ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಿಳೆಯರ ದಿನ, ನಾನು

ಛಾಯಾ ಭಗವತಿ
sಹಠ ಹಿಡಿದು, ಪಟ್ಟು ಬಿದ್ದು ದುಡ್ಡು ಕೊಟ್ಟು ಕಳಿಸಿ
ಗೆಳತಿಯಿಂದ ಕೇರಳದ ಕಾಟನ್ ಸೀರೆ ತರಿಸಿ, ಧರಿಸಿ,
ತುರುಬನೆತ್ತಿ ಕಟ್ಟಿಕೊಂಡು, ದೊಡ್ಡ ಮಣಿಯಸರವ ಕೊರಳಿಗಿಟ್ಟು
ಅಪ್ಪಟ ಸಮಾಜಸೇವಕಿಯಾಗಿ
ಕೊಳಗೇರಿಯ ಮಕ್ಕಳಿಗೆ ಸ್ನಾನ ಮಾಡಿಸಲು ಹೋದೆ
ಮನೆಯಲ್ಲಿ ಗ್ಯಾಸ್ ಗೀಜರನ್ನು ಬಳಸುವುದಷ್ಟೇ ಬಂತು
ಖಾಲಿಯಾದ ಸಿಲಿಂಡರನ್ನು ಬುಕ್ಕು ಮಾಡಿಸದೇ
ಎರಡು ದಿನ ಸ್ನಾನ ಇಲ್ಲ ಅಂತ ಇವರು ಚಂಡೆ ಬಾರಿಸುತಿದ್ದರು!
ಸಂಗೀತ ಕಲಿಯಲೆಂದು ಹೋಗಿ ಕೂತು
ಗುರುಗಳಿಗೆ ವಂದಿಸಿಯೂ ಆಗಿರಲಿಲ್ಲ
ಮೌನದ ಮೋಡಿಗೆ ಇಟ್ಟರೂ ಮೊಬೈಲು
ಬೇಡದ ಹಾಡು ಒದರಿ ಜೊತೆಗೆ ಮಕ್ಕಳ ತೋಡೀ ರಾಗವು ಕೇಳಿ,
ಒಟ್ಟಿಗೇ ಅಡಿಗೆ ಮನೆಯ ಪಾತ್ರೆಗಳ ಭರ್ಜರಿ ಸಾಥ್ ನುಡಿಸುತ್ತಿದ್ದರು!
‘ಹಿತ್ತಿಲ ಗಿಡ ಮದ್ದಲ್ಲ’ ನೋಡಿ ಬೇರು ಜಜ್ಜಿ, ಗರಿಕೆ ಹಿರಿದು
ಕಾಚು, ಬಜಿ, ತೊಪ್ಪಲು ಬಳ್ಳಿಗಳ ರಸ ಹಿಂಡಿ
ನೋವಿದೆ ಎಂದಲ್ಲಿಗೆಲ್ಲ ಬಳಿದು, ಬಿಟ್ಟು
ಬಲವಂತವಾಗಿ ಮಲಗಿಸಿ ಮನೆವೈದ್ಯ ಮಾಡಿದ್ದೇ ಖರೇವು
ತುರಿಕೆ, ಕೆರೆತ, ಕುರುವನೊತ್ತಿ ಹಿಡಿದು ಹೋಗಿ
ಚಪ್ಪಿಗೆ ಚುಚ್ಚಿಸಿಕೊಳುವುದು ತಪ್ಪಲಿಲ್ಲ ಎಂದೆಲ್ಲ
ಮನೆ ಸೇರುವತನಕ ಮಾತಲ್ಲೇ ಚಚ್ಚುತಿದ್ದರು
ಸತ್ಸಂಗದ ಗುಂಪೊಳು ನನ್ನದೇ ದನಿ ಏರಿಸಿ ಹಾಡಿಕೊಂಡೆ
ಇರುವ ಶಾಂತಿಯೆಲ್ಲ ಕದಡಿ, ತಲೆಗೊಂಡು ಮಾತು ಬಂದು
ಗುರುಗಳು ಮೌನದಿಂದ ಮನೆಗೆ ಹೋಗೆಂದು ಅಪ್ಪಣೆ ಕೊಡಿಸಿ
ಕಣ್ಣೀರು ತೊಡೆಯುತ್ತಲೇ ಹೊಸಿಲು ದಾಟಿ ಅಡಿಯಿಟ್ಟೊಳ ಬಂದರೆ
ಇದು ಯಾವ ಸೀಮೆಯ ತಪವಾಯಿತೆಂದು
ಕೀಲಿಮಣೆ ಕುಟ್ಟುತ್ತ, ಕಿವಿಗೆ ಶಾಂತವಾಗಿರಿಸುವ ಸಂಗೀತ ಕೇಳುತ್ತ
ಕೂತಿದ್ದ ಅಣ್ಣನ ಮಕ್ಕಳು ಕಣ್ಣು ಮಿಟುಕಿಸುತ್ತಿದ್ದರು
ನಾನು ನಿರಿಗೆ ಹಿಡಿದು ಅಡಿಗೆಮನೆಗೆ ಹೊರಟೆ
ಅಮ್ಮಾ, ಇವತ್ತು ಹೋಳಿಗೆಯಾ? ಅತ್ತೆ, ರೊಟ್ಟಿ ಎಣಗಾಯಿಯಾ?
ಅಂತ ಚಿಳ್ಳೆ ಪಿಳ್ಳೆಗಳೆಲ್ಲ ಬೆನ್ನಿಗಾತುಕೊಂಡವು
ಮೊನ್ನೆಯಷ್ಟೇ ಮುಗಿದು ಹೋದ, ಸ್ಕೆಚ್ಚು ಪೆನ್ನಿನಿಂದ
ರೌಂಡು ಹಾಕಿಸಿಕೊಂಡಿದ್ದ ಮಹಿಳಾ ದಿನ
ಕ್ಯಾಲೆಂಡರಿನಲ್ಲಿ ಕೆಂಪು ಕೆಂಪಾಗಿ ನಗುತ್ತಿತ್ತು.

‍ಲೇಖಕರು avadhi

10 April, 2009

2 Comments

  1. maheshchandra

    chennagide, odisikonditu. adare kelavede kaagunita dhosha, angtya pada, bekillada todi deerga…
    ತಲೆಗೊಂಡು
    ತೋಡೀ
    ಬಳಿದು,ಬಿಟ್ಟು..
    yene irali aparupakke badukige hattiravada kavite khushi kottitu.
    abhinandane

  2. shama

    chanda ide chaya.. khushi kottitu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading