ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಾಂತೇಶ ನವಲಕಲ್ ಹೊಸ ಕವಿತೆ – ನೀರೋನ ಹೊಸ ಅವತಾರ…

ಮಹಾಂತೇಶ ನವಲಕಲ್

1

ಅಂದ ಹಾಗೆ ನಾನು ರೋಮನಲ್ಲಿ ಇಲ್ಲ
ಭಾರತದಲ್ಲಿಯೇ ಇದ್ದೇನೆ
ನನ್ನ ಹೆಂಡತಿಯ ತಂಗಿಯ ಮೊಮ್ಮಗಳನು ಇಲ್ಲಿಯೇ ಕೊಟ್ಟಿತ್ತಲ್ಲ
ಅರಕ್ಷತೆಗೆ ಬಂದವನು ಇಲ್ಲಿಯೇ ಉಳಿದುಕೊಂಡಿದ್ದೇನೆ
ನನ್ನ ಸಾವಿರಾರು ವರ‍್ಷದ ಪಿಟೀಲು
ಹಳೆಯದಾದರೂ ಚಿಕಣಿಯಂತೆ ಇದೆ ನನ್ನ ಹಾಗೆ
ಮೊನ್ನೆ ಪಿಟೀಲಿನ ಎರಡು ತಂತಿಗಳು ಕಿತ್ತು ಹೋಗಿದ್ದವು
ಜಂತರ್ ಮಂತರ್ ನ ಎದುರಿನ ಅಂಗಡಿಯಲಿ
ರಿಪೇರಿ ಮಾಡಿಸಿದ್ದೇನೆ

2
ರೋಮ್ ನ ಉರಿವ ಗಾಳಿಯಲಿ ಬೆರೆತ
ಬೆಂಕಿಯ ಚಿರಂತನ ಪಯಣ
ಆಕಾಶದ ನಿರಾಳತೆ ಹೃನ್ಮಯತೆ ಶುಭ್ರತೆಯ ಆವರಣ
ಅಂದು ನಾನು ನಾನಗಿರಲಿಲ್ಲ ಆ ಪಿಟೀಲು ಪೆಟ್ಟಿಗೆಯೊಳಗೆ
ಸಮಾವಿಷ್ಟ ಜೋಗುಳ ಹಾಡುತ್ತಿದ್ದೆ.
ಹೊರಗೆ ಬೆಂಕಿಯ ಕೆನ್ನಾಲಿಗೆ ಭೈರವಿರಾಗ ಹಾಡುತ್ತಿತ್ತು
ನನ್ನ ಹೆಸರನು ದಂತ ಕತೆಯನ್ನಾಗಿ ಮಾಡಲು

3
ಇಲ್ಲಿಯೂ ಸುಂದರ ಮಂಜು ಮುಸುಕಿದ
ಮುಂಜಾವಿನಲಿ ಲಾವರಸ ಅಗ್ನಿ ಸ್ಪೋಟಿಸುತ್ತದೆ
ಒಮ್ಮೊಮ್ಮೆ ಮಧ್ಯಾಹ್ನದ ಬಿರಿದ ಬಿಸಿಲು ಕೆಂಡಗಳು
ಜ್ವಾಲಾಮುಖಿ ಬಿಸಲ್ಗುದುರೆಗಳಂತೆ ಕಣ್ಣ ಮುಂದೆ ಹಾಯುತ್ತವೆ
ಅನೇಕ ಸಂಜೆಗಳು ಕೆಂಪು ಸೂರ‍್ಯನನು ಭೂಗತವಾಗಲು ಬಿಡದೆ
ರುಂಡ ಮುಂಡ ಚಂಡಾಡಿ ಕೆರೆಯಲಿ ಚರಗ ಚಲ್ಲುತ್ತವೆ

4

ಈ ಭೂಮಿಯಂತೆ ನಾನು ನಿರಾಳನಾಗಿದ್ದೇನೆ
ಇಲ್ಲಿ ಯಾರೂ ನೆರೆ ಮನೆಯವರ ದುಃಖಕ್ಕೆ ಅಳುವವರು ಇಲ್ಲ
ಅದಕಾಗಿ ನನ್ನಂಥ ಅನೇಕ ನೀರೋಗಳು ಇಲ್ಲಿ ಹುಟ್ಟಿದ್ದಾರೆ
ಅವರಿಗೂ ಪಿಟೀಲುಗಳು ಇವೆ
ಸೊಕ್ಕಿದ ಬೆಂಕಿಯ ಜ್ವಾಲೆಗಳು ಧಗಧಗನೆ ಉರಿದಾಗ
ಪಿಟೀಲಿನ ತಂತಿಗಳು ಬಿಗಿಗೊಂಡು ಬತ್ತೀಸ ರಾಗ ಹಾಡುತ್ತವೆ

5

ಕೆಲವೊಮ್ಮೆ ಹಿಮಕಲ್ಲುಗಳಾಗಿ ರೂಪಾಂತರ ಹೊಂದಿದ ನೀರು
ನಾದದ ನದಿಯಾಗುವುದಿಲ್ಲ ಆದರೂ ಪಿಟೀಲಿನ ತಂತಿಗಳು
ನಿರಂತರವಾಗಿ ಕನಿಷ್ಠ ಹೃಸ್ವಸ್ವರವನೆ ಉಗುಳುತ್ತಿವೆ ತೊಟ್ಟ ಬಾಣ
ತೊಡದಂತೆ

6
ಮಧು ಶಾಲೆಗಳು ಸೂಸುವ ಅಮೃತಕ್ಕೆ ಸಮಾನ ವಿಷದಂತಹ ವಾಸನೆಗಳು
ದಿನಾಲು ಟ್ರಕ್ಕಿನಲಿ ಸಾಗಿಸುವ ಕಮಾಟಿಪುರದ ಚೋಹ ಚೀಲಗಳು
ಅವರ ಮಾತುಗಳು ಇವರ ಕತೆಗಳು ಒಟ್ಟಾರೆ ಯಾವದಕೂ ತಲೆ ಕೆಡಿಸಿಕೊಳ್ಳುವುದಿಲ್ಲ.
ಪಿಟೀಲಿನ ಸರಿಗಮಕೆ ಯಾವುದೆ ಬಾಧೆಗಳಿಲ್ಲ
ನಾನು ಮತ್ತೊಮ್ಮೆ ದಂತಕತೆಯಾಗುವ ಅಪಾಯವೂ ಇಲ್ಲ

‍ಲೇಖಕರು Admin

17 March, 2022

3 Comments

  1. ರಮೇಶ ಗಬ್ಬೂರ್

    ಕವಿತೆ ಓದಿದ ನಂತರ ನಮ್ಮಪ್ಪ ಪಿಟೀಲು ಯಾಕಪ್ಪ ನೆನಪಾದರು…

  2. SHARANABASAVA HUNUR

    Good concept

  3. T S SHRAVANA KUMARI

    ವಿಷಾದ ಸೂಸಿದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading