– ಶಮ್ಮಿ ಸಂಜೀವ್

ಹುಚ್ಚು ಪ್ರೀತಿ ಅನ್ನೋದೇ ಕಲ್ಪನೆ ಕಣೇ ಗುಲಾಬಿ
ಅಂದವನ ಕಣ್ಣುಗಳಲ್ಲಿ ಬಹಳಾ ಪ್ರಾಮಾಣಿಕತೆ ಇತ್ತು
ನಾನಾದರೂ ನಂಬಲಿ ಹೇಗೆ ಕ್ಯಾಕ್ಟಸ್ ಹುಡುಗಾ
ರಾತ್ರಿ ಹಾಕಿದ ಬಳ್ಳಿ ಬೆಳಗ್ಗೆಗೇ ಹೂ ಬಿಡುವದಿಲ್ಲ
ಆದ್ರೂ ಆಸೆ ಹೊತ್ತು ಗೊಬ್ಬರ ನೀರು ಹಾಕ್ತೀವಿ ಅಲ್ಲ?
ಹೇಳ ಬೇಕಿತ್ತು ಅವನಿಗೆ
ಅವ ಸಿಗುವಾಗಲೆಲ್ಲಾ ಒಂದೆರಡು ಸುತ್ತು
ಜಾಸ್ತಿಯೇ ಪೌಡರ್ ಹಾಕುವದನ್ನ
ಕೂದಲಿಗೂ ಕೋಪ ಬರುವಷ್ಟು ಬಾಚುವದನ್ನ
ರೋಸ್ ಹಚ್ಚದೆಯೇ ಕೆನ್ನೆ ಕೆಂಪಾಗುವದನ್ನ
ಮತ್ತು
ಮಾತಾಡಲು ಹೊರಟಾಗಲೆಲ್ಲಾ ತುಟಿಗಳು
ಮುತ್ತಿಗಾಗಿ ಹಪಹಪಿಸುವದನ್ನ
ತುಕ್ಕು ಹಿಡಿದ ಫಿರಂಗಿಗಳಿಗೆ
ಹೊಸಾ ರೂಪ ಕೊಟ್ಟು ಮ್ಯೂಸಿಯಮ್ಮಿನಲ್ಲಿಡುತ್ತಾರೆ
ಸುತ್ತ ಗುಲಾಬಿ ತೋಟ ಹಬ್ಬಿಸುತ್ತಾರೆ
ಬಯಕೆಗಳ ಗುಂಡು ಹಾರುವ ಕಾಲ ಇತಿಹಾಸವಾಯಿತು
ಆದರೂ ನಾನು ಮಧ್ಯಾಹ್ನದಲ್ಲೇ ಇವತ್ತೇ
ಅವನನ್ನ ಕೇಳಬೇಕೆಂದಿದ್ದೇನೆ
ಕಪ್ಪು ಬೆರಳುಗಳ ತುದಿಗೆ ನನ್ನ
ಮೈಯ ಗಂಧ ಅಂಟಿಸಿಕೊ
ಉಗುರು ಸುತ್ತಿಗೆ
ಕಾಮದ ಶುದ್ಧ ಕೆಂಪು ಉಂಗುರ
ನನಗೆ ನೀಲಿ ಹರಳಿದ್ದರೆ ಸಾಕು
ಕುತ್ತಿಗೆಗೆ ಬಿಸಿ ಉಸಿರ ಹನಿ ಹಾರ
ತಟ್ಟಿದ ಬಾಗಿಲ ತೆರೆದೆ…
ಗುಲಾಬಿ ಗಿಡವೊಂದರ ಜೊತೆ ಕ್ಯಾಕ್ಟಸ್
ಹೂ ಹಿಡಿದಿದ್ದ ಕಪ್ಪು ಹುಡುಗ
ನೀಲಿ ಶರ್ಟಿನಲ್ಲಿ ಬೆವರುತ್ತಿದ್ದ!!

2
ಸಾವಿಗಾಗಿ ತವಕಿಸುತ್ತಿರುವ
ನನ್ನ ಜಾತಕದ ಅಷ್ಟೂ ಗ್ರಹಗಳಲ್ಲಿ
ಒಂದು ವಿನಮ್ರ ವಿನಂತಿ
ಅವ ಬರಲಿದ್ದಾನೆ…
ಅಲ್ಲಿಯವರೆಗೂ ಉಸಿರು ಹಿಡಕೊಂಡಿರಿ
ಸತ್ತು ಬಿದ್ದ ಕನಸುಗಳ ಜೋಳಿಗೆಗೆ
ಕೊನೆಯ ವಿಷಾದದ ಪಟ್ಟಿ ಸೇರಿಸಲಿಕ್ಕಿದೆ
ಜೊತೆಗೆಎಲ್ಲ ಪ್ರೇಮಿಗಳ ಹೆಸರು ಕೂಡ
ಮತ್ತೆ ನನ್ನೊಂದಿಗೆ ಅವರೂ ಕೂಡ ನಿಮಗೆ
ಎಳ್ಳು ನೀರು ಬಿಡಬೇಕಲ್ಲ!!
ಕಾಯುವುದು ಕಡುಕಷ್ಟ ಗೊತ್ತು ನನಗೆ
ಅವ ಬೀದಿಯಲ್ಲಿ ಬಿದ್ದ ಜನರ ರಕ್ತದ ಬಗ್ಗೆ
ಭಾಷಣ ಬಿಗಿಯಲು ಹೋಗಿದ್ದಾನೆ
ಬಂದೇ ಬರುತ್ತಾನೆ
ನಟ್ಟ ನಡುರಾತ್ರಿಯಲ್ಲಿ
ನನ್ನ ಮನೆಯ ಛಾವಣಿಯ
ಮೇಲಿನ ಕಪ್ಪು ಬೆಳದಿಂಗಳು
ಮುತ್ತಿಟ್ಟು ಒಡಲಕ್ಕಿ ತುಂಬಿದವ
ಮಡಿಕೆಯ ಮೂರು ಸುತ್ತು ಸಪ್ತಪದಿಯಾಯ್ತೆ??
ನನಗೋ ಮಧ್ಯರಾತ್ರಿಯಲ್ಲಿ
ಎಚ್ಚರವಾದಾಗೆಲ್ಲ ಕಚ್ಚುವ ನೀಲಿ ಚೇಳು
ಮೈ ತುಂಬಾ ಬಣ್ಣ ಬದಲಿಸುವ ರಕ್ತ
ಹಾಸಿ ಹರಡಿದ್ದ ಬಯಕೆಗಳು ವಿಷದ
ಮತ್ತಿಗೆ ಮುರುಟುತ್ತವೆ
ಅವ ಕಡಲಿಲ್ಲದ ಊರಿನ ಕಪ್ಪು ಬಂಗಾರ
ಒಮ್ಮೆ ಮಾತ್ರ ನನ್ನ ಸ್ಪರ್ಶಿಸಿದ್ದಷ್ಟೇ
ಅರಳಿದ ಹೊಕ್ಕಳ ಹೂವು
ಬಾಡುವ ಮುನ್ನ ಬರುತ್ತಾನಂತೆ
ಸಹನೆ ಇರಲಿ

ಮೈತುಂಬ ಏರಿದ ವಿಷಕ್ಕೆ ಮದ್ದರೆಯುವ
ಮಾಯಕದ ಜೋಗಿ
ಸಾವು ಕೂಡ ಸಹ್ಯವಾಗುವಂತೆ
ಮಿಣ್ಣಗೆ ನಗುತ್ತಾನೆ
ನವಗ್ರಹಗಳೇ ನಿಮಗೂ ನನ್ನ ಜೊತೆ
ಶಾಂತಿಯುತ ಸಾವಿಗಾಗಿ ಪ್ರಾರ್ಥಿಸುತ್ತಾನೆ
ನನ್ನ ಕಣ್ಣೀರಿನ ನಕ್ಷತ್ರಗಳನ್ನ
ಹೂಳುತ್ತಾನೆ
ಮತ್ತು
ಪ್ರೇಮದ ಅಷ್ಟೂ ಸಂಕೇತವಾಗಿ
ಬೆಳ್ಳನೆಯ ಪಾರಿವಾಳವೊಂದನ್ನ
ಬಂಧಮುಕ್ತಗೊಳಿಸುತ್ತಾನೆ
ದಯವಿಟ್ಟು
ಕಾಯಿರಿ
ಕಾಯಿರಿ
ಕಾಯುತ್ತಲಿರಿ!!






super..shammi mam..
lovely expresseion 🙂
Liked it very much
ಸಾವಿಗಾಗಿ ತವಕಿಸುತ್ತಿರುವ
ನನ್ನ ಜಾತಕದ ಅಷ್ಟೂ ಗ್ರಹಗಳಲ್ಲಿ
ಒಂದು ವಿನಮ್ರ ವಿನಂತಿ
ಅವ ಬರಲಿದ್ದಾನೆ…
ಅಲ್ಲಿಯವರೆಗೂ ಉಸಿರು ಹಿಡಕೊಂಡಿರಿ
ಚೆನ್ನಾಗಿದೆ…..
Wah wah :-)lovely poems to brighten up the day!
very original and very fresh and refreshing expression
real good poetry
mudukara maiyyoo bechchgagisuva nenapu hachchagagisuva kavithe. olle raspuri maavu thindangide
ಇಷ್ಟವಾಯ್ತು…
Tumba chennagide
Nice..
ಚೆನ್ನಾಗಿದೆ .
chennagive 🙂