ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚುನಾವಣಾ ಸ್ಪೆಷಲ್: ಹೀಗೂ ಉಂಟು!

ನಾ ಕಂಡೆ ನಿಜ ನಾಡೊಂದನ್ನು

ನಾಗರಾಜ್ ಹೆತ್ತೂರು

`ಚುನಾವಣಾ ಪ್ರಚಾರಕ್ಕೆ ಹೋದರೆ ಜನ ಹೇಗೆ ರಿಯಾಕ್ಟ್ ಮಾಡುತ್ತಾರೆ..?’ ಈ ಕುತೂಹಲ ನನಗೆ ಸಾಕಷ್ಟು ದಿನದಿಂದ ಕಾಡುತ್ತಿತ್ತು. ಎಲ್ಲೋ ಕುಳಿತು ಯಾರ ಬಗ್ಗೆಯೋ ಅಥವಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಬರೆಯುವ ಬದಲು ನಿಜಕ್ಕೂ ಕ್ಷೇತ್ರದ ಸ್ಥಿತಿ ಹೇಗಿದೆ, ಜನ ಹೇಗಿದ್ದಾರೆ, ಜಾನುವಾರುಗಳ ಕತೆ ಏನು..? ರಸ್ತೆ, ಕಾಡು, ನೀರು ಎಂಬ ಬಗ್ಗೆ ಖುದ್ದು ನೋಡುವ ಚಿಂತನೆ ಮನಸಲಿತ್ತು.

ಸಕಲೇಶಪುರ-ಆಲೂರು- ಕಟ್ಟಾಯ. ಇದೊಂದು ಮೀಸಲು ಕ್ಷೇತ್ರ. ಏನಿಲ್ಲವೆಂದರೂ 180 ಕಿ. ಮೀ ಸುತ್ತಳತೆ. ಇಡೀ ರಾಜ್ಯದಲ್ಲೇ ದೊಡ್ಡ ಕ್ಷೇತ್ರ. ಸಾಮಾನ್ಯವಾಗಿ ನಮ್ಮ ಮಲೆನಾಡಿನ ಹಳ್ಳಿಗಳೆಂದರೆ ಹಾಗೆ. ಎಲ್ಲೊ ಒಂದೊಂದು ಮನೆ, ಹೆತ್ತೂರು, ಬಿಸಲೆ, ಹೊಂಗಡಹಳ್ಳ, ಹಾನುಬಾಳು ಹೋಬಳಿಗಳಿಗೆ ಹೋದರೆ ಗುಡ್ಡದಲ್ಲಿ ಮನೆ ಕಟ್ಟಿಕೊಂಡಿರುತ್ತಾರೆ. ಅಲ್ಲಿಗೆ ಅಬ್ಯರ್ಥಿಗಳು ಹೋಗುವುದಿರಲಿ. ` 20 ಮತಗಳಲ್ವಾ ಹೋಗ್ಲಿ ಬಿಡು ಅದಕ್ಕೆ ಅಲ್ಲಿತಂಕ ಹುಡುಕಿಕೊಂಡು ಹೋಗುವುದೇ’ ಎಂದು ಸುಮ್ಮನಾಗಿ ಬಿಡುತ್ತಾರೆ. ನನಗಂತೂ ನಮ್ಮ ಅಬ್ಯರ್ಥಿಯ ಪರ ಪ್ರಚಾರಕ್ಕಿಂತ ಮುಖ್ಯವಾಗಿ ಒಂದು ಕ್ಷೇತ್ರದ ಸಮಸ್ಯೆಗಳೇನು..? ಹಿಂದಿನವರು ಎಲ್ಲಿ ರೀಚ್ ಆಗಿದ್ದಾರೆ..? ಎಲ್ಲಿ ಆಗಿಲ್ಲ ಎಂಬ ಬಗ್ಗೆ ಖುದ್ದು ನೋಡುವ ಕುತೂಹಲ. ಆ ಕಾರಣಕ್ಕಾಗೇ ‘ಯಾವ ಹಳ್ಳಿ, ಕಾಲೂನಿಗಳನ್ನು ಬಿಡಬಾರದು ಒಂದೊಂದು ಓಟ್ ಕೂಡ ಇಂಪಾರ್ಟೆಂಟ್ ಆಗಿರುತ್ತವೆ ಸಾರ್’ ಎಂದು ನಮ್ಮ ಅಬೈರ್ಥಿಗೆ ಹೇಳಿ ಹೊರಟೆವು. ಅದು ಯಾವ ಮಟ್ಟಕ್ಕೆ ಹೋಯಿತು ಎಂದರೆ ಸ್ವತಃ ನಮ್ಮ ಅಬ್ಯರ್ಥಿಗೆ ಬೇಸರ ಆಗುವಷ್ಟು ಸುತ್ತಲು ಪ್ರಾರಂಭಿಸಿದೆವು.

ಅದು ಸಕಲೇಶಪುರದ ಹಾನುಬಾಳು ಹೋಬಳಿ. ಈ ರಸ್ತೆಯಲ್ಲಿ ಈಗ 5 ಕಿ. ಮೀ ಗೊಂದರಂತೆ ಹೋಂ ಸ್ಟೇ, ರೆಸಾರ್ಟ್ ಗಳು ಸಿಕ್ಕುತ್ತವೆ. ನೀವು ಹಾಗೆ ಸುಮ್ಮನೆ ಆನ್ ಲೈನ್ ನಲ್ಲಿ ಬುಕ್ ಮಾಡಿಕೊಂಡು ಬರಬಹುದು. ಈ ಸುಂದರ ಪರಿಸರದಲ್ಲಿ ಬೆಂಗಳೂರಿನಿಂದ ಉದ್ಯಮಿಗಳು ಬಂದು ರೆಸಾರ್ಟ್ ಸ್ಥಾಪನೆ ಮಾಡುತಿದ್ದಾರೆ. ಹರಿಯುವ ನೀರಿಗೆ ಕಟ್ಟೆ ಕಟ್ಟಿಕೊಂಡು ಜಲಪಾತಗಳನ್ನು ಮಾಡಿಕೊಂಡು ಹೊರಗಿನವರನ್ನು ರಂಜಿಸುತಿದ್ದಾರೆ. ಬಹುಶಃ ಈ ಪ್ರದೇಶ ನೋಡಿದರೆ ಎಂಥಹವರಿಗೂ ಇದೊಂದು ನೀರಿಲ್ಲದ ಪ್ರದೇಶ ಎನ್ನಿಸಲಾರದು.

ಹಾನುಬಾಳು ಸಮೀಪ ಒಂದು ಗ್ರಾಮವಿದೆ ಹೆಸರು ಚಿಗಳ್ಳಿ 60 ರಿಂದ 70 ಕುಟುಂಬಗಳಿರುವ ಗ್ರಾಮ. ದುರಂತ ಎಂದರೆ ನಾವು ಹೋದ ಹಿಂದಿನ ಇದೇ ಗ್ರಾಮದ ವ್ಯಕ್ತಿಯೊಬ್ಬ ಹಿಂದುಳಿದ ಜನಾಂಗಕ್ಕೆ ಸೇರಿದವ (ಅಲೆಮಾರಿ: ಯಾವಾಗಲೋ ಇಲ್ಲಿ ಬಂದು ನೆಲೆಸಿದ್ದಾತ ಇಲ್ಲಿಯವನೇ ಆಗಿದ್ದ) ಇಲ್ಲಿನ ಹೋಂಸ್ಟೇ ಗೆಂದು ರಸ್ತೆ ಅಗಲ ಮಾಡುವ ಕೆಲಸಕ್ಕೆ ಹೋಗಿದ್ದಾನೆ. ಈ ಮಧ್ಯೆ ಟ್ರಾಕ್ಟರ್ ಚಕ್ರ ಹೊಂಡವೊಂದಕ್ಕೆ ಇಳಿದು ಸಿಕ್ಕಿಕೊಂಡಿದೆ. ಚಕ್ರ ಮೇಲೆ ಹತ್ತಲು ಅದರಡಿ ಮರದ ತುಂಡು ಕೊಡುವಾಗ ಟ್ರಾಕ್ಟರ್ ಟೈರ್ ಈತನ ಮೇಲೆ ಹತ್ತಿ ಸ್ಥಳದಲ್ಲೇ ಮೃತಪಟ್ಟಿದ್ದ.

ವಿಚಾರ ತಿಳಿದು ಹಿಂದಿನ ದಿನ ತಾಲೂಕು ಆಸ್ಪತ್ರೆಗೆ ಹೋಗಿದ್ದೆವು. ನಾಳೆ ಗ್ರಾಮಕ್ಕೆ ಹೋಗೋಣ ಜನ ಸೇರಿರುತ್ತಾರೆ ಒಂದಿಷ್ಟು ಪ್ರಚಾರ ಆದರೂ ಸಿಕ್ಕುತ್ತದೆ ಎಂಬ ನಾಯಕರ ಮಾತಿಗೆ ಓಗೊಟ್ಟು ಹೋಗಿದ್ದೆವು. ಅದೊಂದು ಕುಗ್ರಾಮ ರಸ್ತೆ ಇಲ್ಲವೇ ಇಲ್ಲ. ಕಲ್ಲು, ಮಂಟಿ ಹತ್ತಿಕೊಂಡು ಹೋಗಬೇಕು. ನಮ್ಮನ್ನು ಕೂರಿಸಿಕೊಂಡಿದ್ದ ಇನ್ನೋವಾ ಡ್ರೈವರ್ ಗೆ ಕಣ್ಣಿರು ಹಾಕುವುದೊಂದೇ ಬಾಕಿ. 15 ವರ್ಷದಿಂದ ಆ ಗ್ರಾಮಕ್ಕೆ ರಸ್ತೆ ಇಲ್ಲ. ಬಂದವರು ಇತ್ತ ಬರುವುದೇ ಇಲ್ಲ. ಆದರೆ ಈಗ ಸಾವಿನ ನೆಪ ಇಟ್ಟುಕೊಂಡು ಬಂದೇ ಬರುತ್ತಾರೆ ಎಂದು ಗ್ರಾಮದವರು ಕಾದಿದ್ದರು. ಈ ವಿಚಾರ ತಿಳಿಯದ ನಾವು ನಮ್ಮ ನಾಯಕರೊಂದಿಗೆ ಗೆಲುವಿನಿಂದಲೇ ಹೋದೆವು. ಆದರೆ ಅಲ್ಲಿ ನಮ್ಮನ್ನು ನಡೆಸಿಕೊಂಡ ಪರಿ ಮತ್ತು ಅವರ ಪರಿಸ್ಥಿತಿ ನಿಜಕ್ಕೂ ಶೋಚನೀಯ.

ಅಲ್ಲಿದ್ದ ರಾಮಕ್ಕ ಎಂಬ 60 ರ ಆಸುಪಾಸಿನ ಅಮ್ಮ ` ನಮ್ಮನ್ನು ನೋಡಿ’ ಯಾಕೆ ಬಂದ್ರಿ ನಮ್ ಹೆಣ ನೋಡಾಕಾ? ಎಂದಳು. ಆ ನೋಟ ನನಗೆ ನಮ್ಮ ಬಗ್ಗೆಯೇ ಅಸಹ್ಯ ಮೂಡಿಸಿತು. ಸಾವಿನ ಮನೆಗೆ ಬಂದು ರಾಜಕಾರಣ ಮಾಡಬೇಕೆ..? ಎಂದು ನನಗೇ ಮುಖಕ್ಕೆ ಹೊಡೆದಂತಾಯಿತು. ಅಮ್ಮಾ ನೀರಿದ್ರೆ ಕೊಡ್ತೀರಾ..? ಎಂದೆ. ಅದಕ್ಕವಳು ಹೇಳಿದ್ದು ಇಲ್ಲಿ ನೀರಿಗೆ ಕಷ್ಟ ಕಣ್ರಪ್ಪಾ.. 3 ಕಿ.ಮೀ ಹೋಗಿ ತರಬೇಕು. ಈ ಗುಡ್ಡದಲ್ಲಿ ಒಂದು ಕೊಡ ನೀರಿಗೂ ಕಷ್ಟ ಕಣ್ರಪ್ಪಾ ಎಂದಳು. ಕುಡಿವ ನೀರಿಗೂ ಈ ಭಾಗದಲ್ಲಿ ಇಷ್ಟು ಕಷ್ಟವೇ..? ನನಗೆ ಅಚ್ಚರಿಯಾಯಿತು. ಆದರೂ ಆ ತಾಯಿ ಲೋಟದಲ್ಲಿ ನೀರು ತಂದಳು. ಹೆಚ್ಚು ಕುಡಿಯುವ ಮನಸಿದ್ದರೂ ಕೇಳದೆ ಸುಮ್ಮನಾದೆ.

ಅಲ್ಲೊಬ್ಬ ಸೈಕಲ್ ಗೆ ಎರಡೂ ಕಡೆ ಹಗ್ಗ ಕಟ್ಟಿಕೊಂಡು ನೀರು ತರುತ್ತಿದ್ದ. ಆಗ ತಾನೆ ರೆಸಾರ್ಟ್ ಮಾರ್ಗವಾಗಿ ಬಂದ ನಮಗೆ `ಹೀಗೂ ಇದೆಯಾ ಪರಿಸ್ಥಿತಿ’ ಎಂದು ಅಸಹನೆ ಉಂಟಾಯಿತು. ಇನ್ನು ಇಲ್ಲಿ ಸತ್ತರೆ ಯಾರೂ ಕೆಳುವರಿಲ್ಲ. ಒಂದು ವೇಳೆ ಏನಾದರೂ ಹುಷಾರು ತಪ್ಪಿದರೆ ಖುದ್ದು 108 ಕೂಡ ಇಲ್ಲಿಗೆ ಬರುವುದಿಲ್ಲ. ದಯವಿಟ್ಟು ಹಾನುಬಾಳು ವಿಗೆ ಬನ್ನಿ ಅಲ್ಲಿಂದ ಕರೆದುಕೊಂಡು ಹೋಗುತ್ತೇವೆ ಎಂದು ಸ್ವತಃ 108 ನವರೇ ಹೇಳುತ್ತಾರಂತೆ. ಇಂತಹ ಪರಿಸ್ಥಿತಿಯಲ್ಲಿ ಬದುಕುತಿದ್ದೇವೆ ಎಂದು ಅಲ್ಲಿದ್ದ ಲೋಕೇಶ ಹೇಳಿದಾಗ ನಮಗೆ ಮರುಮಾತನಾಡುವ ಅಧಿಕಾರ ಇರಲಿಲ್ಲ. ಅಥವಾ ನಾವು ಅಧಿಕಾರಕ್ಕೆ ಬಂದರೆ ಸರಿ ಮಾಡುತ್ತೇವೆ ಎಂದು ಹೇಳುವ ಧೈರ್ಯ, ಭರವಸೆಯೂ ನಮ್ಮಲ್ಲಿ ಉಳಿದಿರಲಿಲ್ಲ. ಇಂತಹ ಸುಮಾರು ಗ್ರಾಮಗಳಿದ್ದಾವೆ ಎಂದಾಗ ಅಮಗೆ ಅಚ್ಚರಿ ಜೊತೆ ಆತಂಕವೂ ಶುರುವಾಯ್ತು.

`ಹಾಲಿ ಶಾಸಕರನ್ನು ಕಾಡುಮನೆಯಲ್ಲಿ ಕಟ್ಟಿ ಹಾಕೊಂಡಿದ್ದಾರಂತೆ,,,! ಕೂಡಿ ಹಾಕಿದ್ದಾರಂತೆ, ಹೆಣ್ಣು ಮಕ್ಕಳು ಪೊರಕೆ ಹಿಡಿದುಕೊಂಡಿದ್ದರಂತೆ..! ಇಂತಹ ಸುದ್ದಿಗಳು ಹರಿದಾಡುತ್ತಿದ್ದರಿಂದ ಎಲ್ಲಿ ನಮ್ಮನ್ನು ಕಟ್ಟಿ ಹಾಕಿ ಹೊಡೆಯುತ್ತಾರೋ ಎಂಬ ಭಯ ಬೇರೆ ಶುರುವಾಯಿತು. ಎಲ್ಲಕ್ಕೂ ದುರಂತ ಸಂಗತಿಯನ್ನು ಹೇಳಲೇಬೇಕು. ಯಾವ ಸಾವಿನ ಮನೆಗೆ ಓಟು ಕೇಳಲು ಹೋಗಿದ್ದೆವೋ ಆ ವ್ಯಕ್ತಿಯ ಶವ ಮದ್ಯಾಹ್ಮ 3 ಗಂಟೆಯಾದರೂ ಮನಗೆ ಬಂದಿರಲಿಲ್ಲ. ಕಾರಣ ಅವನ ಶವ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಯಾರೂ ಕೇಳದಂತೆ ಅನಾಥವಾಗಿ ಬಿದ್ದತ್ತು. ವಿಪರ್ಯಾಸ ಎಂದರೆ ಇದೇ ರಾಜಕೀಯ ಮುಖಂಡರು ಸತ್ತ ಹೆಣವನ್ನು ಪೋಸ್ಟ್ ಮಾರ್ಟಂ ಮಾಡಿಸುವ ಬದಲು ರೆಸಾರ್ಟ್ ಮಾಲಿಕರ ಜತೆಗೂಡಿ ಸಾವಿಗೆ ಬೆಲೆ ಕಟ್ಟುತ್ತಿದ್ದರು. ಗ್ರಾಮದ ಮಹಿಳೆಯರು, ಮಕ್ಕಳು ಆತನ ಮಕ್ಕಳು ಶವ ಈಗ ಬರುತ್ತದೆ ಆಗ ಬರುತ್ತದೆ ಎಂದು ಬಿರುಬಿಸಿಲಿಗೆ ಒಡ್ಡಿಕೊಂಡು ಕಾಯುತ್ತಿದ್ದ ದೃಶ್ಯ ಕಣ್ಣ ಮುಂದೆಯೇ ಇದೆ.

ಅಲ್ಲಿಗೆ ಸಾರಿಗೆ ಸೌಲಭ್ಯ ಸರಿ ಇದ್ದದ್ದರೆ ಅವನು ಬದುಕುಳಿಯುತ್ತಿದ್ದ. ಸಕಲೇಶಪುರಕ್ಕೆ ತೆಗೆದುಕೊಂಡು ಹೋಗುವಷ್ಟರಲ್ಲಿ ಪ್ರಾರಣ ಪಕ್ಷಿ ಹಾರಿ ಹೋಗಿತ್ತು ಇದಕ್ಕೆ ಕಾರಣ ಜನಪ್ರತಿನಿಧಿ ಅಲ್ಲವೇ..? ಇದು ಕಣ್ಣೆದುರು ಕಂಡ ಸತ್ಯ ಘಟನೆ. ಇಷ್ಟಾದರೂ ಬಂದಿದ್ಕಕೆ ಮಾತನಾಡಿಸಿ 1 ಸಾವಿರ ರೂ ನೀಡಲು ಹೋದ ನಮ್ಮ ನಾಯಕರಿಗೆ ನಿರಾಶೆ ಕಾದಿತ್ತು. ಅಲ್ಲಿದ್ದವರು `ನಿಮ್ಮ ದುಡ್ಡು ಯಾರಿಗೆ ಬೇಕ್ರಿ ನಮಗೆ ನೀರು ಕೊಡ್ರಿ, ರಸ್ತೆ ಕೊಡ್ರಿ’ ಎಂದು ಆಕ್ರೋಶದಿಂದ ಹೇಳಿದ. ನಾವು ಮಾತಣಾಡದೆ ಸಂಬಂಧಿಕರೊಬ್ಬರಿಗೆ ಇರಲಿ ಖಚರ್ಿಗೆ ಆಗುತ್ತದೆ ಎಂದು ಹಣ ಕೊಟ್ಟು ಅಲ್ಲಿಂದ ಕಾಲು ಕಿತ್ತವು.

ಇನ್ನು ಮುಂದೆ ಬಂದದೆ ಅದು ಕಾರುಜವಳ್ಳ್ಳಿ ಎಂಬ ಗ್ರಾಮ. ಅಲ್ಲೊಂದು ಕಡೆ ಜಲ ಬರುತ್ತದೆ. ಪಕ್ಕದಲ್ಲೇ ಒಂದು ಬಾವಿ ಕೊರೆಸಿ ಬಾವಿ ತುಂಬ ನೀರು ತುಂಬಿ ಕೊಂಡಿದೆ. ಇದು ಕಾರುಜುವಳ್ಳಿಯಿಂದ 2 ಕಿ. ಮೀ ದೂರದಲ್ಲಿದೆ. ದಲಿತರೇ ವಾಸಿಸುವ ಈ ಗ್ರಾಮದ ಮಹಿಳೆಯರು ಅಲ್ಲಿಂದ ಬಟ್ಟೆ ತೆಳೆಯಲು ಇಲ್ಲಿಗೆ ಬರುತ್ತಾರೆ. ಇದ್ದ ಬೋರ್ವೆಲ್ ಬತ್ತಿ ಹೋಗಿದೆ. ದುರಂತ ಎಂದರೆ ಈ ಬಾವಿಯ ನೀರು ಸಂಪೂರ್ಣ ಕಲುಷಿತ ಆಗಿದ್ದು ಕನಿಷ್ಟ ಇದನ್ನು ಶುದ್ದ ಮಾಡಲು ಯಾರೊಬ್ಬರು ಮುಂದಾಗಿಲ್ಲ. ಅದು ವರ್ಷಾನುಗಟ್ಟಲೆ . ರಸ್ತೆಯಲ್ಲೇ ಬಟ್ಟೆ ತೊಳೆಯುತಿದ್ದ ದಲಿತ ಹೆಣ್ಣುಮಕ್ಕಳು ಈ ಭಾಗದಲ್ಲಿ ಬರುವ ರಾಜಕೀಯ ಮುಖಂಡರ ಮುಕಕ್ಕೆ ಹೊಡೆದಂತೆ ಟಾರು ರಸ್ತೆಯಲ್ಲೇ ಬಟ್ಟೆ ಹಾಕಿಕೊಂಡು ` ನಮ್ಮನ್ನು ಈ ಸ್ಥಿತಿಗೆ ತಂದಿರಲ್ಲ’ ಎಂಬಂತೆ ಬಡಿಯುತಿದ್ದರು. ಅವಳ ಆ ಬಡಿತಕ್ಕೆ ರಸ್ತೆಯ ಟಾರು ಕಿತ್ತು ಹೋಗುವಂತಿತ್ತು. ನಿಜಕ್ಕೂ ಬೋರ್ ವೆಲ್ ಗಳು ಮಾಯವಾದವು ಎನ್ನುವವರಿಗೆ ಕಲುಷಿತ ನೀರು ನೀಡುವ ನೂರಾರು ಬೋರ್ ವೆಲ್ ಗಳನ್ನು ಇಲ್ಲಿ ನೋಡಬಹುದು. ಇಂದಿಗೂ ಇದೇ ನೀರನ್ನು ಈ ಭಾಗದ ಜನ ಕುಡಿಯುತ್ತಾರೆ. ರಸ್ತೆಗಳ ಸ್ಥಿತಿಯಂತೂ ಯಾರಿಗೂ ಬೇಡ. ಈ ಬಾಗದಲ್ಲಿ ದಿನಕ್ಕೆ ಒಂದು ಬಸ್ ಬೆಳಗ್ಗೆ ಸಂಜೆ, ಎರಡು ಬಾರಿ ಸಂಚರಿಸುವುದನ್ನು ಬಿಟ್ಟರೆ ಇಲ್ಲಿನವ ಸ್ಥಿತಿ ಯಾರೂ ಕೆಳುವರೇ ಇಲ್ಲ.

ಇನ್ನು ನಿಜಕ್ಕೂ ನಮಗೆ ಕಣ್ಣಿರು ಬರಿಸಿದ್ದು ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರಿನ ಹಾಹಾಕಾರ. ಆವತ್ತು ಊರಲ್ಲಿ ದೊಡ್ಡ ಸುಗ್ಗಿ. ಸಾಕಷ್ಟು ಸಾವಿರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಜನ ಸೇರುತ್ತಾರಲ್ಲಾ ಎಂದು ಓಟ್ ಕೇಳಲು ಹೋದ ನಮಗೆ ಏಟು ಬೀಳದಿರುವುದೇ ಅದೃಷ್ಠ. ನಾವು ಅಲ್ಲಿಗೆ ಹೋದಾಗ ರಾತ್ರಿ 7 ರ ಸಮಯ. ಆ ಸಮಯದಲ್ಲೂ ಆ ಬಾವಿಯ ಬಳಿ ಸಾಕಷ್ಟು ಜನ. ಬಹುಶಃ ಚುನಾವಣಾ ಸಭೆ ಇರಬಹುದೆಂದು ನೋಡಿದರೆ ಅಲ್ಲಿ ನಿಜಕ್ಕೂ ಜನ ಸೇರಿದ್ದು ಹನಿ ನೀರಿಗೆ. ಬಿಂದಿಗೆಯಲ್ಲಿ ನೀರು ಮೊಗೆಯುವುದಿಲ್ಲ ಎಂದು ಪುಟ್ಟ ಚಂಬುಗಳಿಗೆ  ವೈಯರ್ ಕಟ್ಟಿಕೊಂಡು ನೀರು ಸೇದುತ್ತಿದ್ದ ಮಹಿಳೆಯರನ್ನು ನೋಡಿ ನಿಜಕ್ಕೂ ನಮಗೆ ಸಂಕಟವಾಯಿತು.

ಚಂಬಿಗೂ ಕೂಡ ಅರ್ಧ ನೀರು ಬರುತ್ತಿತ್ತು ಎಂದರೆ ನೀವೇ ಊಹಿಸಿ ಸ್ಥಿತಿ ಹೇಗಿರಬಹುದು ಎಂದು. ಆ ಜನರೂ ಕೂಡ ಅದೇ ಕಲಕು ನೀರನ್ನು ಬನೀನು ಹರಿದು ಸೋಸಿಕೊಂಡು ಕುಡಿಯುತ್ತಿದ್ದರು. ನಾವು ಮತ ಕೇಳಲಿಲ್ಲ. ಅಲ್ಲಿದ್ದ ಒಬ್ಬ ಹೆಣ್ಣು ಮಗಳು ಹೆಳಿದ ಮಾತು `ಓಟು ಕೆಳಲು ಬರಲಿ, ಅವರ ಮನೆ ಹೆಣ್ಣು ಮಕ್ಕಳಿಗೂ ಇದೇ ಕಷ್ಟ ಕೊಡುತ್ತೀರಾ..? ಎಂದು ಹೇಳುತ್ತೇವೆ…’ ಒಂದು ಸುಗ್ಗಿಯನ್ನು ನೆಮ್ಮದಿಯಿಂದ ಮಾಡಲು ಸಾಧ್ಯವಾಗುತ್ತಿಲ್ಲ ಮೈಗೆ ಸ್ನಾನ ಇರಲಿ ಕುಡಿಯುವ ನೀರಿಗೂ ಈ ಸ್ಥಿತಿಗೆ ತಂದು ಬಿಟ್ಟರಲ್ಲಾ ಇವರ ಮನೆ ಹಾಳಾಗ’ ಎಂದಳು.

ಬಹುಶಃ ನಮ್ಮ ಅಬ್ಯರ್ಥಿಗೆ ಇದು ಅರ್ಥವಾಗಿ ಮತ ಕೇಳುವ ಗೋಜಿಗೆ ಹೋಗಲಿಲ್ಲ. ಸುಗ್ಗಿಗೆ ಬಂದಿದ್ದೇವೆ ಎಂಬಂತೆ ಸುಮ್ಮನಾದೆವು. ಬಹುಶಃ ಇವರ್ಯಾರಿಗೂ ಹನಿ ನೀರು, ರಸ್ತೆ ಹೊರತಾಗಿ ಮತ್ತೇನು ಭರವಸೇಗಲೇ ಇರಲಿಲ್ಲ . ಇನ್ನು ಆಲೂರು ಭಾಗದ ಜನರಂತೂ ಸಂಜೆ 6 ಕ್ಕೆ ಮಲಗುತ್ತಾರೆ. ಕಾರಣ ಇಷ್ಟೆ ಇಲ್ಲಿ ಕಾಡಾನೆ ಹಾವಳಿ, ಸ್ವತಃ ರಾಜಕೀಯ ಮುಖಂಡರು ಕೂಡ ಸಂಜೆ 6ರ ನಂತರ ಈ ಭಾಗದಲ್ಲಿ ಸಂಚರಿಸುವುದಿಲ್ಲ. ಆನೆಗಳು ಯಾವಾಗ ಯಾರ ಪ್ರಾಣವನ್ನು ತೆಗೆಯುತ್ತವೆ ಯಾರಿಗೂ ಗೊತ್ತಿಲ್ಲ..

ಇವರಿಗೆ ಅಭಿವೃದ್ಧಿ ಬೇಕಿಲ್ಲ ಜೀವ ಬಿಕ್ಷೆ ಬೇಡುತ್ತಾರೆ ಇಂದಿಗೂ ಕೂಡ ಕಾಡಾನೆ ಸಮಸ್ಯೆಗೆ, ಪರಿಹಾರ ದೊರಕಿಲ್ಲ. ಜೀವ ಹಿಡಿದುಕೊಂಡು ರಸ್ತೆಯಲ್ಲಿ ಸಂಚರಿಸುವ ಮಹಿಳೆಯರನ್ನು, ನೋಡಿದರೆ ಎಂಥಹವರಿಗೂ ಆತಂಕ ಆಗುತ್ತಿತ್ತು. ಒಟ್ಟಾರೆ ನೋಡಿದರೆ ಗ್ರಾಮಿಣ ಪ್ರದೇಶದಲ್ಲಿ ಅಭಿವೃದ್ಧಿ ಎನ್ನುವುದು ನಿಜಕ್ಕೂ ಇನ್ನೂ ಮರೀಚಿಕೆ. ಸೇ 95 ಶಾಸಕರು ಗ್ರಾಮಾಂತರ ಪ್ರದೆಶದತ್ತ ಮುಖ ತೋರಿಸುವುದಿಲ್ಲ. ಆದರೆ ಈ ಜನರು ಕೊನೆಗೆ ಒಂದು ಮಾತು ಹೆಳುತ್ತಾರೆ. ಅವನು ಕೆಲಸ ಮಾಡದಿದ್ದರೂ ಪರವಾಗಿಲ್ಲ. ಒಂದು ದಿನವಾದರೂ ಬಂದು ಸತ್ತಿದ್ದೀರಾ. ಬದುಕಿದ್ದೀರಾ ಎಂದು ಕೆಳುವುದಿಲ್ಲ ಇದರ ಬಗ್ಗೆ ಸಾಕಷ್ಟು ಅಸಮಧಾನ ಇದೆ. ಯಾಕೆ ಹೋಗುವುದಿಲ್ಲ ಇದಕ್ಕೆ ಶಾಸಕರುಗಳೆ ಉತ್ತರಿಸಬೇಕು…

ಹಾಗೆ ಮತ್ತೆ ಬರುವಾಗ ಹೊಸದೊಂದು ಹೋಂ ಸ್ಟೇ ನಿರ್ಮಾಣ ಆಗುತ್ತಿತ್ತು… ಕೋಟ್ಯಾಂತರ ರೂ. ಸುರಿದು ರಸ್ತೆ ಮಾಡಲಾಗುತ್ತಿತ್ತು. ಕೃತಕ ಜಲಪಾತ ನಿರ್ಮಿಸಲಾಗಿತ್ತು. ನೀರು ಮೇಲಿಂದ ಝರಿಯಾಗಿ ಹರಿಯುತ್ತಿತ್ತು. ಮಕ್ಕಳು, ಹಿರಿಯರು ನೀರಿಗೆ ತಲೆಯೊಡ್ಡಿ ಕುುಣಿದಾಡುತ್ತಿದ್ದರು.. ನನಗೆ ಸೈಕಲ್ ನಲ್ಲಿ ನೀರು ತರುತ್ತಿದ್ದ ಚಿಗಳ್ಳಿಯ ಆ ವ್ಯಕ್ತಿ, ರಸ್ತೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ದಲಿತ ಮಹಿಳೆ ನೆನಪಾದಳು.. ಕೊನೆಯದಾಗಿ ನಿಜಕ್ಕೂ ಗ್ರಾಮಗಳ, ದಲಿತ ಕೇರಿಗಳ ಸ್ಥಿತಿ ಅತ್ಯಂತ ಬರ್ಬರವಾಗಿದೆ. ದಯವಿಟ್ಟು ಗೆದ್ದವರು ಇವರಿಗೆ ಅನ್ಯಾಯ ಮಾಡಬೇಡಿ, ನಂಬಿಕೆ ದ್ರೋಹ ಮಾಡಬೇಡಿ..

(ಚುನಾವಣೆಯಲ್ಲಿ ಜಾತಿ ರಾಜಕರಣದ ಬಗ್ಗೆ ನಾನು ಕಂಡ ಕಠೋರ ಸತ್ಯ ಘಟನೆಗಳಿವೆ ಮುಂದೆ ಬರೆಯುತ್ತೇನೆ)

 

‍ಲೇಖಕರು avadhi

10 May, 2013

7 Comments

  1. ರೂಪ ಹಾಸನ

    ಪ್ರಿಯ ನಾಗರಾಜ್,
    ಬರಹ ಓದಿ ಕಣ್ಣು ತುಂಬಿ ಬಂತು. ನಿಮ್ಮಿಂದ ಇಂತಹದ್ದನ್ನು ತುಂಬಾ ನಿರೀಕ್ಷಿಸುತ್ತೇನೆ.
    ರೂಪ

  2. nagaraj

    thanka madom

  3. chalam

    ತುಂಬಾ ಚೆನ್ನಾಗಿ ವಸ್ತು ಸ್ಥಿತಿಯನ್ನು ವಿವರಿಸಿದ್ದೀರಿ….ಓದಿ ತುಂಬಾ ಸಂಕಟವಾಯಿತು.ಚುನಾವಣೆ ಎಂದರೆ ಟೀವಿ ಮುಂದೆ ಕೂತು ಎಕರಾಪೆಕರಾಗಳ ಮುಖ ನೋಡುವುದಲ್ಲ…..ನಮ್ಮ ಜನರ ದುಃಖಗಳು ನಮಗೇ ತಿಳಿದಿರುವುದಿಲ್ಲ.ನಿಮ್ಮ ಕೆಲಸ ಖುಷಿ ಕೊಟ್ಟಿತು.ಧನ್ಯವಾದಗಳು.

  4. Narayana murthy g

    good nimnda kaliyuvudu bahalavide…. sarve jano sukino bavanthu enuvantha mathu nijavagali…

  5. ಲಿಂಗರಾಜು ಬಿ.ಎಸ್.

    ನಾಗರಾಜ್ ನಿಮ್ಮ ಲೇಖನ ಓದಲು ಚೆನ್ನಾಗಿದೆ. ನನ್ನ ಪ್ರಶ್ನೆ ಇಷ್ಟೆ, ನೀವು ಆದೇ ಭಾಗದವರು. ಈ ಭಾಗದ ಸಮಸ್ಯೆ ಕುರಿತು ನೀವು ಯಾವಾಗಲೂ ಪ್ರತಿಕ್ರಿಯಿಸಿಲ್ಲ ಎಂಬುದು ನಿಮ್ಮ ಲೇಖನದಿಂದಲೇ ವೇದ್ಯವಾಗುತ್ತದೆ. ದಲಿತರ ಸಮಸ್ಯೆಗಳನ್ನು ಪರಿಹರಿಸಲು ರಾಜಕೀಯ ಅಧಿಕಾರವೇ ಪರಿಹಾರವೇ ಹೊರತು ಬೀದಿ ಹೋರಾಟವಲ್ಲ ಎಂದು ಹೇಳಿದ್ದೀರಿ. ನೆನಪಿಸಿಕೊಳ್ಳಿ. ಸಮಸ್ಯೆಗಳ ವಿರುದ್ಧ ಹೋರಾಟ ಮಾಡಿದವರನ್ನು ಬೀದಿ ಹೋರಾಟಗಾರರು ಎಂದು ನನಗೇ ಹೇಳಿದ್ದನ್ನು ಕೇಳಿದ್ದೇನೆ. ನೀವು ಈ ಭಾಗಕ್ಕೆ ಚುನಾವಣೆಗಗಿಯೇ ಹೋಗಿದ್ದಿರೇ ಹೊರತು ಮತ್ಯಾವುದಕ್ಕೂ ಅಲ್ಲ. ನಿಮಗೂ ನಿಮ್ಮ ಶಾಸಕರಿಗೂ ಆಧಿಕಾರವಿರುವುದನು ಹೊರತು ಪಡಿಸು ಬೇರೆ ಯಾವ ವ್ಯತ್ಯಾಸವೂ ಇಲ್ಲ. ಇನ್ನಾದರೂ ಅವರ ಸಮಸ್ಯೆಗಳಿಗೆ ಹೋರಾಟ ಮಾಡಿ ಪರಿಹಾರ ಹುಡುಕಿಕೊಡಿ. ಇಲ್ಲಾ, ಹೋರಾಟ ಮಾಡುವವರನ್ನು ಬೆಂಬಲಿಸಿ, ಸುಮ್ಮನಾಗಿ ಬಿಡಿ. ಈ ಕಣ್ಣೀರು ಡ್ರಾಮಾ ಎಲ್ಲಾ ಬೇಡ

  6. nagaraj

    ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ ಇದೆ. ಹಾಗೆ ನಾನು ಈಗ ಹಾಸನದಲ್ಲೇ ವಾಸ್ತವ್ಯ ಹೂಡಿರುವುದರಿಂದ ನಾನು ಹಾಸನದಲ್ಲಿ ದಲಿತರ ಪರವಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಅದಕ್ಕೆ ಸಾವಿರ ುದಾಹರಣೆ ಕೊಡುತ್ತೇನೆ. ನೀವುಗಳು ಸ್ಥಳೀಯ ಪತ್ರಿಕೆಯೊಂದರಲ್ಲಿ ಸೇರಿಕೊಂಡು ಬರೆಯುವುದೊಂದು ಮಾಡುವುದೊಂದು ಮಾಡುತ್ತಿದ್ದ ಬಗ್ಗೆ ನನಗೆ ಅರಿವಿದೆ. ನಿಮ್ಮಿಂದ ನಾನು ಕಲಿಯುವುದು ಬೇಕಿಲ್ಲ. ಹಾಗೆ ಹೋರಾಟ ಮಾಡುವುದು ಬರೆಯುವಷ್ಟು ಸುಲಭವಲ್ಲ. ನೀವು ಪುಟಗಟ್ಟಲೆ ಬರೆದವರು ಒಂದು ದಿನವಾದರೂ ನಿಧೀಷ್ಟವಾಗಿ ದಲಿತರ ಪರವಾಗಿ ಹೋರಾಡಿಲ್ಲ. ಸುಮಸ್ಯೆಗಳನ್ನು ಎತ್ತ ಹಿಡಿದಿದ್ದಕ್ಕೂ ನಿಮ್ಮ ಕುಚೋದ್ಯ ನುಡಿ ಆಡಿರುವ ಬಗ್ಗೆ ನಿಮ್ಮ ಬಗ್ಗೆ ನಮಗೆ ಅನುಕಂಪ ಇದೆ. ಇಂತಹ ಬುದ್ದಿಯನ್ನು ಮೊದಲು ಬಿಡಿ. ಪರಿಹಾರದ ಬಗ್ಗೆ ಯೋಚಿಸಿ. ಈ ಕಾಲೆಯುವ ನಿಮ್ಮಂತಹವರ ಕಿಡಿಗೇಡಿಗಳಿಂದಲೇ ದಲಿತರಾಗಲಿ ಶೋಷಿತರಾಗಲಿ ಈ ಸ್ಥಿತಿ ತಲುಪಿರುವುದು. ಹಾಗೆ ನಾನು ರಾಜಕೀಯ ಉದ್ದೇಶದಿಂದಲೇ ಹೋಗಿದ್ದು ಎಂಬುದನ್ನು ಒಪ್ಪಿಕೊಳ್ಳುತ್ತೇನೆ ಈ ಮಧ್ಯೆ ಸಮಸ್ಯೆಗಳು ಕಂಡಾಗ ಅದನ್ನು ಖಂಡಸಲೋ ಅಥವಾ ಅದನ್ನು ಜನತೆಗೆ ಮುಟ್ಟಿಸಲು ರಾಜಕೀಯ ಮಾಡುವ ಮನಸ್ಥಿತಿ ನಮ್ಮದಲ್ಲ. ಅ ದೇ ರೀತಿ ಎಲ್ಲವನ್ನೂ ವಿಕ್ಋತ ಮನೋಭಾವದಿಂದ ಯೋಚಿಸುವ ನಿಮ್ಮಥಹವರದ್ದು. ದಯವಿಟ್ಟು ಮುಂದಾದರು ಇಂತಹ ಻ಪೋ ಕಲ್ಪಿತ ವಿಕ್ಋತ ಯೋಚನೆಗಳನ್ನು ಬಿಟ್ಟು ಸಮಸ್ಯೆಗಳ ಬಗ್ಗೆ ನಿಜವಾಗಿ ಯೋಚಿಸಿ. ಸಾಧ್ಯವಾದರೆ ಇಂತಹವುಗಳ ಬಗ್ಗೆ ಮತ್ತಷ್ಟು ಗಮನ ಸೆಳೆಯಿರಿ. ಇಲ್ಲದಿದ್ದರೆ ತೆಪ್ಪಗೆ ಕುಳಿತುಕೊಂಡು ನಿಮ್ಮ ಕೆಲಸ ಮಾಡಿಕೊಂಡು ಹೋಗಿ…ಮಸ್ಯೆಗಲ ಬಗ್ಗೆ ಬೆಳಕು ಚೆಲ್ಲಿದರೆ ಅದನ್ನು ಡ್ರಾಮ ೆನ್ನುವ ೊಮ್ಮೆ ನೀವು ನಿಮ್ಮ ಿರುವಿಕೆ ಮತ್ತು ಪ್ರಜ್ಞೆಯನ್ನು ಒಮ್ಮೆ ಪ್ರಶ್ನಿಸಿಕೊಳ್ಳಿ…. ಅನಾವಶ್ಯಕ ಕಾಮೆಂಟ್ ಮಾಡಬೇಡಿ….

  7. ಲಿಂಗರಾಜು ಬಿ.ಎಸ್.

    ಸತ್ಯ ಹೇಳಿದ್ದಕ್ಕೆ ಕೋಪ ಯಾಕೆ. ಹಾಸನದಲ್ಲಿದ್ದರೆ ಹೋರಾಟ ಮಾಡಬಾರದು ಎಂದೇನೂ ಇಲ್ಲ. ಹೇಳುವುದೊಂದು ಮಾಡುವುದೊಂದು ಎಂಬ ನಿಮ್ಮ ಮಾತು ಸುಮ್ಮನಿರಿಸುವ ಪ್ರಯತ್ನ ಎಂಬುದು ನನಗೆ ಗೊತ್ತು. ಪತ್ರಿಕೆ ಹಾಗೂ ಬ್ಲಾಗ್ಗಳ ಮಿತಿ ಬಗ್ಗೆ ಮೊದಲು ತಿಳಿಯಿರಿ. ನಿಮ್ಮ ಸಿದ್ಧಾಂತ ಪ್ರತಿಪಾದನೆಯ ಲೇಖನಗಳನ್ನು ಪ್ರಕಟಿಸಲಿಲ್ಲ ಎಂಬ ಕೋಪವನ್ನು ಇಲ್ಲಿ ಪ್ರಕಟಿಸಿದ್ದೀರಿ ಎಂಬ ಅರಿವಿದೆ. ಪಕ್ಷಪಾತದಿಂದ ಒಬ್ಬರನ್ನು ವೈಭವೀಕರಿಸಿ ಇನ್ನೊಬ್ಬರನ್ನು ಹೀಯಾಳಿಸಿ ಬರೆಯುವುದು ಒಂದು ಬರವಣಿಗೆಯೇ ಅಲ್ಲ ಎನ್ನುವುದು ನನ್ನ ಅಭಿಪ್ರಾಯ. ಇಂಥವುಗಳಿಗೆ ಜಾಗ ನೀಡುವ ಬದಲು ಬೇರೆಯ ವಿಚಾರಗಳಿಗೆ ಜಾಗ ನೀಡುವುದು ಉತ್ತಮ ಎಂಬುದು ನಿಜ ಪತ್ರಿಕೋದ್ಯಮದಲ್ಲಿರುವವರ ನೀತಿ.
    ದಲಿತರ ಬಗೆಗಿನ ನಮ್ಮ ಹೋರಾಟದ ಪುಟಗಳು ದಲಿತರ ಕೇರಿಗಳಲ್ಲಿವೇಯೇ ಹೊರತು ಡೀಸಿ ಕಚೇರಿಯ ಸಭೆಗಳ ದಾಖಲೆಗಳಲ್ಲಲ್ಲ.(ಅಲ್ಲೂ ಸಿಗುತ್ತವೆ ಎನ್ನುವುದು ಬೇರೆ ಮಾತು). ನಮ್ಮ ಹೋರಾಟವು ಆಡಳಿತವನ್ನು ದಲಿತರ ಕೇರಿಗಳಿಗೆ ಕರೆದುಕೊಂಡು ಹೋಗಿತ್ತೆಂಬುದು ಹೋರಾಟಗಳನ್ನು ಮುಕ್ತ ಮನಸಿನಿಂದ ನೋಡುವವರಿಗೆ ಗೊತ್ತು. ದಾಖಲೆ ಬೇಕಿದ್ದರೆ ಅರಕಲಗೂಡು ತಾಲೂಕಿನ ಕೆರಗೋಡು ಬಹಿಷ್ಕಾರ ಘಟನೆಯ ದಾಖಲೆಗಳನ್ನು ಪರಿಶೀಲಿಸಬಹುದು.
    ಇರಲಿ, ನನ್ನ ಪ್ರತಿಕ್ರಿಯೆಯಲ್ಲಿ ಕುಚೋದ್ಯವೇನಿರಲಿಲ್ಲ. ಪ್ರತಿಕ್ರಿಯೇಯು ನಿಮ್ಮ ಆತ್ಮರತಿಗೆ ಬಿದ್ದ ಏಟು ನಿಮ್ಮನ್ನು ಈ ರೀತಿಯ ಪ್ರತಿಕ್ರಿಯೆ ನೀಡುವಂತೆ ಪ್ರೇರೇಪಿಸಿರಬಹುದು. ನನ್ನ ಪ್ರತಿಕ್ರಿಯೆ ಕನಿಷ್ಠ ನೀವು ಹೋರಾಟಗಾರರನ್ನು ತುಚ್ಛವಾಗಿ ಕಾಣಬೇಡಿ ಎಂಬುದಷ್ಟೇ ನನ್ನ ಕಳಕಳಿ. ಒಂದು ವೇಳೆ ನೀವು ದಲಿತರ ಕೆಲವೊಂದು ಕುಡಿಯುವ ನೀರನ್ನು ಒದಗಿಸುವಂತಹ ಸಮಸ್ಯೆಗಳನ್ನು ಪರಿಹರಿಸಿದರೆ ನಾನೇ ನಿಮ್ಮ ಬಗ್ಗೆ ಲೇಖನ ಬರೆಯುವೆ. ನೀವು ರಾಜಕೀಯ ಆಧಿಕಾರ ಹಿಡಿಯುವವರೆಗೂ ದಲಿತರು ಕೊಳಚೆ ನೀರನ್ನು ಕುಡಿಯುತ್ತಿರಬೇಕೇ ಹೇಳಿ. ನಾವು ಹೋರಾಟದ ಮೂಲಕವಾದರೂ ನೀರು, ರಸ್ತೆ ಮಾಡಿಸಬಹುದು ಎಂದು ನಂಬಿದ್ದೇವೆ. ನೀವು ರಾಜಕೀಯ ಅಧಿಕಾರ ಹಿಡಿದಾಗ ಎಲ್ಲಾ ಸೌಲಭ್ಯಗಳನ್ನು ಕೊಡಿ. ಅಲ್ಲಿಯವರೆಗೆ ನಾವು ಹೋರಾಟದ ಮೂಲಕವಾದರೂ ನೀರಿನಂಥ ಸಣ್ಣ ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇವೆ. ನಿಮ್ಮ ಕೊಂಕು ನಮ್ಮ ಹೋರಾಟಗಳನ್ನು ತಡೆಯದು.
    ನೀವು ಬಯಸಿದಂತೆ ರಾಜಕೀಯ ಅಧಿಕಾರ ಹಿಡಿಯಿರಿ. ನಮಗೇನೂ ಹೊಟ್ಟೆಯುರಿ ಇಲ್ಲ. ಆದರೆ ಅಲ್ಲಿವರೆಗಾದರೂ ಹೋರಾಟದ ಮೂಲಕ ದಲಿತರು ಪಡೆಯುತ್ತಿರುವ ಸ್ವಾಭಿಮಾನ, ಕನಿಷ್ಠ ಸೌಲಭ್ಯಗಳ ಮೇಲೆ ಕಲ್ಲು ಹಾಕದಿರಿ ಎನ್ನುವುದೇ ನನ್ನ ಮನವಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading