ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ನಾಲ್ವರಿಂದ ನಿರಂತರ ಅತ್ಯಾಚಾರ. ಎಷ್ಟು ಹೊತ್ತು? ಎಷ್ಟು ಬಾರಿ? ಯಾವುದೂ ನನಗೆ ನೆನಪಿಲ್ಲ..

jagadish koppa reading room
ಜಗದೀಶ್ ಕೊಪ್ಪ 
ಮುಖ್ತರ್ ಮಾಯಿ ಸಿದ್ಧವಾಗು ಹೊರಡೋಣ ಎನ್ನುವ  ಅಪ್ಪನ ಮಾತು ಕಿವಿಗೆ ಬೀಳುತ್ತಿದ್ದಂತೆ ಹೊರಡಲು ಸಿದ್ಧವಾದೆ. ಆ ರಾತ್ರಿ ಮನೆಯಿಂದ  ನಾನಿಡುವ ಹೆಜ್ಜೆಗಳ ಪಯಣ ನನ್ನನ್ನು ಎಲ್ಲಿಗೆ ಕೊಂಡೊಯ್ಯಬಹುದು ಎಂಬ ಕಲ್ಪನೆ ನನಗಿರಲಿಲ್ಲ. ನನ್ನ ಪುಟ್ಟ ಗುಡಿಸಲಿನಂತಹ ಮನೆಯಿಂದ ಶ್ರೀಮಂತ ಜಮೀನ್ದಾರನ mukhtar mai cryವಾಡೆಯಂತಹ ಬಂಗಲೆಯಲ್ಲಿರುವ ಜನ ಅಥವಾ ಅವನ ಸೇವಕರಿಂದ ನನ್ನ ಮೇಲೆ ಏನಾದರೂ ನಡೆಯುತ್ತದೆ ಎಂಬ ಭಯವೂ ಇರಲಿಲ್ಲ. ನನ್ನ ಕಿರಿಯ ಸಹೋದರ ಶಕೂರ್ ಪರವಾಗಿ ನಾನು ಯಾಚಿಸುವ ಕ್ಷಮೆಯನ್ನು ಅವರು ಮನ್ನಿಸಿದರೆ, ಈ ಪಯಣ ಅಲ್ಲಿಗೆ ಕೊನೆಯಾಗುತ್ತದೆ. ಇಲ್ಲದಿದ್ದರೆ, ಮುಂದಿನ ದಾರಿ? ಈ ಕುರಿತು ಯಾವುದೇ ಕಲ್ಪನೆಯಿರಲಿಲ್ಲ.  ಆದರೆ, ಕುರಾನ್ ಧರ್ಮ ಗ್ರಂಥವು ನನ್ನನ್ನು ರಕ್ಷಿಸುತ್ತದೆ ಎಂದು ಆತ್ಮವಿಶ್ವಾಸವಿತ್ತು. ಆ ಕಾರಣಕ್ಕಾಗಿ ಕುರಾನ್ ಧರ್ಮ ಗ್ರಂಥವನ್ನು ಕೈಯಲ್ಲಿಡಿದು, ಬಿಗಿಯಾಗಿ ಎದೆಗೆ ಅಪ್ಪಿಕೊಂಡು ಮನೆಯಿಂದ ಹೊರಕ್ಕೆ ಹೆಜ್ಜೆ ಇಟ್ಟೆ.
ನಾನು ಕುರಾನ್ ಶ್ಲೋಕಗಳನ್ನು ಕಂಠಪಾಠ ಮಾಡಿ ಅವುಗಳನ್ನು ಹಳ್ಳಿಯ ಮಕ್ಕಳಿಗೆ ಬೋಧಿಸುತ್ತಿದ್ದೆ.  ಈ ಕಾರಣಕ್ಕಾಗಿ ಅಪ್ಪ  ನನ್ನನ್ನು ಜಮೀನ್ದಾರನ ಮನೆಗೆ ಕರೆದೊಯ್ಯಲು ಒಪ್ಪಿಗೆ ಸೂಚಿಸಿದ್ದ. ಆ ಘಟನೆ ನಡೆದ ದಿನ ನನ್ನ ವಯಸ್ಸು 28 ವರ್ಷ. ನಾನು ಬಾಲ್ಯದಿಂದಲೂ ಅನಕ್ಷರಸ್ಥೆ. ನನ್ನ ಹಳ್ಳಿಯಲ್ಲಿ ಹೆಣ್ಣು ಮಕ್ಕಳಿಗೆ ಶಾಲೆ ಇಲ್ಲದಿರುವ ಕಾರಣ ನನಗೆ ಓದು, ಬರಹ ಏನೇನೂ ಗೊತ್ತಿರಲಿಲ್ಲ. ಹದಿನೆಂಟನೆಯ ವಯಸ್ಸಿಗೆ ವಿವಾಹವಾಗಿ, ಮರು ವರ್ಷ ವಿಚ್ಛೇಧಿತಳಾಗಿ ಅಪ್ಪನ ಮನೆ ಸೇರಿದ್ದೆ. ನನ್ನೂರಿನ ಮೌಲ್ವಿಗಳ ಮೂಲಕ ಕುರಾನ್ ಗ್ರಂಥವನ್ನು ಸಂಪೂರ್ಣವಾಗಿ ಬಾಯಿ ಪಾಠ ಮಾಡಿದ್ದೆ. ಬೆಳಿಗ್ಗೆ ಸಂಜೆಯವರೆಗೆ ಅಪ್ಪನ ಹೊಲದಲ್ಲಿ ದುಡಿದ ನಂತರ ಸಂಜೆ ವೇಳೆ ಊರಿನ ಹೆಣ್ಣು ಮಕ್ಕಳಿಗೆ ಸೇವಾರ್ಥದ ರೂಪದಲ್ಲಿ ಕುರಾನ್ ಪಾಠ ಹೇಳಿಕೊಡುತ್ತಿದ್ದೆ. ಹೀಗಾಗಿ ನನ್ನೂರಿನ ಬಹುತೇಕ ಮಂದಿಗೆ ನನ್ನ ಕುರಿತು ಅಪಾರ ಗೌರವವಿತ್ತು. ಯಾರೊಬ್ಬರೂ  ನನ್ನನ್ನು ಕೀಳಾಗಿ ಕಾಣಲಿಲ್ಲ ಅಥವಾ ಕೆಟ್ಟದಾಗಿ ಮಾತನಾಡಲಿಲ್ಲ. ಬಡತನದ ನಡುವೆ ಅಂತಹದ್ದೊಂದು ಗೌರವಯುತ ಬದುಕನ್ನು ನಾನು ಬಾಳಿದ್ದೆ.
Mooka hakki Coverರಸ್ತೆಯಲ್ಲಿ ಹರಿಯುತ್ತಿದ್ದ ಕೊಳಚೆ ನೀರನ್ನು ದಾಟುತ್ತಾ, ಅಪ್ಪ ಹಾಗೂ ಚಿಕ್ಕಪ್ಪಂದಿರಾದ ಹಾಜಿ ಅಲಾಫ್, ಗುಲಾಂ ಬಾಯಿ  ಮತ್ತು ಮೌಲ್ವಿ ಅಬ್ದುಲ್ ರಜಾಕ್ ಸೇರಿದಂತೆ ಊರಿನ ಇತರೆ ಜಾತಿಯ ಅಪ್ಪನ ಗೆಳೆಯರೊಂದಿಗೆ ಜಮೀನ್ದಾರನ ಮನೆಯತ್ತ ಹೆಜ್ಜೆ ಹಾಕಿದ್ದೆ.  ಅವರೆಲ್ಲರ ಮನದೊಳಗೆೆ ಒಂದು ರೀತಿಯ ಭಯ ಆವರಿಸಿತ್ತು. ಈ ಕಾರಣಕ್ಕಾಗಿ ನಮ್ಮೊಂದಿಗೆ ಬರಲು ಚಿಕ್ಕಪ್ಪ ಹಿಂದೆ ಮುಂದೆ ನೋಡಿದ್ದ. ಆದರೆ, ನಾನು  ಮಾತ್ರ ಎದೆಯೊಳಗೆ ಯಾವುದೇ ರೀತಿಯ ಕಲ್ಮಶವಿಲ್ಲದ ಮಗುವಿನಂತೆ ಆತ್ಮ ವಿಶ್ವಾಸದಲ್ಲಿ ಹೆಜ್ಜೆ ಹಾಕುತ್ತಿದ್ದೆ. ನಾನು ವೈಯಕ್ತಿವಾಗಿ ಯಾವ ತಪ್ಪನ್ನೂ  ಎಸಗಿರಲಿಲ್ಲ. ನನಗೆ ದೇವರ ಮೇಲೆ ಸಂಪೂರ್ಣ ನಂಬಿಕೆಯಿತ್ತು. ಅತ್ಯಂತ ಬಡತನದ ಕುಟುಂಬದಲ್ಲಿ ಬೆಳೆದ ನಾನು ಮನೆಯಲ್ಲಿನ ಎಲ್ಲಾ ರೀತಿಯ ಕಷ್ಟ ಸುಖಗಳಿಗೆ ಸಾಕ್ಷಿಯಾಗಿದ್ದೆ. ನನ್ನ ಸಹೋದರನ ಕೃತ್ಯದಿಂದಾಗಿ ಕುಟುಂಬದ ಸದಸ್ಯರು ಅತ್ಯಂತ ಅಪಾಯದ ಅಂಚಿನಲ್ಲಿದ್ದುಕೊಂಡು ಆತಂಕ ಪಡುತ್ತಿರುವಾಗ, ನಾನು ಹುಟ್ಟಿ ಬೆಳೆದ ಮನೆಗೆ ನನ್ನಿಂದಾಗಬಹುದಾದ ಸಹಾಯವನ್ನು ಮಾಡುವುದು ನನ್ನ ನೈತಿಕ ಜವಾಬ್ದಾರಿಯಾಗಿತ್ತು.
ನನ್ನ ಸಹೋದರನ ಮೇಲೆ ಆರೋಪ ಹೊರಿಸಿರುವ ಜಮೀನ್ದಾರನ ಮಗಳು ಸಲ್ಮಾ ಕುರಿತು ನನ್ನೂರು ಮೀರ್ ವಾಲ ಗ್ರಾಮದಲ್ಲಿ ಯಾರಿಗೂ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅತ್ಯಂತ ನಿರ್ಭಿಡೆಯ ವ್ಯಕ್ತಿತ್ವ ಹಾಗೂ ಸಡಿಲ ನಾಲಿಗೆಯ ಆಕೆ ತಾನು ಇಷ್ಟ ಪಟ್ಟಂತೆ ಊರೊಳಗೆ ಮತ್ತು  ಊರಾಚೆ ತಿರುಗುತ್ತಿದ್ದಳು. ಇಂತಹ ಒಂದು ಅವಕಾಶವನ್ನು ಬಳಸಿಕೊಂಡ ಜಮೀನ್ದಾರನ ಕುಟುಂಬದವರು ನನ್ನ ತಮ್ಮ ಅವರ ಹೆಣ್ಣು ಮಗಳನ್ನು ಮಾತನಾಡಿಸಿದ ಎಂಬ ಏಕೈಕ ಕಾರಣಕ್ಕಾಗಿ ನಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸಿದ್ದರು.
2002 ಜೂನ್ 22 ರ ಆ ಕರಾಳ ರಾತ್ರಿಯ ನೆನಪುಗಳು ಮನಸ್ಸಿನೊಳಗೆ ಇಂದಿಗೂ ಅಗ್ನಿ ಜ್ವಾಲೆಯ ಹಾಗೆ ಉರಿಯುತ್ತಿವೆ. ಆ ದಿನ ರಾತ್ರಿ ಪಕ್ಷಿಗಳೆಲ್ಲಾ ತಮ್ಮ ತಮ್ಮ ಗೂಡುಗಳನ್ನು ಸೇರಿಕೊಂಡು ಮೌನಕ್ಕೆ ಶರಣಾಗಿದ್ದವು. ದನಕರುಗಳು ಮತ್ತು ಕುರಿ, ಮೇಕೆಗಳು ಮೆಲಕು ಹಾಕುತ್ತಾ ನಮಗೂ ಈ ವರ್ತಮಾನದ ಜಗತ್ತಿಗೂ ಏನೇನೂ ಸಂಬಂಧವಿಲ್ಲದಂತೆ ಕೊಟ್ಟಿಗೆಗಳಲ್ಲಿ  ಕಟ್ಟಿ ಹಾಕಿದ್ದ ಗೂಟಕ್ಕೆ ಒರಗಿ ತೂಕಡಿಸುತ್ತಿದ್ದವು. ಊರಿನ ನಡುಬೀದಿಯಲ್ಲಿ ಮಾತ್ರ ನಾಯಿಗಳು ಏನೋ ದುರಂತ ನಡೆಯಲಿದೆ  ಎಂಬ ಮುನ್ಸೂಚನೆ ನೀಡುವಂತೆ ಆಕಾಶದತ್ತ ಮುಖಮಾಡಿ ಘೀಳಿಡುತ್ತಿದ್ದವು. ಆ ರಾತ್ರಿಯ ನೀರವತೆಯ ಮೌನ ನಿಧಾನವಾಗಿ ನನ್ನ ಆತ್ಮ ವಿಶ್ವಾಸವನ್ನು ಅಲುಗಾಡಿಸುವಂತಿತ್ತು. ಭಯದಿಂದ ಜಮೀನ್ದಾರನ ಮನೆಯ ಅಂಗಳಕ್ಕೆ ನಾನೂ ಸೇರಿದಂತೆ ಅಪ್ಪ, ಚಿಕ್ಕಪ್ಪಂದಿರು, ಮುಲ್ಲಾ ಎಲ್ಲರೂ ಕಾಲಿಟ್ಟವು. ಮನೆಯ ಗೇಟ್ ನಲ್ಲಿ ಒಂದೇ ಒಂದು ವಿದ್ಯುತ್ ದೀಪವು ಉರಿಯುತ್ತಿತ್ತು.
mukhtar mai book coverಮನೆಯ ಅಂಗಳದಲ್ಲಿ ನೂರಾರು ಮಂದಿ ಗ್ರಾಮಸ್ಥರು ನೆರದಿದ್ದರು. ಅವರಲ್ಲಿ ಬಹುತೇಕ ಮಂದಿ ಮಸ್ತೊಯ್ ಜನಾಂಗಕ್ಕೆ ಸೇರಿದವರಾಗಿದ್ದರು. ಜಿರ್ಗ ಎಂಬ ಹೆಸರಿನಲ್ಲಿ ನ್ಯಾಯಪಂಚಾಯಿತಿಗಳನ್ನು ನಡೆಸುವ ಮುಖಂಡರು ಸಹ ಸೇರಿದ್ದರು. ಗ್ರಾಮಸ್ಥರು ಮತ್ತು ಪಂಚಾಯಿತಿ ನಡೆಸುವ ಸದಸ್ಯರ ನಡುವೆ ಸಮನ್ವಯಕಾರನಂತೆ ಕಾರ್ಯ ನಿರ್ವಹಿಸುತ್ತಿದ್ದ ಮುಲ್ಲಾ ಅಬ್ದುಲ್ ರಜಾಕ್ ಆ ದಿನ ಸಂಪೂರ್ಣ ಅಸಹಾಯಕರಾಗಿದ್ದರು. ಗುಂಪಿನಲ್ಲಿ ಒಬ್ಬಾತ ಮಾತ್ರ ಕೋಪದಿಂದ ಕುದಿಯುತ್ತಾ ಧ್ವನಿಯೆತ್ತರಿಸಿ ಮಾತನಾಡುತ್ತಿದ್ದ. ನಮ್ಮನ್ನು ನೋಡುತ್ತಿದ್ದಂತೆ ನನ್ನೆದುರು ಬಂದು ನಿಂತ. ನಿಧಾನವಾಗಿ ತಲೆಯೆತ್ತಿ ನೋಡಿದೆ. ಫೈಜಾ ಎಂದು ಕರೆಯುವ ಫಯಾಜ್ ಮಹಮ್ಮದ್ ನಿಂತಿದ್ದ.  ಅವನ ಜೊತೆ ಅಬ್ದುಲ್ ಖಾಲಿಕ್, ಗುಲಾಂ ಫರಿದ್, ಅಲ್ಲಾದಿತ, ಮತ್ತು ಮಹಮ್ಮದ್ ಫಯಾಜ್ ಎಂಬುವರು ಬಂದೂಕುಧಾರಿಗಳಾಗಿ ಆತನ  ಹಿಂದೆ ನಿಂತಿದ್ದರು. ಅಧೀರಳಾಗಿ ನಿಂತಿದ್ದ ನನ್ನ  ಬೆನ್ನ ಹಿಂದೆ  ಅಪ್ಪ ಮತ್ತು ಚಿಕ್ಕಪ್ಪಂದಿರು ಊರಿನ ಗ್ರಾಮಸ್ಥರ ಎದುರು ತಲೆ ತಗ್ಗಿಸಿ ನಿಂತಿದ್ದರು.
ನಾನು ಮೈ ತುಂಬಾ ಶಾಲನ್ನು ಹೊದ್ದಿದ್ದೆ. ನನಗೆ ನೆನಪಿರುವಂತೆ ಆ ರಾತ್ರಿ ಆ ಕ್ಷಣದಲ್ಲಿ ಕುರಾನಿನ ಶ್ಲೋಕವೊಂದನ್ನು ಮನಸ್ಸಿನಲ್ಲಿ ಪಠಿಸುತ್ತಿದ್ದೆ. ಕೈ ಹಿಡಿದಿದ್ದ ಧರ್ಮ ಗ್ರಂಥವನ್ನು ಮತ್ತಷ್ಟು ಬಿಗಿಯಾಗಿ ಎದೆಗೆ ಅಪ್ಪಿಕೊಂಡು ಕುರಾನ್ ಪಠಿಸುತ್ತಿದ್ದೆ. ಕುರಾನ್ ಗ್ರಂಥದ ಶ್ಲೋಕಗಳನ್ನು ನಾನು ಓದಿ ತಿಳಿದವಳಲ್ಲ. ಬಾಲ್ಯದಿಂದಲೂ ನನ್ನ ಕಿವಿಯ ಮೇಲೆ ಬಿದ್ದ ಅವುಗಳನ್ನು ಕಂಠ ಪಾಠ ಮಾಡಿದ್ದೆ. ಮಸ್ತೋಯ್ ಜನಾಂಗದ ದಬ್ಬಾಳಿಕೆಯಲ್ಲಿ ಅಥವಾ ದಾಳಿಯಲ್ಲಿ ಅದು ನನ್ನನ್ನು ಪವಿತ್ರಳಾಗಿ ಇರಿಸುತ್ತದೆ ಎಂಬ ನಂಬಿಕೆಯಿತ್ತು. ನಾನು ಹುಟ್ಟಿ ಬೆಳೆದ ನೆಲ ಪಂಜಾಬ್ ಪ್ರಾಂತ್ಯವೊಂದರ ಅಂಗವಾಗಿತ್ತು. ಪಂಜಾಬ್ ನೆಲವನ್ನು ಪಂಚನದಿಗಳಿಂದ ಪಾವನವಾದ ಭೂಮಿ ಎಂದು ಕರೆಯಲಾಗುತ್ತದೆ.
ಅಬ್ದುಲ್ ಖಾಲಿಕ್ ಎಂಬಾತ ತನ್ನ ಪಿಸ್ತೂಲನ್ನು ನನ್ನ ಹಣೆಗೆ ಹಿಡಿಯುತ್ತಾ ಹತ್ತಿರ ಬಂದ. ಸೇಡು ತೀರಿಸಿಕೊಳ್ಳುವ ತವಕದಲ್ಲಿ ಉನ್ಮತ್ತನಾಗಿದ್ದ ಅವನ ಕಣ್ಣುಗಳಲ್ಲಿ ಸೇಡಿನ ಜ್ವಾಲೆ ಉರಿಯುತ್ತಿದ್ದವು. ನಾನು ಆ ಕ್ಷಣಕ್ಕೆ ಅಸಹಾಯಕಳಾಗಿದ್ದೆ. ನಾನು ಹುಟ್ಟಿದ ಗುಜಾರ್ ಸಮುದಾಯ ನನ್ನೂರಿನಲ್ಲಿ ಹಿಂದುಳಿದ ಜಾತಿಗೆ ಸೇರಿದ್ದಾಗಿತ್ತು. ಬೇಸಾಯವನ್ನು ನಂಬಿ ಶತ ಶತಮಾನಗಳ ಕಾಲ ಬದುಕಿದ್ದರೂ ಸಹ ಮೇಲ್ವರ್ಗದ ಜನರ ತೂಗು ಕತ್ತಿಯ ಕೆಳೆಗೆ ನಮ್ಮ ಸಮುದಾಯದ ಬದುಕು-ಭವಿಷ್ಯ ಇವೆಲ್ಲವೂ ನಿರ್ಧಾರವಾಗುತ್ತಿದ್ದವು.
ನಾನು ಸನ್ನಿವೇಶವನ್ನು ಎದುರಿಸಲು ಸನ್ನದ್ಧಳಾಗಿ ತಲೆ ಎತ್ತಿ ಫೈಜಾನ ಮುಖ ನೋಡುತ್ತಿದ್ದಂತೆ, ಆತ ತನ್ನ ತಲೆಯನ್ನು ಅಲುಗಾಡಿಸಿ ನೇರವಾಗಿ ನನ್ನನ್ನು ನೋಡಲು ಆರಂಭಿಸಿದ. ಕೆಲ ಹೊತ್ತು ಮೌನ ಆವರಿಸಿತು. ನಾನು ಮನದೊಳಗೆ ದೇವರನ್ನು ಪ್ರಾರ್ಥಿಸುತ್ತಿದ್ದೆ. ಇದ್ದಕ್ಕಿದ್ದಂತೆ ಮುಂಗಾರಿನ ಮಳೆ ಮತ್ತು ಸಿಡಿಲು ಒಮ್ಮೆಲೆ ಅಪ್ಪಳಿಸಿದಂತೆ ಆಯಿತು.
ನಾನು ಆತನ ಕಣ್ಣುಗಳನ್ನೇ ದಿಟ್ಟಿಸುತ್ತಿದ್ದೆ. ಮಸ್ತೋಯ್ ಸಮುದಾಯದ ತೀರ್ಪಿನಂತೆ (ಜಿರ್ಗ) ಅವನು ಇಡೀ ಊರಿನ ಗ್ರಾಮಸ್ಥರ ಎದುರು ಗುಜಾರ್ ಬುಡಕಟ್ಟಿನ ಹೆಣ್ಣು ಮಗಳಾದ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ. ಅಲ್ಲಿನ ಜನತೆ ನನ್ನ ಸಹೋದರ ಶಕೂರ್, ಅವನ ಪುತ್ರಿ ಸಲ್ಮಾಳನ್ನು ಮಾತನಾಡಿಸಿದ ತಪ್ಪಿಗಾಗಿ ಬಹಿರಂಗವಾಗಿ ನನ್ನ ಮೇಲೆ ಅತ್ಯಾಚಾರವೆಸಗಲು ತೀರ್ಪು ನೀಡಿತ್ತು. ಆದರೆ, ಈ ನಿರ್ಧಾರವನ್ನು ಅವರು ನಮ್ಮನ್ನು ಮನೆಯಿಂದ ಕರೆ ತರುವಾಗ ಮುಚ್ಚಿ ಹಾಕಿದ್ದರು.
mukhtar mai black boardಅಬ್ದುಲ್ ಖಾಲಿಕ್ ತನ್ನ ರಕ್ಷಣಾ ಸಿಬ್ಬಂದಿಯತ್ತ ತಿರುಗಿ ನನ್ನನ್ನು ಹಿಡಿದುಕೊಳ್ಳುವಂತೆ ಕಣ್ಸನ್ನೆ ಮಾಡಿದ. ಆದಷ್ಟು ಬೇಗ ತೀರ್ಪನ್ನು ಜಾರಿಗೆ ತರುವ ದಾವಂತ ಅವರೆಲ್ಲರಲ್ಲೂ ಎದ್ದು ಕಾಣುತ್ತಿತ್ತು. ಅಬ್ದುಲ್ ಖಾಲಿಕ್ ನನ್ನನ್ನು ಹಿಂಬದಿಯಿಂದ ತಬ್ಬಿ ಹಿಡಿದುಕೊಂಡ. ನಂತರ ಗುಲಾಂ ಫರೀದ್, ಅಲ್ಲಾದಿತ, ಮಹಮ್ಮದ್ ಫಯಾಜ್ ನನ್ನ ಮೇಲೆ ಬಹಿರಂಗವಾಗಿ ಸರದಿಯಂತೆ ಅತ್ಯಾಚಾರವೆಸಗಿದರು.
ನಾನು ಆ ಕ್ಷಣದಲ್ಲಿ ಎಲ್ಲವನ್ನೂ ಅನಿರೀಕ್ಷಿತ ಆಘಾತಗಳೊಂದಿಗೆ ಅನುಭವಿಸಿದೆ. ಜರ್ಜರಿತವಾದ ದೇಹ ನೆಲದ ಮೇಲೆ ಕುಸಿಯುತ್ತಿದ್ದಂತೆ  ಕಾಲುಗಳಾಗಲಿ ಅಥವಾ  ದೇಹವಾಗಲಿ ನನ್ನದಾಗಿರಲಿಲ್ಲ. ನನ್ನ ಸ್ಥಿತಿ ಕಟುಕನೊಬ್ಬ ಕಸಾಯಿಖಾನೆಯಲ್ಲಿ  ಗೂಟಕ್ಕೆ ಕಟ್ಟಿ ಹಾಕಿದ ಮೇಕೆಯಂತಾಗಿತ್ತು. ಅವರು ನನ್ನ ಉಡುಪು, ಶಾಲು, ಎಲ್ಲವನ್ನು ಕಳಚಿ ಬಿಸಾಡಿ, ನನ್ನ ತಲೆಗೂದಲನ್ನು ಹಿಡಿದು ಅತ್ತಿತ್ತ ನೀರಿನಲ್ಲಿ ಬಟ್ಟೆಗಳನ್ನು ಜಾಲಾಡಿಸುವಂತೆ ನನ್ನನ್ನು ನೆಲದ ಮೇಲೆ ಜಾಲಾಡಿಸುತ್ತಿದ್ದರು.
ಕುರಾನ್ ಧರ್ಮಗ್ರಂಥ ಹೆಸರಿನಲ್ಲಾದರೂ ನನ್ನನ್ನು ಕ್ಷಮಿಸಿಬಿಡಿ, ಬಿಡುಗಡೆ ಮಾಡಿ ಎಂದು ಅಂಗಲಾಚಿ ಬೇಡಿಕೊಂಡೆ. ನನ್ನ ನಿವೇದನೆ ಅಲ್ಲಿ ಅರಣ್ಯರೋಧನವಾಯಿತು. ನನ್ನನ್ನು ಜೂನ್ 22 ರಾತ್ರಿಯಿಂದ 23 ರ ರಾತ್ರಿಯವರೆಗೂ ಅಲ್ಲಿಯೆ ಕೂಡಿಹಾಕಿದರು. 23ರ ಬೆಳಿಗ್ಗೆ ಬೆಳಕು ಹರಿಯುತ್ತಿದ್ದಂತೆ ನನ್ನನ್ನು ಸತ್ತ ನಾಯಿಯನ್ನು ಬೀದಿಯಲ್ಲಿ ಎಳೆದುಕೊಂಡು ಹೋಗುವಂತೆ ಮನೆಯ ಅಂಗಳದಿಂದ ಕತ್ತಲು ಆವರಿಸಿದ್ದ ಕುದುರೆ ಲಾಯದೊಳಕ್ಕೆ ಜುಟ್ಟು ಹಿಡಿದು ದರ ದರೆನೆ ಎಳೆದುಕೊಂಡು ಹೋಗಿ ಕೂಡಿ ಹಾಕಲಾಯಿತು. ಮತ್ತೆ ನಾಲ್ವರಿಂದ ನಿರಂತರ ಅತ್ಯಾಚಾರ ನಡೆಯಿತು. ಎಷ್ಟು ಹೊತ್ತು? ಎಷ್ಟು ಬಾರಿ? ಯಾವುದೂ ನನಗೆ ನೆನಪಿಲ್ಲ. ನಾನು ಪ್ರಜ್ಞಾಹೀನಳಾಗಿದ್ದೆ. ಜಮೀನ್ದಾನರನ ಮನೆಯ ಕಾಂಪೌಂಡಿನಿಂದ ಹಿಡಿದು, ಗೇಟಿನವರೆಗೆ ಎಲ್ಲಡೆ ಕಾವಲುಭಟರು ಬಂದೂಕಗಳನ್ನು ಹಿಡಿದು ನಿಂತಿದ್ದರು. ಅಲ್ಲಿಂದ ತಪ್ಪಿಸಿಕೊಂಡು ಹೋಗುವುದು ಸಾಧ್ಯವಿರಲಿಲ್ಲ. ಅಂತಹ ಸಮಯದಲ್ಲಿ ಬಿಡುಗಡೆಗಾಗಿ ನಾನು ಮಾಡಿಕೊಳ್ಳಬಹುದಾಗಿದ್ದ ಪ್ರಾರ್ಥನೆಗೂ ಅಲ್ಲಿ ಬೆಲೆಯಿರಲಿಲ್ಲ.
ಮುಖ್ತರನ್ ಬೀಬಿ ಅಥವಾ ಮುಖ್ತರ್ ಮಾಯಿ ಎಂದು ಈ ಜಗತ್ತಿನಿಂದ ಗುರುತಿಸಲ್ಪಟ್ಟಿದ್ದ  ನಾನು, ಗುಲಾಂ ಫರಿದ್ ಜಾಟ್ ಎಂಬ ಹೆಸರಿನ ನನ್ನ ತಂದೆಗೆ ಹಿರಿಯ ಮಗಳಾಗಿದ್ದೆ. ಆ ದುರಾದೃಷ್ಟದ ಕ್ಷಣದಲ್ಲಿ ನಾನೂ ಪ್ರಜ್ಞಾಹೀನಳಾಗಿದ್ದರೂ ಸಹ ಹರಿಣಿಯ ಮೇಲೆ ಹಸಿದ ಹೆಬ್ಬುಲಿಯಂತೆ ಎರಗುತಿದ್ದ ಆ ನಾಲ್ವರು ವ್ಯಕ್ತಿಗಳ ಮುಖಚರ್ಯೆಯನ್ನು ಮಾತ್ರ ನಾನು ಮರೆತಿರಲಿಲ್ಲ. ಅವರ ಪಾಲಿಗೆ ಹೆಣ್ಣು ಜೀವವೆಂದರೆ, ಹರಿದು ತಿನ್ನಬಹುದಾದ ಹಣ್ಣು ಎಂಬಂತಾಗಿತ್ತು. ಇದು ಪಾಕಿಸ್ತಾನದ ಪುರುಷ ಜಗತ್ತಿನಲ್ಲಿ ಜಾರಿಯಲ್ಲಿರುವ ಒಂದು ಅಲಿಖಿತ ನಿಯಮ. ಮರ್ಯಾದೆಯ ಹೆಸರಿನಲ್ಲಿ ತನ್ನ ಕುಟುಂಬಕ್ಕೆ ಅಥವಾ ಸಮುದಾಯಕ್ಕೆ ಕಳಂಕ ತರುವ ಹೆಣ್ಣೆದಂರೆ, ಕೋಳಿಯನ್ನು ತರಿದು ಹಾಕಿದಂತೆ ಮರ್ಯಾದೆ ಹತ್ಯೆಯ ಹೆಸರಿನಲ್ಲಿ ಕೊಲ್ಲಬಲ್ಲರು. ತಮ್ಮ ಕೈ ಕೆಳಗಿನ ಜಾತಿಯ ಜನರಿಂದ  ಮೇಲ್ವರ್ಗದ  ಜನರ ಅಂತಸ್ತಿಗೆ ಅಥವಾ ಗೌರವಕ್ಕೆ ಧಕ್ಕೆಯುಂಟಾದರೆ, ನೇರವಾಗಿ ಅವರ ಮನೆಗೆ ನುಗ್ಗಿ ರಾಜಾ ರೋಷವಾಗಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗಬಲ್ಲರು. ನನ್ನ ನೆಲದಲ್ಲಿ ಹೆಣ್ಣನ್ನು ಕೊಲ್ಲಲು ಯಾವುದೇ ರೀತಿಯ ಆಯುಧಗಳು ಬೇಕಿಲ್ಲ. ಸರಳವಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದರೆ ಸಾಕು. ಆಕೆ ತಂತಾನೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇಂತಹ ಸಾವಿರಾರು, ಲಕ್ಷಾಂತರ ಘಟನೆಗಳು ಹೊರಜಗತ್ತಿಗೆ ಬೆಳಕಿಗೆ ಬಾರದಂತೆ ಪಾಕಿಸ್ತಾನದಲ್ಲಿ ನಡೆದಿವೆ, ನಡೆಯುತ್ತಲೇ ಇವೆ.
ಅವರು ನನ್ನನ್ನು ತೀವ್ರವಾಗಿ ಥಳಿಸಿದ್ದರೆ ನಾನು ಯೋಚಿಸುತ್ತಿರಲಿಲ್ಲ ಏಕೆಂದರೆ, ನಾನು ಅವರ ಅಧೀನದಲ್ಲಿದ್ದೆ.  ಆದರೆ, ಅವರು ನನ್ನ ಸಹೋದರ, ಅಪ್ಪ ಮತ್ತು ಆತನ ಬಂಧುಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವುದರ ಮೂಲಕ ತಮ್ಮೊಳಗಿನ ವಿಕೃತ ಕಾಮಕ್ಕೆ ಮತ್ತು ಕ್ರೌರ್ಯಕ್ಕೆ ನನ್ನನ್ನು ದಾಳವಾಗಿ ಬಳಸಿಕೊಂಡಿದ್ದರು.
mukhtar mai speakingಸತತ ಇಪ್ಪತ್ತುನಾಲ್ಕು ಗಂಟೆಗಳ ಬಂಧನ ಮತ್ತು ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರದ ನಂತರ ಮರುದಿನ ರಾತ್ರಿ ಕುದುರೆ ಲಾಯದ ಬಾಗಿಲು ತೆರೆದು ನನ್ನನ್ನು ಹೊರಹೋಗಲು ಹೇಳಿದ್ದರು. ಮೈ ಮೇಲೆ ಅಂಗೈ ಅಗಲದಷ್ಟು ಬಟ್ಟೆಯಿರಲಿಲ್ಲ. ಮಣ್ಣಿನಲ್ಲಿ ದೂಳಾಗಿ ಹರಿದು ಚಿಂದಿಯಾಗಿದ್ದ ನನ್ನ ಸೆಲ್ವಾರ್ ತುಂಡೊಂದನ್ನು ನನ್ನತ್ತ ಎಸೆದರು.  ಜಮೀನ್ದಾರನ ಮನೆಯಾಚೆ ಅಪ್ಪ, ಚಿಕ್ಕಪ್ಪ, ಹಾಗೂ ಮುಲ್ಲಾ ಇವರುಗಳು  ಆಸ್ಪತ್ರೆಯ ಶವಾಗಾರದ ಮುಂದೆ ಕಾಯುವ ಬಂಧುಗಳಂತೆ ನನಗಾಗಿ ಕಾಯುತ್ತಿದ್ದರು. ನಾನು ಜಮೀನ್ದಾರನ ಮನೆಯ ಗೇಟಿನಿಂದ ನಿಧಾನವಾಗಿ ಹೆಜ್ಜೆ ಊರುತ್ತಾ ಹೊರಬಂದಾಗ ಆಗಸದಲ್ಲಿ ಚಂದ್ರನ ಬೆಳಕಿತ್ತು. ನನ್ನ ಈ ದೈನೇಸಿ ಸ್ಥಿತಿಯನ್ನು ನೋಡಲು ನನ್ನಿಂದ ಸಾಧ್ಯವಿಲ್ಲವೆಂಬಂತೆ ಆ ಚಂದ್ರನೂ ಕೂಡ ಮುಖಮುಚ್ಚಿಕೊಂಡವನಂತೆ ಮೋಡಗಳ ಹಿಂದೆ ಮರೆಯಾಗಿ ಹೋದ.
ಅಪ್ಪ ನೀಡಿದ ತನ್ನ ಹೆಗಲ ಮೇಲಿದ್ದ ಶಾಲನ್ನು ನನ್ನ ಸೊಂಟಕ್ಕೆ ಸುತ್ತಿಕೊಳ್ಳುವುದರ ಮೂಲಕ ಮಾನವನ್ನು ಮುಚ್ಚಿಕೊಂಡೆ.  ಎದೆಯನ್ನು ನನ್ನರೆಡು ಅಂಗೈಗಳಲ್ಲಿ ಮುಚ್ಚಿಕೊಂಡು ನಿಧಾನವಾಗಿ ಮನೆಯತ್ತ ಹೆಜ್ಜೆ ಹಾಕತೊಡಗಿದೆ. ಅಪ್ಪ ಮತ್ತು ಬಂಧುಗಳು ನನ್ನ ಹಿಂದೆ ಅನತಿ ದೂರದಲ್ಲಿ ತಲೆ ತಗ್ಗಿಸಿ ಹೆಜ್ಜೆ ಹಾಕುತ್ತಿದ್ದರು. ಇಡೀ ಊರಿಗೇ ಗರ ಬಡಿದಂತಾಗಿತ್ತು. ನನಗೊದಗಿದ ಈ ದುರಂತವನ್ನು ನೋಡಬಾರದು ಮತ್ತು ಕೇಳಬಾರದು ಎಂದು ತೀರ್ಮಾನಿಸಿದಂತೆ ನನ್ನೂರಿನ ಜನರು ತಮ್ಮ ಮನೆಯ ದೀಪಗಳನ್ನು ಆರಿಸಿ, ಕಿಟಿಕಿ ಬಾಗಿಲು ಮುಚ್ಚುವುದರ ಮೂಲಕ, ನಿದ್ದೆಯ ನೆಪದಲ್ಲಿ ಮೌನಕ್ಕೆ ಶರಣಾಗಿದ್ದರು. ಆ ರಾತ್ರಿ ಮೌನವೆಂಬುದು ಇಡೀ ಮೀರ್ವಾಲ ಎಂಬ ನನ್ನ ಊರನ್ನು ಆಳುತ್ತಿತ್ತು.

 

‍ಲೇಖಕರು admin

3 December, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading