ಮಗು ಬೇಕು ಮಗೂ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

‘ಇವರ ಹೆಂಡತಿ ಅವರಲ್ಲ ಬಿಡಿ…ʼ

‘ನೀನು ಏನು ಹೇಳ್ತಿರೋದು ನಿನಗೆ ಸರಿಯಾಗ್ಗೊತ್ತಾ? ಹೋಂ ಸ್ಟಡಿ ನಾನೇ ಮಾಡಿದ್ದುʼ.

‘ಇರಬಹುದು. ಆದರೆ ಈ ಫೊಟೋದಲ್ಲಿ ಇರೋ ಈ ಹೆಂಗಸು ಇವರ ಹೆಂಡತಿಯಲ್ಲ. ನನಗೆ ಇವರ ಹೆಂಡತಿ ಯಾರು ಅಂತ ಗೊತ್ತು. ಅವರು ಮೈಸೂರಿನಲ್ಲಿದ್ದಾರೆʼ.

ಈ ಸಂಭಾಷಣೆ ಆದಾಗ ಇದರ ಪರಿಣಾಮ ಏನಾಗಬಹುದು ಎಂಬ ಕಲ್ಪನೆ ನನಗಿರಲಿಲ್ಲ. ಆಗ ನಾನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಸಮಾಜಕಾರ್ಯ ವಿದ್ಯಾಭ್ಯಾಸದ ಎರಡನೇ ವರ್ಷದಲ್ಲಿದ್ದೆ (೧೯೮೮-೮೯). ಸಮಾಜಕಾರ್ಯ ಪ್ರಶಿಕ್ಷಣದ ಅಂಗವಾಗಿ ಪ್ರತಿ ವಾರ ಎರಡು ದಿನ ಸಮಾಜಕಾರ್ಯ ಕ್ಷೇತ್ರಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಮೊದಲನೇ ವರ್ಷ ರಾಜ್ಯ ಸರ್ಕಾರದ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವೈವಾಹಿಕ ಆಪ್ತ ಸಮಾಲೋಚನೆ ವಿಭಾಗದಲ್ಲಿ ಕೆಲಸ ಮಾಡಿದ್ದೆ. ಎರಡನೇ ವರ್ಷ ಬೆಂಗಳೂರಿನ ಬನಶಂಕರಿಯಲ್ಲಿರುವ ‘ಮಾತೃಛಾಯಾʼ – ಶಿಶು ರಕ್ಷಣೆ ಮತ್ತು ದತ್ತು ಕೇಂದ್ರದಲ್ಲಿದ್ದೆ. ಸಮಾಜಕಾರ್ಯ ಪ್ರಶಿಕ್ಷಣದ ಮೊದಲನೆ ವರ್ಷಕ್ಕೆ ಆಗ ತಾನೆ ಸೇರಿದ್ದ ಕಲ್ಪನಾ ಇಲ್ಲಿ ನನ್ನ ಸಹವಿದ್ಯಾರ್ಥಿನಿ.

ಈ ಮೇಲಿನ ಸಂಭಾಷಣೆ ಆದದ್ದು ನಾವು ಮಾತೃಛಾಯಾಕ್ಕೆ ಹೋದ ಮೊದಲ ದಿನ! ಕಾಲೇಜಿನವರು ಕೊಟ್ಟಿದ್ದ ಪರಿಚಯ ಪತ್ರವನ್ನು ಆ ಸಂಸ್ಥೆಯ ಮ್ಯಾನೇಜರ್‌ ಆಗಿದ್ದ ಪದ್ಮಾಸುಬ್ಬಯ್ಯನವರಿಗೆ ಕೊಟ್ಟೆವು. ಅವರು ಸಂಸ್ಥೆಯ ಆರಂಭ, ಗುರಿ ಉದ್ದೇಶಗಳನ್ನು ಕುರಿತು ತಿಳಿಸಿ ತಮ್ಮ ಚಟುವಟಿಕೆಗಳಲ್ಲಿ ಒಂದಾದ ಅನಾಥ ಮಕ್ಕಳನ್ನು ಸೂಕ್ತ ಕುಟುಂಬಗಳಿಗೆ ದತ್ತು ನೀಡುವ ಪ್ರಕ್ರಿಯೆಗಳನ್ನು ಅರಿತುಕೊಳ್ಳಬೇಕೆಂದು ಹೇಳಿ, ತಮ್ಮ ಹೆಚ್ಚಿನ ಒತ್ತು ಭಾರತೀಯ ಕುಟುಂಬಗಳಲ್ಲೇ ಅನಾಥ ಮಕ್ಕಳಿಗೆ ಪೋಷಕರನ್ನು ಕಂಡುಕೊಳ್ಳುವುದು ಎಂದೂ ಹೇಳಿದರು. ಸಂಸ್ಥೆಯಲ್ಲಿ ದತ್ತು ಪ್ರಕ್ರಿಯೆಗಳನ್ನು ಸಂಯೋಜಿಸುತ್ತಿದ್ದ ಫ್ರೀಡಾ ಕುಮಾರ್‌ ಅವರೊಡನೆ ನಮ್ಮನ್ನು ಕಳಿಸಿದರು. 

ಫ್ರೀಡಾ ದತ್ತು ಪ್ರಕ್ರಿಯೆಗಳನ್ನು ವಿವರಿಸುತ್ತಾ, ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಸಂಸ್ಥೆಯಿಂದ ಮಕ್ಕಳನ್ನು ದತ್ತು ಪಡೆದಿರುವ ಕೆಲವು ದಂಪತಿಗಳ ಛಾಯಾಚಿತ್ರಗಳನ್ನು ಪ್ರಾಸಂಗಿಕವಾಗಿ ತೋರಿಸಿದರು. ಆಗಲೇ ನಾನು ನಮಗೆ ತೋರಿಸಿದ ದತ್ತು ಪಡೆದ ಮಗಳೊಂದಿಗೆ ಇರುವ ಒಂದು ದಂಪತಿಯ ಬಗ್ಗೆ ಹೇಳಿದ್ದು, ‘…ಆಕೆ ಅವರ ಹೆಂಡತಿಯಲ್ಲ’. 

‘ಹಾಗಾದರೆ ಅವರ ಹೆಂಡತಿ ಯಾರು, ಬೇರೆ ಯಾರು ಅಂತ ನಿನಗೇನು ಗೊತ್ತು?ʼ ಕಲ್ಪನಾ ಕೇಳಿದ್ದಳು. ನನಗೆ ಗೊತ್ತಿದ್ದ ಕೆಲವು ಸಂಗತಿಗಳನ್ನು ನಾನೇನೋ ದೊಡ್ಡ ಹೀರೋ ಎನ್ನುವಂತೆ ಅಥವಾ ಪತ್ತೇದಾರನಂತೆ ಹೇಳಿದ್ದೆ. 

ಮರು ವಾರ ಕ್ಷೇತ್ರಕಾರ್ಯದ ಭೇಟಿಗೆ ಹೋದಾಗ ಪದ್ಮಾ ಸುಬ್ಬಯ್ಯನವರು ನಮ್ಮನ್ನು ಕಂಡ ಕೂಡಲೇ ತಮ್ಮ ಕೋಣೆಗೆ ಕರೆಸಿ  ಕೇಳಿದ ಮೊದಲ ಪ್ರಶ್ನೆಯೇ, ‘ನಿನಗೆ ಆ ವ್ಯಕ್ತಿ ಹೇಗೆ ಗೊತ್ತು. ಅದು ಹೇಗೆ  ಅಷ್ಟು ಖಡಾಖಂಡಿತವಾಗಿ ಹೇಳುತ್ತೀಯ ಆ ಪೋಟೋದಲ್ಲಿರುವ ಮಹಿಳೆ ಅವರ ಹೆಂಡತಿಯಲ್ಲ ಎಂದು?ʼ 

ಅವರ ಪ್ರಶ್ನೆಗೆ ನನಗೆ ತಿಳಿದಿರುವುದನ್ನು ಹೇಳಿಬಿಡಲು ನಾನು ಮುಂದುವರೆದಂತೆ, ವಿಚಾರ ಯಾಕೆ ಅಷ್ಟೊಂದು ಜಟಿಲವಾದದ್ದು ಎಂದು ಅರಿವಾಗತೊಡಗಿತು. ನಾನೇನೋ ಸುಲಭವಾಗಿ ಹೇಳಿಬಿಟ್ಟೆ, ಫೋಟೋದಲ್ಲಿರುವ ಆ ವ್ಯಕ್ತಿಯ ಹೆಂಡತಿ ಕಾಲೇಜಿನಲ್ಲಿ ನನಗೆ ಶಿಕ್ಷಕಿಯಾಗಿದ್ದರು. ಅವರಿಗೊಬ್ಬಳು ಶಾಲೆ ಕಲಿಯುವ ಮಗಳಿದ್ದಾಳೆ. ಸಾಹಿತ್ಯ ವಲಯದಲ್ಲಿ ಆಕೆಯ ಗಂಡ ಬಹಳ ಪ್ರಸಿದ್ಧರಾದ ವ್ಯಕ್ತಿ. ಹಲವಾರು ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಕಾರ್ಯಕ್ರಮಗಳಲ್ಲಿ, ನಾಟಕಗಳಲ್ಲಿ ಭಾಗವಹಿಸುತ್ತಿದ್ದರು.

ಅವರ ಅನೇಕ ಕತೆಗಳು, ನಾಟಕಗಳು, ಲೇಖನಗಳು ಸಾಕಷ್ಟು ಜನಪ್ರಿಯ. ಅವರು ದೆಹಲಿಯಲ್ಲಿದ್ದರು. ಆಮೇಲೆ ಬೆಂಗಳೂರಿಗೆ ಬಂದು ಇಲ್ಲಿಯೇ ಇದ್ದಾರೆ. ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಒಂದು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸಮಾಡುತ್ತಿದ್ದರು ಎಂದೆಲ್ಲಾ ನನಗೆ ತಿಳಿದಿರುವುದನ್ನೆಲ್ಲಾ ಪಟಪಟ ವದರಿಬಿಟ್ಟೆ. ಪದ್ಮಾ ಮೇಡಂ ಸ್ವಲ್ಪ ಚಿಂತೆಗೀಡಾದವರಂತೆ ಕಂಡರು. ಮತ್ತೊಮ್ಮೆ ಆ ದಂಪತಿಗಳ ಛಾಯಾಚಿತ್ರ ತರಿಸಿ ನನ್ನ ಮಾತನ್ನು ಖಚಿತಪಡಿಸಿಕೊಂಡರು. ಫ್ರೀಡಾ ಅದನ್ನೆಲ್ಲಾ ಮೌನವಾಗಿ ನೋಡುತ್ತಿದ್ದರು. 

ಅಲ್ಲಿ ಮಾತನಾಡಿದ ವಿಚಾರಗಳನ್ನು ತಾನು ಹೇಳುವವರೆಗೂ ಬೇರೆಲ್ಲಿಯೂ ಹೇಳಬಾರದೆಂದು ಮೇಡಂ ತಾಕೀತು ಮಾಡಿ ಕಳುಹಿಸಿದರು. ಅವರೂ ಮತ್ತು ಫ್ರೀಡಾ ಬಹಳ ಹೊತ್ತು ಮಾತನಾಡುತ್ತಿದ್ದರು. 

ಯಾಕೆ ಹೇಳಬಾರದು, ಏನಾಗಿದೆ ಈ ವಿಚಾರದಲ್ಲಿ ? ಆ ಪ್ರಸಿದ್ಧ ಸಾಹಿತಿ ತನ್ನ ಮೊದಲ ಹೆಂಡತಿಯಿಂದ ದೂರವಾಗಿರುವರೇನು, ಹಾಗಾದರೆ ಇನ್ನೊಬ್ಬರನ್ನು ಮದುವೆಯಾಗಿರಬಹುದು, ಮತ್ತು ಈಗ ಮಗುವೊಂದನ್ನು ದತ್ತು ತೆಗೆದುಕೊಂಡಿರಬಹುದು ಎಂದು ನಾನು ಸರಳವಾಗಿ ಯೋಚಿಸುತ್ತಿದ್ದೆ. ಮೇಡಂ ಅವರೊಡನೆ ಮಾತನಾಡಿ ಹೊರಬಂದ ಫ್ರೀಡಾ ಬಹಳ ಗಂಭೀರವಾಗಿದ್ದರು. ನನ್ನನ್ನ ಮತ್ತೆ ಕರೆದು ಆ ಪ್ರಶ್ನಿತ ದಂಪತಿಗಳ ಫೈಲ್‌ ತೆಗೆದುಕೊಂಡರು. ಆ ಕಡತದಲ್ಲಿ ಯಾಗಲಿ, ಅವರು ಕೊಟ್ಟಿದ್ದ ವಿವರಗಳಲ್ಲಿಯಾಗಲಿ ಎಲ್ಲಿಯೂ ಆತನಿಗೆ ಈ ಮೊದಲ ವಿವಾಹವಾಗಿರುವ ಬಗ್ಗೆ, ಅವರಿಗೆ ಈ ಮೊದಲೇ ಒಂದು ಮಗಳಿರುವ ಬಗ್ಗೆ ಏನೊಂದು ವಿಚಾರವೂ ಇರಲಿಲ್ಲ. ಆದರೆ ಆ ದತ್ತು ಪ್ರಕ್ರಿಯೆಗೆ ಬೇಕಾದ ಇನ್ನೆಲ್ಲ ಅಗತ್ಯ ದಾಖಲೆಗಳು ಇದ್ದವು.

ವಿವಾಹ ಆಹ್ವಾನಪತ್ರಿಕೆ, ಛಾಯಾಚಿತ್ರಗಳು, ವಿವಾಹ ಪ್ರಮಾಣಪತ್ರ, ಬೆಂಗಳೂರಿನ ಮನೆಯಲ್ಲಿ ವಾಸದ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಇತ್ಯಾದಿ ಎಲ್ಲ ಇದ್ದವು. ಜೊತೆಯಲ್ಲಿ ಕುಟುಂಬ ಅಧ್ಯಯನದ ವರದಿ, ಮಿಗಿಲಾಗಿ ಅವರಿಗೆ ದತ್ತು ಕೊಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳುವ ಕಾಗದಗಳು, ಸಾಹಿತ್ಯ ಲೋಕದ ಕೆಲವು ಹೆಸರಾಂತರಿಂದ ಶಿಫಾರಸ್ಸು ಪತ್ರಗಳು ಎಲ್ಲ ಇದ್ದವು. ಈಗೇನು ಹೇಳುತ್ತೀಯ ಎನ್ನುವ ಫ್ರೀಡಾ ಅವರ ನೋಟ. ನನಗೆ ಏನು ಹೇಳುವುದೆನ್ನುವ ಕಸಿವಿಸಿ.   

ಅಲ್ಲಿಗೆ ಈ ವಿಚಾರ ಮುಗಿಯಿತು ಎಂದುಕೊಂಡು ನಾನೂ ಸುಮ್ಮನಾಗಿದ್ದೆ. ಆದರೆ ಮುಂದಿನ ಎರಡು ಮೂರು ತಿಂಗಳಲ್ಲೇ ಪದ್ಮಾ ಸುಬ್ಬಯ್ಯ ಒಂದು ದಿನ ತುರ್ತಾಗಿ ಮಾತೃಛಾಯಾಕ್ಕೆ ಬರಬೇಕೆಂದು ಕರೆ ಕಳಿಸಿದರು. 

ನನ್ನ ಗುರುತಿಸುವಿಕೆ ಮತ್ತು ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿದ್ದ ವ್ಯಕ್ತಿಯ ಹೆಂಡತಿ ತಮ್ಮ ದತ್ತು ಪುತ್ರಿಯೊಡನೆ ಮಾತೃಛಾಯಾಕ್ಕೆ ಬಂದಿದ್ದರು. ಈಗ ಷುರುವಾಗಿತ್ತು ನಿಜವಾದ ವಿವಾದ! ಆ ವ್ಯಕ್ತಿ ಈ ಇಬ್ಬರನ್ನೂ ಬಿಟ್ಟುಬಿಟ್ಟಂತೆ ಆಗಿದೆ. ಆತ ತನ್ನ ಮೊದಲ ಹೆಂಡತಿಯ ಮನೆಗೆ ಹೋಗುತ್ತಿದ್ದಾರೆ. ಈ ಎರಡನೇ ಹೆಂಡತಿಗೆ ಆ ಮನುಷ್ಯನಿಗೆ ಮೊದಲೇ ಮದುವೆಯಾಗಿದ್ದ ವಿಚಾರ ತಿಳಿದಿರಲಿಲ್ಲವಂತೆ!.     

***

ಇದೆಲ್ಲಾ ನೆನಪಿಗೆ ಬರಲು ಕಾರಣ ಕಳೆದ ಎರಡು ಮೂರು ತಿಂಗಳಿಂದ (೨೦೨೧) ಸಾಮಾಜಿಕ ಮಾಧ್ಯಮಗಳಲ್ಲಿ, ಮುದ್ರಣ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು. ಕೋವಿಡ್‌ನಿಂದಾಗಿ ನೂರಾರು ಮಕ್ಕಳು ಅನಾಥರಾಗಿದ್ದಾರೆ, ಅವರನ್ನು ಸಾಕಿಕೊಳ್ಳುವ, ದತ್ತು ತೆಗೆದುಕೊಳ್ಳುವ ವ್ಯಕ್ತಿಗಳು ಮುಂದೆ ಬಂದರೆ ನೀಡಲಾಗುವುದು ಇತ್ಯಾದಿ. ಹಲವು ಧಾರ್ಮಿಕ ಸಂಸ್ಥೆಗಳು, ಮಕ್ಕಳ ಪೋಷಣೆ ಸಂಸ್ಥೆಗಳಂತೂ ಪ್ರಕಟನೆಗಳನ್ನು ಹೊರಡಿಸಿ ಅನಾಥ ಮಕ್ಕಳಿಗೆ ತಾವು ಆಶ್ರಯ ನೀಡುವುದಾಗಿಯೂ ರಾಜ್ಯದ ಯಾವುದೇ ಭಾಗಗಳಿಂದ ಮಕ್ಕಳನ್ನು ತಮ್ಮಲ್ಲಿಗೆ ಕಳುಹಿಸಿಕೊಡಬೇಕೆಂದೂ, ಆಯಾ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸುವುದು ತಮ್ಮ ಜವಾಬ್ದಾರಿಯೆಂದೂ, ಇತ್ಯಾದಿಯಾಗಿ ಘೋಷಿಸಿರುವುದು. 

ನೆನ್ನೆ ಮೊನ್ನೆ ಸರ್ವೋಚ್ಚ ನ್ಯಾಯಾಲಯವೂ ನಿರ್ದೇಶನಗಳನ್ನು ಹೊರಡಿಸಿ ಕೋವಿಡ್‌ನಿಂದಾಗಿ ಅನಾಥರಾಗುವ ಮಕ್ಕಳ ಹಿತದೃಷ್ಟಿಯನ್ನು ಕಾಪಾಡುವ ಜವಾಬ್ದಾರಿ ಸರ್ಕಾರದ್ದು ಎಂದು ಹೇಳಿದೆ (ಜೂನ್‌ ೨೦೨೧). ಮಕ್ಕಳನ್ನು ದತ್ತು ಕೊಡುವುದೇ ಆದರೆ ಅದು ಸಮರ್ಪಕವಾದ ಕಾನೂನು ವಿಧಿವಿಧಾನಗಳಂತೆ ನಡೆಯಬೇಕು, ಯಾರೂ ಮಕ್ಕಳನ್ನು ತಮಗಿಷ್ಟ ಬಂದಂತೆ ಕೊಡುವುದು, ಪಡೆಯುವುದು ಕೂಡದು, ಮಾರಾಟ ಸಾಗಣೆಗೆ ಮಕ್ಕಳು ಬಲಿಯಾಗಬಾರದು ಎಂದು ಎಚ್ಚರಿಸಿದೆ.

ಈ ಹಿಂದೆ ನಮ್ಮ ದೇಶದಲ್ಲಿ ಮತ್ತು ಇನ್ನಿತರ ದೇಶಗಳಲ್ಲೂ ಸಂಭವಿಸಿದ ವಿವಿಧ ರೀತಿಯ ದೊಡ್ಡ ಪ್ರಮಾಣದ ದುರ್ಘಟನೆಗಳು, ವಿಪತ್ತುಗಳು, ಯುದ್ಧ, ಅಂತಃಕಲಹವೇ ಮೊದಲಾದವುಗಳ ಸಂದರ್ಭಗಳಲ್ಲಿ ನೂರಾರು, ಸಾವಿರಾರು ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾದ ಪ್ರಕರಣಗಳು ಇವೆ. ಹಾಗೆಯೇ  ಕೆಲವರು ವ್ಯಕ್ತಿಗತವಾಗಿ ವಿವಿಧ ವಿಷಮ ಪರಿಸ್ಥಿತಿಗಳಲ್ಲಿ ಸಿಲುಕಿ ಕೈಗೊಂಡ ನಿರ್ಧಾರಗಳಿಂದಾಗಿ, ತಾವೇ ಹೆತ್ತ ಮಕ್ಕಳನ್ನು ತೊರೆದು ಹೋಗಿರಬಹುದು. ಇಂತಹ. ಘಟನೆಗಳಿಗೆ ಮಾನವೀಯವಾಗಿ ಸ್ಪಂದಿಸುವ ಮತ್ತು ಮಕ್ಕಳ ಆರೈಕೆಯ ಜವಾಬ್ದಾರಿ ತೆಗೆದುಕೊಳ್ಳುವ ಮನಸ್ಸುಗಳಿಗೆ ಎಂದಿಗೂ ಬರ ಬಂದಿಲ್ಲ. ಅದು ವ್ಯಕ್ತಿಗತವಾಗಿ ಅಥವಾ ಸಾಂಘಿಕವಾಗಿ ಪ್ರತಿಕ್ರಿಯೆಗಳ ರೂಪದಲ್ಲಿ ನಡೆದಿದೆ.

ಕೆಲವು ವ್ಯಕ್ತಿಗಳು ಅನಾಥ ಮಕ್ಕಳನ್ನು ತಮ್ಮ ಮನೆಗಳಿಗೆ ಒಯ್ದಿರಬಹುದು. ಅವು ಆಯಾ ಕುಟುಂಬದ ಮಕ್ಕಳಾಗಿ ಹೋಗಿದ್ದರೆ, ಇನ್ನು ಅನೇಕರು  ತಮಗೆ ಆಶ್ರಯ ಕೊಟ್ಟವರ ಮನೆಯ ಕೆಲಸದಾಳುಗಳಾದವರೂ ಉಂಟು. ಅದರಂತೆಯೇ ಅನಾಥಾಲಯಗಳನ್ನು ತೆರೆದು ಮಕ್ಕಳಿಗೆ ಆ‍ಶ್ರಯ ಕೊಟ್ಟ ಪ್ರಕರಣಗಳೂ ನೂರಾರು. 

ಇಷ್ಟರ ಮೇಲೆ ಸರ್ಕಾರಗಳು ದತ್ತು ಪ್ರಕ್ರಿಯೆಯನ್ನು ಕ್ರಮಬದ್ಧಗೊಳಿಸಲು ಕಾನೂನುಗಳನ್ನು ಜಾರಿ ಮಾಡಿರುವುದನ್ನು ನಾವು ಚರಿತ್ರೆಯಲ್ಲಿ ಓದಿದ್ದೇವೆ. ಪ್ರಾಯಶಃ ಆರಂಭದಲ್ಲಿ ಸರ್ಕಾರ ದತ್ತುವನ್ನು ತನ್ನ ನಿಯಂತ್ರಣದಲ್ಲಿರಿಸಿಕೊಳ್ಳಲು, ರಾಜ ಮಹಾರಾಜರು, ಭೂಮಾಲೀಕರನ್ನು ಅಧೀನರನ್ನಾಗಿಸಲು ಹಾಗೆ ಮಾಡಿತ್ತು ಎನ್ನಬಹುದು. ಭಾರತದಲ್ಲಿ ದತ್ತು ಹೋಗಬಹುದಾದ ಮಕ್ಕಳನ್ನು ಪರಿಚಿತರು ಒಂದು ಕುಟುಂಬದಿಂದ ಇನ್ನೊಂದು ಕುಟುಂಬಕ್ಕೆ ತೆಗೆದುಕೊಳ್ಳುವ ಪದ್ಧತಿ ಸಾಕಷ್ಟು ಕಾಲದಿಂದ ಜಾರಿಯಲ್ಲಿದೆ. ಅದೊಂದು ಸಾರ್ವಜನಿಕ ಸಾಮಾಜಿಕ ಕಾರ್ಯಕ್ರಮವಾಗಿ, ಹತ್ತೂ ಜನರಿಂದ ಒಪ್ಪಿಗೆ ಮತ್ತು ಮನ್ನಣೆಯನ್ನು ಪಡೆಯುವ ಪ್ರಕ್ರಿಯೆ. ಅಂತಹದರಲ್ಲೂ ಹಲವು ತೊಡಕುಗಳು ಆಗಲೂ ಏಳುತ್ತಿದ್ದವು.

ಪುರಾಣಗಳಲ್ಲಿ ಇಂತಹ ಕತೆಗಳನ್ನು  ಓದಿದ್ದೇವಲ್ಲವೆ. ಒಂದಷ್ಟು ಮಕ್ಕಳಿಗೆ ಅನ್ಯಾಯವೂ ಆಗಿರಬಹುದು. ಇಂತಹದನ್ನೆಲ್ಲಾ ಗಮನಕ್ಕೆ ತೆಗೆದುಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿಂತನೆ, ಸಂಶೋಧನೆಗಳು ನಡೆದು, ಮಕ್ಕಳ ಹಿತದೃಷ್ಟಿಯ ಒಡಂಬಡಿಕೆಗಳು, ವಿಧಿವಿಧಾನಗಳು, ನೀತಿ, ಕಾನೂನುಗಳು ಜಾರಿಗೆ ಬಂದಿವೆ. ಅವು ಕಾಲಕಾಲಕ್ಕೆ ಹೆಚ್ಚು ಹೆಚ್ಚು ನಿರ್ದಿಷ್ಟವೂ ಮತ್ತು ಕೆಲವೊಮ್ಮೆ ಜಟಿಲವಾಯಿತೇನೋ ಎನ್ನುವಂತೆಯೂ ಆಗಿವೆ. 

ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ ೨೧ ಬಹಳ ಸ್ಪಷ್ಟವಾಗಿ ಹೇಳುವುದು ‘ದತ್ತು’ ಸದಾಕಾಲಕ್ಕೂ ಮಕ್ಕಳ ಹಿತದೃಷ್ಟಿಯಿಂದಲೇ ಆಗಬೇಕು. ಮಕ್ಕಳ ದತ್ತು ಪ್ರಕ್ರಿಯೆಯನ್ನು ಸೂಕ್ತ ನೀತಿ ನಿಯಮಗಳ ಮೂಲಕ ನಿಯಂತ್ರಿಸಿ, ‘ಪೋಷಕರಿಲ್ಲದ ಮಕ್ಕಳಿಗೆ ಪೋಷಕರನ್ನು ಒದಗಿಸುವ ದತ್ತುʼ ಪ್ರಕ್ರಿಯೆಗಳನ್ನು ಉಸ್ತುವಾರಿ ಮಾಡಬೇಕು ಎಂದೂ ಹೇಳಲಾಗಿದೆ.  ಮಕ್ಕಳನ್ನು ಕದಿಯುವ ಅಥವಾ ಸರಕಿನಂತೆ ಸಾಗಿಸುವ/ ಮಾರುವ ಅಪರಾಧಗಳು ಎಲ್ಲಿಯೂ ಸಂಭವಿಸಬಾರದು ಎಂಬ ನಿರ್ದೇಶನವಿದೆ.

ಭಾರತ ಸಂವಿಧಾನದ ಪರಿಚ್ಛೇದ ಸೆ. ೨೩ ಮನುಷ್ಯರ ಮಾರಾಟವನ್ನು ನಿಷೇಧಿಸಿದೆ. ಭಾರತ ದಂಡ ಸಂಹಿತೆಯೂ ತನ್ನ ಸೆ.೩೬೧ರಲ್ಲಿ ಮಕ್ಕಳ ಅಪಹರಣವನ್ನು ಹಾಗೂ ಸೆ. ೩೬೬ (ಎ)ನಲ್ಲಿ ಮಕ್ಕಳನ್ನು ಕೊಳ್ಳುವುದು / ಮಾರುವುದನ್ನು ಆಪರಾಧಿಕ ಕೃತ್ಯಗಳೆಂದು ಪರಿಗಣಿಸಲಾಗಿದೆ. ಆದರೆ ಇದರಲ್ಲಿ ಹೆಚ್ಚಿನ ಒತ್ತು ಇರುವುದು ಲೈಂಗಿಕ ಪ್ರಚೋದನೆಗಾಗಿ, ವೇಶ್ಯಾವೃತ್ತಿಗೆ ದೂಡುವುದಕ್ಕಾಗಿ ಹಾಗೆ ಮಾಡಬಾರದು ಎಂಬುದಕ್ಕೆ. ಆದಾಗ್ಯೂ ಕಾನೂನಿನಲ್ಲಿ ಇರಬಹುದಾದ ಸಡಿಲತೆಯ  ಅವಕಾಶಗಳನ್ನು ಬಳಸಿಕೊಂಡೇ ಕೆಲವರಿಂದ ಮಕ್ಕಳನ್ನು ದತ್ತು ಉದ್ದೇಶಕ್ಕೆಂದೇ ಕದಿಯುವ, ಸಾಗಿಸುವ, ಮಾರುವ / ಕೊಳ್ಳುವ ಕೃತ್ಯಗಳನ್ನು ಶಿಕ್ಷಾರ್ಹ ಅಪರಾಧ ಎಂದು ಹೇಳಲಾಗಿದೆ. 

***

ಸಮಾಜಕಾರ್ಯ ಪ್ರಶಿಕ್ಷಣ ಮುಗಿದ ಮೇಲೆ ನಾನು ಮಾತೃಛಾಯಾದಲ್ಲೇ ಕೆಲ ಕಾಲ ಕೆಲಸ ಮಾಡಬಹುದು ಎಂಬ ಪದ್ಮಾ ಸುಬ್ಬಯ್ಯನವರ ಅಪೇಕ್ಷೆಯಂತೆ ಅಲ್ಲೇ ನಿಂತೆ. ಸ್ಥಳೀಯ ಸಮುದಾಯಗಳಲ್ಲಿ ದತ್ತು ಕುರಿತು ಪ್ರಚಾರ, ಶಿಕ್ಷಣ, ಮಾಹಿತಿ ಹಂಚಿಕೆಯಲ್ಲಿ ತೊಡಗಿಕೊಂಡಿದ್ದೆ. ಆಗ ದತ್ತು ಅಪೇಕ್ಷಿತ ಹಲವು ಕುಟುಂಬಗಳ ಅಧ್ಯಯನ, ಅವರಿಗೆ ದತ್ತು ತೆಗೆದುಕೊಳ್ಳುವ ಮೊದಲಿನ ಆಪ್ತ ಸಮಾಲೋಚನೆ ಮಕ್ಕಳ ಅಧ್ಯಯನ, ಕೆಲವೊಮ್ಮೆ ಅನಾಥರಾದ ಅಥವಾ ಪರಿತ್ಯಜಿಸಲ್ಪಟ್ಟ ಮಕ್ಕಳನ್ನು ಸಂ‍ಸ್ಥೆಗೆ ಕರೆತರುವುದು, ದತ್ತು ಪಡೆದ ಕುಟುಂಬಗಳಿಗೆ ಅನುಸರಣೆ ಭೇಟಿಯೇ ಮೊದಲಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದೆ. 

ದತ್ತು ಪ್ರಕ್ರಿಯೆಗಳನ್ನು ಸುಗಮವೂ ನಿಯಮಬದ್ಧವೂ ಆಗಿ ನಡೆಸುವ ಜವಾಬ್ದಾರಿ ಹೊಂದಿದ್ದ ವಾಲಂಟರಿ ಕೋಆರ್ಡಿನೇಟಿಂಗ್‌ ಏಜೆನ್ಸಿ (VCA – Voluntary Coordinating Agency) ಎಂಬಲ್ಲಿಗೆ ರಾಜ್ಯ ಸಂಯೋಜಕನಾಗಿ ೧೯೯೦ರ ಆರಂಭದಲ್ಲಿ ಸೇರಿದೆ. ವಿ.ಸಿ.ಎ. ಬೆಂಗಳೂರಿನ ನಂದಿದುರ್ಗ ರಸ್ತೆಯಲ್ಲಿರುವ ಕೆ.ಎಸ್‌.ಸಿ.ಸಿ.ಡಬ್ಲ್ಯು (ಕರ್ನಾಟಕ ರಾಜ್ಯ ಶಿಶು ಕಲ್ಯಾಣ ಮಂಡಳಿ) ಎಂಬ ಒಂದು ಸ್ವಯಂಸೇವಾ ಸಂಘಟನೆಯಲ್ಲಿ ಸ್ಥಾಪಿತವಾಗಿತ್ತು. ವಿ.ಸಿ.ಎ.ನಲ್ಲಿ ನಾನು ಕೆಲಸ ಮಾಡಬೇಕಿದ್ದಿದು ವಿಭಾ ಸಿಂಗ್ ಮತ್ತು ಭಗವಾನ್‌ ದಾಸ್‌ ಎನ್ನುವ ಹಿರಿಯ ಸಮಾಜ ಕಾರ್ಯಕರ್ತರೊಡನೆ. ಈ ಸಂಸ್ಥೆಯೊಡನೆ ಕೆಲಸದ ಆರಂಭಿಕ ಹೆಜ್ಜೆ ಹಾಕುವಾಗ ದತ್ತುವಿನ ಆಳ ಅಗಲ, ಒಳಸುಳಿಗಳು, ಪ್ರಭಾವಗಳು, ಆತಂಕಗಳು, ಕಾನೂನು, ನ್ಯಾಯಾಲಯದ ನಿರ್ದೇಶನಗಳು ಅರ್ಥವಾಗುತ್ತಾ ಬಂದಿತು.  

ಭಾರತದಲ್ಲಿ (೨೦೦೦ದ ವರೆಗೆ) ಹಿಂದೂ ದತ್ತು ಮತ್ತು ನಿರ್ವಹಣಾ ಕಾನೂನು (HAMA – Hindu Adoption and Maintenance Act 1956) ಮತ್ತು ಪೋಷಕರು ಮತ್ತು ಮಕ್ಕಳ ಕಾನೂನು (GAWA – Guardins and Wards Act 1890) ಮಾತ್ರ ದತ್ತು ಮತ್ತು ಫಾಸ್ಟರ್ ಕೇರ್ ಎಂಬುದಕ್ಕೆ ಪ್ರಚಲಿತವಿದ್ದ ಕಾನೂನುಗಳಾಗಿದ್ದವು.

ಹಿಂದೂ ದತ್ತು ಕಾಯಿದೆಯಂತೆ ಕೇವಲ ಹಿಂದೂ ದಂಪತಿಗಳು ಮಾತ್ರ (ಒಂದು ಗಂಡು ಮತ್ತು ಒಂದು ಹೆಣ್ಣು ಮಗುವನ್ನು ಮಾತ್ರ) ದತ್ತು ತೆಗೆದುಕೊಳ್ಳಬಹುದಾಗಿದ್ದು, ಆ ಮಗು ಅವರ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಂತೆಯೇ ಎಲ್ಲ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಪಡೆಯುತ್ತಿತ್ತು. ಅಂದರೆ ಹಿಂದೂಗಳಲ್ಲದವರಿಗೆ ದತ್ತು ಪಡೆಯುವ ಅವಕಾಶಗಳಿರಲಿಲ್ಲ. ಆದರೆ ಪೋಷಕರು ಮತ್ತು ಮಕ್ಕಳ ಕಾನೂನಿನಂತೆ ಭಾರತೀಯರೆಲ್ಲರೂ ಎಷ್ಟು ಮಕ್ಕಳನ್ನು ಬೇಕಾದರೂ ʼಸಾಕಿʼಕೊಳ್ಳಬಹುದು. ಅದು ದತ್ತುವಲ್ಲ. ಹಿಂದೂಗಳೂ ಸಹ ಎಷ್ಟು ಮಕ್ಕಳನ್ನಾದರೂ ಈ ರೀತಿ ಸಾಕಿಕೊಳ್ಳಬಹುದು. ಆದರೆ ಆ ಮಕ್ಕಳಿಗೆ ಯಾವುದೇ ಕಾನೂನಾತ್ಮಕ ಹಕ್ಕುಗಳು ಸಿಗುವುದಿಲ್ಲ. ಈ ಎರಡೂ ಕಾನೂನುಗಳಡಿಯಲ್ಲಿ ಮಕ್ಕಳನ್ನು ಪಡೆದವರ ಮೇಲೆ ನಿಗಾ ವಹಿಸುವ ವ್ಯವಸ್ಥೆ ಇದೆ. 

(೨೦೦೦ದಲ್ಲಿ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ ಜಾರಿಗೆ ಬಂದು ಅದರಲ್ಲಿ ಎಲ್ಲ ಭಾರತೀಯರು (ಕುಟುಂಬಗಳು ಮತ್ತು ವಿವಾಹವಾಗದ ವ್ಯಕ್ತಿಗಳು) ಎಷ್ಟು ಮಕ್ಕಳನ್ನು ಬೇಕಾದರೂ ದತ್ತು ತೆಗೆದುಕೊಳ್ಳಬಹುದು ಎಂಬ ಅವಕಾಶವನ್ನು ಮಾಡಿಕೊಟ್ಟಿದೆ).

ಹಾಮಾ ಮತ್ತು ಗಾವಾ ಎಂಬ ಈ ಎರಡೂ ಕಾನೂನುಗಳ ಜಾರಿಯಲ್ಲಿ ಹಲವಾರು ಗೊಂದಲಗಳು, ಕಷ್ಟಗಳು ಇದ್ದವು. ಜೊತೆಗೆ ದತ್ತು ಎನ್ನುವುದು ಹಲವಾರು ವರ್ಷಗಳು ಒಂದು ರೀತಿ ಕದ್ದುಮುಚ್ಚಿ ಮಾಡಿಕೊಳ್ಳುವಂತಹ ವಾತಾವರಣವೂ ಇತ್ತು. ಇದರಿಂದಾಗಿ ‘ದತ್ತು’ ಹಲವು ಸಂಸ್ಥೆಗಳಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯೇ ಆಗಿತ್ತು. ಅದರಲ್ಲೂ ಅನಾಥ ಮಕ್ಕಳು ಇರುವುದು ಅಥವಾ ಯಾರಾದರೂ ಮಕ್ಕಳನ್ನು ಪರಿತ್ಯಜಿಸಿದರೆ ಅವೆಲ್ಲವೂ ವಿದೇಶಿಯರಿಗೆ ದತ್ತು ಹೋಗಲಿಕ್ಕೇ ಇರುವುದು ಎನ್ನುವಂತಹ ಭಾವನೆಯೇ ದಟ್ಟವಾಗಿತ್ತು. ಅದು ಎಷ್ಟು ಗಟ್ಟಿಯಾಗಿತ್ತೆಂದರೆ ಭಾರತೀಯ ಕುಟುಂಬಗಳು ದತ್ತು ಪಡೆಯಲು ಅಪೇಕ್ಷಿಸಿದರೂ, ಅವರಿಗೆ ಏನಾದರೂ ಕೊಂಕು ಮಾತನಾಡಿ ಅಥವಾ ಮಗುವಿನಲ್ಲಿ ಏನಾದರೊಂದು ಲೋಪವನ್ನು (ಬಣ್ಣ, ಲಿಂಗ, ʼಯಾರಿಗೆ ಹುಟ್ಟಿದ ಮಗುವೋ!ʼ, ಅಂಗವಿಕಲತೆಯೇ ಮೊದಲಾದವು) ಎತ್ತಿ ತೋರಿ ಇಂತಾ ಮಗು ನಿಮಗೆ ಯಾಕೆ ಎಂದು ಹೇಳಿ ಹಿಂಜರಿಕೆ ಹುಟ್ಟಿಸಿ ಹಿಂದೆ ಕಳಿಸುಸುತ್ತಿದ್ದ ಸಂಸ್ಥೆಗಳೇ ಹೆಚ್ಚಾಗಿದ್ದವು. ಅದರ ಪರಿಣಾಮ ಸಾಕಷ್ಟು ಸಂಖ್ಯೆಯಲ್ಲಿ ಅನಾಥ ಮಕ್ಕಳು ವಿದೇಶೀಯರಿಗೆ ದತ್ತು ಹೋಗುತ್ತಿದ್ದವು. 

ಇಂತಹದೊಂದು ಮಕ್ಕಳ ವಿರೋಧೀ ಪರಿಸ್ಥಿತಿಯನ್ನು ಲಕ್ಷ್ಮೀಕಾಂತ್‌ ಪಾಂಡೇ ಎನ್ನುವವರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆ ಪ್ರಕರಣವನ್ನು ಚರ್ಚಿಸಿದ ನ್ಯಾಯಮೂರ್ತಿ ಪಿ.ಎನ್‌. ಭಗವತಿಯವರ ಪೀಠ ಇಡೀ ದತ್ತು ಪ್ರಕ್ರಿಯೆಯನ್ನು ಮಕ್ಕಳ ಸ್ನೇಹಿ ಮತ್ತು ಭಾರತ ಸ್ನೇಹಿಯಾಗಿ ಪರವರ್ತಿಸಲು ಹಲವಾರು ನಿರ್ದೇಶನಗಳನ್ನು ನೀಡಿದ್ದರು (೧೯೮೪). ಅಂತಹವುಗಲ್ಲಿ ಬಹಳ ಮುಖ್ಯವಾದುದು ‘ಯಾವುದಾದರೂ ಮಗುವನ್ನು ದತ್ತು ನೀಡಬೇಕೆಂದರೆ ಆ ಮಗುವಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು, ಅಧ್ಯಯನಗಳನ್ನು ಒಂದು ಸ್ವತಂತ್ರ ಸಂಸ್ಥೆ / ಏಜೆನ್ಸಿ ಪರಿಶೀಲಿಸಿ ಪ್ರಮಾಣಪತ್ರವನ್ನು ನೀಡಬೇಕು. ದತ್ತು ಹೆಸರಿನಲ್ಲಿ ಯಾರಿಗೂ ಯಾವುದೇ ರೀತಿಯಲ್ಲೂ ಲಾಭ ಸಿಗುವಂತೆ ಇರಬಾರದು. ವಿದೇಶಕ್ಕೆ ಮಗುವನ್ನು ದತ್ತು ನೀಡುವುದು ಅನಿವಾರ್ಯವಾದರೆ ಮಾತ್ರ ಅದನ್ನು ಪರಿಗಣಿಸಬೇಕುʼ ಎಂಬುದು. ಅದೇ ನಾನು ಕೆಲಸ ಮಾಡಿದ ವಾಲಂಟರಿ ಕೋ ಆರ್ಡಿನೇಟಿಂಗ್‌ ಏಜೆನ್ಸಿಯ ಕೆಲಸವಾಗಿತ್ತು. ದತ್ತು ನೀಡಲು ಪರವಾನಗಿ ಪಡೆದಿರುವ ಸಂಸ್ಥೆಗಳು ಈ ಏಜೆನ್ಸಿಯಲ್ಲಿ ಸದಸ್ಯರಾಗಿರಬೇಕಿದ್ದು, ತಮ್ಮಲ್ಲಿರುವ ಮಕ್ಕಳು ಮತ್ತು ದತ್ತು ಅಪೇಕ್ಷಿಸಿ ಅರ್ಜಿ ಸಲ್ಲಿಸಿರುವ ಕುಟುಂಬಗಳ ಮಾಹಿತಿಯನ್ನು ವಿ.ಸಿ.ಎ. ಯೊಂದಿಗೆ  ಹಂಚಿಕೊಳ್ಳಬೇಕಿತ್ತು. 

ಅದೇ ರೀತಿ ವಿ.ಸಿ.ಎ. ಕೂಡಾ ದತ್ತು ಅಪೇಕ್ಷಿಸಿ ಬರುವವರ ಅರ್ಜಿಗಳನ್ನು ಪಡೆದು ಗೃಹತನಿಖೆ ನಡೆಸಿ ದಾಖಲೆಗಳನ್ನು ಇಟ್ಟುಕೊಂಡಿರುತ್ತಿತ್ತು.  ಈ ಏಜೆನ್ಸಿಯ ಕೆಲಸದ ಪ್ರಾಮುಖ್ಯತೆ ಇದ್ದದ್ದು, ವಿವಿಧ ದತ್ತು ಸಂಸ್ಥೆಗಳಲ್ಲಿರುವ ಮಕ್ಕಳನ್ನು ನೋಡಿದ ದತ್ತು ಅಪೇಕ್ಷಿಸುವ ಪೋಷಕರು ನಿರಾಕರಿಸಿದರೆ ಅದನ್ನು ವಿವರಗಳೊಂದಿಗೆ ದಾಖಲಿಸುವುದು ಮತ್ತು ಉಸ್ತುವಾರಿ ಮಾಡುವುದು. ಜೊತೆಗೆ ಯಾವುದಾದರೂ ದತ್ತು ಸಂಸ್ಥೆಯಲ್ಲಿ ಇಬ್ಬರು ಪೋಷಕರು ಮಗುವನ್ನು ದತ್ತು ಸ್ವೀಕರಿಸಲು ನಿರಾಕರಿಸಿದರೆ ಪರ್ಯಾಯ ಕುಟುಂಬಗಳನ್ನು ಮಗುವನ್ನು ನೋಡಲು ನಮ್ಮ ಪಟ್ಟಿಯಿಂದ ಸಲಹೆ ಕೊಡುವುದಾಗಿತ್ತು. ಹಾಗೆ ಮೂವರು ಪೋಷಕರು ಮಗು ಬೇಡ ಎಂದರೆ, ಆ ಮಗುವನ್ನು ವಿದೇಶೀ ದತ್ತುವಿಗೆ ಹೋಗಲು ಅರ್ಹವಿರಬಹುದು ಎಂದು ಪ್ರಮಾಣ ಪತ್ರ ಕೊಡಬಹುದಿತ್ತು. ಆದರೆ ವಿಸಿಎ ಮೂಲಕ ಸೂಚಿಸಿದ ಯಾವುದೇ ಪೋಷಕರು ಗಂಡಾಗಲಿ ಹೆಣ್ಣಾಗಲಿ ಮಕ್ಕಳನ್ನು ದತ್ತು ಪಡೆಯಲು ನಿರಾಕರಿಸುತ್ತಲೇ ಇರಲಿಲ್ಲ! 

ತಮಗೆ ಮಗು ದತ್ತು ಸಿಗುವುದೇ ಇಲ್ಲ ಎಂದು ಹತಾಶರಾಗಿದ್ದವರು, ಗ್ರಾಮೀಣ ಪ್ರದೇಶದವರು, ಆರ್ಥಿಕವಾಗಿ ಸಬಲರಲ್ಲದಿದ್ದರೂ ಮಕ್ಕಳ ಬಗ್ಗೆ ಪ್ರೇಮ ಪ್ರೀತಿ ಕಾಳಜಿ ಇರುವ ಅದೆಷ್ಟೋ ಕುಟುಂಬಗಳು ನಮ್ಮ (ವಿಸಿಎ) ಮಧ್ಯಪ್ರವೇಶದಿಂದಾಗಿ, ಮಕ್ಕಳನ್ನು ದತ್ತು ಪಡೆದುಕೊಂಡರು. ದತ್ತು ಎಂದರೆ ಅಲ್ಲೇನೋ ಗುಟ್ಟು ಗೂಢ ರಹಸ್ಯ, ಬಹಳ ಖರ್ಚು, ವಿಪರೀತವಾದ ಕಾನೂನು ಪ್ರಕ್ರಿಯೆ, ಇತ್ಯಾದಿ ಸುಳ್ಳುಗಳನ್ನು ಅಳಿಸಲು ಪ್ರಯತ್ನಿಸಿದೆವು. ದತ್ತು ಕುರಿತು ಆಗಾಗ್ಗೆ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ವಿಚಾರ ಸಂಕಿರಣ, ಚರ್ಚೆಗಳನ್ನು ಏರ್ಪಡಿಸಿದೆವು. ಪರಿಣಾಮ ಭಾರತೀಯ ದತ್ತು ಪ್ರಮಾಣ ಕರ್ನಾಟಕದಲ್ಲಿ ನಿಧಾನವಾಗಿ ಏರುತ್ತಾ ಹೋಯಿತು. 

ಇದು ಮಕ್ಕಳನ್ನು ಬೇರೆ ಬೇರೆ ಹೆಸರಿನಲ್ಲಿ ಕದಿಯುತ್ತಿದ್ದ, ಮಕ್ಕಳನ್ನು ತುಂಬಿಕೊಂಡು  ಸೂಕ್ತ(!) ಪೋಷಕರಿಗಾಗಿ ಕಾಯುವ ವಿದೇಶೀ ದತ್ತುವನ್ನೇ ದಂಧೆ ಮಾಡಿಕೊಂಡಿದ್ದ ಅನೇಕ ಸಂಸ್ಥೆಗಳಿಗೆ ಬಿಸಿ ತುಪ್ಪವಾಗಿಬಿಟ್ಟಿತು.

| ಮುಂದಿನ ಸಂಚಿಕೆಯಲ್ಲಿ |

‍ಲೇಖಕರು Avadhi

June 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: