ಮಧುಕರ್ ಬಳ್ಕೂರು ಸರಣಿ ಕಥೆ 8 – ವಿಮಾನದಲ್ಲಿ ಇಂಡಿಯಾದ ಪ್ಲೇಯರ್ಸ್…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

8

ಮೇಲ್ ಹೋಗ್ತಿರೋ ವಿಮಾನದಲ್ಲಿ ಇಂಡಿಯಾದ ಪ್ಲೇಯರ್ಸ್ ಇದಾರೆ ಎಷ್ಟು ಬೆಟ್ಟು..?

ಈಗ ಮೇಲೆ ಹೋಗ್ತಾ ಇದೆಯಲ್ಲ ವಿಮಾನ, ಅದರಲ್ಲಿ ನಮ್ಮ ಇಂಡಿಯಾದ ಕ್ರಿಕೆಟ್ ಪ್ಲೇಯರ್ಸ್ ಇದಾರೆ ಎಷ್ಟು ಬೆಟ್ಟು” ಹಾಗಂತ  ಮೇಲೆ ಹೋಗುತ್ತಿದ್ದ ವಿಮಾನವನ್ನು ನೋಡಿ ರಾಜು ಸವಾಲು ಹಾಕಿದ. ನನಗೋ ಒಂದು ಕ್ಷಣ ಮೈಯೆಲ್ಲಾ ಕಣ್ಣಾದಂಗಾಯಿತು. ಬೆಟ್ಟಿನ ಮನೆ ಹಾಳಾಗಲಿ.. ಈಗಷ್ಟೇ ನಮ್ಮ ಮೆಲುಗಡೆಯಿಂದ ಹೋಗುತ್ತಿರೊ ವಿಮಾನದಲ್ಲಿ ಕ್ರಿಕೆಟ್ ಪ್ಲೇಯರ್ ಗಳು ಇದ್ದಾರೆ ಅನ್ನೊ ಕಲ್ಪನೆನೆ ನಮಗೆ ದೊಡ್ಡ ವಿಷಯ. ಇನ್ನು ನಿಜಕ್ಕೂ ಅವರು ಇದ್ದು ಬಿಟ್ಟರೆ…? ಇದ್ದು ಬಿಟ್ಟರೆ ಏನು, ಹಾಗೆನಾದರೂ ಇದ್ರೆ ಆಲ್ಕೆರೆ ಜಡ್ಡಿನಲ್ಲಿ ವಿಮಾನವನ್ನು ಇಳಿಸಿ ಪ್ಲೇಯರ್ ಗಳಿಗೆಲ್ಲ ನಮ್ಮ ಹೊಟೆಲ್ ನಲ್ಲಿ ಟ್ರೀಟ್ ಕೋಡೋದೆಯಾ…! ನಂತರ ನಾವೆಲ್ಲ ಸೇರಿ ಅವರ ಜೊತೆ ಒಂದಾಟ ಆಡೋದೆಯಾ…! 

ಖಂಡಿತ ರಾಜು ಹಾಗಂದಾಗ ನನ್ನ ಮನಸ್ಸಿಗೆ ಬಂದಿದ್ದು ಇದೇನೆ. ಆ ಕ್ಷಣಕ್ಕೆ ಏನ್ ಬೆಟ್ಟು ಅಂತ ಕೇಳೋದಿರಲಿ, ಅದ್ಯಾವ ಆಧಾರದಲ್ಲಿ ಹೇಳ್ತಿದೀಯಾ ಅಂತ ಕೇಳೋಕೂ ಹೊಳಿಲಿಲ್ಲ. ಹೋಗಲಿ, ನಮ್ಮ ಬೆಟ್ಟ್ ಆದಾರೂ ಎಂತದ್ದು? ಒಂದು ರೂಪಾಯಿ ಶುಂಠಿ ಸೋಡಾ. ಇಲ್ಲಾಂದ್ರೆ ಎಂಟಾಣೆ ಬೆಲ್ಲದ ಐಸ್ ಕ್ಯಾಂಡಿ. ನಮ್ಮ ಬೆಟ್ ಗಳೆಲ್ಲ ಹೀಗೆನೆ. ಆದರೆ ವಿಷಯ ಅದಲ್ಲ. ಅವನು ಯಾವ ಕಾರಣಕ್ಕೆ ಹಾಗಂದನೊ, ಅದಕ್ಕೆ ಸರಿಯಾಗಿ ಮಾರನೇ ದಿನವೇ ಬೆಂಗಳೂರಿನಲ್ಲಿ ಇಂಡಿಯಾ, ಇಂಗ್ಲೆಂಡ್ ಮ್ಯಾಚ್ ಇತ್ತು. ಹಾಗಿದ್ರೆ ಅವನು ಹೇಳಿದ ಹಾಗೆ ಆ ವಿಮಾನದಲ್ಲಿ ನಮ್ಮ ಆಟಗಾರರು ಇದ್ದಿರಬಹುದಾ..? ಬೆಂಗಳೂರು ಮ್ಯಾಚ್ ಆಡೋದಕ್ಕಂತಾನೆ ಯಾಕೆ ಅದರಲ್ಲಿ ಇದ್ದಿರಬಾರದು..? ಯಾಕೋ ಅನುಮಾನ ಬಲವಾಯಿತು. ಅವನೇನು ಸುಮ್ಮನೆ ಅಂದನೊ, ಅಥವಾ ಯಾವ ಆಧಾರದಲ್ಲಿ ಹೇಳಿದೆನೊ, ಆದರೆ ನನ್ನ ತಲೆಯಲ್ಲಿ ಮಾತ್ರ ವಿಮಾನ ಒಮ್ಮೆ ಆಲ್ಕೆರೆ ಜಡ್ಡಿನಲ್ಲಿ ಲ್ಯಾಂಡ್ ಆದರೆ ಹೇಗಿರುತ್ತೆ, ಕ್ರಿಕೆಟ್ ಪ್ಲೇಯರ್ಸ್ ಎಲ್ಲಾ ನಮ್ಮ್ ಹೊಟೆಲ್ ಗೆ ಬಂದ್ರೆ ಹೇಗಿರುತ್ತೆ, ಅವರ ಜೊತೆ ನಾವು ಕ್ರಿಕೆಟ್ ಆಡಿದರೆ ಹೇಗಿರುತ್ತೆ ಅನ್ನೊ ಕಲ್ಪನೆಯಲ್ಲೆ ಕಳೆದುಹೋಯಿತು. ವಿಮಾನ ಎಷ್ಟು ದೊಡ್ಡದಿದೆ, ಅದೆಲ್ಲಿ ಚಿಕ್ಕ ಆಲ್ಕೆರೆ ಜಡ್ಡಿನಲ್ಲಿ ಲ್ಯಾಂಡ್ ಆಗಬೇಕು ಅನ್ನೊ ಕಲ್ಪನೆ ಇಲ್ಲದ ನಾನು ಬೆಂಗಳೂರಿನ ಮ್ಯಾಚ್ ಮುಗಿದ ಮೇಲಾದರೂ ಮತ್ತೆ ಇದೇ ದಾರಿಯಲ್ಲಿ ಬರಬಹುದಾ ಅಂತ ಆಕಾಶ ನೋಡಿದೆ. ಅಷ್ಟರಲ್ಲಾಗಲೇ ವಿಮಾನ ಮರೆಯಾಗಿ ಬರೇ ಶಬ್ದವಷ್ಟೆ ಕೇಳಿಸುತ್ತಿತ್ತು.

ಒಮ್ಮೊಮ್ಮೆ ಚಿಕ್ಕ ಚಿಕ್ಕ ವಿಚಾರಗಳು ಮನಸ್ಸಿನಲ್ಲಿ ಅದ್ಯಾವ ಮಟ್ಟಿಗೆ ಭ್ರಮೆಯನ್ನ ವಿಸ್ತರಿಸುತ್ತವೆಯಂದರೆ, ಮಾರನೇ ದಿನ ಅಚಾನಕ್ ಆಗಿ ನಮ್ಮ ಗದ್ದೆಲಿ ಸಿಕ್ಕ ಟೆನಿಸ್ ಬಾಲ್ ನೋಡಿ ನಿನ್ನೆ ವಿಮಾನದಲ್ಲಿದ್ದ ನಮ್ಮ ಪ್ಲೇಯರ್ಸ್ ಗಳು ಇದನ್ನು ಎಸೆದಿರಬಹುದಾ ಅಂತಲೂ ಯೋಚಿಸಿಬಿಟ್ಟೆ!! ಏಕೆಂದರೆ ಕ್ರಿಕೆಟ್ ಆಡುವ ಆಲ್ಕೆರೆ ಜಡ್ಡಿಂದ ದೂರವಿದ್ದ ನಮ್ಮ ಗದ್ದೆಯಲ್ಲಿ ಈ ಬಾಲ್ ಬಂದು ಬಿಳೋದು ಅಸಾಧ್ಯವಾಗಿತ್ತು. ಇನ್ನು ದುಬಾರಿ ಎನಿಸಿದ್ದ ಟೆನಿಸ್ ಬಾಲ್ ಅನ್ನು ಹೀಗೆಲ್ಲ ಬೇಕಾಬಿಟ್ಟಿಯಾಗಿ ಬಿಟ್ಟುಹೋಗುವಂತ ಮಹಾಶಯರು ನಮ್ಮಲ್ಲಿ ಯಾರೂ ಇಲ್ಲದಿರುವುದರಿಂದ ಎಲ್ಲಿಂದ ಬರಬೇಕು ಬಾಲು..? ಡೌಟೇ ಇಲ್ಲ, ಅವರೇ ಮೇಲಿಂದ ಎಸೆದಿರಬೇಕು!! ಆದ್ರೆ ಅವರಾದರೂ ಯಾಕೆ ಎಸಿತಾರೆ? ಒಂದು ವೇಳೆ ನಾವು ಆಲ್ಕೆರೆ ಜಡ್ಡಿನಲ್ಲಿ ಆಡುತ್ತಿರುವುದನ್ನೆನಾದರೂ ಅವರು ವಿಮಾನದ ಕಿಟಕಿಯಿಂದ ನೋಡಿದಿದ್ದರೆ? ಪಾಪ ಹುಡುಗ್ರು ಗದ್ದೆಲೆಲ್ಲಾ ಹೀಗೆ ಆಡ್ತಾರೆ ಅಂತಾ ಅವರೇ ಬಾಲನ್ನ ಎಸೆದಿರಬಹುದಲ್ವ..? ಹಾಗಿದ್ರೆ ಯಾರು ಎಸೆದಿರಬಹುದು? ಶ್ರೀನಾಥ್, ಕುಂಬ್ಳೆ…ಎಷ್ಟಾದ್ರು ಕರ್ನಾಟಕದವರು… ನಮ್ಮ ಹುಡುಗ್ರು ಪಾಪ ಕಷ್ಟ ಪಡ್ತಿದಾರೆ ಅಂತ ಅವರೇ ಕನಿಕರದಿಂದ ಎಸೆದಿರಬಹುದಾ..? ಇಲ್ಲಾ ತಮಾಷೆ ನೋಡೋಣ ಅಂತಾ ಜಡೇಜಾ ಎಸೆದಿರಬಹುದಾ…? ಏಕೆಂದರೆ ಮೈದಾನದಲ್ಲಿ ಗಮ್ಮತ್ತು, ತಮಾಷೆ ಅಂತ ಮಾಡೋದು ಅವನೇ ಅಲ್ವಾ..

ಒಟ್ಟಿನಲ್ಲಿ ಯಾರೋ ವಿಮಾನದ ಕಿಟಕಿಯಿಂದ ನಮ್ಮನ್ನು ನೋಡಿ ಆಡ್ಕೊಳ್ಳಿ ಅಂತ ಎಸೆದಿರುತ್ತಾರೆ. ಎಸೆಯೆವುದೇನು ಎಸೆದಿರತ್ತಾರೆ ಒಂದೇ ಬಾಲ್ ಎಸೆದಿರುತ್ತಾರೆ ಯಾಕೆ ಅನ್ಕೋಬೇಕು..? ಅವರಿಗೆಲ್ಲಾ ಏನ್ ಬಾಲ್ ಗೆ ಬರನಾ..? ಹುಡುಕಿದರೆ ಮತ್ತಷ್ಟು ಸಿಕ್ಕಬಹುದಲ್ವ. ಹಾಗಂತ ಏನೇನೋ ಊಹೆ ಮಾಡಿಕೊಂಡು ಹೊಲ, ಗದ್ದೆ ಬಯಲು ತುಂಬೆಲ್ಲ ಹುಡುಕಾಡಿಬಿಟ್ಟೆ….!! ಆದರೆ ವಿಷಯ ಗೊತ್ತಾದ ಮೇಲೆ ತಿಳೀತು ನಾನೆಂತ ಮಂಗನಾದೆ ಎಂದು…! ನಡೆದದ್ದು ಇದು.. ನೆರೆಮನೆ ರಾಜು ಮನೆಯ ನಾಯಿಗೆ ಬಾಲ್ ಕಡಿಯುವ ಗೀಳಿತ್ತು. ಅವನಿಗೆ ಅವನ ಸೋದರಮಾವ ತಂದುಕೊಟ್ಟಿದ್ದ ಟೆನಿಸ್ ಬಾಲ್ ಅನ್ನ ಆ ನಾಯಿ ಕಚ್ಚಿಕೊಂಡು ಬಂದು ನಮ್ಮ ಗದ್ದೆಬಯಲಿಗೆ ಹಾಕಿ ಹೋಗಿದೆ. ಪಾಪ, ಅವನು ತನ್ನ ಬಾಲ್ ಕಳೆದುಹೋಯಿತು ಅಂತ ಎಲ್ಲೆಂದರಲ್ಲಿ ಹುಡುಕುತ್ತಾ ನನ್ನ ಬಳಿಯೂ ಕೇಳಿದಾನೆ. ಇದೇನಾ ನಿನ್ನ ಬಾಲು ಅಂತ ತೋರಿಸಿದ್ದಕ್ಕೆ ಅವನಿಗೆ ಅದನ್ನು ನೋಡಿ ವಿಪರೀತ ಖುಷಿಯೂ ಆಗಿದೆ. ನನಗೋ ವಿಮಾನ, ಕ್ರಿಕೆಟ್ ಪ್ಲೇಯರ್ಸ್, ಆಲ್ಕರೆ ಜಡ್ಡು, ಮ್ಯಾಚು, ಅಂತೆಲ್ಲ ಆಕಾಶದಲ್ಲಿ ಹಾರುತ್ತಿದ್ದವನಿಗೆ ಒಮ್ಮೆಲೆ ಅಲ್ಲಿಂದ ಜಾರಿ ಬಿದ್ದ ಅನುಭವವಾಗಿದೆ. ರಾಜು ಹಳಿ ಇಲ್ಲದೆ ಬಿಟ್ಟ ರೈಲನ್ನು ನಾನು ಆಕಾಶ ತುಂಬೆಲ್ಲ ಹಾರಿಸುವ ಪ್ರಯತ್ನ ಮಾಡಿದ್ದು ನನಗೆ ಸಿಕ್ಕಾಪಟ್ಟೆ ಮುಜುಗರ ತರಿಸುವಂತಾದರೂ, ಅವನೆದುರು ತೋರಿಸಿಕೊಳ್ಳದೆ ಬಾಲ್ ಹುಡುಕಿಕೊಟ್ಟು ಏನೋ ಮಹಾ ಉಪಕಾರ ಮಾಡಿದೆ ಅನ್ನೊ ರೀತಿಯಲ್ಲಿ ಪೋಸು ಕೊಟ್ಟೆ. ಆದರೂ ನನ್ನೊಳಗಿನ ಆ ಅಲ್ಪ ಬುದ್ದಿವಂತ ನನ್ನೊಳಗಿನ ಪೆದ್ದುವಾದ ಮೆದುಳಿಗೆ ಮೊಟಕುತ್ತಿರುವುದು ಅನುಭವಕ್ಕೆ ಬಂದು ಮನಸ್ಸಿನಲ್ಲಿಯೇ ತಲೆ ತಗ್ಗಿಸುವಂತಾಯಿತು.

ಇನ್ನು ಆ ದಿನದ ಮ್ಯಾಚಿನಲ್ಲಿ ಇಂಡಿಯಾ ಇಂಗ್ಲೆಂಡ್ ನ ಎದುರು ಸೋತು ಹೋಗಿತ್ತು. ಇಷ್ಟಾದರೂ ಇಂಡಿಯಾ ಸೋತ ಫೀಲಿಂಗ್ಸ್ ಕ್ಕಿಂತಲೂ ಮಾರನೇ ದಿನ ಆಕಾಶದಲ್ಲಿ ವಿಮಾನ ನೋಡುವ ಚಡಪಡಿಕೆಯೆ ಹೆಚ್ಚಾಯಿತು. ಆಕಸ್ಮಾತ್ ಬೆಂಗಳೂರಿನಿಂದ ವಾಪಾಸ್ ಬರುವ ವಿಮಾನದಲ್ಲಿ ಕ್ರಿಕೆಟ್ ಪ್ಲೇಯರ್ಸ್ ಗಳು ಇದ್ದಿದ್ದರೆ…? ಹಾಗಂತ ಬೆಪ್ಪು ತಕ್ಕಡಿಯ ಹಾಗೆ ಮತ್ತೆ ಆಕಾಶ ನೋಡುತ್ತಾ ನಿಂತ್ ಬಿಟ್ಟೆ. ಹಾಗೆನಾದರೂ ಬಂದರೆ ಶಬ್ದದಲ್ಲೆ ಗೊತ್ತಾಗ್ತದೆ ಅಂತ ಗೊತ್ತಿದ್ದರೂ ಮನಸೆಲ್ಲಿ ಕೇಳಬೇಕು? ಒಂದು ವೇಳೆ ಶಬ್ದ ಕಿವಿಗೆ ಕೇಳಿಸದೇ ಹೋದರೆ…? ಅದೇ ಸಮಯದಲ್ಲಿ ವಿಮಾನ ಮಿಸ್ಸಾಗಿ ಬಿಟ್ಟರೆ..! ಹೀಗೆ ಮನಸು ಮತ್ತೆ ಮತ್ತೆ ಪೆದ್ದು ಆಗುತ್ತಿದ್ದರೂ ನಾನು ಮಾತ್ರ ಅದೇ ಮುಗ್ದತೆ, ಅಮಾಯಕತೆಯಲ್ಲೆ ಆಕಾಶಾನ ನೋಡುತ್ತಿದ್ದೆ. ಎಷ್ಟೇ ಅವಾಸ್ತವಿಕ ಕಲ್ಪನೆಯಾದರೂ ನಾವಿರುವ ಜಾಗದ ಮೇಲೆ ಹಾದುಹೋಗುವ ವಿಮಾನದಲ್ಲಿ ನಮ್ಮ ನೆಚ್ಚಿನ ಕ್ರಿಕೆಟ್ ಸ್ಟಾರ್ ಗಳು ಇದ್ದಾರೆ ಅನ್ನೊ ಕಲ್ಪನೆನೆ ಥ್ರೀಲ್ ಎನಿಸಿದ್ದರಿಂದ ಫೂಲ್ ಆಗ್ತಿರೋದು ದೊಡ್ಡ ವಿಚಾರ ಅಂತನ್ನಿಸಲಿಲ್ಲ. ಆದರೆ ಇಡೀ ದಿನ ನೋಡಿಯೂ ಕಾಟಾಚಾರಕ್ಕೆ ಒಂದು ವಿಮಾನವೂ ಆಕಾಶದಲ್ಲಿ ಕಾಣದೇ ಹೋದದ್ದು ಮಾತ್ರ ಕೊನೆಯಲ್ಲಿ ಬೇಸರ ತರಿಸಿತು. ವಿಚಿತ್ರ ಎಂದರೆ ಇದಾಗಿ ಎರಡು ಮೂರು ದಿನಕ್ಕೆ ಇಂಡಿಯಾದ ಕ್ರಿಕೆಟ್ ಪ್ಲೇಯರ್ಸ್ ಗಳೆಲ್ಲಾ ರಾತ್ರಿ ಕನಸಲ್ಲಿ ಬಂದು ಬಿಟ್ಟಿದ್ದರು. ಕನಸು ತುಂಬಾ ಸ್ಪಷ್ಟವಿಲ್ಲದಿದ್ದರೂ ಒಂದಿಷ್ಟು ಸಂಗತಿಗಳು ರಂಜನೀಯವಾಗಿದ್ದರಿಂದ ಹಾಗೂ ಈಗಲೂ ಮಧುರ ನೆನಪಾಗಿ ಮನಸಿನಲ್ಲಿರುವುದರಿಂದ ಅದನ್ನಿಲ್ಲಿ ಪ್ರಸ್ತಾಪಿಸದೆ ವಿಷಯ ಪೂರ್ಣವಾಗುವುದಿಲ್ಲ. 

ಅದ್ಯಾಗೋ ಗೊತ್ತಿಲ್ಲ, ಕ್ರಿಕೆಟಿಗರು ಬರ್ತಾರೆ ವಿಮಾನ ಲ್ಯಾಂಡ್ ಆಗುತ್ತೆ ಅನ್ನೋ ಕಾರಣಕ್ಕೆ ನಮ್ಮ ಆಲ್ಕರೆ ಜಡ್ಡಿನ ಏರು ತಗ್ಗುಗಳನ್ನೆಲ್ಲಾ ಹಾರೆ ಪಿಕಾಸಿನಲ್ಲಿ ಸಮತಟ್ಟಾಗಿಸಿ ದೀಢೀರ್ ಅಂತ ದೊಡ್ಡದು ಮಾಡಲಾಯಿತು. ಇನ್ನು ಕ್ರಿಕೆಟಿಗರನ್ನ  ಸ್ವಾಗತಿಸೋದಕ್ಕೆ ಅಂತಾನೆ ಕ್ಷೇತ್ರದ ಎಮ್ಮೆಲ್ಲೆ ಸಾಹೇಬ್ರು ನಮ್ಮೂರಿನ ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲ ಸರಸರನೇ ಜಡ್ಡಿನ ಕಡೆಗೆ ದೌಡಾಯಿಸಿದರು. ವಿಮಾನದಿಂದ ಇಳಿಯುವಾಗ ಶ್ರೀನಾಥ್, ಕುಂಬ್ಳೆ ತಮ್ಮ ತಂಡದ ಸದಸ್ಯರಿಗೆ ಕನ್ನಡದಲ್ಲೇ ಇವರನ್ನೆಲ್ಲ ಪರಿಚಯಿಸಿದರು. ಹಾಗೂ ಅವರಿಬ್ಬರೂ ತಂಡದ ಸದಸ್ಯರೊಂದಿಗೆ ಕನ್ನಡದಲ್ಲೇ ಮಾತನಾಡುತ್ತಿದ್ದರು. ನಂತರ ಆಟಗಾರರನ್ನೆಲ್ಲ ನಮ್ಮ ಹೊಟೆಲ್ ಗೆ ಕರೆದು ಆಧಾರಾತಿಥ್ಯ ಮಾಡಲಾಯಿತು. ಬಹುಶಃ ಆವತ್ತು ರಾಮನವಮಿ ಇದ್ದಿರಬೇಕು. ಸಚಿನ್, ಕಾಂಬ್ಳಿ, ಸಿದ್ದು, ಜಡೇಜಾರೆಲ್ಲಾ ಪಾನಕ, ಕೋಸಂಬರಿಯನ್ನ ಕೇಳಿ ಕೇಳಿ ಹಾಕಿಸಿಕೊಂಡು ತಿಂದರು. ಇಡೀ ಊರಿನ ಮಂದಿ ತಮ್ಮ ಮೆಚ್ಚಿನ ಕ್ರಿಕೆಟಿಗರನ್ನು ನೋಡೋದಕ್ಕೆ ನಾ ಮುಂದು ತಾ ಮುಂದು ಅಂತ ನಮ್ಮ ಹೊಟೆಲ್ ಕಡೆಗೆನೆ ನುಗ್ಗತೊಡಗಿದರು. ಆ ಜನಸಂದಣಿಯನ್ನು ತಡೆಯುವುದಕ್ಕೆ ಅಂತಾನೆ ಪೋಲಿಸರು ಹರಸಹಾಸ ಪಡುತ್ತಿದ್ದರು. ನಂತರ ನಮ್ಮ ಹೊಟೆಲ್ ನ ಸ್ಪೇಷಲ್ ಅಂತ ಮಂಗಳೂರು ಬನ್ಸ್, ಗೋಳಿಬಜೆ ಹಾಗೂ ಗೋಧಿ ಹಲ್ವಾವನ್ನು ಅವರೆಲ್ಲರಿಗೂ ನೀಡಲಾಯಿತು. ಅದೆಲ್ಲವನ್ನೂ ಅವರು ಮನಸ್ಪೂರ್ತಿಯಾಗಿ ತಿಂದರು. ಬಳಿಕ ಅವರಿಗೆನೆ ಅಂತ ಮಾಡಿದ ಸ್ಪೇಷಲ್ ‘ಕೇಟೀ’ಯನ್ನು ಖುಷಿಯಲ್ಲೆ ಕುಡಿದರು. ಬೇಡ ಬೇಡವೆಂದರೂ ಕ್ಯಾಪ್ಟನ್ ಅಜರ್ ಬಿಲ್ ಅಂತ ಟೇಬಲ್ ಮೇಲೆ ನೂರರ ಕೆಲ ನೋಟಿಟ್ಟು ನಡೆದೇಬಿಟ್ಟರು.

ಆಮೇಲೆ ನಮ್ಮಲ್ಲೆರ ಜೊತೆಗೆ ಒಂದು ಮ್ಯಾಚ್ ಆಡಬೇಕು ಅನ್ನೊ ಆಸೆಗೆ ಪೋಲಿಸ್ ನವರು ಮಧ್ಯಬಂದು ತಕರಾರು ತೆಗೆದಿದ್ದರಿಂದ ಎಲ್ಲರಿಗೂ ನಿರಾಸೆಯಾಯಿತು. ಕೊನೆಗೂ ಹೋಗುವ ಗಡಿಬಿಡಿಯಲ್ಲಿ ಕಪಿಲ್ ದೇವ್ ನೆಕ್ಟ್ ಟೈಮ್ ಬಂದಾಗ ಆಡುತ್ತೇವೆ ಎಂದು ನಮ್ಮೆಲ್ಲರಿಗೂ ಆಶ್ವಾಸನೆ ನೀಡಿ ವಿಮಾನವೇರಿದರು. ವಿಮಾನ ಆಲ್ಕೆರೆ ಜಡ್ಡಿನಲ್ಲಿ ಟೇಕಾಫ್ ಆಗುತ್ತಿದ್ದಂತೆ ಊರೀನ ಮಂದಿ ಹೋ…ಹೋ.. ಎಂದು ಇಡೀ ಊರಿಗೆ ಕೇಳಿಸುವ ಹಾಗೆ ಅರಚುತ್ತಾ ವಿಮಾನದ ಹಿಂದೆಯೇ ಓಡತೊಡಗಿದರು. ಹೀಗೆ ಗುಂಪಿನಲ್ಲಿ ಓಡುವಾಗ ಯಾರೋ ಒಬ್ಬರ ಕಾಲು ನನಗೂ ತಾಗಿ ನಾನು ಬೀಳುವ ಹೊತ್ತಿಗೆ ದೀಢೀರ್ ಅಂತ ಎಚ್ಚರವಾಗಿ ಕಾಲು ಮುಟ್ಟಿ ನೋಡಿಕೊಳ್ಳುವುದರೊಂದಿಗೆ ಕನಸೂ ಮುಗಿಯಿತು. ಒಂಥರಾ ಖುಷಿ, ಬೇಸರ, ಹೆದರಿಕೆ, ಆಶ್ಚರ್ಯದೊಂದಿಗೆ ಈ ಪೋಲಿಸ್ ನವರು ಯಾಕಪ್ಪಾ ಕನಸಲ್ಲಿ ಬಂದರು ಅಂತ ನನ್ನೊಳಗೆ ಕೇಳಿಕೊಳ್ಳುವುದರೊಂದಿಗೆ ಮತ್ತೆ ನಿದ್ದೆಗೆ ಜಾರಿದ್ದು ಆಯಿತು.

ಕಡೆಗೂ ರಾಜು ಬಿಟ್ಟ ಹಳಿ ಇಲ್ಲದ ರೈಲಿನ ಹಿಂದೆ ಹೋಗಿ, ಹಗಲುಗನಸು ಕಂಡು, ಯಾಮಾರಿ, ಕೊನೆಗೂ ನಿದ್ದೆಗಣ್ಣಿನ ಕನಸಿನಲ್ಲಿ ಆಸೆ ಈಡೇರಿಸಿಕೊಳ್ಳುವಂತಾಗಿದ್ದು ನೋಡಿದರೆ, ನಮ್ಮೊಳಗಿರುವ ಆಸೆ, ಬಯಕೆಗಳಿಗಿರುವ ಗಾಢತೆ ಎಂತಾದ್ದು ಅನ್ನೋದು ಅರ್ಥವಾಗುತ್ತದೆ. ಇಷ್ಟಕ್ಕೂ ಶ್ರೀನಾಥ್, ಕುಂಬ್ಳೆಯೇ ಎಲ್ಲರೊಂದಿಗೆ ಕನ್ನಡದಲ್ಲಿ ಮಾತನಾಡಿದಂತೆ ಯಾಕೆ ಕನಸು ಬಿತ್ತು.? ಬೇಡಬೇಡವೆಂದರೂ ಟೇಬಲ್ ಮೇಲೆ ದುಡ್ಡಿಟ್ಟು ಹೋದ ಅಜರ್ರೇ ಯಾಕೆ ಧಾರಾಳ ಮನಸ್ಸಿನವರಂತೆ ಕಂಡರು.? ಕೊನೆಗೂ ಮತ್ತೊಮ್ಮೆ ಬಂದಾಗ ಆಡೋಣ ಅನ್ನೊ ಭರವಸೆಯನ್ನ ಕಪಿಲ್ ಅವರೇ ಹೇಳಿದಂತೆ ಯಾಕೆ ಕನಸಲ್ಲಿ ಕಾಣಿಸಿತು..? ಹಾಗಿದ್ರೆ ಕನಸುಗಳು ನಮ್ಮ ಒಳಗಿನ ಫೀಲಿಂಗ್ಸ್ ಗಳ ಪ್ರತಿಬಿಂಬಿವಾ..? ಅಂದರೆ ಇದರ ಅರ್ಥ ಶ್ರೀನಾಥ್, ಕುಂಬ್ಳೆ ಕನ್ನಡವನ್ನು ಇಡೀ ಪ್ರಪಂಚಕ್ಕೆ ಪರಿಚಯಿಸುವ ರಾಯಭಾರಿಗಳು ಅಂತಾನಾ..? ಅಜರುದ್ದೀನ್ ಅಂದರೆ ಧಾರಾಳಿಯಾ…? ಕಪಿಲ್ ದೇವ್ ಅಂದ್ರೆ ನಮ್ಮೆಲ್ಲರ ಭರವಸೆಯ ಸಂಕೇತವಾ…? ಇರಬಹುದು. ಆದರೆ ಈಗಲೂ ಆಕಾಶದಲ್ಲಿ ವಿಮಾನ ಹಾರುವುದನ್ನು ನೋಡಿದಾಗ ಈ ಘಟನಾವಳಿಯೆಲ್ಲ ನೆನಪಾಗಿ ಮನಸು ರೋಮಾಂಚನಗೊಳ್ಳುದಂತೂ ಸುಳ್ಳಲ್ಲ.

ಕೆಲವು ನೆನಪುಗಳೇ ಹಾಗೆ. ಅದಕ್ಕೆ ಸಂಬಂಧಿಸಿಯೇ ಇರದ ಅದೆಷ್ಟೋ ನೆನಪುಗಳನ್ನು ಕಣ್ಣೆದುರಿಗೆ ಬರುವಂತೆ ಮಾಡುತ್ತದೆ. ಒಮ್ಮೆ ಏನೋ ಒಂದು ನೆನಪಿಗೆ ಬಂದರೆ ಸಾಕು. ಅದಕ್ಕೆ ರೆಕ್ಕೆ ಪುಕ್ಕ ಸೇರಿ ಮತ್ತಿನ್ನೇನೋ ನೆನಪಾಗಿ ಕಾಡುತ್ತದೆ, ಎದೆಭಾರವಾಗುತ್ತದೆ. ಒಮ್ಮೊಮ್ಮೆಯಂತೂ ಅದೇನೋ ಮುಗ್ದತೆ ಹಾದು ಹೋದಂತಹ ಭಾವ. ಅದು ಮುಗ್ದತೆಯಾ ಅಥವಾ ಅಮಾಯಕತೆಯಾ ಅಂತ ಪ್ರಶ್ನೆ ಕಾಡುವಾಗಲೇ ಮನಸು ಅಂದು ಪೆದ್ದು ಪೆದ್ದಾಗಿ ಆಡಿದ್ದರ ನೆನಪಾಗಿ ಅರೆಕ್ಷಣ ನಾಚುವಂತೆ ಮಾಡಿಬಿಡುತ್ತದೆ.

ಇಲ್ಲಿ ಕ್ರಿಕೆಟ್ ಪಂದ್ಯ ನೋಡಿದ್ದೆನ್ನುವುದು ನೆನಪು. ಸುಮ್ಮನೆ ನೆನಪಿಸಿಕೊಂಡರೆ ಆ ದಿನ ಕ್ರಿಕೆಟ್ ನೋಡುವಾಗ ನಿಮ್ಮ ಜೊತೆ ಯಾರ್ಯಾರು ಇದ್ರು, ಎಲ್ಲೆಲ್ಲಿ ಕೂತಿದ್ರು, ನಿಮ್ಮ ನಡುವೆ ಮ್ಯಾಚ್ ಬಗ್ಗೆ ಏನೇನು ಮಾತುಕತೆಗಳಾದವು, ಮಾತಾಡುವಾಗ ಅವರ ಬಾಡಿ ಲಾಂಗ್ವೇಜ್ ಯಾವ ರೀತಿ ಇತ್ತು, ಅಷ್ಟೇ ಏಕೆ ನೋಡುವಾಗ ಮಧ್ಯೆ ಎಷ್ಟು ಸಲ ಕರೆಂಟ್ ಹೋಗಿತ್ತು, ಆವತ್ತು ಮಂಗಳವಾರವಾದದ್ದು, ಲೈನ್ ಮ್ಯಾನ್ ಗೆ ಬೈದಿದ್ದು, ನಡುವೆ ನೆಂಟರು ಬಂದ್ರು ಅಂತ ವಾಪಾಸ್ ಮನೆಗೆ ಬಂದದ್ದು, ಅದೇ ಸಮಯಕ್ಕೆ ಮತ್ತೆ ಕರೆಂಟ್ ಬಂದಿದ್ದು, ಮತ್ತೆ ಹೋಗಿ ನೋಡೋಣ ಅಂದ್ರೆ ನೆಂಟರು ಬಂದ್ರು ಅಂತ ಸಾಮಾನ್ ತರೋಕೆ ಮನೆಯವರು ಅಂಗಡಿಗೆ ಕಳುಹಿಸಿದ್ದು, ಮನಸಿನಲ್ಲೆ ನೆಂಟರನ್ನ ಬೈದುಕೊಂಡದ್ದು, ಮತ್ತೆ ಮನೆಯವರೆಗೆ ಹೇಳದೆ ಕೇಳದೆ ಕ್ರಿಕೆಟ್ ನೋಡೋಕೆ ಹೋಗಿದ್ದು! ಮ್ಯಾಚ್ ಗೆ ಮಳೆ ಬಂದು ಸ್ಥಗಿತಗೊಂಡಿದ್ದು, ಇಲ್ಲಿ ಇಷ್ಟು ಬಿಸಿಲಿರಬೇಕಾದರೆ ಮಳೆ ಎಲ್ಲಿಂದ ಬಂತು ಅಂತ ಅನುಮಾನಪಟ್ಟಿದ್ದು! ನಂತರ ಮ್ಯಾಚ್ ಶ್ರೀಲಂಕಾದಲ್ಲಿ ನಡಿತಿರೋದು ಅಂತ ಗೊತ್ತಾಗಿದ್ದು, ತಿರಗಾ ಮನೆಗೆ ಬಂದಾಗ ಹೇಳದೆ ಹೋಗಿದ್ದಕ್ಕೆ ಬೈಸಿಕೊಂಡಿದ್ದು! ಮಾರನೇ ದಿನ ಪೇಪರಿನಲ್ಲಿ ಇಂಡಿಯಾ ಭರ್ಜರಿ ಜಯ ಅಂತ ನೋಡಿ ಮಳೆಯಲ್ಲಿ ಯಾವಾಗ ಮ್ಯಾಚ್ ಆಯಿತು ಅಂತ ಆಶ್ಚರ್ಯಗೊಂಡಿದ್ದು! ಕಡೆಗೂ ಮ್ಯಾಚ್ ಇಪ್ಪತ್ತೈದು ಓವರ್ ಗೆ ಇಳಿದು ನಡೆದದ್ದಕ್ಕೆ ಸಮಾಧಾನವಾದದ್ದು!

ಹೀಗೆ ನೆನಪಿಸಿಕೊಳ್ಳುತ್ತಾ ಹೋದಾಗ ಸೀರೀಸ್ ನ ಅರ್ಧಕ್ಕರ್ಧ ಮ್ಯಾಚ್ ಗಳು ಮಳೆಯಲ್ಲಿಯೆ ತೊಯ್ದು ಹೋಗಿದ್ದು ನೆನಪಾಗಿ, ಇಂತಾ ಮಳೆ ಸೀಸನ್ ನಲ್ಲಿ ಯಾಕಾದರೋ  ಶ್ರೀಲಂಕಾದವರು ಮ್ಯಾಚ್ ಗಳನ್ನ ಇಟ್ಟ್ ಕೊಂಡಿರುತ್ತಾರೋ ಅಂತ ಮನಸಿನಲ್ಲಿ ಗೊಣಗಿಕೊಂಡಿದ್ದು ನಿನ್ನೆ ಮೊನ್ನೆಯೆನೋ ಎಂಬಂತೆ ಕಾಡುತ್ತವೆ. ಯಾಕೇ ಕ್ರಿಕೆಟ್ ನ ಜೊತೆಗೆ ಇಷ್ಟೊಂದು ವಿಷಯಗಳು ಗಾಢವಾಗಿ ನೆನಪಲ್ಲಿ ಇರುತ್ತವೆ ಅಂದ್ರೆ, ನಾವದನ್ನ ಇಂಚಿಂಚಾಗಿ, ಮೈಯೆಲ್ಲಾ ಕಣ್ಣಾಗಿ ಆ ಕ್ಷಣಗಳನ್ನು ಕಳೆದಿರುತ್ತೇವೆ ಅದಕ್ಕೆ. ಹಾಗಾಗಿಯೇ ಆ ಅನುಭವಗಳನ್ನೆಲ್ಲ ನೆನೆಸಿಕೊಂಡರೆ ಈಗಲೂ ಒಮ್ಮೆ ಆ ಬಾಲ್ಯ ಬಂದು ಹೋಗಬಾರದಾ ಅಂತಲೇ ಅನಿಸುತ್ತದೆ.

| ಇನ್ನು ನಾಳೆಗೆ |

‍ಲೇಖಕರು Admin

July 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: