ಮಹಾಂತೇಶ ನವಲಕಲ್
1.
ಅಮ್ಮನ ಕಾಲಾಗ ಸಾಕಾಗಿತ್ತು.
ಹೊರ ವರಾಂಡದಲಿ ನಗು ನಗುತಲಿ ಇದ್ದ
ನನ್ನ ತಥಾಗತ ಬುದ್ದನ ಮೂರ್ತಿಯನು
ದಿನಾಲು ಮುಂಜಾನೆ ದೇವರ ಜಗುಲಿಗೆ ಹೊಯ್ದು
ಅದಕೆ ಉದಕದಲಿ ಎರೆದು,
ಭಸ್ಮವನು ಹಚ್ಚಿ ಬಿಲ್ವಪತ್ರಿನು ಏರಿಸಿ
ಮಂUಳಾರತಿ ಮಾಡಿ ಶಿವನೆಂದು ಪೂಜಿಸುತ್ತಿದ್ದಳು ಅಮ್ಮ.
ಮತ್ತೆ ಪೂಜೆ ಮುಗಿಯುತ್ತಲೇ ನಾನು ಮತ್ತೆ
ನನ್ನ ಬುದ್ದನಿಗೆ ಅಮ್ಮನಿಗೆ ನೋವಾಗದಂತೆ
ಮೂರ್ತಿಯನು ಹೊರಾಂಡಕೆ ತಂದು ಪ್ರತಿಷ್ಠಾಪಿಸುತ್ತಿದ್ದೆ
ಇದು ಪ್ರತಿ ದಿನದ ಪಾಠ
ಅಮ್ಮ ನನ್ನ ಇಬ್ಬರ ಆಟ
2
ಆತ ನಿನ್ನ ಸಿವನಲ್ಲಮ್ಮ
ನನ್ನ ಬುದ್ದನಮ್ಮ ಎಂದು ಕಿರುಚಿ ಧ್ವನಿಯೇರಿಸಿ
ಹೇಳಿದರೂ ಅಮ್ಮ ಕೇಳಲೊಳ್ಳಲು.
ಆಕೆಯ ವಾದವೇ ಬೇರೆ
ನೋಡು ಕಣ್ಣು
ಅದೆ ಧ್ಯಾನಸಕ್ತವಾದ ಕಮಲದ ಹಣ್ಣು
ಎದೆಯಲಿ ಶಾಂತ ಸರೋವರದ ನಕಾಶೆ
ಉದ್ದನೆಯ ಕಿವಿಯ ಪಸೆ
ಅದರಲಿ ಜಗದ ಕಳಕಳಿ ತುಂಬಿಕೊಂಡಿದ್ದಾನೆ ಈಶ
ಈತ ಶಿವನಲ್ಲದೆ ಬೇರೆ ಯಾರು
ನನ್ನ ಆಕೆಯ ವಾದದಲಿ ನಾ ಸೋತದ್ದೆ ಹೆಚ್ಚು

3
ಒಬ್ಬ ಲೋಕದ ಉಳವಿಗಾಗಿ ತ್ರಿಪುರ
ನಾಶ ಮಾಡಿದ ಮಾರ್ತಂಡ ಭೈರವ
ಇನ್ನೊಬ್ಬ ನಗು ನಗುತ್ತಲೆ ಅನಂತ
ಶಾಂತಿ ಭೋದಿಸಿದ ಮಹಾಮಾನವ
ಒಬ್ಬ ಸಮುದ್ರ ಕಕ್ಕಿದ ಘಟವಿಷವ ಕುಡಿದ
ಅನಾಥ ದೇವ
ಇನ್ನೊಬ್ಬ ಕೊಟ್ಟ ಪ್ರಸಾದಕೆ ಬೆಲೆಕಟ್ಟಲಾಗದೆ ಸೇವಿಸಿ
ಮರಣಿಸಿದ ಮಹಾದೇವ
4.
ಈಗ ಹೆಂಡತಿ ಸಾವಿನ ಕಣ್ಣೀರು ಇನ್ನೂ ನಿಲ್ಲದೆ
ಗಂಗೆಯ ಒಡಲು ಸೇರುತ್ತಿದೆ ಮಿಡಿಯುವರಾರು?
ಹೆಂಡತಿ ಮಕ್ಕಳನು ಬಿಟ್ಟು
ಆ ಕರಾಳ ರಾತ್ರಿಯಲಿ ನಡೆದ ಹೆಜ್ಜೆಗಳಲಿ ಕೂಡ
ಪಾಪ ಪ್ರಜ್ಞೆಯ ಗರಿಕೆ ಹುಟ್ಟಿವೆ ಅಳಕಿಸುವರಾರು?
ಇಬ್ಬರೂ ತಮ್ಮ ಕಣ್ಣೀರಿಗೆ ತಾವೆ ಅತ್ತವರು ಯಾರಿಗೂ ಹೇಳದೆ ಕೇಳದೆ.
ಲೇ ಮೂರ್ಖ ನಿನ್ನ ಅಮ್ಮ ಮಾಡಿದ್ದು ತಾಳೆ ಮಾಡಿ ನೋಡು
ಬುದ್ದನನು ಶಿವನನ್ನಾಗಿ ಮಾಡುವ
ಮಹಾಶಕ್ತಿ ಅಮ್ಮನಿಗೆ ಬಿಟ್ಟರೆ ಮತ್ತಾರಿಗೆ ಇದೆ
ಮುಖಚರ್ಯಗಳನು ಬದಲಿಸುವ ಶಕ್ತಿ ಅಮ್ಮನಿಗೆ ಬಿಟ್ಟು ಇನ್ನಾರಿಗಿದೆ

5.
ಅಂದು ರಾತ್ರಿ ಕಣ್ಮುಚ್ಚಿದೆ
ಅಮ್ಮನ ಶಿವ ನನ್ನ ಬುದ್ದ ಇಬ್ಬರೂ ಕನಸಿನಲಿ
ಅನೇಕ ರೂಪ ಪಡೆಯುತ್ತಿದ್ದರು
ಜೀಸಸ್ ನ ನಿರಾಕಾರ ದೇವರು, ಮೋಸೆಸ್ ನಿರ್ಭಯಲು ದೇವರು
ಪ್ರವಾದಿಗಳ ನಿರ್ಮಲ ನಿರಾಕಾರ ದೇವರು, ಜೀನನ ಅರಿಹಂತ ದೇವರು……….
ವರ್ತಮಾನದ ನಂಜಿಗೆ ಅಂಜಿ
ಒಂದರಲೆ ಭಹುತ್ವ ಪ್ರಕಟಿಸುತ್ತಾ ಹೋದವು
ಮನೆ ಎಂಬುದು ವಿಶ್ವಧರ್ಮದ ಆಲಯ ಆಯಿತು
ಎಂಥಹ ಅಮ್ಮ ಈಕೆ
ಒಂದನ್ನು ಎರಡು ಮತ್ತೆ ಹತ್ತು ಮಾಡುವ ತಾಕತ್ತಿನಾಕೆ.






ಕವನ ಚೆನ್ನಾಗಿದೆ
ಪ್ರತಿಭಾ ನಂದಕುಮಾರ್