ಮಹಾಮನೆ ಅಂಕಣ – ಈ ಬಿಸಿನೀರಿನ ಆತಿಥ್ಯದಿಂದ ನನ್ನ ಪಾರು ಮಾಡೋ ಭಗವಂತಾ!!!

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

27

ಹಸೆಮಣೆಯಲ್ಲಿ ಕೂತ ನಾವು ಹಿರಿಯರು ಹಾಗೂ ಪುರೋಹಿತರ ಕೈಗೊಂಬೆಗಳಾದೆವು… ನನ್ನ ಅಪ್ಪ ಅಮ್ಮರು ಒಂದು ಮಗ್ಗಲಿನಲ್ಲಿ… ವಧುವಿನ ತಂದೆ ತಾಯಿಗಳು ಮತ್ತೊಂದು ಮಗ್ಗಲಿನಲ್ಲಿ ಕುಳಿತರು… ಮದುವೆ ಅಂದ ಮೇಲೆ ಕೆಲವು ಸಾಂಪ್ರದಾಯಗಳು… ಕೆಲವು ಆಚರಣೆಗಳು ಇದ್ದೇ ಇರುತ್ತವೆ. ಈ ಆಚರಣೆಗಳು ಜಾತಿಯಿಂದ ಜಾತಿಗೆ… ಪಂಗಡದಿಂದ ಪಂಗಡಕ್ಕೆ ಬೇರೆ ಬೇರೆಯಾಗಿದ್ದು ವಿಭಿನ್ನವಾಗಿರುತ್ತವೆ… ಒಂದೇ ಜಾತಿಯಲ್ಲಾಗುವ ಮದುವೆಗಳಲ್ಲೂ ಪ್ರದೇಶದಿಂದ ಪ್ರದೇಶಕ್ಕೆ ಆಚರಣೆಗಳು… ಶಾಸ್ತ್ರಗಳು ಭಿನ್ನ ಭಿನ್ನವಾಗಿರುತ್ತವೆ.

ನಮ್ಮ ಮದುವೆಯಲ್ಲಿಯೂ ಹಾಗೆ ಆಯಿತು… ತುಸು ವ್ಯತ್ಯಾಸಗಳು ಇದ್ದೇ ಇದ್ದವು… ನನ್ನದು ನಾಗಮಂಗಲ ಕಡೆಯ ವೀರಶೈವ ಲಿಂಗಾಯತ ಶೆಟ್ಟರ ಮನಗಳ ಮದುವೆಯ ರೀತಿ ರಿವಾಜುಗಳಾದರೆ ಗಂಗಳ ಮನೆಯ ಕಡೆಯದು ನೆಲಮಂಗಲ ಸುತ್ತಲಿನ ವೀರಶೈವ ಲಿಂಗಾಯತ ಜಂಗಮರ ಮನೆಗಳ ಮದುವೆಯ ರೀತಿ ರಿವಾಜುಗಳು… ನಮ್ಮ ಕಡೆಯ ಶಾಸ್ತ್ರಗಳಲ್ಲಿ ಎಕ್ಸ್ಪರ್ಟ್ ಆದ ನನ್ನ ಚಿಕ್ಕಮ್ಮ ಅಂದರೆ ಎಡತೊರೆಯ ರತ್ನಕ್ಕಯ್ಯನವರು ಮದುವೆಯ ಶಾಸ್ತ್ರ ಆಚರಣೆಗಳನ್ನು ಚೆನ್ನಾಗಿ ಬಲ್ಲವರು… ಹೆಣ್ಣಿನ ಕಡೆಯ ಎಕ್ಸ್ಪರ್ಟ್ ಎಂದರೆ ಮಂಗಳಕ್ಕಯ್ಯನವರು… ಇಬ್ಬರು ಮುತ್ತೈದೆಯರು ದೊಡ್ಡ ವೀಳ್ಯದ ಶಾಸ್ತ್ರದ ಪ್ರಾರಂಭಿಕ ರೀತಿ ರಿವಾಜುಗಳಿಗೆ ಸಲಹೆ ಕೊಡುತ್ತಾ ಹೋದರು.

ಎರಡು ಕುಟುಂಬಗಳ ನಡುವಿನ ಹೊಂದಾಣಿಕೆಗಳು ಮದುವೆ ಮನೆಯಲ್ಲಿಯೇ…. ಮದುವೆ ಶಾಸ್ತ್ರಗಳು ಆಚರಣೆಗಳ ಸಂದರ್ಭಗಳಲ್ಲಿಯೇ ಆಗಲು ಪ್ರಾರಂಭಿಸುತ್ತದೆ. ಆ ಶಾಸ್ತ್ರ ಹಾಗೆ… ಈ ಶಾಸ್ತ್ರ ಹೀಗೆ… ಅಲ್ಲ ಅಲ್ಲ… ಈ ಶಾಸ್ತ್ರವನ್ನು ಹೀಗೇ ಮಾಡಬೇಕು… ಹೌದಾ… ನಮ್ಮ ಕಡೆ ಈ ರೀತಿ ಮಾಡುತ್ತೇವೆ… ಇಲ್ಲ ಇಲ್ಲ ನಾವು ಹೆಣ್ಣನ್ನು ಕೊಡುವವರು ಆದ್ದರಿಂದ ಹೆಣ್ಣಿನ ಮನೆಯ ಶಾಸ್ತ್ರ ಪದ್ಧತಿಯಂತೆಯೇ ಈ ಶಾಸ್ತç ನಡೆಯಬೇಕು. ಹೂಂ ಹಾಗೆ ಮಾಡಿ… ಹೀಗೆ ಶಾಸ್ತ್ರಗಳ ಸರಪಣಿ ಆಚರಣೆಗಳು ಹೀಗೆ ಹೊಂದಾಣಿಕೆಯೊಂದಿಗೆ ಪ್ರಾರಂಭವಾಗುತ್ತವೆ ಕಣ್ರೀ… ಒಮ್ಮೊಮ್ಮೆ ಏನಾಗುತ್ತೆ ಗೊತ್ತಾ ನಿಮಗೆ… ಶಾಸ್ತ್ರ ಮಾಡಿಸುವ ಇಂತಹ ಹಿರಿಯ ಮುತ್ತೈದೆಯರಲ್ಲಿ ಹೊಂದಾಣಿಕೆ ಆಗದೆ. ವೈಯಕ್ತಿಕ ಸ್ವಾಭಿಮಾನಕ್ಕೆ ತಿರುಗಿ ಇಗೋಗಳು ಪ್ರಾರಂಭವಾಗಿ ಸ್ವಪ್ರತಿಷ್ಠೆಗಳು ಮೈದಾಳಿ… ಇರುಸು ಮುರುಸುಗಳಾಗಿ ಸಂತೋಷವಾಗಿ ಸೌಹಾರ್ದಯುತವಾಗಿ ಆಗಬೇಕಾಗಿರುವ ಮದುವೆಯ ಪ್ರಾರಂಭಿಕ ಶಾಸ್ತ್ರಗಳ ಆಚರಣೆಯಲ್ಲಿ ಭಿನ್ನಾಭಿಪ್ರಾಯಗಳು ತಲೆ ಹಾಕಿ ಸಣ್ಣ ಕಲಹವೂ ಆಗಿಬಿಡುವ ಸಾಧ್ಯತೆಗಳು ಇರುತ್ತವೆ… ಆಗ ಮತ್ತೆಷ್ಟು ಹೆಂಗಳೆಯರು ಮಧ್ಯಪ್ರವೇಶಿಸಿ ಆ ಸಂದರ್ಭವನ್ನು ಸರಿದಾರಿಗೆ ತರುವ ಪ್ರಸಂಗಗಳೂ ನಡೆದ್ದುಂಟು ಕಣ್ರಪ್ಪ… ನಾನೇ ಇಂತಹ ಕೆಲವು ಪ್ರಸಂಗಗಳನ್ನು ನೋಡಿದ್ದೇನೆ… ಅಂತಹ ಸಂದರ್ಭಗಳಲ್ಲಿ ಪಾಪ ಗಂಡು ಹೆಣ್ಣುಗಳು ಮೂಕ ಪ್ರೇಕ್ಷಕರಾಗಿ… ಒಮ್ಮೊಮ್ಮೆ ಬಲೀಪೀಠಕ್ಕೆ ಬಂದ ಬಕ್ರಗಳಾಗಿ ಕಣ್ಣು ಬಾಯಿ ಬಿಡುತ್ತ ಕುಳಿತಿರುವ ದೃಶ್ಯಗಳನ್ನು ಹಲವಾರು ಬಾರಿ ಕಂಡಿದ್ದೇವೆ.

ಮದುವೆ ಮನೆಯಲ್ಲಾಗುವ ಇಂತಹ ಇರಿಸು ಮುರಿಸುಗಳು ಗಂಡು ಹೆಣ್ಣುಗಳ ವೈವಾಹಿಕ ಜೀವನದ ಮೇಲೂ ಪರಿಣಾಮ ಬೀರಿರುವುದು ಉಂಟು. ಅವರ ಕೂಡು ಬದುಕನ್ನು ನಾಶ ಮಾಡಿರುವುದು ಉಂಟು. ಮದುವೆ ಮನೆಯಲ್ಲಾಗುವ ಸಣ್ಣ ಪುಟ್ಟ ಜಗಳಗಳು. ಇಂತಹದೇ ಸಂದರ್ಭಕ್ಕೆ ಕಾಯ್ದು ಇಲ್ಲದ ಕಿತಾಪತಿಗಳನ್ನು ತೆಗೆದು ಆ ಶುಭ ವಾತಾವರಣವನ್ನು ಹಾಳುಗೆಡುವುವ ಪ್ರಸಂಗಗಳು… ಇಲ್ಲದ ತರಲೆಗಳು ನಡೆದಿವೆ. ಮರಾಮಾರಿ ಮಾಡಿ ಕಾಡಿ ಎಬ್ಬಿಸಲೆಂದೆ ಬರುವ ನೆಂಟರುಗಳು… ಯಾವುದೇ ಹಳೆಯ ದ್ವೇಷಗಳನ್ನು ತೀರಿಸಿಕೊಳ್ಳಲು ಮದುವೆ ಸಂದರ್ಭಗಳನ್ನು ಆಯ್ಕೆ ಮಾಡಿಕೊಳ್ಳುವ ದಾಯಾದಿಗಳು ತರುವ ದಳ್ಳುರಿಗಳು… ಇಂತಹ ಅನೇಕ ಉದಾಹರಣೆಗಳು… ಪ್ರಸಂಗಗಳು ನನ್ನ ನೆನಪ ಬುತ್ತಿಯಲ್ಲಿವೆ ಕಣ್ರಪ್ಪಾ… ಮದುವೆ ಮನೆಯ ಜಗಳಗಳನ್ನೇ ಕುರಿತು ಯಾರಾದರೂ ಅಧ್ಯಯನ ಮಾಡುವವರು ಮಾಡಬಹುದು. ಅವು ಬಹಳ ರೋಚಕವಾಗಿಯೂ… ಬಹಳ ತಮಾಷೆಯಾಗಿಯೂ… ಕುಚೋದ್ಯವಾಗಿಯೂ… ಇರುತ್ತವೆ. ಆಮೇಲೆ ಮದುವೆ ಮನೆಗಳನ್ನೇ ನಮ್ಮ ಇಸ್ಪೀಟು ಅಡ್ಡ ಮಾಡಿಕೊಳ್ಳುವ ಗಂಡಸರು… ಕುಡಿದು ತೂರಾಡುವ ಮಹಾಶಯರು ಇರುತ್ತಾರೆ. ಇವರದೇ ಒಂದು ಪ್ರತ್ಯೇಕ ಗುಂಪೇ ಮದುವೆ ಮನೆಗಳಲ್ಲಿ ಝಾಂಡಾ ಊರಿರುತ್ತಾರೆ.

ಹಾಗಾಗಿ ಮದುವೆ ಮನೆಯ ಜಗಳಗಳು ಹಾಗೂ ಆಟಾಟೋಪಗಳು ಒಂದು ಸಾಮಾಜಿಕ ಸಾಂಸ್ಕೃತಿಕ ಅಧ್ಯಯನ’ ಎಂಬ ಮಹಾಪ್ರಬಂಧವನ್ನು ಯಾರಾದರೂ ಮಾಡಬಹುದು. ಪ್ರಯತ್ನಿಸಿರಪ್ಪಾ ಪಿಎಚ್.ಡಿ. ಮಾಡೋರಿಗೆ ಒಳ್ಳೆಯ ವಿಷಯ ಕಣ್ರೀ… ಹ್ಹಹ್ಹಹ್ಹಾ…

ಸಧ್ಯ ನಮ್ಮ ಮದುವೆಯಲ್ಲಿ ಅಂತಹದೇನೂ ನಡೆಯಲಿಲ್ಲ ಕಣ್ರಪ್ಪ… ರತ್ನಕ್ಕಯ್ಯನವರು ಹಾಗೂ ಮಂಗಳಮ್ಮನವರು ನೇತೃತ್ವದಲ್ಲಿ ಶಾಸ್ತçಗಳು ನಡೆಯುತ್ತಾ ಹೋದವು ಇಂತಹ ಅನೇಕ ಮದುವೆಗಳನ್ನು ಮಾಡಿಸಿದ್ದ… ಮದುವೆಗಳನ್ನು ಸುಗಮವಾಗಿ ಆಗು ಮಾಡುವುದರಲ್ಲಿ ಪಂಟರೂ ಆಗಿದ್ದ ಬೆಂಗಳೂರಿನ ಮಹಂತರ ಮಠದಿಂದ ಬಂದಿದ್ದ ಪುರೋಹಿತರು ದೊಡ್ಡವೀಳ್ಯದ ಶಾಸ್ತ್ರಗಳನ್ನು ಹೇಳುತ್ತಾ ಆ ಸಂದರ್ಭವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ನಡು ನಡುವೆ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ… ನಡು ನಡುವೆ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ ಅದ್ಯಾವುದ್ಯಾವುದೋ ನಮಗೆ ಗೊತ್ತಿರದ… ಅರ್ಥವಾಗದ ಮಂತ್ರಗಳನ್ನು ಪಠಿಸುತ್ತಾ ನಡುನಡುವೆ ಮಂಗಲವಾದ್ಯ… ಮಂಗಲವಾದ್ಯ’ ಎಂದು ಹೇಳುತ್ತಾ… ವಧುವರರಿಗೆ ಆಗು ವಧುವರರ ಮಾತಾಪಿತೃಗಳಿಗೆ ಅದು ಮಾಡಿ ಇದು ಮಾಡಿ ಎಂದು ಹೇಳುತ್ತಾ ಯಾವ ಯಾವುದೋ ಮಂತ್ರಗಳನ್ನು ನಮ್ಮಿಂದ ಹೇಳಿಸುತ್ತಾ… ನಡು ನಡುವೆ ಶಾಸ್ತ್ರಕ್ಕೆ ಬೇಕಾಗುವ ಮಂಗಳ ವಸ್ತುಗಳಿಗಾಗಿ ಬೇಡಿಕೆ ಇಡುತ್ತಾ ಅರಿಸಿನ… ಕುಂಕುಮ… ಫಲತಾಂಬೂಲ… ಕಳಸ… ವಸ್ತ್ರಗಳು… ವೀಳ್ಯ… ಅಕ್ಷತೆ… ಪನ್ನೀರು… ಕರ್ಪೂರ… ಹಣ್ಣು ಗಂಧದಕಡ್ಡಿ ಗಂದಾಧಿಗಳು ದೀಪ ಧೂಪಾದಿಗಳು ಹುರಿಗಡಲೆ ಬೆಲ್ಲ ಅಲಂಕರಿಸಿದ ಕೊಬರಿ ಓಹೋ ಒಂದಾ ಎರಡಾ… ಇಂತಹ ಅನೇಕ ಶುಭ ವಸ್ತುಗಳ ಪರಾತುಗಳನ್ನು ಮದುವೆ ಮಂಟಪದʼ ಹಸೆಮಣೆಯ ಮುಂದೆ ಹರಡಿಕೊಂಡು ಕೂತ ಪುರೋಹಿತರು ಸುಮ್ಮನೆ ಕೂರಲಿಲ್ಲ… `ನಿಮಗ್ಯಾರಿಗೂ ಸೋಬಾನ ಪದಗಳ ಹಾಡು ಹಾಡಕ್ಕೆ ಬರುತ್ತಾ ಇಂತಹ ಸಂದರ್ಭಗಳಲ್ಲಿ ಹಾಡಬೇಕಪ್ಪಾ ಮುತ್ತೈದೆಯರು ಹೂಂ ಹಾಡಿ ಹಾಡಿ…’’ ಎಂದು ಹಾಡಲು ಹೆಂಗಳೆಯರಿಗೆ ಹುರಿದುಂಬಿಸಿದರು… ಹೆಂಗಳೆಯರು ಮುಸಿ ಮುಸಿ ನಗಲು ಶುರು ಹಚ್ಚಿದರು.

ಚಿಕ್ಕಮ್ಮ ರತ್ನಕ್ಕಯ್ಯ : ಅಯ್ಯೋ ಪುರೋಹಿತರೆ… ಅದೆಲ್ಲಾ ಎಲ್ಲಿ ಹಾಡ್ತಾರೆ… ಅದೆಲ್ಲ ನಮ್ಮ ಕಾಲಕ್ಕೆ ಆಗೋಯ್ಯತು…
ಪುರೋಹಿತರು : ಹಂಗಂತಿರಾ… ನೀವ್ಯಾಡಿಲಿಲ್ಲ ಅಂದ್ರೇ ನಮ್ಮುಡಗನ ಕೈಯಲ್ಲಿ ಹಾಡಿಸುತ್ತೇನೆ ನೋಡಿ.
ಹೆಂಗಳೆಯರು : ಓಹೋ ನಮ್ಮ ಸ್ವಾಮಿ ಹಾಡ್ತನೆ ಬಿಡಿ.
ಪುರೋಹಿತರು : ಯಾಕ್ರೀ ಸರ್… ಒಂದು ಹಾಡು ನೀವೇ ಹಾಡೇ ಬಿಡ್ರೀ ನೋಡೋಪ್ಪಾ (ಪುರೋಹಿತರು ಒಂದು … ನನ್ನೆಡೆಗೆ ಸ್ಪಿನ್‌ನ್ನನು ಎಸದೇ ಬಿಟ್ಟರು)
ಮೆಳ್ಳಗಣ್ಣಿ : ನನ್ನತ್ತ ನೋಡಿ ನಗಲು ಪ್ರಾರಂಭಿಸಿದಳು… ಅವಳಿಗೆ ನನ್ನ ನಾದಿನಿಯರಾದ ರೇಣುಕಮ್ಮ… ಪ್ರೇಮ… ಮಂಗಳಮ್ಮ ಸಾಥ್ ಕೊಟ್ಟರು.
ಪುರೋಹಿತರು : ನೀವೇ ಯಾರಾದರೂ ಹಾಡಿ ಎಂದು ಮತ್ತೊಂದು ಗುಂಪಿನೆಡೆಗೆ ತಿರುಗಿದರು.
ಆ ಗುಂಪು… ತಮ್ಮ ತಮ್ಮಲ್ಲೇ ಮುಖ ನೋಡಿಕೊಂಡು ಸ್ವರ ತೆಗೆದೇ ಬಿಟ್ಟರು…
ಸೀರೆ ತರಲಿಲ್ಲ ಬೀಗರು ಶಿಸ್ತಾಗಿ ಬರಲಿಲ್ಲ
ಬೀಗರು ಶಿಸ್ತಾಗಿ ಬರಲಿಲ್ಲ
ಮತ್ಯಾರೋ ಮನೆಗೆ ಮಗಳ
ಕೊಡಬೇಕೆಂಬುದು ನಮಗೆ ಮನಸಿಲ್ಲ
ಕಂಕಣ ಬ್ರಹ್ಮ ಕಟ್ಟವನಲ್ಲಾ

ಕುಬುಸ ತರಲಿಲ್ಲ ಬೀಗರು ಖುಷಿಯಾಗಿ ಬರಲಿಲ್ಲ
ಬೀಗರು ಖುಷಿಯಾಗಿ ಬರಲಿಲ್ಲ
ಮತ್ಯಾರೋ ಮನೆಗೆ ಮಗಳ
ಕೊಡಬೇಕೆಂಬುದು ನಮಗೆ ಮನಸ್ಸಿಲ್ಲ
ಕಂಕಣ ಬ್ರಹ್ಮ ಕಟ್ಟವನಲ್ಲಾ

ವೀಳ್ಯ ತರಲಿಲ್ಲ ಬೀಗರು ಅಡಿಕೆಯ ಮರೆತರಲ್ಲ ಬೀಗರು ಖಡಕ್ಕಾಗಿ ಬರಲಿಲ್ಲ ಮತ್ಯಾರೋ ಮನೆಗೆ ಮಗಳ ಕೊಡಬೇಕೆಂಬುದು ನಮಗೆ ಮನಸ್ಸಲ್ಲಿ ಕಂಕಣ ಬ್ರಹ್ಮ ಕಟ್ಟವನಲ್ಲಾ

ಏನೂ ತರಲಿಲ್ಲ ಬೀಗರು ಅವರ ಧಿಮಾಕು ನೋಡಿರೆಲ್ಲಾ
ಅವರ ಧಿಮಾಕು ನೋಡಿರೆಲ್ಲ
ಮತ್ಯಾರೋ ಮನೆಗೆ ಮಗಳ
ಕೊಡೋ ಬೇಕೆಂಬುದು ನಮಗೆ ಮನಸ್ಸಲ್ಲಿ
ಕಂಕಣ ಬ್ರಹ್ಮ ಕಟ್ಟವನಲ್ಲಾ…

ಮೈದನಹಳ್ಳಿಯ ಅಂದರೆ ಗಂಗಳ ತಾಯಿಯ ತೌರುರಿನಿಂದ ಬಂದಮುದುಕಿಯರ ಸೋಬಾನೆ ಆರ್ಕೆಸ್ಟ್ರಾ’ ಶುರು ಆಗೋಯ್ತು ಅಂತೀನಿ. ಹಿಮ್ಮೇಳ ಮುಮ್ಮೇಳಗಳೊಂದಿಗೆ ಅವರು ಪದ ಹಾಡೇಬಿಟ್ರು… ಸ್ವಾಮಿ ಮದುವೆಯಲ್ಲಿ ಸೋಬಾನೆ ಸಾಂಗ್ ಸಾಂಗವಾಗಿ ನೆರವೇರಿತು… ಬೀಗರು ಬೀಗರು ಫಲ ತಾಂಬೂಲಗಳನ್ನು ಬದಲಾಯಿಸಿಕೊಂಡರು… ಪುರದ ಯಜಮಾನರುಗಳಿಗೆ ಪ್ರಥಮ ಫಲತಾಂಬೂಲಗಳನ್ನು ನೀಡಲಾಯಿತು… ಹೆಣ್ಣು ಗಂಡು ಕೂಡಿ ಬಾಳಲು… ವಧು ವರರ ಮದುವೆ ಮಾಡಲು… ಯಜಮಾನರುಗಳ ಅಪ್ಪಣೆ ಕೇಳಲಾಯಿತು ಬಂಧು ಬಳಗದ ಬಾಂಧವ್ಯ ಬೆಸೆಯಲು ಸಂಬಂಧಗಳ ಸರಪಳಿ ಬೆಳೆಯಲು ಎಲ್ಲರ ಸಮ್ಮುಖದಲ್ಲಿ ಶುಭ ಲಗ್ನವಾಗಿಸಲು ಅಕ್ಷತೆ ಹಾಕಿ ಶುಭ ಹಾರೈಸಿದರೆಂದರು. ದೊಡ್ಡಿಳ್ಳೆ ಶಾಸ್ತ್ರ (ದೊಡ್ಡ ವೀಳ್ಯದ ಶಾಸ್ತ್ರ ಇರಬಹುದು… ಆಡು ನುಡಿಯಲ್ಲಿ (ದೊಡ್ಡಿಳ್ಳೆ ಶಾಸ್ತ್ರ ಎಂದಾಗಿರಬೇಕು) ಎಲ್ಲಾ ವಿಧಿವಿಧಾನಗಳು ಮುಗಿದವು… ಕೊನೆಗೆ ಹುರಿಗಡಲೆ ಹಾಗೂ ಬೆಲ್ಲವನ್ನು ಎಲ್ಲರಿಗೂ ಹಂಚಲಾಯಿತು.

ಎಲ್ಲರೂ ಊಟದ ಮನೆಯ ಕಡೆಗೆ ಹೆಜ್ಜೆ ಹಾಕಿದರು… ಊಟ ಮುಗಿಸಿದ ನಂತರ ಮತ್ತೆ ಶಾಸ್ತçಗಳು ಪ್ರಾರಂಭವಾದೆವು… ಅರಿಸನೆಣ್ಣೆ ಶಾಸ್ತç… ಬಳೆ ತೊಡಿಸುವ ಶಾಸ್ತ್ರ, ಭತ್ತ ಕುಟ್ಟುವ ಶಾಸ್ತ್ರ… ಆ ಪೂಜೆ ಈ ಪೂಜೆ ಏನೇನೂ ಪೂಜೆಗಳು ಕಣ್ರೀ… ಶಾಸ್ತ್ರಗಳು ಕಣ್ರಪ್ಪ.
ಹುಡುಗ-ಹುಡುಗಿಗೆ ಮೈಗೆಲ್ಲ ಅರಿಸಿನ ಬಳಿದು ಅರಳೆಣ್ಣೆ ಹಚ್ಚಿ ಕರ್ಪೂರ ಗಂಧಾದಿಗಳನ್ನು ಬೆರೆಸಿದ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಿಸುವುದು ಒಂದು ಶಾಸ್ತ್ರ.

ಅಲ್ರೀ… ಈ ಮೆಳ್ಳಗಣ್ಣಿ ಮನೆಯವರಿಗೂ – ಗಣಗಣ ಕಾಯ್ದ ಬಿಸಿನೀರಿಗೂ ಅದೇನೂ ಅವಿನಾವಭಾವ ಸಂಬಂಧ ಇರಬೇಕೊ ಏನೋ ಅಪ್ಪ…
ಮೊದಲ ಬಾರಿ ಆ ಮೆಳ್ಳಗಣ್ಣಿಯ ಮನೆಗೆ ಹೋದಾಗ ಕುಡಿಯಲೆಂದು ನನಗೆ ಗಣಗಣ ಕಾಯ್ದಿದ ಬಿಸಿನೀರು ಕೊಟ್ಟು ನೀರು ಕುಡಿಸಿದ್ರು…
ಇವತ್ತಿನ ಅರಿಸೆಣ್ಣೆ ಶಾಸ್ತ್ರದ ದಿನನೂ ಬಿಸಿನೀರಿನ ಆತಿಥ್ಯ ಮುಂದುವರೆಯಿತು ಕಣ್ರಪ್ಪಾ… ಯಪ್ಪಾ ಶಿವನೇ…
ಗಣಗಣ ಕಾಯ್ದ ಸುಡುಸುಡು ಬಿಸಿಬಿಸಿ ನೀರನ್ನು ನನ್ನ ತಲೆ ಮೇಲೆ ಸುರುದ್ರೆಲ್ರೀ ಆ ತಾಯ್ದರು…
ಅಯ್ಯೋ… ಆಹಾ…!
ಶಿವಪ್ಪಾ ಕಾಯೋ ತಂದೆ…!!
ಈ ಬೀಸಿನೀರನ ಆತಿಥ್ಯದಿಂದ ಪಾರು ಮಾಡೋ ಭಗವಂತಾ!!!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

December 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: