ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನೆಯಾಕೆ ಮತ್ತು ಪೇಪರು ಬದಲಾದರೆ ರಗಳೆ

ಪೇಪರು ಬದಲಾಯಿಸುವುದು ಕಷ್ಟ..

****

ಜೋಗಿ 

 

ಟೀವಿ ಬದಲಾಯಿಸುವುದು
ಸುಲಭ; ಪೇಪರು ಕಡು ಕಷ್ಟ

ಪೇಪರಿನೊಂದಿಗೆ ಅದೆಂಥದೋ
ಸಂಬಂಧ; ಹಳೆಯ ನಂಟು
ಪದಬಂಧ, ಸಾಪ್ತಾಹಿಕ ಅಂಕಣದ
ಹದ; ಬಿಡಿಸಲಾರದ ಬ್ರಹ್ಮಗಂಟು

ಮೆಚ್ಚಿನ ಲೇಖಕನ ಹಂಗು
ಬಳಕೆದಾರನ ನಿಯಮಿತ ಕರಾವು
ಯಾವ ಪುಟದಲ್ಲಿ ಏನುಂಟೆಂಬ ಗುಟ್ಟು
ಬಲ್ಲವನ ಶತಸ್ಸಿದ್ಧ ಠರಾವು.

ಕಣ್ಣಿಗೊಪ್ಪುವ ಅಕ್ಷರ, ವಿನ್ಯಾಸ ಬಾಳಿದ
ಮನೆಯ ಹಾಗೆ ಅರ್ಥವಿರದಿದ್ದರೂ ಆಪ್ತ
ಅಚ್ಚರಿಗಳು ಕಡಿಮೆ ನಿಜ ಆಘಾತವೂ ಸೊನ್ನೆ
ಹೆಂಡತಿಯ ಸಿಟ್ಟು ಮುಗುಳ್ನಗೆ ಹಾಗೆ ಸಹಜ

-2-

ಟೀವಿಯಾದರೆ ಸುಲಭ ಅದಕ್ಕೋ ಕೇವಲ
ಹತ್ತೇ ವರುಷದ ಇತಿಹಾಸ ಪ್ರಜ್ಞೆ
ಕರೆಂಟಿಲ್ಲದಿದ್ದರೆ ಪರದೆ ಮಂಕು ಕೇಬಲ್ಲು
ಕೈಕೊಟ್ಟರೆ ಉಸಿರಾಟ ಸ್ತಬ್ದ, ಅವಜ್ಞೆ.

ಹಾಸಿಗೆಗೆ ಒಯ್ಯಲಾಗದು, ಟಾಯ್ಲೆಟ್ಟಿಗೆ ಬರಲಾರದು
ನಿನ್ನೆಯ ಪೇಪರಿನಂತೆ ಮರಳಿ ಸಿಗಲಾರದು
ಬೋಂಡ ಕಟ್ಟಿಸಲಾಗದು, ಕೈ ಒರೆಸಲಾಗದು
ಟೀವಿಯೆಂದರೆ ದೂರದ ಬೆಟ್ಟ, ಕೈ ಹತ್ತದು.

ಟೀವಿಯೆಂದರೆ ಅದಕ್ಕುಂಟು ರೀಮೋಟಿನ ಹಂಗು
ನೂರೆಂಟು ಚಾನಲ್ಲು, ಸುದ್ದಿಗೇ ಬೇರೊಂದು
ಒತ್ತಿದರೆ ಬದಲಾಗುತ್ತದೆ ವಾಹಿನಿಯಿಂದ ವಾಹಿನಿಗೆ
ಮನೆಜಗಳದ ಮಜದಿಂದ ಅಪ್ಪಟ ಮನರಂಜನೆಗೆ
-3-

ಪೇಪರು ಬದಲಾಯಿಸುವುದು ಅನಿವಾರ್ಯ
ಆದರೂ ಕಷ್ಟ, ನೂರೆಂಟು ತಾಪತ್ರಯ.
ಕಣ್ತೆರೆಯುವ ಮೊದಲೇ ಬಂದು ಬೀಳುತ್ತದೆ
ಅದೆಂಥದೋ ನಿಗೂಢ ವಿಸ್ಮಯ.

ಬದಲಾಯಿಸಬೇಕು ಅಂದರೆ ಬೇಗನೇ
ಏಳಬೇಕು; ಕಾಯಬೇಕು ಪೇಪರು ಹುಡುಗನ ದಾರಿ
ಮತ್ತೊಂದು ಒಳ್ಳೆಯ ಪೇಪರು ಹುಡುಕಿರಬೇಕು
ಮೊದಲೇ, ಆಯ್ಕೆಯೂ ಕೊಂಚ ದುಬಾರಿ

ಬದಲಾವಣೆ ಇರುವುದು ಪೇಪರು ಹುಡುಗನ
ಕೈಲಿ, ಅವನೇ ಮನಸ್ಸು ಮಾಡಬೇಕು.
ಮತ್ತೆ ಮಾರನೇ ದಿನ ಅದೇ ಪೇಪರು ಮನೆ ಮುಂದೆ
ಬಿದ್ದರೆ, ಮತ್ತೆ ಅವನನ್ನು ಎಚ್ಚರಿಸಬೇಕು.

ಹೊಸ ಪೇಪರಿಗೆ ಒಗ್ಗಿಕೊಳ್ಳಬೇಕು, ಹಳೆಯದರ ಗುಂಗು
ಕಳಚಿಕೊಳ್ಳಬೇಕು, ಬದಲಾಯಿಸಿದ್ದು ಯಾಕೆ
ಕೇಳುತ್ತಾರೆ; ಸಮರ್ಪಕ ಉತ್ತರಿಸಬೇಕು, ಓದಿ
ತಲೆದೂಗಿ ಮೆಚ್ಚಿ ಮರುಳಾಗಬೇಕು,

ಅಷ್ಟಾದ ಮೇಲೂ ಹಳೇ ಪೇಪರು ಅಲ್ಲೆಲ್ಲೋ ಕಂಡರೆ
ಒಳಗೊಳಗೇ ಕಸಿವಿಸಿ, ಅದೇ ಚೆನ್ನಾಗಿತ್ತೇನೋ
ಗುಮಾನಿ, ಅದಕ್ಕೇ ಮರಳುವುದೋ ಎಂಬ ದ್ವಂದ್ವ
ಬದಲಾಯಿಸ ಹೊರಟರೆ ಮತ್ತದೇ ಕಷ್ಟ ಕರಕರೆ.

ಮನಸ್ಸು ಬದಲಾಯಿಸಬಹುದು, ಬೇಕಿದ್ದರೆ ಮನೆ ಕೂಡ
ಮನೆಯಾಕೆ ಮತ್ತು ಪೇಪರು ಬದಲಾದರೆ ರಗಳೆ.
ಪ್ರಶ್ನೆಗಳು ನೂರಾರು, ಒಳಗೊಳಗೆ ಮತ್ತು ಹೊರಗೆ
ಬಲ್ಲವರು ಕೇಳುತ್ತಾರೆ, ಹೇಳಿ, ಯಾಕೀ ಬದಲಾವಣೆ?

ಪೇಪರು ಯಾವುದಾದರೇನು ಒಂದೇ ಒಳಗಿನ ವರದಿ
ಓದೋನು ಯಾರದರೂ ಅದೇ ಶೀರ್ಷಿಕೆ, ಅದೇ ಸುದ್ದಿ

‍ಲೇಖಕರು admin

6 January, 2017

1 Comment

  1. lakshmikanth itnal ಲಕ್ಷ್ಮೀಕಾಂತ ಇಟ್ನಾಳ

    ಹೌದು, ಸರ್, ಮೊನ್ನೆ ಬದಲಾಯಿಸಿದಾಗ ಖರೇ ಅಂದರೂ ಹಿಂಗೇ ಆಯಿತು.. ಮತ್ತೆ ದ್ವಂದ್ವ. ಹೊಸದೊಂದಿಗೆ ಹಳೆಯದೂ ಜುಗುಲ್ ಬಂದಿಯಾಯಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading