ಮಹಾಮನೆ ಅಂಕಣ – ಹರುಕು ಚಪ್ಪರ ಜೇರುಗಿಂಡಿ ಮೇಲಕೇರಿ ಮೆಟ್ಟಲಾರೆ…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

21

‘ಮದುವೆ ಮಾಡಿ ನೋಡು… ಮನೆ ಕಟ್ಟಿ ನೋಡು’ ಅನ್ನುವ ರೂಢಿಗತ ಮಾತಿಗೆ ‘ಮದುವೆ ಮಾಡ್ಕೊಂಡು ನೋಡು’ ಅನ್ನುವ ಮಾತನ್ನು ಜೊತೆಗೆ ಸೇರಿಸಬೇಕು ಕಣ್ರೀ… ಮನೆಯ ಹಿರಿಯ ಮಗ ಆಗಿದ್ದರಿಂದ ಅಕ್ಕಂದಿರ ಮದುವೆಯ ಸಂದರ್ಭದ ಹಲವು ಜವಾಬ್ದಾರಿಗಳನ್ನು ನಾನು ಹೊತ್ತಿದ್ದೆ. ಆ ವೇಳೆಯ ಹಲವು ಅನುಭವಗಳು ನನಗಾಗಿದ್ದವು… ಅದರಲ್ಲೂ ಮಧ್ಯಮವರ್ಗದ ಮನೆಗಳು… ಸಾಮಾಜಿಕವಾಗಿ ಮೇಲ್ತರದಲ್ಲಿದ್ದ… ಆರ್ಥಿಕವಾಗಿ ಅಧೋಗತಿಯಲ್ಲಿರುವ ಕುಟುಂಬದ ಮದುವೆಗಳು… ಆ ಸಂದರ್ಭಗಳಲ್ಲಿ ಬರುವ ಸವಾಲುಗಳು… ಸಾಂದರ್ಭಿಕ ಅಡೆತಡೆಗಳು… ಕಿವಿಗಪ್ಪಳಿಸುವ ಕಟುನುಡಿಗಳು… ಅದರಲ್ಲಿಯೂ ಮನೆಯ ಹೆಣ್ಣುಮಕ್ಕಳನ್ನು ಗುರುತು ಪರಿಚಯವೇ ಇಲ್ಲದ ಕುಟುಂಬಕ್ಕೆ ಕೂಡುವಾಗಿನ ಮಾನಸಿಕ ತುಮುಲಗಳು… ಖರ್ಚು ವೆಚ್ಚಗಳನ್ನು ಸರಿತೂಗಿಸಬೇಕಾದ ಅನಿವಾರ್ಯತೆ… ಸಂತಸದೊಳಗೆ ಅಡಗಿರುವ ನೋವು… ಸಡಗರದೊಳಗೆ ಆವರಿಸಿರುವ ಮಾನ… ಇದೆಲ್ಲದರ ತುಸು ಅನುಭವ ನನಗಾಗಿತ್ತು.

ಮದುವೆ ಅನ್ನುವುದು ಕುಟುಂಬದ ಸಂಬಂಧಗಳು… ಆರ್ಥಿಕ ಸ್ಥಿತಿಗತಿಗಳು…. ಮಾನಸಿಕ ಸ್ಥಿತ್ಯಂತರಗಳು ಹಾಗೂ ಆತಿಥ್ಯಿ’ ಇವುಗಳ ಸರ‍್ಥ ನರ‍್ವಹಣೆಯನ್ನು ಬಯಸುತ್ತದೆ. ಮದುವೆ ಮಾಡುವವರಿಗೆ ಇವೆಲ್ಲದರ ಬಗ್ಗೆ ತಿಳುವಳಿಕೆ ಇರಬೇಕಾಗುತ್ತದೆ. ಆದರೆ ಇವತ್ತಿನ ಮದುವೆಗಳು ಹೊಸ ರೂಪ ಪಡೆದಿವೆ. ಆ ಕುರಿತು ಇಲ್ಲಿ ನಾನೇನೂ ಮಾತನಾಡುವುದಿಲ್ಲ. ಇಂತಹ ಅನುಭವಗಳೆಲ್ಲ ತಲೆತಲಾಂತರದಿಂದ ಪರಂಪರಾಗತವಾಗಿ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿರುತ್ತದೆ… ಆದರೆ ಇಂದು ಅಂತಹ ಪರಂಪರೆಗಳು ಕ್ಷೀಣಿಸುತ್ತಿವೆ… ಹಾಗಾಗೇ ಇಂದಿನ ಕೌಟುಂಬಿಕ ವ್ಯವಸ್ಥೆ ಶಿಥಿಲಗೊಳ್ಳುತ್ತಿದೆ ಎಂದು ನನಗನ್ನಿಸುತ್ತದೆ.

ನನಗ್ಯಾಕೆ ಇಂತಹ ಅನುಭವಗಳೆಲ್ಲ ಅಷ್ಟು ವಯಸ್ಸಿಗೇ ಆದವೆಂದರೆ ನನ್ನ ಮನೆಗೆ ನಾನೇ ಹಿರಿಯ ಮಗ. ಸಹಜವಾಗಿ ಕೆಲವು ಜವಾಬ್ದಾರಿಗಳು ತನಗೆ ತಾನೇ ಬಂದುಬಿಡುತ್ತದೆ. ಅಲ್ಲದೆ ಅಪ್ಪಾಜಿ ದೊಡ್ಡಮನೆಯಿಂದ ಹೊರಬಂದಿದ್ದರು. ತಮ್ಮ ಶಿಕ್ಷಕ ವೃತ್ತಿಯನ್ನು ನಿರ್ವಹಿಸುತ್ತಲೇ ದೊಡ್ಡ ಮನೆಯ ಎಲ್ಲಾ ವ್ಯಾಪಾರ ವಹಿವಾಟಿನಲ್ಲಿ ಭಾಗಿಯಾದವರು. ಶಾಲೆಯ ಕೆಲಸವನ್ನು ಮುಗಿಸಿ ಸಂಜೆ ಆಳುಕಾಳುಗಳೊಡನೆ ಸುತ್ತಮುತ್ತಲ ಹಳ್ಳಿಹಳ್ಳಿ ಸುತ್ತಿ ದವಸ ಧಾನ್ಯಗಳನ್ನು ಅಳೆಸುತ್ತಿದ್ದವರು. ಎಣ್ಣೆಕಾಳುಗಳು… ಕುರಿ ಭಂಡಾರ… ಅದೂ ಇದೂ… ಸೊಪ್ಪು ಸದೆ ಏನನ್ನೂ ಬಿಡದೆ ಖರೀದಿ ಮಾಡಿ ಗಾಡಿ ತುಂಬಿ ಸರಿರಾತ್ರಿಗೆ ಮನೆ ತಲುಪುತ್ತಿದ್ದರು… ಕೈಯಲ್ಲಿ ಹಣಕಾಸು ಓಡಿಯಾಡುತ್ತಿತ್ತು. ದಣಿದ ದೇಹವನ್ನೂ ಲೆಕ್ಕಿಸದೆ ದುಡಿದವರು… ತಮ್ಮ ವೃತ್ತಿಯಲ್ಲೂ ಹೆಸರು ಮಾಡಿದವರು… ʻಬಸೆಟ್ಟಪ್ಪ ಮೇಷ್ಟ್ರು’ ಅಂದ್ರೆ ಸುತ್ತಲ ಹಳ್ಳಿಗೇ ಹೆಸರುವಾಸಿ…

ಆಗಿನ ಕಾಲಕ್ಕೆ ನನ್ನೂರು ದೇವಲಾಪುರದಲ್ಲಿ ದೊಡ್ಡಮನೆ’ ಕಟ್ಟಿದವರು. ದೊಡ್ಡ ವ್ಯಾಪಾರಸ್ತ ಮನೆತನ… ಜವಳಿ ವ್ಯಾಪಾರದಿಂದ ಹಿಡಿದು… ಲೇವಾದೇವಿಯವರಿಗೆ… ಮಂಗಳೂರು ಹೆಂಚಿನಿಂದ ಹಿಡಿದು… ಉಪ್ಪು ಬೂದಿ ವ್ಯಾಪಾದವರೆಗೆ… ಬೆಲ್ಲದ ವ್ಯಾಪಾರದಿಂದ ಹಿಡಿದು ಸೀಮೆ ಎಣ್ಣೆ ವ್ಯಾಪಾರದವರೆಗೆ… ಹೆಸರಿಗಷ್ಟೇ ಒಂದು ಅಂಗಡಿ ಅಂತ ಇತ್ತು… ಆದರೆ ಮುತ್ತಾತಂದಿರು ಬಾಳು ಬದುಕಿದ ಹಳೆಯ ಮನೆಯ ತುಂಬ ಮೂಟೆ ಮೂಟೆಗಳ ಲಾಟು ಲಾಟು… ದೊಡ್ಡ ಮನೆಯ ಓಣಿಯಲ್ಲಿ… ಅಂಗಳದಲ್ಲಿ… ಅಟ್ಟದ ಮೇಲೆ ಬೆಲ್ಲದ ಮೂಟೆ… ಮೆಣಸಿನಕಾಯಿಯ ಮೂಟೆಗಳು… ಬೇಳೆ ಕಾಳುಗಳ ಮೂಟೆ… ಈರುಳ್ಳಿ… ಬೆಳ್ಳುಳ್ಳಿ ಮಂಕರಿಗಳು… ಇದರ ಜೊತೆಗೆ ಊಟದ ಎಲೆಗಳ ಪಿಂಡಿಗಳು… ಬಾಳೆದೊನ್ನೆಗಳ ಕಟ್ಟುಗಳು.

ಚಿಲ್ಲರೆ ಅಂಗಡಿಯ ಇನ್ನೊಂದು ಮಗ್ಗುಲಿಗೆ ಜವಳಿ ಅಂಗಡಿ… ಮತ್ತೊಂದು ಮೂಲೆಯಲ್ಲಿ ಸೀಮೆ ಎಣ್ಣೆ ಡ್ರಮ್ಮುಗಳು… ದೊಡ್ಡಮನೆಯ ಹೊರ ಗೋಡೆಗೊರಗಿದಂಗೆ ಊದ್ದಕ್ಕೂ ಮಂಗಳೂರು ಹೆಂಚಿನ ಸಾಲುಸಾಲುಗಳು… ಇಷ್ಟೆಲ್ಲ ದೊಡ್ಡವಹಿವಾಟನ್ನು ನನ್ನ ದೊಡ್ಡಪ್ಪ ಡಿ.ಎಸ್. ಪರಮೇಶ್ವರಪ್ಪನವರು… ನನ್ನ ಅಪ್ಪಾಜಿ ಡಿ.ಎಸ್. ಬಸೆಟ್ಟಪ್ಪನವರು ಹಾಗೂ ನನ್ನ ಚಿಕ್ಕಪ್ಪ ಡಿ.ಎಸ್. ಮಹದೇವಪ್ಪನವರು ನೋಡಿಕೊಳ್ಳುತ್ತಿದ್ದರು… ಇದರ ಜೊತೆಗೆ ನಮ್ಮಜ್ಜಿ ಬಸವಮಜ್ಜಿಯವರು ಚಿಲ್ಲರೆ ಅಂಗಡಿಯಲ್ಲಿ ಕೂತೇ ಇರುತ್ತಿದ್ದರು. ವ್ಯಾಪಾರದ ಜೊತೆಗೆ ಹೊಲಗದ್ದೆಗಳು… ವ್ಯವಸಾಯ ಬೇಸಾಯ… ಆಳುಕಾಳುಗಳು ಹಸು, ಎಮ್ಮೆಗಳು, ಎತ್ತು, ಕೋಣಗಳು ಅವುಗಳ ಕರುಗಳು…

ಹೀಗೆಯೇ ನಮ್ಮದು ದೊಡ್ಡಮನೆ’ ಎಂದರೆ ದೊಡ್ಡಮನೆಯೇ… ಮಕ್ಕಳು ಮರಿ… ಬಸಿರು ಬಾಣಂತನಗಳು ಇದ್ದೇ ಇರುತ್ತಿದ್ದವು. ದೊಡ್ಡ ವಹಿವಾಟಿನ ದೊಡ್ಡಮನೆ ಅದು… ಸದಾಕಾಲವೂ ಆರದೇ ಇರುತ್ತಿದ್ದ ಅಡಿಗೆ ಒಲೆಗಳು, ಗುಡಾಣದಂತ ಹಂಡೆಯಲ್ಲಿ ಯಾವಾಗಲೂ ತುಂಬಿರುತ್ತಿದ್ದ ಗಣಗಣ ಕಾಯ್ದು ಮಳ್ಳುವ ಬಿಸಿನೀರು… ಬಚ್ಚಲು ಮನೆಯ ತೊಟ್ಟಿಯಲ್ಲಿ ನೀರು ಖಾಲಿಯಾಗುವಂತಿಲ್ಲ… ಹೆಣ್ಣಾಳುಗಳು… ಅಮ್ಮ… ಆಗಾಗ ಚಿಕ್ಕಮ್ಮ ಹಿತ್ತಲಿಲ್ಲದ್ದ ಬಾವಿಯಿಂದ ಆಗಾಗ ನೀರು ಸೇದಿ ಸೇದಿ ತುಂಬುತ್ತಿದ್ದರು… ಇಂತಹ ಮನೆ ಆ ದೊಡ್ಡಮನೆ’… ಇಂತಹ ವಹಿವಾಟನ್ನು ನೋಡಿಕೊಳ್ಳಲು ಅಣ್ಣತಮ್ಮಂದಿರು ಹಗಲಿರುಳೂ ದುಡಿಯುತ್ತಿದ್ದರು. ಆದರೆ ಅಪ್ಪಾಜಿಯವರು ಸರ್ಕಾರಿ ಕೆಲಸವನ್ನೂ ಮಾಡಬೇಕಾಗಿತ್ತು ಹಾಗೂ ವ್ಯಾಪಾರದಲ್ಲೂ ಭಾಗಿಯಾಗಬೇಕಾಗಿದ್ದ ಅನಿವಾರ್ಯತೇ ಇತ್ತು.

ನನ್ನ ಚಿಕ್ಕಪ್ಪ… ಮನೆಯ ಮುಂದಲ ವ್ಯಾಪಾರವನ್ನು ನೋಡಿಕೊಳ್ಳುತ್ತಿದ್ದರು…. ನನ್ನ ಅಪ್ಪಾಜಿ… ಸುತ್ತಲ ಹಳ್ಳಿಗಳ ಹಗಲು ರಾತ್ರಿ ಎನ್ನದೆ ಸುತ್ತಾಡಿ ಕಣ… ಅಲೆ ಮನೆಗಳು… ಕುರಿಕೊಪ್ಪಳಗಳನ್ನು ಎಡತಾಗಿ… ಎಲ್ಲಿ ಏನೇನು ಸಿಗುತ್ತದೊ… ಅದೆಲ್ಲವನ್ನೂ ಕೊಂಡು ತರುವ ಕಾಯಕ… ವ್ಯವಸಾಯ ಮುಗಿದು ʻಕಣಗಾಲ’ ಬಂತೆಂದರೆ ಸಾಕು ಅಪ್ಪಾಜಿಗೆ ನಿದ್ದೆಯಿಲ್ಲದ ಬದುಕು… ಎಷ್ಟೋ ಬಾರಿ ಕಣದ ಬಳಿಯೋ… ಅಪರಿಚಿತರ ಮನೆಗಳ ಜಗಲಿಗಳ ಮೇಲೋ ಜೂಗಡಿಸಿ ದಿನಸಿ ಅಳೆಸಿ ಸರಿ ರಾತ್ರಿಗಳಲ್ಲಿ ಆ ಹಳ್ಳಿದಾರಿಗಳಲ್ಲಿ ಎತ್ತಿನಗಾಡಿಯ ಮೇಲೆ ಕುಳಿತೋ ಅಥವಾ ಕಾಲುನಡಿಗೆಯಲ್ಲಿ ನಡೆದೋ ಹೈರಾಣಾಗಿ ಮನೆಗೆ ತಲುಪುತ್ತಿದ್ದರಂತೆ… ಅಮ್ಮ ಆಗ ಅಪ್ಪಾಜಿಗೆ ಹಾಗೂ ಅವರ ಜೊತೆ ಬಂದಂತ ಆಳೂಕಾಳುಗಳಿಗೆ ಅಡುಗೆ ಮಾಡಿ ಬಡಿಸಬೇಕಾಗಿತ್ತಂತೆ… ಹೀಗೆ ಅಪ್ಪಾಜಿ ಹಳ್ಳಿಗಳ ಅಲೆದಾಡಿ ತಂದ ದವಸ ಧಾನ್ಯಗಳನ್ನು… ಕುರಿ ಭಂಡಾರ… ಎಣ್ಣೆಕಾಳುಗಳು… ಬೆಲ್ಲ ಇವೆಲ್ಲವನ್ನು ಶೇಖರಣೆ ಮಾಡಿದ್ದನ್ನು ಬೆಂಗಳೂರು-ತುಮಕೂರಿನ ಮಂಡಿಗಳು ಹಾಗೂ ವಾಣಿಅಂಬಾಣಿ… ಕೊಯಮತ್ತೂರು… ಸೊಲ್ಲಾಪುರ ಈ ಎಲ್ಲಾ ಕಡೆಗೂ ಮಾರಾಟ ಮಾಡುತ್ತಿದ್ದ ಜವಾಬ್ದಾರಿ ದೊಡ್ಡಪ್ಪಾಜಿಯವರದು… ಇಂತಹ ವಹಿವಾಟಿನ ಈ ದೊಡ್ಡಮನೆಯಲ್ಲಿ ಖಾಲಿಯಾದ ಗೋಣಿಚೀಲಗಳೇ ಸಾವಿರಾರು ತುಂಬಿರುತ್ತಿದ್ದವು… ಹೀಗೆ ಖಾಲಿಯಾದ ಗೋಣಿಚೀಲಗಳನ್ನು ಕೊಳ್ಳಲು ಮಲಬಾರ್ ಕಡೆಯಿಂದ ಮಾಪಿಳ್ಳೆಗಳು ಬರುತ್ತಿದ್ದರಂತೆ… ನಾನು ಸಹ ಬಾಲ್ಯದಲ್ಲಿ ಆ ಮಾಪಿಳ್ಳೆಗಳನ್ನು ಕಂಡಿದ್ದೇ ಕಣ್ರೀ…

ಇಂತಹ ವಹಿವಾಟಿನ ಮನೆಯಿಂದ ಅಪ್ಪಾಜಿಯ ಕುಟುಂಬ ಹೊರಬರಬೇಕಾಯಿತು. ಅಪ್ಪ ಕಟ್ಟಿದ್ದ ಆ ದೊಡ್ಡ ಮನೆಯಿಂದ ತಾತ, ಮುತ್ತಾತಂದಿರು ಬಾಳು ಬದುಕಿನ ಹಳೆಯ ಮನೆಯಲ್ಲಿ ಅಪ್ಪ ತಮ್ಮ ಹೊಸ ಬದುಕು ಪ್ರಾರಂಭಿಸಿದರು…

ಸೋರುತಿಹುದು ಮನೆಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲ
ಕಾಲ ಕತ್ತಲೆ ಒಳಗೆ ನಾನು
ಮೇಲಕೇರಿ ಹೋಗಲಾರೆ
ಮುರುಕು ತೊಲೆಯ ಹುಳುಕು ಜಂತಿ
ಕೊರೆದು ಹರಿದು ಕೀಳುಸಡಿಲ
ಹರಕು ಚಪ್ಪರ ಜೇರುಗಿಂಡಿ
ಮೇಲಕೇರಿ ಮೆಟ್ಟಲಾರೆ

ಶರೀಪರ ಈ ತತ್ವಪದ ಭಾವಾರ್ಥ ಅದೇನೇ ಇರಲಿ… ಈ ಪದ ವಾಚ್ರ‍್ಥದಂತೆ ಆಯಿತು ಅಪ್ಪಾಜಿಯ ಬದುಕು…

ದೊಡ್ಡಮನೆಯಿಂದ ಹೊರಬಂದಾಗ… ಅಂತಹ ಅಗಾಧ ವಹಿವಾಟಿನ ಮನೆಯಿಂದ ಈಚೆ ಬಂದಾಗ ಅಪ್ಪಾಜಿ ಬರಿಗೈಗಾಗಿ ಹೊರಬರಬೇಕಾಯಿತು… ಅವರ ಬಳಿ ಇದ್ದದ್ದು… ಹಳೆಯ ಹರಕು ಮನೆ ಹಾಗೂ ಇಪ್ಪತ್ತೈದೂ… ಮೂವತ್ತೈದೂ ರೂಪಾಯಿ ಸಂಬಳ ಬರುವ ಪ್ರೈಮರಿ ಶಾಲಾ ಮೇಷ್ಟ್ರುಗಿರಿ ಹಾಗೂ ಮಡದಿ… ನಾವು ಐದು ಜನ ಪುಡಿ ಮಕ್ಕಳು.

ತತಾನು ತೂತಿನ ಕೈ ಹೆಂಚಿನ ಮನೆ
ಬರಿದಾದ ಖಾಲಿ ಕೈ
ಸೋತು ಬಸವಳಿದ ಚಿತ್ತ
ದಿಕ್ಕು ತೋರದ ದಿಗ್ಭ್ರಾಂಸ್ಥಿತಿ
ಮುರುಕು ತೊಲೆಯು
ಹುಳುಕು ಜಂತಿ
ಕೊರೆದು ಸರಿದು
ಕೀಲು ಸಡಿಲ
ಹರಕು ಚಪ್ಪರ
ಜೇರುಗಿಂಡಿ
ಮೇಲಕೇರಿ ಮೆಟ್ಟಲಾರೆ…

ಅಪ್ಪಾಜಿಗೆ ಸರ್ಕಾರಿ ನೌಕರಿ ಇದೆಯೆಂದು ಹೇಳಿ… ʻಭಾಗ’ ಸರಿಯಾಗಿ ಆಗಲಿಲ್ಲ… ʻಹಿಸ್ಸೆ’ ಕ್ರಮಬದ್ಧವಾಗಿ ನಡೆಯಲಿಲ್ಲ… ಅಪ್ಪಾಜಿ ಬರಬೇಕಾದ ಸಮಪಾಲು ಸಿಗಲಿಲ್ಲವಂತೆ’… ಅಪ್ಪಾಜಿಯೂ ಆ ಸಮಯದಲ್ಲಿ ಎಚ್ಚರ ತಪ್ಪಿಬಿಟ್ಟರು… ವಯಸ್ಸು… ಹುಮ್ಮಸ್ಸು… ಹಠ… ಅವರಿವರ ಮಾತುಗಳು… ಅಪ್ಪಾಜಿಯ ಕಣ್ಣು ಮುಚ್ಚಿಸಿ ಬಿಟ್ಟವು… ಹೊರಬಂದ ಮೇಲೆ ʻಇದರಪ್ಪನಂತೆ ಬದುಕೇನು’ ಎಂಬ ಹುಚ್ಚು… ಮದ… ಎಣೆಯಿಲ್ಲದ ಸಾಹಸ ಅಪ್ಪಾಜಿಯನ್ನು ದಿಕ್ಕು ತಪ್ಪಿಸಿರಬೇಕು… ದೊಡ್ಡಮನೆಯಿಂದ ಹೊರಬಂದಾಗ ಅಪ್ಪಾಜಿ… ಏನೇನೋ ವ್ಯವಹಾರಗಳನ್ನು ಮಾಡಿದರು. ಸೌಧ ಕಟ್ಟಲು ನಾನಾ ಅವತರಾಗಳನ್ನೆತ್ತಿದ್ದರು… ಯಾವುದೂ ಕೈಯೆತ್ತಲಿಲ್ಲ… ಸೌಧ ಕಟ್ಟಿತ್ತೇನೆಂದು ಹೊರಬಂದವರು ಸೋತು ಸೋತು ಸೋತು ಸುಣ್ಣವಾದರು…ಮೇಲಕೇರಿ ಮೆಟ್ಟಲಾರದೇ ಹೋದರು…’

ತಾನೇ… ಅ ಆ ಇ ಈ ಕಲಿಸಿದ… ತಾನೇ ಪಾಠ ಮಾಡಿದ… ತಾನೇ… ಜೀವನ ಮಾರ್ಗ ತೋರಿದ… ಶಿಷ್ಯನ ಅಂಗಡಿಯಿಂದ ತಂದ ಸಾಲ ತೀರಿಸಲಾರದೆ ಕಣ್ಣು ತಪ್ಪಿಸಿ ಓಡಿಯಾಡುವ ಸ್ಥಿತಿ ಬಂತು. ʻಕೊಟ್ಟ ಕಾಸ ವಾಪಸ್ ಕೋಡಕ್ಕೆ ಯೋಗ್ಯತೆ ಇಲ್ಲ ಅಂದ್ಮೇಲೆ ಯಾಕಯ್ಯ ಸಾಲು ಮಾಡ್ದೆ… ನನ್ನ ದುಡ್ಡ ಹೆಂಗ ತಗೋಬೇಕೋ ನಂಗೆ ಗೊತ್ತು… ನಿನ್ನ ಊರಮಂದ್ಲ ಕಂಬಕ್ಕೆ ಕಟ್ಟಿ… ಕಾಸ ವಸೂಲ್ ಮಾಡ್ತೀನಿ… ಬಿಡೋದಿಲ್ಲ’… ದಾಯಾದಿಗಳು ಹೇಳಿಕೊಟ್ಟ ಮಾತನ್ನು ಆ ಶಿಷ್ಯ ಹಾಡಿದ್ದ ತನ್ನ ಶಿಷ್ಯರಿಂದಲೇ ಇಂತ ಮಾತನ್ನು ಕೇಳಬೇಕಾದ ಗತಿ ಬಂತು… ಅಪ್ಪಾಜಿಗೆ.

ಹರಕು ಚಪ್ಪರ
ಜೀರುಗಿಂಡಿ
ಮೇಲಕೇರಿ ಮೆಟ್ಟಲಾರೆ

ಅಪ್ಪಾಜಿ… ಜಗ ಕಾಣದ ಅಮ್ಮ… ಆಗ ತಾನೇ ಕಣ್ಣು ತೆರೆಯುತ್ತಿದ್ದ ನಾವು ಬೊಮಟೆಗಳು… ಅನುಭವಿಸಿದ ಅಪಮಾನ… ಅವಮಾನಗಳು ಒಂದೆರಡಲ್ಲ… ಬಿರುನುಡಿಗಳ ಬಾಣ ಎದೆಯ ಸೀಳುತ್ತಲೇ ಇತ್ತು…

ʻಯಾನ’ ದಿಕ್ಕು ತಪ್ಪಿತ್ತು
ʻನಾವೆ’ ಛಿದ್ರವಾಗಿತ್ತು ನಾವಿಕ’
ಸೊರಗಿಹೋಗಿದ್ದ… ಸೋತು ಹೋಗಿದ್ದ

ಅಪ್ಪಾಜಿ ಜರ್ಜರಿತವಾಗಿ ಹೋಗಿದ್ದರು… ಮೇಲೇಳಲಾರದ ಸ್ಥಿತಿ ತಲುಪಿದ್ದರು… ಅಪ್ಪಾಜಿಯ ನೌಕರಿ ಆಸರೆಯಾಗಿತ್ತು… ಆದರೂ ಅಲ್ಲಿಯೂ ನೂರೆಂಟು ಕಂಟಕಗಳು ಬರುವ ಸಂಬಳವೂ ಚಲ್ಲಾಪಿಲ್ಲಿ… ಅಪ್ಪಾಜಿ ಮಾಡಿಬರುತ್ತಿದ್ದ ಸಾಲಗಳಿಗೆ… ಸಾಕಾಗುತ್ತಿರಲಿಲ್ಲ ಆ ಹಣ. ಅಪ್ಪಾಜಿಯ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗುತ್ತಲೇ ಇದ್ದವು… ಮಾನಸಿಕವಾಗಿ ಸೋತು ಹೋದರು… ಆ ಹೊಡೆತ ಅವರನ್ನು ದಿಗ್ಭ್ರಾಂತಗೊಳಿಸಿತು. ಇದೆಲ್ಲವೂ ಅಪ್ಪಾಜಿಯ ದೇಹದ ಮೇಲೂ… ಮನದ ಮೇಲೂ ಪರಿಣಾಮ ಬೇರಿತು… ಕೊನೆ ಕೊನೆಗೆ ತಮ್ಮ ಹಾರಾಟ ತೋರಾಟಗಳನ್ನೆಲ್ಲ ತೊರೆದು ಸುಮ್ಮನಾಗಿಬಿಟ್ಟರು. ಮೂಲೆ ಸೇರಿದರು.

ಅಮ್ಮ… ಸೂತ್ರ ಹಿಡಿದಳು…

ಅಮ್ಮ… ಸೂತ್ರ ಕಿತ್ತ ಗಾಳಿಪಟವನ್ನು ಸರಿದಾರಿಗೆ ತರಲು ಸಾಹಸಗೈದಳು…

ಅಮ್ಮ… ಪರಿತಾಪದ ಬಾಳನೌಕೆಯ ಬಿರುಕು ಮುಚ್ಚಲು ಪರಿಪಾಟಲು ಬಿದ್ದಳು…

ಎಲ್ಲ ಸಂಕಟಗಳನ್ನು… ಎಲ್ಲಾ ಅಪಮಾನಗಳನ್ನು… ಎಲ್ಲಾ ಅವಮಾನಗಳನ್ನು… ಎಲ್ಲ ರೀತಿಯ ನೋವುಗಳನ್ನು ಕಷ್ಟಗಳನ್ನು… ದುಃಖಗಳನ್ನೂ ಸಹಿಸಿದವರು ನಾವು… ದರ‍್ಗಮವಾದ ಹಾದಿಯಲ್ಲಿ ಬೆಳಕನರಸುತ್ತಾ ಹೊರಟವರು ನಾವು… ಬರುವೆಲ್ಲ ಬಿರುಗಾಳಿಗೆ ತತ್ತರಿಸುವ ಬುಡ್ಡಿ ದೀಪ ಹಿಡಿದು ಮಸೂಗತ್ತಲೆಯಲ್ಲಿ ಹೆಜ್ಜೆ ಹಾಕಿದವರು… ಒಮ್ಮೊಮ್ಮೆ ಬೆಳಕೂ ತೋರದೆ ಮಬ್ಬಾದವರು… ಕವಿದ ಕತ್ತಲೆಯೊಳಗೆ ಕನಸು ಕಂಡವರು ನಾವು…

ಅಮ್ಮನ ಮಡಿಲ ಒಳಗೆ ಅದೆಂತ ಬೆಳಕು…

ಅಪ್ಪ… ಬಟಾಬಯಲಿಗೆ ಸೂಟೆ ಹಿಡಿದವರು
ಅಮ್ಮ… ಮಟ್ಟಗತ್ತಲೆಯಲ್ಲಿ ಹಣತೆ ಹಚ್ಚಿಟ್ಟವರು

ಆ ಎಲ್ಲಾ ಅನುಭವಗಳು ನನ್ನದಾಗಿತ್ತು… ಆ ಎಲ್ಲಾ ದಾರಿಗಳನ್ನೂ ಸಾಗಿ ಬಂದವನು… ನಾನು… ಬಾಳ ಪಯಣದ ಎಲ್ಲಾ ಏರಿಳಿತಗಳನ್ನು ಅವಸ್ಥಾಂತರಗಳನ್ನು ಕಂಡವನು… ಹಾಗಾಗಿ ನನ್ನ ಮದುವೆಯ ಜವಾಬ್ದಾರಿಯನ್ನು ನಾನೇ ಹೊರಬೇಕಾಯಿತು… ಅಮ್ಮ ನನ್ನ ಜೊತೆಗಿದ್ದರು.

ಇಷ್ಟಾದರೂ ನಾನೂ ಸಹ ಹಣದ ವಿಷಯದಲ್ಲಿ ಲೆಕ್ಕಾಚಾರ ತಪ್ಪಿದವನೇ…

ನನ್ನ ಮದುವೆಗೆಂದು ಹಣ ಕೂಡಿಡಲಿಲ್ಲ… ಸಾಲಗಳ ಮೊರೆಹೋದೆ… ದುಡ್ಡು ಬೇಕಾಗಿತ್ತಲ್ಲ… ಎಲ್ಲಾದರೂ ಹೊಂಚಲೇ ಬೇಕಲ್ಲ…

ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಗಿ ಬಿದ್ದವರ ತುಳಿಯುತ್ತಲಿತ್ತು….

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

October 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: