ಮಧುಕರ್ ಬಳ್ಕೂರು ಸರಣಿ ಕಥೆ 16 – ಬೌಲರ್ ಗಳು ಗೆಲುವಿನ ದಡ ಮುಟ್ಟಿಸುತ್ತಾರೆ…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

ಹಿಂದಿನ ಸಂಚಿಕೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

16

“ನಮ್ಮ ಇಂಡಿಯಾದವರು ಫೈನಲ್ ಗೆ ಹೋಗೊವರೆಗೆ ಕಷ್ಟ ಕಣ್ರಿ. ಒಂದು ವೇಳೆ ಫೈನಲ್ ಗೆ ಹೋದರೆ ಕಪ್ ಪಕ್ಕಾ ನಮ್ದೆ ಬಿಡ್ರಿ” ಇಂತದ್ದೊಂದು ಅಭಿಪ್ರಾಯ ತೊಂಭತ್ತರ ದಶಕದಲ್ಲಿ ಭಾರತೀಯ ತಂಡದ ಮೇಲೆ ಕಾಮನ್ ಆಗಿತ್ತು. ಏಕೆಂದರೆ ಆರಂಭದಲ್ಲಿ ಮಂದಗತಿಯಲ್ಲಿ ಕುಂಟುಕೊಂಡೊ ತೆವಳಿಕೊಂಡೊ ಸಾಗುತ್ತಿದ್ದ ನಮ್ಮವರು ನಂತರ ಮಳೆ ಬಂದು ರದ್ದಾಗಿ ಒಂದಂಕ ಗಿಟ್ಟಿಸಿಯೋ ಇಲ್ಲಾ ರನ್ ರೇಟ್ ನಲ್ಲಿ ಸರ್ಕಸ್ ಮಾಡಿಯೋ ಫೈನಲ್ ಗೆ ಹೋಗುತ್ತಿದ್ದರು.. ! ಹಾಗೆ ಹೋದವರು ಫೈನಲ್ ನಲ್ಲಿ ಅಷ್ಟೇ ಭರ್ಜರಿಯಾಗಿ ಆಡಿ ಕಪ್ ಗೆಲ್ಲುತ್ತಿದ್ದರು…!! ತೊಂಭತ್ತರ ದಶಕದ ಬಹುತೇಕ ಟೂರ್ನಿಮೆಂಟ್ ಗಳಲ್ಲಿ ಭಾರತ ಗೆಲ್ಲುತ್ತಿದ್ದುದು ಹೀಗೆಯೇ ಆಗಿತ್ತು …!!

ಯಾಕೆ ಹೀಗೆ ಅಂತಂದುಕೊಂಡರೆ ಭಾರತೀಯರದ್ದು ಸ್ಟಾರ್ಟಿಂಗ್ ಟ್ರಬಲ್ ಸಮಸ್ಯೆಯಾಗಿತ್ತು. ಅಷ್ಟೇ ಅಲ್ಲದೆ ದಿಢೀರ್ ಕುಸಿತ ಎನ್ನುವ ಪೆವಿಲಿಯನ್ ಪರೇಡ್ ಸಮಸ್ಯೆಯಿತ್ತು. ಒಂದಿಡೀ ಟೀಮ್ ಕೆಲವೇ ಕೆಲವು ಆಟಗಾರರ ಮೇಲೆ ಅವಲಂಬನೆಯಲ್ಲಿದ್ದ ಕಾರಣ ಆ ಆಟಗಾರರು ಆಡಿದರಷ್ಟೇ ಮ್ಯಾಚ್ ಇಲ್ಲದಿದ್ದರೆ ಗೋತಾ ಅನ್ನುವ ಪರಿಸ್ಥಿತಿಯಿತ್ತು. ಎಷ್ಟೇ ಗೆಲುವಿನ ಸನಿಹದಲ್ಲಿದ್ದರೂ ಕೆಳಕ್ರಮಾಂಕದಲ್ಲಿ ಆಡುವ ಬೌಲರ್ ಗಳು ಗೆಲುವಿನ ದಡ ಮುಟ್ಟಿಸುತ್ತಾರೆ ಎನ್ನುವ ಗ್ಯಾರಂಟಿ ಇಲ್ಲದ ಕಾರಣ ಪ್ರಮುಖ ಬ್ಯಾಟ್ಸ್ಮನ್ ಗಳ ಮೇಲೆನೆ ಒತ್ತಡ ಜಾಸ್ತಿ ಇರುತ್ತಿತ್ತು.

ಈಗೆಲ್ಲಾ ಬೌಲರ್ ಎಂದರೆ ಅವನು ಸಂದರ್ಭಕ್ಕೆ ತಕ್ಕಂತೆ ಆಲ್ ರೌಂಡರ್ ಪಾತ್ರವನ್ನು ಮಾಡಬೇಕು. ಆದರೆ ಆಗ ಹಾಗಿರಲಿಲ್ಲ. ಆಗೆಲ್ಲಾ ಬೌಲರ್ ಗಳೆಂದರೆ ಅಪ್ಪಟ ಪ್ರತಿಭಾನ್ವಿತ ಬೌಲರ್ ಗಳೆಂದಷ್ಟೇ ಏನಿಸಿದ್ದರು. ಫೀಲ್ಡಿಂಗ್ ನಲ್ಲಾಗಲಿ ಬ್ಯಾಟಿಂಗ್ ನಲ್ಲಾಗಲಿ ಅವರಿಂದ ಚಮತ್ಕಾರ ನಿರೀಕ್ಷಿಸುವುದು ದೂರದ ಮಾತಾಗಿರುತ್ತಿತ್ತು. ಅದರಲ್ಲೂ ನಮ್ಮ ವೆಂಕಟೇಶ್ ಪ್ರಸಾದ್, ವೆಂಕಟಪತಿರಾಜುವಂತವರು ಬ್ಯಾಟ್ ಬೀಸುವುದನ್ನು ನೋಡಿದಾಗ, ಅವರ ಜಾಗದಲ್ಲಿ ನಾವಿದ್ದಿದ್ದರೆ ಚೆನ್ನಾಗಿ ಆಡುತ್ತಿದ್ದೇವೆನೊ ಅಂತೆಲ್ಲ ಅನ್ನಿಸೋದು..! ಇಷ್ಟಾದರೂ ಅವರು ಚೆನ್ನಾಗಿ ಬ್ಯಾಟಿಂಗ್ ಮಾಡಿಲ್ಲವಲ್ಲ ಅಂತ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ..! ಏಕೆಂದರೆ ಅವರು ಬೌಲರ್ ಗಳು. ಅವರನ್ನು ಬೌಲರ್ ಆಗಿಯೇ ತಂಡದಲ್ಲಿ ಪರಿಗಣಿಸಿರುವುದರಿಂದ ಆ ವಿಭಾಗದ ಅವರ ಪ್ರದರ್ಶನವಷ್ಟೇ ಗಣನೆಗೆ ಬರುತ್ತಿತ್ತು.

ಇನ್ನು ಬೌಲರ್ ಗಳನ್ನು ಹೆಚ್ಚುವರಿಯಾಗಿ ಸಮಯಕ್ಕೆ ತಕ್ಕಂತೆ ಬಳಸಿಕೊಳ್ಳುವ ತೀರ್ಮಾನ ಏನಾದ್ರೂ ಇದ್ದರೆ ಅದು ನಾಯಕನ ಕೈಯಲ್ಲಿರುತ್ತಿತ್ತು. ಬಹುಶಃ ಈ ಹಂತದಲ್ಲೇ ನಾಯಕ ಅಜರುದ್ದೀನ್ ಸಫಲತೆ ಕಂಡಿದ್ದು. ಅದಾಗಲೇ ಸಚಿನ್ ಅವರನ್ನು ಓಪನಿಂಗ್ ಸ್ಥಾನಕ್ಕೆ ಭಡ್ತಿ ನೀಡಿ ಯಶಸ್ಸು ಸಾಧಿಸಿದ್ದ ಅಜರ್ ಸ್ಟಾರ್ಟಿಂಗ್ ಟ್ರಬಲ್ ಎನ್ನುವ ಭಾರತೀಯರ ಚಳಿಗೆ ಉತ್ತರ ಕಂಡುಕೊಂಡಿದ್ದರು. ಆದರೆ ಅದೇ ವೇಳೆಗೆ ಇನ್ನೊಂದು ಸಮಸ್ಯೆ ಎದುರಾಗಿತ್ತು. ಅದು ಸಚಿನ್ ಮೇಲಿನ ಅತಿಯಾದ ಅವಲಂಬನೆಯಿಂದ ಆಗುತ್ತಿದ್ದ ದಿಢೀರ್ ಕುಸಿತ. ಹೌದು, ಸಚಿನ್ ಓಟಾಗುತ್ತಿದ್ದದಂತೆಯೇ ಭಾರತೀಯರ ಪೆವಿಲಿಯನ್ ಪರೇಡ್ ಶುರುವಾಗುವುದು ಆಗೀನ ಟೈಮಲ್ಲಿ ಸಾಮಾನ್ಯವಾಗಿತ್ತು. ಬಹುಶಃ ಆ ಟೈಮಲ್ಲಿ ಮೂಡಿಬಂದಿದ್ದೆ ಪಿಂಚ್ ಹಿಟ್ಟರ್ ಅನ್ನೋ ಕಾನ್ಸೆಪ್ಟ್.

ಬಹುತೇಕ ಎಲ್ಲಾ ದೇಶಗಳು ಒನ್ ಡೇ ಮ್ಯಾಚ್ ನಲ್ಲಿ ಅಳವಡಿಸಿಕೊಂಡಿದ್ದ ಈ ಕಾರ್ಯತಂತ್ರವನ್ನು ಅಜರ್ ಕೂಡ ಬಳಸಿಕೊಂಡರು. ಹೇಗೆ ತೆಂಡೂಲ್ಕರ್ ನನ್ನು ಐದನೇ ಬೌಲರ್ ಆಗಿ ಇಂಪಾರ್ಟೆಂಟ್ ಸನ್ನಿವೇಶಗಳಲ್ಲಿ ಬಳಸಿಕೊಂಡು ಸಕ್ಸಸ್ ಕಂಡರೋ ಹಾಗೆ ಇಂಪಾರ್ಟೆಂಟ್ ಮ್ಯಾಚ್ ಗಳಲ್ಲಿ ರಾಬಿನ್ ಸಿಂಗ್, ಮೋಂಗಿಯಾ, ಶ್ರೀನಾಥ್ ರನ್ನು ಮೇಲಿನ ಕ್ರಮಾಂಕದಲ್ಲಿ ಆಡಿಸುವ ಮೂಲಕ ಯಶಸ್ಸು ಸಾಧಿಸಿದರು. ಈ ಎಲ್ಲಾ ಪ್ರಯೋಗಗಳನ್ನು ನಿರ್ಣಾಯಕ ಪಂದ್ಯಗಳಲ್ಲಷ್ಟೆ ಬಳಸುತ್ತಿದ್ದರು ಎಂಬುದು ಅವರ ವಿಶೇಷತೆಯಾಗಿತ್ತು.

ಹಾಗಾಗಿ ಭಾರತೀಯರು ಎಷ್ಟೇ ಆರಂಭದಲ್ಲಿ ನಿದ್ದೆ ಮಾಡುತ್ತಾ ಕುಂಟುತ್ತಾ ಸಾಗುತ್ತಿದ್ದರೂ ಅಭಿಮಾನಿಗಳು ಮಾತ್ರ ತಂಡದ ಮೇಲಿನ ವಿಶ್ವಾಸವನ್ನು ಕೊನೆಯವರೆಗೂ ಉಳಿಸಿಕೊಂಡಿರುತ್ತಿದ್ದರು. ಕಾರಣ, ದಿಢೀರ್ ಅಂತ ಮಳೆ ಬಂದು ಸೋಲುವ ಮ್ಯಾಚ್ ಗಳಲ್ಲಿ ಸೇವ್ ಆಗೋದು…! ಸೋತರೂ ರನ್ ರೇಟ್ ನಲ್ಲಿ ಗಮನಸೆಳೆದು ಫೈನಲ್ ಗೆ ಹೋಗೋದು.! ಫೈನಲ್ ನಲ್ಲಿ ಮಾತ್ರ ಎಲ್ಲರೂ ಅಚ್ಚರಿ ಪಡುವಂತೆ ಆಡಿ ಕಪ್ ಗೆಲ್ಲೋದು ಆಗೆಲ್ಲಾ ಕಾಮನ್ ಆಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಸಿಂಗಾರ್ ಕಪ್, ವೀಲ್ಸ್ ಟ್ರೋಫಿ, ಏಷ್ಯಾ ಕಪ್, ಕೋಕಾಕೋಲ ಕಪ್, ಇಂಡಿಪೆಂಡೆನ್ಸ್ ಕಪ್ ಭಾರತದ ಗೆಲುವಿನ ನಾಗಾಲೋಟಕ್ಕೆ ಮೆರುಗು ನೀಡಿದ್ದವು.

ಇನ್ನು ಸುಮಾರಾಗಿರುವ ತಂಡವನ್ನು ಇಟ್ಟುಕೊಂಡು ಹೇಗೆ ದೊಡ್ಡ ಪಂದ್ಯಗಳನ್ನು ಗೆಲ್ಲಬಹುದು ಅನ್ನೋದಕ್ಕೆ ಅಜರುದ್ದೀನ್ ಮಾದರಿಯಾಗಿದ್ದರು. ಭಾರತದ ಸಕ್ಸಸ್ ಫುಲ್ ಕ್ಯಾಪ್ಟನ್ ಯಾರು ಎಂಬ ಪ್ರಶ್ನೆಗೆ ಸೌರವ್ ಗಂಗೂಲಿ ಹಾಗೂ ಧೋನಿಯೇ ಉತ್ತರವಾದರೂ, ಫೈನಲ್ ನಂತಹ ಪಂದ್ಯಗಳನ್ನು ಹೇಗೆ ಗೆಲ್ಲಬೇಕು ಎನ್ನುವ ಪ್ರಶ್ನೆಗೆ ಅಜರ್ ಅವರಲ್ಲಿ ಉತ್ತರವಿತ್ತು. ಅಜರ್ ಅವರ ವಿಶೇಷತೆ ಏನೆಂದರೆ ಅವರು ಪ್ರತಿಭಾನ್ವಿತ ಆಟಗಾರರಿಗೆ ಹೆಚ್ಚು ಮಣೆ ಹಾಕುತ್ತಿದ್ದರು. ಅಂತಹ ಆಟಗಾರರಿಗೆ ಹೆಚ್ಚು ಹೆಚ್ಚು ಅವಕಾಶ ಲಭಿಸಬೇಕೆಂದು ಬಯಸುತ್ತಿದ್ದರು. ಇದೇ ಕಾರಣಕ್ಕೆ ನಿಧಾನಗತಿಯ ಫೀಲ್ಡಿಂಗ್ ಗೆ ಹೆಸರಾದ ಸಿದ್ದು, ಲಕ್ಷ್ಮಣ್, ಕುಂಬ್ಳೆ, ಪ್ರಸಾದ್, ರಾಜುವಂತಹ ಆಟಗಾರರು ಪ್ರತಿಭೆಯ ಮಾನದಂಡದಿಂದಲೇ ಹೆಚ್ಚು ಅವಕಾಶ ಪಡೆದುಕೊಂಡರು. ಅದರಲ್ಲೂ ಅಜರ್ ಅವಧಿಯಲ್ಲಿ ಮಂಜ್ರೇಕರ್, ಕಾಂಬ್ಳಿಗೆ ಸಿಕ್ಕಷ್ಟು ಅವಕಾಶ ಮತ್ತ್ಯಾವ ಕ್ರಿಕೆಟರ್ ಗೂ ಸಿಕ್ಕಿಲ್ಲವೆಂದೆ ಹೇಳಬೇಕು. ಆದರೆ ಅದನ್ನು ಸದುಪಯೋಗಪಡಿಸಿಕೊಳ್ಳಲು ಅವರು ವಿಫಲರಾದ ಕಾರಣ ಮುಂದೆ ಅದೇ ಜಾಗಕ್ಕೆ ಗಂಗೂಲಿ ಹಾಗೂ ದ್ರಾವಿಡ್ ಅನ್ನುವ ಮತ್ತೆರಡು ಟ್ಯಾಲೆಂಟ್ ಗಳು ಹುಟ್ಟಿಕೊಂಡರು.

ಇನ್ನು ಅಜರ್ ಅವಧಿಯಲ್ಲಿಯೇ ಗಂಗೂಲಿ, ತೆಂಡೂಲ್ಕರ್ ಜೋಡಿ ವಿಶ್ವ ಶ್ರೇಷ್ಠ ಆರಂಭಿಕ ಜೋಡಿಯಾಗಿತ್ತು ಎಂಬುದನ್ನ ಮರೆಯುವಂತಿಲ್ಲ. ಹಾಗೆಯೇ ರಾಹುಲ್ ದ್ರಾವಿಡ್ ಒನ್ ಡೇ ಮ್ಯಾಚ್ ಗಳಿಗೆ ಅನ್ ಫಿಟ್ ಎಂಬ ಆರೋಪ ಕೇಳಿಬಂದಾಗ ಅವರ ಬೆನ್ನಿಗೆ ನಿಂತು ಹೆಚ್ಚು ಅವಕಾಶಗಳು ಸಿಗುವಂತೆ ನೋಡಿಕೊಂಡಿದ್ದು ಕೂಡಾ ಅಜರ್ರೆ ಆಗಿದ್ದರು. ಇದರ ಪರಿಣಾಮ 1998ರ ಇಡೀ ವರ್ಷ ಕಳಪೆಯಾಗಿದ್ದ ದ್ರಾವಿಡ್ 1999ರ ವರ್ಲ್ಡ್ ಕಪ್ ನಲ್ಲಿ ಟಾಪ್ ಸ್ಕೋರರ್ ಎನಿಸಿದ್ದರು. ಅಷ್ಟೇ ಅಲ್ಲದೇ ಆ ವರ್ಲ್ಡ್ ಕಪ್ ನ ಕೀನ್ಯಾದೆದುರಿನ ಪಂದ್ಯದಲ್ಲಿ ಕೀಪಿಂಗ್ ಗ್ಲೌಸ್ ಕೂಡ ತೊಡುವುದರೊಂದಿಗೆ ಮುಂದೆ ವಿಕೆಟ್ ಕೀಪರ್ ಪಾತ್ರಕ್ಕೂ ತಾವು ಸೈ ಎನ್ನುವುದನ್ನ ತೋರಿಸಿದರು. ಮುಂದೆ ಸೌರವ್ ಗಂಗೂಲಿ ಅವಧಿಯಲ್ಲಿ ದ್ರಾವಿಡರ ಈ ಪಾತ್ರ ಹೆಚ್ಚು ಯಶಸ್ವಿಯಾಯಿತು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇನ್ನು ಅಜರ್ ಯುವ ಪ್ರತಿಭೆಗಳಿಗೆ, ಫಾರ್ಮಿನಲ್ಲಿಲ್ಲದ ಆಟಗಾರರಿಗೆ ಹೆಚ್ಚು ಆಡಲು ಸಮಯಾವಕಾಶ ಸಿಗಬೇಕು ಅನ್ನೊ ಕಾರಣಕ್ಕೆ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಬಿಟ್ಟು ಕೊಡುತ್ತಿದ್ದರು.

ಒನ್ ಡೇ ಯಲ್ಲಿ ತಮ್ಮ ಸ್ಥಾನವಾಗಿದ್ದ ಮೊದಲ ಕ್ರಮಾಂಕವನ್ನು ಮೊದಲು ಮಂಜ್ರೇಕರ್ ನಂತರ ಕಾಂಬ್ಳಿಗೆ ಬಿಟ್ಟು ತಮ್ಮ ಔದಾರ್ಯತೆಯನ್ನು ತೋರಿದ್ದರು. ಆದರೆ ಅವರಿಬ್ಬರು ಅದನ್ನು ದೀರ್ಘ ಕಾಲ ಉಳಿಸಿಕೊಳ್ಳಲು ವಿಫಲರಾದ ಕಾರಣ ನಂತರ ಆ ಸ್ಥಾನ ದ್ರಾವಿಡ್ ಪಾಲಾಯಿತು. ಮುಂದೆ ಅದನ್ನು ದ್ರಾವಿಡ್ ಅದೆಷ್ಟು ಚೆನ್ನಾಗಿ ಬಳಸಿಕೊಂಡರು ಎನ್ನುವುದಕ್ಕೆ ಸಹ ಆಟಗಾರರೊಂದಿಗೆ ಅವರು ಆಡಿದ ವಿಶ್ವ ದಾಖಲೆಯ ಜೊತೆಯಾಟಗಳೇ ಸಾಕ್ಷಿಯಾದವು. ಒಂದು ರೀತಿಯಲ್ಲಿ ರಾಹುಲ್ ದ್ರಾವಿಡ್ ದಿ ವಾಲ್ ಅಂತ ಅನ್ನಿಸಿಕೊಳ್ಳುವುದರ ಹಿಂದೆ ಅಜರುದ್ದೀನ್ ನ ಸಿಗ್ನೆಚರ್ ಕೂಡಾ ಇತ್ತು ಅನ್ನೊದನ್ನ ತಳ್ಳಿಹಾಕುವಂತಿಲ್ಲ. ಇನ್ನು ಎಂತಹ ಪರಿಸ್ಥಿತಿಯಲ್ಲೂ ಏಕ್ಸಾಯಿಟ್ ಮೆಂಟ್ ಆಗದೆ ತಂಡವನ್ನು ಸಂಭಾಳಿಸುವ ಅಪರೂಪದ ಗುಣ ಅಜರ್ ಗೆ ಇತ್ತು. ಹಾಗೆನೆ ತನಗೆ ಯಾವ ಪ್ಲೇಯರ್ ಅನ್ನ ನೀಡಿದರೂ ಅವರಲ್ಲಿನ ಪ್ಲಸ್ ಅಂಡ್ ಮೈನಸ್ ನೋಡಿಕೊಂಡು ಅವರ ಲಿಮಿಟೆಶನ್ ತಿಳಿದುಕೊಂಡು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳುವ ಜಾಣ್ಮೆ ಅವರಿಗಿತ್ತು. ಇನ್ನು ತಾನೇ ಮಂಚೂಣಿಯಲ್ಲಿರಬೇಕು ತನ್ನಿಂದಲೇ ಎಲ್ಲಾ ನಡೆಯಬೇಕು ಎನ್ನುವ ಆಟಿಟ್ಯೂಡ್ ಅನ್ನ ಯಾವತ್ತಿಗೂ ಪ್ರದರ್ಶಸದ ಕಾರಣ ಅಷ್ಟೊಂದು ಸುದೀರ್ಘ ಅವಧಿಯವರೆಗೆ ತಂಡದ ನಾಯಕನಾಗಿರಲು ಸಾಧ್ಯವಾಯಿತು ಎನ್ನಬಹುದು.

ಇಷ್ಟೆಲ್ಲಾ ಆಗಿ ಅಪ್ಪಟ ಸ್ಪೋರ್ಟ್ಸ್ ಪರ್ಸನ್ ಎನಿಸಿದ್ದ ಅಜರ್ ತಮ್ಮ ತಂಡವನ್ನು ಒಂದು ಸುದೀರ್ಘ ಅವಧಿಗೆ ಸ್ಪೋರ್ಟಿವ್ ಟೀಮ್ ಆಗಿ ಕಟ್ಟುವಲ್ಲಿ ಮಾತ್ರ ವಿಫಲರಾಗಿದ್ದರು. ಪರಿಣಾಮ ಅವರ ಟೇಕ್ನಿಕ್ ಗಳೆಲ್ಲ ನಿರ್ಣಾಯಕ ಪಂದ್ಯಗಳಿಗಷ್ಟೇ ಸಿಮೀತವಾಯಿತು. ಸಚಿನ್ ಮೇಲಿನ ಅವಲಂಬನೆ ದಿಢೀರ್ ಕುಸಿತದ ಪ್ರಾಬ್ಲಂ ಗಳಿಗೆಲ್ಲ ಶಾಶ್ವತ ಪರಿಹಾರ ಸಿಗದೆ ಹಾಗೆಯೇ ಮುಂದುವರೆದವು. ಕಾರಣ ಆಟಗಾರನ ಟ್ಯಾಲೆಂಟ್ ಗೆ ಹೆಚ್ಚು ಒತ್ತು ಕೊಡುವ ಮನಸ್ಥಿತಿ, ಪ್ರತಿಭೆಗಳಿಗೆ ಹೆಚ್ಚು ಅವಕಾಶ ಸಿಗಬೇಕು ಎನ್ನುವ ನಿರ್ಧಾರ, ಆಟಗಾರರಲ್ಲಿರುವ ಸ್ಪೋರ್ಟಿವ್ ನೆಸ್ ಹೊರತರಲು ವಿಫಲವಾಯಿತು. ಪರಿಣಾಮ ಸ್ವತಃ ಒಳ್ಳೆಯ ಫೀಲ್ಡರ್ ಎನಿಸಿದರೂ ತಂಡದ ಫೀಲ್ಡಿಂಗ್ ಸುಧಾರಣೆ ಮಾಡುವಲ್ಲಿ ಸೋತರು. ಕೊನೆಗೂ ಅವರ ಅವಧಿಯಲ್ಲಿ ಸಿದ್ದು, ಲಕ್ಷ್ಮಣ್, ಕುಂಬ್ಳೆ, ಪ್ರಸಾದ್ ಎಲ್ಲಾ ತಮ್ಮ ತಮ್ಮ ಪ್ರತಿಭೆಯ ಕಾರ್ಯಕ್ಷೇತ್ರದಲ್ಲಷ್ಟೆ ಮಿಂಚಿ ಫೀಲ್ಡಿಂಗ್ ನಲ್ಲಿ ಅಷ್ಟಕಷ್ಟೆ ಎನಿಸಿದರು. ಆದರೆ ಅದೇ ಫೀಲ್ಡಿಂಗ್ ನಲ್ಲಿ ಸುಮಾರಾಗಿದ್ದ ಗಂಗೂಲಿ ಮುಂದೆ ತಮ್ಮ ಅವಧಿಯಲ್ಲಿ ಯುವರಾಜ್, ಕೈಪ್, ರೈನಾರಂತಹ ಅಪ್ಪಟ ಸ್ಪೋರ್ಟಿವ್ ಆಟಗಾರರನ್ನು ಹಾಕಿಕೊಂಡು ಆ ಕೊರತೆಯನ್ನು ನೀಗಿಸಿದರು. ಇಡೀ ಫೀಲ್ಡಿಂಗ್ ವಿಭಾಗದ ಜವಾಬ್ದಾರಿಯನ್ನೆ ಯುವಕರಿಗೆ ನೀಡುವುದರ ಮೂಲಕ ತಾವು ಅವರ ಹಿಂದೆ ನಿಂತು ಜಾಣ್ಮೆ ಮೆರೆದರು. ಇದೇ ಕಾರಣಕ್ಕೆ ಮುಂದೆ ಲಕ್ಷ್ಮಣ್, ಕುಂಬ್ಳೆಯಂತಹ ಆಟಗಾರರಿಗೆ ಒನ್ ಡೇ ಪಂದ್ಯಗಳಲ್ಲಿ ಜಾಗವಿಲ್ಲದಂತಾಯಿತು.

ಇನ್ನು ಸಚಿನ್ ಮೇಲಿನ ಅವಲಂಬನೆ ಕಡಿಮೆಯಾಗಿ ತಂಡದಲ್ಲಿರುವವರೆಲ್ಲಾ ಮ್ಯಾಚ್ ವಿನ್ನರ್ ಗಳಾಗಿ ರೂಪುಗೊಂಡಿದ್ದು ಗಂಗೂಲಿ ಅವಧಿಯಲ್ಲಿನ ವಿಶೇಷವಾಗಿತ್ತು. ಸೆಹ್ವಾಗ್, ಯುವರಾಜ್, ಕೈಪ್, ಹರ್ಭಜನ್, ಜಹೀರ್ ಖಾನ್ ರೆಲ್ಲಾ ಭಾರತದ ಕ್ರಿಕೆಟ್ ಇತಿಹಾಸದ ಹೊಸ ಐಕಾನ್ ಗಳಾಗಿ ಮೂಡಿಬಂದರು. ವಿಶ್ವದಲ್ಲೇ ನಂಬರ್ ಒನ್ ತಂಡವೆನಿಸಿದ್ದ ಆಸ್ಟ್ರೇಲಿಯಾವನ್ನು ಹೆಡೆಮುರಿ ಕಟ್ಟಿದ್ದು, ವಿದೇಶಿ ಪಿಚ್ ಗಳಲ್ಲಿ ಗೆಲುವಿನ ಮುಖ ನೋಡಲಾರಂಭಿಸಿದ್ದು, 2003ರ ವಿಶ್ವಕಪ್ ನಲ್ಲಿ ಫೈನಲ್ ಗೆ ತಲುಪಿದ್ದು ಗಂಗೂಲಿ ಕಾಲಾವಧಿಯ ದೊಡ್ಡ ಸಾಧನೆಗಳಾದವು. ಆದರೆ ಇದೇ ಸಮಯದಲ್ಲಿ ಫೈನಲ್ ಪಂದ್ಯಗಳಲ್ಲಿ ಗೆಲ್ಲುವ ಕಲೆಯನ್ನು ಭಾರತ ಮರೆತುಬಿಟ್ಟಿತಾ ಅಂತ ಹಲವರಿಗೆ ಅನಿಸಿದ್ದು ಸುಳ್ಳಲ್ಲ. ಬಹುಶಃ 2002ರ ನಾಟ್ ವೆಸ್ಟ್ ಟ್ರೊಪಿ ಫೈನಲ್ ನಲ್ಲಿ ದಾಖಲೆಯ ಚೇಸಿಂಗ್ ಮಾಡಿ ಗೆದ್ದಿದ್ದು ಬಿಟ್ಟರೆ ಮತ್ತೆಲ್ಲ ಟೂರ್ನಿಗಳಲ್ಲಿ ಉಪಾಂತ್ಯಕ್ಕೆ ಬಂದು ಎಡವುದು ಮಾಮೂಲಿಯಾಯಿತು. ಮುಂದೆ ಮಹೇಂದ್ರ ಸಿಂಗ್ ಧೋನಿ ವರ್ಲ್ಡ್ ಕಪ್ ಗೆಲ್ಲುವ ಮೂಲಕ ಕೊರತೆಯನ್ನು ನೀಗಿಸಿದರೂ ತದನಂತರ ಅವರಿಗೂ ಕೂಡ ಫೈನಲ್ ಸಿಂಡ್ರೋಮ್ ಕಾಡಿದ್ದಂತೂ ಸುಳ್ಳಲ್ಲ. ಹಾಗಾಗಿ ಫೈನಲ್ ಗೆ ಹೋದರೆ ಇಂಡಿಯಾ ಗೆಲ್ಲುತ್ತೆ ಅನ್ನುವ ಆ ಹುಂಬ ಧೈರ್ಯದ ಮಾತುಗಳು, ಆ ಎಮೋಷನ್ ಗಳು ಬಹುಶಃ ತೊಂಭತ್ತರ ದಶಕಕಷ್ಟೆ ಸಿಮೀತವಾಯಿತಾ ಅಂತ ಬಹಳ ಸಲ ಅನ್ನಿಸಿದ್ದಿದೆ. ಕೆಲವರಂತೂ ಬಿಡ್ರಿ ಆಗೆಲ್ಲಾ ಫಿಕ್ಸಿಂಗ್ ನಡಿತಿತ್ತು ಕಣ್ರಿ ಅನ್ನೋ ರೀತಿಯಲ್ಲಿ ಮಾತನಾಡಲಾರಂಭಿಸಿದರು. ಅದಕ್ಕೆ ಸರಿಯಾಗಿ ಕೆಲವೊಂದು ಪಂದ್ಯಗಳಲ್ಲಿ ನಾಯಕ ಅಜರ್ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ಕೂಡ ಬಹಳಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದವು. ಒಳ್ಳೆಯ ವಿಕೆಟ್ ಇದ್ದಾಗಲೂ ಟಾಸ್ ಗೆದ್ದಾಗ ಫೀಲ್ಡಿಂಗ್ ಆರಿಸಿಕೊಳ್ಳುವುದು. ನಂತರ ಜವಾಬ್ದಾರಿಯುತವಾಗಿ ಆಡಬೇಕಾದ ಸಮಯದಲ್ಲಿ ಬಾಲಿಶವಾಗಿ ವಿಕೆಟ್ ಒಪ್ಪಿಸೋದು. ಹೀಗೆ ಅವರ ನಡೆಗಳು ಸಾಕಷ್ಟು ಅನುಮಾನಗಳನ್ನು ಹುಟ್ಟಿಸಿದವು. ಮುಂದೆ ಆ ಅನುಮಾನಗಳೇ ಬಲವಾಗಿ ಇಡೀ ರಾಷ್ಟ್ರವೇ ಮ್ಯಾಚ್ ಫಿಕ್ಸಿಂಗ್ ಹೆಸರಿನಲ್ಲಿ ಬಿಚ್ಚಿಬೀಳುವಂತಾಗಿದ್ದು ಇತಿಹಾಸ.

ಮ್ಯಾಚ್ ಫಿಕ್ಸಿಂಗ್ ಪ್ರಕರಣದ ನಂತರ ತಂಡವನ್ನು ಹೊಸ ದಿಕ್ಕಿನತ್ತ ಕೊಂಡ್ಯೊಯುವ ಸವಾಲು ಗಂಗೂಲಿಗೆ ಎದುರಾಗಿತ್ತು. ಮುಂದೆ ಎಲ್ಲರ ನಿರೀಕ್ಷೆಗೂ ಮೀರಿ ಸೌರವ್ ಗಂಗೂಲಿ ಅದನ್ನು ಸಾಧಿಸುವ ಮೂಲಕ ಭಾರತದ ಸಮರ್ಥ ನಾಯಕನೆನಿಸಿದರು. ಆದರೆ ಇದರ ಹಿಂದೆ ಸಚಿನ್, ದ್ರಾವಿಡ್, ಕುಂಬ್ಳೆ, ಶ್ರೀನಾಥ್ ಎನ್ನುವ ನಾಲ್ಕು ಲೆಜೆಂಡ್ ಗಳು ಸ್ತಂಭಗಳಾಗಿ ನಿಂತಿದ್ದರು ಅನ್ನೊದನ್ನ ಮರೆಯುವಂತಿರಲಿಲ್ಲ. ಅಂತೆಯೇ ನಾಯಕ ಗಂಗೂಲಿ ಸೇರಿದಂತೆ ಈ ಬೆಸ್ಟ್ ಫೋರ್ ಪಿಲ್ಲರ್ ಗಳು ಅರಳಿದ್ದು ಅಜರುದ್ದೀನ್ ಅವಧಿಯಲ್ಲಿ ಅನ್ನೊದು ಕೂಡ ಸುಳ್ಳಲ್ಲ. ಅಂದರೆ ಗಂಗೂಲಿ ಸರ್ವಶ್ರೇಷ್ಠ ನಾಯಕರಾಗಿರುವ ಹಿಂದೆ ದೊಡ್ಡ ಪ್ರತಿಭಾ ಗಣಿಗಳಿರುವ ಉತ್ತಮ ತಂಡವೇ ಅವರಿಗೆ ಸಿಕ್ಕಿತ್ತು ಅನ್ನೊದನ್ನ ಮರೆಯಬಾರದು. ಎಷ್ಟೇ ಫೀಕ್ಸಿಂಗ್ ನಲ್ಲಿ ತಳಕು ಹಾಕಿಕೊಂಡಿದ್ದರೂ ಪ್ರತಿಭೆಗಳಿಗೆ ಹೆಚ್ಚು ಅವಕಾಶ ಸಿಗಬೇಕು, ಅವರ ಪೂರ್ಣ ಪ್ರಮಾಣದ ಸಾಮರ್ಥ್ಯ ತಂಡಕ್ಕೆ ದಕ್ಕಬೇಕು ಅನ್ನುವ ಅಜರುದ್ದೀನ್ ನಿಲುವನ್ನು ಸಮಸ್ತ ಭಾರತೀಯ ಕ್ರಿಕೆಟ್ ಪ್ರೇಮಿಗಳು ಒಪ್ಪಬೇಕಾಗುತ್ತದೆ. ಮುಂದೆ ಗಂಗೂಲಿ ತಮಗೆ ಸಿಕ್ಕಿದ ಉತ್ತಮ ತಂಡವನ್ನು ಬೆಸ್ಟ್ ಲೆವೆಲ್ ಗೆ ತೆಗೆದುಕೊಂಡು ಹೋಗಿ ಬೆಸ್ಟ್ ನಾಯಕ ಅಂತೆನಿಸಿಕೊಂಡರು. ತದನಂತರ ಧೋನಿ ಬೆಸ್ಟ್ ಭಾರತ ತಂಡದ ದಿ ಬೆಸ್ಟ್ ನಾಯಕನಾದರು. ಆದರೆ ತೊಂಭತ್ತರ ದಶಕದಲ್ಲಿ ಸಾಧಾರಣ ತಂಡವನ್ನು ಕಟ್ಟಿಕೊಂಡು ಅಸಾಧಾರಣ ಸಾಧ್ಯತೆಗಳನ್ನು ಆಗಾಗ ತೋರಿಸುತ್ತಿದ್ದ ಅಜರ್ ಮಾತ್ರ ಅಭಿಮಾನಿಗಳ ನೆನಪಿನಲ್ಲಿ ಬರೀ ಮ್ಯಾಚ್ ಫಿಕ್ಸರ್ ಆಗೇ ಉಳಿದುಹೋದರು. ಒಂದೇ ಒಂದು ತಪ್ಪು ನಡೆ ಹತ್ತು ಒಳ್ಳೆ ಕೆಲಸಗಳನ್ನು ಮರೆಸಿ ಬಿಡಬಲ್ಲದು ಎನ್ನೋದಕ್ಕೆ ಬಹುಶಃ ಇದಕ್ಕಿಂತ ಒಳ್ಳೆಯ ಉದಾಹರಣೆ ಇಲ್ಲವೆಂದೇ ಹೇಳಬಹುದು.

| ಇನ್ನು ನಾಳೆಗೆ ।

‍ಲೇಖಕರು Admin

August 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: