ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೇನು ಮಾಡಬೇಕು?

ಕವಿತಾ ವಿರೂಪಾಕ್ಷ

**

ಹುಟ್ಟಿದಾಗಲೇ

ಹೆಣ್ಣೆಂದು ತಿಳಿದು

ಸಣ್ಣದಾದ ಮುಖಗಳು

ನೋಡಿಯೇ

ಸುಮ್ಮನಾದಳೇನೋ

ಇವಳು

ಬೆಳೆದಂತೆಲ್ಲಾ

ಸಂಕೋಲೆಗಳೇ!

ನಿಲ್ಲಬೇಡ, ನಗಬೇಡ,

ಹೊರ ಹೋಗಬೇಡ,

ತಲೆ ಎತ್ತಬೇಡ

ಮಾತಾಡಬೇಡ

ಎದುರಾಡಬೇಡ!!

ಮತ್ತೇನು ಮಾಡಬೇಕು?

ಅಹಲ್ಯೆಯಂತೆ

ಕಲ್ಲಾಗಬೇಕೆ..?

ಊಹೂಂ

ಅವರೂ, ಇವರೂ, ಯಾರ್ಯಾರೋ

ಸಮಾಜವಿತ್ತ ಶಾಪಕ್ಕೆ

ಏನಾಗಬೇಕೋ

ತಿಳಿಯಲಿಲ್ಲ ಅವಳಿಗೆ.!

ಅವಳದೇ ಕೋಣೆಯ

ನಾಲ್ಕು ಗೋಡೆಗಳಿಗೇನಾದರೂ

ಬಾಯಿದ್ದಿದ್ದರೆ ಗೊತ್ತಾಗುತ್ತಿತ್ತು..

ಹಾಡಾಗಿರುವ ಮಾತುಗಳು

ಪದವಾಗಿರುವ ಬವಣೆಗಳು

ಆಗಸವನ್ನೇ ಮೀರಿ ಹಾರುವ

ಬಯಕೆಯ ಕನಸುಗಳು

ಮರಿ ಹಾಕದೇ ಉಳಿದಿರುವುದು..

ಅಪ್ಪನದೋ, ಅಣ್ಣನದೋ

ಜೊತೆ ಜೊತೆಯೇ ಹೆಜ್ಜೆ ಹಾಕುವ

ಸಂಗಾತಿಯದೋ..

ಪ್ರೋತ್ಸಾಹದ ಬೆಚ್ಚನೆಯ

ಕಾವು ಸಿಗಬೇಕಷ್ಟೇ..

ಮೊಟ್ಟೆಯೊಡೆದು

ಮರಿ ಹೊರಬರುವಂತೆ

ಕಾದು ಕುಳಿತ ಕನಸೆಲ್ಲವೂ

ರೆಕ್ಕೆ ಬಿಚ್ಚಿ ಹಾರುತ್ತವೆ ನಭಕ್ಕೆ

ಪುರ್ರೆಂದು..!

ಪ್ಲೀಸ್

ಅವಳೊಳಗಿನ ಕನಸುಗಳೂ

ಮರಿ ಹಾಕಲಿ ಬಿಡಿ ಸ್ವಾಮಿ..!

‍ಲೇಖಕರು Admin MM

29 April, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading