ಮಲ್ಲಿಕಾರ್ಜುನಗೌಡ ತೂಲಹಳ್ಳಿ ಅವರ ಎರಡು ಹೊಸ ಕವಿತೆಗಳು

ಮಲ್ಲಿಕಾರ್ಜುನಗೌಡ ತೂಲಹಳ್ಳಿ

—–

ಎಕ್ಸಿಟ್ ಲೈಟಿನ ಕಣ್ಣು

ಹೋದರೆ ಸಲ್ಲುವುದಿಲ್ಲ
ಎಕ್ಸಿಟ್ ಲೈಟಿನ ಕಣ್ಣು
ಸದಾ ಕೆಂಪು

ಚಳಿಗೆ ಉಣ್ಣೆ ರಗ್ಗು
ಕೊಳ್ಳಲಿಲ್ಲದೆ ಕಾಸು
ತಿಪ್ಪೆ ಕಸಕೆ ಬೆಂಕಿಯಿಕ್ಕಿ
ಗಬ್ಬು ವಾಸನೆಯಲ್ಲೇ
ಕಾವು ಪಡೆದುಕೊಳ್ಳುವ ಜೀವ
ರಾತ್ರಿ ನಡು ಬೀದಿಯಲ್ಲಿ
ಎರಡೂ ತೋಳಗಲಿಸಿದ ಏಸು

ಅವನ ಹತ್ತಿರ ಸುಳಿಯಲಾಗದ
ನಗರದ ಬೌ ಬೌ ನಾಯಿ
ದೂರದಲ್ಲೇ
ಅವನ ಅನಂತ ವಾಸನೆಗಳ ಮೂಸಿ
ಏನೂ ತಿಳಿಯದ ಗೊಂದಲದಲ್ಲಿ
ಮಂಗ ಮಾಯ

ಬೆಚ್ಚನೆಯ ಹೊದಿಕೆಯಲಿ
ಆಗಷ್ಟೇ ಅರಳುವ ಕನಸು
ಸುರಿವ ಮಸಕು ಮಂಜಿಗೆ ಹೆದರಿ
ಮತ್ತೆ ಮುರುಟಿ
ನಿದ್ದೆಯೆಂಬ ಕೋಮಾದಲ್ಲಿ
ಚಳಿಯ ಬೆದರಿಸಿ
ಬೆಳಗು ಮಾಡಿದವನ ಕುಣಿತ

ಮೊಬೈಲ್ ಅಲರಾಮಿಸಿ
ಮೂಡಣದ ತುಟಿಗಳು
ರಂಗು ಬಳಿಯುತ್ತಿವೆ
ಸಿಟಿ ಬಸ್ ನಿಲ್ದಾಣದಿಂದ
ಆಫೀಸಿನವರೆಗೆ ಅಭಿನಯಿಸಲು

ಅವನೋ
ಮತ್ತದೇ
ಹೊಸ ಕಟ್ಟಡಕೆ ನೀರು ಬಿಟ್ಟು
ಈಗಷ್ಟೇ ಮಹಡಿ ಇಳಿದು
ರುಚಿಗೆಟ್ಟ ಚಹಾದಲ್ಲಿ
ಚಳಿ ತಡೆಯುತ್ತಿರುವನು

ಚಳಿಗಾಲದಲ್ಲಿ ನಾನು

ಚಳಿಗಾಲದಲ್ಲಿ ನಾನು
ಗಿಡಗಳ ಸಂಗಡ ಮಾತಾಡುತ್ತೇನೆ
ನಿಜವೋ ಸುಳ್ಳೋ
ಗಿಡಗಳೊಂದಿಗೆ ಮಾತಾಡುವುದೆಂದರೆ
ಮೌನದ ನಾನಾ ಮಜಲ ದಾಟುವುದು
ಕಣ್ಣ ಕುಗ್ಗಿಸಿ ಸಣ್ಣ ಸಣ್ಣ ಗೆರೆ ಗುರುತ
ನೋಡುತ್ತ ನೋಡುತ್ತ

ಆಗುತ್ತದೆ
ತುಟಿಯಲುಗದ ಮಾತಿನಲ್ಲಿ
ಗೆರೆ ಗೆರೆ ಕೂಡಿ
ಗುಳಿಸುತ್ತಿ ಸುಕ್ಕಿ
ನಗು ಅಳುವಿಗೆ ನಿಲಕದ್ದು
ಬಯಲ ಹಿನ್ನೆಲೆಗೆ

ಬೂಜುಗಟ್ಟಿದ ತೊಟ್ಟು
ಕರಿ ಮಚ್ಚೆ
ಕಂದು ಕಲೆ
ಮುನಿದು ಮರುಟಿದ ಎಲೆ
ಮುದಿ ತುದಿಯ ಚೂಪು
ಸೆಣಸಿದೆ ಗಾಳಿ ಜೊತೆ
ಒಳಗಿನದೇನೋ ತೆಗೆದು ನಾನೂ
ಭಾರ ಬೆರೆತು
ಕರುಳು ಜಿನುಗಿ
ನಡು ಮಧ್ಯಾಹ್ನದಲ್ಲೇ
ಮಂಜು ಕವಿದು
ಕುಕ್ಕರಿಸಿದೆ
ಕೆಳಗಿನಿಂದ
ಮೇಲೆ ನೋಡುತ್ತ ಎಲೆಯ

ನೋಡುವುದು
ಮಾತಿಗೆನ್ನುವುದಕ್ಕಿಂತ
ಎದೆಯ ಸೋರೆಗೆ ಸುರಿದು
ಒಂದಷ್ಟು ಒಮ್ಮೆ
ಮತ್ತಷ್ಟು ಇನ್ನೊಮ್ಮೆ
ಏನಾದರೂ ಆದಾಗೆಲ್ಲಾ
ಒಳಗೇ ಅಂದಕೊಳ್ಳುತ್ತ
ಭುಜದಿಂದ ಮುಂಗೈವರೆಗೆ
ನನ್ನ ನಾ ಸವರಿ ಸಾವರಿಸಿಕೊಳ್ಳುವುದು

ಹೌದು
ಈತನಕ
ನಲವತ್ತಕ್ಕೂ ಮಿಕ್ಕಿದ ಚಳಿಗಾಲದಲ್ಲಿ
ಕಣ್ಣುಂಡ ಎಲೆಗಳು
ನನ್ನ ಮೌನ ಗುಮ್ಮಟದಲ್ಲಿ
ಪಿಸುನುಡಿಯುತ್ತಿವೆ
ಅವುಗಳ ಸಂಗದಲ್ಲಿ
ನಾನಿನ್ನೂ
ಆಗಬೇಕಿದೆ

‍ಲೇಖಕರು avadhi

November 23, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: