ಮಹಾಮನೆ ಅಂಕಣ – ಅಮ್ಮ… ಅದೊಂದು ಪ್ರೀತಿಯ ಕಡಲು… ತಂಪಿನ ತಂಬೆಲರು… ದಿವ್ಯಶಕ್ತಿಯ ಸ್ವರೂಪ

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

12

ಒಂದು ಭಾನುವಾರದ ದಿನ ಹೆಣ್ಣು ನೋಡಲು ನನ್ನ ತಂದೆ-ತಾಯಿ ಹಾಗೂ ಅಕ್ಕಂದಿರು, ಭಾವಂದಿರು ಎಲ್ಲರೂ ಹೆಣ್ಣಿನ ಮನೆಗೆ ಹೋಗುವುದೆಂತಲೂ ಮಾತಾಯಿತು. ಅದರಂತೆ ನನ್ನ ಅಪ್ಪಾಜಿ ಡಿ.ಎಸ್. ಬಸಟ್ಟಪ್ಪನವರು, ತಾಯಿ ಸಿ.ಆರ್. ಮಂಗಳಗೌರಮ್ಮನವರು, ನನ್ನ ನೆಲಮಂಗಲದ ಅಕ್ಕ ಡಿ.ಬಿ. ಸುಮಂಗಲಮ್ಮ ಹಾಗೂ ಬಾವಾಜಿ ರಾಜಶೇಖರ ಮೂರ್ತಿಗಳು, ಬಿಡದಿಯ ಅಕ್ಕ ಡಿ.ಬಿ. ವಿಜಯಾಂಬ ಹಾಗೂ ಆಕೆಯ ಪತಿ ನನ್ನ ಮೂರನೇ ಬಾವಾಜಿ ಮಲ್ಲಪ್ಪನವರು ಹಾಗೂ ನನ್ನ ಮೊದಲ ಅಕ್ಕ ಡಿ.ಬಿ. ಅನ್ನಪೂರ್ಣಮ್ಮ… ವರನಂಜುಂಡಪ್ಪನವರೂ ಹಾಗೂ ನಾನೂ ಇಷ್ಟು ಜನವು ಆ ಹುಡುಗಿಯ ಮನೆಗೆ ಹೋದೆವು.

ನನ್ನ ತಂದೆ-ತಾಯಿಗಳು ಎರಡು ದಿನ ಹಿಂದೆಯೇ ನಾಗಮಂಗಲದಿಂದ ಹೊರಟು ನನ್ನ ಶ್ರೀನಿವಾಸನಗರದ ಮನೆಗೆ ಬಂದಿದ್ದರು. ನನ್ನ ಅಪ್ಪಾಜಿಗೆ ಅದೇನು ಸಡಗರವೋ ನನ್ನ ಪಕ್ಕದ ಮನೆಯ ಗೆಳೆಯ ಮಾದವನ್… ಎದುರು ಮನೆಯ ಚನ್ನಮ್ಮನವರಿಗೆ, ಪಕ್ಕದ ಮನೆಯ ರಾಬಟ್೯, ಪೆಟ್ಟಿ ಅಂಗಡಿಯ ಚೆಲುವಣ್ಣನಿಗೆ, ಜನತಾದಶಿ೯ನಿಯ ಭಟ್ಟರಿಗೆ ಎಲ್ಲರಿಗೂ ನಮ್ಮುಡಗನಿಗೆ ಹುಡುಗಿ ನೋಡಲು ಬಂದಿದ್ದೇವೆ. ಅದೇ ನಮ್ಮ ದೊಡ್ಡ ಮಗನಿಗೆ ಮದುವೆ ಸೆಟ್ಟಾಗೋಗಿದೆ… ನಾಳೆ ಭಾನುವಾರ ಹುಡುಗಿ ಮನೆಗೆ ಹೋಗ್ತಾ ಇದೀವಿ… ಹಿಂಗೆಲ್ಲಾ ಹೇಳ್ಕೊಂಡು ಓಡಾಡಿದ್ರು… ಅವರು ಸ್ವಲ್ಪ ಹಾಗೆ… ನನ್ನ ಅಪ್ಪಾಜಿಯ ಸ್ವಭಾವವೇ ಹಾಗೇ… ಜೊತೆಗೆ ಇಂಗ್ಲಿಷ್ ಬೇರೆ.

ಅಮ್ಮನದು ಜವಾಬ್ದಾರಿಯ ನೆಡೆ. ಅದಾಗಲೇ ನಾಗಮಂಗಲಕ್ಕೆ ಆ ಬಾಲೆ ಬಂದಾಗಲೇ ಹುಡುಗಿಯನ್ನು ನೋಡಿದ್ದರೂ ಹುಡುಗಿಯ ಮನೆ… ಮನೆತನ… ತಂದೆ ತಾಯಿಯರು… ಅಕ್ಕತಂಗಿಯರು… ನೆಂಟರಿಷ್ಟರು… ಬಂಧು-ಬಳಗ ಎಲ್ಲವನ್ನು ಅವಲೋಕಿಸಿ ತಮ್ಮ ಚಿಕಿತ್ಸಕ ನೋಟದಿಂದ ಪರಿಶೀಲಿಸಿ… ಅಳೆದು ಸುರಿದು… ತೂಕ ಮಾಡಿ ತನ್ನ ಮಗನಿಗೆ ಈ ಹುಡುಗಿ ಅನುರೂಪಳೆ… ಮನೆಯ ಸೊಸೆಯಾಗಿ ಜವಾಬ್ದಾರಿ ನಿಭಾಯಿಸಳೆ… ಮನೆಯನ್ನು ಸರಿದೂಗಿಸಿಕೊಂಡು ಹೋಗುವ ಗುಣ ಇದೆಯೇ ಇಲ್ಲವೇ ಎಂದು ಸಕಲೇಟ್ ನ್ನು ಪರೀಕ್ಷಿಸಿ, ತಾನು ಸೊಸೆ ಮಾಡಿಕೊಳ್ಳುವ ಮನೆಗೆ ಬರುವ ಸೊಸೆ, ಆ ಹುಡುಗಿ ಹೇಗಿರಬೇಕು ಎಂಬುದನ್ನೆಲ್ಲ ನಿಧ೯ರಿಸುವ ಜವಾಬ್ದಾರಿಯೂ… ಸೂಕ್ಷ್ಮತೆಯೂ ನನ್ನಮ್ಮನದು.

ಎಲ್ಲ ತಾಯಂದಿರೂ… ಎಲ್ಲ ಅಮ್ಮಂದಿರೂ ಹಾಗೆಯೇ ಅಲ್ಲವೇ?

ಮನೆಯಲ್ಲಿ… ಕುಟುಂಬದಲ್ಲಿ ತಾಯಿ ಸ್ಥಾನ ಬಹಳ ಮುಖ್ಯ ಅಲ್ಲವೇ?…. ಮನೆಯನ್ನು ನಿಭಾಯಿಸುತ್ತಲೇ ಎಲ್ಲ ಹೋರೆ ಕೋರೆಗಳನ್ನು ಸರಿಪಡಿಸುತ್ತಾ… ಸಮತೂಕದಲ್ಲಿ ಕುಟುಂಬದ ನಾವೆಯನ್ನು ಎಡರು ತೊಡರುಗಳಿಲ್ಲದೆ… ಬರುವ ಯಾವುದೇ ಬಿರುಗಾಳಿಗೂ ಜಗ್ಗದೆ… ಬರಬಹುದಾದ ಅಲೆಗಳನ್ನು ತನ್ನ ಅನುಭವ ಹಾಗೂ ಬುದ್ಧಿವಂತಿಕೆಯಿಂದ ಪಕ್ಕಕ್ಕೆ ಸರಿಸಿ ಮುನ್ನಡೆಯುವವಳು ತಾಯಿಯೇ.

ಮನೆಯ ಸಂಪೂಣ೯ ಭಾರವನ್ನು ಹೊರುವವರು ಅಮ್ಮನೇ. ಗಂಡಾದವನು… ಗಂಡನಾದವನು…. ಹೊರಗಡೆಯಿಂದ ದುಡಿದು ಸಂಪಾದನೆ ಮಾಡಿ ತನ್ನ ಕುಟುಂಬದ ವ್ಯವಹಾರಿಕ ಜವಾಬ್ದಾರಿ ಹೊತ್ತರೆ ಹೆಣ್ಣಾದವಳು… ಹೆಂಡತಿಯಾದವಳು ಮನೆಯ ನಿವ೯ಹಣೆಯ ಜವಾಬ್ದಾರಿಯನ್ನು ಹೊರುತ್ತಾಳೆ…. ಮಕ್ಕಳ ಲಾಲನೆ-ಪಾಲನೆಯಿಂದ ಹಿಡಿದು ಅವರ ಮದುವೆ ಮುಂಜಿಯವರೆಗೂ ಅವಳದೆ ಮುಖ್ಯಪಾತ್ರ. ಹಾಗಾಗಿ ತನ್ನ ಮನೆಗೆ ಎಂಥ ಹೆಣ್ಣು ಬರಬೇಕು… ತನ್ನ ಮಕ್ಕಳಿಗೆ ಎಂಥಾ ಸಂಬಂಧದಿಂದ ಸಂಗಾತಿಗಳನ್ನು ತರಬೇಕು ಎಂಬ ಸೂಕ್ಷ್ಮ ಜ್ಞಾನ ತಾಯಿಯಾದವಳಿಗೆ ಸಾಮಾನ್ಯವಾಗಿ ಇರುತ್ತದೆ.

ಇದೊಂದು ಲೋಕಜ್ಞಾನ… ಇಂತಹ ವಿಷಯದಲ್ಲಿ ಹೆಣ್ಣು… ಯಜಮಾನಿ ಸೂಕ್ಷ್ಮಮತಿ. ಕೆಲವೊಂದು ಮನೆಗಳಲ್ಲಿ ಗಂಡಿನದೇ ಪಾರಪತ್ಯ ನಡೆದರೂ ಸಹ. ಹೆಂಡತಿಯಾದವಳು ಮದುವೆ ಮುಂಜಿಯಂತಹ… ಮನೆಯ ಶುಭಕಾಯ೯ಗಳಂತಹವನ್ನು ಬಹಳ ಜಾಣ್ಮೆಯಿಂದಲೇ ನಿವ೯ಹಿಸುತ್ತಾರೆ. ಏಕೆಂದರೆ ಕುಟುಂಬದ ಮುಂದಿನ ಭವಿಷ್ಯ ಹಾಗೂ ಮನೆತನದ ಹಿಂದಿನ ಗೌರವ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಮನೆಗೆ ಹೆಣ್ಣು ತರುವ ಅಥವಾ ಮಗಳಿಗೆ ಸಂಬಂಧ ಹುಡುಕುವ ಸಂಬಂಧಗಳಲ್ಲಿ ಬಹಳ ಎಚ್ಚರಿಕೆಯಿಂದಲೂ ಬಹಳ ಜವಾಬ್ದಾರಿಯಿಂದಲೂ ಬಹಳ ಸೂಕ್ಷ್ಮವಾಗಿಯೂ ನಿಧಾ೯ರಗಳನ್ನು ತೆಗೆದುಕೊಳ್ಳುತ್ತಾರೆ. ತಾಯಂದಿರು…

ನನ್ನ ಅಮ್ಮನೂ ಹಾಗೆಯೇ….

ಅಮ್ಮ ಪೊರೆಯುತ್ತಾಳೆ…
ಅಮ್ಮ ಸಲಹುತ್ತಾಳೆ…
ಅಮ್ಮ ಸಹಿಸುತ್ತಾಳೆ…
ಅಮ್ಮ… ಅದೊಂದು ಪ್ರೀತಿಯ ಕಡಲು…
ಅಮ್ಮ ಗಿರಿಶಿಖರ…
ಅಮ್ಮ ಅಪರ‍್ವ ಅಪರಂಜಿ….
ಅಮ್ಮ ಬೆಳದಿಂಗಳ ಹೊನಲು…
ಅಮ್ಮ… ಅದೊಂದು ತಂಪಿನ ತಂಬೆಲರು…
ಅಮ್ಮ ಹೊಂಗೆಯ ನೆಳಲು…
ಅಮ್ಮ ದಾರಿಯ ದೀಪ…
ಅಮ್ಮ ಒಲವಿನ ರೂಪ…
ಅಮ್ಮ ಅದೊಂದು ದಿವ್ಯಶಕ್ತಿಯ ಸ್ವರೂಪ…

ಅಮ್ಮ ಅಂದಕೂಡಲೇ ನನಗೆ ನೆನಪಾಗುವುದು ಲಂಕೇಶರ ಅವ್ವ… ದೇವನೋರು ಮಹದೇವರ ‘ಒಡಲಾಳದ ಸಾಕವ್ವ… ಮ್ಯಾಕ್ಸಿಂ ಗಾಕಿ೯ಯ ಮದರ್’. ಇಂತಹ ಅನೇಕ ಅಮ್ಮಂದಿರು ಹಾಗೂ ತಾಯಂದಿರು… ಕಣ್ರೀ

ಬದುಕಿಗಾಗಿ ಎಥೆಂತಹ ಹೋರಾಟ ಮಾಡುತ್ತಾರೆ…
ಕುಟುಂಬದ ಏಳ್ಗೆಗಾಗಿ ಅದ್ಹೇಗೆ ಬಡಿದಾಡುತ್ತಾರೆ…
ಮಕ್ಕಳಿಗಾಗಿ ಅದೆಷ್ಟು ಕುಕ್ಕಲಾತಿ ತೋರುತ್ತಾರೆ…
ಮನೆಯ ರ‍್ಯಾದೆಗಾಗಿ ಅದೇನೇನು ಸಹಿಸುತ್ತಾರೆ…
ಅಪಮಾನ… ಅವಮಾನ… ನೋವು-ಹಸಿವು…
ಸಂಕಟ… ಯಾತನೆ… ವೇಧನೆ… ಮೌನರೋಧನ
ಛಲ… ಎದೆಗಾರಿಕೆ… ಸಹಿಷ್ಣುತೆ

ದೂರದೃಷ್ಟಿ… ಸೂಕ್ಷ್ಮ ನೋಟ ಅಂದರೆ ಅದು ಅಮ್ಮ… ಅವ್ವ… ತಾಯಿ ಕಣ್ರೀ…

ನನ್ನಮ್ಮನೂ ಹಾಗೇ…. ಎಲ್ಲಾ ಕಹಿಯನ್ನು ಉಂಡವಳು… ಸಿಹಿಯನ್ನು ಹಂಚಿದವಳು… ಬಹಳ ಸೂಕ್ಷ್ಮಮತಿ… ಗಟ್ಟಿಗಿತ್ತಿ… ತುಂಬಿದ ಮನೆಯಲ್ಲಿ ಹುಟ್ಟಿದವಳು… ದೊಡ್ಡಮನೆ ಸೇರಿದವಳು… ದೊಡ್ಡ ದೊಡ್ಡ ಸವಾಲುಗಳನ್ನು ಎದುಸಿದಳು… ಅಪಾರ ಅಘಾತಗಳನ್ನು ಸಹಿಸಿದವಳು… ತುಸುವೇ ಸಿಹಿಯನ್ನೂ ಕಾಣದವಳು… ಮಕ್ಕಳ ಸುಂದರ ಬದುಕಿಗಾಗಿ ತನ್ನೊಳಗೆ ತಾನೇ ಸವೆದವಳು…

ಇಂತಹ ನನ್ನಮ್ಮ ತನ್ನ ಮನೆಗೆ ಎಂತಹ ಹೆಣ್ಣು ಬೇಕೆಂದು ನಿಧ೯ರಿಸದೇ ಇರುತ್ತಾಳಾ…? ತನ್ನ ಮಗನಿಗೆ ಯಾವ ರೀತಿಯ ಹುಡುಗಿ ಹೆಂಡತಿಯಾಗಿ ಬರಬೇಕು ಎಂದು ತಿಮಾ೯ನಿಸದೇ ಇರುತ್ತಾಳೆ…?

ಇಂತಹ ಸಂದಭ೯ದಲ್ಲೇ ಮನೆಯ ಯಜಮಾನ ಮನೆಯೊಡತಿಯ ನಧಾ೯ರವನ್ನು ಸ್ವಾಗತಿಸಬೇಕು. ಮನೆಗೆ ಸಂಬಂಧವನ್ನು ತರುವ ಸಂದಭ೯ದಲ್ಲಿ ತಲಸ್ಪಶಿ೯ಯಾಗಿ ಪರಿಶೀಲಿಸೇ ಇರುತ್ತಾಳೆ ಹೆಣ್ಣು… ಆಕೆಗೆೆ ಗೊತ್ತಿರುತ್ತೆ ತನ್ನ ಮನೆಗೆ ಎಂತಹ ಹುಡುಗಿಯನ್ನು ತರಬೇಕು… ತನ್ನ ಮನೆಯ ಮಗಳನ್ನು ಎಂತಹ ಮನೆಗೆ ಕೊಡಬೇಕು ಎಂಬುದು… ಸೊಸೆ ಹೇಗಿರಬೇಕು… ಅಳಿಯ ಎಂತವನಿರಬೇಕು ಎಂಬುದು ಮನೆಯ ಯಜಮಾನಿಗೆ ಗೊತ್ತಿರುತ್ತೆ.

ಗಂಡಸಾದವರು ಮನೆಯ ಯಜಮಾನಿಯ ಮಾತು ಕೇಳದೆ ತನ್ನ ಮಗಳನ್ನು ಮಾತಿಗೆ ಕಟ್ಟುಬಿದ್ದು ಸ್ನೇಹಿತನೆ ಮಗನಿಗೆ ಕೊಟ್ಟು ಮದುವೆ ಮಾಡಿದ… ಆ ನಂತರದ ಆ ಹುಡುಗಿಯ ಕಥೆಯ ತಮಗೇಳಿ ನಾನು ನನ್ನ ಕಥನಕ್ಕೆ ಬರುತ್ತೇನೆ… ಆಗಬಹುದಾ ಪ್ರೀತಿಯ ಓದುಗರೇ…

ಅವಳು ಚಿನ್ನದಂತವಳು…
ಬೆಳದಿಂಗಳ ಬಾಲೆಯಂತವಳು…
ದಂತದ ಬೊಂಬೆಯಂತವಳು…
ಚಂದ್ರಶಿಲೆಯಲ್ಲಿ ಕಡೆದಿಟ್ಟ ಶಿಲ್ಪದಂತಹವಳು…
ಆ ಹುಡುಗಿ ನೈದಿಲೆಯ ಬಣ್ಣದವಳು…
ಕಪ್ಪುವಜ್ರದ ಕಣ್ಣವಳು…
ನೀಳ ನಾಸಿಕದವಳು…
ಬೆಣ್ಣೆಯಂತಾ ಕೆನ್ನೆಯವಳು…
ಜೇನಿನಂತಾ ತುಟಿಯವಳು…
ತುಂತುರು ಹನಿಯಂತಾ ಕೇಶದವಳು…
ಅ ಹುಡುಗಿ ತುಂಬೆ ಹೂವಿನಂತವಳು…

ಅಂತಹ ಚೆಲುವಾದ ಮಗಳನ್ನು ನಮ್ಮೂರ ಮಹಾಶಯರೊಬ್ಬರು… ಹೆಂಡತಿ ಆ ಹುಡುಗನಿಗೆ ನಮ್ಮ ಮಗಳನ್ನು ಕೊಡುವುದು ಬೇಡ ಬೇಡವೆಂದರೂ… ಪರಿಪರಿಯಾಗಿ ಹೇಳಿದರೂ… ಕಾಡಿಬೇಡಿದರು… ಆತ ಏನೇ ನಾನು ಗಂಡ್ಸು ನನಗೆ ಎಲ್ಲಾ ಗೊತ್ತಿದೆ… ಈ ಮನೆ ಯಜಮಾನ ನಾನು… ಏನ್ಮಾಡ್ಬೇಕು ಏನ್ಮಾಡ್ ಬಾರ್ದು ಅನ್ನೋದು ನನಗೆ ಗೊತ್ತಿದೆ… ನಾನು ನನ್ನ ಮಗಳನ್ನು ನಿನ್ನ ಮಗನಿಗೇ ಕೊಡೋದು… ನಿನ್ನ ಮಗನೇ ನನ್ನ ಅಳಿಯ ಆಗ್ತಾನೆ… ಮಗಳನ್ನು ನಿನ್ನ ಮನೆಗೇ ಮದುವೆ ಮಾಡಿ ಕೊಡ್ತೀನಿ ಅಂತ ನನ್ನ ಸ್ನೇಹಿತನಿಗೆ ಮಾತ್ಕೊಟ್ಟು ಬಂದಿದ್ದೀನಿ… ತಿಳೀತಾ…’ ನೀನು ಬಾಯಿ ಮಚ್ಕೊಂಡು ಬಿದ್ದಿರು… ಮದ್ಯಕ್ಕೆ ಇರ‍್ಬೇಡ… ತಿಳೀತಾ… ಎಂದು ಹೆಂಡತಿಯ ಬಾಯಿ ಮುಚ್ಚಿಸಿ ತನ್ನ ದೂರದೂರಿನ ಸ್ನೇಹಿತನ ಮಗನಿಗೆ ಕೊಟ್ಟು ಮದುವೆ ಮಾಡೇ ಬಿಟ್ಟನು.

ಆ ಗಂಡೋ… ನರಪೇತಲ ನಾರಾಯಣ… ಅದಾವುದೋ ಪಾತಾಳದಲ್ಲಿ ಪಿಳಪಿಳನೇ ಕಾಣುವ ಕಾಣ್ಣುಗಳು… ಮುಖದ ಮೂಳೆಗಳಿಗೆ ಅಂಟಿಕೊಂಡಿದ್ದ ಅಪ್ಪಾಚ್ಚಿಯಾದ ಮೂಗು… ಗುಹೆ ಗೊರಟದೊಳಗೆ ಅಡಗಿಕೊಂಡಿರುವ ಬಾಯಿ… ಬಾಯಿಂದ ಹೊರಚಾಚಿದ್ದ ಬಾಚಿ ಹಲ್ಲುಗಳು… ಮುಖದ ಮೇಲೆ ಕೆನ್ನೆಗಲ್ಲಗಳು ಇದ್ದವೇ…? ತಿಳಿಯದು… ದಡ್ಡ ಶಿಖಾಮಣಿಯೂ ಎಣಿಸಬಹುದಾಗಿ ಎದ್ದು ಕಾಣುತ್ತಿದ್ದ ಎಲೆಬು ಮೂಳೆಗಳು… ಅಂಚಿಕಡ್ಡಿಯಂತಿದ್ದ ಕೈಗಳು… ಜೋಳದ ಕಡ್ಡಿಯಂತಿದ್ದ ಕಾಲ್ಗಳು… ಭತ್ತದ ಹುಲ್ಲಿನಂತಿದ್ದ ಕೂದಲು… ಹುಡುಗನಂತೆ ಕಾಣುವ ಪೀಚಲು ಪಿಡುಗ… ಅಂತಹವನು ಆ ಹುಡುಗ.

ಬಹುಶಃ ನನಗನ್ನಿಸುತ್ತೆ… ಎಲ್ಲೋ ಆ ಬಿರಮ್ಮಾ ತನ್ನ ಮಡದಿ ಸರಸೂ ಜೊತೆಗೆ ಜಗಳ ಮಾಡ್ಕೊಂಡು ಬಂದು ಕೂತಿದ್ದ ಅಂತಾ ಕಾಣತ್ತೇ… ಆ ಟೈಮಲ್ಲೇ ಈ ಹುಡುಗನ ಮಾತಾಪಿತೃಗಳು ಮಗನಿಗಾಗಿ ಬೇಡಿಕೆ ಇಟ್ಟಿದ್ದಾರೆ ಅನ್ನಿಸುತ್ತದೆ…

ಆ ಬೇಸರದ ಸಮಯದಲ್ಲೇ… ಆ ಕೋಪತಾಪದ ನಡುವೆ ಆ ಪಿಡುಗನನ್ನು ಬಿರಮ್ಮಾ ಸೃಷ್ಟಿಸಿದನೇನೋ ಅಂತ ಕಾಣುತ್ತೆ ಕಣ್ರೀ… ಹೋಗ್ರಿ ಆ ಹುಡುಗ ಎಂಗಾರ ಇರಲಿ… ಆತನಿಗೆ ಕೆಲಸನಾರ ಇತ್ತಾ… ದುಡಿದು ಹೆಂಡ್ತಿ ಮಕ್ಕಳನ್ನು ಸಾಕುತ್ತಾನೆ ಅಂದ್ರೆ… ಅದೂ ಇರಲಿಲ್ಲ. ಆ ಹುಡುಗಿ… ಆ ಬೊಂಬೆ ಹಿಡಿದ ಮಲ್ಲಿಗೆಯ ಮಾಲೆ ಇಂಥಾ ಪಿಡುಗನ ಕೊರಳಿಗೆ ಬಿತ್ತು. ಆ ಹುಡುಗಿ ಅನುಭವಿಸಿದ ಯಾತನೆ… ಅವಳು ಪಟ್ಟ ಕಷ್ಟಗಳು ನಾನಿಲ್ಲಿ ಹೇಳಲಾರೆ… ನಾನು ಯಾಕಿಲ್ಲಿ ಈ ಘಟನೆಯನ್ನು ಹೇಳಿದನೆಂದರೆ… ಗಂಡಸಾದವನು ಮನೆಯ ಯಜಮಾನಿಯ… ಹೆಂಡತಿಯ ಮಾತನ್ನು ಕೇಳಬೇಕು… ಕೇಳದಿದ್ದರೆ ಇಂತಹ ಎಡವಟ್ಟುಗಳು ಆಗುತ್ತವೆ ಎಂದು ಹೇಳಲು ಈ ಪ್ರಕರಣವನ್ನು ಹೇಳಿದ ಕಣ್ರಪ್ಪಾ… ಬನ್ನಿ ಬನ್ನಿ ನನ್ನಮಹಾಯಾನ’ದ ಕಡೆಗೆ ಹೋಗೋಣ…

ಅದೇ ಕಣ್ರಪ್ಪಾ…

ನನ್ನ `ಮೆಳ್ಳಗಣ್ಣಿ’ ಮನೆ ಕಡೆಗೆ…

ಮರೆತ್ಬಿಟ್ರಾ…?

ಅರೇ… ಅದೇರೀ… ನಾನು, ನನ್ನ ಪರಿವಾರವೆಲ್ಲಾ ಹೆಣ್ಣು ನೋಡಕ್ಕೆ ಅಂತ ಬಂದಿದ್ದಿವೆಲ್ಲಾ… ಆ ಹುಡುಗಿ… ಕುರುಬರ ಹಳ್ಳಿ… ಆದಿವಾಲ… ಹಿಂದೀ ಟೀಚರ್… ಆ ಮೆಳ್ಳಗಣ್ಣಿ…

|ಇನ್ನು ಮುಂದಿನ ವಾರಕ್ಕೆ|

‍ಲೇಖಕರು Admin

August 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: