ನಮಗೆ ನಾವೇ ಮೆರೆಯೋಣ
-ಪ್ರಮೋದ ಜೋಶಿ
ಮಾಡಲಾದರೂ ಏನು
ಮರವಿಂದು ಸಸಿಯಾಯ್ತು
ಹರೆ ಬರುವುದೆಂದು ಖುಷಿಪಡಲೇ
ಶ್ರಮದ ವ್ಯರ್ಥಕೆ ದುಃಖಿಸಲೇ
ಅರಿವಿನ ಅರಿವು ಈಗಾಯ್ತು
ಬೋರ್ಗಲ್ಲ ಮೇಲೆ ನೀರು ಸುರಿದಿದ್ದು
ಹರಯದ ಆಯು ಮುಗಿದರೂ
ಹತ್ತಬೇಕು ಒಂದನೆ ಮೆಟ್ಟಿಲು
ಅಳುಕಿ ಅಳುವದಕ್ಕಿಂತಾ
ದುಡಿದು ಬದುಕುವುದು ಲೇಸು
ಸಸಿ ಮತ್ತೆ ಬಳೆಯಲು
ಬೇಲಿ ಬೇಕು ಆಸುಪಾಸು
ಇಡದಿದ್ದರೆ ನೀಗಾ ಕಳುವಿಗೆ ಜಾಗಾ
ಎಚ್ಚರಿತ ರಕ್ಷಣೆ ಬೇಕೇಬೇಕು
ನಿರ್ಲಕ್ಷ್ಯದಿ ಕಳೆದ ಕ್ಷಣಕೆ
ಒಪ್ಪಿ ತಲೆ ಬಾಗಲೇಬೇಕು
ದುಡಿಯಲು ಯಾವ ಭಯವಿಲ್ಲಾ
ಆಯುವಿನ ಕೃಪೆ ಬೇಕೇ ಬೇಕು
ಬರುವುದು ಹೋಗುವುದು ಇದ್ದದ್ದೆಂದು
ಬದುಕಲು ಬದುಕು ಬದುಕಬೇಕು
ಹಂಗೇ ಇಲ್ಲದ ಜೀವಿಗೆ
ಭಂಗವೆಂದೂ ಬಾರದು
ನಂಬಿಕೆಯಿಂದಲೇ ಆಗುವುದೆಲ್ಲಾ
ನಂಬಿ ಎಂದೂ ಕೆಡಬಾರದು
ಬರುವ ಕ್ಷಣ ಸ್ವಾಗತಿಸುತ
ಕಳೆದ ಕ್ಷಣ ಮರೆಯೋಣ
ಹೆಣಗುತ್ತಲಾದರು ಬದುಕಿ
ನಮಗೆ ನಾವೇ ಮೆರೆಯೋಣ






0 Comments