ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮಣಿಕಾಂತ್ ಅವರೇ, ನಮಸ್ತೆ. ನಾನು ನಿಮ್ಮ ಅಭಿಮಾನಿ’

a r manikanth

ಎ ಆರ್ ಮಣಿಕಾಂತ್ 

ನನ್ನ ಅಪ್ಪ ಗಾಂಧಿಯಿಂದ ಪ್ರಭಾವಿತರಾದವರು. ಯಾರಿಂದಲೂ ಒಂದು ಪೈಸೆ ಲಂಚ ತಗೋಳ್ಳೋದಿಲ್ಲ. ಯಾರಿಗೂ ಕೆಟ್ಟದ್ದು ಬಯಸುವುದಿಲ್ಲ ಎಂದು ನಿರ್ಧರಿಸಿ ಹಾಗೆಯೇ ಬದುಕುತ್ತಾ ಇರುವವರು.ಕಂದಾಯ ಇಲಾಖೆಯಲ್ಲಿ ೩೦ ವರ್ಷ ದುಡಿದರೂ ಒಂದು ಸೈಟ್ ಖರೀದಿಸಲು ಅಥವಾ ಮನೆ ಕಟ್ಟಿಸಲು ಅವರಿಗೆ ಆಗಲಿಲ್ಲ. ಅಪ್ಪನ ಸಂಬಳದಲ್ಲಿಯೇ ನಾವು ಐದು ಜನ ಮಕ್ಕಳು ಮತ್ತು ಅಮ್ಮನ ಬದುಕು ನಡೆಯಬೇಕಿತ್ತು. ( ಜೊತೆಗೆ ಮನೆ ತುಂಬಾ ಜನ )

ಅಪ್ಪ ಮೊದಲ ದರ್ಜೆ ಗುಮಾಸ್ತ ಮತ್ತು ಕ್ಯಾಶಿಯರ್ ಆಗಿದ್ದರು. ಯಾರಿಂದಲೂ ಲಂಚ ಕೇಳದೆ ಕೆಲಸ ಮಾಡಿಕೊಡ್ತಾ ಇದ್ದರಲ್ಲ: ಅದೇ ಕಾರಣಕ್ಕೆ ಜನಸಾಮಾನ್ಯರೆಲ್ಲ ಅಪ್ಪನಿಗೆ ಬಹಳ ಮರ್ಯಾದೆ ಕೊಡುತ್ತಿದ್ದರು. ಆದರೆ ಆಫೀಸ್ ನಲ್ಲಿ ಇದ್ದವರಲ್ಲಿ ಹೆಚ್ಚಿನವರು ದ್ವೇಷಿಸುತ್ತಿದ್ದರು. ಕೆಲವರಂತೂ ನಮ್ಮ ಬಳಿಗೇ skyಬಂದು- ” ನಿಮ್ಮ ಅಪ್ಪ ಬಹಳ ಒಳ್ಳೆಯ ಜಾಗದಲ್ಲಿ ಇದ್ದಾನೆ. ಆದ್ರೆ ಏನುಪಯೋಗ? ತಾನೂ ತಿನ್ನಲಾರ. ನಮಗೂ ತಿನ್ನೋಕೆ ಬಿಡಲಾರ. ನಿಮ್ಮ ಮನೆಯಲ್ಲಿ ಸ್ಕೂಟರ್ ಇರಲಿ, ಒಂದು ಸೈಕಲ್ ಗೂ ಗತಿ ಇಲ್ಲ. ನಿಮ್ಮ ಅಪ್ಪನ ಜಾಗದಲ್ಲಿ ನಾವು ಇದ್ದಿದ್ರೆ ೧೦ ಮನೆ ಕಟ್ಟಿಸ್ತಾ ಇದ್ವಿ. ೧೨ ಸೈಟ್ ಮಾಡಿರ್ತಾ ಇದ್ವಿ. ಗಾಂಧಿ ಥರಾ ಬದುಕಿ ನಿಮ್ಮ ಅಪ್ಪ ಏನು ಸಾಧಿಸ್ತಾನೆ?” ಎಂದೆಲ್ಲಾ ಗೊಣಗುತ್ತಿದ್ದರು. ಹಣವಂತರೂ,ಶಕ್ತಿವಂತರೂ, ಹಿರಿಯರೂ ಆಗಿದ್ದ ಅವರಿಗೆ ಹೇಗೆ ಉತ್ತರ ಕೊಡಬೇಕೆಂದೇ ನನಗೆ ಗೊತ್ತಾಗುತ್ತಿರಲಿಲ್ಲ.

ಆ ನಂತರದಲ್ಲಿ ಏನಾಯಿತು ಗೊತ್ತೆ? ಇಡೀ ಆಫೀಸ್ ನ ಜನರೆಲ್ಲಾ ಒಂದಾದರು. ನಮ್ಮ ಅಪ್ಪನ ಮೇಲೆ ಇಲ್ಲದ ದೂರು ಹೊರಿಸಿದರು. ಹಣ ದುರುಪಯೋಗದ ಆರೋಪ ಮಾಡಿದರು. ಮೂಗರ್ಜಿ ಬರೆದರು. ಇಲಾಖಾ ತನಿಖೆಗೂ ಶಿಫಾರಸು ಮಾಡಿದರು. ( ಈ ಎಲ್ಲದರ ವಿವರಣೆ ”ಅಪ್ಪ ಅಂದ್ರೆ ಆಕಾಶ” ಪುಸ್ತಕದಲ್ಲಿದೆ. ”ಅಪ್ಪ ಅಂದ್ರೆ ಆಕಾಶ”- ನಮ್ಮ ಅಪ್ಪನ ಬದುಕಿನದ್ದೇ ಕಥೆ) ಮುಂದೊಮ್ಮೆ ತನಿಖೆ ನಡೆಯಿತು. ಆದರೆ ಯಾವುದೇ ಆರೋಪವೂ ಸಾಬೀತಾಗಲಿಲ್ಲ.

ಅಪ್ಪನ ಸಹೋದ್ಯೋಗಿಗಳು, ಬಾಸ್ ಆಗಿದ್ದವರು ಆಗ ಕೂಡ ಸುಮ್ಮನಿರಲಿಲ್ಲ. ಕಿರುಕುಳ ಮುಂದುವರಿಸಿದರು. ಮತ್ತೆ ಮತ್ತೆ ಇಲಾಖಾ ತನಿಖೆ ಮಾಡಿಸಿದರು. ನಂತರ ಡೆಪ್ಯುಟೇಷನ್ ಹೆಸರಿನಲ್ಲಿ ಆರಾರು ತಿಂಗಳಿಗೆ ವರ್ಗ ಮಾಡುತ್ತಾ ಹೋದರು. ಅಪ್ಪ ಆಗ ಕೂಡ ಯಾರನ್ನೂ ದೂರಲಿಲ್ಲ. ಯಾರ ಮೇಲೂ ದ್ವೇಷ ಸಾಧಿಸಲಿಲ್ಲ. ”ನಾನು ತಪ್ಪು ಮಾಡಿಲ್ಲ. ಹಾಗಾಗಿ ಯಾರಿಗೂ ಹೆದರಬೇಕಿಲ್ಲ ” ಅಂದರು.

ನಮ್ಮ ಅಪ್ಪನಿಗೆ ಬಗೆಬಗೆಯಲ್ಲಿ ಕಿರಿಕಿರಿ ಕೊಟ್ಟಿದ್ದರಲ್ಲ? ಆ ಅಧಿಕಾರಿ ಇವಾಗ ಬೆಂಗಳೂರಿನಲ್ಲಿ ಇದ್ದಾರೆ. ಆತ ಕ್ಲಾಸ್ ಒನ್ ಆಫೀಸರ್. ಒಂದು ಕಾರ್ಯಕ್ರಮದಲ್ಲಿ ಎದುರಾದವರು- ” ಮಣಿಕಾಂತ್ ಅವರೇ, ನಮಸ್ತೆ. ನಾನು ನಿಮ್ಮ ಅಭಿಮಾನಿ” ಅಂದರು!! ೨೨ ವರ್ಷಗಳ ಹಿಂದಷ್ಟೇ-ಅದೂ ನಾಲ್ಕೈದು ಬಾರಿ ಮಾತ್ರ ಅವರು ನನ್ನನ್ನು ನೋಡಿದ್ದರು. ಅಷ್ಟೆ. ಹಾಗಾಗಿ ಅವರಿಗೆ ನನ್ನ ಗುರುತು ಸಿಕ್ಕಲಿಲ್ಲ. ಆದರೆ ನನಗೆ ಹಳೆಯದೆಲ್ಲಾ ಚೆನ್ನಾಗಿ ನೆನಪಿತ್ತು. ಅಪ್ಪನ ಬಳಿ ಹೋಗಿ ಎಲ್ಲವನ್ನೂ ವಿವರಿಸಿದೆ. ”ಮತ್ತೊಮ್ಮೆ ಆತ ಸಿಕ್ಕಾಗ ಚೆನ್ನಾಗಿ ಉಗಿತೀನಿ. ಅವನನ್ನು ಸುಮ್ಮನೆ ಬಿಡಲ್ಲ. ಎಷ್ಟೊಂದು ಕಣ್ಣೀರು ಹಾಕಿಸಿದ ಅಲ್ವಾ ನಮ್ಮಿಂದ?” ಅಂತೆಲ್ಲಾ ಹೇಳಿದೆ.

ಎರಡು ನಿಮಿಷ ಸುಮ್ಮನಿದ್ದು ಅಪ್ಪ ಹೇಳಿದರು: ”ಹಳೆಯದು ಹಳೆಯ ಕಥೆ. ಅದನ್ನು ಮರೆತುಬಿಡು. ಇನ್ನೊಬ್ಬರನ್ನು ಬೈದು ನೀನು ಸಾಧಿಸುವುದೇನು? ನೆನಪಿರಲಿ: ಆತ ನಿನಗಿಂತ ಹಿರಿಯ. ಮತ್ತೊಮ್ಮೆ ಅವರು ಎದುರಾದರೆ, ಗೌರವದಿಂದ ಮಾತಾಡಿಸಿ ಬಾ… ‘

‍ಲೇಖಕರು Admin

24 July, 2016

4 Comments

  1. Rajashekhar Joginmane

    ಅದೇ ನಿಜವಾದ ಆಕಾಶ!!

  2. ಬೊಳುವಾರು

    ಅದಕ್ಕೇ ನೀವು ನಮ್ಮೆಲ್ಲರ ಕಣ್ಮಣಿ

  3. Shama, Nandibetta

    ಅಂಥ ಅಪ್ಪನ ಮಗ ಆಗಿರುವದರಿಂದಲೇ ಬರಿಗೈಯಲ್ಲಿ ಊರು ಬಿಟ್ಟು ಬರುವ ನನ್ನಂಥ ಮಕ್ಕಳಿಗೆ ಸುಲಭವಾಗಿ ಆಕಾಶದಂಥ ಅಪ್ಪ ಆಗ್ತೀರಿ. ಭವಿಷ್ಯಕ್ಕೆ ನಕ್ಷತ್ರಗಳ ಬೆಳಕಿನ ಲೋಕ ತೋರಿಸ್ತೀರಿ. ನಾವು ನೆಲೆಯಾದ ಮೇಲೂ ನೀವೇ ಕರೆದು “ಬಿಡುವಾಗಿದ್ರೆ ಆಫೀಸ್ ಬಳಿ ಬಾ, ಮಸಾಲೆ ದೋಸೆ ಕೊಡ್ಸಿ ಕಾಫಿ ಕುಡ್ಸಿ ಕಳಿಸ್ತೀನಿ” ಅಂತೀರಿ. “ಮಣಿ”ದೆ ನಿಮ್ಮ ಅಪ್ಪನಿಗೆ, ಮತ್ತು ‘ಅಪ್ಪ’ನಂಥ ನಿಮಗೆ.

  4. ವಿಹಿ ವಡವಡಗಿ

    ನಿಮ್ಮ ಅಪ್ಪ ನನ್ನ ಅಪ್ಪ ಒಂದೇ ಸರ್ ಇವತ್ತಿಗು ನಮ್ಮ ತಂದೆ ತುಂಬ ಕಷ್ಪ ಪಡ್ತಿದಾರೆ ನಾನು ಅಂತ ಜನರ ಮೇಲೆ ಸಿಟ್ಟಾಗಿ ಮಾತಾಡಿದರೆ ಬೈಯ್ಯಲು ಕೂಡ ಬಿಡರು ಧನ್ಯವಾದ ಸರ್ ನಿಮ್ಮನ್ನು ಒಮ್ಮೆ ಭೇಟಿಯಾಗುವ ಆಸೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading