
ನಾ ದಿವಾಕರ
ಚಲನಶೀಲ ತುಟಿಗಳು ಕಂಪಿಸಿದಾಗ !
ಪಟಪಟಪಟನೆ ಹರಳು ಹುರಿದಂತೆ
ಮಾತಿನ ಮಳೆಗರೆಯುತ್ತಿದ್ದ ದನಿಗೆ
ಗರಬಡಿದು ಅಧರಗಳು ಕಂಪಿಸಿದಾಗ
ದೂರದಲ್ಲೊಂದು ಹೃದಯ
ಮಿಡಿಯುತ್ತದೆ ಗತ ಕಾಲದ ನೆನಪುಗಳ
ಮೆರವಣಿಗೆಯಲ್ಲಿ ಮೀಯುತ್ತದೆ !
ಸಾಕು ನಿಲ್ಸೇ ತಾಯಿ ಎಷ್ಟು ಮಾತಾಡ್ತೀಯೇ
ಮೂದಲಿಕೆಗೂ ಮಣಿಯದ ಆ ಹೃದಯ
ಬಯಸಿದ್ದೇನು ? ಸಂವಹನವಷ್ಟೇ.
ಬೇಕಲ್ಲವೇ
ಮನುಜ ಸಂಬಂಧಗಳ ಬೆಸೆಯಲು ?
ತನ್ನೊಡಲಾಳದ ಭಾವನೆಗಳನೆಲ್ಲಿ
ದಾಖಲಿಸುವುದು ? ಯಾರಲ್ಲಿ
ನಿವೇದಿಸುವುದು ? ಪ್ರಶ್ನೆಗಳ ನಡುವೆಯೇ
ಗತಿಸಿದ ಪಯಣದಲ್ಲಿ ಆಲಿಸಿದವರೆಷ್ಟೋ
ಗ್ರಹಿಸಿದವರೆಷ್ಟೋ ?
ನಿಗೂಢತೆಯ ನಡುವೆಯೇ
ಮಾತುಗಳ ಹಂದರ !
ಬಸಿದ ಬೆವರು ಬಸಿರಿನಲ್ಲೇ ಗರ್ಭಸ್ಥವಾಗಿ
ನಿತ್ಯ ಕರ್ಮಗಳ ಬವಣೆಯ
ಅರಮನೆಯಲಿ ವಿರಾಜಿಸಿದಾಗ
ಕರಗಳೇ ತುಟಿಗಳು ಕಾಯಕವೇ ಮಾತು ;
ಎಂದೋ ಒಮ್ಮೆ ಮೂಡುವ
ನಗುವಿನ ಛಾಯೆ ; ನೇಪಥ್ಯದಲಿ
ದರ್ಪ ಕ್ರೌರ್ಯದ ನಡುವೆ ಪ್ರೀತ್ಯಾದರಗಳ
ನೈವೇದ್ಯ ; ಅಂತರಂಗದ ಆಕ್ರಂದನಕ್ಕೆ
ಮಾತುಗಳೇ ಸಾಂತ್ವನ ; ಮರೆಯಬಹುದಲ್ಲವೇ
ಮಾತಿನ ಮೆರವಣಿಗೆಯಲಿ ನೋವಿನ
ಕುರುಹು !
ಒರಗಿದ ಸ್ತಂಭ ಕುಸಿದು ಬಸವಳಿದಾಗ
ಉಳಿದುದೊಂದೇ ದಾರಿ
ಗತಕಾಲದ ನೋವುಗಳ ಮರೆತು
ಹೆಜ್ಜೆ ಹೆಜ್ಜೆಯಲಿ ಒಡಲಕುಡಿಗಳ
ಗೆಜ್ಜೆನಾದದ ಹರುಷ ; ಸೆರಗಿನೊಳಗಿನ
ಕೆಂಡ ತಂಪಾಗಿ ನೆನಪಿನ ತೋಟದಲಿ
ಹೊಂಗಿರಣ ಮೂಡುವ ಹೊತ್ತು ;
ಓಹ್ ಚಲಿಸುವ ತುಟಿಗಳು ಕಂಪಿಸುವುದೇಕೆ ?
ಬಚ್ಚಿಟ್ಟ ಭಾವನೆಗಳಿಗೆ ಮುಚ್ಚಿಟ್ಟ ವೇದನೆಗಳಿಗೆ
ಶಾಶ್ವತ ಬಂಧನವೇ ?
ಅಯ್ಯೋ ! ಮಾತನಾಡೇ
ನಿನ್ನೊಡಲಿಗೆ ಸ್ಪಂದಿಸಲೆಂದೆಣಿಸಿ
ನಿಂದಿರುವೆ ಕೈ ಮುಗಿದು ?
ಸೊರಗಿರುವುದೇಕೆ
ಸೌಂದರ್ಯದ ದೇಗುಲ ?
ದೈವ ನಿಷ್ಕರುಣಿಯಾಯಿತೇ ?
ಏಳು ಎದ್ದೇಳು ಕಿವಿ ಇರುವವರೆಗೂ
ಮಾತನಾಡು ಎನ್ನುತಿದೆ ಮನದಾಳದ
ತುಡಿತ ; ಮಾತನಾಡು ಅಕ್ಕಾ
ಪಟಪಟನೆ ಮಾತನಾಡು ಅಕ್ಕಾ
ಕಿವಿ ತೆರೆದಿದೆ, ಹೃದಯ ಪರಿತಪಿಸುತಿದೆ
ಮನ ಹಾತೊರೆಯುತಿದೆ
ನಿನ್ನ ದನಿಗಾಗಿ, ಪ್ರೀತಿಯ ಸೆಲೆಗಾಗಿ !





0 Comments