ಮನುಷ್ಯ ಗುಣಮುಖನಾಗಬೇಕಿದೆ!


ಈ ವಾರ ಒಂದು ವಿಚಿತ್ರ ಸಂಕಟವನ್ನು ಅನುಭವಿಸಬೇಕಾಯಿತು. ಜಮ್ಮು-ಕಾಶ್ಮೀರದ ಕಠುವಾದಲ್ಲಿ  ಜಗತ್ತಿನ ಒಳ-ಹೊರಗುಗಳನ್ನೆ ಕಾಣದ ೮ ವರ್ಷ ವಯಸ್ಸಿನ ಹೆಣ್ಣು ಮಗುವೊಂದನ್ನು ದೇವಸ್ಥಾನದ ಅಂಗಳದಲ್ಲೇ ಸಾಮೂಹಿಕ ಅತ್ಯಾಚಾರವೆಸಗಿದ್ದ ಮಾನವ ರೂಪದ ಮೂವರು ನರರಾಕ್ಷಸರಿಗೆ ಪಠಾಣ್‌ಕೋಟ್  ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ಇತರೆ ಮೂವರಿಗೆ ತಲಾ ಐದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದ ತೀರ್ಪು ಕೇಳಿದಾಕ್ಷಣ ಒಂದು ಧೀರ್ಘ ನಿಟ್ಟುಸಿರುಬಿಟ್ಟೆ.

ಈ ನೆಲದ ನ್ಯಾಯಕ್ಕೆ ಇನ್ನೂ ಕಣ್ಣು, ಹೃದಯವಿದೆ ಎಂಬ  ವಿಶ್ವಾಸ ಗಟ್ಟಿಗೊಂಡು ಸಮಾಧಾನಕ್ಕೆ ಮರಳುವ ಹೊತ್ತಿಗೆ ಈ ದೇಶದ ಜಾತಿವಾದ, ಕೋಮುವಾದ ದ ವಿರೋಧಿನೆಲೆಯ ಗಟ್ಟಿದನಿಯಾಗಿದ್ದ, ಜಗತ್ತಿನ ಸಾಂಸ್ಕೃತಿಕ ಲೋಕಕ್ಕೆ ವೈಚಾರಿಕ ಬೆಳಕಿನ  ಕೈ ದೀಪ  ಹಿಡಿದ ರಂಗಪ್ರಭೆ ಗಿರೀಶ್‌ಕಾರ್ನಾಡ್ ಅವರು ಅಗಲಿದೆ ಸುದ್ದಿ ಈ ಹೊತ್ತಿನಲ್ಲಿ ಕುಸಿದು ಕೂರುವಂತೆ ಮಾಡಿತು.

೨೦೧೮ ಜನವರಿ ೧೦ ರಂದು ಜಮ್ಮು-ಕಾಶ್ಮೀರ ಹಸಿರುವ ಕಣಿವೆಯ ರಸನಾ ಗ್ರಾಮದ  ಬುಡಕಟ್ಟು ಸಮುದಾಯದ ೮ ವರ್ಷದ  ಆಸೀಫಾ  ಎಂದಿನಂತೆ ಕುದುರೆಗಳನ್ನು ಮೇಯಿಸಲು ಕಣಿವೆಗೆ ಹೋಗಿದ್ದಳು. ಆಕೆಯನ್ನು ಅಪಹರಿಸಿ ದೇವಸ್ಥಾನದೊಳಗೆ ಕೂಡಿ ಮತ್ತು ಬರುವ ಔಷಧಿ ನೀಡಿ ನಾಲ್ಕು ದಿನಗಳ ಕಾಲ ನಿರಂತರವಾಗಿ ಆ ಮಗುವಿನ ಮೇಲೆ ಅತ್ಯಾಚಾರವೆಸಗಿದ್ದ ಪಾಪಿಗಳು ಕೊನೆಗೆ ಕುತ್ತಿಗೆ ಹಿಸುಕಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆಗೈದಿದ್ದರು. ಈ ಹೊತ್ತಿಗೆ ದೇವರು ಎಂಬ ದೇವರೆ ತಲೆಮರೆಸಿಕೊಂಡು ಹೋಗಿದ್ದ.!

ರಸನಾ ಗ್ರಾಮದ ಈ ಬುಡಕಟ್ಟು ಸಮುದಾಯವನ್ನು ಈ ಪ್ರದೇಶದಿಂದ ಓಡಿಸಲೆಂದೆ ಧರ್ಮರಕ್ಷಕಕರು ಇಂತಹದ್ದೊಂದು ಪೈಶಾಚಿಕ ಕೃತ್ಯವನ್ನು ಎಸಗಿದ್ದಾರೆ ಎಂಬುದನ್ನು ಪೊಲೀಸರು ತಮ್ಮ ಆರೋಪ ಪಟ್ಟಿಯಲ್ಲಿ ದಾಖಲಿಸಿರುವುದು ದಿಗಿಲು ತಂದ ಸಂಗತಿ. ಹಾಗಂತ ಇದು ಕೊಲ್ಲುವ , ಇಲ್ಲವಾಗಿಸುವ ಹೊಸ ಸೂತ್ರವೇನಲ್ಲ, ಜಮ್ಮು ಕಾಶ್ಮೀರದಲ್ಲಿ ಇಂತಹ ಕೃತ್ಯಗಳು ನಡೆಯುತ್ತಲೆ ಇವೆ.

ದೇಶ ಕಂಡ ಕೋಮುಗಲಭೆಗಳಲ್ಲಿ ಅತ್ಯಾಚಾರ, ಹತ್ಯೆಗಳ ಮೂಲಕವೇ ತಮ್ಮ ಧರ್ಮದಾಹ ತೀರಿಸಿಕೊಂಡ ಚರಿತ್ರೆಯೇ ಇದೆ. ಆಸೀಫಾಳ  ಅತ್ಯಾಚಾರ-ಹತ್ಯೆಯ ನಂತರ ಈ ದೇಶದ  ಮನುಷ್ಯರೆನಿಸಿಕೊಂಡವರೆಲ್ಲಾ ಮರುಗಿದರು. ಖಂಡಿಸಿದರು. ಕ್ರಮಕ್ಕೆ ಆಗ್ರಹಿಸಿದರು. ಆದರೆ ಅತ್ಯಂತ ನಾಚಿಕೆಗೇಡಿನ ಸಂಗತಿಯೆಂದರೆ ಕ್ಷುಲ್ಲಕ ರಾಜಕೀಯ, ಧರ್ಮದ ಕೇಡಿನ ಗೆದ್ದಲು ಹತ್ತಿದ ಈ ದೇಶದ ವರ್ಗವೊಂದು  ಆಸೀಫಾ ಎಂಬ ಕಂದನ ಮೇಲಿನ ಅಮಾನುಷ ಅತ್ಯಾಚಾರವನ್ನು, ಹತ್ಯೆ ಮಾಡಿದವರನ್ನು ಸಮರ್ಥಿಸುವಂತೆ ನಡೆದುಕೊಂಡಿತು.

ಧರ್ಮದ ಕಾರಣಕ್ಕಾಗಿಯೇ ಕೂಸಿನ ಸಾವನ್ನೂ ಕನಿಷ್ಠ ಖಂಡಿಸದೆಯೂ, ಈ ದುಷ್ಟರಿಗೆ ಗರಿಷ್ಠ ಬೆಂಬಲವನ್ನು ನೀಡುವ ಮೂಲಕ ತಮ್ಮ ಪೈಶಾಚಿಕತವನ್ನು ತೋರಿತು. ಈಗ ನ್ಯಾಯಪೀಠ ಇವೆಲ್ಲವನ್ನೂ ಹಂಸಕ್ಷೀರ ನ್ಯಾಯದಂತೆ ಎತ್ತಿ ಹಿಡಿದಿದೆ. ಕಣಿವೆ ಸುತ್ತ ತನ್ನ ಕುದುರೆಗಳೊಂದಿಗೆ ಹಸಿರು, ಹೂವು , ನೀರಝರಿ, ಬೆಟ್ಟಗುಡ್ಡಗಳೊಂದಿಗೆ ನಿಷ್ಮಲ್ಮಶ ಸಂಭ್ರಮದಿಂದ ಹಾಡಿ,ಕುಣಿದು ನಲಿಯಬೇಕಾದ ವಯಸ್ಸಿನಲ್ಲಿ ಆಸೀಫಾ ಎಂಬ ಎಂಟು ವರ್ಷದ ಬಾಲಕಿ ದೇಗುಲದ ಒಳಗೆ ನಾಲ್ಕು ದಿನಗಳ ಕಾಲ ನರಳಿ ನರಳಿ ಜೀವ ಬಿಟ್ಟದ್ದು ಮಾತ್ರ ಘನಘೋರ.

ನಿರ್ಭಯ, ಪ್ರತಿಭಾ ಪ್ರಕರಣದಲ್ಲಿ ದೇಶವೇ ಎದ್ದು ನಿಂತು ಬಿಕ್ಕಿದಂತೆ, ಸಿಟ್ಟುಗೊಂಡಂತೆ ಆಸೀಫಾ ಪ್ರಕರಣದಲ್ಲಿ ನಾವು ಕಾಣಲು ಸಾಧ್ಯವಾಗಲಿಲ್ಲ ಎಂಬುದು ಮಾತ್ರ  ದುರಂತವೇ ಸರಿ,  ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಹತ್ಯೆಗಳು ಕೂಡ  ಧರ್ಮ ಮತ್ತು ರಾಜಕಾರಣದ ಸುಳಿಯಲ್ಲಿ   ಸೀಳುವುದು ಬಹುಶಃ ನಮ್ಮ ದೇಶದಲ್ಲಿ ಮಾತ್ರ .

ಆಸೀಫಾಳ ಕೊಲೆಗಡುಕರಿಗೆ ಶಿಕ್ಷೆಯಾಗಿದೆ. ಆದರೆ ಕಣಿವೆಯಲ್ಲಿ ಆಸೀಫಾ ಇಲ್ಲ.  ಇನ್ನೆಂದೂ ಆಸೀಫಾ ಬರಲಾರಳು, ಮೇಯಲು ಹೋದ ಅವಳ ಕುದುರೆಗಳು  ಮಾತ್ರ  ವಾಪಾಸ್ ಬಂದಿವೆ.  ಆಸೀಫಾಳ ಇಲ್ಲವಾದ ದಿನ ನಾನು ಬರೆದ ಈ ಈ ಕವಿತೆ ನ್ಯಾಯಾಲಯದ ತೀರ್ಪು ಹೊರಬಂದ ಈ ಘಳಿಗೆಯಲ್ಲಿ  ನೆನಪಾಗಿ ಕಣ್ಣು ತೇವಗೊಂಡವು.
ನಾನು ಆಸೀಫಾ..

ನಾನು ಹಸಿರ ಕಣಿವೆಯಲ್ಲಿ
ಮೆತ್ತನೆಯ ಹುಲ್ಲು,ಹೂ ಗಿಡಗಳು, ಕಣಿವೆಯ
ಕಲ್ಲುಗಳ ಜೊತೆ ನಿತ್ಯ ಮಾತಾಡುತ್ತಿದ್ದೆ..
ಅವೆಂದೂ ನನ್ನ ಹಿಡಿದೆಳೆದಾಡಲಿಲ್ಲ.

ತುಂಡು ಲಂಗಕ್ಕೆ ನೆಟ್ಟು ಎಳೆದ
ಮುಳ್ಳು ಮೊನೆಯೊಂದು
ಮೆದು ಬೆರಳು ಸೋಕಿದೊಡನೆ
ಶರಣಾಗುತ್ತಿತ್ತು.

ನನ್ನ ಹೆಜ್ಜೆ ಜಾಡು ಹಿಡಿದೆ ಬರುತ್ತಿದ್ದ
ಕುದುರೆ,ಕುರಿಗಳು
ಎಂದಾದರೂ  ನನ್ನ ಪಾದ ತುಳಿದು ನೋವಿಟ್ಟ ನೆನಪಿಲ್ಲ
ಅವು ಈ ಮನುಷ್ಯರಂತಲ್ಲ.

ದೇವರ ಕೋಣೆಯಲ್ಲಿ ನಾನು ಉಸಿರುಗಟ್ಟಿದ್ದೆ
ಅಂಗಾಂಗಗಳ ಮೇಲೆ ದೇವರು ಕುಣಿದಿದ್ದ
ನನ್ನ ಕೆಂಪು ಕೆಂಪು ಒಡಲು
ಈಗ ಉರಿದು ಇದ್ದಿಲಾಗಿತ್ತು.
ಕಣ್ಣೀರು ಕಣಿವೆಯಲ್ಲಿ ಧುಮ್ಮಿಕ್ಕಿತ್ತು
ದೇವರು ಸುಮ್ಮನೆ ಇದ್ದ..

ಆ ದೇವರ ಸನ್ನಿಧಿಯಲ್ಲಿ ನರಕವೊಂದ ಕಂಡೆ
ನನ್ನ ರಕ್ತ,ಮಾಂಸ,ಮೂಳೆಗಳ
ನೈವೇದ್ಯ ಇರಿಸಿದರು.
ಅಗ್ನಿಕುಂಡದಲ್ಲಿ ಹವಿಸ್ಸಾಗಿ ಸುರಿದು ಸುಟ್ಟರು.

ನಾ ಬರುವ ಹೊತ್ತಾಯಿತು
ಅಮ್ಮೀ ಕಾಯುತ್ತಿದ್ದಾಳೆ
ಬಿಸಿ ಬಿರಿಯಾನಿಯ ಕೈತುತ್ತ ಮಿದ್ದಿಕೊಂಡು
ಕಣಿವೆಯ ದಾರಿ ದಾರಿ ನೋಡುತ್ತಾ,
ಅವಳ ಕರುಳು ಇಂದು ಸಂಕಟಿಸದೆ ಇದ್ದಿಲ್ಲ
ಕುರಿ,ಕುದುರೆಗಳು ನನ್ನ ಹೆಜ್ಜೆಯ ಜಾಡು  ಮೂಸುತ್ತಾ
ತಿರುಗುತ್ತಿವೆ.

ಅಬ್ಬಾ  ಹೇಳಿದ ಫರ್ವಧಿಗಾರ ಬರಲೇ ಇಲ್ಲ ನನ್ನ ರಕ್ಷಿಸಲು.
ಇರಲಿ ಬಿಡು,
ಮನುಷ್ಯರಂತೆ ನೀನೂ ಎಷ್ಟೊಂದು ಕ್ರೂರಿ
ನಿನ್ನನ್ನು ಕ್ಷಮಿಸಿದ್ದೇನೆ. ಮುಂದಿನ ಜನ್ಮವೆಂದಿದ್ದರೆ
ನೀನು ಕುರಿ,ಕುದುರೆಯಾಗೇ ಹುಟಿ ಬಿಡು.

ನೀನು,ನಿನ್ನ ಭಕ್ತರು ಇಲ್ಲವೆಂದಾದಾಗ
ನನ್ನ ಕುರಿ,ಕುದುರೆಯೊಂದಿಗೆ ,
ಹೂವು, ಕಣಿವೆಯೊಂದಿಗೆ ನಿರುಮ್ಮಳವಾಗಿ ನೆಗೆದಾಡುತ್ತಾ
ಅಮ್ಮಿಯ ತೋಳು ಸೇರಿಕೊಳ್ಳುತ್ತೇನೆ.
ಅಲ್ವಿದಾ
ನಾನು ಆಸೀಫಾ..

****

ಗಿರೀಶ್ ಕಾರ್ನಾಡ್  ಇನ್ನಿಲ್ಲ ಎಂಬುದನ್ನು ಊಹಿಸಿಕೊಳ್ಳಲು ಕಷ್ಟವಾದೀತು. ಧುರಿತ ಕಾಲದಲ್ಲಿ ವೈಚಾರಿಕ, ಸಾಂಸ್ಕೃತಿಕ ಚಳವಳಿಯ ಗಟ್ಟಿದನಿಯೊಂದು ಮುಳುಗಿ ಹೋಯಿತು. ಬದುಕಿದ್ದಾಗಲೂ  ಅರ್ಥಪೂರ್ಣ ಮತ್ತು ಸಾವಿನಲ್ಲೂ ಅರ್ಥಪೂರ್ಣವಾಗಿಯೇ ನಿರ್ಗಮಿಸಿದ ಕಾರ್ನಾಡರು ಬಿಟ್ಟುಹೋದ ಬಳುವಳಿಗಳು ಎಂದಿಗೂ ಈ ದೇಶದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಚಳವಳಿಯ ಕೈಮಾರ್ಗಗಳೆ ಆಗಬಲ್ಲವು.

ಅವರ ಕುರಿತಾಗಿ ಬರೆದಷ್ಟು ಕಡಿಮೆಯೇ. ಅವರಿಗೆ ಘನತೆಯ ಬೀಳ್ಕೊಡುವುದು ಎಂದರೆ ಅವರ ಬದ್ದತೆ, ಸೌಹಾರ್ಧ ಭಾರತದ ಕನಸನ್ನು ಕಟ್ಟಲು ಪಣತೊಡುವುದೇ ಆಗಿರುತ್ತದೆ. ಕಲ್ಬುರ್ಗಿ, ಗೌರಿ ಅವರ  ಹತ್ಯೆಯನ್ನು ಸಂಭ್ರಮಿಸಿದವರೆ ಕಾರ್ನಾಡರ ಸಾವಿಗೂ ಸಂಭ್ರಮಿಸಿದರು,  ಸೈದ್ಧಾಂತಿಕ ವಿರೋಧಿಗಳು  ಕಾರ್ನಾಡರ ಹೆಣದ ಮೇಲೆ ನಿಂದನೆಗಳು, ಉಗುಳು ತೂರಿ ಸ್ವರ್ಗದಲ್ಲಿ ಜಾಗ ಕಾಯ್ದಿರಿಸಿಕೊಂಡರೆ ಮತ್ತೆ ಕೆಲವರು ಅಜರಾಮರರಾಗಿ ಉಳಿದ  ಭಾವದಲ್ಲಿ ತೇಲತೊಡಗಿದರು.

ಮನುಷ್ಯ ಅದೆಷ್ಟು ರೋಗಗ್ರಸ್ಥ. ಯಾರೊಬ್ಬರ ಸಾವನ್ನು ಸಂಭ್ರಮಿಸುವವನು ಮೊದಲೆ ಸತ್ತುಹೋಗಿರುತ್ತಾನೆ.  ಇಂತಹದ್ದೆ ನೋವಿನಲ್ಲಿ ಇರುವಾಗ ಗುಂಡ್ಲುಪೇಟೆಯಲ್ಲಿ ವ್ಯಕ್ತಿಯೊಬ್ಬನನ್ನು  ರಕ್ತ ಸೋರುವಂತೆ ಬಡಿದು , ಬೆತ್ತಲೆ ಮಾಡಿ ಕೈಗಳನ್ನುಕಟ್ಟಿ ನಡುರಸ್ತೆಯಲ್ಲಿ  ಮೆರವಣಿಗೆ ಮಾಡಿದ ದೃಶ್ಯವೊಂದನ್ನು ನೋಡಿದಾಗ  ದಿಗಿಲುಗೊಂಡು ಬಿಟ್ಟೆ, ಇದು ರಾಜ್ಯದ ಮಾನವನ್ನೆ ಹರಾಜುಗಿಟ್ಟ ಘಟನೆ. ಜಾತಿ ಕಾರಣವೋ, ಆತ ಮಾನಸಿಕ ಅಸ್ವಸ್ಥನೋ, ಕಳ್ಳನೋ ಯಾರೇ ಇರಲಿ ಮನುಷ್ಯನೆನಿಸಕೊಂಡವನನ್ನು ಇಷ್ಟೊಂದು ಅಮಾನುಷವಾಗಿ ಮನುಷ್ಯರೆನಿಸಿಕೊಂಡವರೆ ನಡೆಸಿಕೊಂಡದ್ದು ಸಮಾಜಕ್ಕೆ ಘನಘೋರ ರೋಗದ ಸೋಂಕು ತಗುಲುತ್ತಿರುವುದು ಗೋಚರಿಸುತ್ತಿದೆ.

ಸಂವೇದನೆಗಳೇ ಸತ್ತು ಮೆರವಣಿಗೆ ಹೊರಟಂತೆ ಭಾಸವಾಗುತ್ತಿದೆ.  ಮನುಷ್ಯ ಗುಣಮುಖನಾಗಬೇಕಾಗಿದೆ.

‍ಲೇಖಕರು avadhi

June 14, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. Rekha

    Nanu asifa…oduthidda haage kannanchu thevavaythu…devaredure anyaya nadede hoythalla….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: