸ್ಲಿಮರು ಕರ್ಮಠ ಕ್ರಿಶ್ಚಿಯನ್ ಅಧ್ಯಾಪಕ ನೊಬ್ಬನ ಕೈ ಕತ್ತರಿಸಿದ ಅಮಾನವೀಯ ಘಟನೆಯ ಬಗ್ಗೆ ನೀವೆಲ್ಲಾ ತಿಳಿದಿದ್ದೀರಿ. ಇಷ್ಟಾಗಿಯೂ ಇಂದಿಗೂ ಕೇರಳ ಒಂದು ಸುಂದರ ನೇಯ್ಗೆ ಯಂತೆಯೇ ನನಗೆ ಕಾಣುತ್ತದೆ, ಅಲ್ಲೊಂದು ಇಲ್ಲೊಂದು ನೂಲು ಕಿತ್ತು ಹೊರ ಬಂದಿದ್ದರೂ!

ಚಿತ್ರ: ಇಂಟರ್ ನೆಟ್

ಮುನ್ನಾರ್ ಗೆ ಅಡಿ ಇಡುವ ಸಂದರ್ಭದಲ್ಲಿ ನಮ್ಮ ಟೂರ್ ಮ್ಯಾನೇಜರ್ “ಮುನ್ನಾರ್ ಎಂದರೆ ಮೂರು ನದಿಗಳ ಸಂಗಮ” ಎಂದು ಹೇಳಿದಾಗ ನನ್ನ ಮನಸ್ಸಿಗೆ ತಟ್ಟಿದ್ದು ಇದೇ: ಹಿಂದೂ, ಮುಸ್ಲಿಂ, ಕ್ರೈಸ್ತ್ರರ ಸಹಬಾಳ್ವೆ . ಮತ್ತೊಂದು, ಈ ಮಲಯಾಳಿಗಳಿಗೆ ಮೂರು `ಮ’ಗಳ ಬಗ್ಗೆ ಈಗಲೂ ಇರುವ ಮಮಕಾರ. ಮುಮ್ಮಟ್ಟಿ , ಮೋಹನ್ ಲಾಲ್ ಮತ್ತು ಮಾರ್ಕ್ಸ್ ವಾದದ (ಕೇರಳ ಮಾದರಿ) ಬಗೆಗಿನ ಮಮಕಾರ.

ಕಣ್ಣನ್ ದೇವನ್ ಬೆಟ್ಟಗಳ ಮೇಲೆ ಅರಳಿ ನಿಂತಿರುವ ಟೀ ತೋಟಗಳನ್ನ ನೋಡಲು ಮಾಡುವ ಪ್ರಯಾಣವೇ ಮುನ್ನಾರ್ ನ ಸೊಬಗು. “ಈಗ್ಗೆ ಮೂರು ದಶಕದ ಹಿಂದೆ ಅಲ್ಲೊಂದು ಇಲ್ಲೊಂದು ಟೀ ತೋಟವನ್ನ ಬಿಟ್ಟರೆ ಇಲ್ಲಿ ಬೇರೇನೂ ಇರಲಿಲ್ಲ. ಈಗ ಟಾಟಾದವರು ಐದು ಲಕ್ಷ ಎಕರೆ ಟೀ ತೋಟವನ್ನ ಇಲ್ಲಿ ಅಭಿವೃದ್ಧಿ ಪಡಿಸಿದ್ದಾರೆ. ಇದೊಂದು ಹಲವು ಟೀ ಎಸ್ಟೇಟ್ ಗಳ ಸಮೂಹ. ಪ್ರತಿ ಎಸ್ಟೇಟ್ ನಲ್ಲಿಯೂ ಪ್ರತ್ಯೇಕ processing unit ಕೂಡಾ ಇದೆ. ಈ ಐದು ಲಕ್ಷ ಎಕರೆ ತೋಟಗಳೂ ಟಾಟಾದವರಿಗೆ ಸೇರಿದ್ದು…” ಇದನ್ನು ಕೇಳಿದ ಮಗಳು ನನ್ನ ಕಡೆ ಪ್ರಶ್ನಾರ್ಥಕವಾಗಿ ನೋಡಿದಳು. `ಏನು?’ ಎಂದರೆ “ಒಬ್ಬರೇ ಅಷ್ಟೊಂದು ಜಮೀನನ್ನ ಇಟ್ಟುಕೊಳ್ಳಬಹುದಾ” ಎಂದು ಕೇಳಿದಳು. ಇದು ಇಂದಿಗೂ ನನಗೆ ಸೋಜಿಗವೇ. ರೈತನಲ್ಲದವನು ಅಂದರೆ ಪಹಣಿ ಪಟ್ಟಿ ಹೊಂದಿಲ್ಲದವನು ಕರ್ನಾಟಕದಲ್ಲಿ ಅರ್ಧ ಎಕರೆ ಜಮೀನನ್ನೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ಮತ್ತೆ ಇನ್ನೊಂದು ಕಾನೂನು: ಪಹಣಿ ಹೊಂದಿದ್ದರೂ ಆತ ತೆರಿಗೆ ಪಾವತಿದಾರನಾಗಿದ್ದರೆ ಜಮೀನು ಕೊಳ್ಳಲು ಆಗುವುದಿಲ್ಲ. ವರನಟ ರಾಜ್ ಕುಮಾರ್ ಬಿಡದಿಯ ಬಳಿ ಈಗ `ಪುನೀತ್ ಫಾರಂ’ ಎಂದು ಹೆಸರು ಹೊಂದಿರುವ ಒಣ ಜಮೀನನ್ನು ಕೊಂಡಾಗ ರಾಮನಗರದ ತಹಸೀಲ್ದಾರ್ ಅವರಿಗೆ ನೋಟಿಸ್ ನೀಡಿದ್ದು ನನ್ನ ನೆನಪಿನಲ್ಲಿದೆ. ಆದರೂ ಬೆಂಗಳೂರಿನ ಹೊರವಲಯದಲ್ಲಿ ಹತ್ತಾರು ಹಿಂದಿ ಸಿನೆಮಾ ತಾರೆಯರು ಭವ್ಯವಾದ ಎಸ್ಟೇಟ್ ಗಳನ್ನ ಹೊಂದಿದ್ದಾರೆ. ಬಳ್ಳಾರಿ, ರಾಯಚೂರು, ಕೊಪ್ಪಳದ ಕಡೆ ಹೊರಗಿನವರು ಬಂದು ನೂರಾರು ಎಕರೆ ಜಮೀನು ಖರೀದಿಸುತ್ತಿದ್ದಾರೆ. ಕೇರಳ ಕಮ್ಯುನಿಸ್ಟ್ ರಾಜ್ಯವಾದರೂ Tata holdings ದು ಲಕ್ಷಾಂತರ ಎಕರೆ ತೋಟದ ಯಜಮಾನಿಕೆ!

ಹೀಗಾಗಿ ನನ್ನ ಮಗಳ ಪ್ರಶ್ನೆಗೆ ಉತ್ತರ ಹೇಳುವ ಶಕ್ತಿ ನನಗಿರಲಿಲ್ಲ. ತಾಂತ್ರಿಕ ಪರಭಾಷೆಯಲ್ಲಿ ಹೇಳಿದೆ: “ಇದು ಒಬ್ಬನ ಸ್ವತ್ತಲ್ಲ, ಒಂದು ಕಂಪೆನಿಯ ಹೋಲ್ಡಿಂಗ್ಸ್!” ಸುರಿವ ಮಳೆಯಲ್ಲಿ ಬಸ್ಸು ಸಾಗಿದಂತೆ ಟೀ ತೋಟಗಳು ಮತ್ತು ಅಳಿದುಳಿದ ಕಾಡಿನ ಜುಗಲ್ಬಂದಿಯಲ್ಲಿ ಮುಳುಗಿ ಹೋಗಿದ್ದವಳು ಮುಂದೇನೂ ಕೇಳಲಿಲ್ಲ. `ಜುಗಲ್ಬಂದಿ’ ಎಂದು ಯಾಕೆ ಹೇಳಿದನೆಂದರೆ, ಆಕಾಶದುದ್ದಕ್ಕೂ ಹಬ್ಬಿ ನಿಂತಿರುವಂತೆ ಕಾಣುವ ಚಹಾ ತೋಟಗಳ ಪಕ್ಕದಲ್ಲಿಯೇ ಸಾವಿರಾರು ಎಕರೆ ಭೂಪ್ರದೇಶದ ರಕ್ಷಿತಾರಣ್ಯವೂ ಇದೆ. ಊಟಿಯ ದೊಡ್ಡ ಬೆಟ್ಟದಷ್ಟೆ ಮೋಹಕವಾಗಿರುವ, ಸಮುದ್ರ ಮಟ್ಟದಿಂದ ಸುಮಾರು ಎಂಟು ಸಾವಿರದ ಐನೂರ ಮೂವತ್ತು ಅಡಿ ಎತ್ತರದಲ್ಲಿರುವ ರಾಜಮಲೆ ರಾಷ್ಟ್ರೀಯ ಉದ್ಯಾನವನ ಟೀ ತೋಟಗಳೊಂದಿಗೇ ಹಬ್ಬಿ ನಿಂತಿದೆ. ಚಿನ್ನಾರ್ ವೈಲ್ಡ್ ಲೈಫ್ ಸ್ಯಾಂಕ್ಚುಯರಿ ಕೂಡಾ ಹೀಗೇ ಇದೆ.

ನಾನು ಮೊದಲೇ ಹೇಳಿದಂತೆ ಮುನ್ನಾರ್ ಪ್ರವಾಸ ವೆಂದರೆ ಲಕ್ಷಾಂತರ ಎಕರೆ ವ್ಯಾಪ್ತಿಯಲ್ಲಿ ಹಬ್ಬಿರುವ ಚಹಾ ತೋಟಗಳ ಗುಚ್ಛದ ನಡುವಿನ ಸಂಚಾರ. ಅಂದು ಬೆಳಿಗ್ಗೆ ನಾವು ಮುನ್ನಾರ್ ಪ್ರಯಾಣ ಆರಂಭಿಸಿದಾಗ ಮೋಡಗಳ ಸುಳಿವೇ ಇರಲಿಲ್ಲ. ಆದರೆ ಮಧ್ಯಾಹ್ನದ ವೇಳೆಗೆ ಆಗಸವನ್ನು ಕವಿದ ಆನೆ ಗಾತ್ರದ ಮೋಡಗಳು ಬಿರು ಮಳೆಯನ್ನೇ ಸುರಿಸಿದವು. ನಮ್ಮ ಅದೃಷ್ಟವೋ ಎಂಬಂತೆ ಮಳೆ ಮತ್ತೆ ಅಂದು ಸಂಜೆ ಮುನ್ನಾರ್ ಎಂಬ ಸಣ್ಣ ನಗರವನ್ನು ಸೇರಿ ನಮ್ಮ ಹೊಟೇಲ್ ಗಳ ಕೋಣೆ ಹೊಕ್ಕುವವರೆಗೂ ಬರಲಿಲ್ಲ. ಅಂದು ರಾತ್ರಿ ನಾವು ಮಾನ್ಸೂನ್ ವೈಭವವನ್ನು, ಆರ್ಭಟವನ್ನು ಸವಿದೆವು. ಹೊಟೇಲ್ ರೂಮಿನಲ್ಲಿದ್ದ ಟಿವಿಯಲ್ಲಿ ಫುಟ್ಬಾಲ್ ಪಂದ್ಯ ನೋಡಲಾರಂಭಿಸುವ ಮುನ್ನ ಯಾವುದಾದರೂ ಕನ್ನಡ ಛಾನಲ್ ಬರಬಹುದಾ ಎಂದು ನನ್ನ ಮಗಳು ಶೋಧಿಸಿದಳು. ಕನ್ನಡವೊಂದನ್ನು ಹೊರತುಪಡಿಸಿ ಉಳಿದೆಲ್ಲಾ ಭಾಷೆಗಳ ಛಾನಲ್ ಗಳು ಬರುತ್ತಿದ್ದವು. ಕಳೆದ ವಾರವಷ್ಟೆ ಚೆನ್ನೈಗೆ ಹೋಗಿ ಬಂದಿದ್ದ ಅವರ ಅಮ್ಮನೂ ಅದೇ ಹೇಳಿದಳು. ಉತ್ತರದ ರಾಜ್ಯಗಳಿರಲಿ ನಮ್ಮ ದಕ್ಷಿಣದ ರಾಜ್ಯಗಳ ಪಟ್ಟಣಗಳಲ್ಲಿಯೇ ಕನ್ನಡ ಛಾನಲ್ ಗಳು ಬರುವುದಿಲ್ಲ. ನಮ್ಮ ಬೆಂಗಳೂರಿನಲ್ಲಿ ಟಿ.ವಿ ಆನ್ ಮಾಡಿದರೆ ಎಲ್ಲ ತಮಿಳು, ತೆಲುಗು, ಮಲಯಾಳಿ ಛಾನಲ್ ಗಳು ಬರುತ್ತವೆ – ಮುಂತಾಗಿ ಅಮ್ಮ-ಮಗಳು ತುಂಬಾ ವ್ಯಥೆಯಿಂದ ಮಾತಾಡಿಕೊಳ್ಳುತ್ತಿದ್ದರು.

* * *

ಮರುದಿನದ ನಮ್ಮ ಪ್ರವಾಸ ಮುನ್ನಾರ್ ನ ಸುತ್ತಮುತ್ತಲಿನ ಪ್ರದೇಶಗಳನ್ನು ಅಂದರೆ ಕಾಡು, ಕಣಿವೆ, ಮಲೆ, ಚಹಾ ತೋಟಗಳನ್ನು ನೋಡುವುದೇ ಆಗಿತ್ತು. ರಾತ್ರಿಯಿಡೀ ಸುರಿದ ಮಳೆ ಮುಂಜಾನೆ ಏಳುವ ವೇಳೆಗೆ ಇಳೆಗೆ ವಿದಾಯ ಹೇಳಿ ಹಸಿರು ಹೊದ್ದ ಬೆಟ್ಟಗಳ ಮೇಲೆ ಸೂರ್ಯ ಸಂಭ್ರಮಿಸು ತ್ತಿದ್ದ. ಆದರೆ ಅಂಥ ಸೂರ್ಯನ ದರ್ಬಾರ್ ಕೂಡಾ ಕ್ಷಣಿಕವಾದುದು ಎಂಬುದು ಮುಂದಿನ ಕ್ಷಣಗಳಲ್ಲಿ ಅರಿವಿಗೆ ಬಂತು. ಮಳೆ- ಬಿಸಿಲು- ಕಾಮನಬಿಲ್ಲಿನ ಆ ದಿನ ನಾವೆಲ್ಲ ಸಣ್ಣ ಪುಟ್ಟ ಸಂತೋಷಗಳಿಂದ ಸಂಭ್ರಮಿಸಿದ ದಿನ. ಮಟ್ಟಾ ಪೆಟ್ಟಿ ನದಿಯಲ್ಲಿ ಸಣ್ಣದೊಂದು ದೋಣಿಯಲ್ಲಿ ಸಣ್ಣಗೆ ಸುರಿಯುತ್ತಿದ್ದ ಸೋನೆ ಮಳೆಯಲ್ಲಿ ನಾವು ಮೂವರೂ ಪೆಡಲ್ ಮಾಡಿಕೊಂಡು ಗಂಟೆಗಟ್ಟಲೆ ಆಡಿದ್ದು ಒಂದು ಥರದ ಸಂತಸವಾದರೆ ನಂತರ ಆ ನದಿಯ ಅಣೆ ಕಟ್ಟಿನ ಬಳಿ ಸ್ಪೀಡ್ ಬೋಟಿನಲ್ಲಿ ಕುಳಿತು ನಾವಿಕನ ಚಮತ್ಕಾರದಿಂದ ಕೂಗಿ, ಕಿರುಚುತ್ತಾ, ತೊಯ್ದು ತೊಪ್ಪೆಯಾದದ್ದು ಮತ್ತೊಂದು ಬಗೆಯ ಖುಷಿ. ನಮ್ಮೊಂದಿಗಿದ್ದ ಆರು ಜನರಲ್ಲಿ ಉಳಿದವರು ಕೊಂಚ ಅಳ್ಳೆದೆೆಯವರಂತೆ ಕಾಣುತ್ತಿದ್ದ ರಿಂದ ನಾವಿಕ ನನ್ನನ್ನ ಮತ್ತು ಮಗಳನ್ನು ಮುಂದೆ ಕೂರಿಸಿ ಹಲವು ಕಡೆ ದೋಣಿಯನ್ನು ಮುಳುಗಿಸುವ ಆಟವಾಡಿದ್ದ. ನಂತರ ನೆನೆದರೆ ಇದೊಂದು ಅಪಾಯದ ಸರ್ಕಸ್ಸೇ ಅನಿಸುತ್ತಿತ್ತು.

ಅಂದು ಸಂಜೆಯ ಸೋನೆಯಲ್ಲಿ ಕೇರಳದ ಅತಿ ಎತ್ತರದ ಸ್ಥಳವಾದ ರಾಜಮಲೈ ನ್ಯಾಷನಲ್ ಪಾರ್ಕ್ ನಲ್ಲಿ ಕಂಡ ದೃಶ್ಯಗಳು ಸ್ಥಿರ ಚಿತ್ರಗಳಂತೆ ಈಗಲೂ ಕಣ್ಣ ಮುಂದೆ ಬರುತ್ತವೆ. ಅಲ್ಲಿನ ಶಿಖರ ಸ್ಥಾನಕ್ಕೆ ಹೋಗುವ ಮುನ್ನ ಅಲ್ಲಿ ಈ ಭಾಗಕ್ಕೆ ವಿಶಿಷ್ಟವಾದ ನೀಲಗಿರಿಥಾರ್  ಅಥವಾ mountain goat ಎಂಬ ಪ್ರಾಣಿ ಸಂಕುಲವಿದೆ. ನಿಮಗೆ ಅದೃಷ್ಟವಿದ್ದರೆ ನೋಡಲು ಸಿಕ್ಕಬಹುದು, ಇಲ್ಲದಿದ್ದರೆ ನಮ್ಮನ್ನು ದೂರಬೇಡಿ ಎಂದು ಅಲ್ಲಿ ಟಿಕೆಟ್ ಕೊಡುವ ಮುನ್ನ ಹೇಳಿದ್ದರು. ಅಲ್ಲಿ ಆ ಪ್ರಾಣಿ ಇರುತ್ತೋ ಇಲ್ಲವೋ ಈ ಹಾದಿಯಲ್ಲಿ ಶಿಖರ ಸ್ಥಾನ ತಲುಪುವುದೇ ಒಂದು ಅದ್ಭುತ ಎಂದುಕೊಂಡು ಹೋದರೆ ಅಲ್ಲಲ್ಲಿ ಪೊದೆಗಳಲ್ಲಿ ನೀಲಗಿರಿಥಾರ್ ಗಳ ಹಿಂಡು, ಹಿಂಡೇ ಇಣುಕುತ್ತಿತ್ತು. ಕೆಲವು ಮುದ್ದಾದ ಆಡುಗಳು ಹೊರಬಂದು ಫೊಟೊಗೆ ಪೋಸ್ ಕೂಡಾ ನೀಡಿದವು!

(ಮುಂದುವರಿಯುವುದು)

‍ಲೇಖಕರು G

February 21, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: