
****
ವಿನತೆ ಶರ್ಮ
ಕಳೆದ ವರ್ಷ ಒಂದು ವಾರದ ಮಟ್ಟಿಗೆ ಮಾತ್ರ ಅವಸರದಲ್ಲಿ ಬೆಂಗಳೂರಿಗೆ ಬಂದು ಹೋಗಿದ್ದೆ. ಒಂದು ಸಂಜೆ ಸ್ವಲ್ಪ ಬಟ್ಟೆ, ಅದೂ ಇದೂ ಖರೀದಿಸಿ ಕಮರ್ಷಿಯಲ್ ರಸ್ತೆಯಿಂದ ಹೊರಬಿದ್ದು ಆಟೋರಿಕ್ಷಾವನ್ನು ಹುಡುಕುತ್ತಿದ್ದೆ. ಕೆ.ಆರ್.ಪುರಕ್ಕೆ ಹೋಗಲು ರಾತ್ರಿ ೮ ಗಂಟೆಯಲ್ಲಿ ಆಟೋರಿಕ್ಷಾ ನಿಲ್ದಾಣದಲ್ಲಿದ್ದ ಅವರು ೩೫೦ ರೂಪಾಯಿ ಹೇಳುತ್ತಿದ್ದರು. ನಾನೋ “ಮೀಟರ್ ಹಾಕ್ರಿ, ಒಂದೂವರೆ ಚಾರ್ಜ್ ಕೊಡ್ತೀನಿ” ಅಂತಿದ್ದೆ. ಇಲ್ಲ ಅಂತ ಮುಖ ತಿರುವುತ್ತಿದ್ದರು. ಸರಿ ಅಂತ ರಸ್ತೆಯ ಮಧ್ಯದ ಡಿವೈಡರ್ ದಾಟಿ ಆ ಕಡೆ ಹೋಗಿ, ಹೋಗುತ್ತಿದ್ದ ಆಟೋಗಳಿಗೆ ಕೈ ಹಿಡಿದೆ.
ಒಬ್ಬ ನಿಲ್ಲಿಸಿದ. “ಕೆ.ಆರ್.ಪುರ? ೨೫೦ ಕೊಡಿ, ಅದೇ ಲಾಸ್ಟ್” ಅಂದ. ನಾಲ್ಕು ಬ್ಯಾಗ್ ಗಳನ್ನ ಎಳೆದುಕೊಂಡು ಹತ್ತಿದೆ. ಆಚೆ ಬದಿಯಿದ್ದ ಚಾಲಕರು ಇವನಿಗೆ ಕೂಗು ಹಾಕಿದರು – ಕಿತ್ನಾ ಬೋಲಾ ತು? ಇವ ಉತ್ತರಿಸಿ, ನಕ್ಕ. ಆ ಕಡೆಯಿಂದ ಒಬ್ಬ ಇವನಿಗೆ ಬೈಯಲು ಆರಂಭಿಸಿದ. ಲೇಟಾಗ್ತಾ ಇದೆ, ನಡೀರಿ, ಎಂದು ಎಚ್ಚರಿಸಿದೆ.
ಎಂ.ಜಿ. ರಸ್ತೆ ಹೊಕ್ಕು, ಎಡಗಡೆ ಅಲಸೂರು ಕೆರೆಯ ಕಡೆ ರಿಕ್ಷಾ ತಿರುಗಿತು. ಧೂಳು ಎಂದು ಮೂಗಿಗೆ ಟಿಶ್ಯೂ ಹಿಡಿದಿದ್ದೆ. ಚಿರಪರಿಚಿತ ದಾರಿ, ಏನೂ ಅನ್ನಿಸಲಿಲ್ಲ. ಗುರುದ್ವಾರ ದಾಟಿ ಹೋದೆವು. ಅವ ತನ್ನ ಚಾಲಕನ ಕನ್ನಡಿಯಲ್ಲಿ ನನ್ನನ್ನು ನೋಡಲಾರಂಭಿಸಿದ. ಇನ್ನೂ ತರುಣ ವಯಸ್ಸು, ಕಣ್ಣಿಗೆ ಹಚ್ಚಿದ್ದ ಕಾಡಿಗೆಯಿಂದ ಅವನ ದೊಡ್ಡ ಕಣ್ಣುಗಳು ನನ್ನನ್ನ ನೋಡಲು ಮುಖ ಸ್ವಲ್ಪ ಎತ್ತಿದಾಗಲೆಲ್ಲಾ ಇನ್ನೂ ಅರಳಿಕೊಂಡು ವಿಚಿತ್ರವಾಗಿ ಕಾಣುತ್ತಿತ್ತು. ರಸ್ತೆಯಲ್ಲಿ ಅರೆಬರೆ ಬೆಳಕು.
ಯಾಕಿವನು ಪದೇ ಪದೇ ನನ್ನನ್ನೇ ನೋಡ್ತಾ ಇದ್ದಾನೆ ಅನ್ನಿಸಿತು. ಯಾರೂ ಕಂಪ್ಲೇಂಟ್ ಹೇಳದಂತೆ ಸಲ್ವಾರ್ ಕಮೀಜ್ ಮೈ ತುಂಬಿತ್ತು. ಪಶ್ಚಿಮ ದೇಶಗಳಲ್ಲಿ ವಾಸಮಾಡುತ್ತಾ ‘ದಿಟ್ಟಿಸಿ ನೋಡಿದರೆ ಅದು ಅಸಭ್ಯತೆ, ಅನುಮಾನಾಸ್ಪದ ವರ್ತನೆ’ ಎನ್ನುವುದನ್ನು ನಾನು ರೂಢಿಸಿಕೊಂಡಿದ್ದೆ. ಕೇಳೇ ಬಿಟ್ಟೆ, “ಯಾಕ್ರೀ ನನ್ ಕಡೇನೇ ನೋಡ್ತಾ ಇದ್ದೀರಾ?” ತಕ್ಷಣ ಅವ “ನಿಮ್ ಕಡೆ ಯಾಕ್ ನೋಡ್ಲಿ, ಹಿಂದೆ ಬರೋ ಗಾಡಿಗಳನ್ನ ನೋಡ್ತಾ ಇದ್ದೀನಿ” ಎಂದ. ಅವನ ಪಕ್ಕದ ಎರಡೂ ಕನ್ನಡಿಗಳನ್ನ ತಲೆ ತಿರುಗಿಸಿ ನೋಡಿದೆ. ಯಾವುದೇ ವಾಹನಗಳು ನಮ್ಮ ಹಿಂದೆ ಇರಲಿಲ್ಲ. ಹಿಂದೆ, ಮುಂದೆ ರಸ್ತೆಯನ್ನ ಕುತ್ತಿಗೆ ಉದ್ದ ಮಾಡಿ ನೋಡಿದೆ.
ಆಗ ಅರಿವಿಗೆ ಬಂತು, ಚಿರಪರಿಚಿತವಾದ ಆ ಅಲಸೂರು ಕೆರೆ ರಸ್ತೆಯ ಕೆಲ ಭಾಗಗಳು ನಿರ್ಜನವಾಗಿ ಕತ್ತಲಿರುತ್ತದೆ. ಐವತ್ತು ಮೀಟರ್ ದೂರದಲ್ಲಿ ಪೂರಾ ಕತ್ತಲಿರುವ ಜಾಗ ಒಂದು ಸಮೀಪಿಸುತ್ತಿರುವುದು ಕಂಡಿತು. ಅವನು ಕೂಡ ನನ್ನನ್ನ ನೋಡುವುದು, ಪಕ್ಕದ ಕನ್ನಡಿಯಲ್ಲಿ ಇಣುಕುವುದು ಮಾಡುತ್ತಿದ್ದ. ಇವ ರಿಕ್ಷಾ ನಿಲ್ಲಿಸಿ, ಚಕ್ಕನೆ ನನ್ನ ಪಕ್ಕಕ್ಕೆ ಜಿಗಿದು, ಎಳೆದುಹಾಕಿದರೆ ಎಂಬ ಯೋಚನೆ ಕಾಡಿತು. ಬ್ಯಾಗ್ ಕದೀಬೋದಾ ಇಲ್ಲಾ ರೇಪ್ ಪ್ರಯತ್ನ ಮಾಡಿಯಾನೋ ಎಂಬ ಪ್ರಶ್ನೆ ಬೇಡವೆಂದರೂ ಎದ್ದು ಕೊಡವಿ ನಿಂತಿತು. ನಾನೇನೂ ಹರೆಯದ ಹುಡುಗಿಯಲ್ಲ, ಹೊಳೆಯುವ ಸುಂದರಿಯೂ ಅಲ್ಲ, ಮಕ್ಕಳನ್ನ ಹೆತ್ತಿರುವ ದೇಹ. ಆದರೂ…?!
ಸ್ವಯಂ ರಕ್ಷಣೆಗಾಗಿ ಏನು ಮಾಡಬಲ್ಲೆ, ಏನಿದೆ ನನ್ನ ಬಳಿ? ಧೈರ್ಯವಂತೂ ಇದೆ. ಉಗುರು? ಎಲ್ಲಾ ಮೊಂಡು. ಹಾಳಾದ್ದು, ಏರೋಪ್ಲೇನಿನಲ್ಲಿ ಚೂಪಾದ ವಸ್ತುಗಳನ್ನ ಬಿಡುವುದಿಲ್ಲ ಎಂದು ಬಟ್ಟೆ ಪಿನ್, ಚಿಕ್ಕದೊಂದು ಮಲ್ಟಿ-ಟೂಲ್ ತೆಗೆದುಹಾಕಿದ್ದೆ. ಮಾರ್ಷಿಯಲ್ ಆರ್ಟ್ಸ್ ಪಟ್ಟುಗಳು ಏನೇನು ಅಂತ ನೆನಪಿಸಿಕೊಳ್ಳಲು ಪ್ರಯತ್ನಿಸಿದೆ. ಬ್ಯಾಗ್ ನಲ್ಲಿ ಇನ್ನೇನಾದರೂ ಚೂಪಾದ್ದು ಇದೆಯಾ ಅಂತ ಝಿಪ್ ತೆಗೆದೆ. ಬೆರಳಿಗೆ ತಡಕಿದ್ದು ಎರಡು ಟೂತ್ ಪಿಕ್ ! ಅವನ್ನ ಹೊರತೆಗೆದು, ಬಲಗಡೆಯಿಂದ ಬರುತ್ತಿದ್ದ ಚಂದ್ರನ ಬೆಳಕಿಗೆ ಎತ್ತಿ ಹಿಡಿದೆ. ಅವನಿಗೆ ಚೆನ್ನಾಗಿ ಕಾಣಿಸುವಂತೆ ಅವನ್ನು ನೇವರಿಸಿದೆ. ಅವನೂ ನನ್ನ ಸರ್ಕಸ್ಸನ್ನ ಗಮನಿಸುತ್ತಿದ್ದ.

ಆ ಕತ್ತಲಿನ ಚಿಕ್ಕ ಜಾಗ ಬಂದೆ ಬಿಟ್ಟಿತು. ನಾನೂ ಬ್ಯಾಗನ್ನ ಎಡಗಡೆ ತೋಳಲ್ಲಿ ಸಿಗಿಸಿಕೊಂಡು, ಬಲಗಡೆ ಕೈಯಲ್ಲಿ ಆ ಟೂತ್ ಪಿಕ್ ಗಳನ್ನ ಹಿಡಿದು, ಬೆನ್ನು ನೇರ ಮಾಡಿ ಕೂತೆ. ಆಟ ಆಡಿಸುವಂತೆ ಅವನು ರಿಕ್ಷಾವನ್ನ ಇನ್ನೂ ನಿಧಾನ ಮಾಡಿದ. ಮತ್ತೆ ಕೇಳಿದೆ, ‘ಯಾಕೆ, ಗಾಡಿ ಇನ್ನೂ ನಿಧಾನ ಆಯ್ತಲ್ಲ, ಏನ್ ಪ್ರಾಬ್ಲೆಮ್ಮು’. ಈ ಬಾರಿ ಅವನನ್ನೇ ನಾನು ತೀಕ್ಷ್ಣ ವಾಗಿ ದಿಟ್ಟಿಸುತ್ತಿದ್ದೆ. ಮಾತನಾಡದೆ ಅವ ನಕ್ಕ. ಪ್ರಶ್ನೆ ಕೇಳುವ ಹಕ್ಕು ನನ್ನದಾದರೂ ತನ್ನ ವಾಹನದ ಮೇಲಿನ ನಿಯಂತ್ರಣ ಅವನದ್ದಾಗಿತ್ತು. ಆದರೂ ನನ್ನ ಮನಸ್ಸಿನ ಮೇಲೆ, ನನ್ನದೇ ಒಂದು ಖಾಸಗಿ ಸೀಮಿತ ಜಾಗದ ಮೇಲೆ ಅವನಿಗ್ಯಾವ ನಿಯಂತ್ರಣವಿದೆ ಎಂದೆನ್ನಿಸಿತು.
ಮುಂದಿನ ಕೆಲ ನಿಮಿಷಗಳು ಅವನ ಮೇಲೆ ನಾನು ನಿಗಾ ಇಟ್ಟಿರುವುದು, ಕೈಯಲ್ಲಿ ಟೂತ್ ಪಿಕ್ ಹಾಗೆ ಇರುವುದು ನಡೆದಿತ್ತು. ಗಾಡಿ ನಿಲ್ಲಲಿಲ್ಲ. ಹಳೆ ಮದ್ರಾಸು ರಸ್ತೆ ಸೇರಿಕೊಂಡ ಮೇಲೆ ಅವನ ಗಮನ ಪೂರಾ ತುಂಬಿ ತುಳುಕುತ್ತಿದ್ದ ವಾಹನ ಸಂದಣಿಯ ಮೇಲೆ ಸರಿಯಿತು. ಕೆ.ಆರ್.ಪುರಕ್ಕೆ ಬಂದರೆ ಅಲ್ಲಿ ಪವರ್ ಕಟ್. ಆಲದ ಮರ ದಾಟಿ ಮನೆಯ ಹತ್ತಿರದ ರಸ್ತೆಯ ಮೂಲೆಗೆ ಬಂದರೆ ಮತ್ತೆ ನಿರ್ಜನ ಜಾಗ.
ಮುಂದೆ ಹೋಗಲ್ಲ ಅಂತ ಅಲ್ಲೇ ನಿಲ್ಲಿಸಿಬಿಟ್ಟ. ಗೊಣಗುತ್ತಾ ಬ್ಯಾಗ್ ತೆಗೆದು, ದುಡ್ಡು ಎಣಿಸಿ ಅವನ ಕೈಗಿಟ್ಟಾಗ ನನ್ನ ಎಡಕೈಗೆ ದಾಟಿಸಿದ್ದ ಟೂತ್ ಪಿಕ್ ಹಾಗೆ ಇವೆ! ಆ ಕತ್ತಲಿನಲ್ಲೂ ನನ್ನ ಮುಖವನ್ನ ದಿಟ್ಟಿಸಿ ಅವ “ಇನ್ನೂ ಐವತ್ತು ಎಕ್ಸ್ಟ್ರಾ ಕೊಡಿ!” ಅಂದ. ಎಕ್ಸ್ಟ್ರಾ ಯಾಕೆ ಅಂದೆ. “ಮನೆ ತನಕ ಸೇಫ್ ಆಗಿ ಕರ್ಕೊಂಡು ಬರ್ಲಿಲ್ವಾ” ಅಂದ! “ಯಾಕೆ, ದಾರಿನಲ್ಲಿ ಏನೂ ಡೇಂಜರ್ ಇರ್ಲಿಲ್ವಲ್ಲಾ?” ಎಂದೆ. ಆಟೋ ಇಂಜಿನ್ ಆರಂಭಿಸಿ, ಹೊಗೆ ಉಗುಳಿ, ಸರ್ ಅಂತ ಹೋಗೇಬಿಟ್ಟ.
ಬೆಂಗಳೂರಿನಲ್ಲಿ ವರ್ಷದ ಆರಂಭದ ದಿನ ನಡೆದ ಗಲಾಟೆಗಳ ಬಗ್ಗೆ ಈ ವಾರ ಪೂರ್ತಿ ಓದುತ್ತಾ ಇದ್ದಾಗ ಇವೆಲ್ಲಾ ಜ್ಞಾಪಕಕ್ಕೆ ಬಂತು.
'ಮನೆ ತನಕ ಸೇಫ್ ಆಗಿ ಕರ್ಕೊಂಡು ಬರ್ಲಿಲ್ವಾ'
ನಿಮಗೆ ಇವೂ ಇಷ್ಟವಾಗಬಹುದು…





0 Comments