ಮತ್ತೊಂದೆರಡು ವರ್ಗಾವಣೆ ಪ್ರಸಂಗಗಳು

ಆಗ ನಾನು ತಂಡಗಕ್ಕೆ ವರ್ಗವಾಗಿ ಬಂದು ಎರಡು ವರ್ಷವಾಗಿತ್ತು. ಅಲ್ಲಿಯೇ ಹತ್ತಿರದ ನೊಣವಿನಕೆರೆಯಲ್ಲಿ ಮನೆ ಮಾಡಿಕೊಂಡಿದ್ದೆ. ಎರಡೂ ಗ್ರಾಮ ಪಂಚಾಯ್ತಿಗಳಿದ್ದ ಕೇಂದ್ರಗಳಾಗಿದ್ದು ಹತ್ತು ಕಿ.ಮೀ ದೂರದಲ್ಲಿದ್ದವು. ತಿಪಟೂರು ತುರುವೇಕೆರೆ ಮುಖ್ಯ ರಸ್ತೆಗೆ ನಾಲ್ಕು ಕಿಮೀ ಒಳಗಡೆ ತಂಡಗ ಇದೆ. ಆಗ ಅಲ್ಲಿಗೆ ಬಸ್ಸುಗಳೂ ಕಡಿಮೆ ಇದ್ದವು. ಹೀಗಾಗಿ ಯಾರದೇ, ಯಾವುದೇ ವರ್ಗಾವಣೆ ಒತ್ತಡವಿಲ್ಲದೆ ನಾಲ್ಕಾರು ವರ್ಷ ನೆಮ್ಮದಿಯಾಗಿರಬಹುದೆಂದು ಭಾವಿಸಿದ್ದೆ. ಆದರೆ ನನ್ನ ಲೆಕ್ಕಾಚಾರ ತಪ್ಪೆಂದು ಸಾಬೀತಾಗಲು ತಡವಾಗಲಿಲ್ಲ.

ತಂಡಗದಲ್ಲಿದ್ದ ಪಶು ಚಿಕಿತ್ಸಾಲಯಕ್ಕೆ ಎರಡು ಕಟ್ಟಡಗಳಿದ್ದವು. ಆಸ್ಪತ್ರೆಯಿದ್ದ ಕಟ್ಟಡ ಹಳೆಯದಾಯಿತೆಂದು ಹೊಸ ಕಟ್ಟಡ ಕಟ್ಟಿಸಿದ್ದರು. ಹಾಗಾಗಿ ಒಂದೇ ಕಾಂಪೌಂಡ್ ಒಳಗೆ ಅಕ್ಕಪಕ್ಕದಲ್ಲಿಯೇ ಎರಡು ಕಟ್ಟಡಗಳಿದ್ದವು. ನಾನು ಅಲ್ಲಿಗೆ ವರ್ಗವಾಗಿ ಬರುವ ವೇಳೆಗೆ ಹೊಸ ಕಟ್ಟಡವೂ ಹಳೆಯದಾಗಿತ್ತು. ಅಲ್ಲಲ್ಲಿ ಕಟ್ಟಡದ ಪ್ಲಾಸ್ಟರಿಂಗ್ ಕಿತ್ತುಕೊಂಡಿತ್ತು. ಒಂದು ಕಿಟಕಿಯ ಸಜ್ಜ ಅಲ್ಲಾಡುತ್ತಿತ್ತು. ಅದರ ಪ್ಲಾಸ್ಟರಿಂಗ್ ಎಲ್ಲ ಕಿತ್ತು ಹೋಗಿ ಒಳಗಿನ ಕಬ್ಬಿಣದ ಕಂಬಿಗಳು ಕಾಣುತ್ತಿದ್ದವು.

ಈ ವಿಚಾರವನ್ನು ನಾನು ಇಲಾಖೆಯ ಮೇಲಾಧಿಕಾರಿಗಳು ಅಧಿಕೃತವಾಗಿ ಬರೆದು ತಿಳಿಸಿದ್ದೆ. ಕೂಡಲೇ ರಿಪೇರಿಯಾಗುವ ಯಾವುದೇ ಭರವಸೆಯಿರಲಿಲ್ಲ. ಆದರೆ ಒಂದು ದಿನ ಇದ್ದಕ್ಕಿದ್ದಂತೆ ನನ್ನ ಪರಿಚಿತನೊಬ್ಬ ಬಂದು ಆಸ್ಪತ್ರೆಯ ಕಿಟಕಿ ಸಜ್ಜ ರಿಪೇರಿ ಮಾಡುವುದಾಗಿ ತಿಳಿಸಿದ. ಅವನೊಬ್ಬ ಪುಡಿ ಕಂತ್ರಾಟುದಾರ (ಕಂಟ್ರ್ಯಾಕ್ಟರ್) ಆಗಿದ್ದ. ಅದು ತಾಲ್ಲೂಕು ಪಂಚಾಯ್ತಿ ವತಿಯಿಂದ ಕೈಗೆತ್ತಿಕೊಂಡಿದ್ದ ಕಾಮಗಾರಿ ಆಗಿತ್ತು.

ಎಲ್ಲ ಮಾಹಿತಿ ಪತ್ರಗಳನ್ನು ಪಶುಪಾಲನಾ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕರಿಗೆ ಕಳುಹಿಸಿದ್ದರು. ನಾನು ಮೇಲಾಧಿಕಾರಿಗಳಿಗೆ ಫೋನು ಮಾಡಿ ರಿಪೇರಿ ಕಾರ್ಯದ ಬಗ್ಗೆ ಖಚಿತಪಡಿಸಿಕೊಂಡೆ. ಬಂದವನು ತನ್ನ ಶಿಷ್ಯರ ಜೊತೆ ಆಸ್ಪತ್ರೆಯ ಕಿಟಕಿಯ ಸಜ್ಜವನ್ನು ಸುತ್ತಿಗೆಯಲ್ಲಿ ಒಡೆದು ಕೆಡವಿ ಹಾಕಿದ. ಒಂದೆರಡು ದಿನದಲ್ಲಿ ಕಬ್ಬಿಣದ ಕಂಬಿ ಕಟ್ಟಿ ಸಿಮೆಂಟ್ ಕೆಲಸ ಮಾಡುತ್ತೇನೆ ಎಂದು ತಿಳಿಸಿ, ಒಂದೆರಡು ನೆಗ್ಗಿ ಹೋಗಿದ್ದ ಕಬ್ಬಿಣದ ಬಾಂಡ್ಲಿ, ಚಲಿಕೆ, ಕರ್ನಿ, ಸುತ್ತಿಗೆ ಮುಂತಾದ ಹತಾರಗಳನ್ನು ಆಸ್ಪತ್ರೆಯಲ್ಲಿ ಬಿಟ್ಟು ನಾಪತ್ತೆಯಾದ.

ಇದಾಗಿ ದಿನಗಳುರುಳ ತೊಡಗಿದವು. ಸಜ್ಜ ಬೀಳಿಸಿ ಹೋದ ಆಸಾಮಿ ನಾಪತ್ತೆಯಾಗಿಬಿಟ್ಟ. ಆ ಕಂತ್ರಾಟುದಾರ ನನ್ನ ಹಳೆಯ ಪರಿಚಿತನಷ್ಟೇ ಅಲ್ಲ 1992-93 ರ ಸಾಕ್ಷರತಾ ಆಂದೋಲನದ ಸಮಯದಲ್ಲಿ ಅನೇಕ ಸಲ ಅವನ ಮನೆಗೆ ಹೋಗಿದ್ದೆ. ಅವನ ಹೆಂಡತಿ ಅಕ್ಷರ ಬಾರದವರನ್ನು ಗುಡ್ಡೆ ಹಾಕಿಕೊಂಡು ಒಂದಷ್ಟು ದಿನ ಪಾಠ ಮಾಡುತ್ತಾ ಬಹಳ ಲವಲವಿಕೆಯಿಂದಿದ್ದ ಹೆಣ್ಣುಮಕ್ಕಳಾಗಿದ್ದಳು. ಸಜ್ಜ ರಿಪೇರಿ ಬಗ್ಗೆ ಕಂತ್ರಾಟುದಾರನ ಮನೆಗೆ ಹೋಗಿ ವಿಚಾರಿಸಿ ಬಂದೆ. ಆದರೆ ಆತ ಸಿಗಲೇ ಇಲ್ಲ.

ಇದರ ಮಧ್ಯೆ ಒಂದೆರಡು ಅಡ್ಡ ಮಳೆ ಬಂದು ಸಜ್ಜ ಇಲ್ಲದ ಕಿಟಕಿಯಿಂದ ನೀರು ಒಳನುಗ್ಗಿ ಔಷಧದ ಪುಡಿಗಳು ಕೆಲವು ಹಾಳಾಗಿ ಫಜೀತಿಯಾಯಿತು. ಕೂಡಲೇ ನಾನು ತಾಲೂಕು ಪಂಚಾಯ್ತಿ ಕಚೇರಿಗೆ ಫೋನು ಮಾಡಿ ಕಂತ್ರಾಟುದಾರನ ಬೇಜವಾಬ್ದಾರಿ ಬಗ್ಗೆ ತಿಳಿಸಿದೆ. ಜೋರು ಮಾಡದೆ ವಿನಂತಿಸಿಕೊಂಡಿದ್ದೆನಷ್ಟೆ.

ಆ ನನ್ನ ಫೋನು ಕರೆ ಎಷ್ಟು ಕೆಟ್ಟ ಪರಿಣಾಮ ಉಂಟು ಮಾಡಿತೆಂದರೆ ಒಂದೇ ತಿಂಗಳ ಒಳಗೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಬೆಳ್ತೂರು ಪಶು ಚಿಕಿತ್ಸಾಲಯಕ್ಕೆ ನನ್ನ ವರ್ಗಾವಣೆಯಾಯಿತು. ನನಗೆ ಯಾಕೆ ವರ್ಗಾವಣೆಯಾಯಿತು, ಇದರ ಹಿಂದೆ ಯಾರಿದ್ದಾರೆ ಎಂಬ ಗೋಜಿಗೂ ನಾನು ಹೋಗಲಿಲ್ಲ. ನನಗದು ಬೇಕಿರಲಿಲ್ಲ. ಕೂಡಲೇ ಬಿಡುಗಡೆ ಹೊಂದಿ ಹೊಸ ಜಾಗದಲ್ಲಿ ಕರ್ತವ್ಯಕ್ಕೆ ಹಾಜರಾದೆ. ನಾನು ಶಾಸಕರನ್ನಾಗಲೀ ಮತ್ತಾರನ್ನಾಗಲೀ ಕಾಣಲೂ ಇಲ್ಲ, ಕೇಳಲೂ ಇಲ್ಲ.

ವರ್ಗವಾಗಿ ಹೋದ ಹೊಸ ಜಾಗದಲ್ಲಿ ಪಶು ಚಿಕಿತ್ಸಾಲಯಕ್ಕೆ ಕಟ್ಟಡವೇ ಇರಲಿಲ್ಲ. ಅಲ್ಲಿನ ಸಂಸ್ಥೆಯೊಂದರ ಎರಡು ರೂಮಿನಲ್ಲಿ ಚಿಕಿತ್ಸಾಲಯ ನಡೆಸಲು ಮೇಲಾಧಿಕಾರಿಗಳು ಒಪ್ಪಿ ಮಾತುಕತೆಯಾಡಿದ್ದರಂತೆ. ಆದರೆ ಆ ಸಂಸ್ಥೆಯ ಸದಸ್ಯನಿಗೆ (ಸಂಸ) ಇದು ಒಪ್ಪಿಗೆಯಾಗಿರಲಿಲ್ಲ. ಅವನು ಆಸ್ಪತ್ರೆಗೆ ಬಿಟ್ಟುಕೊಟ್ಟಿದ್ದ ರೂಮುಗಳಿಗೆ ಬೀಗ ಹಾಕಿ ನಾಪತ್ತೆಯಾಗಿದ್ದನು. ಆದರೆ ಮದ್ದೂರಿನ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರು ಬಹಳ ಖಡಕ್ ಮನುಷ್ಯರಾಗಿದ್ದರು. ವಯಸ್ಸಾಗಿ ನಿವೃತ್ತಿಗೆ ಹತ್ತಿರವಿದ್ದರೂ ಚೈತನ್ಯದ ಚಿಲುಮೆಯಾಗಿದ್ದರು.

ಜೀಪಿನಲ್ಲಿ ನನ್ನನ್ನು ಬೆಳ್ತೂರಿನ ಪ್ರಾರಂಭಿಸಲಿರುವ ಪಶುಚಿಕಿತ್ಸಾಲಯ ಕಟ್ಟಡದ ಬಳಿ ಕರೆದುಕೊಂಡು ಹೋದರು. ಸಂಸನ ಮನೆಗೆ ಹೋಗಿ ಬಂದೆವು. ಅವನು ಬೇಕೆಂದೇ ತಪ್ಪಿಸಿಕೊಂಡಿದ್ದ. ಸಹಾಯಕ ನಿರ್ದೇಶಕರ ಕಟ್ಟಡದ ಬಳಿ ಬಂದವರೇ ಊರಿನ ಹತ್ತಿಪ್ಪತ್ತು ಜನರ ಸಮಕ್ಷಮದಲ್ಲಿ ಬಾಗಿಲಿಗೆ ಹಾಕಿದ್ದ ಬೀಗವನ್ನು ಜಜ್ಜಿ ಬಿಸಾಕಿದರು. ಒಳಗಡೆಗೆ ಎಲ್ಲರೂ ಹೋದೆವು. ಎರಡು ರೂಮಿನಲ್ಲಿ ಒಂದು ಟೇಬಲ್ ಆಗಲಿ, ಕುರ್ಚಿಯಾಗಲಿ ಏನೂ ಇರಲಿಲ್ಲ. ನೆರೆದ ರೈತರಲ್ಲಿ ಕೆಲವರು ತಮ್ಮ ತಮ್ಮ ಮನೆಗಳಿಂದ ಒಂದೆರಡು ಕುರ್ಚಿ ತಂದರು. ಅಲ್ಲಿದ್ದ ಒಬ್ಬ ಮೇಷ್ಟ್ರು ಒಂದು ಟೇಬಲ್ ತಂದಿಟ್ಟರು. ಸಹಾಯಕ ನಿರ್ದೇಶಕರು ಒಂದಷ್ಟು ಔಷಧಗಳನ್ನು, ಉಪಕರಣಗಳನ್ನು ತಂದಿದ್ದರು. ಆಸ್ಪತ್ರೆ ಪ್ರಾರಂಭವಾಗಿಯೇ ಬಿಟ್ಟಿತು.

ರೈತ ಸಂಘದ ಅನೇಕರು ನನಗೆ ಅಲ್ಲಿ ಪರಿಚಯವಾದರು. ತಮ್ಮ ಹಳ್ಳಿಯಲ್ಲಿಯೇ ಪಶುಚಿಕಿತ್ಸಾಲಯ ಶುರುವಾದದ್ದು ಅವರಿಗೆ ಖುಷಿಯೋ ಖುಷಿ. ಅಲ್ಲಿಯೇ ಹತ್ತಿರದ ಬೆಸರಗರಹಳ್ಳಿಯಲ್ಲಿ ಒಂದು ಹೊಸ ಮನೆ ಬಾಡಿಗೆಗೆ ಇದೆ ಎಂದು ಗೊತ್ತಾಯಿತು. ಅದನ್ನು ಬುಕ್ ಮಾಡಿಕೊಂಡೆ. ಮಂಡ್ಯದ ಉಪನಿರ್ದೇಶಕರಿಂದ ಹತ್ತು ದಿನ ರಜೆಯನ್ನು ಮಂಜೂರು ಮಾಡಿಸಿಕೊಂಡು ನೊಣವಿನಕೆರೆಯ ದಾರಿ ಹಿಡಿದೆ. ಕುಟುಂಬವನ್ನು ಲಗೇಜು ಸಮೇತ ಹೊಸ ಊರಿಗೆ ವರ್ಗಾಯಿಸಬೇಕಿತ್ತಲ್ಲ!

ನಾನು ಇತ್ತ ಮನೆಗೆ ಬಂದು ಲಗೇಜನ್ನು ಕಟ್ಟಿ ಸಿದ್ಧಪಡಿಸಿಕೊಳ್ಳುವಷ್ಟರಲ್ಲಿ ಅತ್ತ ಬೆಳ್ತೂರಿನ ಸಂಸ ಮತ್ತೊಂದು ಭಾನಗಡಿ ಮಾಡಿದ್ದ. ಸಂಸ ಪೊಲೀಸ್ ಸ್ಟೇಷನ್‍ನಲ್ಲಿ ಮದ್ದೂರು ಸಹಾಯಕ ನಿರ್ದೇಶಕರು ಸಂಸ್ಥೆಯ ಕಟ್ಟಡದ ಬೀಗ ಒಡೆದು ಒಳಗಿದ್ದ ಐದು ಸಾವಿರ ರೂಪಾಯಿಗಳನ್ನು ಕದ್ದಿದ್ದಾರೆಂದು ದೂರು ಕೊಟ್ಟಿದ್ದ! ಸಹಾಯಕ ನಿರ್ದೇಶಕರು ಮತ್ತೊಮ್ಮೆ ಬೆಳ್ತೂರಿಗೆ ಬರಲು, ಊರಿನ ಜನರೆಲ್ಲರೂ ಸಾಕ್ಷಿ ಹೇಳಲು ಪೊಲೀಸ್ ಸ್ಟೇಷನ್ ಬಳಿ ನೆರೆತರು. ಆದರೆ ಸಂಸ ಅಷ್ಟೊಂದು ಜನರನ್ನು ನೋಡಿ ಸ್ಟೇಷನ್ನಿನ ಬಳಿ ಬರಲೇ ಇಲ್ಲ. ಕೇಸು ಬಿದ್ದು ಹೋಯಿತು.

ರಜೆ ಮುಗಿಸಿಕೊಂಡು ನಾನು ಬೆಳ್ತೂರು ಪಶುಚಿಕಿತ್ಸಾಲಯದಲ್ಲಿ ಕೆಲಸ ಮಾಡತೊಡಗಿದೆ. ಚಿಕಿತ್ಸಾಲಯದಲ್ಲಿ ನಾನೊಬ್ಬನೇ! ಸಿಬ್ಬಂದಿಯೇ ಇಲ್ಲ. ಆದರೆ ಚಿಕಿತ್ಸಾಲಯಕ್ಕೆ ಬರುತ್ತಿದ್ದ ರೈತರೇ ಕಸ ಹೊಡೆದು, ನೀರು ತಂದು ಹಾಕಿ ಸಹಕರಿಸುತ್ತಿದ್ದರು. ರೈತರು, ದನ ಕರುಗಳು, ರೈತ ಸಂಘದವರು ಯಾವಾಗಲೂ ಚಿಕಿತ್ಸಾಲಯದಲ್ಲಿ ತುಂಬಿರುತ್ತಿದ್ದರು. ಕೋಳಿಗಳಿಗೆ, ಕುರಿ ಮೇಕೆಗಳಿಗೆ ಜಂತು ನಾಶಕ ಔಷಧ, ಮುಂಜಾಗ್ರತಾ ಚುಚ್ಚುಮದ್ದು, ರೋಗ ಚಿಕಿತ್ಸೆ ಹೀಗೆ ಒಂದು ವಾರದಲ್ಲಿ ಗಿಜಿಗುಡುವಂತೆ ಮಾಡಿದೆ.

ಅಂಥ ದಿನಗಳಲ್ಲಿ ಒಮ್ಮೆ ಸಂಸ ಚಿಕಿತ್ಸಾಲಯದ ಎದುರು ನಿಂತುಕೊಂಡು ನನ್ನನ್ನು ಉದ್ದೇಶಿಸಿ ಬಾಯಿಗೆ ಬಂದಂತೆ ಕೂಗಾಡತೊಡಗಿದ. “ರೂಮಿನ ಬೀಗ ಒಡೆದಿದ್ದೀಯಾ, ಐದು ಸಾವಿರ ಕದ್ದಿದ್ದೀಯಾ, ಎಷ್ಟೋ ಕೊಬ್ಬು ನಿನಗೆ. ನನ್ನ ಬಿಲ್ಡಿಂಗಲ್ಲಿ ಕೂತಿದ್ದೀಯ. ನನ್ನ ಜಾಗ ಇದು. ಎದ್ದು ಬಾರೋ ಹೊರಗೆ” ಇತ್ಯಾದಿ.

ಕಿಟಿಕಿಯಿಂದಲೇ ನೋಡಿದೆ. ಸುಮಾರು 60 ವರ್ಷದಷ್ಟು ವಯಸ್ಸಾಗಿದ್ದ ಸಂಸ ನೀಟಾಗಿ ಬಟ್ಟೆ ಧರಿಸಿದ್ದ. ಪಂಚೆ ಶರ್ಟು ಟವಲ್ಲು ಎಲ್ಲ ಶುಭ್ರವಾಗಿದ್ದವು. ಹೊರಗೆ ಹೋದರೆ ಆತ ಕೈ ಮಿಲಾಯಿಸಲಿಕ್ಕಿಲ್ಲ ಎಂಬುದು ನನಗೆ ಖಾತ್ರಿಯಾಯಿತು. ಹೊರಗೆಲ್ಲಾದರೂ ಸಿಕ್ಕರೆ ನಮಸ್ಕರಿಸಿ ಮಾತಾಡಿಸುವಂತಿಲ್ಲ. ಅವನ ಜೊತೆಗೆ ಮಂದಿ ಮನುಷ್ಯರು ಒಬ್ಬರೂ ಇರಲಿಲ್ಲ. ನನ್ನ ಜೊತೆ ಚಿಕಿತ್ಸಾಲಯದ ಒಳಗಿದ್ದವರು “ಸುಮ್ನೆ ಇದ್ಬಿಡಿ ಸಾರ್. ಸ್ವಲ್ಪ ಹೊತ್ತು ಕೂಗಾಡಿ ಹೋಗ್ತಾನೆ.” ಅಂತ ಹೇಳ್ತನೇ ಇದ್ರು. ಸಂಸ ಐದು ನಿಮಿಷ ಒಬ್ಬನೇ ಕೂಗಾಡಿ ಹೊರಟು ಹೋದ.

ಇತ್ತ ತಂಡಗದಲ್ಲಿ ಅನೇಕ ಜನರು ಶಾಸಕರ ಬಳಿ ಹೋಗಿ ನನ್ನ ಪರವಾಗಿ ಮಾತನಾಡಿ ವಾಪಸು ವರ್ಗ ಮಾಡಿಸಲು ಒತ್ತಾಯಿಸತೊಡಗಿದರಂತೆ. ಆದರೆ ಅಷ್ಟು ಹೊತ್ತಿಗೆ ಸಾಮಾನ್ಯ ವರ್ಗಾವಣೆಯ ಸಮಯ ಮೀರಿ ಹೋಗಿತ್ತು. ವರ್ಗಾವಣೆಗೆ ಮುಖ್ಯಮಂತ್ರಿಗಳೇ ಒಪ್ಪಿಗೆ ಕೊಡಬೇಕಾಗಿತ್ತು. ಜನರ ಒತ್ತಡ ಎಷ್ಟಿತ್ತೆಂದರೆ ಶಾಸಕರು ಮುಖ್ಯಮಂತ್ರಿಗಳ ಒಪ್ಪಿಗೆ ದೊರಕಿಸಿಕೊಂಡು ನನ್ನನ್ನು ವಾಪಸು ತಂಡಗಕ್ಕೆ ವರ್ಗ ಮಾಡಿಸಿದ್ದರು.

ಈ ಬೆಳವಣಿಗೆ ಬಗ್ಗೆ ಏನೂ ಗೊತ್ತಿಲ್ಲದ ನನಗೆ ಟಪಾಲಿನಲ್ಲಿ ವರ್ಗಾವಣಾ ಆದೇಶ ಬಂದಾಗ ನಂಬಲಾಗದಂತಾಗಿತ್ತು. ಅಂದು ಸಂಜೆ ಚಿಕಿತ್ಸಾಲಯದಿಂದ ಮನೆಗೆ ಹೊರಡಲು ಸಿದ್ಧನಾಗುತ್ತಿದ್ದೆ. ಯಾರೋ ಒಬ್ಬಾತ ಬಂದು ಸಂಸ ಕರೆಯುತ್ತಿದ್ದಾರೆ. ಮನೆ ಹತ್ರ ಬರಬೇಕಂತೆ ಅಂದ. ಆಸ್ಪತ್ರೆ ಹತ್ತಿರ ಗಲಾಟೆ ಮಾಡಿ ಹೋದ ಮೇಲೆ ಸಂಸನನ್ನು ನಾನು ಮರೆತೇ ಬಿಟ್ಟಿದ್ದೆ. ನೋಡಿ ಬರೋಣ ಎಂದು ಹೋದೆ.

ಮನೆಯ ಮುಂದೆ ದೊಡ್ಡ ಕಾಂಪೌಂಡಿನ ಒಳಗೆ ಸಂಸ ಒಬ್ಬನೇ ಚೇರಲ್ಲಿ ಕೂತಿದ್ದ. ಬೈಕ್ ನಿಲ್ಲಿಸಿ ಹತ್ತಿರ ಹೋದ ಕೂಡಲೇ ಎದ್ದು ಬಂದು ಕೈ ಹಿಡಿದುಕೊಂಡು ಮಾತನಾಡಿಸತೊಡಗಿದ. “ಏನೂ ತಿಳ್ಕೋಬೇಡ ಕಣಪ್ಪ. ಅವತ್ತು ನಾನು ಬೈದದ್ದು ನಿಮ್ಮ ಸಹಾಯಕ ನಿರ್ದೇಶಕರಿಗೆ. ನಿನಗಲ್ಲ. ನಿನಗಲ್ಲವೇ ಅಲ್ಲ” ಇದೇ ಮಾತನ್ನು ನಾಲ್ಕೈದು ಸಲ ಹೇಳಿದ. “ಇರ್ಲಿ ಬಿಡ್ರಿ ಪರವಾಗಿಲ್ಲ” ಅಂದೆ. ಉಪ್ಪಿಟ್ಟು, ಮದ್ದೂರು ವಡೆ ಮಾಡ್ಸಿದ್ರು. ಜೊತೆಗೇ ತಿಂದ್ವಿ. ಕಾಫಿ ಆದ ಮೇಲೆ ಹೊರಟು ನಿಂತೆ. ಬರ್ತಾ ಇರಬೇಕು ಅಂದ. ಆಯ್ತು ಎಂದು ಹೊರಟು ಬಂದೆ.

ಸಂಸನ ಕಣ್ಣು ತುಂಬಿ ಬಂದಿದ್ದವು. ಅದಾದ ಮೂರ್ನಾಲ್ಕು ದಿನಕ್ಕೆ ಚಿಕಿತ್ಸಾಲಯದ ಪ್ರಭಾರದಿಂದ ಬಿಡುಗಡೆ ಹೊಂದಿದೆ. ಮನೆಯ ಸಾಮಾನುಗಳನ್ನು ಕಟ್ಟಿ ನೊಣವಿನಕೆರೆಗೆ ಕುಟುಂಬ ಸಮೇತ ವಾಪಸ್ ಬಂದೆ. ಹಿಂದೆ ನಾನು ಬಾಡಿಗೆಗೆ ಇದ್ದ ಮನೆಯನ್ನು ಮನೆ ಮಾಲೀಕ ಬೇರೆ ಯಾರಿಗೂ ಬಾಡಿಗೆಗೆ ಕೊಟ್ಟಿಲ್ಲದ್ದರಿಂದ ಅದೇ ಮನೆಯಲ್ಲಿ ಮುಂದುವರಿದೆ.

ತಂಡಗಕ್ಕೆ ವಾಪಸ್ ಬಂದ ನಂತರ ಕಂತ್ರಾಟುದಾರನಿಂದಲೇ ಇಷ್ಟೆಲ್ಲಾ ರಾದ್ಧಾಂತವಾದದ್ದು ಎಂಬ ವಿಷಯ ತಿಳಿಯಿತು. ಶಾಸಕರಿಗೆ ತಿಳಿಸಿ ಕಂತ್ರಾಟುದಾರನೇ ವರ್ಗಾವಣೆ ಮಾಡಿಸಿದ್ದ. ಆದರೂ ಆತ “ಯಾವನು ಸಾರ್ ಅವನು, ನಿಮ್ಮನ್ನು ಟ್ರಾನ್ಸ್ ಫರ್ ಮಾಡ್ಸಿದ್ದನಲ್ಲ? ಎಮ್ಮೆಲ್ಲೆಗಾರೂ ತಲೆ ಬೇಡ್ವ. ಒಳ್ಳೇರಿಗೆ ಕಾಲ ಅಲ್ಲಾ ಸಾರ್ ಇದು” ಅಂತ ಸಿಕ್ಕಾಗೆಲ್ಲ ಹೇಳ್ತಿದ್ದ.

ನನ್ನ ಸರ್ವೀಸಲ್ಲಿ ಆದ ಎಲ್ಲಾ ವರ್ಗಾವಣೆಗಳಲ್ಲೂ ನನಗೆ ತಲೆನೋವಾಗುತ್ತಿದ್ದುದು ಸಾವಿರಾರು ಪುಸ್ತಕಗಳನ್ನು ಪ್ಯಾಕ್ ಮಾಡಿ ಜಕಂ ಆಗದ ಹಾಗೆ ಸಾಗಿಸುವುದಾಗಿತ್ತು. ಪುಸ್ತಕಗಳನ್ನು ಬಿಟ್ಟರೆ ನಮ್ಮನೆಯಲ್ಲಿ ಒಂದೆರಡು ತಗಡಿನ ಮಂಚ, ಚೇರು, ಟೇಬಲ್ಲು, ಫ್ರಿಜ್, ಟಿವಿ, ಬೈಕ್ ಇಷ್ಟೇ ಇದ್ದುದು. ನಾನು 2015ರಲ್ಲಿ ಸ್ವಯಂ ನಿವೃತ್ತಿ ಪಡೆದಾದ ಮೇಲೆ ಒಂದು ಸೋಫಾ ಸೆಟ್ ಖರೀದಿಸಿದೆ. ಅಲ್ಲಿಯವರೆಗೆ ನಮಗೂ ಮತ್ತು ನಮ್ಮ ಮನೆಗೆ ಬರುತ್ತಿದ್ದ ಎಲ್ಲರಿಗೂ ಕುಳಿತುಕೊಳ್ಳಲು ತಗಡಿನ, ಪ್ಲಾಸ್ಟಿಕ್ಕಿನ ಕುರ್ಚಿಗಳೇ ಗತಿಯಾಗಿದ್ದವು.

‍ಲೇಖಕರು Avadhi

November 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Dr.Devaraj MB.

    It’s painful for right person, but it’s common in Gov’t set up. Very rediculous. In the name of democracy people play all nonsense. Thanks Dr. BASHEER.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: