ಮಣ್ಣಪಾಪುವಿನ ಬಂಡೆಯನ್ನೇರಿ ಕುಳಿತು…

ಸುಧಾ ಆಡುಕಳ

ಈ ಸಲದ ‘ಕೇಳುಸಖಿ’ ಶಿಬಿರ ಮಾಳದ ಕಾಡಿನಲ್ಲಿರುವ ಮಣ್ಣಪಾಪುವಿನಲ್ಲಿ, ಬರ್ತೀರಾ? ಎಂದು ಪ್ರಥ್ವಿಯವರು ಕೇಳಿದಾಗ ಇಲ್ಲವೆನ್ನಲು ಕಾರಣಗಳೇ ಇರಲಿಲ್ಲ. ಶಿಬಿರಾರ್ಥಿಗಳು ಯಾರೆಂದು ಅವರೂ ಹೇಳುವುದಿಲ್ಲ, ನಾವು ಕೇಳಲೂಬಾರದು ಮತ್ತು ಅಲ್ಲಿ ಹೊರ ಸಂಚಾರದ ವೇಳೆಯನ್ನು ಹೊರತುಪಡಿಸಿದರೆ ಮೊಬೈಲ್ ಬಳಕೆಗೆ ಅವಕಾಶವೇ ಇಲ್ಲ ಎಂಬುದೆಲ್ಲ ಪ್ರಥ್ವಿಯವರನ್ನು ಬಲ್ಲವರಿಗೆಲ್ಲ ತಿಳಿದಿರುವ ವಿಷಯ. ನೇಮಿಚಂದ್ರ ಈ ಸಲದ ಶಿಬಿರದ ನಿರ್ದೇಶಕರೆಂದು ತಿಳಿದಾಗ ಒಂದಿಷ್ಟು ನಿರೀಕ್ಷೆಗಳು ಗರಿಗೆದರಿದವು.

ವಿಜ್ಞಾನದ ವಿದ್ಯಾರ್ಥಿಯಾದ ನನಗೆ ನೇಮಿಚಂದ್ರರ ಯೋಚನಾಲಹರಿ ಯಾವಾಗಲೂ ಪ್ರಿಯ. ಹೀಗೆ ಅನೇಕ ಕುತೂಹಲಗಳನ್ನು ಉಳಿಸಿಕೊಂಡು ಶಿಬಿರಾರ್ಥಿಗಳ ಸ್ಸನ್ನೇರಿದಾಗ ಅನೇಕ ಪರಿಚಿತ ಮುಖಗಳು ಹಾಯ್… ಎಂದವು.  ಕುಸುಮಾ ಆಯರಳ್ಳಿ, ಪ್ರಜ್ಞಾ ಮತ್ತಿಹಳ್ಳಿ, ನಂದಿನಿ ಹೆದ್ದುರ್ಗ ಇವರನ್ನೆಲ್ಲ ನೋಡಿದಾಗ ಜನ್ಮಾಂತರದ ಗೆಳತಿಯರನ್ನು ಕಂಡಂತಾಯಿತು.

ಮಣ್ಣಪಾಪು ಎಂಬ ಅಚ್ಚಕಾಡಿನ ನಡುವಿರುವ ಮನೆಯನ್ನು ತಲುಪಿದಾಗ ಇನ್ನೊಂದು ಅಚ್ಚರಿ! ನಾನು ಬಹಳಷ್ಟು ಕೇಳಿದ್ದ ಪುರುಷೋತ್ತಮ ಅಡ್ವೆ ಅವರ ಮನೆಯದು ಎಂದು ತಿಳಿದುಬಂತು. ಬಹಳ ಹಿರಿಯರಿರಬೇಕು ಎಂದು ನಾನಂದುಕೊಂಡ ಅಡ್ವೆಯವರು ನಮ್ಮದೇ ಓರಗೆಯವರು ಎಂಬುದು ಮನಸ್ಸಿಗಿಳಿಯಲು ಸುಮಾರು ಹೊತ್ತು ಬೇಕಾಯಿತು.

ಪುರಾತನ ಕಾಲದ ತೊಟ್ಟಿಮನೆಯನ್ನು ಚಂದದ ಕಲಾಕುಟೀರವನ್ನಾಗಿ ಪರಿವರ್ತಿಸಿದುದಲ್ಲದೇ ಸುಮಾರು ಐವತ್ತು ಜನರ ವಸತಿಗೆ ಅನುಕೂಲ ಸ್ಥಳವನ್ನಾಗಿ ಪರಿವರ್ತಿಸಿದ್ದರು. ಮಣ್ಣಿನ ಬೌಲ್ ನಲ್ಲಿ ಬಿಸಿಬಿಸಿಯಾದ ಸೂಪನ್ನು ಕುಡಿಯುವುದರೊಂದಿಗೆ ಅವರ ಅಧಿಕೃತ ಅತಿಥಿಗಳಾಗಿ ಹೋದೆವು.

ತೊಟ್ಟಿಮನೆಯ ಸುತ್ತ ಪೌಳಿಯಲ್ಲಿ ಕುಳಿತು, ಬಾಳೆಲೆಯಲ್ಲಿ ಊಟ ಮಾಡುವಾಗ ಅಭಿನವ ರವಿ, ನೀತಾ ಇನಾಂದಾರ್, ಪುರುಷೋತ್ತಮ ಅಡ್ವೆ, ದಿ. ನಿ. ಮುರಾರಿ ಬಲ್ಲಾಳರ ಮೊಮ್ಮಗ ಇಂಜಿನೀಯರ್ ಮನು… ಹೀಗೆ ಘಟಾನುಘಟಿಗಳೆಲ್ಲ ನಮಗೆ ಬಡಿಸಿದರು. ಮತ್ತೆ ನಾವಲ್ಲಿ ಕಳೆದ ಎರಡು ದಿನವೂ ಗಂಡಸರೆಲ್ಲ ಅಡುಗೆಮನೆಯಲ್ಲಿದ್ದರೆ ಹೆಂಗಸರು ನಾವು ಚಿಂತಕರ ಚಾವಡಿಯಲ್ಲಿ ಕುಳಿತು ವಿಷಯ ಮಂಥನ ಮಾಡಿದೆವು.

ಊಟದ ನಂತರದ ಮೊದಲ ಗೋಷ್ಠಿ ಅಜ್ಜಿಯರ ಬಗೆಗಿತ್ತು. ಅದು ಕೇವಲ ಅಜ್ಜಿಯರ ಕಥೆಯಾಗದೇ ಹೆಣ್ಣ ಕಣ್ಣೋಟದಲ್ಲಿ ನೋಡಿದ ಎರಡು ತಲೆಮಾರುಗಳ ಹಿಂದಿನ ಕಾಲದ ಕಥನವಾಗಿ ಕಣ್ಮುಂದೆ ಬಂತು. ನಾವು ಅಜ್ಜಿಯೆಂದು ಕರೆಯಲು ಹಿಂಜರಿಯುವಷ್ಟು ಜೀವಂತಿಕೆಯಿಂದ ನಳನಳಿಸುತ್ತಿದ್ದ ಕಾದಂಬರಿಕಾರ್ತಿ ಎ. ಪಿ ಮಾಲತಿ ತಮ್ಮ ಅಜ್ಜಿಯ ಕಥನವನ್ನು ಬಿಚ್ಚಿಟ್ಟರಲ್ಲದೇ ತಾನು ಬದುಕಿರುವಷ್ಟು ದಿನವೂ ಬರೆಯುತ್ತಲೇ ಇರುತ್ತೇನೆ ಎನ್ನುತ್ತಾ ನಕ್ಕರು. ಅವರ ಇರವೇ ವಾತಾವರಣದಲ್ಲಿ ಹಾಲುಬೆಳದಿಂಗಳನ್ನು ಚೆಲ್ಲುವಷ್ಟು ಕಳೆಯಿತ್ತು ಅವರ ಮೊಗದಲ್ಲಿ.

ಚಳುವಳಿಕಾರರಾಗಿ, ರಾಜಕಾರಣಿಯಾಗಿ ಬದುಕನ್ನು ರೂಪಿಸಿಕೊಂಡ ತಮ್ಮ ಅಜ್ಜಿಯನ್ನು ತಮ್ಮ ತಾಯಿ ಚಿಕ್ಕಮ್ಮಂದಿರು ಮನೆಯ ಉಗ್ರಾಣಕ್ಕೆ ಬೀಗ ಹಾಕಿಡುವ ಜುಗ್ಗಮ್ಮನಾಗಿ ಮಾತ್ರ ಗ್ರಹಿಸಿದ್ದ ವಾಸ್ತವವನ್ನು ನಮ್ಮೆದುರು ತೆರೆದಿಟ್ಟವರು ನೀತಾ ಇನಂಮದಾರ್ ಅವರು. ಮುಂದೆ ಶಿಬಿರಾರ್ಥಿಗಳ ಅಜ್ಜಿಯಂದಿರೆಲ್ಲ ನಮ್ಮೆದುರು ತೆರೆದುಕೊಂಡು ಎಲ್ಲರೂ ಮೂರುದಶಕ ಹಿಂದೆ ಚಲಿಸಿದ್ದಂತೂ ಸುಳ್ಳಲ್ಲ. ಅಜ್ಜಿಯಂದಿರೆಂದರೆ ಮಮತೆ, ವಾತ್ಸಲ್ಯದ ಮೂಟೆಯೆಂಬ ಭ್ರಮೆಯನ್ನು ಪುಡಿಗಟ್ಟಿದ ಅಜ್ಜಿಯಂದಿರೂ ಅಲ್ಲಿ ಪ್ರತ್ಯಕ್ಷವಾದರು.

ಅಕ್ಕಮಹಾದೇವಿಯ ನಂತರ ಹೆಣ್ಣು ಮಕ್ಕಳು ಬರೆದೇ ಇಲ್ಲವೆಂಬ ಲಘು ಹೇಳಿಕೆಯನ್ನು ನೀಡುವವರು ಭೂತವನ್ನು ಅನ್ವೇಷಿಸುವ ಕೆಲಸ ಮಾಡಬೇಕು. ಕೊನೆಪಕ್ಷ ಅಜ್ಜಿಯಂದಿರ ಈ ಲೋಕವನ್ನಾದರೂ ನಾವು ಕಟ್ಟಿಡದಿದ್ದರೆ ನಮಗೆ ಇತಿಹಾಸವೇ ಇರುವುದಿಲ್ಲ ಎಂಬ ಕಾಳಜಿಯ ಮಾತುಗಳೊಂದಿಗೆ ನೇಮಿಚಂದ್ರ ಅವರು ಗೋಷ್ಟಿಯನ್ನು ಸಮಾಪನಗೊಳಿಸಿದರು.

ಒಂದಿಷ್ಟು ಅಡಿಕೆ ತೋಟ, ಸುತ್ತ ಬೆಳೆದ ನೈಸರ್ಗಿಕ ಕಾಡು, ಪ್ಲಾಸ್ಟಿಕ್‍ನ ಸೋಂಕಿಲ್ಲದ ಪರಿಸರ, ಮನೆಬಾಗಿಲಿಗೇ ಬಂದು ಹೆಜ್ಜೆ ಮೂಡಿಸಿ ಹೋದ ಕರಡಿಗಳು, ವಿದ್ಯಾವಂತರ ವಲಸೆಗೆ ಸಾಕ್ಷಿಯಾಗಿ ನಿಂತ ನಾಲ್ಕಾರು ಖಾಲಿ ಮನೆಗಳು, ಇಂಥ ಪರಿಸರವನ್ನು ಬಯಸಿ ಬಂದ ಅಡ್ವೆ ದಂಪತಿಗಳು… ಸಂಜೆಯ ಹೊರಸಂಚಾರ ಇವುಗಳೆಲ್ಲವನ್ನು ಕಣ್ಣೆದುರು ನಿಲ್ಲಿಸಿ ಕಾಡಿತು. ಕಾಡು ನಿಧಾನವಾಗಿ ತೋಟವನ್ನು ನುಂಗಲು ಹವಣಿಸುತ್ತಿರುವಂಥ ಪರಿಸರವದು. ಹಾಗಾಗಲೆಂಬುದೇ ಆಶಯವೆಂದರು ಅಡ್ವೆಯವರು.

ತಿರುಗಾಡಿ ಬಂದ ಆಯಾಸವನ್ನು ಹಂಡೆಯಲ್ಲಿ ಕಾದು ಕುದಿಯುತ್ತಿದ್ದ ಬಿಸಿನೀರ ಸ್ನಾನ ಕಳೆಯಿತು. ಸಂಜೆಗೆ ಕಾಯಿಹಾಲು ಗಂಜಿ, ಕುಚಲಕ್ಕಿ ಗಂಜಿಯೊಂದಿಗೆ ಕರಾವಳಿ ಮತ್ತು ಮಲೆನಾಡಿನ ತಹೇವಾರಿ ಸೈಡ್ಸ್‍ಗಳು ನಾಲಿಗೆಯ ರಸಗ್ರಂಥಿಗಳನ್ನು ಇನ್ನಷ್ಟು ಚುರುಕಾಗಿಸಿದವು.

ಕಣ್ಣೆಳೆಯುತ್ತಿದ್ದರೂ ಮತ್ತೆ ಚಾವಡಿಯಲ್ಲಿ ಸೇರಿ ಎಲ್ಲರೂ ನಾವೇಕೆ ಬರೆಯುತ್ತೇವೆ ಎಂಬ ವಿಷಯವನ್ನು ಚರ್ಚಿಸಿದೆವು. ಮದುವೆಯಾಗಿ ದಶಕಗಳವರೆಗೂ ಬರೆಯದ ಶೂನ್ಯ ಕಾಲ ಹೆಣ್ಣ ಭವಣೆಗೆ ಸಾಕ್ಷಿಯಾಯಿತು. ಅಸ್ಮಿತೆಯ ಪ್ರಶ್ನೆಯೇ ಹೆಚ್ಚಿನವರ ಬರವಣಿಗೆಯ ಪ್ರಾರಂಭಕ್ಕೆ ಕಾರಣವಾದ ಸತ್ಯ ತೆರೆದುಕೊಂಡಿತು. ಮಲಗುವ ಸಮಯವೆಂದು ಹಾಸಿಗೆ ಸೇರಿದವರು ಅದ್ಯಾವ ಮಾಯಕದಲ್ಲೋ ಹಾಸಿಗೆಯನ್ನೇ ಹರಟೆಯ ಕಟ್ಟೆಯಾಗಿಸಿಕೊಂಡು, ಅಲ್ಲಲ್ಲಿ ಗುಂಪುಸೇರಿ ಬೆಳಕು ಹರಿವತನಕವೂ ಮಾತಾಡಿದ್ದೇ ಮಾತಾಡಿದ್ದು!

ನಸು ಬೆಳಗಿನಲ್ಲಿ ಜಲಪಾತ ನೋಡಲು ಹೊರಡುತ್ತೇವೆಂಬ ಅಡ್ವೆಯವರ ಮಾತು ಕಣ್ಣು ಮುಚ್ಚಿದ ಗಳಿಗೆಯಲ್ಲೇ ನಮ್ಮನ್ನು ಎಚ್ಚರಾಗಿಸಿತು. ಹರಿವ ಹೊಳೆ, ಅಡ್ಡಲಾಗಿ ಹಾಕಿದ ಅಡಿಕೆ ಮರದ ಸಂಕ, ಸುತ್ತ ಬಂಡೆಗಳ ಸಾಲು, ಸಾಲು, ಹರಿವ ಜಲಪಾತದ ಸದ್ದು… ನಿಜಕ್ಕೂ ಸ್ವರ್ಗವೆಂದರೆ ಇದೆ ಎಂಬ ಉದ್ಘಾರವನ್ನು ನಮ್ಮಿಂದ ಹೊರಹೊಮ್ಮಿಸಿತು. ಆದರೆ ಇಂತಹ ಸ್ವರ್ಗದಲ್ಲಿಯೇ ಬದುಕುತ್ತಿರುವ ಸಹನಾ ಕಾಂತಬೈಲು, ಸ್ಮಿತಾ ಅಮೃತರಾಜ್ ಇವರೆಲ್ಲ ಅಪರೂಪಕ್ಕೆ ಬರುವವರಿಗೆ ಮಾತ್ರ ಎಂದು ಭಿನ್ನರಾಗವೆಳೆದಾಗ ಹಳ್ಳಿಯಿಂದ ಬಂದ ನಾವೊಂದಿಷ್ಟು ಜನ ಹೌದೌದು ಎಂದೆವು. ಫೋಟೋ ತೆಗೆಸಿಕೊಳ್ಳಲೆಂದು ಬಂಡೆಯೇರಿ ಕುಳಿತಾಗ ಮತ್ತದೇ ಬಾಲ್ಯದ ನೆನಪು ಕಾಡಿತು.

ಊರ ನಡುವೆ ಹರಿವ ಹೊಳೆಯೊಂದು ಮಳೆಗಾಲ ಪ್ರಾರಂಭವಾದೊಡನೆ ಜಗತ್ತಿನೊಂದಿಗಿನ ನಮ್ಮ ಸಂಪರ್ಕವನ್ನು ಕಡಿದುಬಿಡುತ್ತಿತ್ತು. ದೊಡ್ಡವರೇನೋ ನೆರೆ ಕಡಿಮೆಯಿದ್ದಾಗ ಹೊಳೆದಾಟಿ ಬೇಕಾದ ಸಾಮಾನುಗಳನ್ನು ತರುತ್ತಿದ್ದರಾದರೂ ಮಕ್ಕಳಾದ ನಮಗೆ ಆರು ತಿಂಗಳು ಶಾಲೆಗೆ ಹೋಗಲು ಆಗುತ್ತಿರಲಿಲ್ಲ.

ಶಾಲೆಯೆಂದರೆ ಜೀವಬಿಡುವ ನನ್ನಂಥವರಿಗೆ ಅದೊಂದು ಜೈಲುವಾಸದ ಸಮಯವೇ ಆಗಿರುತ್ತಿತ್ತು. ಆಗೆಲ್ಲ ಸುರಿಯುವ ಮಳೆಯಲ್ಲಿ, ಮರಸಣಿಗೆ ಗಿಡದ ಎಲೆಯನ್ನೇ ಕೊಡೆಯಂತೆ ಹಿಡಿದುಕೊಂಡು ಮನೆಯೆದುರಿನ ಗುಡ್ಡವೇರಿ ಕುಳಿತಿರುತ್ತಿದ್ದೆ. ಯಾಕೆಂದರೆ ಅಲ್ಲಿಂದ ಹೊಳೆಯಾಚೆಗಿನ ಶಾಲೆ ಚೆಂದವಾಗಿ ಕಾಣುತ್ತಿತ್ತು. ಅಲ್ಲಿ ಮಕ್ಕಳು ಆಟವಾಡುವುದನ್ನು, ಶಿಕ್ಷಕರು ಬರುವುದನ್ನು ನೋಡುತ್ತಾ ನಾನೂ ಅಲ್ಲಿರುವಂತೆ ಕಲ್ಪಿಸಿ ಸುಖಿಸಿದ ಕ್ಷಣಗಳು ಕಣ್ಣೆದುರು ಹಾದುಬಂದು ಕಣ್ಣನ್ನು ತೇವಗೊಳಿಸಿದವು.

ಅಕ್ಷರ ಲೋಕಕ್ಕೆ ಎಷ್ಟೊಂದು ಶಕ್ತಿಯಿದೆ! ಆ ಒಂದು ಊರುಗೋಲು ಇಲ್ಲದಿದ್ದರೆ ಅಲ್ಲೆಲ್ಲೋ ಕಾಡಿನಂಚಿನ ಮನೆಯಲ್ಲಿ ಇಡಿಯ ಬದುಕೇ ಮುಗಿದು ಹೋಗುತ್ತಿತ್ತೆಂಬ ಸತ್ಯ ಧುತ್ತನೆ ನನ್ನೆದುರು ಬಂದು ನಿಂತಿತು. ಮೊದಲ ಅಕ್ಷರವ ಚಿತ್ರಿಸಿದ ಜಗದ ಅಜ್ಞಾತ ಬೆರಳಿಗೆ ಮನಸ್ಸಿನಲ್ಲಿಯೇ ವಂದಿಸಿದೆ.

ನಿನ್ನೆ ರಾತ್ರಿ ಎಲ್ಲರೂ ಎಷ್ಟೊಂದು ಜೋರಾಗಿ ಮಾತಾಡುತ್ತಿದ್ದಿರಿ. ಮೌನವಾಗಿದ್ದರೆ ಕಾಡಿನ ಸದ್ದನ್ನು, ಜಲಪಾತದ ಹಾಡನ್ನು ಕಿವಿದುಂಬಿಸಿಕೊಳ್ಳಬಹುದಿತ್ತು’ ಎಂದು ಅಡ್ವೆಯವರು ಮೆಲ್ಲನೆ ಹೇಳಿದಾಗ ಮಾತಲ್ಲದಿರುವ ಎಷ್ಟೊಂದು ಸಂಗತಿಗಳಿವೆಯಲ್ಲ ಎನಿಸಿ ಪೆಚ್ಚಾದೆವು. ನಮ್ಮೊಂದಿಗೆ ಕೋಲು ಹಿಡಿದುಕೊಂಡೇ ಒಂದು ಕಿ. ಮೀ. ನಡೆದು ಜಲಪಾತ ನೋಡಿದ ಶ್ರೀಮತಿಯವರು, ಕ್ಯಾಮರಾ ಹಿಡಿದು ಅಚ್ಚರಿಯನ್ನೆಲ್ಲ ತುಂಬಿಸಿಕೊಳ್ಳುತ್ತಿದ್ದ ನೇಮಿಚಂದ್ರ ನಿಜಕ್ಕೂ ಸ್ಪೂರ್ತಿಯ ಸೆಲೆಯಾದರು. ಹೊಟ್ಟೆ ಚುರುಗುಡುವ ಹೊತ್ತಿಗೆ ಮತ್ತೆ ಮನೆ ಸೇರಿ ಥರಾವರಿ ತಿಂಡಿಗಳನ್ನು ತಿಂದೆವು.

ಬರೆಯುವವರಿಗೆ ಓದು ಕೂಡಾ ಅಷ್ಟೇ ಮುಖ್ಯ. ನಿಮ್ಮನ್ನು ಪ್ರಭಾವಿಸಿದ ಪುಸ್ತಕಗಳ ಬಗೆಗೆ ಹೇಳಿ ಎನ್ನುತ್ತಾ ಮುಂದಿನ ಗೋಷ್ಠಿಗೆ ಮುನ್ನುಡಿಯನ್ನು ಬರೆದವರು ನಿರ್ದೇಶಕರು. ಲೇಖಕಿಯರ ಓದಿನ ಹರಹು ಅನಾವರಣಗೊಂಡ ಕ್ಷಣಗಳವು. ತಮ್ಮ ಬರಹ, ಬದುಕಿನ ನೋಟಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾತನಾಡಿದರು. ಮಣಿಪಾಲ ಗ್ರೂಪ್ಸ್‍ನ ಸಂಧ್ಯಾ ಪೈ ಅವರು ಹೇಳಿದ ಅಜ್ಜಿಯ ಕಥೆ ಅದೆಷ್ಟು ಮನೋಜ್ಞವಾಗಿತ್ತೆಂದರೆ ನಿಜಕ್ಕೂ ನಾವೆಲ್ಲ ಅಜ್ಜಿಕತೆ ಕೇಳುವ ಮಕ್ಕಳೇ ಆಗಿಬಿಟ್ಟಿದ್ದೆವು.

ಔಪಚಾರಿಕತೆಯ ಹೊರೆಯಿಲ್ಲದಾಗ ಮಾತ್ರವೇ ಇಂಥದೊಂದಿಷ್ಟು ಆತ್ಮೀಯ ಕ್ಷಣಗಳು ಘಟಿಸಲು ಸಾಧ್ಯ. ಮತ್ತು ಇದು ಪ್ರಥ್ವಿ ಮತ್ತವರ ತಂಡದ ಆಶಯವಾಗಿದೆ. ಕೊನೆಯ ಕ್ಷಣದಲ್ಲಿ ಮಾತಿಗಾಗಿ ಕರೆದರೂ ಮಾತನಾಡಲು ಏನೂ ಇಲ್ಲವೆಂದ ಅಡ್ವೆಯವರು, ನಮ್ಮ ಊಟ, ತಿಂಡಿ ಬಡಿಸುತ್ತ ಹಿರಿಯಣ್ಣನಾಗಿ ಹೋದ ರವಿ ಸರ್, ಶಿರಸಿಯಿಂದ ಜೀವನೋಪಾಯಕ್ಕಾಗಿ ಇಲ್ಲಿಗೆ ಬಂದು ನೆಲೆಸಿದ್ದಷ್ಟೇ ಅಲ್ಲ, ಘಟ್ಟದ ಮನೆಯ ಆತಿಥ್ಯವನ್ನೂ ಇಲ್ಲಿಗೆ ಕರೆತಂದ ಸುರೇಶ ಹೆಗಡೆ ದಂಪತಿಗಳು, ಇಡೀ ದಿನ ನಮ್ಮ ಅವಶ್ಯಕತೆಗಳನ್ನು ನೋಡಿಕೊಂಡ ಸುಮಂಗಲೇ ಮೇಡಂ, ಮೆಕ್ಯಾನಿಕಲ್ ಎಂಜನೀಯರ್ ಆಗಿದ್ದು ಕೆಲಸಕ್ಕೆ ಕಲ್ಲುಬೀರಿ ಕಾಡಿನಲ್ಲಿ ಒಂದಾಗಿ ಹೋಗಿರುವ ಯುವಕ ಮನು. ಎಲ್ಲರೂ ಕಾಡಿನಷ್ಟೇ ನಿಗೂಢವಾಗಿ ಕಾಡುತ್ತಾರೆ.

ಸುರೇಶ ಹೆಗಡೆಯವರ ಪುಟ್ಟ ಮಗಳು ಬಾಯಲ್ಲಿ ಬೆರಳಿಟ್ಟು ಚೀಪುತ್ತಾ, ಬೆರಗುಗಂಗಳಿಂದ ಎಲ್ಲರನ್ನೂ ನೋಡುತ್ತಿದ್ದಳು. ನಾನು ಏನೋ ನೆನಪಾದಂತೆ ಅಡ್ವೆಯವರಲ್ಲಿ ಇಲ್ಲಿ ಹತ್ತಿರದಲ್ಲಿ ಶಾಲೆಯಿದೆಯೇ? ಎಂದೆ. ಇದ್ದ ಒಂದು ಶಾಲೆ ಕಳೆದ ವರ್ಷ ಮುಚ್ಚಿದೆ ಎಂದರು. ಸ್ವಲ್ಪ ದೂರದಲ್ಲಿರುವ ಶಾಲೆ ಇನ್ನೂ ನಡೆಯುತ್ತಿದೆ ಎಂದಾಗ ಏನೋ ನಿರಾಳ ಭಾವ.

ಆ ಪುಟ್ಟ ಮಗುವಿನ ಶಾಲೆಯ ದಾರಿಯನ್ನು ಹರಿವ ಹೊಳೆ ತುಂಡಾಗಿಸದಿರಲಿ, ಅಡ್ವೆಯವರ ತೋಟವನ್ನು ಆದಷ್ಟು ಬೇಗ ಅವರಿಚ್ಛೆಯಂತೆ ಕಾಡು ಆವರಿಸಲಿ, ಪ್ರತಿವರ್ಷವೂ ಇಂಥದ್ದೇ ಬೆರಗಿನ ತಾಣವೊಂದನ್ನು ಶಿಬಿರಕ್ಕಾಗಿ ಆಯ್ದುಕೊಳ್ಳುವ ಪ್ರಥ್ವಿಯವರ ದೂರದೃಷ್ಟಿ ಮಂಜಾಗದಿರಲಿ ಎಂದು ಹಾರೈಸುತ್ತಾ, ನೆನಪಿಗೆಂದು ಅವರು ನೀಡಿದ ಜೇನುತುಪ್ಪ, ವಾಟೆಹುಳಿ, ಬಾಳೆನಾರಿನಿಂದ ಮಾಡಿದ ಪೆನ್ನು, ಮತ್ತೊಂದಿಷ್ಟು ಹೂಗಿಡಗಳನ್ನು ಹಿಡಿದು ಮನೆಯ ದಾರಿ ತುಳಿದೆವು.

‍ಲೇಖಕರು Avadhi

February 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: