ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮರಳಿ ಕೊಡು ಬಾಲ್ಯವನ್ನು..

ಸುದರ್ಶನ್ ಫಾಕಿರ್

ಕನ್ನಡಕ್ಕೆ: ಕಿರಣ ಭಟ್

ತೆಗೆದುಕೋ ಸಿರಿಯನ್ನು
ಜೊತೆಗೆ ಕೀರ್ತಿಯನ್ನೂ
ಬೇಕಾದರೆ, ನನ್ನ ಹರೆಯವನ್ನೂ
ಬದಲಿಗೆ ಮರಳಿ ಕೊಡು ನನಗೆ
ನನ್ನ ಬಾಲ್ಯದ
ಮಳೆಗಾಲವನ್ನು,
ನನ್ನ ಕಾಗದದ ದೋಣಿಯನ್ನು
ಆ ಮಳೆಯ ಹನಿಗಳನ್ನು.

ಕೇರಿ ಮೂಲೆಯ ಆಕೆ ಹಳೆಯ ಗುರುತಿನಂತಿದ್ದವಳು
ಚಿಕ್ಕ ಮಕ್ಕಳಿಗೆಲ್ಲ ಅಜ್ಜಿಯಾಗಿದ್ದವಳು
ಬೊಚ್ಚು ಬಾಯ ಮಾತಲ್ಲಿ ಕಿನ್ನರ ಲೋಕದ ಚಾಲಾಕು
ಶತಮಾನದ ಮುಖದಲ್ಲಿ ಇಳಿದು ಬಿದ್ದ ಸುಕ್ಕು
ಮರೆತೆನೆಂದರೂ ಮರೆಯಬಹುದೇ ಅವುಗಳನ್ನು
ಆ ಪುಟ್ಟ ರಾತ್ರಿಗಳನ್ನು, ಆ ದೊಡ್ಡ ಕಥೆಗಳನ್ನು.

ಸುಡು ಸುಡು ಬಿಸಿಲಲ್ಲಿ ಮನೆ ಹೊರಗೆ ಓಡೋದು
ಸಿಕ್ಕಲ್ಲಿ ಅಲೆಯೋದು, ಹಕ್ಕಿ ಚಿಟ್ಟೆ ಹಿಡಿಯೋದು
ಗೊಂಬೆಗಳ ಮದುವೇಲಿ ಜಗಳಾಡೋದು, ಹೊಡೆದಾಡೋದು
ಜೋಕಾಲಿಯಿಂದ ಬೀಳೋದು ಬಿದ್ದು ಎದ್ದು ಓಡೋದು
ಹಿತ್ತಾಳೆ ದೃಷ್ಟಿ ಬಳೆಗಳ ಚಿಕ್ಕ ಚಿಕ್ಕ ಉಡುಗೊರೆ
ಒಡೆದ ಬಳೆಗಳು ಮಾಡಿದ ಚಿಕ್ಕ ಗಾಯದ ಗುರುತು

ಮರಳು ದಿಬ್ಬದ ಮೇಲೆ ಮತ್ತೆ ಮತ್ತೆ ಹತ್ತೋದು
ಗುಬ್ಬಿ ಗೂಡು ಕಟ್ಟೋದು, ಕಟ್ಟಿ ಕಟ್ಟಿ ಬೀಳಿಸೋದು
ನಮ್ಮದೇ ಮುಗ್ಧ ಬಯಕೆಗಳ ಚಿತ್ರ ಅದು
ಕನಸು ಆಟಿಕೆಗಳ ಬಣ್ಣಬಣ್ಣದ ಲೋಕ
ಈ ಜಗದ ಹಂಗಿಲ್ಲ, ಇಲ್ಲ ಸಂಬಂಧಗಳ ಬಂಧ
ಎಷ್ಟು ಚೆಂದವಾಗಿತ್ತು ಆ ನಮ್ಮ ಬದುಕು!

ಮರಳಿ ಕೊಡು ನನಗೆ
ನನ್ನ ಕಾಗದದ ದೋಣಿಯನ್ನು
ಆ ಮಳೆಯ ಹನಿಗಳನ್ನು.

 

ಕಾವ್ಯ ಓದೋದು ಬಿಟ್ರೆ ಬರೆಯೋ ಸುದ್ದಿಗೆ ಹೋಗದೇ ಮೂರು ದಶಕಗಳ ಮೇಲಾಗಿತ್ತು. ಮೊನ್ನೆ ಶ್ರೀಪಾದ
ಭಟ್ ಕಾಲ್ ಮಾಡಿ “ನಿನ್ನ‌ ‘ದೌಲತ್ ಭೀ ಲೇಲೋ’ ಅನುವಾದ ಬೇಕಿತ್ತು” ಎಂತ ಕೇಳಿದ್ರು.
ಅದನ್ನ ನಾನು ತುಂಬ ಹಿಂದೆ ಅನುವಾದಿಸಿದ್ದೆ ಪ್ರಕಟವಾದ ಪತ್ರಿಕೆಯನ್ನು ಹುಡುಕಿದರೆ ಎಲ್ಲೂ ಸಿಗಲಿಲ್ಲ. ಇವತ್ತು ಕೂತು ಮತ್ತೆ ಬರೆದೆ. ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ.

‍ಲೇಖಕರು avadhi

21 November, 2019

2 Comments

  1. T S SHRAVANA KUMARI

    ಚೆನ್ನಾದ ಕವಿತೆ

  2. Kiran Bhat

    ಥ್ಯಾಂಕ್ಯೂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading