ಪ್ರವರ ಕೊಟ್ಟೂರು
ಸಂಜೆಯಿಂದ ಯಾಕೋ ಮೋಡಗಟ್ಟಿದೆ
ಕಪ್ಪಿಟ್ಟಿದೆ ಆಕಾಶ, ಗಾಳಿಯ ನೂಕಾಟಕ್ಕೆ ಜೀಕು ಹೊಡೆಯುತ್ತಿರುವ
ದಟ್ಟ ಹೆರಳಂತೆ,
ಇನ್ನೇನು ಮಳೆ ಸುರಿಯಬಹುದು,
ಮಹಾನಗರಿ ಸದ್ಯ ಹೆಂಚಿನ ತದ್ರೂಪು
ಹಗಲಿಗೆ ಕಾಯುತ್ತದೆ,
ಒಂದಷ್ಟು ಜನ ಕಾಯಿಸುತ್ತಾರೆ,
ಇನ್ನೊಂದಷ್ಟು ಜನ ಅಂಗೈ ಚಾಚಿ ಕಾಯಿಸಿಕೊಳ್ಳುತ್ತಾರೆ
ಚಡ್ಡಿ ಕೆಳಕ್ಕುದುರಿಸಿ ಅಂಡು ತಿರುಗಿಸಿ ನಿಲ್ಲುತ್ತಾರೆ,
ಸುಟ್ಟುಕೊಂಡವರಿಗೆ
ಐಸ್ ಕ್ಯೂಬು ಧಾರಾಳವಾಗಿ ಸಿಕ್ಕುತ್ತದೆ,
ಯಾರಿಗೂ ಕಾಣದಂತೆ ಕರಗಿಸುತ್ತಾರೆ
ಅವಸರ ಇನ್ನೂ ರೋಡಿನ ಮೇಲೆ
ತರಹೇವಾರಿ ರೂಪದಲ್ಲಿದೆ,
ಕೂಸಿನ ಹಾಲು ಮೊಲೆಯಲ್ಲಿಟ್ಟುಕೊಂಡ ಹೆಂಗಸಿನ ರೂಪದಲ್ಲಿ,
ಕಾರಿನ ಕಿಡಕಿಯಿಂದ ಚಾಚಿದ ಕೈ ಸುಡುತ್ತಿರುವ
ಸಿಗರೇಟಿನ ಹಾಗೆ,
ಸಂಜೆ ಹೊತ್ತಿಗೆ ದಣಿದ ಟ್ರಾಫಿಕ್ಕು ಪೊಲೀಸಿನ ತೋಳುಗಳಂತೆ,
ಬತ್ತಿದ ಮೆಂತ್ಯಾ ಸೊಪ್ಪಿನ ಕಟ್ಟಿಗೆ ಚಿಮುಕಿಸಿದ ನೀರಂತೆ,
ಸೆರಗು ಜಾರುತ್ತಿರುವ ಮನೆಗಳಂತೆ
ಮಳೆಯ ನೆರಳಿಗೆ
ಎಷ್ಟೊಂದು ರೆಪ್ಪೆಗಳಿಲ್ಲದ ಕಣ್ಣುಗಳು,
ಮಿಣುಕಿಸುವ ಜರೂರತ್ತೇ ಇಲ್ಲ,
ಸುಮ್ಮನೇ ನೋಡುವುದು ಅಷ್ಟೆ
ಯಾಕೆ ಬೇಕು!
ಬೆಳಿಗ್ಗೆ ತಾನೆ ಇಸ್ತ್ರಿ ಮಾಡಿಸಿದ ಫಾರ್ಮಲ್ಸು
ಇನ್ನೊಂದು ದಿನ ಹಾಕಬಹುದು,
ಐದತ್ತು ರೂಪಾಯಿಗೆ ಇನ್ನೂ ಬೆಲೆ ಉಳಿದುಕೊಂಡಿದೆ
ಸುಕ್ಕು ಒಮ್ಮೊಮ್ಮೆ ತುಂಬಾ ನಾಜೂಕಿನಿಂದ ಕೆಲಸ ಮಾಡುತ್ತದೆ
ಕಂಕುಳಿನ, ಹಣೆಯ, ಎದೆಯ,
ಸಂದುಗೊಂದುಗಳ ಬೆವರಿಲ್ಲಿ ಬಲು ಸುಲಭಕ್ಕೆ
ಆವಿಯಾಗುತ್ತದೆ,
ಉಳಿದರೂ ಬರೀ ಉಪ್ಪು,
ಅದೇನೋ ಇಂಗುವುದಿಲ್ಲ ಮಳೆ
ಅಲ್ಲಿಂದ ಇಲ್ಲಿಗೆ ಹರಿಯುತ್ತದೆ,
ಸ್ಲಮ್ಮುಗಳನ್ನು ಬಹು ಬೇಗ ಪತ್ತೆಹಚ್ಚಿ ನುಗ್ಗಿಬಿಡುತ್ತದೆ,
ಅಡಗಿಸಿಟ್ಟ ಎಲ್ಲವನ್ನು ಹೊರಕ್ಕೆಳೆಯುತ್ತದೆ ಯೂನಿಫಾರ್ಮ್ ಉಟ್ಟ ಪೊಲೀಸಿನವರಂತೆ,
ತಳ ಒತ್ತಿದ ಪಾತ್ರೆಗಳು, ಪ್ಲಾಸ್ಟೀಕು ಡಬ್ಬಿ, ಮುರುಕಲು ಛೇರು,
ಒಂದು ಸಣ್ಣ ಕನ್ನಡಿ, ಬಾಚಣಿಕೆ, ಟಿಕ್ಕುಲಿ ಪ್ಯಾಕೇಟು, ಬೀಡಿ ಕಟ್ಟು,
ಎಣ್ಣೆ ಮೆತ್ತಿದ ತಲೆದಿಂಬು, ಹಾಸಿಗೆ ಹೊದಿಕೆ ಹಾಳು ಮೂಳು ಎಲ್ಲವೂ….
ಬಲು ಸುಲುಭಕ್ಕೆ ಮನೆ ಬೀದಿಗೆ ಬಂದುಬಿಡುತ್ತದೆ,
ಮೇಲೆ
ಕಟ್ಟಿಗೆಯ ಸಂದಿಗೆ ಸಿಕ್ಕಿಸಿದ ರೇಷನ್ ಕಾರ್ಡು, ಆಧಾರ್ ಕಾರ್ಡು, ಓಟರ್ಕಾರ್ಡು ಗಳೆಂಬ
ಮಿಡಲ್ ಕ್ಲಾಸು ಮಂದಿ ಕಣ್ಣಿಗೆ ವಿಲಾಸಿ ಬಾಗಿಲಿನ ಟಿಕೇಟುಗಳಂತೆ
ಕಾಣಿಸುವ ಇವು, ಸಧ್ಯ ನೀರಿನ ಕೈಯಿಗೆ, ಬಾಯಿಗೆ ಸಿಕ್ಕಿಕೊಂಡಿಲ್ಲ
ಗುಜರಾತಿಯವನ ಪಾನಿಪೂರಿ ಬಂಡಿಯ ಮುಂದೆ
ಜನರು ಕೊಡೆ ಹಿಡಿದೇ ನಿಂತಿದ್ದಾರೆ,
“ಭೈಯ ಏಕ್ ಪ್ಲೇಟ್ ಪಾನಿಪುರಿ ದೇ”
ಎಲ್ಲರದೂ ಒಂದೇ ಪ್ರಾರ್ಥನೆ,
ಅಂಗೈಯೊಳಗಿನ ಸಣ್ಣ ಪ್ಲೇಟಿನಲ್ಲಿ ನಾಲಿಗೆಯ ವಾಂಛೆ
ಪಾನಿಪುರಿ ರೂಪ ಧರಿಸಿ ಕುಳಿತಿದೆ,
ಖಾರ ಪುಡಿ ಉದುರಿಸಿದ
ಸೂಖಾಪುರಿ ಯ ಸಮಯ ಇನ್ನೇನು ಬಂದೇಬಿಟ್ಟಿದೆ,
ಸಭ್ಯ ವಿಟಪುರುಷರು ಸರಕುಗಳನ್ನು ಆಯ್ದುಕೊಳ್ಳುತ್ತಾರೆ
ತರಕಾರಿಗಳಂತೆ,
ಆವೂ ಕೂಡ ಮಾರ್ಕೇಟಿನಂತೆಯೇ ಕಾಣಿಸುತ್ತವೆ,
ಕೆಲವು ನೀಳವಾಗಿ, ಎಳೆಯದಾಗಿ,
ದೊಡ್ಡ ಗಾತ್ರದವನ್ನು, ನುಣುಪನ್ನು
ಅಳೆದು ತೂಗಿ ಇಳಿಸಿಕೊಳ್ಳುತ್ತಾರೆ ಕಾರಿಗೆ,
ಒಂದಷ್ಟು ಜನ ಇಳಿದುಬಿಡುತ್ತಾರೆ ಕೋಣೆಗೆ
ನೋಟುಗಳ ನಡುವೆ ಕಾಂಡೋಮ್ ನ ಪ್ಯಾಕೇಟು ಥೇಟು ಮಗುವಿನಂತೆ
ಅಡಗಿಕೊಂಡಿದೆ
ಅಂಟಿಸಿದ ದೇವರುಗಳ ಲೆಕ್ಕಿಸದೆ
ಗೋಡೆಗಳ ಕಣ್ಣು ಮುಚ್ಚಿ
ಉಚ್ಚೆ ಹೊಯ್ದು, ಉಫ್ ಎಂದು ಉಸುರು ಬಿಡುವ
ಮುಗ್ದರ ಪ್ಯಾಂಟುಗಳ
ಝಿಪ್ ಕೆಟ್ಟು ಹೋಗುವುದು ತೀರಾ ಸಾಮಾನ್ಯ,
ಕೆಲಸ ಸಲೀಸು ಎಂದು ಸುಮ್ಮನಾದವರೇ ಹೆಚ್ಚು..
ಕತ್ತಲ ಹೊದ್ದುಕೊಂಡು
ಬೆರಳು ಹಿಡಿದ ಒಲವಿಗೆ
ಇಲ್ಲಿ ಎಷ್ಟೊಂದು ಹೆಸರುಗಳು ಗೊತ್ತೆ,
ಎದೆಯಿಂದ ಎದೆಗೆ ಉಸಿರು ದಾಟಿಸುವಾಗ
ಒಂದಿನಿತು ಸದ್ದು ಹೊರಡುವುದಿಲ್ಲ,
ಮೋಡ ಚದುರಿ ಚಂದ್ರನ ಬೆತ್ತಲೆ ಮೈಯಿಂದ
ಬೆಳಕು ಹನಿಯುತ್ತದೆ,
ಮಹಾನಗರಿ ತುಟಿ ಸವರಿಕೊಳ್ಳುತ್ತದೆ.






”ಅವಸರ ಇನ್ನೂ ರೋಡಿನ ಮೇಲೆ
ತರಹೇವಾರಿ ರೂಪದಲ್ಲಿ,
ಕೂಸಿನ ಹಾಲು ಮೊಲೆಯಲ್ಲಿಟ್ಟುಕೊಂಡ ಹೆಂಗಸಿನ ರೂಪದಲ್ಲಿ,” ಮಹಾನಗರದ ಧಾವಂತವನ್ನು ಅದ್ಭುತವಾಗಿ ಸೆರೆ ಹಿಡಿದ ಕವನ!
ಮಯಾನಗರಿ ಬದುಕಿನ ಇಂಚಿಂಚು ಕ್ಷಣಗಳು ದಾಖಲಾಗಿವೆ,