ಮಹಾಮನೆ ಅಂಕಣ – ಹೊನ್ನೀನ ಊರಿಂದ ಚಂದಾದ ಹುಡುಗಿ ಬಾಂದಳು…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

19

ಮದುವೆಗೆ ಒಡವೆ ವಸ್ತ್ರ… ಒಟ್ಟಿ ಬರೆ ಅದೂ ಇದೂ… ಮದುವೆ ಹೆಣ್ಣಿಗೆ ರೇಷ್ಮೆ ಸೀರೆ… ಅವರ ತಾಯಿ-ಅವರಜ್ಜಿಗೆ ಸೀರೆಗಳು…ಮತ್ತೆ ನಮ್ಮ ಅಮ್ಮನಿಗೆ ಅಕ್ಕಂದಿರಿಗೆ ಸೀರೆ…ಅಪ್ಪಾಜಿಗೆ…ತಮ್ಮನಿಗೆ ಭಾವಿ ಮಾನವನರಿಗೆ ಹಾಗೂ ಮದುವೆ ಹುಡುಗನಾದ ನನಗೆ ಬಟ್ಟೆ…ಇದೆಲ್ಲವನ್ನು ಕೊಳ್ಳಬೇಕು…ಹುಡುಗಿಗೆ ತಾಳಿಸರ…ಓಲೆ…ಒಂದು ಜೊತೆ ಬಳೆ…ಉಂಗುರ ಹಾಗೂ ಎರಡಳೆ ಚೈನ್ ಇದೆಲ್ಲ ಕೊಡುವುದೆಂತಲೂ… ಅವರು ನಮ್ಮ ಮನೆಗಳ ಸಂಪ್ರದಾಯದಂತೆ ಬೆಳ್ಳಿ ತಟ್ಟೆ-ಚೊಂಬು- ನಮ್ಮ ತಾಯಿಗೆ ಸೀರೆ… ತಂದೆಗೆ ರೇಷ್ಮೆ ಪಂಚೆ…ಷರ್ಟ್ ತರುವುದೆಂತಲೂ ಮದುವೆ ಖರ್ಚನ್ನು ಅವರೇ ಭರಿಸುವುದೆಂತಲೂ… ಬೆಂಗಳೂರಿನಲ್ಲೇ ಮದುವೆ ಕೊಡವುದೆಂದಲೂ ಮಾತೂಕತೆ ನೆಡೆದು ಎಲ್ಲರಿಗೂ ಒಪ್ಪಿಗೆಯಾಗಿತ್ತು. ಹುಡುಗ ಅಂದರೆ ನನಗೆ… ಕೊರಳಿಗೊಂದು ಚೈನು… ಉಂಗುರ… ವಾಚು… ಹಾಗೂ ವರದಕ್ಷಣೆಗಾಗಿ ಐದು ಸಾವಿರ ರೂಪಾಯಿಗಳನ್ನು ಕೊಡುವುದೆಂಬುದನ್ನು ನಾನು ನಿರಾಕರಿಸಿದೆ… ನನಗೆ ಯಾವತ್ತಿಗೂ… ಇವತ್ತಿಗೂ ಮೈಮೇಲೆ ಚಿನ್ನ ಹಾಕಿಕೊಳ್ಳಬೇಕು ಅನ್ನಿಸಿಲ್ಲ… ಉಂಗುರ ತೊಟ್ಟಿಕೊಳ್ಳಬೇಕು… ವಾಚು ಕಟ್ಟಿಕೊಳ್ಳಬೇಕು ಅಂತ ಅನ್ನಿಸೇ ಇಲ್ಲ ಕಣ್ರೀ… ಅದ್ಯಾಕೋ ಗೊತ್ತಿಲ್ಲ… ನನಗೆ ಮೊದರಿಂದಲೂ ಇದೆಲ್ಲ ಇಷ್ಟ ಇಲ್ಲ…

ಐಷಾರಾಮಿ ವಸ್ತ್ರಗಳು… ತುಂಬಾ ಬೆಲೆಬಾಳುವದೆಲ್ಲವೂ ನನಗೆ ಬೇಡ ಅನ್ನಿಸುತ್ತದೆ… ಅವುಗಳಿಂದ ಆದಷ್ಟು ದೂರ ಇರುವುದಕ್ಕೆ ಪ್ರಯತ್ನ ಪಡುತ್ತೇನೆ… ತುಂಬಾ ಅಗತ್ಯವಿರುವುದನ್ನು ಮಾತ್ರ ನಾನು ಕೊಳ್ಳುತ್ತೇನೆ… ಅದು ನನಗೆ ಅತ್ಯಂತ ಉಪಯೋಗ ಅನ್ನಿಸಿದರೆ ಮಾತ್ರ ಅಂತದನ್ನು ನಾನು ನನ್ನದಾಗಿಸಿಕೊಳ್ಳುತ್ತೇನೆ… ಈಗಲೂ ಹಾಗೇ…

ನಾನು ಬೆಂಗಳೂರಿಗೆ ಬಂದ ಹೊಸದರಲ್ಲಿ… ಹಾಗೂ ಉದ್ಯೋಗಿಯಾದ ಪ್ರಥಮದಲ್ಲಿ ನಾನು ವಾಚು ತೆಗೆದುಕೊಂಡಿದ್ದು ಅದೂ ‘ಹೆಚ್‌ಎಂಟಿ’ ವಾಚು… ಕೆಲವು ದಿನಗಳ ನಂತರ ಅದು ಎಲ್ಲೋ ಕಳೆದುಹೋಯಿತು. ಆ ಮೇಲೆ ಬಹುದಿನಗಳ ನಂತರ ಸ್ನೇಹಿತರೊಬ್ಬರು ತುಂಬಾ ಒತ್ತಾಯ ಮಾಡಿ ಕೊಟ್ಟ ‘ಸಿಟಿಜನ್’ ವಾಚು ನನ್ನ ಕೈಯನ್ನು ಅಲಂಕರಿಸಿತ್ತು… ಅದನ್ನೂ ಎಲ್ಲೋ ಕಳೆದುಕೊಂಡೇ. ಅದಾದ ನಂತರ ಮತ್ಯಾವುದೇ ವಾಚು ಇಲ್ಲ ಪಾಚು ಇಲ್ಲ… ಚಿನ್ನದ ಚೈನ್-ಪೈನೂ ಇಲ್ಲವೇ ಇಲ್ಲ… ಅದನ್ನು ಕನಸಿನಲ್ಲಿಯೂ ಕಾಣಲಿಲ್ಲ… ಇನ್ನು ಉಂಗರದ ಕಥೆ ಎರಡು ಉಂಗುರವನ್ನು ನನ್ನ ರಂಗಸೇವೆಯ ತುರ್ತಿಗಾಗಗಿ ಅಡ ಇಟ್ಟೆ… ಗೆಳೆಯನ ಸಂಸಾರ ತಾಪತ್ರಯ ನೀಗಿಸಲು ಮತ್ತೊಂದು ಉಂಗುರವನ್ನು ಅಡ ಇಟ್ಟು ಬಂದ ಹಣವನ್ನು ಸ್ನೇಹಿತನಿಗೆ ಕೊಟ್ಟೆ… ಅಲ್ಲಿಗೆ ನನ್ನ ಮತ್ತು ಚಿನ್ನದುಂಗುರದ ಸಂಬಂಧ ಮುಗಿಯಿತು… ಇಲ್ಲಿಯವರೆಗೂ ವಾಚಾಗಲಿ… ಉಂಗುರವಾಗಲಿ… ಚೈನಾಗಲಿ ನನ್ನ ಮೈಮೇಲೆ ಇಲ್ಲ ಹಾಗೂ ಅದರ ವಾಂಚೆಯೂ ನನಗಿಲ್ಲ… ಬದುಕನ್ನು ಸರಳವಾಗಿ ನಿರ್ವಹಿಸಬೇಕು ಎಂದುಕೊಂಡವನು ನಾನು…

ಇಂತಹ ಮನಸ್ಥಿತಿಯವನಿಗೆ ಚೈನು… ಉಂಗುರ-ವಾಚು-ದುಡ್ಡು ಕೊಡುತ್ತೇನೆಂದರೆ ಒಪ್ಪುತ್ತೇನೆಯೇ… ಅದೆಲ್ಲ ಬೇಡವೆಂದು ನಿರಾಕರಿಸಿದೆ… ಇನ್ನು ಐದು ಸಾವಿರ ಹಣದ ವಿಚಾರ … ಅದೂ ವರದಕ್ಷಣೆ ರೂಪದಲ್ಲಿ… ನೋ… ನೋ… ಸಾಧ್ಯವೇ ಇಲ್ಲ ಎಂದುಬಿಟ್ಟೆ… ವರದಕ್ಷಿಣೆ ವಿರೋಧಿಗೆ… ಅದರಲ್ಲೂ ವರದಕ್ಷಣಾ ವಿರೋಧಿ ಚಳವಳಿಯನ್ನು ಎಲ್ಲೆಡೆಯೂ ಹಬ್ಬಿಸಬೇಕೆಂದು ಹೊರಟ… ವರದಕ್ಷಣಾ ವಿರೋಧಿ ಸಮಿತಿಯನ್ನು ಗೆಳೆಯರು ಕೂಡಿ ಕಟ್ಟಿದ ಸಂದರ್ಭದಲ್ಲಿ ಅವರಲ್ಲಿ ಭಾಗಿಯಾಗಿ ನನಗೆ… ನನಗೇ ವರದಕ್ಷಿಣೆ ಕೊಡುವುದೇ… ನಾನು ವರದಕ್ಷಣೆ ತೆಗೆದುಕೊಳ್ಳುವುದೇ… ಸಲ್ಲದು… ಸಲ್ಲದೂ… ನನ್ನ ಸುಪ್ತ ಪ್ರಜ್ಞೆಯಲ್ಲಿ ‘ಆ ವರದಕ್ಷಣಾ ವಿರೋಧಿ ಸಮಿತಿಯ ವಿಚಾರಧಾರೆಗಳು’ ಜಾಗ್ರತಗೊಂಡವು. ಹಾಗಾಗಿ ಆ… ಆ ಐದು ಸಾವಿರ ರೂಪಾಯಿಗಳ ವರದಕ್ಷಣೆಯನ್ನು ನಿರಾಕರಿಸಿದೆ… ನಮ್ಮ ತಾಯಿ ತಂದೆ ನನ್ನ ಮಾತಿಗೆ ಸಮ್ಮತಿ ಸಲ್ಲಿಸಿದರು… ಆದರು ಮೆಳ್ಳಗಣ್ಣಿಯ ಮನೆಯವರು ಮದುವೆ ಉಂಗುರವೆಂದೂ… ಅದು ಶಾಸ್ತ್ರವೆಂತಲೂ ನೀವು ಆ ಉಂಗುರವನ್ನು ತೆಗೆದುಕೊಳ್ಳಲೇ ಬೇಕೆಂದು ‘ಶಾಸ್ತ್ರ ಬುಡಕ್ಕಾಗದಾ… ಅಮ್ಯಾಕೆ ಶಿವ ವೆಚ್ಚನಾ’ ಅಂತ ನನ್ನ ಭಾವಿ ಅತ್ತೆಯವರು ಹೇಳಲಾಗಿ… ನಮ್ಮ ತಾಯಿಯವರೂ ಸಹ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದರಿಂದ ನಾನೂ ಸಹ ಉಂಗುರವನ್ನು ಪಡೆಯಲು ಒಪ್ಪಿದೆ…

ಆ ಉಂಗುರದ ಕಥೆ… ಅದು ಹೇಗೆ ಸದ್ವಿನಿಯೋಗವಾಯಿತೆಂಬುದನ್ನು ನಾನು ನಿಮಗೆ ತಿಳಿಸಲೇಬೇಕು ಗೆಳೆಯರೇ… ಕೇಳಿ…

ನನ್ನ ತಂಡದ ಕಲಾವಿದರನ್ನು ಕರೆದುಕೊಂಡು ಬೀದಿ ನಾಟಕ ಮಾಡಲು ಶ್ರೀರಂಗಪಟ್ಟಣಕ್ಕೆ ಹೊರಟಾಗ ಕಾಸಿಲ್ಲವೆಂದು ನಮ್ಮ ರಾಜು ಅರದೇಶಳ್ಳಿ ಕೈಗೆ ಆ ಉಂಗುರವನ್ನು ಕೊಟ್ಟು… ಅಂದರೆ ನಮ್ಮ ಮಾವನ ಮನೆಯವರು ಮದುವೆಯ ಸಂದರ್ಭದಲ್ಲಿ ಕೊಟ್ಟ ಉಂಗುರವನ್ನು ಕಟ್ಟು… ಎಲ್ಲಾದರೂ ಈ ಉಂಗುರ ಇಟ್ಟು ದುಡ್ಡು ತಗೊಂಡ ಬಾರಯ್ಯ ಅಂದೆ… ಆಗ ನಾನು ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿನ ಹುಡುಗರಿಗೆ ಡಾ. ಚಂದ್ರಶೇಖರ ಕಂಬಾರರ ‘ಸಿರಿ ಸಂಪಿಗೆ’ ನಾಟಕವನ್ನು ಮಾಡಿಸುತ್ತಿದೆ. ಅದೇ ಸ್ಥಳಕ್ಕೆ ನನ್ನ ತಂಡದ ಹುಡುಗರೂ ಸಹ ಬಂದು ‘ಕುಡಿತದ ಕೆಡುಕು’ ಬೀದಿ ನಾಟಕದ ತಾಲೀಮನ್ನು ಮಾಡುತ್ತಿದ್ದೆವು…

ರಾಜುವೂ ಸಹ ಆ ನಾಟಕದ ಪಾತ್ರಧಾರಿಯಾಗಿದ್ದನು… ಆತ ಉಂಗುರವನ್ನು ತೆಗೆದುಕೊಂಡೋಗಿ ದೊಡ್ಡಬಳ್ಳಾಪುರದ ಯಾವುದೋ ಸೇಟು ಅಂಗಡಿಯಲ್ಲಿಟ್ಟು ‘ಏಳು ನೂರು ರೂಪಾಯಿ’ಗಳನ್ನು ತಂದನು… ಅಷ್ಟೂ ದುಡ್ಡು ಸಹ ಶ್ರೀರಂಗಪಟ್ಟಣ ಹಾಗೂ ಅಕ್ಕ ಪಕ್ಕದ ಬೇರೆ ಬೇರೆ ಊರುಗಳಲ್ಲಿ ಕುಡಿತದ ಕೆಡುಕು ನಾಟಕ ಮಾಡಲು ಖರ್ಚಾಯಿತು… ಕೊನೆಗೆ ಒಂದಿಷ್ಟು ಹಣ ಉಳಿದ್ದಿತ್ತು… ಕಣ್ರೀ… ಸಂಜೆ ಅಷ್ಟೊತ್ತಿಗೆ ನಾಟಕ ಎಲ್ಲಾ ಮುಗಿಸಿ ಬೆಂಗಳೂರಿಗೆ ಬರುವ ರೈಲು ಕಾಯುತ್ತಾ ತಂಡದ ಕಲಾವಿದರೆಲ್ಲರೂ ಕುಳಿತಿದ್ದೆವು. ಆಗ ನಮ್ಮ ಅದ್ದೆ… ಅದೇ ಈಗ ಖ್ಯಾತ ಪತ್ರಕರ್ತನಾಗಿರುವ ಮಂಜುನಾಥ ಅದ್ದೆ… ರಾಜು ಆರದೇಶಳ್ಳಿ ಹಾಗೂ ಕೃಷ್ಣ ನಾಯಕ್… ಎಲ್ಲರೂ ನನ್ನ ಬಳಿ ಬಂದ್ರು. ‘ನನ್ನ ಬಳಿ ಅತ್ಯಂತ ಸಲಿಗೆಯಿಂದಿದ್ದ ಅದ್ದೆ…

ಅದ್ದೆ : ನಾ ಒಂದೈವತ್ರಿದ್ದೆ ಕೊಡಿ ಸಾ…
ನಾನು : ಯಾಕಯ್ಯಾ…
ಅದ್ದೆ : ನಾಯಕನಿಗ್ಯಾಕೋ ಬೇಕಂತೆ ಸಾ…
ನಾನು : ಯಾಕೋ ನಾಯಕ…
ನಾಯಕ್ : ಅದೂ… ರಾಜು ಏನೋ ಹೇಳ್ದಾ… ಅದಕ್ಕೆ ಸಾ…
ನಾನು : ಏನೋ ರಾಜು… ಅದೇನ್ ಹೇಳ್ರೊ…

ನನಗೆ ಅಷ್ಟೊತ್ತಿಗಾಗಲೆ ಈ ಕಳ್ರು ಏನಕ್ಕೊ ಪೀಠಿಕೆ ಹಾಕುತ್ತಿದ್ದಾರೆಂದು ವಾಸನೆ ಹೊಡೆದು ಈ ಕಳ್ರೇ ಬಾಯಿ ಬಿಡಲಿ ಎಂದು ಸುಮ್ಮನೆ ಮೌನವಹಿಸಿದ್ದೆ…

ರಾಜು : ಲೇ ಅದ್ದೆ… ಅದೇನ್ ಕೇಳೊ… ನೀನೇ ಅಲ್ವಾ ಹೇಳಿದ್ದು… ಮೇಷ್ಟುç ಅದೇನು ಅಂತ ಕೇಳ್ತಾವ್ರೆ… ಅದೇನು ಹೇಳೋ…
ಅದ್ದೆ : ಅದೇನೂ ಇಲ್ಲಾ ಸಾ… ಬೆಳಗ್ಗೆಯಿಂದ ಬಯಲಲ್ಲಿ… ಬಿಸ್ಲಲ್ಲಿ… ಆ ದೂಳಲ್ಲಿ ನಾಟಕ ಮಾಡಿ ಒಂಥರಾ ಆಗ್ಬುಟ್ಟದೆ ಸಾ… ಗಂಟ್ಲೆಲ್ಲೆ ಗಸಸ ಅಂತದೆ ಸಾ… ಅದ್ಕೆ…
ನಾನು : ಅದ್ಕೆ…
ಅದ್ದೆ : ಅದ್ಕೆ… ಗಂಟ್ಲ ವಸಿ ತಂಪ್ ಮಾಡ್ಕೊಳ್ಳನಾ ಅಂತ ಸಾ…
ನಾನು : ಟೀ… ಕುಡಿತೀರೇನೊ… ಲೇ ಸೀನಾ… ಬಾರೋ ಇಲ್ಲಿ… (ಅನ್ನುವಷ್ಟರಲ್ಲಿ ಮೂವರೂ ಒಮ್ಮೆಗೇ…)
ಅದ್ದೆ : ನಾಯಕ್, ರಾಜು; ಅಯ್ಯೊ.. ಬ್ಯಾಡಿ ಬ್ಯಾಡಿ ಟೀ ಬ್ಯಾಡಿ ಸಾ… ಅರ‍್ಯಾರನ್ನು ಕರೆಲೂ ಬ್ಯಾಡಿ ಸಾ… (ಅಂದ್ರು)
ನಾನು : ಮತ್ತೀನ್ನೆರ‍್ರೊ…
ಅದ್ದೆ : ಅದೇ ಸಾ… ಗಂಟ್ಲಿಗೇನಾರ ಬುಟ್ಟಕ್ಕೊಂಡ್ ಬರನಾ ಅಂತ ಸಾ… (ಅದ್ದೆ ನೇರವಾಗಿ ಫೀಲ್ಡಿಗಿಳಿದ) ಅದೇ ಸಾ… ನಲವತ್ರೂಪಾಯಿ ಒಂದ್ ಕ್ವಾಟ್ರುಗೆ ಸಾ… ಇನ್ನ ಹತ್ರೂಪಾಯಿ ಕಳ್ಳೆ ಬೀಜಕ್ಕೆ ಸಾ… ಅಷ್ಟೇ ಸಾಕು ಸಾ… ಅಷ್ಟೇ ಸಾಕು…
ನಾನು : (ಪ್ರೀತಿಯಿಂದ… ನಗುತ್ತಾ) ಅಯ್ಯೋ ಮನೆಹಾಳ್ರಾ… ಅಲ್ಲಲೇ… ಬೆಳಗ್ಗೆಯಿಂದ ಶ್ರೀರಂಗಪಟ್ಟಣ ಬೀದ್ಬೀದಿಲಿ… ಪಕ್ಕದ ಹಳ್ಳಿಗಳಲ್ಲಿ ‘ಕುಡಿಬ್ಯಾಡ್ರಪ್ಪೋ ಕುಡಿಬ್ಯಾಡಿ ಮದ್ಯಪಾನ ಮಹಾಹಾನಿ… ಕುಡಿಬ್ಯಾಡ್ರಪೊ ಕುಡೀಬ್ಯಾಡೀ…’ ಅಂತ ಸಾರಿ… ನಾಟಕ ಮಾಡಿ… ಈಗ ನೀವೇ ಕುಡಿಯೋಕ್ಕೊದ್ರೇ ಎಂಗ್ರಲಾ… ತಪ್ಪಲ್ವೇನ್ರೋ…
ರಾಜು : ತಪ್ಪೇನೂ ಇಲ್ಲ ಬುಡಿ ಸಾ…
ನಾಯಕ್ : ಇಂಗೋಗಿ ಅಂಗ್ ಬಂದ್ಬುಡ್ತೀವಿ ಸಾ…
ನಾನು : ಲೇ… ನಿಮ್ಮನ್ನು ನಾಟಕದಲ್ಲಿ ಕಂಡಿರೋರು… ಯಾರಾದ್ರೂ ನೀವು ಕುಡಿಯುದ ನೋಡಿದ್ರೆ ಗತಿ ಏನ್ರೋ… ಏನ್ರಯ್ಯ ‘ಕುಡೀಬ್ಯಾಡಿ ಕುಡೀಬ್ಯಾಡಿ … ಕುಡಿಯೋದು ಕೆಡ್ಕು… ಹಂಗಾಯ್ಯಾತದೆ… ಹಿಂಗಯ್ಯಾತದೆ ಅಂದೂರು ನೀವೇ ಅಲ್ವೇನ್ರಯ್ಯ… ಅಂತ ನಿಮ್ಮನ್ನು ಹಿಡ್ಕೊಂಡ್ರೇ ಏನ್ರೋ ಮಾಡ್ತೀರಿ…
ಅದ್ದೆ : ಸಾ… ನಾವೇನು ಅಷ್ಟು ದಡ್ರ ಸಾ… ಅವರಿಗೆ ಗೊಂತ್ತಾಗೊಂಗೆ ಕುಡಿತೇವಾ ಸಾ… ನಾಟಕದಲ್ಲಿ ಬಳಸುತ್ತಿದ್ದ ಚೌಕಗಳ ನಮ್ಮ ತಲೆ ಮೇಲೆ ಹಾಕ್ಕೊಂಡು ಮರೆಯೋಗಿ… ಯರ‍್ಗೋ ಕಾಣ್ದಂಗೆ ಹಾಕ್ಕೊಂಡು ಬತ್ತೀವಿ ಸಾ…
ನಾನು : (ನಗುತ್ತಲೇ) ಆಯ್ತು ಸರಿ ಬುಡ್ರಪ್ಪಾ… ಹುಷಾರು ಕಣ್ರೋ… (ತಗೊಳ್ಳಿ ಎಂದು ಎಂಬತ್ತು ರೂಪಾಯಿಗಳನ್ನು ಕೊಟ್ಟು) ಲೇ ನಾಯಕ… ಉಳಿದಿದ್ದಕ್ಕೆ ಬಾಕಿಯವರಿಗೆಲ್ಲ ಬೊಂಡನೋ… ಬಜ್ಜಿನೋ ಕಟ್ಟಿಸಿಕೊಂಡು ರ‍್ರೋ…
ಅದ್ದೆ : ಸಾ… ನೀವೂ ಬನ್ನಿ ಸಾ… ಕಂಪ್ನಿ ಚನ್ನಾಗಿರುತೈತೆ…
ನಾನು : (ನಗುತ್ತಲೇ ಅವರ ಆಹ್ವಾನವನ್ನು ನಿರಾಕರಿಸಿದೆ)

ನನ್ನ ಭಾವಿ ಮಾವನವರ ಮನೆಯಲ್ಲಿ ನನ್ನ ಮದುವೆಗೆಂದು ನನಗೆ ಕೊಟ್ಟ ಉಂಗುರ ಅದನ್ನು ಅಡ ಇಟ್ಟಿದ್ದರಿಂದ ಬಂದ ಹಣ ನನ್ನ ತಂಡದ ‘ಕುಡಿತದ ಕೆಡುಕು’ ನಾಟಕ ಪ್ರದರ್ಶಿಸಲು ಹಾಗೂ ನನ್ನ ಪ್ರೀತಿಯ ಹುಡುಗರು ಗಂಟಲು ತಂಪು ಮಾಡಿಕೊಳ್ಳಲು… ಸದ್ವಿನಿಯೋಗವಾಗಿತ್ತೂ ಕಣ್ರಪ್ಪಾ…

ಕಾಳಿದಾಸನ ಶಾಕುಂತಲ ನಾಟಕದ ಉಂಗುರದ ಕಥೆ ಒಂದು ರೀತಿಯದಾದರೆ ನನ್ನ ಉಂಗುರದ ಕಥೆಗಳು ಬೇರೆ ತರದ್ದೆ ಇದಾವೆ ಕಣ್ರಿ… ನಾನು ಮುಂದೆ ಬರೆಯಬಹುದಾದ ನನ್ನ ರಂಗಭೂಮಿ ಅಥವಾ ನನ್ನ ಬಾಲ್ಯದ ಆತ್ಮಕಥನದಲ್ಲಿ ಎಲ್ಲಿಯಾದರೂ ಆ ಕತೆಗಳನ್ನೂ ನಿಮಗೆ ಹೇಳ್ತೀನಿ ಕಣ್ರೀ…

ಹ್ಲಾಂ… ಬನ್ನಿ ನನ್ನ ಮದುವೆಯ ದಿನಗಳಿಗೆ ಮರಳೋಣ…

ನನ್ನ ಮದುವೆಯ ಸಂದರ್ಭದಲ್ಲಿ ವರೋಪಚಾರಕ್ಕೆ ಕೂಡಬೇಕೆಂದಿದ್ದ ಆ ಚೈನು… ಆ… ಉಂಗುರ… ಆ ವಾಚು… ಆ ದುಡ್ಡು… ಇದ್ಯಾವುದೂ ಬೇಡ ಎಂದಿದ್ನಲ್ಲಾ ನಾನು… ಶಾಸ್ತ್ರಕ್ಕೆ ಕಟ್ಟು ಬಿದ್ದು ಉಂಗುರವನ್ನು ಪಡೆಯಲು ಒಪ್ಪಿ ಬೇರೆಯವನ್ನೆಲ್ಲಾ ನಿರಾಕರಿಸಿದೆ. ನನ್ನ ಬಾಮೈದನಾದ ರೇಣುಕಪ್ಪನು ನನ್ನ ಭಾವಾಜಿಯವರಾದ ರಾಜಶೇಖರ್ ಬಳಿ ‘ಏನು ನಿಮ್ಮ ಸ್ವಾಮಿಯವರು ನಾವು ಪ್ರೀತಿಯಿಂದ ಕೊಡುವುದನ್ನೂ ಬೇಡ ಅನ್ನುತ್ತಾರೆಲ್ಲ… ಹುಡುಗ ಏನೂ ತೆಗೆದುಕೊಳ್ಳದೇ ಮದುವೆ ಆದನಂತೆ ಅನ್ನುವ ಸುದ್ದಿ… ನಮ್ಮ ಸಂಬಂಧಿಕರಿಗೆಲ್ಲಾ ಗೊತ್ತಾಗಿ… ಅವರೆಲ್ಲ ನಮ್ಮನ್ನು ಏನೆಂದಾರು… ಹುಡುಗನಿಗೆ ಏನೂ ಕೊಡದೆ… ಬರೀಗೈಲಿ ಧಾರೆ ಎರದವರೆಲ್ಲಾ… ಇವರಿಗೇನು ಗತಿ ಇರಲಿಲ್ವೆ… ಅಂತಾ ನಮ್ಮನ್ನು ಆಡ್ಕೊಳ್ಳಲ್ವೆ…ನೀವೇ ಹೇಳಿ ಸಾ… ಹುಡುಗನಿಗೆ ಏನೋ ಐಬು ಇರಬೇಕು. ಅದ್ಕೆ ಆ ಕಡಿ ಹುಡ್ಗಿನಾ ಏನೂ ವರದಕ್ಷಣೆ ಇಲ್ಲದೆ… ವರೋಪಚಾರ ಇಲ್ದೆ ಮದ್ವೆ ಆಗ್ತಾ ಇರಬಹುದು ಅಂತ ಆಡ್ಕೊಳಲ್ವ ಸಾ… ನೀವೇ ಹೇಳಿ ರಾಜಶೇಖರ್’ ಅಂತ ಹೇಳಿದ್ದನ್ನು ನಮ್ಮ ಭಾವನವರು ತಮ್ಮ ಮಾತಿಗೆ ಮತ್ತಷ್ಟು ಮೆರಗು ಸೇರಿಸಿ ‘ಸ್ವಾಮಿಯವರೇ… ಅದೇನು ಅಂಗೇಶದ್ರಂತೆಲ್ಲಾ… ಒಡವೆ ಬ್ಯಾಡ… ದುಡ್ಡ ಬ್ಯಾಡ ಅಂದ್ರಂತೆ… ತಪ್ಪು… ತಪ್ಪು… ಅವರು ಪ್ರೀತಿಯಿಂದ ಕೊಡಬೇಕಾದರೆ ಸುಮ್ನೆ ಇಸ್ಕೊಬೇಕು’ ಎಂದು ಹೇಳುತ್ತಾ… ‘ತಗೊಳ್ಳಿ… ರೇಣುಕಪ್ಪ… ಸ್ವಾಮಿಯವರಿಗೆ ನೀವೇ ಕೊಟ್ಬಿಡಿ ಸಾ ಅಂತಾ ನಾಲ್ಕು ಸಾವಿರ ಕೊಟ್ಟವನೆ’ ಎಂದು ಹೇಳಿ ನನ್ನ ಜೇಬಿಗೆ ಆ ಹಣವನ್ನು ತುರುಕಿದರು… ನಾನು ವಿಧಿಯಿಲ್ಲದೆ ಹಣವನ್ನು ಪಡೆದೆ…

ನನಗೆ ಆ ಹಣ ‘ಪ್ರೀತಿಗೆ ಕೊಟ್ಟ ಹಣವಾ… ಅಥವಾ ಅವರಿವರು ಏನಾದರೂ ಅಂದುಕೊಳ್ಳುತ್ತಾರೆಂದು ಕೊಟ್ಟ ಹಣವಾ ಅಥವಾ ಅದು ವರದಕ್ಷಣೆಗಾಗಿ ಕೊಟ್ಟ ಹಣವಾ’ ಎಂಬ ಜಿಜ್ಞಾಸೆ ತಲೆತಿನ್ನತೊಡಗಿತು…

ನನ್ನ ‘ವರದಕ್ಷಣೆ ವಿರೋಧಿ ನಿಲುವು’ ಇಲ್ಲಿಗೆ ಪರಿಸಮಾಪ್ತಿಯಾಯಿತು…? ಆ ಹಣ ನನ್ನಲ್ಲಿ ಪಾಪಪ್ರಜ್ಞೆಯನ್ನು… ಗೊಂದಲವನ್ನೂ… ತಲ್ಲಣವನ್ನೂ ತಂದಿತ್ತು.

ಆ ಎಲ್ಲಾ ಭಾವತಲ್ಲಣಗಳಿಂದ ದೂರವಾಗಲು ನಾನೇನು ಮಾಡಿದೆ ಗೊತ್ತೇ ಗೆಳೆಯರೇ…

ಸೋ ಎನ್ನಿರೆ ಸೋಬಾನ ಎನ್ನಿರೇ…
ಸೋ ಎನ್ನಿರೆ ಸೋಬಾನ ಎನ್ನಿರೇ…
ಹೊನ್ನೀನ ಊರಿಂದ ಚಂದಾದ ಹುಡಿಗಿ ಬಂದಾಳಾ
ಗಂಧಾದ ಗೊಂಬಿ ಅಂದಾದ ಅರಗಿಣಿಯು ಬಂದಾಳಾ
ಸೊಬಗಿ ಸುಂದರಿಗೊಂದು ನವಿಲು ಬುಟ್ಟಾದ
ಜರತಾರಿ ಸೀರೆಯಾ ತಂದಾನೋ
ಅಕ್ಕ ತಂಗಿ ಬಂದು ಸಿಂಗಾರ ಮಾಡಿರೆ
ಗಲ್ಲದಾ ಮೇಲೊಂದು ದೃಷ್ಟಿ ಬಟ್ಟು
ಸೋ ಎನ್ನಿರೆ ಸೋಬಾನ ಎನ್ನಿರೇ
ಸೋ ಎನ್ನಿರೆ ಸೋಬಾನ ಎನ್ನಿರೇ

ಆ ದುಡ್ನ ನಾನೇನ್ ಮಾಡ್ದೆ ಹೇಳಿ…?

ಆ ದುಡ್ನಲ್ಲಿ ನಾನು…

ಮನದೊಳಗೆ ಸೆರೆಯಾದ ಸಿರಿಗಂಗೆಗೊಂದು ನವಿಲು ಬುಟ್ಟಾದ ಜರತಾರಿ ಸೀರೆಯಾ ತಂದೇನು…

ಸೋ ಎನ್ನಿರೆ ಸೋಬಾನ ಎನ್ನಿರೇ…

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

October 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: