ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಾದೇವ ಎಸ್ ಪಾಟೀಲ ಕವಿತೆ- ನನ್ನ ಜನರ ಹಾಡು ಪಾಡು…

ಮಹಾದೇವ ಎಸ್ ಪಾಟೀಲ

ನನಗೆ ನನ್ನೂರು ನೆನಪಾದಾಗ
ನನ್ನೂರ ಜನರ ಹಾಡು ಪಾಡು
ಗೀಜಗನ ಗೂಡು ನೆನಪಾಗುತ್ತದೆ
ಹರಿದ ಬಟ್ಟೆ ಮುರುಕು ಗುಡಿಸಲಿನಲಿ
ನನ್ನ ಜನ ಸತ್ತು ಬದುಕಿದ್ದಾರೆ,ಬದುಕಿಯೂ ಸತ್ತಿದ್ದಾರೆ

ಗೌಡರ ಮನೆಯಲಿ
ಜೀತ ಮಾಡುವ ನನ್ನ ಕೇರಿಯ ಸಿದ್ದ
ಒಪ್ಪತ್ತಿನ ಬಾನಕ್ಕಾಗಿ ದುಡಿಯುವ
ಕಮ್ಮಾರ, ಚಮ್ಮಾರ,ಮಡಿವಾಳ,ತಳವಾರ,ಗಾಣಿಗ
ಇವರಾರು ಸ್ವಂತ ಸೂರು ಕಟ್ಟಿಕೊಳ್ಳಲಿಲ್ಲ
ನನ್ನ ಜನ ಸತ್ತು ಬದುಕಿದ್ದಾರೆ, ಬದುಕಿಯೂ ಸತ್ತಿದ್ದಾರೆ

ತಗ್ಗಿ ಬಗ್ಗಿ ನಡೆದುಕೊಂಡು
ಹೇಗೋ ಜೀವನ ನಡೆಸಿದ್ದಾರೆ
ಈ ದುರುಳ ದುರ್ಜನರ ಕೈಗೆ ಸಿಕ್ಕು
ಬಾಳಿನಲಿ ನಲುಗಿ ಹೋಗಿದ್ದಾರೆ
ನನ್ನ ಜನ ಸತ್ತು ಬದುಕಿದ್ದಾರೆ, ಬದುಕಿಯೂ ಸತ್ತಿದ್ದಾರೆ

ಮುಖವಾಡ ಬದಲಾಯಿಸಿಕೊಂಡು
ಜಾತಿ ಧರ್ಮಗಳ ರಕ್ತ ಹಿಂಡಲು
ಮೋಸದ ಮಾತುಗಳಾಡಿ ಗೆದ್ದು ಬೀಗುತ್ತಾರೆ
ಮೊಸಳೆ ಕಣ್ಣೀರು ಸುರಿಸಿ
ನಮ್ಮ‌ಕಣ್ಣೀರಿನಲ್ಲಿಯೇ ಕೈ ತೊಳೆದು ಕೊಳ್ಳುತ್ತಾರೆ
ನಾವು ಕಣ್ಣೀರಿನಲ್ಲಿಯೇ ಕಳೆದು ಹೋಗಿದ್ದೇವೆ
ನನ್ನ ಜನ ಸತ್ತು ಬದುಕಿದ್ದಾರೆ, ಬದುಕಿಯೂ ಸತ್ತಿದ್ದಾರೆ

ರಾಜಕೀಯ ಸೋಗು ಹಾಕಿಕೊಂಡು
ಕಾಲು ಬೀಳುವ ನೆಪದಲಿ ಕೈಮುಗಿದು
ಕೆಜಿ ಖಂಡ ಇನ್ನೂರು ರೂಪಾಯಿ ಕೊಟ್ಟು
ಬಡವರನ್ನು ಬೆತ್ತಲು ಗೋಳಿಸಿದ್ದಾರೆ
ನನ್ನ ಜನ ಸತ್ತು ಬದುಕಿದ್ದಾರೆ, ಬದುಕಿಯೂ ಸತ್ತಿದ್ದಾರೆ

ಇಲ್ಲಿಗೆ ನಾವು ಸ್ವಾತಂತ್ರ್ಯದಿಂದ ಮುಕ್ತಗೊಂಡು
ನಮ್ಮಜ್ಜ,ನಮ್ಮ ತಾತ, ನಮ್ಮಪ
ಮೂರು ತಲೆ ಮಾರು ಉರುಳಿ ಹೋದವು
ಇನ್ನೂ ನ್ಯಾಯಬೆಲೆ ಅಂಗಡಿಯ ಮುಂದೆ
ಗೋಣಿ ಚೀಲ ಹಿಡಿದುಕೊಂಡು
ಸಾಲು ಸಾಲಾಗಿ ನಿಂತಿದ್ದಾರೆ ಅನ್ನದ ಭಿಕ್ಷೆಗಾಗಿ
ನನ್ನ ಜನ ಸತ್ತು ಬದುಕಿದ್ದಾರೆ, ಬದುಕಿಯೂ ಸತ್ತಿದ್ದಾರೆ

ಅಮೃತ ಮಹೋತ್ಸವದ ಸಂಭ್ರಮದಲ್ಲೂ
ತುತ್ತು ಕುಳ್ಳಿಗಾಗಿ
ನೀರಿನ ದಾಹಕ್ಕಾಗಿ
ಆಶ್ರಯದ ನೆಲೆಗಾಗಿ
ನಡೆದಾಡುವ ರಸ್ತೆಗಾಗಿ
ನನ್ನ ಜನ ಸತ್ತು ಬದುಕಿದ್ದಾರೆ, ಬದುಕಿಯೂ ಸತ್ತಿದ್ದಾರೆ

ನಮ್ಮನ್ನೆ ಸುಟ್ಟು,ನಮ್ಮನ್ನೆ ತಿಂದು
ಬೆಳೆದು ಬಕಾಸೂರರಾಗಿದ್ದಾರೆ
ಅರಳಬೇಕಾದ ಅದೆಷ್ಟೋ ಬಡಜೀವಗಳು
ಬೆಗುದಿಗೆ ಬೆಂದು ಕಮರಿ ಹೋಗಿವೆ
ನನ್ನ ಜನ ಸತ್ತು ಬದುಕಿದ್ದಾರೆ,ಬದುಕಿಯೂ ಸತ್ತಿದ್ದಾರೆ.

‍ಲೇಖಕರು Admin

12 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading