ಮಧುಕರ್ ಬಳ್ಕೂರು ಸರಣಿ ಕಥೆ 11- ಕ್ರಿಕೆಟ್ ಕಲರ್ ಫುಲ್ ಆಗಿ…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

11

ಕ್ರಿಕೆಟ್ ಕಲರ್ ಫುಲ್ ಆಗಿ

“ಏನ್ ಈ ಕ್ರಿಕೆಟಿಗರೆಲ್ಲ ಒಟ್ಟಿಗೆ ಮಾತಾಡಿಕೊಂಡು ರಿಟೈರ್ ಮೆಂಟ್ ಕೊಟ್ಟರಾ ಹ್ಯಾಗೆ..? ಒಬ್ರಾದ ಮೇಲೆ ಒಬ್ಬರು ಸುದ್ದಿ ಇಲ್ದಾಂಗೆ ಹೊದ್ರಲ್ಲಪಾ” ಕ್ರಿಕೆಟ್ ನ ಬಹಳಾನೇ ಫಾಲೋ ಮಾಡುತ್ತಿದ್ದ ಪರಿಚಿತರೊಬ್ಬರು ಅನ್ನುತ್ತಿದ್ದರು.

ಅವರ ಗ್ರಹಿಕೆ ಸರಿಯಾಗಿತ್ತು. ಕ್ರಿಕೆಟ್ ನಲ್ಲಿ ಬದಲಾವಣೆ ಪರ್ವ ಶುರುವಾಗಿತ್ತು. ಅದರಲ್ಲೂ ನೈಂಟೀಸ್ ಕ್ರಿಕೆಟ್ ಎಂದರೆ ಹಳೇ ಬೇರು ಹೊಸ ಚಿಗುರು ಅಂತಲೇ ಹೆಸರಾಗಿದ್ದರೂ, ಒಮ್ಮೆಲೆ ಒಂದಷ್ಟು ಬೇರುಗಳೆಲ್ಲ ನಿರ್ಗಮಿಸುವುದರೊಂದಿಗೆ ಕ್ರಿಕೆಟ್ ಚೌಕಟ್ಟುಗಳೆಲ್ಲ ಕಳಚಿ ಹೋಯಿತಾ ಅನ್ನುವಂತಾಗಿದ್ದು ಹೌದು. ಇಂಗ್ಲೆಂಡ್ ನ ಗ್ರಾಹಂ ಗೂಚ್, ಮೈಕಲ್ ಗ್ಯಾಟಿಂಗ್. ಆಸ್ಟ್ರೇಲಿಯಾದ ಅಲನ್ ಬಾರ್ಡರ್, ಡೇವಿಡ್ ಬೂನ್. ಪಾಕಿಸ್ತಾನದ ಇಮ್ರಾನ್ ಖಾನ್, ಮಿಯಾಂದಾದ್.

ನ್ಯೂಜಿಲೆಂಡ್ ನ ಮಾರ್ಟಿನ್ ಕ್ರೊವ್, ಡ್ಯಾನಿ ಮಾರಿಸನ್. ವಿಂಡೀಸ್ ನ ಹೇಯ್ಸ್, ರಿಚರ್ಡ್ಸನ್. ಸೌತ್ ಆಫ್ರಿಕಾದ ಕೆಪ್ಲರ್ ವೆಸಲ್ಸ್, ಇಂಡಿಯಾದ ಕಪಿಲ್ ದೇವ್, ಜಿಂಬಾಬ್ವೆಯ ಡೇವಿಡ್ ಹಟನ್, ಹೀಗೆ ಕ್ರಿಕೆಟ್ ನ ದಿಗ್ಗಜರೆಲ್ಲ ಒಟ್ಟಿಗೆ ಮಾತಾಡಿಕೊಂಡು ಕ್ರಿಕೆಟ್ ತೊರೆದರಾ ಅಂತನ್ನಿಸುವಷ್ಟರ ಮಟ್ಟಿಗೆ ಒಂದೆರೆಡು ವರ್ಷಗಳಲ್ಲಿ ಮರೆಯಾಗಿದ್ದು ಈ ಅನುಮಾನಕ್ಕೆ ಕಾರಣವಾಗಿತ್ತು. ಹೊಸ ನೀರು ಬಂದಾಗ ಹಳೇ ನೀರು ಹೋಗುವುದು ಸಹಜವೇ ಆಗಿದ್ದರೂ ತೊಂಭತ್ತರ ಮಧ್ಯಭಾಗದಲ್ಲಿ ಈ ಪಕ್ರಿಯೆ ಒಮ್ಮೆಲೆ ಜರುಗುವುದರೊಂದಿಗೆ ಇಡೀ ಕ್ರಿಕೆಟ್ ಲೋಕವೇ ಹೊಸ ಬದಲಾವಣೆಗೆ ತೆರೆದುಕೊಂಡಿತಾ ಅಂತನ್ನಿಸಿದ್ದು ಸುಳ್ಳಲ್ಲ.

ಕ್ರಿಕೆಟ್ ಕಲರ್ ಫುಲ್ ಆಗಿ ಬದಲಾಗುತ್ತಿದ್ದ ತೊಂಭತ್ತರ ದಿನಗಳವು. ವೈಟ್ ಅಂಡ್ ವೈಟ್ ಬಾಲ್ ನಲ್ಲಿ ಕಲರ್ ಫುಲ್ ಜರ್ಸಿಯೊಂದಿಗೆ ಆಟಗಾರರು ಮೈದಾನಕ್ಕೆ ಇಳಿಯುತ್ತಿದ್ದರೆ ಪ್ಲಡ್ ಲೈಟ್ ಅವರನ್ನು ಮಿರಿ ಮಿರಿ ಮಿಂಚುವಂತೆ ಮಾಡುತ್ತಿದ್ದವು. ಇಂತಿಂಥ ಜೆರ್ಸಿಯ ಬಣ್ಣ ಇಂತಿಂಥ ದೇಶದವರದ್ದೆ ಎನ್ನುವ ದಾಖಲೆ ಮನಸ್ಸಲ್ಲಿ ಅಚ್ಚೊತ್ತಾಗಿತ್ತು. ಪಾಕಿಸ್ತಾನದ ಗಿಳಿ ಹಸಿರು, ಆಸ್ಟ್ರೇಲಿಯಾದ ಹಳದಿ, ವಿಂಡೀಸ್ ನ ಕೆಂಪು, ಇಂಡಿಯಾದ ಆಕಾಶ ನೀಲಿ ಹೀಗೆ ಆಯಾ ದೇಶದ ಆಟಗಾರರು ಆಯಾ ಕಲರ್ ಜರ್ಸಿಯೊಂದಿಗೆ ಇಳಿದರಷ್ಟೆ ಮನಸ್ಸಿಗೆ ಖುಷಿ ಎನಿಸುತ್ತಿತ್ತು. ಇದರಲ್ಲೆನೆ ಬದಲಾವಣೆಗಳಾದರೂ ನಮಗದು ಸ್ವೀಕರಿಸುವುದಕ್ಕೆ ಕಷ್ಟವೆನಿಸುತ್ತಿತ್ತು. ಇನ್ನು ಟೊನಿ ಗ್ರೇಗ್, ಗವಾಸ್ಕರ್, ರವಿಶಾಸ್ತ್ರಿಯಂತವರ ಕಾಮೆಂಟರಿ ಮ್ಯಾಚ್ ಗೆ ವಿಶೇಷ ಮೆರುಗು ನೀಡುವಂತೆ ಮಾಡುತ್ತಿದ್ದವು. ಕ್ರಿಕೆಟ್ ಅಪ್ಪಟ ಕಮರ್ಷಿಯಲ್ ಆಗಿ ಬದಲಾಗತೊಡಗಿತ್ತು.

ಅದೇನೇ ಇದ್ದರೂ ಕಮರ್ಶಿಯಲ್ ಕ್ರಿಕೆಟ್ ನ ಬಹುದೊಡ್ಡ ಬದಲಾವಣೆಗೆ ಅಡಿಗಲ್ಲು ಬಿದ್ದಿದ್ದು ಹದಿನೈದು ಓವರ್ ಫೀಲ್ಡಿಂಗ್ ನಿಯಮವನ್ನ ಬಳಸಿಕೊಂಡ ರೀತಿಯಲ್ಲೇ. ಹೌದು, ಈ ಮೇಲೆ ಹೆಸರಿಸಿದ ಘಟಾನುಘಟಿ ಪ್ಲೇಯರ್ ಗಳು ಇದ್ದಾಗಲೇ ಈ ನಿಯಮ ಇದ್ದಿತಾದರೂ ಈ ಪ್ಲೇಯರ್ ಗಳೆಲ್ಲ ನಿರ್ಗಮಿಸಿದ ಮೇಲೆನೆ ಇದು ಹೆಚ್ಚು ಯಶಸ್ಸಾಗಿದ್ದು ವಿಶೇಷ. ಇದರರ್ಥ ಒಂದಿಷ್ಟು ಹೊಸ ವಿಚಾರಗಳು ಆಳವಾಗಿ ಕಾರ್ಯಗತವಾಗಬೇಕಾದರೆ ಬಿಸಿ ರಕ್ತದ ಹೊಸ ಮುಖಗಳೇ ಮುಂಚೂಣಿಯಲ್ಲಿ ಬರಬೇಕಾಗುತ್ತೆ ಎನ್ನುವುದು.! ಮುಂದೆ ಇದರ ಮುಹೂರ್ತ ಶ್ರೀಲಂಕಾದ ಜಯಸೂರ್ಯ ಹಾಗೂ ಕಲುವಿತರಣ ಅನ್ನೊ ಕಲಿಗಳು ಅಕ್ಷರಶಃ ಅನುಷ್ಠಾನಗೊಳಿಸುವ ಮಟ್ಟಿಗೆ ನಡೆದದ್ದು.! ಒಬ್ಬ ಆಫ್ ಸ್ಪಿನ್ನರ್, ಮತ್ತೊಬ್ಬ ವಿಕೆಟ್ ಕೀಪರ್ ಹೀಗೆ ಆರಂಭಿಕರಾಗಿ ಭಡ್ತಿ ಪಡೆದು ಬೌಲರ್ ಗಳನ್ನ ಹಿಗ್ಗಾಮುಗ್ಗಾ ಬೆಂಡೆತ್ತುವಷ್ಟರ ಮಟ್ಟಿಗೆ ಕ್ರಿಕೆಟ್ ನ ಚಹರೆಯನ್ನು ಬದಲಿಸುತ್ತಾರೆ ಅಂತ ಯಾರೂ ಊಹಿಸಿರಲಿಕ್ಕಿಲ್ಲ.! ಆದರದು ಸಾಧ್ಯವಾಗಿತ್ತು.

ಇನ್ನು ಇದರ ಮೊದಲ ಬಲಿಯಾದದ್ದು ಸ್ವಿಂಗ್ ಮಾಸ್ಟರ್ ಮನೋಜ್ ಪ್ರಭಾಕರ್ ರೂಪದಲ್ಲಿ. ವರ್ಲ್ಡ್ ಕಪ್ ನ ಪಂದ್ಯದಲ್ಲಿ ಪ್ರಭಾಕರ್ ನ ಒಂದು ಓವರ್ ನಲ್ಲಿ ಜಯಸೂರ್ಯ ಮಾಡಿದ ಚಾರ್ಜ್ ಅವರ ಕ್ರಿಕೆಟ್ ಕೆರಿಯರ್ ಅನ್ನೇ ಬಲಿತೆಗೆದುಕೊಂಡಿತು. ಇನ್ನು ಒನ್ ಡೇ ಮ್ಯಾಚ್ ಗಳಲ್ಲಿ 270, 280 ರನ್ ಹೊಡೆದರೆನೆ ಹೆಚ್ಚು ಅನ್ನುವಂತಿದ್ದ ಕಾಲದಲ್ಲಿ ಇದೇ ಶ್ರೀಲಂಕಾದ ಬ್ಯಾಟ್ಸ್ಮನ್ ಗಳು ಕೀನ್ಯಾದೆದುರಿನ ಪಂದ್ಯದಲ್ಲಿ 398 ರನ್ ಹೊಡೆಯುವ ಮೂಲಕ ಎಲ್ಲರ ಹುಬ್ಬೇರಿಸಿಬಿಟ್ಟಿದ್ದರು. ವರ್ಲ್ಡ್ ಕಪ್ ನಲ್ಲಿ ಶ್ರೀಲಂಕಾದವರು ನಿರ್ಮಸಿದ ಈ ರೆಕಾರ್ಡ್ ಬಹಳ ವರ್ಷಗಳ ಕಾಲ ವರ್ಲ್ಡ್ ರೆಕಾರ್ಡ್ ಆಗೇ ಉಳಿದಿತ್ತು ಎಂಬುದನ್ನ ಮರೆಯುವಂತಿಲ್ಲ. ಮುಂದೆ 300 ರನ್ ಹೊಡೆಯುದೆಲ್ಲ ಸಾಧಾರಣ ಸಂಗತಿಯಾಯಿತು. ಎಲ್ಲಾ ಹದಿನೈದು ಓವರ್ ಗಳ ಫೀಲ್ಡಿಂಗ್ ನಿಯಮವನ್ನು ಬ್ಯಾಟ್ಸ್ಮನ್ ಗಳು ಬಳಸಿಕೊಂಡ ಇಂಫಾಕ್ಟ್ ಆಗಿತ್ತು.

ಈ ಇಂಫಾಕ್ಟ್ ನಲ್ಲಿ ಜಯಸೂರ್ಯ ಯಾವ ರೀತಿ ಸಾಗುತ್ತಿದ್ದರೆಂದರೆ ಬಹಳ ವರ್ಷಗಳವರೆಗೆ ಅಜರುದ್ದೀನ್ ಹೆಸರಿನಲ್ಲಿದ್ದ ಫಾಸ್ಟೇಸ್ಟ್ ಸೆಂಚುರಿ ರೆಕಾರ್ಡ್ ಅನ್ನ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದರು. ಸಿಂಗಾಪುರದಲ್ಲಿ ನಡೆದ ಆ ಪಂದ್ಯದಲ್ಲಿ ಪಾಕಿಸ್ತಾನದ ಬೌಲರ್ ಗಳನ್ನು ಹಿಗ್ಗಾಮುಗ್ಗಾ ಜಾಡಿಸಿದ ಜಯಸೂರ್ಯ ಕೇವಲ 48 ಬಾಲ್ ಗಳಲ್ಲೆ ಸೆಂಚುರಿ ಬಾರಿಸಿದ್ದರು. ಆದರೆ ಈ ರೆಕಾರ್ಡ್ ಕೂಡ ಹೆಚ್ಚು ದಿನ ಬಾಳಲಿಲ್ಲವೆನ್ನುವುದು ಕ್ರಿಕೆಟ್ ಎಂತಹ ಸ್ಪೀಡ್ ನಲ್ಲಿ ಓಡುತಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿತ್ತು. ಏಕೆಂದರೆ ಅದೇ ವರುಷ ಅದೇ ಲಂಕಾದೆದುರು ಪಾಕಿಸ್ಥಾನದ ಆಫ್ರಿದಿ ಬರೀ 37 ಬಾಲ್ ನಲ್ಲೆ ಸೆಂಚುರಿ ಬಾರಿಸುವುದರೊಂದಿಗೆ ಸೇಡು ತೀರಿಸಿಕೊಳ್ಳುವಂತೆ ಮಾಡಿದ್ದರು. ವಿಚಿತ್ರ ಎಂದರೆ ಬೌಲರ್ ಆಗಿದ್ದ ಆಫ್ರಿದಿ ಮುಂದೆ ಆರಂಭಿಕನಾಗಿ ಸಯೀದ್ ಅನ್ವರ್ ಜೊತೆಗೂಡಿ ಯಶಸ್ವಿಯಾಗಿದ್ದು! ಇದೇ ಸಮಯದಲ್ಲಿ ಸಯೀದ್ ಅನ್ವರ್ ಕೂಡ ಒನ್ ಡೇ ಕ್ರಿಕೆಟ್ ನ ಸರ್ವಾಧಿಕ ವೈಯಕ್ತಿಕ ಸ್ಕೋರ್ 194 ಅನ್ನ ಭಾರತದ ವಿರುದ್ಧವೇ ಸಾಧಿಸಿದ್ದರು. ಚೆನೈನ ಇಂಡಿಪೆಂಡೆನ್ಸ್ ಕಪ್ ಪಂದ್ಯದಲ್ಲಿ ಮಾಡಿದ ಈ ಸಾಧನೆ ಮುಂದೆ ಸಚಿನ್ ಡಬಲ್ ಸೆಂಚುರಿ ಹೊಡೆಯುವವರೆಗೂ ದಾಖಲೆಯಾಗೇ ಉಳಿದಿತ್ತು ಅನ್ನೊದನ್ನ ಮರೆಯುವಂತಿಲ್ಲ.

ಹಾಗಂತ ಅಲ್ಲಿಯವರೆಗೆ ಆ ಸ್ಕೋರ್ ಅನ್ನ ಯಾರಿಗೂ ಟಚ್ ಮಾಡೋಕೆ ಸಾಧ್ಯವಾಗಿಲ್ವ ಅಂತೆಲ್ಲ ಅನ್ಕೋಬೇಡಿ. ಇದೇ ಜಯಸೂರ್ಯ ಶಾರ್ಜಾದಲ್ಲಿ ಭಾರತದ ವಿರುದ್ಧ 189 ರನ್ ಸಿಡಿಸಿ ಡಬಲ್ ಸೆಂಚುರಿ ಹೊಡೆಯುವ ಎಲ್ಲಾ ಭರವಸೆ ಮೂಡಿಸಿದ್ದರು. ಆದರೆ ಐವತ್ತು ಓವರ್ ಕಂಪ್ಲೀಟ್ ಆಗಲು ಎರಡು ಓವರ್ ಇರುವಾಗಲೇ ಔಟಾಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಇನ್ನು1999ರ ವರ್ಲ್ಡ್ ಕಪ್ ನಲ್ಲಿ ಗಂಗೂಲಿ ಕೂಡ ಆ ಭರವಸೆ ಮೂಡಿಸಿದ್ದರು. ಶ್ರೀಲಂಕಾದೆದುರಿನ ಆ ಪಂದ್ಯದಲ್ಲಿ 183 ರನ್ ಸಿಡಿಸಿದ ಅವರು ಕಪಿಲ್ ದೇವ್ ಅವರ ಬಹುದಿನಗಳ ಗೋಲ್ಡನ್ ಇನ್ನಿಂಗ್ಸ್ ಅಜೇಯ175 ರನ್ ಗಳನ್ನು ಹಿಂದಿಕ್ಕುವಲ್ಲಿಯಷ್ಟೇ ಯಶಸ್ವಿಯಾಗಿದ್ದರು. ಅಂದು ದ್ರಾವಿಡ್ ರ ಜೊತೆಗೂಡಿ ಎರಡನೇ ವಿಕೆಟಿಗೆ ದಾಖಲಿಸಿದ 318 ರನ್ನುಗಳ ರೆಕಾರ್ಡ್ ಓನ್ ಡೇ ಕ್ರಿಕೆಟ್ ನ ಬಹುದೊಡ್ಡ ಮೈಲುಗಲ್ಲೆನಿಸಿತ್ತು. ವಿಚಿತ್ರವೆಂದರೆ ಕೆಲವೇ ದಿನಗಳಲ್ಲಿ ಸಚಿನ್ ಕೂಡ ಅದೇ ದ್ರಾವಿಡ್ ರ ಜೊತೆಗೂಡಿ ನ್ಯೂಜಿಲೆಂಡ್ ವಿರುದ್ಧ 331ರನ್ನುಗಳ ಜೊತೆಯಾಟ ಮಾಡುವುದರೊಂದಿಗೆ ಆ ಮೈಲುಗಲ್ಲನ್ನು ಮುರಿದಿದ್ದರು. ಅಂದು ಸಚಿನ್ 186 ರನ್ ಗಳಿಸಿ ಗಂಗೂಲಿಯ ದಾಖಲೆಯನ್ನು ಹಿಂದಿಕ್ಕಿದರೂ ಇನ್ನಿಂಗ್ಸ್ ಮುಗಿಯುವುದಕ್ಕೂ ಓವರ್ ಮುಂಚೆನೆ ಔಟಾಗಿದ್ದರಿಂದ ಅನ್ವರ್ ರೆಕಾರ್ಡ್ ಮುರಿಯುವ ಅವಕಾಶ ತಪ್ಪಿಹೋಯಿತು. ಇಷ್ಟೆಲ್ಲಾ ಅದ್ಭುತಗಳು ಒಮ್ಮಿಂದೊಮ್ಮೆಲೆ ನಡೆಯೋದಕ್ಕೆ ಕಾರಣವಾಗಿದ್ದು ಹದಿನೈದು ಓವರ್ ಗಳ ಫೀಲ್ಡಿಂಗ್ ನಿಯಮವನ್ನು ಬಳಸಿಕೊಂಡ ಬ್ಯಾಟ್ಸ್ಮನ್ ಗಳ ನಿಲುವಿನಲ್ಲೇ ಅಂತ ಹೇಳಬಹುದು.

ಮುಂದೆ ಶ್ರೀಲಂಕಾ ಶುರು ಮಾಡಿದ ಈ ಫಾರ್ಮುಲಾ ವನ್ನ ಬೇರೆಲ್ಲಾ ರಾಷ್ಟ್ರಗಳು ಕಾರ್ಯಗತಗೊಳಿಸಿದ ಪರಿಣಾಮ, ಸ್ಪೋಟಕ ಬ್ಯಾಟ್ಸ್ಮನ್ ಗಳು ಕಣ್ಣುಮುಚ್ಚಿ ತೆರೆಯೊದರೊಳಗೆ ಹುಟ್ಟಿಕೊಂಡರು. ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಆಡಂ ಗಿಲ್ ಕ್ರಿಸ್ಟ್ ಮ್ಯಾಥ್ಯೂ ಹೇಡನ್ ಗೆ ಜೊತೆಯಾದರು. ನಮ್ಮಲ್ಲಿ ಸೆಹ್ವಾಗ್ ಸಚಿನ್ ಗೆ ಜೊತೆಯಾದರು. ಸೌತ್ ಆಫ್ರಿಕಾದ ಹರ್ಷಲ್ ಗಿಬ್ಸ್, ವಿಂಡೀಸ್ ನ ಕ್ರಿಸ್ ಗೇಲ್, ನ್ಯೂಜಿಲೆಂಡ್ ನ ನಥೆಲ್ ಆಸ್ಟೆಲ್ ರೆಲ್ಲಾ ಆರಂಭಿಕರಾಗಿ ಭಡ್ತಿ ಪಡೆದು ಗೇಮ್ ಚೇಂಜರ್ ಆಗೋ ಲೆವೆಲ್ಲಿಗೆ ಬೆಳೆದುನಿಂತರು. ಕ್ರಿಕೆಟ್ ನ ಚರ್ಯೆ ನೋಡು ನೋಡುತ್ತಿದ್ದಂತೆಯೇ ಬದಲಾಯಿತು. ಅದರಲ್ಲೂ ನಥೆಲ್ ಆಸ್ಟೇಲ್ ಟೆಸ್ಟ್ ಮ್ಯಾಚ್ ನಲ್ಲೆ ಈ ಸ್ಪೋಟಕತೆ ತೋರಿಸಿ ಫಾಸ್ಟೇಸ್ಟ್ ಡಬಲ್ ಸೆಂಚುರಿ ಹೊಡೆದರು. ಸೆಹ್ವಾಗ್ ಅವರಂತೂ ಆವಾಗಲೇ ಟೆಸ್ಟ್ ಅನ್ನ ಒನ್ ಡೇ ತರಹ, ಒನ್ ಡೇ ಅನ್ನ ಟಿ ಟ್ವೆಂಟಿ ತರಹ ಆಡುತ್ತಿದ್ದರು. ಸೆಹ್ವಾಗ್ ಅವರ ಈ ಕ್ವಾಲಿಟಿ ಭಾರತದ ಪ್ಲಾಟ್ ಪಿಚ್ ಗಳಲ್ಲಷ್ಟೆ ಇರದೇ ವಿದೇಶದ ಬೌನ್ಸಿ ಪಿಚ್ ಗಳಲ್ಲೂ ನಡೆಯುತ್ತಿತ್ತು ಎಂಬುದು ಅವರ ಹೆಚ್ಚುಗಾರಿಕೆಯಾಗಿತ್ತು. ಇನ್ನು ಗಂಭೀರ್, ಯುವರಾಜ್, ರೈನಾ, ಧೋನಿಯಂತಹ ಸ್ಪೋಟಕ ಬ್ಯಾಟ್ಸ್ಮನ್ ಗಳು ಇಂಡಿಯಾ ರನ್ ಚೇಸಿಂಗ್ ನಲ್ಲೂ ಗ್ರೇಟ್ ಅಂತ ತೋರಿಸಿಕೊಡುವಲ್ಲಿ ಯಶಸ್ವಿಯಾದರು. 2002ರ ನಾಟ್ ವೆಸ್ಟ್ ಕಪ್ ಫೈನಲ್ ಪಂದ್ಯದ ಚೇಸಿಂಗ್ ನಲ್ಲಿ ಯುವರಾಜ್, ಕೈಫ್ ತೋರಿದ ಕರಮಾತ್ ಭಾರತ ಎಂತಹ ಸವಾಲನ್ನು ಸ್ವೀಕರಿಸೋದಕ್ಕೂ ಸೈ ಅನ್ನೋದನ್ನ ಸಾರಿ ಹೇಳಿತು. ಆದರೆ ಇದುವರೆಗೂ ಕ್ರಿಕೆಟ್ ಕಂಡಿರದ ವಂಡರ್ ರನ್ ಚೇಸಿಂಗ್ ನಡೆದದ್ದು ಮಾತ್ರ ಸೌತ್ ಆಫ್ರಿಕಾದ ಜೋಹಾನ್ಸ್ಬರ್ಗ್ ನಲ್ಲಿ. 2006ರಲ್ಲಿ ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ನಡುವೆ ನಡೆದ ಪಂದ್ಯದಲ್ಲಿ ಪ್ರಪಥಮ ಬಾರಿಗೆ ಎರಡು ತಂಡಗಳು ನಾನೂರು ಗಡಿ ದಾಟಿ ಯಶಸ್ವಿ ರನ್ ಚೇಸಿಂಗ್ ನಿದರ್ಶನಕ್ಕೆ ಸಾಕ್ಷಿಯಾದವು. ಆಸ್ಟ್ರೇಲಿಯಾ ನೀಡಿದ 435 ರನ್ ಗಳ ಚೇಸಿಂಗ್ ಗುರಿಯನ್ನು ಹಿಂದಿಕ್ಕಿದ ಸೌತ್ ಆಫ್ರಿಕಾ ಇತಿಹಾಸ ಪುಟಗಳಲ್ಲೆ ಹೊಸ ಅಧ್ಯಾಯ ಬರೆಯಿತು.

ಬರೀ ಒಂದೇ ಒಂದು ದಶಕದಲ್ಲಿ ಕ್ರಿಕೆಟ್ ನಲ್ಲಿ ಇಷ್ಟೊಂದೆಲ್ಲಾ ಬದಲಾವಣೆಗೆ ವೇಗ ಪಡೆಯಲು ಕಾರಣವಾಗಿದ್ದು ಒನ್ಸ್ ಎಗೈನ್ ಹದಿನೈದು ಓವರ್ ಗಳ ಫೀಲ್ಡಿಂಗ್ ನಿಯಮವನ್ನು ಬಳಸಿಕೊಂಡ ರೀತಿಯಲ್ಲೇ. ಇದಕ್ಕೆ ಸರಿಯಾಗಿ ಕ್ರಿಕೆಟ್ ನ ನಿಯಮಗಳೆಲ್ಲ ಬ್ಯಾಟ್ಸ್ಮನ್ ಗಳ ಪರವಾಗಿ ಆಗಿದ್ದು, ಓವರ್ ಗೆ ಒಂದು ಬೌನ್ಸರ್ ನಿಯಮ, ಇನ್ನೊಂದು ಬೌನ್ಸರ್ ಎಸೆದರೆ ಅದನ್ನು ನೋ ಬಾಲ್ ಎಂದು ಪರಿಗಣನೆ. ತದನಂತರ ಬಂದ ಫ್ರೀ ಹಿಟ್ ಅವಕಾಶ. ಅದಕ್ಕೆ ಸರಿಯಾಗಿ ಬ್ಯಾಟ್ಸ್ಮನ್ ಗಳಿಗೆ ಅನೂಕೂಲವಾಗುವಂತೆ ತಯಾರಾದ ಪ್ಲಾಟ್ ಪಿಚ್ ಗಳು. ಆ ನಂತರ ಬಂದ ಟಿ ಟ್ವೆಂಟಿ ಕ್ರಿಕೆಟ್ ಫಾರ್ಮೇಟ್. ಹೀಗೆ ಪ್ರತಿಯೊಂದು ಬ್ಯಾಟ್ಸ್ಮನ್ ಗಳನ್ನು ಹೆಚ್ಚು ಹೆಚ್ಚು ಫೋಕಸ್ ಮಾಡುತ್ತಾ ಕ್ರಿಕೆಟ್ ಜನಪ್ರಿಯವಾಗಲು ಕಾರಣವಾಯಿತೆನ್ನಬಹುದು. ಅದರಲ್ಲೂ ಐಪಿಎಲ್ ಶುರುವಾದ ಮೇಲಂತೂ ಕ್ರಿಕೆಟ್ ಕಲರ್ ಫುಲ್ ಆಗಿ ತೆರೆದುಕೊಂಡು ರಂಗೀನ್ ದುನಿಯಾಕ್ಕೆ ಹತ್ತಿರವಾಯಿತು ಅಂತಲೇ ಹೇಳಬಹುದು.

ಕ್ರಿಕೆಟಿಗರೆಲ್ಲ ಹರಾಜು ಪ್ರಕ್ರಿಯೆಯ ಸರಕಾದ ಮೇಲೆ ತಮ್ಮ ದೇಶ, ತಂಡವೆನ್ನುವ ಭಾವನೆಯೆಲ್ಲ ಪಕ್ಕಕ್ಕಿಟ್ಟು ತಮ್ಮನ್ನು ಕೊಂಡುಕೊಳ್ಳುವ ತಂಡಕ್ಕೆ ಎಂಟರ್ಟೈನ್ಮೆಂಟ್ ನೀಡಿ ಅವರನ್ನು ಮೆಚ್ಚಿಸುವ ಧ್ಯೇಯವೇ ಮುಖ್ಯವಾಯಿತೆನ್ನಬಹುದು. ಇದರಿಂದಲೇ ಏನೋ ವೆಸ್ಟ್ ಇಂಡೀಸ್ ನ ಅದೆಷ್ಟೋ ಕ್ರಿಕೆಟಿಗರ ಮನೋಧರ್ಮ ಇಂದು ಬದಲಾಗಿದೆ. ಅವರೆಲ್ಲರಿಗೂ ಭಾರತದಲ್ಲಿ ನಡೆಯುವ ಐಪಿಎಲ್ಲೆ ಬಹುಮುಖ್ಯ ಕಾರ್ಯಕ್ಷೇತ್ರವಾಗಿದೆ. ಇವತ್ತು ಆ ಕ್ರಿಕೆಟಿಗರೆನಾದರೂ ಕೈತುಂಬಾ ಹಣ, ನೇಮು ಫೇಮು, ಪ್ರೀತಿ, ಅಭಿಮಾನ, ಅಂತ ನೋಡಿದರೆ ಅದು ನಮ್ಮ ದೇಶದಲ್ಲಿ ನಡೆಯುವ ಐಪಿಎಲ್ ನಿಂದಾನೆ ಹೊರತು ತಮ್ಮ ದೇಶದ ಪರ ಆಡುವುದರಿಂದಲ್ಲ. ಇವತ್ತು ಆರ್ ಸಿಬಿಯಲ್ಲಿ ಒಬ್ಬನೇ ಒಬ್ಬ ಕರ್ನಾಟಕ ಪ್ಲೇಯರ್ ಇಲ್ಲದಿದ್ದರೂ ನಾವು ಆರ್ ಸಿಬಿ ಆರ್ ಸಿಬಿ ಅಂತಾ ಅಭಿಮಾನ ಮೆರೆಯುತ್ತೆವೆಂದರೆ ಕಾರಣ ಆರ್ ಸಿಬಿ ಯಲ್ಲಿ ಆಡುವ ಇಂತಹ ಪ್ಲೇಯರ್ ಗಳೇ. ಹೌದು, ಡೆಲ್ಲಿಯ ವಿರಾಟ್ ಕೊಹ್ಲಿ ಯನ್ನು ನಮ್ಮ ಮನೆಮಗನಂತೆಯೇ ನೋಡುವ ರೀತಿಯಲ್ಲಿಯೇ ಎಬಿಡಿ, ಮ್ಯಾಕ್ಸ್ ವೇಲ್ ನಮ್ಮವರೇ ಅಂತ ಒಪ್ಪಿಕೊಂಡಿದ್ದೇವೆ.

ಈ ಕಾರಣದಿಂದಲೇ ನಮ್ಮವರಾದ ಕೆಎಲ್ ರಾಹುಲ್ ಪಂಜಾಬ್ ಟೀಮ್ ನ ಕ್ಯಾಪ್ಟನ್ ಆದರೂ ನಮಗದು ಹೆಮ್ಮೆಯ ವಿಷಯವಾಗುತ್ತದೆ. ಅಷ್ಟೇ ಏಕೆ ಇವತ್ತಿಗೂ ಚೈನೈ ಸೂಪರ್ ಕಿಂಗ್ಸ್ ಅಂದಾಕ್ಷಣ ನೆನಪಾಗೋದು ರಾಂಚಿಯ ಧೋನಿಯೇ. ಅದೆಲ್ಲಕ್ಕಿಂತ ಮುಖ್ಯವಾಗಿ ಭಾರತದಂತಹ ದೇಶದಲ್ಲಿ ನೂರಾರು ಮಂದಿ ಪ್ರತಿಭೆಗಳಿಗೆ ಐಪಿಎಲ್ ಒಂದು ಬಹುದೊಡ್ಡ ಪ್ಲಾಟ್ ಫಾರಂ ಎನಿಸಿದೆ. ಅವಕಾಶದ ಜೊತೆಗೆ ನೇಮು ಫೇಮು ಸಿಗುತ್ತಿದೆ. ಐಪಿಎಲ್ ನ ಪ್ರದರ್ಶನ ಅಂತಾರಾಷ್ಟ್ರೀಯ ಮ್ಯಾಚ್ ಗಳಿಗೆ ಕದ ತಟ್ಟುವುದಕ್ಕೆ ಬಹುದೊಡ್ಡ ಮಾನದಂಡವಾಗಿದೆ. ಮತ್ತಿನ್ನೇನು ಬೇಕು..? ಕ್ರಿಕೆಟ್ ಕಮರ್ಷಿಯಲ್ ಆಗೋಯಿತು ಅಂತ ಹೇಳುವವರು ಪ್ರಮುಖವಾಗಿ ಇದನ್ನೆಲ್ಲ ಗಮನಿಸಬೇಕು.

ಆಗೆಲ್ಲ ಮ್ಯಾಚ್ ಅಂದ್ರೆ ಮೊದಲ ಹದಿನೈದು ಓವರ್ ಸ್ಟಡಿ ಮಾಡೋದು. ನಂತರ ನಿಧಾನವಾಗಿ ಇನ್ನಿಂಗ್ಸ್ ಕಟ್ಟೋದು. ಹೊಡಿಬಡಿ ಏನಿದ್ದರೂ ನಲವತ್ತು ಓವರ್ ನಂತರವೇ… ಹೊಡಿ ಬಡಿ ಅಂತಂದ್ರು ಕೂಡ ಜಯಸೂರ್ಯ, ಆಫ್ರಿದಿ, ಗಿಲ್ ಕ್ರಿಸ್ಟ್, ಗೈಲ್ ಅಂತ ಟೀಮ್ ಗೆ ಒಬ್ಬರು… ಇಬ್ಬರು… ಈಗ ಬಿಡಿ, ಟೀಮ್ ನಲ್ಲಿರೋ ಎಲ್ಲರೂ ಹೊಡಿಬಡಿಗಳೇ…

ಎಲ್ಲಿಂದ ಎಲ್ಲಿಗೆ ಬದಲಾವಣೆ….

‍ಲೇಖಕರು Admin

July 31, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: