ಮಗಳ ಮೊದಲ ಒಂಟಿ ಪ್ರಯಾಣ…

ಸಂಗಮೇಶ ಮೆಣಸಿನಕಾಯಿ

ಈಗಷ್ಟೇ ಏಳನೆಯ ತರಗತಿ ಮುಗಿಸಿರುವ ಮಗಳು‌ ಇವತ್ತು ಒಬ್ಬಳೇ ಹುಬ್ಬಳ್ಳಿಯಿಂದ ೫೦ ಕಿ.ಮೀ. ದೂರದ, ನಮ್ಮತ್ತೆಯ ಅಂದರೆ ಸುನಂದಾ ಭರಮಗೌಡ ಮೆಣಸಿನಕಾಯಿ ತಾಯಿಯ ಮನೆಗೆ ಬಸ್ಸಿನಲ್ಲಿ ಪ್ರಯಾಣಿಸಿದಳು. ಜೊತೆಗೆ ಇತರ ಅಪರಿಚಿತ ಪ್ರಯಾಣಿಕರೂ ಇದ್ದರೆನ್ನಿ.

ಆಕೆ ಇವತ್ತು ಒಬ್ಬಳೇ ಪ್ರಯಾಣಿಸುವುದೆಂದು ೨-೩ ದಿನಗಳ ಹಿಂದೆಯೇ ನಿರ್ಧಾರವಾಗಿತ್ತು. ಆಕೆ ಏನೋ ತುಂಬಾ ಖುಷಿಯಲ್ಲಿ, ಆತ್ಮವಿಶ್ವಾಸದಿಂದ ಬೀಗುತ್ತಿದ್ದಳು.

ಆದರೆ ನನಗೆ ಏನೋ ಅಳುಕು, ಹೆದರಿಕೆ, ಆತಂಕ. ಹೀಗಿದ್ದಾಗ ನನ್ನ ಮೊದಲ ಜವಾಬ್ದಾರಿಯುತ ಪ್ರಯಾಣ ನೆನಪಾಗದಿದ್ದೀತೇ?

ನಾನು ಎರಡನೇ ಕ್ಲಾಸಲ್ಲಿ ಓದುತ್ತಿದ್ದೆ. ಆಗ ಭಾನಾಪುರದಲ್ಲಿ ಇದ್ದೆವು. ಒಮ್ಮೆ ನಮ್ಮ ಅಪ್ಪಾರು ತಮ್ಮ ತಂದೆಗೆ, ಅಂದರೆ ನನ್ನ ಅಜ್ಜನಿಗೆ ದುಡ್ಡು ಕೊಟ್ಟು ಬರಲು ನನ್ನನ್ನು ಮತ್ತು ತಮ್ಮನನ್ನು, ನಮ್ಮೂರು ಕಾತರಾಳಿಗೆ ಕಳಿಸಲು ಸಿದ್ಧರಾದರು. ಬೆಳಗ್ಗೆ ಒಂಬತ್ತಕ್ಕೆ ಭಾನಾಪುರದಲ್ಲಿ ಖಾಸಗಿ ಬಸ್ ಹತ್ತಿದರೆ ಅದು ಮಧ್ಯಾಹ್ನ ಒಂದು ಗಂಟೆ ಅಷ್ಟೊತ್ತಿಗೆ ಕಾತರಾಳ ಕ್ರಾಸ್ ತಲುಪುತ್ತಿತ್ತು. ಮುಂದೆ ಅದು ಜಾಲಿಹಾಳವರೆಗೆ ಸಂಚರಿಸಿ ವಾಪಸ್ ನಮ್ಮೂರ ಕ್ರಾಸಿಗೆ ಎರಡು ಗಂಟೆ ಹೊತ್ತಿಗೆ ಬರುತ್ತಿತ್ತು.

ನಾವು ಊರಿಗೆ ಬರ್ತೀವಿ ಅಂತ ನಮ್ಮಜ್ಜನಿಗೆ ಯಾವುದೇ ಮಾಹಿತಿ ಇರಲಿಲ್ಲ. ಬಸ್ ಹತ್ತಿ ನಾನು-ತಮ್ಮ ಒಂದು ಗಂಟೆ ಅಷ್ಟೊತ್ತಿಗೆ ಕಾತರಾಳ ಕ್ರಾಸ್‌ಗೆ ಇಳಿದು ಮನೆಗೆ ಹೋದೆವು. ನಾವಿಬ್ಬರೇ ಬಂದಿರೋದು ನೋಡಿ ನಮ್ಮ ಅಜ್ಜ-ಅಮ್ಮ, ದೊಡ್ಡಪ್ಪ-ದೊಡ್ಡವ್ವ, ಕಾಕಾ ಎಲ್ಲರಿಗೂ ಆಶ್ಚರ್ಯ-ಸಂತೋಷ.

“ಯಜ್ಜಾ ನಮ್ ಅಪ್ಪಾಜಿ ನಮಗ ಇವತ್ತ ಹೊಳ್ಳಿ ಬಾ ಅಂದಾರ. ನಮ್ಮನ್ನ ಎರಡು ಗಂಟೆ ಬಸ್ಸಿಗೆ ಹತ್ತಿಸು…” ಅಂದೆ. ನಮಗ ಲಗೂಲಗೂ ಊಟ ಮಾಡಿಸಿ, ಮತ್ತೆ ನಮ್ಮಪ್ಪನಿಗೆ ಒಂದು ಚೀಟಿ ಬರೆದು, ನಮ್ಮನ್ನ ಕ್ರಾಸ್‌ಗೆ ಕರ್ಕೊಂಡು ಬಂದ ಅಜ್ಜ. ಬಸ್ಸು ಹೋಗಿಬಿಟ್ಟಿತ್ತು. ಬಿಸಿಲಿನ ಮೇಲೆ ಸಮಯ ತಿಳಿಯುತ್ತಿದ್ದ ಅಜ್ಜ, ಆವತ್ತು ಸಮಯದ ಲೆಕ್ಕ ತಪ್ಪಿಬಿಟ್ಟಿದ್ದ.

ನಮಗೋ ಖುಷಿ..ಒಂದಿನ ಅಜ್ಜ-ಅಮ್ಮನ ಮನೆಯಲ್ಲಿ ಆಟ ಆಡಬಹುದಲ್ಲ ಅಂತ. ಆದರೆ ನಮ್ಮಜ್ಜನಿಗೆ ಬ್ಯಾರೆ ಚಿಂತೆ ಶುರುವಾಯಿತು. “ನೀವು ಹೋಗಲಿಲ್ಲ ಅಂದ್ರೆ ನಿಮ್ಮವ್ವ-ನಿಮ್ಮಪ್ಪ ಚಿಂತಿ ಮಾಡ್ತಾರ… ಮಕ್ಕಳು ಎಲ್ಲಿ ಹೋದವು ಅಂತ ಭಯ ಬೀಳ್ತಾರ..” ಅಂತ ಅಂದ.

ನಮಗೆ ಇದ್ಯಾವುದರ ಪರಿವೆಯೂ ಇಲ್ಲ. ಸಂಜಿ ಮುಂದ ಹಳ್ಳ-ಹೊಲದಾಗ ತಿರುಗಾಡಿ, ರಾತ್ರಿ ಊಟ ಮಾಡಿ, ಅಂಗಳದಾಗಿನ ಕಟ್ಟಿ ಮ್ಯಾಲೆ ಆಕಾಶದಾಗಿನ ನಕ್ಷತ್ರ ಎಣಿಸಿಕೋಂತ ಮಲಗಿದರ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ.

ಅಪ್ಪಾರು ಆ ಬಸ್ ಕಂಡಕ್ಟರ್‌ಗ ಬೆಳಗ್ಗೆ ನಮ್ಮನ್ನು ಹತ್ತಿಸುವಾಗಲೇ, “ಮಧ್ಯಾಹ್ನ ಇವರನ್ನ ಕರ್ಕೊಂಡು ಬರ್ರಿ…” ಅಂತ ಹೇಳಿ ಕಳಿಸಿದ್ದರು. ಅದಕ್ಕ ಆ ಕಂಡಕ್ಟರ್, ನಮ್ಮೂರು ಕ್ರಾಸ್‌ನ್ಯಾಗ ಬಸ್ ತರುಬಿ, ಅಲ್ಲಿದ್ದ ಸಣ್ಣ ಸೇತುವೆ, ಅಕ್ಕ-ಪಕ್ಕದ ಹೊಲಗಳ ಕಡೆಗೆಲ್ಲ ಬಸ್ಸಿನ ಮ್ಯಾಲೆ ಹತ್ತಿ ಕಣ್ಣಿಗೆ ಕಾಣುವಷ್ಟು ದೂರ ನೋಡಿದ್ದನಂತ! ಡ್ರೈವರ್ ಕೂಡ ಸಾಕಷ್ಟು ಹಾರ್ನ್ ಮಾಡಿದ್ದನಂತ. ಇದೆಲ್ಲ ವರದಿಯನ್ನು ಕೇಳಿದ ನಮ್ಮ ಅಪ್ಪಾರಿಗೆ ಭಾಳ ಹೆದರಿಕಿ ಆಗಿತ್ತಂತ. “ಹುಡುಗರು ಮನಿಯರ ಮುಟ್ಯಾರೋ ಇಲ್ಲೋ…” ಅಂತ ರಾತ್ರಿ ಪೂರ್ತಿ ನಿದ್ದಿ ಮಾಡಿದ್ದಿಲ್ಲ ಅಂತ. ನಮ್ಮ ಅವ್ವಾರು “ನನ್ನ ಮಕ್ಕಳು ಎಲ್ಲಿ ಅದಾವು, ಹೆಂಗ ಅದಾವೋ ಏನೋ…” ಅಂತ ಅತ್ತ ಬಿಟ್ಟದಿರಂತ.

ಮಾರನೆಯ ದಿನ ನಮ್ಮಜ್ಜ ಬೆಳಗಿನ ಬಸ್ಸಿಗೆ ಹತ್ತಿಸಿ ಕಳಿಸಿದ. ಅದು ಮಧ್ಯಾಹ್ನ ಭಾನಾಪುರ ತಲುಪಿತು. ಆಗ ಇದ್ದದ್ದೇ ಎರಡು ಬಸ್ಸು! ನಮ್ಮ ಅಪ್ಪಾರು ಬಸ್ ಸ್ಟ್ಯಾಂಡಿನ್ಯಾಗ ನಿಂತಿದ್ದರು. ಅಷ್ಟೊತ್ತಿಗೆ ನಾವು ವಾಪಸ್ ಬರದಿರುವ ಸುದ್ದಿ ಆ ಬಸ್ ಸ್ಟ್ಯಾಂಡ್‌ನಲ್ಲಿ ಎಲ್ಲರಿಗೂ ಹರಡಿಬಿಟ್ಟಿತ್ತು! ನಾವು ಇಳಿದ ತಕ್ಷಣ ಭರ್ಜರಿ ಸ್ವಾಗತ. “ನಾ ಹೇಳಿದ್ದಿಲ್ರ್ಯಾ…ನಿಮ್ಮ ಹುಡುಗರು ಶಾಣ್ಯಾರು ಅದಾರ…ಹಂಗೆಲ್ಲೂ ತಪ್ಪಿಸಿಕೊಳ್ಳೂದಿಲ್ಲ ಅಂತ…” ಅಂದ ಟೇಲರ್ ಕುತುಬ್.

“ಶೆಟ್ರು ಸುಮ್ಮನ ಭಾಳ ಹೆದರಿಬಿಟ್ಟಾರ…” ಅಂದರು ಚೌಡಕಿ ಶಂಕ್ರಪ್ಪ. “ಹುಡುಗರು ಹಸಿದು ಬಂದಾವು…ಒಂದೆರಡು ಮಂಡಳಾರ ತಿನ್ನಿಸಿಕೊಂಡು ಹೋಗ್ರಿ…” ಅಂದಳು ಚಾದಂಗಡಿ ಗಿರಿಜವ್ವ.

ಇದನ್ನ ಇವತ್ತು ಮಗಳಿಗೆ ಹೇಳಿದೆ. ಒಂದು ಕತೆಯಂತೆ ಕೇಳಿದಳು. ನಿನ್ನೆ ರಾತ್ರಿಯಿಂದಲೇ ಬಸ್‌ನ್ಯಾಗ ಏನು ಮಾಡಬೇಕು, ಏನು ಮಾಡಬಾರದು, ಎಂಥವರ ಜೊತೆ ಎಷ್ಟು ಮಾತಾಡಬೇಕು, ಏನು ಮಾತಾಡಬಾರದು ಎಂದೆಲ್ಲ ತಲೆ ತಿಂದಿದ್ದೇ ತಿಂದದ್ದು. ಹುಬ್ಬಳ್ಳಿ ಹೊಸೂರ ಬಸ್ ಸ್ಡ್ಯಾಂಡಿನ್ಯಾಗ ಬಸ್ ಬರೂತನ ನಿಂತು, ಒಳಗ ಹತ್ತಿ, ಆಕೆಗೆ ಯಾವ ಸೀಟು ಒಳ್ಳೆಯದು ಎಂಬುದರ ಬಗ್ಗೆ ತರಬೇತಿ ನೀಡಿ, “ಹ್ಯಾಪಿ ಜರ್ನಿ ಮಗಳೇ…” ಅಂತ ಟಾಟಾ ಮಾಡುವಾಗ ಕಣ್ಣಂಚಿನ ನೀರು ಆಕೆಗೆ ಕಾಣಿಸದಂತೆ ದೊಡ್ಡದಾಗಿ ನಕ್ಕೆ. ೩.೧೫ಕ್ಕೆ ಹೊರಡಬೇಕಿದ್ದ ಬಸ್ಸು ೩.೪೫ಕ್ಕೆ ಬಂದರೂ ಶಾಂತವಾಗಿ ಕುಳಿತಿದ್ದೆ! “ಬರದಿದ್ದರೇ ಚೊಲೊ…ಅಮ್ಮಾಜಿಯನ್ನ ವಾಪಸ್ ಮನೆಗೆ ಕರೆದೊಯ್ಯಬಹುದು…” ಅಂತಿತ್ತು ಒಳಮನಸ್ಸು! ಪುಣ್ಯಕ್ಕೆ ಆ ಊರಿನ ಒಬ್ಬ ಪರಿಚಿತರು ಸಿಕ್ಕರು. ಅವರಿಗೂ ಈಕೆಯ ಬಗ್ಗೆ ಕಾಳಜಿವಹಿಸಲು ಹೇಳಿ, ಅರ್ಧ ಅತಂಕ ಕಡಿಮೆ ಮಾಡಿಕೊಂಡೆ.

ಸಂಜೆಯಾಗುವುದನ್ನೇ ಕಾದು ಏಳು ಗಂಟೆ ಹೊತ್ತಿಗೆ ನಾನೇ ಕರೆ ಮಾಡಿ ಮನೆ ತಲುಪಿರುವ ಬಗ್ಗೆ ಖಚಿತಪಡಿಸಿಕೊಂಡೆ ಎಂಬಲ್ಲಿಗೆ ಈ ಅಧ್ಯಾಯ ಸಮಾಪ್ತಿ..

‍ಲೇಖಕರು Admin

May 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: