ನಿಮ್ಮ ಭಾರತದಲ್ಲಿ…. 
ದಿನೇಶ್ ಕುಮಾರ್ ಎಸ್ ಸಿ
ಚಿತ್ರ ಕೃಪೆ : ಎಂ ಎಫ಼್ ಹುಸೇನ್
ನಿಮ್ಮ ಭಾರತದಲ್ಲಿ
ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ ಎಂಬ
ಥರೇವಾರಿ ಬೋರ್ಡುಗಳು ಗಲ್ಲಿಗಲ್ಲಿಗಳಲ್ಲೂ ಕಾಣಸಿಗುತ್ತವೆ
.
ನಿಮ್ಮ ಭಾರತದಲ್ಲಿ
ಸುಟ್ಟುಹೋದ ದಾಕ್ಷಾಯಿಣಿಯರು
ಅತ್ಯಾಚಾರಕ್ಕೀಡಾದ ಅಹಲ್ಯೆಯರು
ಕಾಡಿಗಟ್ಟಲ್ಪಟ್ಟ ಸೀತೆಯರು
ಭರ್ತಿ ಸಭೆಯಲ್ಲಿ ಬೆತ್ತಲಾದ ದ್ರೌಪದಿಯರು
ದಂಡಿಯಾಗಿ ಸಿಗುತ್ತಾರೆ
.
ದಾಕ್ಷಾಯಿಣಿಯ ಬೂದಿ, ಅಹಲ್ಯೆಯ ರಕ್ತ
ಸೀತೆಯ ಎಲುಬು, ದ್ರೌಪದಿಯ ಕಟ್ಟಿದ ಮುಡಿಯಲ್ಲಿ
ಲಕ್ಷಲಕ್ಷ ದೇವದೇವಿಯರು ವಾಸವಾಗಿದ್ದಾರೆ
.
ಇದೇ ಭಾರತದಲ್ಲಿ
ಖೈರ್ಲಾಂಜಿಗಳಿವೆ, ಕಂಬಾಲಪಲ್ಲಿಗಳಿವೆ, ಬೆಂಡಿಗೇರಿಗಳಿವೆ
ಮನುಷ್ಯನ ಆತ್ಮಸಾಕ್ಷಿಯೇ ಸಂಭೋಳಿ ಸಂಭೋಳಿ ಎಂದು ಕೂಗುತ್ತ ಸಾಗುತ್ತಿದೆ
ಸೊಂಟಕ್ಕೆ ಕಟ್ಟಿಕೊಂಡ ಪೊರಕೆಗಳು ಗಲೀಜು ಗುಡಿಸಿ ಸವೆದುಹೋಗಿವೆ
ಇಂಡಿಯಾದ ಪ್ರಾಣವಾಯುವಿಗೆ ಬಲವಂತವಾಗಿ ಮಲ ತಿನ್ನಿಸಲಾಗಿದೆ
.
ಖೈರ್ಲಾಂಜಿಯ ನಡುಬೀದಿಯಲ್ಲಿ ಇರಿದು ಕೊಲ್ಲಲಾದ
ದಲಿತ ತಾಯಿ-ಮಗಳು ಮತ್ತೆ ಮತ್ತೆ ಹುಟ್ಟುತ್ತಿದ್ದಾರೆ
ಮತ್ತೆ ಮತ್ತೆ ಸಾಯುತ್ತಲೇ ಇದ್ದಾರೆ
.
ನಿಮ್ಮ ಭಾರತದಲ್ಲಿ
ಚಂದ್ರಗುತ್ತಿಗಳಿವೆ, ಅಲ್ಲಿ ಹೆಣ್ಣುಮಕ್ಕಳು ಬೆತ್ತಲಾಗುತ್ತಾರೆ
ದೇವದಾಸಿಯರು ಮುಡಿದ ಹೂವು
ನಿಮ್ಮ ಮಂಚಗಳ ಮೇಲೆ ನಲುಗಿಹೋಗುತ್ತವೆ
ದೇವರ ಹೆಸರಲ್ಲಿ ರತಿಕ್ರೀಡೆ ಶಾಸ್ತ್ರಸಮ್ಮತ
.
ನಿಮ್ಮ ಭಾರತದಲ್ಲಿ
ಗಂಡನೆಂಬುವನು ಸತ್ತ ಕಾರಣಕ್ಕೆ
ಪೂಜ್ಯ ನಾರಿಯರ ಮಂಡೆ ಬೋಳಿಸಲಾಗಿದೆ
ಹರಿಷಿನ ಕುಂಕುಮಗಳು ಅಗ್ರಹಾರಗಳ ಮೋರಿಯಲ್ಲಿ
ದಿಕ್ಕಾಪಾಲಾಗಿ ಹರಿದುಹೋಗಿವೆ;
ಒಡೆದ ಬಳೆಯ ಗಾಜುಗಳಿಗೆ
ಅಂಟಿದ ರಕ್ತ ಮೋರಿಯಲ್ಲಿ ತೊಳೆಯಲಾಗುತ್ತಿದೆ
.
ನಿಮ್ಮ ಭಾರತದಲ್ಲಿ
ಮುಟ್ಟಾದ ದೇವೀಸ್ವರೂಪಿಣಿ ಸ್ತ್ರೀಯರು
ಇನ್ನೂ ಗಡಗಡ ಚಳಿಯಲ್ಲಿ ನಡುಗುತ್ತ ಬೀದಿಯಲ್ಲಿ, ಕೊಟ್ಟಿಗೆಯಲ್ಲಿ ಬಿದ್ದಿದ್ದಾರೆ
ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ
ಕೊಟ್ಟಿಗೆಯ ಕಸದಲ್ಲಿ ನಾರಿಯರನ್ನು ಪೂಜಿಸಲಾಗುತ್ತದೆ
ಅಲ್ಲೇ ದೇವತೆಯರು ಹೋಲ್ ಸೇಲಾಗಿ ವಾಸ ಮಾಡುತ್ತಾರೆ
.
ನಿಮ್ಮ ಭಾರತದಲ್ಲಿ
ಮನು, ಶಂಕರಾಚಾರ್ಯರು ಉಂಡೆದ್ದ ಎಂಜಲೆಲೆಗಳ ಮೇಲೆ
ದೇಶದ ಆತ್ಮಸಾಕ್ಷಿಯನ್ನೇ ಉರುಳಿಬಿಡಲಾಗಿದೆ.
ಇಂಡಿಯಾ ಇನ್ನೂ ಹುಟ್ಟೇ ಇಲ್ಲ ಭಾಗವತರೆ
ಹುಟ್ಟಲು ನಿಮ್ಮ ಭಾರತ ಬಿಡುತ್ತಲೇ ಇಲ್ಲ






ದಿನೇಶಣ್ಣ… ಈ ಕವಿತೆಯನ್ನು ನಿನ್ನೆ ಸಂಜೆ ಫೇಸ್ ಬುಕ್ಕಿನಲ್ಲಿ ಓದಿದ್ದೆ. ಕಾಕತಾಳೀಯವೆಂದರೆ, ಇದೆ ತರಹನಾದ ಒಂದು ಕವಿತೆ ಬರೆಯಲು ನಿನ್ನೆ ಮಧ್ಯಾಹ್ನವೇ ನಾನು ಒಂದಷ್ಟು ಪಾಯಿಂಟ್ ಗಳನ್ನು ಗುಡ್ಡೆ ಹಾಕಿಕೊಂಡು ಸಂಜೆ ತಯಾರಿದ್ದೆ. ಆದರೆ, ನಿಮಗೆ ತಿಳಿದಿರುವ ವಿಚಾರಗಳ ಕಾಲು ಭಾಗವೂ ನನಗೆ ಗೊತ್ತಿರಲಿಲ್ಲ. ನಿಮ್ಮ ಕವಿತೆಯ ಮುಂದೆ ನನ್ನ ಸಪ್ಪೆ ಕವಿತೆ ಏನೇನೂ ಅಲ್ಲವೆಂಬಂತೆ ಆಗುತ್ತಿತ್ತು. ಎಷ್ಟು ವಿಚಾರಗಳ ಕ್ರೋಢಿಕರಣವಿದೆ ಈ ಕವಿತೆಯಲ್ಲಿ. ಸಮರ್ಥಿಸುವ ಎಷ್ಟೋ ಜನಗಳಿಗೆ ಇಂತಹ ವಿಚಾರಗಳು ನಗಣ್ಯ. ಅವರವರ ನಂಬಿಕೆ ಎಂಬ ಬೂಟಾಟಿಕೆ ಮಾತಿನಲ್ಲಿ ಎಲ್ಲವನ್ನೂ ಮುಚ್ಚಿಬಿಡುತ್ತಾರೆ… ಚೆನ್ನಾಗಿದೆ…
ಕಂದಾಚಾರ ಮತ್ತು ಕಟ್ಟುಪಾಡುಗಳನ್ನು ನಂಬಿ ಕೂತಿರುವ ಮೂರ್ಖರಿಗೆ ಸರಿಯಾಗಿ ಜಾಡಿಸಿದ್ದೀರಿ. ಈ ಕವಿತೆಯಲ್ಲಿ ಸಂಚಯಿಸಿರುವ ವಸ್ತು, ವಿಷಯ ಅಗಾಧವಾದುದು. ಸಾತ್ವಿಕವಾದ ರೋಷ – ಆವೇಶಗಳು ಕವಿತೆಯಾಗಿ ರೂಪು ಪಡೆದಿವೆ.
ಕೊಟ್ಟಿಗೆಯ ಕಸದಲ್ಲಿ ನಾರಿಯರನ್ನು ಪೂಜಿಸಲಾಗುತ್ತದೆ
ಅಲ್ಲೇ ದೇವತೆಯರು ಹೋಲ್ ಸೇಲಾಗಿ ವಾಸ ಮಾಡುತ್ತಾರೆ. ಇದನ್ನು ಹೇಳಲು ಯಾವ ಕೋಶವನ್ನು ಓದಬೇಕಿಲ್ಲ.ದಿನೇಶರಂತಹ ದನಿಯಿರುವವಗೆ ಭರವಸೆಯನ್ನು ಕಳೆದುಕೊಳ್ಳುವಂತಿಲ್ಲ.ಥ್ಯಾಂಕ್ಸ ದಿನೂ…..
Chennagideree kavithe ….
Super!!
ಜಿ.ಎನ್.ನಾಗರಾಜ್ ಆವರು ಶಾಸ್ತ್ರ, ಪುರಾಣಗಳಲ್ಲಿ (ವಿಶೇಷವಾಗಿ ಮನುವಾದದಲ್ಲಿ) ಸ್ತ್ರೀಯರನ್ನು ಹೇಗೆ ಚಿತ್ರಿಸಲಾಗಿದೆ ಎಂದು ಬರೆದಿದ್ದಕ್ಕೆ ವೆಂಕಟೇಶ್ ಎಂಬುವವರು ಈ ಲೇಖನ ಇಂದಿಗೆ ಅಗತ್ಯವಿತ್ತೇ ಎಂದು ಕೇಳಿದ್ದರು. ಇದಕ್ಕೆ ಜಿಎನ್ ಕೂಡ ಉತ್ತರಿಸಿದ್ದರು. ಅದರೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೇ ನಂತರ ಇನ್ನೂ ಚೆನ್ನಾಗಿ ವೆಂಕಟೇಶ್ ಅವರಿಗೆ ಉತ್ತರ ನೀಡಿದರು. ಹೆಣ್ಣು ಮನೆಯೊಳಗೆ ಇರಬೇಕು ಅಂತ. ಅದ್ಯಾರೋ ಮತ್ತೊಬ್ಬ ಗುರು ಅಸಾರಾಂ (ಅಧ್ಯಾತ್ಮ ಹೇಳೋರು) ಪಾಪ ಭಾಗವತ್ ಹೇಳಿದನ್ನೇ ಹೇಳಿದರು. ಈಗ ನೀವು ಮನುವಾದ ಹೇಳುವವರ ಭಾರತವನ್ನು ಹೇಳಿದ್ದೀರಿ. ಮುಂದೆ ನಿಮನ್ನ ಢೋಂಗಿ ಅಂಥ ಒಂದು ಬ್ರಾಂಡ್ ಮಾಡ್ತಾರೆ. ಅದಕ್ಕೊಂದು ಪತ್ರಿಕೆ ಮಧ್ಯದ ಪುಟದಲ್ಲಿ ಆರ್ಧ ಪುಟವನ್ನು ಕೊಡುತ್ತೆ. ಶನಿವಾರ ನಿಮ್ಮನ್ನು”ಬೆತ್ತಲೆ’ ಮಾಡೋ ಪ್ರಯತ್ನ ಅಗುತ್ತೆ. ಸತ್ಯ ಹೇಳಿದ್ರೆ ಹೀಗಾಗುತ್ತೆ ನೋಡಿ. ಅದರೆ ನೀವು ಹೇಳಿದ ಸತ್ಯಕ್ಕೆ ನನ್ನ ಸಹಮತವಿದೆ.
ವಂದನೆಗಳೊಂದಿಗೆ
idu ನಮ್ಮ ಭಾರತ ಅಲ್ಲಾ……………
ನಿಮ್ಮ ಭಾರತದಲ್ಲಿ
ಮುಟ್ಟಾದ ದೇವೀಸ್ವರೂಪಿಣಿ ಸ್ತ್ರೀಯರು
ಇನ್ನೂ ಗಡಗಡ ಚಳಿಯಲ್ಲಿ ನಡುಗುತ್ತ ಬೀದಿಯಲ್ಲಿ, ಕೊಟ್ಟಿಗೆಯಲ್ಲಿ ಬಿದ್ದಿದ್ದಾರೆ
ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ
ಕೊಟ್ಟಿಗೆಯ ಕಸದಲ್ಲಿ ನಾರಿಯರನ್ನು ಪೂಜಿಸಲಾಗುತ್ತದೆ
ಅಲ್ಲೇ ದೇವತೆಯರು ಹೋಲ್ ಸೇಲಾಗಿ ವಾಸ ಮಾಡುತ್ತಾರೆ
wahhhhh gud linessssss,idu appata sathya
E kavithe monneye odhi like madi cmnt madi shre maddhe adhela kammiye e kavanakke yndhendu kaduva kavana
ninege endige nalle yndhendu e kavana prasthutha
ಏಕೆ ಭಾರತವನ್ನು “ಇಂಡಿಯಾ” ಆಗಿಸುತ್ತಿದ್ದೀರಿ?