ಮಳೆ ಮತ್ತು ಟೈಗರ್

ಸುಮಾರು 40 ವರ್ಷ ವಯಸ್ಸಿನವರಾಗಿದ್ದ ಪೀಟರ್ ಆಗಾಗ್ಗೆ ಧರ್ಮಸ್ಥಳದ ನಮ್ಮ ಪಶು ಆಸ್ಪತ್ರೆಗೆ ಬರುತ್ತಿದ್ದರು. ಬಹಳ ಸ್ನೇಹಮಯಿ. ಮಾತು ತಮಾಷೆ ಹೆಚ್ಚು. ಅಂತಹವರು ನನಗೂ ಅಚ್ಚುಮೆಚ್ಚು. ಅವರು ಮಂಗಳೂರಿನಲ್ಲಿ ಯಾವುದೋ ಕಂಪನಿಯಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದರು. ವಾರಕ್ಕೊಮ್ಮೆ ಅಥವಾ ಎರಡು ಸಲ ತಮ್ಮ ಮನೆಗೆ ಬಂದು ಹೋಗುತ್ತಿದ್ದರು.

ನಮ್ಮ ಆಸ್ಪತ್ರೆಗೆ ಎರಡು ಕಿಮೀ ದೂರದಲ್ಲಿ ಅವರ ಸಣ್ಣ ತೋಟ, ಮನೆ, ಸ್ವಲ್ಪ ರಬ್ಬರ್ ಮರಗಳಿದ್ದವು. ಅವರ ಮನೆಯಲ್ಲಿ ಒಂದೆರಡು ಜರ್ಸಿ ಹಸುಗಳಿದ್ದವು. ಅವಕ್ಕೆ ಕೃತಕ ಗರ್ಭಧಾರಣೆ, ಗರ್ಭ ಪರೀಕ್ಷೆ, ಖಾಯಿಲೆ ಕಸಾಲೆಗಳಿಗೆ ಹೋಗುತ್ತಿದ್ದೆ. ಅವು 50% ಮಿಶ್ರ ತಳಿಗಳಾದುದರಿಂದ ಪದೇ ಪದೇ ಖಾಯಿಲೆ ಬೀಳುತ್ತಿರಲಿಲ್ಲ ಮತ್ತು ಒಂದೆರಡು ಬಾರಿಗೆ ಗರ್ಭ ಧರಿಸಿಬಿಡುತ್ತಿದ್ದವು.

ಪೀಟರ್ ಊರಲ್ಲಿಲ್ಲದಾಗ ಮನೆಯಲ್ಲಿ ಪೀಟರ್‍ರ ಪತ್ನಿ ಮೇರಿ ಮತ್ತು ಮಗಳು ಇಬ್ಬರೇ ಇರುತ್ತಿದ್ದರು. ಒಂಟಿ ಮನೆ. ಸುಮಾರು ದೂರದ ತನಕ ಬೇರೆ ಮನೆಗಳಿರಲಿಲ್ಲ. ಮಗಳು ಪಿಯುಸಿಯಲ್ಲಿ ಓದುತ್ತಿದ್ದಳು. ಕಾಲೇಜಿಗೆ ಉಜಿರೆಗೆ ಬೆಳಿಗ್ಗೆ ಹೋದರೆ ಬರುವುದು ಸಾಯಂಕಾಲವೇ. ಅಲ್ಲಿಯವರೆಗೆ ಮನೆಯಲ್ಲಿ ಮೇರಿ ಒಬ್ಬರೇ.

ಪೀಟರ್ ಮನೆಯಲ್ಲಿ ಒಂದು ನಾಯಿ ಸಾಕಿದ್ದರು. ಅದಕ್ಕೆ ಟೈಗರ್ ಎಂಬ ಹೆಸರು. ಅದೇನೂ ಜಾತಿ ನಾಯಿಯಾಗಿರದೆ ಕೆಂಪು ಬಣ್ಣದ ನಾಟಿ ನಾಯಿಯೇ ಆಗಿತ್ತು. ಪೀಟರ್ ಮತ್ತು ಕುಟುಂಬದವರ ಅಪೇಕ್ಷೆಗೆ ವಿರುದ್ಧವಾಗಿ ಟೈಗರ್ ತುಂಬಾ ಪುಕ್ಕಲು ಸ್ವಭಾವದ್ದಾಗಿತ್ತು. ಯಾವಾಗ ನಾನು ಹೋದರೂ ಅದು ಒಂದೆರಡು ಬಾರಿ ಕೂಗಿ ನಂತರ ಯಾರ ಕಣ್ಣಿಗೂ ಕಾಣದಂತೆ ನಾಪತ್ತೆಯಾಗಿಬಿಡುತ್ತಿತ್ತು. ಹೆದರಿಸಿದರೆ ಅದು ನೂರಾರು ಕಿಮೀ ವೇಗದಲ್ಲಿ ಓಡುತ್ತಿದ್ದುದು ನನಗೆ ಬಿದ್ದು ಬಿದ್ದು ನಗುವಂತೆ ಮಾಡುತ್ತಿತ್ತು.

ಓಡುವ ಭರದಲ್ಲಿ ಒಮ್ಮೆ ಅದು ಒಂದು ಗುಂಡಿಗೆ ಬಿದ್ದುಬಿಟ್ಟಿತ್ತು. ಆದರೆ ಪೀಟರ್ ಮತ್ತು ಮನೆಯವರಿಗೆ ಮಾತ್ರ ಅದರ ಮೇಲೆ ಬಹಳ ಪ್ರೀತಿಯಿತ್ತು. ಅದಕ್ಕೆ ಆಗಾಗ ಜಂತುಹುಳು ಔಷಧಿ ಹಾಕಿಸುತ್ತಿದ್ದರು, ವರ್ಷಕ್ಕೊಂದು ಸಲ ರೇಬಿಸ್, ಡಿಸ್ಟೆಂಪರ್ ವ್ಯಾಕ್ಸಿನೇಷನ್ ಮಾಡಿಸುತ್ತಿದ್ದರು. ಇಂಜೆಕ್ಷನ್ ಮಾಡಿಸುವ ದಿನ ಬೆಳಿಗ್ಗೆಯೇ ಟೈಗರ್‍ನನ್ನು ಮನೆಯಲ್ಲಿ ಕಟ್ಟಿ ಹಾಕಿಬಿಡಬೇಕಿತ್ತು.

ನಾನು ಹೋಗಿ ಇಂಜೆಕ್ಷನ್ ಮಾಡುವ ತನಕ ಅದನ್ನು ಬಿಡುವ ಹಾಗಿರಲಿಲ್ಲ. ಇಲ್ಲದಿದ್ದರೆ ಅದಕ್ಕೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ನನ್ನನ್ನು ನೋಡಿದರೆ ಅದು ಅಂದು ಮನೆಯನ್ನೇ ಸೇರುತ್ತಿರಲಿಲ್ಲ.

ಮೇರಿ ಅತಿ ಮುಗ್ಧರಾದುದರಿಂದ “ಸಾರು, ಅದಕ್ಕೆ ಧೈರ್ಯ ಬರಲು ಯಾವುದಾದರೂ ಇಂಜೆಕ್ಷನ್ ಮಾಡಿ” ಎಂದು ದುಂಬಾಲು ಬೀಳುತ್ತಿದ್ದರು. ಆ ತರಹದ ಔಷಧಿಗಳಿಲ್ಲ ಎಂದು ಎಷ್ಟು ಹೇಳಿದರೂ ಅವರು ಒಪ್ಪಿಕೊಳ್ಳುತ್ತಿರಲಿಲ್ಲ. ನಾನು, ಪೀಟರ್ ಮತ್ತು ಮಗಳು ನಕ್ಕು ನಕ್ಕು ಸಾಕಾಗುತ್ತಿದ್ದೆವು. ನಾವೆಲ್ಲ ನಗುತ್ತಿದ್ದರೆ ಮೇರಿಯವರಿಗೆ ಸಿಟ್ಟು ಬಂದುಬಿಡುತ್ತಿತ್ತು.

ಪೀಟರ್ ಅದಕ್ಕೊಂದು ಚರ್ಮದ ಹಾರ್ನೆಸ್ ಬೆಲ್ಟ್ ತಂದು ಹಾಕಿದ್ದರು. ಅದು ಕತ್ತು ಮತ್ತು ಎದೆಗಳನ್ನು ಆವರಿಸಿಕೊಂಡ ಭದ್ರವಾದ ದೊಡ್ಡ ಬೆಲ್ಟಾಗಿತ್ತು. ಮೇರಿಯವರು ಟೈಗರಿಗೆ ಧೈರ್ಯದಿಂದಿರಲು ಮಂತ್ರಿಸಿದ ತಾಯಿತವನ್ನು ತರಿಸಿದ್ದು ಒಂದು ರೋಚಕ ಕತೆ. ಸಣ್ಣ ಪುಟ್ಟ ಮಕ್ಕಳಿಗೆ ಆರೋಗ್ಯಕ್ಕೆ, ಸದಾ ಅಳುವುದನ್ನು ನಿಲ್ಲಿಸಲು, ಧೈರ್ಯದಿಂದಿರುವುದಕ್ಕೆ ಅಲ್ಲಿ ಒಂದು ದರ್ಗಾದಲ್ಲಿ ತಾಯಿತ ಕೊಡುತ್ತಿದ್ದರು. ಬೇರೆ ಬೇರೆ ಜಾತಿ ಧರ್ಮದವರೆಲ್ಲ ತಾಯಿತ ತಂದು ಕಟ್ಟುವುದನ್ನು ಗಮನಿಸಿದ ಮೇರಿಯವರಿಗೆ ಒಂದು ಉಪಾಯ ಹೊಳೆಯಿತು.

ಒಂದು ದಿನ ಬಿಡುವು ಮಾಡಿಕೊಂಡು ದರ್ಗಾಕ್ಕೆ ಹೋದ ಮೇರಿ ಮಗುವಿನ ಹೆಸರಿನಲ್ಲಿ ಒಂದು ತಾಯಿತ ತಂದರು. ಮೇರಿಯವರಿಗೆ ಟೈಗರ್ ನಿಜಕ್ಕೂ ಮಗುವೇ ಆಗಿತ್ತು. ಬಹಳ ಭಯ ಭಕ್ತಿಯಿಂದ ತಾಯಿತವನ್ನು ಟೈಗರ್‍ಗೆ ಕಟ್ಟಿದರು. ಆದರೆ ಟೈಗರ್ ತನ್ನ ಚಾಳಿ ಬಿಡಲಿಲ್ಲ. ಹೆದರಿ ಯದ್ವಾತದ್ವಾ ಓಡುತ್ತಿತ್ತು.

“ಏನು ಮೇರಿಯವರೇ, ಟೈಗರ್‍ನ ಮೇಲೆ ತಾಯಿತ ಏನೂ ಕೆಲಸ ಮಾಡಿದಂತೆ ಕಾಣಲಿಲ್ಲ” ಎಂದರೆ ಅವರು “ಅಯ್ಯೋ! ಖಂಡಿತವಾಗಿ ಕೆಲಸ ಮಾಡುತ್ತಿತ್ತು ಡಾಕ್ಟ್ರೆ. ಆದರೆ ಇವನು ಎರಡೇ ದಿನದಲ್ಲಿ ತಾಯಿತವನ್ನು ಎಲ್ಲಿಯೋ ಬೀಳಿಸಿಕೊಂಡುಬಿಟ್ಟ. ತಾಯಿತಕ್ಕೆ ಕೆಲಸ ಮಾಡಲು ಸಮಯವಾಗಲಿಲ್ಲವೋ ಏನೋ!” ಎಂದು ಲೊಚಗರೆಯುತ್ತಿದ್ದರು.

ಹೀಗಿದ್ದಾಗ ಒಂದು ದಿನ ಪೀಟರ್ ಮಧ್ಯಾಹ್ನದ ಹೊತ್ತಲ್ಲಿ ಆಸ್ಪತ್ರೆಗೆ ಬಂದು, ಟೈಗರ್ ಇತ್ತೀಚೆಗೆ ಕೆಲವು ದಿನದಿಂದ ಸಿಕ್ಕಾಪಟ್ಟೆ ಮೈ ಕೆರೆದುಕೊಳ್ಳುತ್ತಿದೆ ಎಂದು ತಿಳಿಸಿ, “ಮೈಮೇಲೆ ಚಿಗಟ, ಉಣ್ಣೆ, ಹೇನು ಮುಂತಾದವು ಇಲ್ಲ. ಆದರೂ ರಾತ್ರಿಯೆಲ್ಲ ಪರ ಪರ ಕೆರೆದುಕೊಳ್ಳುತ್ತಿದೆ. ಅದಕ್ಕೆ ಊಟ ತಿಂಡಿಯ ಮೇಲೆ ಗಮನ ಇಲ್ಲ. ಕಿವಿ ಮತ್ತು ತೊಡೆ ಸಂದುಗಳಲ್ಲಿ, ಹೊಟ್ಟೆಯ ಭಾಗದಲ್ಲಿ ಚರ್ಮ ಒರಟಾಗಿದೆ. ಹುಲಿಯಂತಹ ಟೈಗರ್ ನರಿಯಂತಾಗಿದೆ” ಎಂದು ಬಹಳ ವ್ಯಸನ ಪಟ್ಟುಕೊಂಡರು.

ಆಗ ಮುಂಗಾರು ಪ್ರಾರಂಭವಾಗಿತ್ತು. ಬಯಲು ಸೀಮೆಯಲ್ಲಿ ಹುಟ್ಟಿ ಬೆಳೆದ ನನಗೆ ಅಲ್ಲಿಯ ಭೀಕರ ಮಳೆಗಳನ್ನು ನೋಡುವುದೇ ಒಂದು ವಿಶೇಷ ಅನುಭವವಾಗಿತ್ತು. ಆ ದಿನ ಮಳೆ ಬರುವುದು, ನಿಲ್ಲುವುದು ಮಾಡುತ್ತಲೇ ಇತ್ತು. ಒಂದಷ್ಟು ಹೊತ್ತು ಹುಚ್ಚು ಮಳೆ, ಮತ್ತೆ ಸ್ವಲ್ಪ ಹೊತ್ತು ಜಿಟಿ ಜಿಟಿ. ಮತ್ತೊಮ್ಮೆ ಬಿಡುವು!

ರೈನ್ ಕೋಟ್ ಧರಿಸಿ, ಮೆಡಿಸಿನ್ ಬ್ಯಾಗನ್ನು ತೆಗೆದುಕೊಂಡು, ಬೈಕ್ ಡಿಕ್ಕಿಯಲ್ಲಿ ಇಟ್ಟುಕೊಂಡು ಹೊರಟೆ. ಪೀಟರ್ “ನಾನು ಬೆಳಿಗ್ಗೆಯೇ ಮನೆಯಿಂದ ಹೊರಟೆ ಸಾರ್. ಸ್ನೇಹಿತರ ಮನೆಗಳಲ್ಲಿ ಅಲ್ಪ ಸ್ವಲ್ಪ ಕೆಲಸವಿತ್ತು. ಹೀಗಾಗಿ ಬಹಳ ವೇಳೆಯಾಗಿಬಿಟ್ಟಿತು. ಮನೆಯಲ್ಲಿ ಮೇರಿ ಬೆಳಿಗ್ಗೆಯೇ ಟೈಗರ್‍ನನ್ನು ಕಟ್ಟಿ ಹಾಕಿದ್ದಳು. ತಡ ಮಾಡಿದರೆ ಸಿಟ್ಟಾಗುತ್ತಾಳೆ. ಬೇಗ ಹೋಗುವ” ಎಂದು ಅವಸರಿಸಿದರು.

ಪೀಟರ್ ಮನೆ ಲೆಕ್ಕಕ್ಕೆ ಹತ್ತಿರ. ಆದರೆ ಎರಡು ಕಿಮೀ ಹೋಗಲು ಅರ್ಧ ಗಂಟೆಯೇ ಬೇಕಾಯಿತು. ರಸ್ತೆ ಉದ್ದಕ್ಕೂ ಕೆಸರುಮಯ. ಒಂದಷ್ಟು ದೂರವಂತೂ ಬೈಕನ್ನು ಇನ್ನೊಬ್ಬರ ಸಹಾಯದಿಂದ ತಳ್ಳಿಕೊಂಡು ಹೋಗಬೇಕು. ಅಂತೂ ಇಂತೂ ಮನೆ ಸೇರಿದೆವು. ಉದ್ದಕ್ಕೂ ಮಳೆ ಹನಿಯುತ್ತಲೇ ಇತ್ತು. ಸಾಮಾನ್ಯವಾಗಿ ಮಳೆಗಾಲದಲ್ಲಿ ಧರಿಸಿದ್ದ ರೈನ್ ಕೋಟ್ ಅತ್ಯುತ್ತಮ ಗುಣಮಟ್ಟದ್ದಾಗಿದ್ದರೂ ಮಳೆ ನೀರು ಅಲ್ಪಸ್ವಲ್ಪ ಪ್ರಮಾಣದಲ್ಲಿ ಒಳನುಗ್ಗುತ್ತಿತ್ತು. ಪ್ಯಾಂಟು ಶರ್ಟ್ ಅಷ್ಟೇ ಅಲ್ಲ ಒಳಗಿನ ಬನಿಯನ್, ಚಡ್ಡಿಗಳೆಲ್ಲ ಒದ್ದೆ ಮುದ್ದೆಯಾಗುತ್ತಿದ್ದವು.

ಆದರೆ ಎಂಥ ಮಳೆಯಲ್ಲೂ ಬೈಕ್ ಓಡಿಸುವ ಮಜಾ ನಾನೆಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಮಳೆ ಜೋರಿದ್ದರೆ ಇನ್ನೂ ಮಜಾ! ಆದರೆ ಒಂದೇ ಒಂದು ತೊಂದರೆಯಿತ್ತು. ಮಳೆ ನೀರು ಬೈಕಿನ ಡಿಕ್ಕಿ ಪ್ರವೇಶಿಸಿ ನಂತರ ಡಿಕ್ಕಿಯಲ್ಲಿನ ಮೆಡಿಸಿನ್ ಬ್ಯಾಕ್ ಹೊಕ್ಕು ಅಲ್ಲಿದ್ದ ಇಂಜೆಕ್ಷನ್ ವಯಲ್‍ಗಳು (ಸಣ್ಣ ಬಾಟಲು) ತೊಯ್ದು ಹೋಗುತ್ತಿದ್ದವು. ವಯಲ್‍ಗಳ ಮೇಲಿನ ಲೇಬಲ್ಲುಗಳು ಒದ್ದೆಯಾಗಿ ಕಿತ್ತು ಬಂದುಬಿಡುತ್ತಿದ್ದವು.

10, 20, 30 ಮಿಲಿಲೀಟರ್‍ನ ವಿವಿಧ ಔಷಧದ ವಯಲ್‍ಗಳು ಒಂದೇ ಥರ ಇರುತ್ತಿದ್ದವು. ಲೇಬಲ್ಲಿಲ್ಲದ ಔಷಧವನ್ನು ಕಂಡು ಹಿಡಿಯುವುದು ಸಾಧ್ಯವಾಗುತ್ತಿರಲಿಲ್ಲ. ಇದನ್ನು ತಪ್ಪಿಸಲು ನಾನು ವಿವಿಧ ರೀತಿಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆ. ಆದರೂ ಮಳೆಗಾಲ ಮುಗಿಯುವ ತನಕ ಈ ಫಜೀತಿ ತಪ್ಪುತ್ತಿರಲಿಲ್ಲ.

ಇರಲಿ. ಪೀಟರ್‍ರವರ ಮನೆಗೆ ಹೋದಾಗ ಮೇರಿಯವರು ಮನೆಯಲ್ಲಿರಲಿಲ್ಲ. ಎಲ್ಲಿ ಹೋಗಿದ್ದಾರೆಂದು ಪೀಟರ್‍ಗೂ ಗೊತ್ತಿರಲಿಲ್ಲ. ನನ್ನನ್ನು ಒಳಗೆ ಕೂರಿಸಿ ಪೀಟರ್ ಟೈಗರನ್ನು ಹಿಡಿದು ತರಲು ಹೋದವರು ಎಷ್ಟು ಹೊತ್ತಾದರೂ ಬರಲಿಲ್ಲ. ಹೊರಬಂದು ಕಣ್ಣಾಡಿಸಿದೆ. ತೋಟದ ಮೂಲೆ ಮೂಲೆ ಹುಡುಕುತ್ತಾ ಪೀಟರ್‍ರವರು ಬಂದು “ಟೈಗರ್ ಎಲ್ಲೂ ಕಾಣಿಸುತ್ತಿಲ್ಲ. ನಿಮ್ಮನ್ನೇನಾದರೂ ನೋಡಿದರೆ ಅದು ಇವತ್ತು ಮನೆ ಸೇರುವುದಿಲ್ಲ. ನೀವು ಟೈಗರ್‍ಗೆ ಕಾಣದಂತೆ ಒಳಗೇ ಇರಿ. ಮೇರಿ ಎಲ್ಲಿ ಹೋಗಿದ್ದಾಳೆಂದು ಗೊತ್ತಿಲ್ಲ. ತೋಟದ ಮೂಲೆಯಲ್ಲಿ ಬೇರೆ ಯಾವುದೋ ನಾಯಿಯನ್ನು ಹಗ್ಗದಲ್ಲಿ ಕಟ್ಟಿದ್ದಾರೆ. ಅದು ಟೈಗರ್ ಅಲ್ಲ. ಯಾವುದೋ ಕಪ್ಪು ನಾಯಿ. ಮೇರಿ ಬಂದರೆ ಗೊತ್ತಾಗುತ್ತದೆ.” ಎಂದರು.

ಮತ್ತೆ ಕಾಲು ಗಂಟೆ ಕಾದು ಕುಳಿತೆವು. ಮೇರಿ ಬರಲಿಲ್ಲ. ಪೀಟರ್ ಮತ್ತು ನಾನು ಮತ್ತೊಮ್ಮೆ ಟೈಗರ್ ಹುಡುಕುತ್ತ ತೋಟದಲ್ಲಿ ಹೊರಟೆವು. ದನದ ಹಟ್ಟಿ ಮತ್ತು ಸುತ್ತಮುತ್ತ ಎಲ್ಲೂ ಕಾಣಲಿಲ್ಲ. ತೋಟದ ಒಂದು ಮೂಲೆಯಲ್ಲಿ ಮಾತ್ರ ಯಾವುದೋ ಕಪ್ಪು ನಾಯಿಯನ್ನು ಹಗ್ಗದಲ್ಲಿ ಕಟ್ಟಿದ್ದರು. ಅದರ ಹತ್ತಿರ ಹೋಗದೆ ದೂರದಿಂದಲೇ ವಾಪಸ್ ಬಂದೆವು. ಅದುವರೆಗೆ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಪ್ರಾರಂಭವಾಯಿತು.

“ಟ್ರೀಟ್‍ಮೆಂಟಿಗೆ ಬೇರೆ ಯಾರೋ ನಾಯಿಯನ್ನು ಕಟ್ಟಿ ಹಾಕಿರಬಹುದು. ಅಪರಿಚಿತ ನಾಯಿಯ ಹತ್ತಿರ ಹೋಗುವುದು ಬೇಡ” ಎಂದರು ಪೀಟರ್. ಕಪ್ಪು ಬಣ್ಣದ ನಾಯಿ ಹೊಸಬರಾದ ನಮ್ಮ ಉಸಾಬರಿಗೆ ಬರದೆ ಕಣ್ಣು ತಪ್ಪಿಸಿ ಕಟ್ಟಿಹಾಕಿದ್ದ ರಬ್ಬರ್ ಮರದ ಮರೆಗೆ ಸರಿಯಿತು. “ಪೀಟರ್ ಸರಿಯಾಗಿ ನೋಡಿ” ಎಂದೆ. “ನಮ್ಮದು ಕೆಂಪು ನಾಯಿ ಸಾರ್. ಇದು ಯಾರದ್ದೋ ಏನೋ? ಅದರ ಕಪ್ಪು ಬಣ್ಣ ನೋಡಿ. ಕಣ್ಣು ಬಿಟ್ಟು ಅದರಲ್ಲಿ ಬಿಳಿಯೆಂಬುದೇ ಇಲ್ಲ” ಎಂದರು.

ಅಷ್ಟು ಹೊತ್ತಿಗೆ ಮಳೆ ಜೋರಾಯಿತು. ಗೋಲಿಯಷ್ಟು ದೊಡ್ಡ ಗಾತ್ರದ ಮಳೆ ಹನಿಗಳು! ನಾವು ಮನೆಗೆ ಓಡಿ ಬರುವಷ್ಟರಲ್ಲಿ ಪೂರ್ತಿ ತೊಯ್ದೇ ಹೋದೆವು. ಮತ್ತೆ ಮೇರಿಯವರಿಗೆ ಕಾಯುತ್ತಾ ಕೂತೆವು. ಮಳೆ ಆರ್ಭಟ ಹೆಚ್ಚಾಯಿತು. ನಾಲ್ಕು ಅಡಿ ಆಚೆ ಏನಿದೆ ಎಂಬುದು ಗೊತ್ತಾಗದಂತೆ ದೆವ್ವ ಮಳೆ ಸುರಿಯತೊಡಗಿತು. ಪಕ್ಕದಲ್ಲಿ ತಗಡಿನ ಮಾಡಿನ ದನದ ಹಟ್ಟಿ ಭೀಕರ ಶಬ್ದ ಮಾಡತೊಡಗಿತು. ಅಷ್ಟೇನೂ ಭದ್ರವಿದ್ದಂತೆ ಕಾಣದ ಪೀಟರ್ ಮನೆ ಬಿದ್ದು ಹೋದರೇನು ಮಾಡುವುದು ಎಂದು ನನಗೆ ದಿಗಿಲಾಗತೊಡಗಿತು.

ಸುತ್ತಲೂ ಇದ್ದ ಮರಗಿಡಗಳು ತಮ್ಮ ಸರ್ವಸ್ವವನ್ನೂ ಮಳೆಗೆ ಒಡ್ಡಿಕೊಂಡು ನಿಶ್ಚಿಂತೆಯಿಂದ ತೋಯುತ್ತಿದ್ದವು. ತೊಟ್ಟಿಕ್ಕುತ್ತಿದ್ದವು. ಗಾಳಿಯೇ ಇರಲಿಲ್ಲ. ಮಳೆಯ ಹೊಡೆತಕ್ಕಷ್ಟೇ ಅಲುಗುತ್ತಿದ್ದ ಅವು ಇದಕ್ಕಿಂತ ಬೇರೆ ಸುಖವೇ ಇಲ್ಲ ಎಂಬಂತೆಯೂ, ತುರೀಯಾವಸ್ಥೆಯಲ್ಲಿದ್ದಂತೆಯೂ ತೋರಿದವು.

ಒಂದೈದು ನಿಮಿಷದಲ್ಲಿ ಎಲ್ಲೆಂದರಲ್ಲಿ ಸಣ್ಣ ದೊಡ್ಡ ಝರಿಗಳು ಹರಿಯತೊಡಗಿದವು. ನೂರಾರು ಕಡೆಯಿಂದ ಟಪ ಟಪ ಮಳೆ ಹನಿಯ ಶಬ್ದ, ನೂರು ಕಡೆ ನಲ್ಲಿಯಂತೆ ಒಂದೇ ಸಮನೆ ಸುರಿಯುವ ನೀರಿನ ಶಬ್ದ, ಹರಿಯುವ ನೀರಿನ ಶಬ್ದ, ಅಲ್ಲಲ್ಲಿ ಸಣ್ಣಪುಟ್ಟ ಗುಂಡಿಗಳಲ್ಲಿ ನೀರು ಧುಮ್ಮಿಕ್ಕುವ ಶಬ್ದ. ಇಡೀ ಜಗತ್ತೇ ಮಳೆಯ ಸಂಗೀತದಲ್ಲಿ ತುಂಬಿ ಹೋಯಿತು. ಎಷ್ಟು ಸಾವಿರ ವರ್ಷದಿಂದ ಇದು ಈ ರೀತಿ ನಡೆದು ಬಂದಿದೆಯೋ?

“ಮೇರಿ ಎಂದೂ ಈ ರೀತಿ ಮಾಡಿರಲಿಲ್ಲ.” ಎಂದರು ಪೀಟರ್. ಅವರಿಗೆ ಮೇರಿಯ ಮೇಲೆ ಬಹಳ ಸಿಟ್ಟು ಬಂದಂತಿತ್ತು. “ಸುಮ್ಮನೆ ನಿಮಗೆ ತೊಂದರೆ ಕೊಟ್ಟೆವು. ನಿಮ್ಮ ಸಮಯ ಹಾಳು ಮಾಡಿದೆವು. ಬೇಜಾರಾಗಬೇಡಿ ಸಾರ್” ಎಂದು ಪೀಟರ್ ಹೇಳುತ್ತಲೇ ಇದ್ದರು.

ಅರ್ಧ ಗಂಟೆಯ ನಂತರ ಮಳೆಯ ಅಬ್ಬರ ಕಡಿಮೆಯಾಯಿತು. ಸಮಯ ಸಂಜೆ ಐದು ಗಂಟೆಯ ಮೇಲಾಗಿತ್ತು. ನನಗೆ ಇನ್ನೂ ಒಂದೆರಡು ದೂರದೂರದ ಮನೆಗಳ ಭೇಟಿ ಬಾಕಿ ಇತ್ತು. “ನೀವು ಈಗ ಹೊರಡಿ ಸಾರ್. ಟೈಗರ್ ಎಲ್ಲೋ ತಪ್ಪಿಸಿಕೊಂಡು ಓಡಿದೆ. ಅದನ್ನು ಹಿಡಿದು ತರಲು ಮೇರಿ ಹೋಗಿರುವಂತಿದೆ. ಈ ಮಳೆಯಲ್ಲಿ ಅದು ಸಿಗುವುದು ಕಷ್ಟ. ಇನ್ನೊಮ್ಮೆ ಟ್ರೀಟ್‍ಮೆಂಟ್ ಮಾಡಿದರಾಯಿತು” ಎಂದರು ಪೀಟರ್. ಬೇರೆ ದಾರಿಯಿಲ್ಲದೆ ನಾನು ಮೆಡಿಸಿನ್ ಬ್ಯಾಗ್ ಎತ್ತಿಕೊಂಡು ಹೊರಟೆ. ಅಷ್ಟು ದೂರದಲ್ಲಿ ಮೇರಿಯವರೇ ಬರುತ್ತಿದ್ದಾರೆ!

ಮೇರಿಯವರನ್ನು ಕಂಡ ಕೂಡಲೇ ಪೀಟರ್ ಸಿಟ್ಟಾಗಿ ತುಳುವಿನಲ್ಲಿ ಭಯಂಕರ ಸ್ಪೀಡಾಗಿ ಬೈಯತೊಡಗಿದರು. ಬಹಳ ಮೆತ್ತನೆ ಸ್ವಭಾವದವರಾದ ಮೇರಿಯಮ್ಮ ಇದ್ದಕ್ಕಿದ್ದಂತೆ ಗಡಸು ವ್ಯಕ್ತಿತ್ವದವರಂತೆ ಮಾರ್ಪಾಟಾಗಿ ಅಷ್ಟೇ ರಭಸದಿಂದ ಉತ್ತರಿಸತೊಡಗಿದರು. “ಎಷ್ಟು ಹೊತ್ತೇ ಮನೆಯಿಂದ ನಾಪತ್ತೆಯಾಗುವುದು? ಡಾಕ್ಟರು ಬಂದು ಒಂದು ಗಂಟೆಯ ಮೇಲಾಯಿತು. ಹೋಗುವವಳು ನನಗೆ ತಿಳಿಸಿ ಹೋದರೆ ನಿಮ್ಮಪ್ಪನ ಗಂಟೇನು ಹೋಗುತ್ತದೆ?”

ಅದಕ್ಕೆ ಮೇರಿಯಮ್ಮ “ನೀನಿದ್ದರೆ ತಾನೇ ನಾನು ಎಲ್ಲಿಗೆ ಹೋಗುತ್ತೇನೆ, ಏಕೆ ಹೋಗುತ್ತೇನೆ ಎಂದು ಹೇಳುವುದು. ಡಾಕ್ಟರನ್ನು ಕರೆದುಕೊಂಡು ಬರುತ್ತೇನೆ ಎಂದು ಬೆಳಿಗ್ಗೆ 10 ಗಂಟೆಗೆ ಹೋದ ನೀನು ಮಧ್ಯಾಹ್ನ 3 ಗಂಟೆಯಾದರೂ ಬಂದಿಲ್ಲ. ನಾನು ನಿಮಗೆ ಕಾಯುತ್ತಲೇ ಮುದುಕಿಯಾದೆ. 3 ಗಂಟೆಗೆ ನಾನು ಹೋದದ್ದು ವರ್ಗೀಸರ ಮನೆಗೆ. ವರ್ಗೀಸರ ಮಗಳನ್ನು ನೋಡಲು ಮಂಗಳೂರಿನಿಂದ ನೆಂಟರು ಬರುವುದರಿಂದ ಅಲ್ಲಿಗೆ ಹೋಗುತ್ತೇನೆ ಎಂದು ನಾಲ್ಕು ನೂರು ಬಾರಿಯಾದರೂ ನಿನಗೆ ಹೇಳಿದ್ದೇನೆ. ಜನುಮದಲ್ಲಿ ಹೆಂಡತಿಯ ಮಾತುಗಳು ನಿಮ್ಮ ಕಿವಿಯ ಮೇಲೆ ಒಂದು ಸಲವಾದರೂ ಬಿದ್ದಿವೆಯೇ?”

ಮೇರಿಯಮ್ಮನ ಮೇಲೆ ಮಾತಿನಲ್ಲಿ ಗೆಲ್ಲುವುದು ಅಸಾಧ್ಯವೆಂದು ಅರಿತ ಪೀಟರ್ “ಆಯ್ತು ಮಾರಾಯ್ತಿ. ನಮ್ಮ ಟೈಗರ್ ಎಲ್ಲಿದೆ, ಅದನ್ನಾದರೂ ಹೇಳು” ಎಂದು ಕೂಗಿದರು. ಮೇರಿ “ನಿಮಗೆ ಕಿವಿಯಷ್ಟೇ ಮಿಸ್ಟೇಕ್ ಅಲ್ಲ. ನಿಮ್ಮ ಕಣ್ಣುಗಳೂ ಮಿಸ್ಟೇಕ್. ಇಲ್ಲಿಯೇ ಕಟ್ಟಿ ಹಾಕಿ ಹೋಗಿದ್ದೇನೆ” ಎಂದು ಹೊರಟರು. ಅವರ ಹಿಂದೆ ನಾವೂ ಹೆಜ್ಜೆ ಹಾಕಿದೆವು. ಕಪ್ಪು ನಾಯಿಯನ್ನು ಕಟ್ಟಿದ್ದ ಜಾಗಕ್ಕೆ ಬಂದೆವು.

ನನಗೂ ಪೀಟರ್ ಅವರಿಗೆ ಕಕ್ಕಾಬಿಕ್ಕಿಯಾಯಿತು. ಅಲ್ಲಿ ಕಟ್ಟಿ ಹಾಕಿದ್ದ ಕಪ್ಪು ನಾಯಿ ಬಣ್ಣ ಬದಲಾಯಿಸಿಕೊಂಡು ಕೆಂಪಾಗಿದೆ. ಅದು ಟೈಗರ್ ನಾಯಿಯೇ! ಮತ್ತೆ ಪೀಟರ್‍ಗೂ ಮೇರಿಗೂ ಜಟಾಪಟಿ ಶುರುವಾಯಿತು. ಅವರ ವಾಗ್ಯುದ್ಧದ ಸಾರಾಂಶ: ಆ ದಿನ ಮೇರಿಯಮ್ಮ ಟೈಗರ್‍ಗೆ ಇಂಜೆಕ್ಷನ್ ಮಾಡಿಸಲು 12 ಗಂಟೆ ತನಕ ಕಾದಿದ್ದಾರೆ. ಪೀಟರ್ ಡಾಕ್ಟರನ್ನು ಕರೆತರಲು ಆಸ್ಪತ್ರೆಗೆ ಹೋಗಿಯೇ ಇಲ್ಲ ಎಂದು ತೀರ್ಮಾನಿಸಿದ್ದಾರೆ. ತನ್ನ ಗಂಡ ನೂರಕ್ಕೆ ನೂರು ಸುಳ್ಳ ಎಂಬುದು ಮತ್ತೊಮ್ಮೆ ಸಾಬೀತಾಯಿತೆಂದುಕೊಂಡು, ಟೈಗರ್ ಬಗ್ಗೆ ಕನಿಕರ ಮೂಡಿದೆ.

ಆ ಗಳಿಗೆಗೆ ಸರಿಯಾಗಿ ಮೇರಿಯವರ ಜೀವ ಒದ್ದಾಡುವಂತೆ ಟೈಗರ್ ಪರ ಪರ ಮೈ ಕೆರೆದಕೊಂಡಿದೆ. ಗಂಡನ ಬಗ್ಗೆ ಸಿಟ್ಟು ಮತ್ತು ಟೈಗರ್ ಮೇಲಿನ ಅನುಕಂಪ ಉಕ್ಕಿ ಹರಿದು ಮೇರಿಯವರು ಕನಲಿ ಹೋಗಿದ್ದಾರೆ. ಪರಿಚಯದವರ ಮನೆಯಲ್ಲಿ ಡಬ್ಬದಲ್ಲಿ ತರಿಸಿದ್ದ ಟ್ರ್ಯಾಕ್ಟರಿನ ಇಂಜಿನ್ ಆಯಿಲ್ ಅನ್ನು ಎದುರಿಟ್ಟುಕೊಂಡು ಟೈಗರಿನ ಚರ್ಮದ ಬೆಲ್ಟನ್ನು ತೆಗೆದಿಟ್ಟಿದ್ದಾರೆ. ಮೈಗೆ ಇಂಜಿನ್ ಆಯಿಲ್ ಸವರಿದ್ದಾರೆ.

ಆ ಕರ್ರನೆಯ ಆಯಿಲ್ ದೇವರೇ ಕಳಿಸಿದ ದಿವ್ಯೌಷಧದಂತೆ ಗೋಚರಿಸಿ ಮತ್ತೊಮ್ಮೆ ಭಕ್ತಿಪೂರ್ವಕವಾಗಿ ಟೈಗರ್‍ನ ದೇಹಕ್ಕೆಲ್ಲ ಬಳಿದಿದ್ದಾರೆ. ಟೈಗರ್ ಮೈಮೇಲೆ ಒಂದು ಸೂಜಿ ಇಡಲು ಜಾಗವಿಲ್ಲದಂತೆ ಆಯಿಲ್ ಹಬ್ಬಿ ಕರ್ರಗೆ ಮಿಂಚುತ್ತಿರಲು ತಾವು ಸ್ನಾನ ಮಾಡಿ ವರ್ಗೀಸರ ಮನೆಯ ಕಾರ್ಯಕ್ರಮಕ್ಕೆ ತೆರಳಿದ್ದಾರೆ!

ಪೀಟರ್ “ನೀನು ಟೈಗರ್‍ನ ಬೆಲ್ಟ್ ಯಾಕೆ ತೆಗೆದೆ. ನಮಗೆ ಅದೇ ಮೋಸವಾಯಿತು.”

ಮೇರಿ “ಹೊಸ ಲೆದರ್ ಬೆಲ್ಟ್ ಹಾಳಾಗದಿರಲೆಂದು ತೆಗೆದೆ.”

ತನ್ನದು ನೂರಕ್ಕೆ ನೂರು ಸೋಲು ಎಂದು ಪೀಟರ್‍ಗೆ ಅರ್ಥವಾಯಿತು. ಭೀಕರವಾಗಿ ಸುರಿದ ಮಳೆ ಟೈಗರ್ ಮೈಮೇಲಿನ ದಿವ್ಯೌಷಧವನ್ನು ತೊಳೆದು ಹಾಕಿದ್ದರಿಂದ ಟೈಗರ್ ತನ್ನ ಮೂಲ ಬಣ್ಣಕ್ಕೆ ಬಂದಿದೆ.

ಪೀಟರ್ ಟೈಗರ್‍ನಿಗೆ ಸೋಪು ಹಚ್ಚಿ ಮೈ ತೊಳೆದು, ಟವಲ್ಲಲ್ಲಿ ಒರೆಸಿ ಬಿಗಿ ಹಿಡಿದರು. ನಾನು ಪರೀಕ್ಷಿಸಿ ಇಂಜೆಕ್ಷನ್‍ಗಳನ್ನು ಮಾಡಿದೆ. ಚರ್ಮಕ್ಕೆ ಲೋಷನ್ ಬರೆದುಕೊಟ್ಟೆ.

ಮನೆಯವರೆಲ್ಲರ ಪ್ರೀತಿ, ಆರೈಕೆ ಹಾಗೂ ಚಿಕಿತ್ಸೆಗೆ ಟೈಗರ್ ಸಂಪೂರ್ಣ ಗುಣವಾಯಿತು. ಇಂಜೆಕ್ಷನ್ ಮಾಡುತ್ತಿದ್ದ ನನ್ನನ್ನು ನೋಡಿದರೆ ಟೈಗರ್‍ನ ಮುಖದ ಮೇಲೆ ಮೂಡುತ್ತಿದ್ದ ಗಾಬರಿ, ಚಿರತೆಗೆ ಸಮಾನವಾದ ಅದರ ಓಟ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ.

‍ಲೇಖಕರು Avadhi

November 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: