ಎಸ್. ನಾಗಶ್ರೀ
ನೀನು ದೂರದ ಬೆಟ್ಟದಲಿ
ಮರದ ತುದಿಗೆ ಸಿಕ್ಕಿಬಿದ್ದ ಗಾಳಿಪಟ
ಬೇಸಿಗೆಯ ಸುಡು ಮಧ್ಯಾಹ್ನ
ಮೊಸರಲಿ ಅದ್ದಿ, ಉಪ್ಪು ಹಚ್ಚಿ
ಒಣಗಲೆಂದೇ ಇಟ್ಟ ಮೆಣಸಿನಕಾಯಿ
ಮಳೆಗಾಲದ ಸಂಜೆ ಜಡಿಯಲಿ
ತೊಯ್ದು ತೊಪ್ಪೆಯಾದ ಒದ್ದೆ ಬಟ್ಟೆ
ಬಹಳ ದೂರದೂರಿಗೆ ಯಾತನೆಯಲಿ
ಕಡಿಮೆ ಕಾಸಿನೊಂದಿಗೆ ಹೊರಟ ಯಾತ್ರಿಕ
ಎಲ್ಲ ಕಲಿತು, ಪರೀಕ್ಷೆ ಕೋಣೆ ನಿರ್ವಾತದಲಿ
ಪ್ರತಿಶಬ್ಧ ಮರೆತ ಯಡವಟ್ಟು ವಿದ್ಯಾರ್ಥಿ
ಮತ್ತೆ ಬರಲಾರೆನೆಂದು ಗೊತ್ತಿದ್ದೂ
ಸಿಕ್ಕ ಅವಕಾಶ ತಪ್ಪಿಸಿ ನೊಂದು ಬೆಂದ ಪ್ರೇಮಿ

ಜೊತೆಗೆ ಯಾರಿಲ್ಲದ ಒಂಟಿ ಜೀವ
ನೋವಿನೆಣ್ಣೆಯಲಿ ಬೆಳಗೊ ದೀಪ
ಯಾರೂ ಸೋಕಲಿಚ್ಚಿಸದ ಅಸ್ಪೃಶ್ಯ
ತಿಳಿದೂ ಸೋತ ಕರ್ಣ
ತಪ್ಪಿಲ್ಲದೆ ಜೈಲು ಸೇರಿದ ಕೈದಿ
ಹೀಗಂತ ಗೊತ್ತಿದ್ದೂ
ನಾನೇನೂ ಮಾಡಲಾರೆ
ನಾಲ್ಕು ಹನಿ ಕಂಬನಿ ಹೊರತು
ಮತ್ತೇನೂ ಕೊಡಲಾರೆ
ಕೊಸರಷ್ಟು ಹಸಿಪ್ರೀತಿ
ಉಳಿಸಿಟ್ಟಿರುವೆ ಸ್ವೀಕರಿಸು.






ಚೆಂದಿದೆ ನಾಗಶ್ರೀ..-ಸ್ಮಿತಾ
ಸುಂದರ ಪದ್ಯ