ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನೆಯಿಂದ ಮನೆಗೆ – ಕೆ.ಎಸ್.ನ ರವರ ಒ೦ದು ಅಪರೂಪದ ಕವನ

ಕೃಪೆ : ಕವನ ಸ೦ಗ್ರಹ

ಮನೆಯಿಂದ ಮನೆಗೆ

– ಕೆ.ಎಸ್. ನರಸಿ೦ಹ ಸ್ವಾಮಿ   ವರುಷ ತುಂಬಿದರೆ ಹೊರಮನೆಯಿಂದ ಹೊರಮನೆಗೆ ವರ್ಗ. ವರ್ಗವೆಂದರೆ ಮತ್ತೆ ಗಂಟು ಮೂಟೆಯ ಬಿಗಿತ, ಇನ್ನಷ್ಟು ಆಯಾಸ. ತಿರುಪಿರದ ಲಾಂದ್ರಗಳು, ತಳವಿರದ ಗೂಡೆಗಳು, ಜರಡಿ, ತೊಟ್ಟಿಲು, ಒನಕೆ – ಇವುಗಳದೆ ಮೆರವಣಿಗೆ! ಸರಕು ಸುಮ್ಮನೆ ಭಾರ, ಎಸೆಯಬಾರದೆ ಹೇಳು. ’ಎಸೆದರಾಯಿತೆ, ಹೇಳಿ ? – ಮೊದಲು ಹೊಸತನು ತನ್ನಿ’ ಸ್ಥಳವಿಲ್ಲ ಬಂಡಿಯಲಿ, ’ಹೊತ್ತು ಸಾಗಿಸಬೇಕು’ ; ಹೊತ್ತು ಸಾಗಿಸಬೇಕು ? ಅದಕೆ ಕತ್ತಲೆ ಬೇಕು ! ’ಕತ್ತಲೆಗೆ ಕಾಯೋಣ!’ (ಏಳು ಮಕ್ಕಳ ತಾಯಿ, ಸ್ನೇಹಮಯಿ, ನಕ್ಕಳು) ನಗೆ ಕೊಲ್ಲುವಂತೆ ಅಗೆ ಕೊಲ್ಲಲಾರದು; ಏಳು, ಹೊಸಮನೆಗೆ ಹೋಗೋಣ ಮೊದಲು ; ಸಂಜೆಗೆ ಬಂದು ಸಾಗಿಸುವ ಕೆಲಸ ನನಗಿರಲಿ. ಕಂಬನಿಗೊಳವ ಕೆಂಗರಿಯ ಮೀನು ಕಲಕಿತ್ತು. ಗೆದ್ದಳು ಹೆಣ್ಣು ! ನಗಬಹುದು ಹೀಗೆ ಒಂದೊಂದು ಸಲ ಬದುಕಿನಲಿ. ಒಂದೊಂದು ಮನೆಯ ಬಿಡಲೊಂದೊಂದು ಕಾರಣ. ಈ ಸಲದ ಅನುಭವ : ಮನೆವಂತ ಒಳ್ಳೆಯವ ; ಅವನ ಹೆಂಡತಿ, ಮಗಳು ? – ಒಳ್ಳೆಯವರಿರಬೇಕು ! “ಮನೆಯ ಬಿಡಿ” ಎಂದವರು ನಮಗೆ ಹೇಳಿರಲಿಲ್ಲ, ಅವರು ಮಾಡಿದ ಕೆಲಸ ಬೇರೆ! ಓದು ಹತ್ತದ ಮಗಳ ದನಿಯಾದರು ಕುದುರಿ ಮದುವೆ ಹತ್ತಿರವಾಗಲೆನುವ ಹಂಬಲಿನಿಂದ ಸಂಗೀತ ಪಾಠವನು ಗೋತ್ತುಮಾಡಿದರಷ್ಟೆ ! ಆ ಎಂಟು ತಿಂಗಳೂ ಮಳೆಗಾಲ, ಕಪ್ಪೆಗಳು. ಮೊದಲು, ಕೊನೆ – ಆ ಹುಡುಗಿ ಕಲಿತ ಒಂದೇ ಚರಣ :- “ಕೆರೆಯ ನೀರನು ಕೆರೆಗೆ ಚೆಲ್ಲಿ,” ಎಲ್ಲ ಮಾಡುವ ಕೆಲಸವಿಷ್ಟೆ ಇಲ್ಲಿ ! ಕೆರೆಯ ನೀನು ಕೆರೆಗೆ ಚೆಲ್ಲಿ ಬೆಳಗಿನಲ್ಲಿ, ಮಧ್ಯಾಹ್ನದಲ್ಲಿ, ಸಂಜೆಯಲ್ಲಿ ನೀರ ತುಂಬಲು ಇನ್ನು ಸ್ಥಳವಿರದೆ ಮನೆಯಲ್ಲಿ ಬಂದು ನಿಂತರೆ ನಾವು ನಡುಬೀದಿಯಲ್ಲಿ ’ನೀರ ಚೆಲ್ಲಿದ ಮಂದಿ ನೀವೆಂದು’ ಮನೆವಂತ ಒಟ್ಟು ತೆರಿಗೆಯ ಬಿಗಿದ ನನ್ನ ತಲೆಗೆ ! ನೀರಳೆಯುವ ಯಂತ್ರ ನಿಜವನ್ನೆ ನುಡಿದಿತ್ತು ; ಇನ್ನೊಂದು ಮನೆಯ ಕದ ನಮಗಾಗಿ ತೆರೆದಿತ್ತು. ಇದ್ದವರಿಗೊಂದು ಮನೆ, ಇಲ್ಲದವರಿಗೆ ನೂರು. ಇಲ್ಲಿ ಹಿಂದಿದ್ದವರಿಗೆಷ್ಟು ಮಕ್ಕಳೊ ಕಾಣೆ! ಎಲ್ಲೆಲ್ಲು ನೆಲವ ಕೆತ್ತಿವೆ ; ನಲ್ಲಿಗಳ ಮುರಿದಿವೆ ; ದೀಪಗಳ ಕೆಡಿಸಿವೆ ; ಹೂಗಿಡಗಳ ಕಿತ್ತೆಸೆದಿವೆ ; ಎಲ್ಲ ಬಾಗಿಲಮೇಲೆ ಸೊನ್ನೆಗಳ ಬರೆದಿವೆ. ನಾಳೆ ಈ ಹುಡುಗರಿನ್ನೇನು ! ಇಲ್ಲಿ ಹೊಸತನವೆಲ್ಲಿ? ಯಾರೋ ಇದ್ದ ಮನೆಗೆ ನಾವು ಬಂದಿದ್ದೇವೆ. ನಾವು ಹೊಸಬರೆ ? ಅಲ್ಲ. ಕಂದು ಗೋಡೆಯ ಮೇಲೆ ಇಲ್ಲಣದ ತೆರೆಬಿದ್ದು ಕಾದಿರುವ ನಾಟಕದ ಹೆಸರು ’ಹೊಸತು’. ಈ ಮನೆಗೆ ಬಂದೆವೀ ದಿನ – ಗಾಜೊಡೆದ ಪಠಗಳ ರಿಪೇರಿಗವಸರವಿಲ್ಲ ; ಪಾತ್ರೆಗಳಿಗಾಗಬೇಕಾದರೆ ಕಲಾಯ ತಳ್ಳಬಹುದಿನ್ನೊಂದು ವಾರ. ಹೊಸಚಾಪೆ, ಕಾಲೊರಸಿ – ನಾಳೆ ತರಬಹುದಲ್ಲ ? “ಈಗೇನು ಮಾಡೋಣ ? ” ಮತ್ತೆ ಕೇಳುವೆಯಲ್ಲ ! ಹೊಕ್ಕ ಮನೆಯೆಲ್ಲ ಹೊಸಮನೆಯೆಂದೆ ಕರೆಯೋಣ ; ಹಳೆಯ ಬಾಗಿಲಿಗೆ ಹೊಸತೋರಣ ಕಟ್ಟೋಣ ; ಶಾಲೆಮಕ್ಕಳ ಹಾಗೆ ಹೊಸತನವ ಕಲಿಯುತ್ತ ಇನ್ನೊಂದು ವರುಷ ಕಳೆಯೋಣ ! ಒಂದೊಂದು ಮನೆಗೆ ಒಂದೊಂದು ವರುಷದ ಸರದಿ ; ಅಷ್ಟು ಹೊಸತೇನಲ್ಲ ನಾಳೆಯೋದುವ ವರದಿ. ಸ್ಮೃತಿಪಥದ ಬೆಳ್ಳಿದಾರದ ಸುರುಳಿ ಬಿಚ್ಚುತಿದೆ ; ಬೆಲೆಯಿರದ ಸರಕ ಸಾಗಿಸಿದೆ ಬಾಗಿದೆ ಬೆನ್ನು ; ಕೆರೆಯ ನೀರನು ಕೆರೆಗೆ ಚೆಲ್ಲಿ ಬಿಳಿಚಿದೆ ಕಣ್ಣು ; ಮಗು ಬರೆದ ಸೊನ್ನೆ ; ಮನೆವಂತರ್‍ಆಡಿದ ಮಾತು ; ನಕ್ಕನಗೆ ; ಕಣ್ಣೀರು – ಒಂದಲ್ಲ, ಎರಡಲ್ಲ, ನಮ್ಮ ಪಾಲಿನ ಪುಣ್ಯ ! ಬಂಡಿಯಲಿ ಸ್ಥಳವಿಲ್ಲ, ಹೊತ್ತು ಸಾಗಿಸಬೇಕು ; ಅದಕೆ ಕತ್ತಲೆ ಬೇಕು. ಕತ್ತಲೆಗೆ ಕಾಯೋಣ ! ಮನೆಯಿಂದ ಮನೆಗೆ, ಹೊರಮನೆಯಿಂದ ಹೊರಮನೆಗೆ ಮೊದಲ ಮನೆಯಿಂದ ಆದರವಿರದ, ಕದವಿರದ, ಹೆಸರಿರದ ಇನ್ನೊಂದು ಮನೆಗೆ ಹೊಸತು ಹಳೆಯದು ಎಲ್ಲ ಯಾತ್ರೆಗೆ ಹೊರಟಿದ್ದೇವೆ. ಅಲ್ಲಿ ತಡೆಯುವರಿಲ್ಲ ; ಒಳಗೆ ಕರೆಯುವರಿಲ್ಲ ; ಇನ್ನೊಂದು ಮನೆಯಿಲ್ಲ ; ಹೊರಮನೆಯ ನೆರಳಿಲ್ಲ ; ಹೊದವರು ಹಿಂದಿರುಗಿ ಬರಲು ಹಾದಿಗಳಿಲ್ಲ ; ಅದೇ ಕಡೆಯ ಮನೆ ! ಬಾಂದಳದ ತಾರೆಗಳ ಓರೆಗಣ್ಣಿನ ಕೆಳಗೆ ಆಗಾಗ ಬೀಸುವುದು ಬಯಲ ಗಾಳಿ.]]>

‍ಲೇಖಕರು G

21 January, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading