ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಗ ಮತ್ತು ಕಿಟಕಿ

ಫೈಜ್ನಟ್ರಾಜ್, ಸಂತೆಬೆನ್ನೂರು

ದಿನಾಲು ಅಷ್ಟೇ
ಕಿಟಕಿ ಗಾಜಿನ ಸರಳಿಗೆ ಬಂದು ಕೂತ
ತಿಳಿಕಂದು ಬಣ್ಣದ ಚಿಟಗುಬ್ಬಿ
ಗಾಜಿಗೆ ನಿರಂತರ ಕುಕ್ಕಿ ಕೊಕ್ಕು ನೋಯಿಸಿಕೊಳ್ಳುತ್ತದೆ!
ಎಡೆಬಿಡದೇ ಬಡಿವ ರೆಕ್ಕೆ
ಕುಕ್ಕುತ್ತಲೇ ಹಾಕುವ ಶಿಳ್ಳೆಯಂತಹ ಕೇಕೆ
ಹಾರಿ ಹಾರಿ ಏನನ್ನೋ ಹುಡುಕುತ್ತದೆ!

ಎಷ್ಟು ಸಾರಿ ಸಂಧಾನ ಪರ್ವ ತಿರು ತಿರುವಿ
ಹಾಕಿದರೂ
ಯುದ್ಧ ಪರ್ವಕ್ಕೆ ದಾಟಲಾಗುತ್ತಿಲ್ಲ;
ಹಕ್ಕಿಕೊಕ್ಕಿನ ಶಬುದ ಕಿವಿಗೆ
ಭೀಮಗದಾಲಾಪ!

ಬೆಳ್ಳಂಬೆಳಿಗ್ಗೆಯ ದಿನಂಪ್ರತಿಯ
ಚರಿತಾಕೃತಕೃತ್ಯವಿದು.
ಸುತ್ತಲ ಮನುಜ ಭಾಷೆಯರಿಯದೇ
ಅಗಣಿತ ಬಂಧಗಳಿಗೆ ತಿಲಾಂಜಲಿಯಿತ್ತ-
ವ  ನಾನು; ಹಕ್ಕಿ ಭಾಷೆ ಅರಿತೇನೇ?
ಹಿಡಿಯ ಹೋದರೆ ಹಕ್ಕಿ ಪರಾರಿ
ಸುಮ್ಮನಿದ್ದರೆ ನಿಲ್ಲದ ಕೊಕ್ಕ ಅವಾಜ್!

ದೂರದ ಊರಲ್ಲಿ ಓದೋ ಮಗ   ಒಮ್ಮೆ ಮನೆಗೆ
ಬಂದ
ತಿರುವಿ ಹಾಕೋ ಮಹಾಭಾರತ
ಅವನೂ
ನೋಡುವಾಗಲೇ ಹಕ್ಕಿ ಹಾಜರು;
ಅಚ್ಚರಿಪಟ್ಟು ಕಿಟಕಿ ಗಾಜ ಸರಿಸಿ ಪುಟ್ಟ ಬಟ್ಟಲಲ್ಲಿ
ಒಂದಿಷ್ಟು ಕಾಳು ಹಿಡಿದ,ಹಕ್ಕಿ ಬಟ್ಟಲು ಕುಕ್ಕಿ
ನಾಲ್ಕು ಕಾಳು ತಿಂದು ಹಾರಿ ಹೋಯಿತು!

ಅಯ್ಯೋ,
ಒಳಕುಳಿತ ನಾನು ಗಾಜು ಸರಿಸಲಿಲ್ಲ
ಹೊರಗಿದ್ದ ಹಕ್ಕಿ ಒಳ ಬರಲಿಲ್ಲ
ಮಗ ತೆರೆದಿದ್ದು ಕಿಟಕಿ ಗಾಜೋ, ನನ್ನ
ಕಣ್ಣೋ…ಗೊತ್ತಿಲ್ಲ…
ನನ್ನಯ ಹಕ್ಕಿ ನಾಳೆಯೂ ಬಂದೀತೋ…ಇಲ್ಲವೋ
ಕಾಯುತ್ತಿದ್ದೇನೆ!

‍ಲೇಖಕರು avadhi

6 September, 2019

2 Comments

  1. T S SHRAVANA KUMARI

    ತುಂಬಾ ಚೆನ್ನಾಗಿದೆ

  2. Parameshwarappa Kudari

    ಸೊಗಸಾಗಿದೆ ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading