ಹೊಲಿಯುವ ಕೈಗಳ ದರ್ದು…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ.

ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ.

ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ.

ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ ಸುಷ್ಮಿತಾ ‘ಮಣ್ಣಪಳ್ಳದ ಮೂಕಿಚಿತ್ರ’ದಲ್ಲಿ ಈ ಊರಿನ ಯಾರೂ ಕಾಣದ ಚಿತ್ರಗಳನ್ನು ಕಟ್ಟಿ ಕೊಡಲಿದ್ದಾರೆ.

“ನಾಳಿಗ್ ಮದಿ ಮನಿಗ್ ಹೊಯ್ಕ್ , ತಿಂಗಳ್ ಹಿಂದ್ ತಕ್ಕ ಬಂದ್ ಸೀರಿ ಇನ್ನೂ ಬದಿ ಹೋಲಿಲ್ಲ. ರವಿಕಿ ತುಂಡ್ ಅಲ್ಲೇ ಇತ್. ಒಂದ್ ರಾತ್ರಿ ಒಳಗ್ ನಿಂಗ್ ಇದೆಲ್ಲ ಸವಲತ್ ಮಾಡಿ ಕೊಡುಕ್ ನಿನ್ ಮಾವ ಇದ್ನ?” ಅಂತ ಅಮ್ಮ ನನ್ನ ಬೇಜವಾಬ್ದಾರಿಯನ್ನು ಹಳಿಯುತ್ತ ಬೈಯ್ಯ ತೊಡಗಿದ್ದಳು.

ಕೊನೆಗಳಿಗೆಯಲ್ಲಿ ಸೀರೆ ಉಡಬೇಕೆಂದು ನಿರ್ಧರಿಸಿದ್ದು ನನ್ನದೇ ತಪ್ಪು ಅಂತ ಗೊತ್ತಿದ್ದ ನಾನೂ ಒಂದೂ ಮಾತಾಡದೆ ಅಲ್ಲೇ ಕೂತಿದ್ದೆ. “ಸರಿ ಗುಡ್ಡಿಅಂಗಡಿ ಶಂಕರನ್ ಬುಡಕ್ ಹೊಯ್ ಬಾ. ನಾಳಿ ಸಾಯಂಕಾಲದ ಒಳಗೆ ಕೊಡ್ತನ ಕೇಣ್” ಅನ್ನುತ್ತಾ ಬೈಗುಳಗಳ ಹಿಂದೆಯೇ ನನ್ನ ಸಮಸ್ಯೆಗೆ ಪರಿಹಾರವನ್ನೂ ಅಮ್ಮ ಸೂಚಿಸಿದಳು.

ಹೊಲಿಯುವ ವೃತ್ತಿ ಕೇವಲ ಹೆಂಗಸರದ್ದು, ಮೊದಲೆಲ್ಲ ಗಂಡಸರದ್ದು ಎಂಬ ಚರ್ಚೆ ಇಲ್ಲವೇ ಇಲ್ಲ. ಅಲ್ಲಿ ದರ್ಜಿಯಾಗುವವರ ನೈಪುಣ್ಯತೆ ಕೈಗುಣಕ್ಕೆ ತಕ್ಕ ಹಾಗೆ ಅವರ ಉದ್ಯಮದ ಯಶಸ್ಸು ಕೈಗೆಟಕುತ್ತದೆ. ಹೊಲಿಗೆ ಮನೆಯ ಪಡಸಾಲೆಯಿಂದ ಹೊರಬಿದ್ದು,  ಊರಿನ ನಡು ಮದ್ಯಕ್ಕೆ ಸೇರಿ, ‘ದರ್ಜಿ’ ಊರಿನವರೆಲ್ಲರ ಬದುಕಿನ ಅಂಗವಾಗಿಯೇ ಬಿಟ್ಟಿರುವುದರ ಹಿಂದೆ ಇತಿಹಾಸವೇ ಇದೆ.

ಹೊಸ ಬಟ್ಟೆಯ ಜೊತೆಗೆ ಬರುತ್ತಿದ್ದ ಖುಷಿಯಲ್ಲಿ ದರ್ಜಿಯದ್ದೇ ಪ್ರಮುಖ ಪಾಲು. ಅಮ್ಮ ಅವರ ಬಾಲ್ಯದಲ್ಲಿ ಹಬ್ಬಕ್ಕೆ ಒಂದು ಬಾರಿ ಮಾತ್ರ ಸಿಗುತ್ತಿದ್ದ ಕೆಲ ಮೊಳಗಳ ಬಟ್ಟೆಯಲ್ಲಿಯೇ ಮನೆಯ ಹೆಣ್ಣು ಮಕ್ಕಳೆಲ್ಲರೂ ಒಂದೇ ರೀತಿಯ ಲಂಗ ರವಿಕೆಯ ಕಥೆ ಮತ್ತು ಅದು ತೊಟ್ಟಾಗೆಲ್ಲ ಕೊಡುತ್ತಿದ್ದ ಖುಷಿಯನ್ನು ಬಾಗಿಲು ತೆರೆದ ಕೂಡಲೇ ಮೈಮೇಲೆ ಬೀಳುವಷ್ಟು ತುಂಬಿರುವ ನನ್ನ ಬಟ್ಟೆ ಕಪಾಟನ್ನು ನೋಡಿದಾಗೆಲ್ಲ ಹೇಳುತ್ತಾಳೆ. ಅವರ ಕಾಲಕ್ಕೆ ನಾವುಂದದೂರಿಗೆ ಒಬ್ಬನೇ ಅಂತಿದ್ದ ಭಾಸ್ಕರ್ ಟೈಲರ್ ನ ಜಾಗವನ್ನು ಈಗಿನ ಯಾವ ದೊಡ್ಡ ಬಟ್ಟೆ ಅಂಗಡಿಗಳೂ, ಬುಟಿಕ್ ನ ಡಿಸೈನರ್ಸ್ ಕೂಡ ತುಂಬುವುದಿಲ್ಲ.

ಊರಿಗೊಬ್ಬರಂತಿದ್ದ ಟೈಲರ್ ಗಳು ಈಗ ಊರು ತುಂಬಾ ಆಗಿದ್ದಾರೆ. ಗಂಡಸರಷ್ಟೇ ಹೊರ ಬಂದು ದರ್ಜಿಗಳಾಗುತ್ತಿದ್ದ ಕಾಲ ಹೋಗಿ ಈಗ ಹೆಣ್ಣು ಮಕ್ಕಳೂ ಈ ಕ್ಷೇತ್ರವನ್ನು ಸಮಾನ ಹಂತದಲ್ಲಿ ತುಂಬಿಕೊಂಡಿದ್ದಾರೆ. ಮಣಿಪಾಲದಲ್ಲೂ ಫ್ಯಾಷನ್ ಲೋಕದ ಓಟದ ನಡುವೆ ದರ್ಜಿಗಳೂ ಬುಟಿಕ್ ಗಳ ಸಾಲನ್ನು ತೆರೆದಿಟ್ಟಿದ್ದಾರೆ.

ಆದರೆ ಇಷ್ಟು ವರ್ಷದಲ್ಲಿ ಮಣಿಪಾಲದಲ್ಲಿ ಎಲ್ಲಾದರೂ ನಮ್ಮೂರಿನ ಆತ್ಮೀಯತೆಯ ಟೈಲರ್ ಗಿರಿಯನ್ನು ಗಿಟ್ಟಿಸಿಕೊಳ್ಳಬಲ್ಲವರು ಯಾರಾದರೂ ಇದ್ದಾರಾ ಎಂದು ಹುಡುಕಿದ್ದೇನೆ. ಅಳತೆಗೆ ತಕ್ಕ ಹಾಗೆಯೇ ಹೊಲಿದುಕೊಡುವವರು ಒಂದಿಬ್ಬರು ಸಿಕ್ಕಿದ್ದರೂ, ನಮ್ಮೂರಿನ ಟೈಲರ್ ಎಂದೆನಿಸುವವರು ಯಾರೂ ಸಿಕ್ಕಿರಲಿಲ್ಲ.

ಎರಡು ವರ್ಷದ ಹಿಂದೆ ಅಕಸ್ಮಾತಾಗಿ ನನ್ನ ಹಳೆ ಕಾಲೇಜಿನ ಹತ್ತಿರದಲ್ಲಿಯೇ ಪ್ರದೀಪ್ ಮತ್ತು ರಂಜಿತ್ ಎಂಬ ಎರಡು ಹುಡುಗರು ಸಾಲು ಕೋಣೆಗಳಿರುವ ಹಳೆ ಕಟ್ಟಡದ ಮದ್ಯದಲ್ಲಿ ರೂಮು ಹಿಡಿದು ಉದ್ದಿಮೆ ಶುರು ಮಾಡಿದ್ದಾರೆ.  ಊರಿನ ಭಾಸ್ಕರ ಮತ್ತು ಶಂಕರ ಟೈಲರ್ ಗೆ ಪರ್ಯಾಯವಾಗಿ ಈ ಶಹರದಲ್ಲೂ ಅಷ್ಟೇ ಆತ್ಮೀಯತೆಯ ದರ್ಜಿ ಮುಖಗಳು ಕಾಣಲಿಕ್ಕೆ ಶುರು ಆಗಿದೆ.

ಕಾರ್ಯಕ್ರಮಕ್ಕೆ ಹೊರಡುವ ಕೊನೆ ಗಳಿಗೆಯಲ್ಲೂ ಯಾವ ಕುಂದೂ ಇಲ್ಲದೆ ಹೊಲಿದು ಕೊಡುವವರು ಸಿಕ್ಕಿದ್ದಾರೆ ಎಂಬ ನಂಬಿಕೆಯೂ ಬಂದಿದೆ.  ಈ ಇಬ್ಬರು ಹುಡುಗರು ಹೊಲಿದುಕೊಟ್ಟ ಬಟ್ಟೆಗಳಲ್ಲಿ ಯಾವುದೇ ಹುಡುಗಾಟಿಕೆಯ ಹೊಲಿಗೆಗಳಿಲ್ಲ. ಬದಲಾಗಿ  ಜವಾಬ್ದಾರಿ ತುಂಬಿದ, ತಾವು ಇಲ್ಲಿಯೇ ಬಹಳ ವರ್ಷ ಉಳಿಯಬೇಕು. ಈ ಊರಿನವರಿಗೆ ತಾವೂ ಅವಶ್ಯಕತೆ ಎನ್ನಿಸಬೇಕು ಎಂಬ ಹಟದ ಗಂಟುಗಳಿವೆ.  

ವಿದ್ಯಾರ್ಥಿಗಳು ಹಿಂಡು ಹಿಂಡಾಗಿಯೇ ಓಡಾಡುವ ದಾರಿಯಾದರೂ ಮಣಿಪಾಲಿಗಾರ ವಿಶ್ವಾಸ ಗಿಟ್ಟಿಸಿಕೊಳ್ಳೋದಕ್ಕೆ ಅವರಿಗೂ ಸಾಕಷ್ಟು  ಸಮಯ ತಾಗಿತ್ತು. ವಾರಕ್ಕೊಮ್ಮೆ ಶಾಪಿಂಗ್ ಮತ್ತು ದಾರಿಗೊಂದು ಬುಟಿಕ್ ಹುಟ್ಟಿಕೊಂಡಿರುವ ಕಾಲದಲ್ಲಿ ಬೆಳೆದಿರುವ ವಿದ್ಯಾರ್ಥಿಗಳು ತಮ್ಮ ಕಡೆಗೆ ಬರುತ್ತಾರೆ ಅನ್ನುವ ವಿಶ್ವಾಸ ಅವರಿಗಿಲ್ಲ.

ಆದರೆ ಒಂದಿಷ್ಟು ಸೀರೆ ವ್ಯಾಮೋಹಿಗಳು, ಎಥ್ನಿಕ್ ಡೇ, ಕಾಲೇಜ್ ಡೇ ಅಂತ ಬಂದಾಗಾ ಒಂದಿಷ್ಟು ವಿದ್ಯಾರ್ಥಿಗಳು, ಆಮೇಲೆ ಊರಿನ ಹೆಂಗಸರು ಹೀಗೆ ಸಂದರ್ಭಗಳನ್ನು ನಂಬಿ ಈ ಉದ್ದಿಮೆಯ ಸಾಹಸವನ್ನು ಕೈಗೊಂಡಿದ್ದರು. ಒಮ್ಮೆ ಬಂದರೆ ಅವರ ವಿಶ್ವಾಸವನ್ನು ಉಳಿಸಿಕೊಳ್ಳೋಕೆ ತಮ್ಮಿಂದಾದ ಪ್ರಯತ್ನ ಮಾಡೇ ಮಾಡುತ್ತೇವೆ ಅಂತ ಕೂತವರು ಎರಡು ವರ್ಷದಲ್ಲಿ ಸುಮಾರಷ್ಟು ಬೆಳೆದಿದ್ದಾರೆ.

ಮೊದಲಷ್ಟು ತಿಂಗಳು ವ್ಯಾಪಾರ ಕೂರಿಸಲಿಕ್ಕೆ ಒದ್ದಾಡುತ್ತಿದ್ದ ಇಬ್ಬರೂ ಸ್ನೇಹಿತರು ಈಗ ಮಣಿಪಾಲಿಗರಿಗೆ ಒಂದಿಷ್ಟು ಪರಿಚಿತರಾಗಿದ್ದಾರೆ. ಬಟ್ಟೆಗಳ ಗುಡ್ಡೆ ಅವರನ್ನ ಹುಡುಕಿಕೊಂಡು ಬರದೇ ಹೋದರು, ಬದುಕಿಗೆ ಆಧಾರ ಆಗುವಷ್ಟು ದುಡಿಮೆ ಅಂತೂ ಇದೆ. ಇಬ್ಬರೂ ಬೆಳಿಗ್ಗೆ ಎಂಟರಿಂದ ಮದ್ಯ ರಾತ್ರಿಯವರೆಗೂ ಅಂಗಡಿ ತೆರೆದೇ ಇಟ್ಟು ದುಡಿದ ದಿನಗಳಿವೆ. ಉತ್ಸಾಹವೇ ಮೈವೆತ್ತಂತಿರುವ ಹುಡುಗರಿಗೆ ಮನೆಯ ಜವಾಬ್ದಾರಿಗಳು ಹೆಗಲಿಗಿದೆ. ಆದರೆ ಅದಕ್ಕಿಂತ ಮಿಗಿಲಾಗಿ ಇದೇ ಶಹರದಲ್ಲಿ ಎಲ್ಲರಿಗೂ ಬೇಕಾದವರಾಗಿ ಗಟ್ಟಿ ನೆಲೆಯೂರುವ ಕನಸೇ ದೊಡ್ಡದಿದೆ.

ಉಡುಪಿ ಮಣಿಪಾಲದ ಸುತ್ತಮುತ್ತಲೇ ಹುಟ್ಟಿ ಬೆಳೆದ ಇಬ್ಬರೂ ಈ ವೃತ್ತಿ ಆಯ್ಕೆ ಮಾಡಿಕೊಳ್ಳೋದಕ್ಕೆ ಅವರ ಆಸಕ್ತಿ ಮತ್ತು ಬದುಕು ಕಟ್ಟಿಕೊಳ್ಳುವ ಒಂದು ದಾರಿ ಅನ್ನೋದನ್ನ ಬಿಟ್ಟರೆ ಬೇರೇನೂ ಕಾರಣಗಳಿಲ್ಲ. ನಿಷ್ಠೆ ಮತ್ತು ಹಠ ಇಬ್ಬರನ್ನೂ ಕೈ ಹಿಡಿದು ಒಂದು ಹಂತಕ್ಕೆ ತಂದು ನಿಲ್ಲಿಸಿದೆ. ಹೆಂಗಳೆಯರ ಜಗತ್ತನ್ನು ಅರಿತು, ಅವರಿಷ್ಟದಂತೆ ಮೈಗೊಪ್ಪುವ ಬಟ್ಟೆ ಹೊಲಿದು ಕೊಡುವ ಕಾಯಕ ಈಗ ಅವರಿಗೂ ಕೈಗೂಡಿದೆ.

ದಾರಿ ದಾರಿಯಲ್ಲೂ ಇರುವ ಡಿಸೈನರ್ ಶಾಪ್ ಗಳ ಮದ್ಯವೇ ಇವರೂ ತಮ್ಮ ಗುರುತು ಉಳಿಯುವುದನ್ನು ಖಾತ್ರಿ ಮಾಡಿಕೊಳ್ಳುತ್ತಿದ್ದಾರೆ. ಹೊಸ ಜಮಾನಿಗರ ಆಸಕ್ತಿಗೆ ತಕ್ಕಂತ ಕೈಚಳಕವನ್ನೂ ರೂಢಿಸಿಕೊಂಡಿದ್ದಾರೆ. ಮದುವೆ, ಹಬ್ಬ ಅಂತೆಲ್ಲ ಬಂದಾಗಂತೂ ದಣಿವರಿಯದೆ ದುಡಿದರೆ ದಿನದ ಖರ್ಚನ್ನು ಹೊರತು ಪಡಿಸಿ, ಒಂದಿಷ್ಟು ಉಳಿತಾಯ ಅವರ ಕೈಗೆಟಕುವುದು ಅವರಿಗೆ ಇಡೀ ವರ್ಷದಲ್ಲಿ ಅತೀ ಸಂತೋಷ ತರಿಸುವ ವಸಂತ.

ಮೊನ್ನೆ ನನ್ನಜ್ಜಿ ಬದುಕಿರುವಷ್ಟೂ ವರ್ಷ ಅವರ ಬಟ್ಟೆಗಳನ್ನು ತಪ್ಪದೆ ಹೊಲಿದುಕೊಡುತ್ತಿದ್ದ ಗುಡ್ಡೆ ಅಂಗಡಿಯ ಶಂಕರ್ ಟೈಲರ್ ಹತ್ತಿರ ಹೋಗಿದ್ದೆ, “ಸೀತಮ್ಮ ಶೆಡ್ತಿಯವರ ಮಗನ ಮಗಳ?” ಅಂತಾ ಅನ್ಯೋನ್ಯತೆಯಲ್ಲಿ ಮಾತಾಡಿ ನಿಮ್ಮ ಅಳತೆ ರವಿಕೆ ಕೊಟ್ಟು ಕಳಿಸಿ ಅಷ್ಟೇ, ನೀವು ಹೇಳಿದ ಹಾಗೆಯೇ ಹೊಲಿದುಕೊಡುವ ಎನ್ನುತ್ತಾ “ನಿಮ್ ಅಜ್ಜಿಗೂ ನಾನೇ ಲಂಗ ರವಿಕಿ ಹೋಲ್ ಕೊಡ್ತಾ ಇದ್ದದ್. ಒಂದ್ ದಿನ ಸಯ್ತ ‘ಇದೆಂತ ಶಂಕರ ಸಮ ಅಯ್ಲಿಲ್ಲ’ ಅಂದ್ ಹೇಳದ್ ಇಲ್ಲ ಕಾಣಿ. ಆರೇ ನಾ ಇನ್ನೂ ನಿಮ್ ಅಜ್ಜಿ ಕಾಲ್ದಂಗೆ ಉಲ್ಕಂಡ್ ಇಲ್ಯೆ. ನೀವ್ ಹಾಕುವಂಗಿನ್ ಕಟೋರಿ, ಬ್ಲಾಕ್ ಲೆಸ್ ಎಲ್ಲ ಕಲ್ತಿನ್ಯೆ. ನಿಮ್ಮ ಅಜ್ಜಿಯ ಟೈಲರ್ ಅಂತ ಸಸಾರ ಮಾಡಬೇಡಿ ಅಂದು ನಕ್ಕ.” ಆ ಹಿರಿಯನ ಅತೀ ನಿಷ್ಠೆಗೆ ಒಲಿದು ತೆಗೆದುಕೊಂಡು ಹೋಗಿದ್ದ ಐದೂ ಸೀರೆ ರವಿಕೆಗಳನ್ನ ಅವನ ಬಳಿಯೇ ಹೊಲಿಯಲು ಕೊಟ್ಟು ಬಂದೆ.

ಅದೇ ಮಾರನೇ ದಿನ ದಾರಿಯಲ್ಲಿ ಸಿಕ್ಕ ರಂಜಿತ್ “ಮೇಡಂ, ಈ ಸಾರಿ ಹೊಲಿಯಲಿಕ್ಕೆ ಕೊಡದೆ ಸುಮಾರು ಸಮಯ ಆಯ್ತಲ್ಲ.” ಎಂದು  ಕೇಳಿದಾಗ ನಮ್ಮೂರಿನ ಶಂಕರ್ ಟೈಲರ್ ಭೇಟಿಯ ಕಥೆ ಹೇಳಿಯೇ ಬಿಟ್ಟೆ. ಒಂದಿಷ್ಟೂ ಕುಂದದೆ.

ಹಳ್ಳಿಗಳಲ್ಲಿ ಊರಿನ ಅತೀ ಮೆಚ್ಚುಗೆಯ ಟೈಲರ್ ಗಳು ಬದುಕಿರುವಷ್ಟೂ ಕಾಲ ಊರಿಗರ ಬದುಕಿನ ಭಾಗವಾಗಿಯೇ ಉಳಿದು ಬಿಡುತ್ತಾರಲ್ಲ ಹಾಗೆಯೇ ನಾವೂ ಮಣಿಪಾಲದ ಖುಷಿಯ ಭಾಗವಾಗಿ ಇರುವಷ್ಟೂ ದಿನ ಉಳಿದು ಬಿಡಬೇಕು ಎಂದ. ನಾನೂ ಇದ್ದ ಐದರಲ್ಲಿ ಎರಡು ರವಿಕೆ ಆದರೂ ಇವರ ಹತ್ತಿರ ಹೊಲಿಸಬಹುದಿತ್ತು ಎನ್ನಿಸಿ, ತಲೆ ಅಲ್ಲಾಡಿಸಿದೆ.

ಬಟ್ಟೆಗಿಡುವ ಗುಂಡಿಯ ತುದಿಯಲ್ಲಿ ದಪ್ಪಕ್ಕೆ ಗಂಟಿರಲಿ

ಅದೇ ಸುಲಭದಲ್ಲುದುರಿ ಹೋಗದಂತೆ.

ನಡು ನಡುವೆ  ಗಾಢ ಚುಕ್ಕಿಗಳ ಹಂಗಿರಲಿ ಚಂದಕ್ಕೆ

ಹಾಗೆ ಬಾಳಿಕೆಯ ನೂಲಿರಲಿ, ಬಹುಕಾಲ ಬರಬೇಕು.

ಸ್ವಂತದ್ದಲ್ಲವೇ ಹಾಗೆ!                                                                             (ಸ್ವಂತದ್ದಲ್ಲವೇ ಹಾಗೆ, ೨೦೧೭)

November 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: