ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಣ್ಣಾಗುವುದೆಂದರೆ…

ಅಮೀನ್ ಅತ್ತಾರ 

ಮಣ್ಣಾಗುವುದೆಂದರೆ ಉಸಿರಿಗೆ ಪೂರ್ಣವಿರಾಮವಲ್ಲ,
ವಿರಾಮರಹಿತ ಹುಟ್ಟಿನ ಸಾರ್ಥಕತೆಯ ಪೂರ್ಣಗೊಳಿಸುವುದು.
ಹೂವಾಗುವುದು, ಒಮ್ಮೊಮ್ಮೆ ಬುಸುಗುಡುವ
ಹಾವಾಗುವುದು, ಕೊನೆಗೊಮ್ಮೆ
ಜೀವಂತ ಸಾವಾಗುವುದು..

ಕನಸುಗಳ ರೆಕ್ಕೆ ಕತ್ತರಿಸಿ
ಸೀದಾ ನೆಲದೆದೆಯಲಿ ಕುಣಿಸಿಬಿಡುವುದು,
ಮಣ್ಣ ರುಚಿಯ ತೋರಿಸುವದು
ಚೌಕಟ್ಟಿಗೆ ಸಿಲುಕದೆಯೂ
ಎಲ್ಲರೆದೆಯಲಿ ಚಂದ ಚಿತ್ರವಾಗುವುದು.
ಜಿಂದಗಿಯ ಜಿತದಾಳಾಗದೆ ಜಿದ್ದಿನಲಿ ಗೆದ್ದುಬಿಡುವುದು

ಮೈಲುಗಟ್ಟಲೇ ಹಾದಿಯಲಿನ ಮುಳ್ಳ
ಸಣ್ಣಗೆ ಕತ್ತರಿಸಿ
ನರಳಾಟದಲೂ ಹೂವನರಳಿಸುವುದು
ಕಣ ಕಣದಲೂ ಕಂಪಹರಡಿ ನೆಲಮುಗಿಲಾವರಿಸುವುದು…

ಮಣ್ಣಗಾವುದೆಂದರೆ ಬರಿಮೈಲಿ
ಗೋರಿ ಸೇರುವದಲ್ಲ ಗೆಳೆಯ
ಚಿಗಿವ ಸಸಿಗಳಿಗೆ ಕವಚವಾಗುವುದು
ಹಲವರೆದೆಯಲಿ ಬೆಳಕ ಕಣ್ಣಾಗುವುದು…
ಮಣ್ಣಾಗುವುದೆಂದರೆ ಕತ್ತಲೆದೆಯ ಸೀಳಿ ಬೆಳಕ ಜೋಳಿಗೆ ತುಂಬುವುದು.

‍ಲೇಖಕರು Admin

8 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading