ಮತ್ತೆ ಇಳಿದು ಬಾ…

ಮಲ್ಲಿಕಾರ್ಜುನಗೌಡ ತೂಲಹಳ್ಳಿ
ಗಿಡ ಮರ ಸ್ತಬ್ದ ಚಿತ್ರ
ಉರಿವ ಓಣಿ ಬೀದಿ
ಚಡಪಡಿಸುವ ನೆರಳು
ನಾಲಗೆ ಸೀಟಿದರೂ ಉಗುಳಿಲ್ಲ
ಉಟ್ಟಿದ್ದ ಕಳಚಿ
ಕುಡಿದಿದ್ದ ಕಪ್ಪು ನೀರೂ
ಬೆವರ ಸೆಲೆಯಾಗಿ ಹರಿದು
ಅದೂ ಒಣಗಿ
ಮೈಗೆ ಉಪ್ಪಡರಿ
ಉಸಿರೂ ಝಳ ಝಳ
ನೆಲಕ್ಕೇ ಜ್ವರ
ಯಪ್ಪಾ ನಾಗಲಿಂಗ
ಯವ್ವಾ ಭೀಮವ್ವ
ಶಿಶು
ನಾ
ಳ
ದ
ಒಡಲೆಲ್ಲಾ
ನಿಮ್ಮ ತತ್ವಗಳೋಗರವುಂಡು
ಕುಡಿಯಲು ನೀರಿಲ್ಲದೆ
ಬೇಧಿ ಕಿತ್ತು ನಿತ್ರಾಣ
ಹಳ್ಳ ಕೊಳ್ಳವ ನುಂಗಿದ ಮಂದಿ
ನದಿಗೆ ಕಾಲುವೆ ಕಟ್ಟ
ಗಂಗಾವತರಣ ಮಾಡುವ
ಮಾತಾಡುತ್ತಲೇ
ಹೆಬ್ಬೆಟ್ಟೊತ್ತಿಸಿಕೊಂಡು
ದೊರೆಗಳಾದರೋ ತಂದೆ
ಕೆರೆಗಳ ನುಂಗಿ
ಶಹರಗಳ ಹಡೆದರು
ಮುತ್ತಿನ ಜೋಳದ ಕನಸ
ಸುಳಿಯಲ್ಲೇ ಹಿಸುಕಿ
ಖಾಲಿ ಮಡಕೆಯಲಿ
ಹಾವು ಚೇಳು
ಒರತೆಗಳೂ ಒಣಗಿ
ಇಟ್ಟಂಗಿ ಭಟ್ಟಿಗಳ ಧೂಳು
ಮತ ಮತಕು
ಮಹದಾಯಿ ಕನಸಿಟ್ಟು ಕಳಿಸಿದರೂ
ಠಕ್ಕ ಮಾತಿಗೆ ಧಗೆಯು ತಣಿಯಲಿಲ್ಲೋ
ಲೋಕವಿಲ್ಲದ ಸಭೆ
ವಿಕಾಸವರಿಯದ ಸೌಧ
ಕೂಡಿ ಕಳೆಯುವ ಲೆಕ್ಕ
ನಿಲ್ಲಲಿಲ್ಲೋ
ಬಸುರಿಗೂ ನೀರಿಲ್ಲ
ಕೂಸು ಬಾಣತಿಗಿಲ್ಲ
ಕೂಲಿ ಮೈ
ಆಡು ಕುರಿ ಹಕ್ಕಿಪಕ್ಷಿಗಳಿಗಿಲ್ಲ
ಕುಂತು ಬೇಡಿದರಿಲ್ಲ
ನಿಂತು ಬೇಡಿದರಿಲ್ಲ
ಇಲ್ಲವೆಂಬುದಲ್ಲಗಳೆದುದೆ ಬಂತೋ
ನರಭಕ್ಷಕ ವ್ಯಾಘ್ರಗಳ ಹಿಂಡು ಹಿಂಡು
ಬ್ಯಾಡ ಯಜ್ಜೋ ಇವರು
ನೀನೆ ಬಾರೋ
ಬೇಂದ್ರೆ
ಅಂಬಿಕಾತನಯದತ್ತ
ನಿನ್ನ ಕೂಡಿ ಹಾಡತೇವೋ
ಹುಗಿದ ದನಿಯೆತ್ತಿ
ಮತ್ತೆ
ಮತ್ತೆ
ಇಳಿದು ಬಾ ತಾಯೇ
ಇ
ಳಿ
ದು
ಬಾ…..





0 Comments