ತಾಲೀಮು : ಸೋಮವಾರದಿಂದ ಶುಕ್ರವಾರ
ಆನಂದ ಕುಂಚನೂರ
ಅಲ್ಲ; ಸಾಮಾನ್ಯವಾಗಿ ಎರಡೇವಿಧ: ಹೌದು, ಅಲ್ಲ
ಆಯತಪ್ಪಿ ನೆಡದಂತೆ
ಲಯತಪ್ಪಿ ನಡೆಯದಂತೆ ಸುಡಬೇಕು
ತಾನಾಗೆ ಒಂದೋ ಆಲಯ, ಇಲ್ಲ ಲಯ-
ಬದ್ಧ ದಿನಾಂಕಗಳ ಲೆಖ್ಖ ನುಂಗಿ ಹೊತ್ತುವವು ಪಣತಿ
ಭಾವಪಂಕ್ತಿಯ ಅವಳಿ ಕಂಗಳಲಿ
ಮೃದು ಮೆದುಳು ಮಿಡುಕಿದಂತೆ ಎದ್ದುಬಿದ್ದು
ಹಾದಿಬದಿಯ ದೇವರುಗಳ ತೊಡೆ ಮುಟ್ಟಿ ಮಾತಾಡಿಸಿ
ಕನಸ ತಂಬಾಕನು ಹಗಲಿರುಳು ಹೋಳು ಮಾಡಿ ಜಗಿಯುತ
ಇಳೆಗೆಳಸುವವು ಇಳಿಸಂಜೆ ಇಳಿವುದರಲಿ
ಇವು ಬಡ ಕಶೇರುಕಗಳು
ದಿನದ ಪ್ರಣಾಳಿಯಲಿ ಸುಮ್ಮನೆ ಹೊರಳಾಡುವ
ಮುದ್ದು ಟೆಸ್ಟ್ ಟ್ಯೂಬ್ ಕಂದಮ್ಮಗಳು
ರೊಕ್ಕ ಸುರಿದು ಜೋತುಬಿಟ್ಟ ಗಡಿಯಾರದ ಟೈಂಬಾಂಬ್
ಅದು ಸರಿವುದ ನೋಡುತ ದಿನವೂ ಸಾಯುವ
ಪ್ರಾಣದೆಣಿಕೆಯ ಪಕ್ಕಾ ಆತಂಕವಾದಿಗಳು
ಆ ಈ ಸ್ವಾಯತ್ತೆಯ ಬಡಿವಾರಗಳ ಬಿಡುಗಡೆ
ಶನಿವಾರ ಮತ್ತೂ ಭಾನುವಾರ, ರಜ
ಸಿಕ್ಕರೂ ದಕ್ಕದ ನಮ್ಮ ಕವಿಗಳ ಕಾವ್ಯಕನ್ನಿಕೆಯರು!
ಸೋಗು: ಮಾಘಮಾರ್ಗದಲಿ ಬೇನಾಮಿ ಶಿರಗಳು
ಹೌದು, ಜಗದ ಕಲ್ಯಾಣಿಯಲಿ ಕಂಡದ್ದು ಜಲ, ಅಂಟಿದ ಜೀವ
ನನಗೊಂದು ಸಂದೇಹ, ನಾನಾರೆಂದು ಗೊತ್ತೆ?
ತಿಳಿದು ಮುಂದೆ ಬನ್ನಿ.ಕ್ಷಮಿಸಿ, ನಾನು
ಇಂಟರ್ನೆಟ್ಲಿ ಲಭ್ಯವಿಲ್ಲ
ಅಜ್ಜನ ಸೋಲಿಲ್ಲದ ನಾಲಗೆ ಹಲುಬುತ್ತಿದ್ದುದೂ ಅದೇ-
ಮಗನೇ, ಬದುಕಿನ ಅಡ್ವರ್ಟೈಸ್ಮೆಂಟ್ಬದಲಾಗುತ್ತಲೇ ಇದ್ದರೂ
ಪಾರ್ಲೆ-ಜಿ ಬಿಸ್ಕೆಟ್ಕೆಳ ಸಂಗತಿ
ಕಾಲ ಸಂದರೂ ಸುಂದರಿ ಅವಳೇ
ಇನ್ನುಕೆಲವು ಲಕ್ಸ್ಸೋಪಿನ ಚೆಲುವೆಯರು!
ನೆಲ್ಮುಗಿಲ ಜ್ಯಾಮಿತಿಗೆ ಲಂಬರೇಖೆಯೆಳೆದ ಇಳೆ
ಎದೆಯ ಮಟ್ಟಕೆ ಎಲ್ಲವನು ನಿಲಿಸಿದರೆ ನಮಗೋ
ನೂರೆಂಭತ್ತು ಡಿಗ್ರಿ ಕೋನವೇ ಇಷ್ಟ
ಇಂದಿಗೂ ಅನ್ನದ ಋಣದ ಕಣ್ಣುಗಳು
ಬೇರುಗಳಾಗುತ್ತಲೇ ಬದುಕಿವೆ

ಅನಂತ ಚರ್ಯೆಯ ಉಪ ಸಂಹಾರದ ದಟ್ಟ ಆಕೃತಿಗಳು
ಈ ದಾರಿಯ ತಿರುವಿನಲಿ ನಿಂತಿವೆ ಬೆನ್ನುಕೆರೆದುಕೊಂಡು
ಕಾಣಬಾರದ ವೇಷ, ಕೇಳಬಾರದ ಘೋಷ
ಒಂದೊಂದಕೂ ಹೇಳಬಾರದ ಹೆಸರು
ಅವರು ಪಾಳಿಯಲಿ ಸುತ್ತುವ ಪರಿಗ್ರಹದುಂಗುರಗಳು
ದೇವ ಒಬ್ಬನೇ ಎಂದೆವಲ್ಲ
ಏಕಾಂಗಿಯಾಗಲು ಬಿಡಲಿಲ್ಲ
ಇದು ಬೇಡವೆಂದಿರೊ ಇನ್ನೊಂದು
ಆಗುತ್ತಲೇ ಇರುವ ಅಂದಂದಿನಕೆ ಒಪ್ಪವಾಗಿಟ್ಟ
ದಿನವಹಿಯ ಖಾಲಿ ಪುಟಗಳು
ದ್ವಂದ್ವ ಮಸಿಚೆಲ್ಲಿತೋ ಜೋಪಾನದ ನವಿಲುಗರಿ
ರಕ್ತಕಾರಿ ಸಾಯುತ್ತದೆ
ಪೂರ್ವೀಕರ ಕೆಂಪ್ಹಸಿರು ತಾಯಿತ ಗೋಣು ಮುರಿಯುತ್ತದೆ
ಬದುಕಿನ ಜ್ಞಾಪಕಾರ್ಥ ಬಾಳಬೇಕು.
ಆಟ: ಸೈಕಲ್ ಕೆಪಾಸಿಟಿ .ವಿ. ಒಂಭತ್ತು
ಇದೊಂದು ಕಲರ್ಫುಲ್ಜರ್ನಿ
ಕ್ಷಣ ಭಂಗುರಗಳ ದಿಟ್ಟ ನೇರಪ್ರಸಾರ
ಅವಧಿಗೊಂದಾವರ್ತಿ ಕುತೂಹಲದ ಕಂತು; ದಿಕ್ಕೆಟ್ಟತಂ-
ತುನಾ-ನೇ-ನಾ!
ಒಂದು ದೀಪಾವಳಿ, ಒಂದು ಬೋನಸ್
ಪುಟ್ಟಾಪೂರ ಒಂದೊರ್ಷ ಸಲಹುವ ಸುಪ್ತದೀಪ್ತಿ
೨೫-೨೫-೨೫ ಕಾಲಕೊಂದು ಲೋಹ ವರ್ಷಾಚರಣೆ
ಹ್ಹಹ್ಹ…ಪಂಚಾಂಗದ ಮೊಳೆಯ ಭದ್ರತೆಗೆ ಯಾರ ಹೊಣೆ?
ದೂರ ಎಲ್ಲೋ ಇರಬಹುದಾದ ಮಾನವಗೆ
ಏಲಿಯನ್ಸ್ನಾವು
ಅಮೇರಿಕೆಯ ವೈಟ್ಹೌಸಿನ ಇರುವೆಗೊ ಬೆಲ್ಲದಚ್ಚು
ದ್ವಾರಕೆಯ ಅಳಿದುಳಿದ ಕಲ್ಲಿಗೆ ಕೃಷ್ಣನೆನಪೊಂದೇ
ಇಲ್ಲೇ ತಲೆಮೇಲೆ ಸುತ್ತುವ ಹದ್ದಿನಕಣ್ಣಿಗೆ
ಮನುಜ ಯಾನೆ ಮನುಷ್ಯ ಮಾಂಸದ ತುಂಡು ಮಾತ್ರ!
ಕೂದಲೆಳೆ ಅಂತರದಲೂ ಸರ್ವಾಂತರ್ಯಾಮಿಯಾಗಿ
ಸಿದ್ಧಿಗಳಿಸಿ ಸುದ್ದಿಪಾತವಾಗುವ
ಭವಿಷ್ಯದಡ್ರಸ್ಸಿನಲಿ ಸುಖದ ಪಾಸ್ವರ್ಡ್ಗಳ
ತಡಕಾಡುತ ಕೂತಲ್ಲಿಯೇ
ಮಾಹಿತಿಯಾಗುವ ಮುದ್ದಾಂ ಪವಾಡ ಜನಕರು
ಮನೆಗೊಂದುಟೀವಿ; ಮನಸಲಿ ನೂರೊಂದು ಕೋವಿ
ತೆರೆ: ಒಂದು ವಿರಾಮದ ಸಾವು
ಜಗದ ಕೊನೆಯ ಕಲ್ಲಮೇಲೆ ಬಡಗೋಪಾಲನ ಆದ್ಯಂತಬರಹ:
ಹೌದು, ನಾನುಗಂಡು; ಅಲ್ಲ, ಹೆಣ್ಣು
ಹೌದು, ನಾನುವಿಸ್ಮಯ; ಅಲ್ಲ, ಪ್ರತ್ಯಯ
ಹೌದು, ನಾನುವರ್ಣ; ಅಲ್ಲ, ಭ್ರಾಂತು
ಹೌದು, ನಾನುಭಾವ; ಅಲ್ಲ, ತತ್ವ
ಹೌದು, ನಾನುಸಂಕೀರ್ಣ; ಅಲ್ಲ, ಸಂಪೂರ್ಣ
ಹೌದು, ಕೊನೆಯ ವಿರಾಮವೂ ಒಂದು ಮರಣ
ಅಲ್ಲ, ಮರಣದ ವಿರಾಮವೂ ಒಂದು ಜನನ






ಜೀವನದ ಅನ್ವೇಷಣೆ, ಮನ ಹಾಗು ತತ್ವಶಾಸ್ತ್ರಗಳ ಅನ್ವೇಷಣೆಗಳಿಂದ ತುಂಬಿದ ವಾಘ್ವೈಕರಿಯ ನವ್ಯ ಕಾವ್ಯ.
ಆದರೆ ಕಿರು ದೋಶವೇನೆಂದರೆ ಅಚ್ಚಕನ್ನಡವಲ್ಲದ ಕಂಗ್ಲಿಷ್ ಕೂಡಿಸಿಕೊಂಡಿರುವ ಆಹ್ವಾನಿತ ಕಿರು ಸಹಿತ್ಯ.
ವಿಜಯ ಮ.
koneya saalugaLu kaadidavu…uttama kavana.
ವಿಜಯ ಹಾಗೂ ಶೇಕ್, ನಿಮ್ಮ ಮುಕ್ತ ಅಭಿಪ್ರಾಯಕ್ಕೆ ಧನ್ಯವಾದಗಳು…