
ಚಂದ್ರಶೇಖರ ಐಜೂರು
ಅನಂತಮೂರ್ತಿಯವರ ‘ಮೌನಿ’ ನಾನು ತೀವ್ರವಾಗಿ ಇಷ್ಟಪಡುವ ಕಥೆಗಳಲ್ಲೊಂದು. ‘ಮೌನಿ’ಯನ್ನು ಹತ್ತಾರು ಸಲ ಓದಿ ಇದೇ ಹೆಸರಿನಲ್ಲಿ ಬಂದ ಲಿಂಗದೇವರು ನಿರ್ದೇಶನದ ‘ಮೌನಿ’ ಸಿನಿಮಾವನ್ನು ಮೂರ್ನಾಲ್ಕು ಸಲ ನೋಡಿದ್ದಕ್ಕೋ ಏನೋ ‘ಮೌನಿ’ ನನ್ನೊಳಗೆ ಇನ್ನೂ ಅಳಿಯದೆ ಉಳಿದುಬಿಟ್ಟಿದೆ. ಕತೆಯಲ್ಲಿ ಬರುವ ಕುಪ್ಪಣ್ಣಭಟ್ಟರೇ ಇಲ್ಲಿ ‘ಮೌನಿ’. ಕತೆಯಲ್ಲಿ ಇನ್ನೊಂದು ಮುಖ್ಯಪಾತ್ರವಿದೆ ಅಪ್ಪಣ್ಣಭಟ್ಟರದು. ಕುಪ್ಪಣ್ಣಭಟ್ಟರ ತದ್ವಿರುದ್ಧದಂತಹ ವ್ಯಕ್ತಿತ್ವ ಹೊಂದಿರುವ ಅಪ್ಪಣ್ಣಭಟ್ಟ ಮಹಾವಾಚಾಳಿ, ಕೆಡುಕಿನ ಸ್ವಭಾವದವನು. ಇಡೀ ಕತೆಯುದ್ದಕ್ಕೂ ಈ ಅಪ್ಪಣ್ಣಭಟ್ಟ ತನ್ನ ವ್ಯಂಗ್ಯ ಕುಹಕ ಲೇವಡಿ ಮಾತುಗಳಿಂದ ಕುಪ್ಪಣ್ಣಭಟ್ಟರನ್ನು ಸದಾ ಹಣಿಯಲು ಹವಣಿಸುತ್ತಲೇ ಇರುವ ಮನುಷ್ಯ. ಇವರ ನಡುವೆಯೇ ಗೋಪಾಲ ಕಮ್ತಿಯದೊಂದು ಪುಟ್ಟ ಕಿರಾಣಿ ಅಂಗಡಿಯೊಂದಿದೆ. ಈ ಗೋಪಾಲ ಕಮ್ತಿಯ ಬಳಿ ಕುಪ್ಪಣ್ಣಭಟ್ಟರ ಸಾಲವಿದೆ. ಹಳೆ ಸಾಲವನ್ನೆಲ್ಲ ಒಂದೇ ಏಟಿಗೆ ತೀರಿಸಿ ಹೊಸ ಅಡಿಕೆ ವ್ಯಾಪಾರ ಮಾಡಲು ಕುಪ್ಪಣ್ಣಭಟ್ಟರು ತಮ್ಮ ಹೆಂಡತಿಯ ಎಲ್ಲ ವಡವೆಯನ್ನು ಬ್ಯಾಂಕುಪಾಲು ಮಾಡಿದ್ದಾರೆ. ಕುಪ್ಪಣ್ಣಭಟ್ಟರ ಮಗಳ ಮದುವೆ ಮುರಿದು ಬಿದ್ದಿದೆ. ಬಹುವಚನದಲ್ಲಿ ಸಾಲಕೊಟ್ಟವರು ಈಗ ಏಕವಚನಕ್ಕಿಳಿದಿದ್ದಾರೆ.
ಹಳೆಯ ಸಾಲಗಾರರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕುಪ್ಪಣ್ಣಭಟ್ಟರು ಹೊಸ ಸಾಲ ಮಾಡುತ್ತಲೇ ಇದ್ದಾರೆ. ಇಂಥ ಹೊತ್ತಲ್ಲೇ ಶ್ರೀನರಸಿಂಹದೇವರ ಮಠದ ವಟುಗಳು ಅರ್ಥಾತ್ ಮಠದ ಏಜೆಂಟರು ಮಠದ ಬಾಕಿ ವಸೂಲಿಗಾಗಿ ಕುಪ್ಪಣ್ಣಭಟ್ಟರ ಬೆನ್ನುಬಿದ್ದಿದ್ದಾರೆ. ಅಪ್ಪಣ್ಣಭಟ್ಟರ ಗೇಲಿ, ಕಮ್ತಿ, ಮತ್ತಿತರ ಸಾಲಗಾರರಿಂದ ಪಾರಾಗುವ ದಾರಿಗಳಿಗಾಗಿ ಹುಡುಕಿ ಸೋತಿರುವ ಕುಪ್ಪಣ್ಣಭಟ್ಟರ ಮೇಲೆ ಈ ಮಠದ ಏಜೆಂಟರ ಕಾಟ ದಿನದಿಂದ ದಿನಕ್ಕೆ ತೀವ್ರವಾಗುತ್ತಲೇ ಹೋಗುತ್ತದೆ. ‘ನೀವೆಂಥಾ ಬ್ರಾಹ್ಮಣ? ಮಠಕ್ಕೆ ದ್ರೋಹ ಮಾಡಲು ನಾಚಿಕೆಯಾಗುವುದಿಲ್ಲವೇ? ಮಠದ ಬಾಕಿ ತೀರಿಸುವಿರೋ ಇಲ್ಲ ನಿಮ್ಮ ಮನೆ ಜಪ್ತಿಮಾಡಿಕೊಳ್ಳುವುದೋ? ಮಠದ, ಸ್ವಾಮೀಜಿಗಳ ಶಾಪ ನಿಮ್ಮನ್ನು ತಟ್ಟದೇ ಬಿಡುವುದಿಲ್ಲ…’ ಇತ್ಯಾದಿ ಮಾತುಗಳಿಂದ ಮಠದ ಏಜೆಂಟರು ಈಗಾಗಲೇ ಅರ್ಧ ಹೆಣವಾಗಿರುವ ಕುಪ್ಪಣ್ಣಭಟ್ಟರನ್ನು ಪೂರ್ತಿ ಹೆಣವಾಗಿಸಲು ನೋಡುತ್ತಾರೆ.
‘ಮಠದ ಸ್ವಾಮಿಗಳನ್ನು ದಿವ್ಯಜ್ಞಾನಿಗಳು ಎಂದು ತಿಳಿದಿದ್ದೆ! ಕುಪ್ಪಣ್ಣಭಟ್ಟನ ಇವತ್ತಿನ ಸ್ಥಿತಿ ನಿಮ್ಮ ಸ್ವಾಮೀಜಿಯ ದಿವ್ಯಜ್ಞಾನದ ಕಣ್ಣಿಗೆ ಇನ್ನು ಬಿದ್ದಿಲ್ಲವೇ? ನನ್ನ ಪರಿಸ್ಥಿತಿ ನೋಡಿಯೂ ಮಠದ ಬಾಕಿ ಹಣಕ್ಕಾಗಿ ನಿಮ್ಮನ್ನು ಅವರು ಕಳಿಸುತ್ತಾರೆಂದರೆ…’ ಕುಪ್ಪಣ್ಣಭಟ್ಟರ ಮಾತು ನಿಲ್ಲುತ್ತದೆ. ಮಠದ ಏಜೆಂಟರು ಕುಪ್ಪಣ್ಣಭಟ್ಟರನ್ನು ಕೊಲ್ಲುವಂತೆ ನೋಡಿ ಅಲ್ಲಿಂದ ದುರುದುರು ನಡೆದುಹೋಗುತ್ತಾರೆ.
ಮತ್ತೆ ಅಪ್ಪಣ್ಣಭಟ್ಟರ ವ್ಯಂಗ್ಯ, ಕಮ್ತಿ ತನ್ನ ಸಾಲಕ್ಕಾಗಿ ಕುಪ್ಪಣ್ಣಭಟ್ಟರ ಮನೆಮುಂದೆ ಬಂದು ಚಂಡಿಮಾಡುವುದು ಮುಂದುವರೆಯುತ್ತದೆ. ಕುಪ್ಪಣ್ಣಭಟ್ಟರು ಮಾತ್ರ ‘ಮೌನಿ’.
‘ಮಠದ ಸ್ವಾಮಿಗಳನ್ನು ದಿವ್ಯಜ್ಞಾನಿಗಳು ಎಂದು ತಿಳಿದಿದ್ದೆ!’ ಎಂಬ ಕುಪ್ಪಣ್ಣಭಟ್ಟರ ಮಾತುಗಳು ಯಾಕೋ ಗೊತ್ತಿಲ್ಲ ನನ್ನೊಳಗೆ ತೀವ್ರವಾಗಿ ಕೂತುಬಿಟ್ಟಿದೆ.





ಮೌನ