ಮನಸ್ಸು ಗೆದ್ದ ಐಶ್ವರ್ಯಾ ಕಶ್ಯಪ್

 ಐಶ್ವರ್ಯಪೂರ್ಣ ಕೃಷ್ಣಾರ್ಪಣಮಸ್ತು

ಶಿವಾನಿ ಹೊಸಮನಿ

‘ಲಾಸ್ಯವರ್ಧನ ಟ್ರಸ್ಟ್’ನ ಗುರು ಡಾ. ಮಾಲಿನಿ ರವಿಶಂಕರ್ ಅವರ ಶಿಷ್ಯೆ ಕುಮಾರಿ ಐಶ್ವರ್ಯಾ ಕಶ್ಯಪ್ ಅವರ ರಂಗಾರೋಹಣವು ನಗರದ ಎಡಿಎ ರಂಗಮಂದಿರದಲ್ಲಿ ನಡೆಯಿತು. ಶ್ರೀಕೃಷ್ಣನ ಕೊಳಲು, ನವಿಲುಗರಿ, ಕಮಲ, ಶಂಖ, ಚಕ್ರಗಳಿಂದ ಅಲಂಕೃತಗೊಂಡ ವೇದಿಕೆಯಲ್ಲಿ ಸಂಗೀತ ವಿದ್ವಾಂಸರುಗಳ ಅತ್ಯಂತ ಸುಶ್ರಾವ್ಯ ಸಂಗೀತದೊಂದಿಗೆ ಕಾರ್ಯಕ್ರಮವು ಶುಭಾರಂಭಗೊಂಡಿತು.

ಆರಂಭಿಕ ನೃತ್ಯ ಪುಷ್ಪಾಂಜಲಿ, ಕೈಗಳಲ್ಲಿ ಪುಷ್ಪವನ್ನು, ಮನಸ್ಸಿನಲ್ಲಿ ಭಕ್ತಿಯನ್ನು ತುಂಬಿಕೊಂಡು ಕಲಾವಿದೆ ಐಶ್ವರ್ಯ ಕಶ್ಯಪ್ ತಮ್ಮ ಮೊದಲನೆಯ ನೃತ್ಯ ಪುಷ್ಪಾಂಜಲಿಯಲ್ಲಿ ಆರಾಧ್ಯ ದೈವ ನಟರಾಜ ಹಾಗೂ ವಿದ್ಯೆ ಕಲಿಸಿದ ಗುರುಗಳಿಗೆ ಹಾಗೂ ಕಲಾರಸಿಕರಿಗೆ ಭಕ್ತಿ ನಿವೇದನೆಯನ್ನು ಮಾಡಿದರು. ಇದರಲ್ಲಿ ಕಲಾವಿದೆಯ ಲವಲವಿಕೆಯ ಚಲನೆಗಳು, ಅಭಿನಯ ಎಲ್ಲರ ಗಮನ ಸೆಳೆಯಿತು. ಸೂರ್ಯ ರಾಗ ಆದಿತಾಳದ ಪುಷ್ಪಾಂಜಲಿಯ ಜೊತೆ ಅಡಕವಾಗಿದ್ದ ವಿಘ್ನವಿನಾಯಕ ಸಿದ್ಧಿಬುದ್ಧಿ ಪ್ರದಾಯಕನಾದ ಗಣೇಶನ ಪ್ರಾರ್ಥನೆಯಲ್ಲಿ ಗಣೇಶ ತನ್ನ ದಂತ ಮುರಿದು ವೇದವ್ಯಾಸರಿಗೆ ಮಹಾಭಾರತ ಬರೆದುಕೊಟ್ಟಂಟಹ ಪ್ರಸಂಗವನ್ನು ಒಳಗೊಂಡಿತ್ತು. ಮೋಹನ ಕಲ್ಯಾಣಿ ರಾಗ ಆದಿ ತಾಳದಲ್ಲಿ ನಿಬದ್ಧವಾಗಿದ್ದ ಇದು ಹರಿಕೇಷ ನಲ್ಲೂರು ಮುತ್ತಯ್ಯ ಭಾಗವತರ ಕೃತಿಯಾಗಿತ್ತು.

ಹರಿದಾಸರು ರಚಿಸಿರುವಂತಹ ಒಂದು ಸುಳಾದಿಯ ಪ್ರಸ್ತುತಿ. ಗೋಪಾಲ ವಿಠ್ಠಲ ದಾಸರು ರಚನೆ ಮಾಡಿರುವ ಅತ್ಯುತ್ತಮವಾದ ಸಾಹಿತ್ಯ ಹೂರಣವನ್ನು ಹೊಂದಿರುವ ಈ ಸುಳಾದಿಯಲ್ಲಿ ತಮ್ಮ ಆರಾಧ್ಯ ದೈವ ಕೃಷ್ಣನ ಲೀಲೆ, ಆಟೋಟಗಳನ್ನು ವೈವಿಧ್ಯಮಯವಾಗಿ ವಿಭಿನ್ನ ಮಟ್ಟುಗಳಲ್ಲಿ ಹಾಡಿ ಹೊಗಳಿದ್ದಾರೆ. ಹರಿಯ ವರ್ಣನೆಯನ್ನು ವಿಹಂಗಮವಾಗಿ ಹೊಂದಿರುವ ಈ ನೃತ್ಯಬಂಧದಲ್ಲಿ ಭಕ್ತರನ್ನು ಕಾಯುವ ದಾಮೋದರನ ಸುಂದರ ವರ್ಣನೆಯನ್ನು ಕಲಾವಿದೆಯು ಚೈತನ್ಯಪೂರ್ಣವಾದ ಜತಿಗಳು ಹಾಗೂ ಭಾವದ ನವಿರಿನ ನರ್ತನ ಸೊಗಸಾಗಿ ಮೂಡಿ ಬಂತು. ಈ ನೃತ್ಯ ಸಂಗೀತವನ್ನು ವಿದುಷಿ ಉಮಾ ಕುಮಾರ್ ಅವರು ಸಂಯೋಜಿಸಿದ್ದು ಧ್ರುವ, ಮಠ್ಯ, ಝಂಪೆ, ತ್ರಿಪುಟ, ಅಟ್ಟ ತಾಳಗಳ ವೈವಿದ್ಯತೆಯನ್ನು ಹೊಂದಿದ್ದು ರಾಗಮಾಲಿಕೆಗೆ ಅಳವಡಿಸಲ್ಪಟ್ಟಿತ್ತು.

ಮುಂದಿನ ನೃತ್ಯ ಶಬ್ದಂ. ನಾಟ್ಯಾಚಾರ್ಯ ಎಚ್. ಆರ್. ಕೇಶವಮೂರ್ತಿಯವರ ಸುಲಲಿತ ರಚನೆಯಾದಂತಹ ಶಬ್ದಂನಲ್ಲಿ ಕೃಷ್ಣ ಸದಾ ಕಾಲ ತನ್ನ ಕರದಲ್ಲಿ ನಲಿದಾಡಿಸುವಂತಹ ಕೊಳಲು, ಮುರಳಿಯನ್ನು ಕೃಷ್ಣನ ಇನಿಯಳಂತೆ ಚಿತ್ರಿಸಿದ್ದು ವಿಶೇಷವೆನಿಸಿತು. ತನ್ನ ಅಧರದಲ್ಲಿ ವೇಣುನಿನಾದವನ್ನು ಗೈಯುವ ಕೃಷ್ಣನ ಜೊತೆ ಇರುವುದು ಮುರಳಿಯ ಭಾಗ್ಯವೆಂದು ವರ್ಣಿಸಲಾಗಿದೆ. ಬೆಣ್ಣೆ ಕಡೆಯುತ್ತಿದ್ದ ಗೋಪಿಕೆಯು ಕೃಷ್ಣನು ನುಡಿಸುತ್ತಿರುವ ನಾದ ಕೇಳಿ ಮೈಮರೆತು ಅವನನ್ನು ಹುಡುಕಿದಾಗ ಆತ ಸಿಗದೇ ಹೋಗುವ ಚಿತ್ರಣ, ಮೂರು ಲೋಕವನ್ನು ಮರೆಗೊಳಿಸುವ ಮುರಳಿ ಕೃಷ್ಣನ ಇನಿಯಳು ಎಂದು ಬಣ್ಣಿಸಲಾಗಿದೆ. ಈ ಪ್ರಸ್ತುತಿಯಲ್ಲಿ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಗೋಪಾಲಕರನ್ನು ರಕ್ಷಿಸುವ ಕಥೆಯನ್ನು ಒಳಗೊಂಡಿತ್ತು. ಪರವಶಳಾದ ಕಲಾವಿದೆಯು ವೇಣುನಾದದ ಮಾಧುರ್ಯವನ್ನು ಸುಂದರವಾಗಿ, ಮುಗ್ಧ ಅಭಿಯನದ ಮೂಲಕ ಕಲಾರಸಿಕರ ಮನಸೆಳೆದರು.

ರಂಗಪ್ರವೇಶದ ಮುಖ್ಯ ಭಾಗವಾದ ವರ್ಣದಲ್ಲಿ ದೀನಬಂಧು ದೇವ ಕೃಷ್ಣನ ಮೇಲೆ ಬರೆದಿರುವಂತಹ ಭಕ್ತಿಭಾವದಿಂದ ಕೂಡಿರುವಂಟಹ ರಚನೆ, ಕೃಷ್ಣನ ಗೆಳೆಯನಾದ ಸುಧಾಮ ಬಹಳ ಕಷ್ಟದ ಸಮಯದಲ್ಲಿ ತನ್ನ ಗೆಳೆಯನ ಮನೆಗೆ ಅವನಿಗಿಷ್ಟವಾದ ಅವಲಕ್ಕಿಯನ್ನು ಕಟ್ಟಿಕೊಂಡು ಹೋಗುತ್ತಾನೆ.ಅದನ್ನು ಕೃಷ್ಣ ಅತ್ಯಂತ ಪ್ರೀತಿಯಿಂದ ತಿನ್ನುತ್ತಾನೆ. ಆದರೆ ಸುಧಾಮ ತನ್ನ ಸಮಸ್ಯೆ ಹೇಳಿಕೊಳ್ಳಲಾಗದೆ ಹಿಂದಿರುಗಿದಾಗ, ಸನ್ಮಿತ್ರನಾದ ಗೋಪಾಲನು ತನಗೆ ಸಕಲ ಐಶ್ವರ್ಯಗಳನ್ನು ದಯಪಾಲಿಸಿರುವುದನ್ನು ಕಂಡು ಅಚ್ಚರಿಗೊಳಗಾಗುತ್ತಾನೆ. ಈ ಪ್ರಸಂಗದಲ್ಲಿ ಕಲಾವಿದೆಯು ಅವರಿಬ್ಬರ ಗೆಳೆತನವನ್ನು ಅತ್ಯಂತ ಮನಮೋಹಕವಾಗಿ ತೋರಿಸಿಕೊಟ್ಟರು. ಮುಂದೆ ಗಜೇಂದ್ರ ಮೋಕ್ಷದ ಕಥೆ, ವಾಸುದೇವನ ದಶ ಅವತಾರಗಳನ್ನು ಎತ್ತಿ, ಸಂಭವಾಮಿ ಯುಗೇ ಯುಗೇ ಎಂಬ ತನ್ನ ಮಾತಿಗೆ ನಿಂತ ಕೃಷ್ಣ ಎಂದು ಬಣ್ಣಿಸಲಾಗಿದೆ. ದೀನಬಂಧು ದೇವಾ ನಿನ್ನನೇ ನಂಬಿದ್ದೇನೆ, ಪನ್ನಗಶಯನ ನನ್ನ ಕೈಯನ್ನು ಬಿಡಬೇಡ ಎಂಬ ಭಕ್ತಿಭಾವದ ಅರ್ಪಣೆ. ಇದೆಲ್ಲದ ಜೊತೆಗೆ ಅಚ್ಚುಕಟ್ಟಾದ ಜತಿಗಳ ಪ್ರದರ್ಶನ, ನಿಖರ ಹಸ್ತಮುದ್ರೆಗಳು. ಉತ್ಪ್ಲವನಗಳು, ಮುಕ್ತಾಯಗಳು ಕಲಾವಿದೆಯ ಪರಿಪಕ್ವ ಅಭಿನಯ ವರ್ಣಕ್ಕೆ ಮೆರುಗು ತಂದಿತು. ಈ ವರ್ಣವು ಕೀರ್ತಿಶೇಷ ಗುರು ವಸಂತವೇದಂ ಅವರ ನೃತ್ಯ ಸಂಯೋಜನೆಯಾಗಿದ್ದು ಕಲಾವಿದೆಯು ಗುರು ಡಾ. ವಸಂತಲಕ್ಷ್ಮಿಯವರ ಮಾರ್ಗದರ್ಶನವನ್ನು ಪಡೆದುಕೊಂಡಿದ್ದರು.

ಮುಂದಿನ ಪ್ರಸ್ತುತಿ ಮೀರಾಭಜನ್, ಕೃಷ್ಣನಲ್ಲಿ ಅವಿನಾಭಾವವಿರುವಂತಹ ಮೀರಾಳು, ತಾನೂ ಪ್ರಕೃತಿಯ ಭಾಗವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಕಲ್ಪಿಸಿಕೊಳ್ಳುತ್ತಾಳೆ. ಯಮುನಾ ನದಿಯ ತೀರದಲ್ಲಿ ಕೃಷ್ಣ ಸ್ನಾನಕ್ಕೆ ಬಂದಾಗ ನೀರಿನಲ್ಲಿರುವ ಮೀನು ನಾನಾಗಿದ್ದರೆ ಅವನ ಪಾದಸ್ಪರ್ಶ ಸಿಗುತ್ತಿತ್ತು, ಕೋಗಿಲೆಯಾಗಿದ್ದರೆ ಕೃಷ್ಣ ನನ್ನ ಹಾಡು ಕೇಳಿ ಸಂತೋಷ ಪಡುತ್ತಿದ್ದನು, ಮುತ್ತು ನಾನಾಗಿದ್ದರೆ ಹಾರವಾಗಿ ನನ್ನನ್ನು ನೋಡಿ ಅವನು ಸಂತೋಷಿಸುತ್ತಿದ್ದನೆಂದು ತಲ್ಲೀನ ಭಾವದಲ್ಲಿ ನೃತ್ಯ ಮಾಡಿದ ಕಲಾವಿದೆಯ ನೃತ್ಯ ಮನಸೂರೆಗೊಂಡಿತು. ನೃತ್ಯಕ್ಕೆ ತಕ್ಕ ಆಹಾರ್ಯ ಜೊತೆಗೆ ತಂಬೂರಿ ಹಿಡಿದಿದ್ದು ಗಮನಸೆಳೆಯಿತು.

ಗುರು ಡಾ. ಮಾಲಿನಿ ರವಿಶಂಕರ್ ಅವರ ರಚನೆಯಾದ ಕೃಷ್ಣರಸಾಮೃತದಲ್ಲಿ ಕೃಷ್ಣನ ವಿವಿಧ ರೂಪಗಳ ಅನಾವರಣವನ್ನು ನಾವು ನೋಡಿದೆವು. ನವರಸಭರಿತವಾದ ಶ್ರೀಕೃಷ್ಣನ ಜೀವನಚರಿತ್ರೆಯ ತುಣುಕುಗಳನ್ನು ಇಲ್ಲಿ ಪ್ರದರ್ಶಿಸಲಾಯಿತು. ಗೋಪಿಯರೊಡನೆ ನೃತ್ಯ ಮಾಡುವಾಗ ಶೃಂಗಾರ, ಪೂತನಿ ಶಕಟರನ್ನು ಕೊಂದ ವೀರತ್ವದ ಭಾವ, ರುಕ್ಮಿಣಿ ಸತ್ಯಭಾಮೆಯರ ನಡುವೆ ಹೊಟ್ಟೆಕಿಚ್ಚು ತಂದಿಟ್ಟ ಹಾಸ್ಯಭರಿತ ಪ್ರಸಂಗ, ದ್ರೌಪದಿಯ ಮಾನ ಸಂರಕ್ಷಣೆ ಮಾಡಿದಾಗ ಕರುಣಾ ರಸ. ಬಂಧುಗಳೊಡನೆ ಯುದ್ಧ ಮಾಡಲು ಅರ್ಜುನನು ಕಾಳಿಂಗ ನರ್ತನದ ಪ್ರಸಂಗಗಳನ್ನು ಅಭಿನಯಿಸಿದ ಕಲಾವಿದೆಯು ನವರಸ ನಾಯಕ ಮಧುಸೂದನನ್ನು ಭಕ್ತಿಯಿಂದ ಬೇಡಿಕೊಂಡ ಪರಿಯಿಂದ ಪ್ರೇಕ್ಷಕರಿಗೆ ರಸಾನುಭವ ನೀಡಿದರು.

ವಿದ್ವಾನ್ ಬಾಲಮುರಳಿಕೃಷ್ಣ ಅವರ ರಚನೆ ಬೃಂದಾವನಿ ರಾಗದ ತಿಲ್ಲಾನದಲ್ಲಿ ಜತಿಗಳ ಝೇಂಕಾರದೊಂದಿಗೆ ಚೈತನ್ಯದ ಚಿಲುಮೆಯಾಗಿ ಕಲಾವಿದೆಯು ವಿದ್ಯುಕ್ತವಾಗಿ ತಾವೇ ರಚಿಸಿದಂತಹ ಗೋಪಾಲನ ವರ್ಣನೆಯ ಮಂಗಳದೊಂದಿಗೆ ತಮ್ಮ ರಂಗಾರೋಹಣವನ್ನು ಸಂಪನ್ನಗೊಳಿಸಿದರು.

ನೃತ್ಯಬಂಧಗಳನ್ನು ಗುರು ಡಾ. ಮಾಲಿನಿ ರವಿಶಂಕರ್ ಅವರು ಕ್ರಿಯಾತ್ಮಕವಾಗಿ ಸಂಯೋಜಿಸಿದ್ದರು. ಅತ್ಯಂತ ಸುಶ್ರಾವ್ಯವಾಗಿ ಹಾಡಿದ ವಿದ್ವಾನ್ ರೋಹಿತ್ ಭಟ್ ಉಪ್ಪೂರ್ ಅವರ ಸಂಗೀತ ಕಲಾರಸಿಕರಿಗೆ ಕರ್ಣಾನಂದವನ್ನುಂಟುಮಾಡಿತು. ವೀಣಾವದನ, ವೇಣುವಾದನ, ಮೃದಂಗದ ವಿದ್ವಾಂಸರ ಸಹಕಾರವು ಕುಮಾರಿ ಐಶ್ವರ್ಯಾ ಕಶ್ಯಪ್ ಅವರ ರಂಗಾರೋಹಣದ ನರ್ತನದ ಸೊಬಗನ್ನು ಹೆಚ್ಚಿಸಿದವು.

‍ಲೇಖಕರು avadhi

February 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: