ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮರೆತಿಲ್ಲ ತಾನೇ ಏನನ್ನೂ..

 

ಟಿ ಎಸ್ ಶ್ರವಣ ಕುಮಾರಿ

ಹೊರಡಲು ಪೆಟ್ಟಿಗೆ ಸಿದ್ಧ ಮಾಡಿಕೊಂಡಿರುವೆಯಲ್ಲ?

ಹಗುರಾಗಿದೆ! ಹರಮುರಕು ಏನೂ ತುಂಬಿದಂತಿಲ್ಲ!

 

ಇರುವಷ್ಟಿಷ್ಟು ಸರಿಯಾಗಿ ಭದ್ರ ಮಾಡಿರುವೆ ತಾನೆ –

ಬರೆದಿಟ್ಟುಬಿಡು ಒಂದೆಡೆ ಸಂದೇಹಕೆಡೆಗೊಡದೇನೆ.

ಪ್ರಿಜ್ಜಿನಲ್ಲಿಟ್ಟಿಲ್ಲವಲ್ಲ ತರಕಾರಿ, ಮೊಸರು, ಹಾಲು?

ಅಡುಗೆಕಟ್ಟೆ ಸಾಫು ಪಾತ್ರೆ ಡಬ್ಬಿಗಳೆಲ್ಲ ಬೋರಲು.

 

ಕೀ ಕೊಟ್ಟಾಯಿತಲ್ಲ ಮಗನಿಗೆ; ಬಾಗಿಲೆಳೆದುಕೊಂಡರೆ ಸಾಕು

ವಿಷಯ ತಿಳಿದಿದೆಯಲ್ಲ ಮಗಳಿಗೆ –ಕಕ್ಕುಲಾತಿ ಏಕೆ ಬೇಕು?

ನಿಂಗಿಗೆ, ಹಾಲು, ಪೇಪರಿನವನಿಗೆ.. ಹೇಳೀತು ಮುಚ್ಚಿದ ಬಾಗಿಲು.

ಹೊಸ್ತಿಲಲ್ಲೇ ಹುಟ್ಟಿದರೆ ಹುಲ್ಲು?!.. ಬಿಡು ಆ ಚಿಂತೆಗಳ ಸಾಲು!!

ನಿರ್ಮಾಲ್ಯವೆಲ್ಲ ತೆಗೆದಿರುವೆಯಲ್ಲ, ಹೊಸ ಹೂವಿಲ್ಲವಲ್ಲ ಇಡಲು

ಬತ್ತಿ ಕರಕಾಯಿತೇನೋ – ಹಾಂ.. ಎಣ್ಣೆ ಮುಗಿದಂತಿದೆ ಸೊಡಲು

ಬಿಡು, ಈಗಿದು ಸಮಯವಲ್ಲ ಹೊಸ ಬತ್ತಿ ಹೊಸೆಯುತ್ತ ಕೂರಲು

ಹಗುರಾಗಿ ಅಡರುತಿದೆ ಆರಿದ ಕರ್ಪೂರ, ಗಂಧಕಡ್ಡಿಗಳ ಘಮಲು

 

ಕಿಟಕಿಗಳೆಲ್ಲ ಭದ್ರ ಪಡಿಸಿರುವೆಯಲ್ಲ – ಗವಾಕ್ಷಿ? ತೆರೆದಿದೆಯಲ್ಲ

ಗಾಳಿಯಾಡಲಿ ಸ್ವಲ್ಪ- ಇಲ್ಲದಿರೆ ಮುಗ್ಗುಲ ವಾಸನೆ ಮನೆಯಲ್ಲ

ಗೀಸರಿನ ಸ್ವಿಚ್ಚು ಆರಿತಲ್ಲ? – ಬಂದಾಗಲಿ ಇನ್ನು ನೀರ ಕೊಳವೆ

ಕಳಚಿಡು ರೆಗ್ಯುಲೇಟರು – ಮುಗಿಯಿತಲ್ಲ ಇನ್ನೇತಕದರ ಗೊಡವೆ!

 

ಹೊರಡೋಣವೇ? ಗಾಡಿ ಸದ್ದೇನೋ? – ತಿರುವಿನಲ್ಲಿರಬೇಕು

ಕಾಯುತಿರುವುದ್ಯಾರಿಗೆ? ನೀರಿಲ್ಲಿದೆ – ಕುಡಿಯೊಂದು ಗುಟುಕು

ಮುಗಿಯುವುದಿಲ್ಲ ಈ ಸಡಗರ ಕಡೆಯ ಘಳಿಗೆಯವರೆಗನ್ನು

ಮರೆತಿಲ್ಲ ತಾನೇ ಏನನ್ನೂ… ಹೊರಡಬಹುದೇ ಇನ್ನು?!

 

ಇನ್ನೇನಾದರೂ ನೆನಪಾದರೆ ಮಾಡಿಬಿಡು ಈಗಲೇ.…

ಬರುವ ದಿನ ನಿಶ್ಚಿತವಿಲ್ಲ; ವಾಹನ ಬಂದಿದೆ ಆಗಲೇ…?

 

‍ಲೇಖಕರು avadhi

28 November, 2019

6 Comments

  1. Lalitha siddabasavayya

    ಹಿಂತಿರುಗುವ ಯಾವ ನಿಶ್ಚಿತವೂ ಇರದ ಪ್ರಯಾಣದ ಸಿದ್ಧತೆ!!! ಕವನ ಬಹಳ ಚೆನ್ನಾಗಿದೆ.

    • T S SHRAVANA KUMARI

      ನಿಮ್ಮ ಸ್ಪಂದನೆ ನನ್ನನ್ನು ಧನ್ಯಳಾಗಿಸಿದೆ.

  2. Sarojini Padasalgi

    ಅಗಮ್ಯ, ಅನಿಶ್ಚಿತ ಪಯಣದ ಹಾದಿಯಲ್ಲಿ ನಡೆವಾಗಲೂ ಬಿಡದೇ ಕಾಡುವ ವ್ಯಾಮೋಹದ ಬಂಧನ, ಜಂಜಾಟ.ಬದುಕಿನ ಜೂಟಾಟದ ಸುಂದರ ಚಿತ್ರಣ‌

    • T S SHRAVANA KUMARI

      ಧನ್ಯವಾದಗಳು ನಿಮ್ಮ ಸವಿಸ್ಪಂದನೆಗೆ

  3. Mohini Kamath

    After knowing the reality of life also we do some arrangements hoping that we will return. Baraha thumbaa chennagide Vani. Nanna mecchuge, chokka baravanigege

    • T S SHRAVANA KUMARI

      ಥ್ಯಾಂಕ್ಯೂ ಮೋಹಿನಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading