ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮನ್ಮಥನ ನೆನೆಯುತ್ತ..' – ಡಾ ಶಿವಾನಂದ ಕುಬಸದ

– ಡಾ ಶಿವಾನಂದ ಕುಬಸದ


ಒಂದಿಷ್ಟೂ ಹೆದರಲಿಲ್ಲ ನೀ ಉರಿಗಣ್ಣನೆದುರು
ಅದೇನು ಸಂಭ್ರಮ ಅದೇನು ಉತ್ಸಾಹ ನಿನ್ನದು
ವಸಂತನನ್ನು ಪುಸಲಾಯಿಸಿ ರತಿಯನ್ನು ಒಪ್ಪಿಸಿ
ಕೈಯಲ್ಲಿ ಕಬ್ಬಿನ ಜಲ್ಲೆಯ ಬಿಲ್ಲು ಬಗ್ಗಿಸಿ ಹಿಡಿದು
ಗಿಳಿಯ ಮೇಲೇರಿ ಹೊರಟೇಬಿಟ್ಟೆ ಶಿವನೆದೆಗೆ
ಜೇನ್ನೊಣಸಾಲಿನ ತುದಿಗೆ ಸಿಕ್ಕಿಸಿದ ಹೂಬಾಣ
ಎಸೆದು ಜಗದೊಡೆಯನ ತಪಸ್ಸು ನಿಲ್ಲಿಸಲು
 
ಗೊತ್ತಿತ್ತು ನಿನಗೆ ಶಿವನ ಹಣೆಗಣ್ಣು ನಿನ್ನ ಸುಟ್ಟು
ಬೂದಿ ಮಾಡಲಿದೆಯೆಂದು ರತಿಗೆ ನಿಜರೂಪದಲಿ
ಮುಂದೆ ನೀನೆಂದೂ ಸಿಗಲಾರೆನೆಂದು ಆದರೇನು
ದೇವತೆಗಳ ಉಳಿವಿಗೆ ನಿನ್ನ ಬಲಿಯೇ ಬೇಕಿತ್ತು
ಚಿಂತೆಯಿಲ್ಲ
ದೇವಸೇನಾಪತಿಯ ಅವತಾರವಾಗಬೇಕಲ್ಲ
ನಿನ್ನ ಸುಂದರ ಶರೀರ ಸುಟ್ಟು ಕರಕಲಾಯ್ತು
 
ಅದೆಂಥ ತಾಕತ್ತು ನಿನ್ನ ಬಾಣಕ್ಕೆ ಕಲ್ಲು ಮನದ
ಶಿವನೆದೆ ಕರಗಿ ಹೂವಾಗಿಬಿಟ್ಟಿತ್ತು ಆದರೆ ಯುಗಗಳಿಂದ
ಮುಚ್ಚಿದ್ದ ಕಣ್ಣನ್ನು ತೆರೆದ ಆ ದೇವ ನೋಡಿದ್ದು
ಅವನನ್ನು ಪಡೆಯಲು ತಪಗೈದ ಗಿರಿಜೆಯನ್ನಲ್ಲ
ಅವಳ ಹಿಂದೆ ಹೆಮ್ಮೆಯಿಂದ ನಿಂತ ನಿನ್ನನ್ನು
ತೆರೆದುಬಿಟ್ಟ ಫಾಲನೇತ್ರವನು ಅಷ್ಟೂ ಯೋಚಿಸದೆ
 
ಬೆಂದು ‘ಅತನು’ವಾದೆ ಅರೆಘಳಿಗೆಯೊಳಗೆ
ಸರ್ವಾಂತರ್ಯಾಮಿಯಾಗುವ ವರವೇನೋ ಸಿಕ್ಕಿತು
ಆದರೆ ರತಿಯ ತ್ಯಾಗಕೆ ಬೆಲೆಯಿಲ್ಲವಾಯಿತು
ಪಡೆದವಳು ಪಾರ್ವತಿ ಕಳೆದುಕೊಂಡವಳು ರತಿ
ಅನಂಗರಂಗನ ಸಹವಾಸ ಸಾಧ್ಯವಿದೆಯೇನು
ನೀ ಮಾತ್ರ ಸುಟ್ಟರೂ ಸುಡದಂತೆ ಎದ್ದು ಹೊರಟೆ
 
ಈಗ
ನಿನ್ನ ಹೆಸರೆತ್ತಿದರೆ ಅಷ್ಟುದ್ದ ಹಾರುವ ನಾವೆಲ್ಲ
ಎದೆಯಾಳದಲ್ಲಿ ಕಾಪಿಟ್ಟುಕೊಂಡಿದ್ದೇವೆ ನಿನ್ನನ್ನು
ನೀನಿಲ್ಲದೆ ಜಗವಿಲ್ಲ ನೀನಿರದ ಜಾಗವಿಲ್ಲ ಎಂದು
ಗೊತ್ತಿದ್ದೂ ವರ್ಷಕ್ಕೊಮ್ಮೆ ನಿನ್ನ ಸುಟ್ಟಂತೆ ಮಾಡಿ
ಸಂಭ್ರಮಿಸಿ ಮತ್ತೆ ಎದೆಯ ಗೂಡೊಳಗೆ ಬೆಚ್ಚಗೆ
ನಿನ್ನನ್ನು ಪ್ರತಿಷ್ಟಾಪಿಸಿಕೊಂಡು ಸುಖಿಸುತ್ತೇವೆ
 

‍ಲೇಖಕರು G

9 March, 2015

11 Comments

  1. Dr. Prabhakar M. Nimbargi

    Surprising to see Dr. Kubsad writing poems! They are equally good as his prose pieces. Simple, yet touchy.

  2. ಲಕ್ಷ್ಮೀಕಾಂತ ಇಟ್ನಾಳ

    ”ವರ್ಷಕ್ಕೊಮ್ಮೆ ನಿನ್ನ ಸುಟ್ಟಂತೆ ಮಾಡಿ
    ಎದೆಯ ಗೂಡೊಳಗೆ ಬೆಚ್ಚಗೆ
    ನಿನ್ನನ್ನು ಪ್ರತಿಷ್ಟಾಪಿಸಿಕೊಂಡು ಸುಖಿಸುತ್ತೇವೆ” ಕಾಮನ ಒಳ ಕಾಮನೆ…ಸುಂದರ ಕವನ.

  3. Upendra

    ಹೌದು… ಕಾಮನನ್ನು ನಮ್ಮೊಳಗೆ ಭದ್ರವಾಗಿಟ್ಟುಕೊಂಡು ಅವನ ‘ಪ್ರತಿರೂಪ’ವೆಂಬ ಪ್ರತಿಮೆಯನ್ನು ದಹಿಸಿ ನಮ್ಮ ದೈಹಿಕ ಕಾಮನೆಗಳನ್ನು ದಹಿಸುತ್ತಿದ್ದೇವೆ ಎಂದು ಹೇಳುತ್ತಾ ನಮಗೆ ನಾವೇ ಮೋಸ ಮಾಡಿಕೊಳ್ಳುತ್ತಿದ್ದೇವೆ, ಅನಿಸುತ್ತಿದೆ… ಅಷ್ಟಕ್ಕೂ ನಾವೇಕೆ ‘ಕಾಮ’ನ, ನಮ್ಮ ಹುಟ್ಟಿಗೆ ಕಾರಣನಾದವನ ಹೆಸರು ಕೇಳಿದೊಡನೆ ‘ಛೀ ಅಸಹ್ಯ’ ಅನ್ನುವ ನಾಟಕವಾಡುತ್ತೇವೋ ಗೊತ್ತಾಗುವುದಿಲ್ಲ…
    (ಅಪವಾದಗಳನ್ನು ಹೊರತುಪಡಿಸಿ)
    ನಾವು ರತಿಯನ್ನು ಅವಳ ಸೌಂದರ್ಯದಿಂದಷ್ಟೇ ಗುರುತಿಸುತ್ತೇವೆಯೇ ಹೊರತು ಅವಳ ಅಂತರಂಗದಲ್ಲಿ ಅಡಗಿರುವ ‘ಕಾಮ ಕರಕಲಾದ’ ನೋವನ್ನು ಗುರುತಿಸುವುದೇ ಇಲ್ಲ..
    ಪರರ ‘ಚಿಂತೆ’ ನಮಗೇತಕಯ್ಯಾ?
    ಸೂಪರ್ ಸರ್. Like it …

  4. DRGCRAVI

    Bahala arthapoornavaagide

  5. bharathi b v

    Sir excellent poem

  6. Suman Desai

    Yentha vaastava.. Super sir, padagalu sigtilla hogalalu..

  7. ಮಲ್ಲಿಕಾರ್ಜುನ ಚ. ಕೋಟಿ

    ಬಹಳ ಚೆನ್ನಾಗಿದೆ ಸರ್. ವಿಷೇಷವಾಗಿ ಕೊನೆಯ ಸ್ಟಾಂಜಾ ಬಹಳ ಹಿಡಿಸಿತು. ತಮ್ಮಿಂದ ಇನ್ನಷ್ಟು ಕವನಗಳು ಮೂಡಿ ಬರಲಿ

  8. mmshaik

    uttama kavana sir..

  9. Dr. Naaz shaikh

    Very deep thoughts. Very well written.
    your kannada writing are truly of a very high standard.

  10. sudha

    Superb poem sir

  11. ಆಸು ಹೆಗ್ಡೆ

    ವಿಶಿಷ್ಟವಾದ ದೃಷ್ಟಿಕೋನದ ಪರಿಚಯ ನೀಡಿದ್ದೀರಿ.
    ಅಂದು ಅತನುವಾದ ಕಾಮದೇವ, ಮುಂದೆ ಎಲ್ಲಾ ತನು ಮನಗಳ ಅವಿಭಾಜ್ಯ ಅಂಗವಾಗಿದ್ದಾನೆ ಅನ್ನುವುದಂತೂ ನಿಜ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading