ಎಂ ಆರ್‌ ಕಮಲ ಓದಿದ- ʼಅಂಗೈ ಅಗಲದ ಆಕಾಶʼ

ಎಂ ಆರ್‌ ಕಮಲ

ಬರಹಗಾರ್ತಿ, ಗೆಳತಿ ಎಲ್.ಸಿ.ಸುಮಿತ್ರಾ ಅವರು ತಮ್ಮ ಇತ್ತೀಚಿನ ಕೃತಿ `ಅಂಗೈ ಅಗಲದ ಆಕಾಶ’ ವನ್ನು ಪ್ರೀತಿಯಿಂದ ಕಳಿಸಿದ್ದಾರೆ. ಇಲ್ಲಿನ ಅನೇಕ ಪ್ರಬಂಧಗಳನ್ನು ಓದಿದ್ದರೂ ಮತ್ತೊಮ್ಮೆ ಅಷ್ಟೇ ಆಸಕ್ತಿಯಿಂದ, ಸಂತೋಷದಿಂದ ಓದಿದೆ. ಅದಕ್ಕೆ ಕಾರಣವೂ ಇದೆ. ಹಳ್ಳಿಯಲ್ಲಿ ಬೆಳೆದ ನಮ್ಮಿಬ್ಬರ ಬದುಕಿನ ಬಹುತೇಕ ವಿಷಯಗಳಲ್ಲಿ ಸಾಮ್ಯತೆ ಇದೆ. ಚಿಂತನೆಯಲ್ಲೂ ಕೂಡ. ಸುಮಿತ್ರಾ ಮಲೆನಾಡಿನವರಾದರೆ ನಾನು ಬಯಲು ಸೀಮೆಯವಳು.

ಭೌಗೋಳಿಕ ಪರಿಸರ ಭಿನ್ನವಾಗಿರುವುದರಿಂದ ಬರೆಯುವ ಶೈಲಿ ಭಿನ್ನವಾಗಿದೆ ಅಷ್ಟೇ. ಸುತ್ತ ಮುತ್ತಲಿನ ಪರಿಸರ, ಪ್ರಕೃತಿ ಬರವಣಿಗೆಯ ಮೇಲೆ ಬೀರುವ ಪ್ರಭಾವ ಬಹು ದೊಡ್ಡದು. ಕುವೆಂಪು , ವರ್ಡ್ಸ್ ವರ್ಥ್ ಕೃತಿಗಳನ್ನು ನಾವು ಗಮನಿಸಿದರೆ ಸಾಕು, ಅದು ಸ್ಪಷ್ಟವಾಗುತ್ತದೆ. ಕಾಡು, ಕಣಿವೆ, ಬೆಟ್ಟ, ಗದ್ದೆ, ಬಗೆ ಬಗೆಯ ಗಿಡ ಮರಗಳ ಹಸಿರಿನ ನಡುವೆ ಬೆಳೆದಿರುವ ಸುಮಿತ್ರಾ ಅದರ ಎಲ್ಲ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ, ಅವುಗಳೊಂದಿಗೆ ಅರಿವಿಲ್ಲದಂತೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುತ್ತಲೇ ಒಂದು ಬಗೆಯ ನಿರುದ್ವಿಗ್ನ ಶೈಲಿಯಲ್ಲಿ ಮಲೆನಾಡಿನ ಬದುಕನ್ನು ಈ ಪುಸ್ತಕದಲ್ಲಿ ಕಟ್ಟಿಕೊಡುತ್ತಾರೆ.

ಸುಮಿತ್ರಾ ಅವರ ವಿಶಿಷ್ಟ ನೆನಪುಗಳು ಅರವತ್ತು, ಎಪ್ಪತ್ತರ ದಶಕದಲ್ಲಿ ಬೆಳೆದ ಬಹುತೇಕ ಹೆಣ್ಣುಮಕ್ಕಳ ನೆನಪುಗಳೊಂದಿಗೆ ತಳುಕು ಹಾಕಿಕೊಂಡಿವೆ. ತಲ್ಲಣ, ಕುತೂಹಲ, ಆತಂಕ, ಭಯ, ನೋವು, ಗೆರೆ ಮೀರುವ ತವಕ ಎಲ್ಲವೂ ಸುಮಿತ್ರಾ ಅವರ ಸ್ವಕೀಯ ಅನುಭವದಂತೆ ಮಾತ್ರ ಕಾಣದೆ ಸಮುದಾಯದ ಅನುಭವದಂತೆ ಕಾಣುವುದೇ ಈ ಪ್ರಬಂಧಗಳ ವಿಶಿಷ್ಟತೆಯಾಗಿದೆ. ಈ ಪುಸ್ತಕಕ್ಕೆ ಇಟ್ಟಿರುವ ಹೆಸರೇ ‘ಅಂಗೈ ಅಗಲದ ಆಕಾಶ’!

ಅಂಗೈ ಅಗಲದಲ್ಲಿ ಆಕಾಶವನ್ನೇ ಸೃಷ್ಟಿಸಿಕೊಳ್ಳಬಲ್ಲ ಹೆಣ್ಣುಮಕ್ಕಳ ಚೈತನ್ಯ, ಶಕ್ತಿ, ಸೃಜನಶೀಲತೆಯನ್ನು ಈ ಹೆಸರು ಅತ್ಯಂತ ರೂಪಕಾತ್ಮಕವಾಗಿ ಹೇಳುತ್ತದೆ. ಇದೊಂದು ‘ಆತ್ಮ ಕಥನ’ದ ಅಂಶಗಳನ್ನು ಒಳಗೊಂಡ ಪ್ರಬಂಧಗಳ ಸಂಕಲನ ಮಾತ್ರ ಎನ್ನಲಾಗುವುದಿಲ್ಲ. ಈ ಪ್ರಬಂಧಗಳು ಏಕಕಾಲದಲ್ಲಿ ಕಾಲಘಟ್ಟವೊಂದರ ಆಚಾರ, ವಿಚಾರ, ಉಡುಪು, ಆಹಾರ, ಜನಜೀವನ ಎಲ್ಲವನ್ನು ದಾಖಲಿಸುತ್ತಲೇ ಇತಿಹಾಸಕಾರರಿಗೆ ಅತ್ಯಂತ ಉಪಯುಕ್ತ ಮಾಹಿತಿಗಳನ್ನು ನೀಡಬಲ್ಲವು ಮತ್ತು ಬದುಕಿನ ಸ್ವಾರಸ್ಯಕರ ಸಂಗತಿಗಳನ್ನು ಸೃಜನಾತ್ಮಕವಾಗಿ ಹೇಳಬಲ್ಲವು.

ಈ ಸಂದರ್ಭದಲ್ಲಿ ಒಂದು ಮಾತು ಹೇಳಲೇಬೇಕು. ಅನೇಕ ಹೆಣ್ಣುಮಕ್ಕಳ ಬರವಣಿಗೆಯಲ್ಲಿರುವ `ಭಾವುಕ’ ಅಂಶವನ್ನು ನೇತ್ಯಾತ್ಮಕವಾಗಿ ಕಾಣುವ ಪರಿಪಾಟವಿದೆ. ಅದು ಅವರ ಸಹಜ ಶೈಲಿ ಎನ್ನುವುದನ್ನು ಒಪ್ಪಿಕೊಳ್ಳುವುದಕ್ಕೆ ಅನೇಕರು ಸಿದ್ಧರಿರುವುದಿಲ್ಲ. ನೂರಾರು ಪ್ರಸಿದ್ಧ ಆಫ್ರಿಕನ್, ಆಫ್ರಿಕನ್-ಅಮೇರಿಕನ್ ಹೆಣ್ಣುಮಕ್ಕಳ ಬರವಣಿಗೆಯನ್ನು ಮತ್ತು ಬದುಕನ್ನು ಕಟ್ಟಿಕೊಡುತ್ತಲೇ ಅವರು ಹೊಳೆಯಿಸುವ ಅದ್ಭುತ ಚಿಂತನೆಗಳನ್ನು ನಾವು ಗಮನಿಸಿದರೆ ಸಾಕು. ಇಲ್ಲಿರುವ ಪ್ರಬಂಧಗಳು ಸಹ ಬರಿಯ ವಸ್ತು ವಿಷಯ ನಿರೂಪಣೆಗೆ ಮಾತ್ರ ಸೀಮಿತವಾಗಿಲ್ಲ.

ಆ ಮೂಲಕ ಲೇಖಕಿಯ ಜೀವನ ಪ್ರೀತಿ, ಚಿಂತನಾಶೀಲ ವ್ಯಕ್ತಿತ್ವವನ್ನು ತೆರೆದಿಡುತ್ತದೆ. ನಿರೂಪಕಿಗೆ ಎಲ್ಲವನ್ನು ಒಳಗೊಳ್ಳುವ, ಹೊಸತನಕ್ಕೆ ತೆರೆದುಕೊಳ್ಳುವ ವಿಶಾಲ ದೃಷ್ಟಿಕೋನವಿದೆ. ತಮಗೆ ಸರಿ ಕಾಣದ್ದನ್ನು ನೇರವಾಗಿ ಟೀಕಿಸುತ್ತಲೇ ತಮ್ಮ ವಿಚಾರಗಳನ್ನು ತಣ್ಣಗಿನ ಭಾಷೆಯಲ್ಲೇ ಮಂಡಿಸಬಲ್ಲರು. ಇಲ್ಲಿಯ ಅನುಭವಗಳೇ ವಿಚಾರಗಳನ್ನು ಹೇಳುವಷ್ಟು ಶಕ್ತಯುತವಾಗಿವೆ.

ಯಾವುದೋ ಒಂದು ಪ್ರಬಂಧದ ಬಗ್ಗೆ ಹೇಳದೆ ಒಟ್ಟಾರೆ ಪುಸ್ತಕದ ಬಗೆಗಿನ ನನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದೇನೆ. ಈ ಪುಸ್ತಕವನ್ನು `ಸಂಕಥನ’ದವರು ಚಂದವಾಗಿ ಪ್ರಕಟಿಸಿದ್ದಾರೆ. ಒಂದು ಖುಷಿಯ ಓದಿಗೆ ಕಾರಣವಾದ, ಒಳಗನ್ನು ನೋಡಿಕೊಳ್ಳುತ್ತಲೇ, ಲೋಕವನ್ನು ನೋಡಬೇಕಾದ ಕ್ರಮವನ್ನು ಕಲಿಸುವ ಈ ಪ್ರಬಂಧಗಳ ಲೇಖಕಿ ಸುಮಿತ್ರಾ ಅವರಿಗೆ ಅಭಿನಂದನೆಗಳು.

‍ಲೇಖಕರು Admin

January 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: