ಬಟ್ಟೆ ಬಿಡಿಸಿದ ಕಲೆ
– ರಶ್ಮಿ ಕಾಸರಗೋಡು
ಕಲ್ಲಮೇಲೆ ಚೆನ್ನಾಗಿ ತಿಕ್ಕಿ
ಆಮೇಲೆ ಎತ್ತಿ…ಶ್ಶೋ…
ರಭಸದಿಂದ ಒಗೆಯುವಾಗ
ಅದು ಬಟ್ಟೆಯಲ್ಲ!
ನನ್ನೊಳಗಿನ ಸಿಟ್ಟು
ನೊರೆಯಂತಹ ಭಾವನೆಗಳು
ಒಮ್ಮಿಂದೊಮ್ಮೆಲೆ ತೇಲಿ, ಹಾರಾಡಿ
ಬೆಳಕ ಪ್ರತಿಫಲಿಸಿ ಗಾಳಿಗೆ ಗುದ್ದಿ
ಒಡೆದು ಹೋಗುವಾಗ
ಸದ್ದು ಕೇಳುವುದೇ ಇಲ್ಲ
ನೆತ್ತಿ ಮೇಲೆ ಉರಿವ ಸೂರ್ಯ
ಹಣೆಯಲ್ಲಿ ಬೆವರು ಹನಿಗಳ
ಪೋಣಿಸಿ ಮೆಲ್ಲನೆ ಮರೆಯಾಗುವಾಗ
ತೋರ್ಬೆರಳಲ್ಲಿ ಅದ ನೂಕಿ
ಮುಷ್ಠಿ ಬಿಗಿದು ಮತ್ತೆ ಲೆಕ್ಕ ಶುರು

ಹೇಳಲಾಗದ ನೋವುಗಳು
ಹೇಳಿ ನಕ್ಕ ಗಳಿಗೆಗಳು
ಮುಖಾಮುಖಿಯಾದಾಗ
ಜಾರಿ ಬೀಳುತ್ತದೆ…ಮನಸ್ಸು
ಅಲ್ಲ ತುಂಡು ಸೋಪು
ನೀರಲ್ಲಿ ಪಟಪಟನೆ ಜಾಲಾಡಿ
ಬಿಕ್ಕಳಿಕೆಯ ಸದ್ದು, ಕಣ್ಣೀರ ಹನಿಯನ್ನು
ಹಿಂಡಿ ಕೊಡವಿದಾಗ
ಅರಳು ಮಲ್ಲಿಗೆಯ ಘಮ
ಒದ್ದೆ ಬಟ್ಟೆ ಇನ್ನಷ್ಟು ಭಾರ!
ಒಗೆದ ಬಟ್ಟೆಯನು ದಾರದಲಿ ನೇತು
ತುರುಬಿನ ಸೊನ್ನೆ ಬಿಚ್ಚಿ ಒಂದಾಗುವ ವೇಳೆ
ದೇಹವ ತಿದ್ದಿ ತೀಡಿ ಬಣ್ಣ ಹಚ್ಚುವ
ದೀರ್ಘ ಮೌನದಲಿ…ಮಾತಾಗಿ
ಇಳಿದು ಅರಳಬೇಕಿದೆ ಒಡಲು
ಇಶ್ಶೀ…ಮತ್ತೆ ಬಟ್ಟೆ ಮೇಲೆ
ಕುಂಕುಮದ ಕಲೆಯಾಗಿದೆ






wonderfull
nimma kavite odisikollutale jarikollutade. adaru nepaige uliyodu helalaagada nenapugalu ,heli nakka galigegalu mukaamukiyadaga jaribeeluva manssu alla tundu sopu, intaha sallugale nimma padyavannu odisikollutave kaavyada saalugalaagi.
chandada kavite..
ಕವಿತೆ ಚೆನ್ನಾಗಿದೆ ರಶ್ಮಿ .ಅಭಿವ್ಯಕ್ತಿಗೆ ‘ಸ್ತ್ರೀಭಾಷೆ’ಯನ್ನು ರೂಪಿಸಿಕೊಳ್ಳುತ್ತ ಸಾಗುವ ನಿಮ್ಮ ಕಾವ್ಯದಾರಿಗೆ ಶುಭಹಾರೈಕೆಗಳು.
ವಾಹ್ ರಶ್ಮಿ, ಎಂಥ ಸೊಗಸಾದ ಪದ್ಯವಮ್ಮ ಇದು, ಬಹಳ ಬಹಳ ಇಷ್ಟ ಆಯ್ತು.
ಕವನ ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು..
ಲಲಿತಾ ಮೇಡಂ …ಖುಷಿಯಾಯ್ತು…ನಿಮ್ಮ ಪ್ರತಿಕ್ರಿಯೆ ನೋಡಿ..
ಮಹೇಶ್ವರಿ ಮೇಡಂ…ಎಲ್ಲ ನಿಮ್ಮ ಆಶೀರ್ವಾದ…
Powerful feeling in solitude