ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮಹಾ ಭಾರತ’

ವಿಶ್ವನಾಥ ಎನ್ ನೇರಳಕಟ್ಟೆ

ಋಣಭಾರಕ್ಕೆ ನಲುಗಿದ ಕರ್ಣನಾಗಿದ್ದೇನೆ
ಕೆಸರಿನಲ್ಲಿ ಹೂತ ಬದುಕಿನ ರಥವನ್ನು
ಹೊರಗೆಳೆವ ಪ್ರಯತ್ನ ಮಾಡುತ್ತಲೇ ಇದ್ದೇನೆ

ಮಣಭಾರದ ಗದೆಯಿದೆ; ಬಗ್ಗದ, ಜಗ್ಗದ ಎದೆಯಿದೆ
ಆದರೂ ನಂಬಿದವರ ಕಾಯಲಾರದೆ ತೊಳಲಾಡುವ
ಸಭಾಪರ್ವದ ಭೀಮಸೇನನಾಗಿದ್ದೇನೆ

ಯುಯುತ್ಸುವಾಗಿದ್ದೇನೆ
ಯುದ್ಧ ನಡೆದರೂ ಲೆಕ್ಕ ಮಾತ್ರಕ್ಕೆ ಬದುಕಿದ್ದೇನೆ,
ನೂರರ ಜೊತೆಗೆ ಇನ್ನೊಂದಾಗಿ

ಮನದ ಮೂಲೆಯಲ್ಲಿ ಮೊಳಕೆಯೊಡೆಯುತ್ತಿರುವ
ಅನೈತಿಕತೆಯ ಅಣಬೆಗಳನ್ನು ಧರ್ಮದ-
ಮೊನೆಯಲ್ಲಿ ಚುಚ್ಚಿ ಸಾಯಿಸುವ ಯುದಿಷ್ಠಿರನಾಗಿದ್ದೇನೆ

ಗಾಂಧಾರಿಯಾಗಿದ್ದೇನೆ
ಒಡೆದು ಹೋಳಾದ ಕನಸುಗಳನ್ನು
ಜೇನು ತುಂಬಿದ ಮಡಕೆಯೊಳಗಿಟ್ಟು
ಭರವಸೆ ಹೂವು ನಾಳೆಯಾದರೂ
ಅರಳೀತೆಂದು ಕಾದು ಕುಳಿತಿದ್ದೇನೆ

ಬಲದ ಕೈಯ್ಯಿಂದ ಕೈಜಾರಿಹೋದ ಗುರಿಯನ್ನು
ಕಳೆದುಕೊಳ್ಳಲು ಇಚ್ಛಿಸದೆ,
ವಾಮಹಸ್ತದಲ್ಲಿ ಸಾಧಿಸಹೊರಡುವ
ಏಕಲವ್ಯನಾಗಿದ್ದೇನೆ

ಉತ್ತರಾಯಣಕ್ಕೆ ನಿರೀಕ್ಷಿಸುವ ಭೀಷ್ಮನಾಗಿದ್ದೇನೆ
ಬೆನ್ನನ್ನು ಚುಚ್ಚುತ್ತಿರುವ ಭೂತ- ವರ್ತಮಾನಗಳ
ಬಾಣಗಳನ್ನು ಸಹಿಸಿಕೊಂಡು
ಭವಿಷ್ಯದ ಸ್ವರ್ಗಕ್ಕಾಗಿ ಪರಿತಪಿಸುತ್ತಿದ್ದೇನೆ

ನಾನೀಗ ಹಿಂದೆಂದಿಗಿಂತಲೂ ಬಲಿಷ್ಠನಾಗಿದ್ದೇನೆ
ಸತ್ತರೂ ಛಲ ಬಿಡದ
ದುರ್ಯೋಧನನಾಗಿದ್ದೇನೆ!

ಈ ಮಹಾಮಾರಿ ವಕ್ಕರಿಸಿದ ಮೇಲೆ….

‍ಲೇಖಕರು Admin

24 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading