ಹುಸಿ ಅಂಕ
ವೈ.ಕೆ.ಸಂಧ್ಯಾಶರ್ಮ
ಮದುವೆಗೆ ಮುನ್ನ
ಅವಳು ಹೇಳಿದ್ದಕ್ಕೆಲ್ಲ
ಖುಷಿಯಿಂದ ಬಾಲಕುಣಿಸಿ
ಲಾಗ ಹಾಕುವ ಮಂಗ ಅವನು
ಅವನು ಉಸುರುವುದೇ ಬೇಡ
ಕಣ್ಣಲ್ಲೇ ಇಂಗಿತವರಿತು
ನಲಿಯುತ್ತ ಊಠ್ ಬೈಸ್ ಮಾಡುವ
ಸೂತ್ರದ ಗೊಂಬೆ ಇವಳು

ಮದುವೆಯ ನಂತರ
ಮಂಗದ ನೆತ್ತಿಗೇರಿದ ಮತ್ತಿಳಿದು
ಸೂತ್ರದಗೊಂಬೆಯ ದಾರ ಹರಿದು
ಇಬ್ಬರೂ ಲಟಾಪಟಿ ಜಟಾಯಿಸುವ
ಅದ್ವಿತೀಯ ಕುಸ್ತಿಪಟುಗಳು
ಅಷ್ಟೇಕೆ, ಪರಸ್ಪರ ಮೆಚ್ಚಿಸುವ
ಬಯಲಾಟದ ರಂಗು ಕಳೆದು
ಹುಸಿನಾಟಕದ ಹಸಿತೆರೆ
ಪೊರೆಪೊರೆಯಾಗಿ ಹರಿದು
ಹುಲ್ಲೆ- ನವಿಲುಗಳ
ಮುಖವಾಡಗಳು ಕಳಚಿ
ನಿಜವಾದ ಇವರೀಗ
ನಿತ್ಯ ಪರಚಿ ಕಾದಾಡುವ
ಕಾಡುಬೆಕ್ಕುಗಳು






madam nice..