ಮಕ್ಕಳ ಹಕ್ಕಿನ ಪಾಠಗಳು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್ನ ಭಾಗವಾಗಿರುವ ಶರ್ಮಾ ರಚಿಸಿದ ಆಕೆ ಮಕ್ಕಳನ್ನು ರಕ್ಷಿಸಿದಳುಕೃತಿ ಅತ್ಯಂತ ಜನಪ್ರಿಯ ಬಹುರೂಪಿಈ ಕೃತಿಯನ್ನು ಪ್ರಕಟಿಸಿದೆ. 

ಸಾಮಾಜಿಕ ವಿಷಯಗಳ ಬಗ್ಗೆ ಆಳ ನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

|ಕಳೆದ ಸಂಚಿಕೆಯಿಂದ|

“ಇಲ್ಲೊಂದು ದೊಡ್ಡ ಬಲ್ಬ್‌ ಹಾಕ್ಸಿ ಸಾ. ಅಷ್ಟು ಸಾಕು” ಬಣವಿಕಲ್ಲು ಗ್ರಾಮದ ಮಕ್ಕಳು ಆ ಮುಸ್ಸಂಜೆ ಹೇಳಿದರು. “ಇಲ್ಲಿ ಹಾಫ್‌ ಕರೆಂಟ್.‌ ಓದೋಕ್ಕೆ ಬರೆಯೋಕ್ಕೆ ಏನೂ ಕಾಣದು”.

ʼಇಲ್ಲಿನ ಹಳ್ಳಿ ಭಾಗದಲ್ಲೆಲ್ಲಾ ಸಿಂಗಲ್‌ ಫೇಸ್‌. ೬೦ ವಾಟಿನ ಬಲ್ಬ್‌ ಕೂಡಾ ಮಿಣುಕು ಬೆಳಕು ಕೊಡೋದು. ಅದಕ್ಕೆ ಈ ವ್ಯವಸ್ಥೆ. ನಮ್ಮಾಫೀಸಿನ ಮುಂದೆ ದೊಡ್ಡ ಬಲ್ಬ್‌ ಹಾಕಿದ್ರೆ ಏನೋ ಒಂದಷ್ಟು ಬೆಳಕಿರುತ್ತೆʼ ಗೆಳೆಯ ರಾಮಾಂಜನೇಯ ಹೇಳುತ್ತಿದ್ದರು. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿಗಂಟಿಕೊಂಡೇ ಇರುವುದು ಬಣವಿಕಲ್ಲು.

೧೯೯೨ರ ಸೆಪ್ಟೆಂಬರ್‌ನಲ್ಲಿ ರಾಮಾಂಜನೇಯ ಅವರನ್ನು ಮೊದಲ ಬಾರಿಗೆ ಭೇಟಿಯಾಗಿ ಅವರೊಡನೆ ಬಣವಿಕಲ್ಲಿನ ಸುತ್ತಮುತ್ತಲ ಹಳ್ಳಿಗಳಲ್ಲಿ – ಕಂಚೋಬನ ಹಳ್ಳಿ, ಅಯ್ಯನಹಳ್ಳಿ, ಉಲ್ಲಾನಹಳ್ಳಿ ಎಲ್ಲ ಕಡೆ ಓಡಾಡಿ ಸಂಜೆ ಬಂದಿದ್ದೆ. ಅಲ್ಲೆಲ್ಲಾ ರಾಮಾಂಜನೇಯ, ಭಾಗ್ಯ, ಮಾರಣ್ಣ, ಪಾಲಯ್ಯನವರು ಸೇರಿ ಆರಂಭಿಸಿದ್ದ ಸ್ನೇಹ ಸಂಸ್ಥೆಯ ಗೆಳೆಯರು ಮಕ್ಕಳ ವಿಚಾರಗಳನ್ನಿಟ್ಟುಕೊಂಡು ಸಮುದಾಯಗಳಲ್ಲಿ ಚಿಕ್ಕದಾಗಿ ಕೆಲಸ ಆರಂಭಿಸಿದ್ದರು.

ಅಪೌಷ್ಟಿಕತೆ, ಅನಾರೋಗ್ಯ, ದುಡಿಯುವ ಮಕ್ಕಳು, ಜೀತದಲ್ಲಿ ಮಕ್ಕಳು, ಬಾಲ್ಯವಿವಾಹ, ಮಕ್ಕಳ ಮರಣ, ದುಸ್ಥಿತಿಯಲ್ಲಿದ್ದ ಅಂಗನವಾಡಿ ಕೇಂದ್ರಗಳು, ಬಾಗಿಲು ಕಿಟಕಿ ಮುರಿದು ಬಿದ್ದ ಶಾಲೆಗಳು, ತರಗತಿಯಲ್ಲೇ ಬೀಡಿ ಸೇದುವ ಶಿಕ್ಷಕರು ಇಂತಹದನ್ನೆಲ್ಲಾ ಹಲವಾರು ಕಡೆ ನೋಡಿದ್ದೆ. ಬಣವಿಕಲ್ಲಿನ ಸುತ್ತಮುತ್ತಲಲ್ಲೂ ನೋಡಿ ಬಂದಿದ್ದೆ. ಏನು ಮಾಡಬೇಕು ಇಂತಹವನ್ನೆಲ್ಲಾ ಬದಲಿಸಲಿಕ್ಕೆ!

ಆಗ ನನಗೆ ಆ ಬಲ್ಬಿನ ಕಡೆಗೆ ಗಮನ ಹೋಯಿತು. ಸುತ್ತಮುತ್ತ ಎಲ್ಲ ಮನೆಗಳು, ಅಂಗಡಿಗಳು, ರಸ್ತೆ ದೀಪ ಎಲ್ಲದರಲ್ಲೂ ಬೆಳಕಿತ್ತು. ಆದರೆ ತಾವಿದ್ದೀವಂತ ಹೇಳಲಿಕ್ಕೆ ಮಾತ್ರ. ಆ ಬೆಳಕಿನಲ್ಲಿ ಓದಲಾಗದು ಅಂತ ಮಕ್ಕಳು ಹೇಳಿದ್ದು, ರಾಮಾಂಜನೇಯ ಮಕ್ಕಳ ಅನುಕೂಲಕ್ಕಾಗಿ ತಮ್ಮ ಮನೆಯೆದುರು ದೊಡ್ಡದೊಂದು ಬಲ್ಬ್‌ ತಗಲು ಹಾಕಿ ಮಕ್ಕಳಿಗೆ ಓದಲು, ಬರೆಯಲು, ಮುಖ್ಯ ಶಾಲೆಯಲ್ಲಿ ಕೊಡುವ ಹೋಮ್‌ವರ್ಕ್‌/ಮನೆಗೆಲಸ ಮುಗಿಸಲು ನೆರವಾಗಿದ್ದರು. ಇದಲ್ಲವೆ ಮಕ್ಕಳ ಹಕ್ಕುಗಳ ಜಾರಿಯ ವಿಚಾರ! ನನ್ನೊಳಗಿದ್ದ ಮಕ್ಕಳ ಹಕ್ಕುಗಳ ಒಡಂಬಡಿಕೆಯ ವಿಚಾರಗಳಿಗೆ ಕಿಡಿ ತಾಗಿತ್ತು!

* * *

ʼಈಗ ಆದಷ್ಟೂ ಬೇಗ ಹೊರಟು ಸ್ಲೇಟ್‌ಕಲ್ಲಿನ ಗಣಿಗೆ ಹೋಗಿ ಬಂದುಬಿಡೋಣ ಸರ್‌ʼ ರಂಗೇಗೌಡ ಹೇಳುತ್ತಿದ್ದರು. ʼಇಲ್ಲೆಲ್ಲಾ ಬಹಳ ಬೇಗ ಬಿಸಿಲೇರುತ್ತೆ. ಹತ್ತು ಹನ್ನೊಂದು ಗಂಟೆಗೆಲ್ಲಾ ನಿಮಗೆ ಅಲ್ಲಿ ನಿಂತ್ಕೊಳಕ್ಕೆ ಆಗಲ್ಲʼ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಾರ್ಕಾಪುರ ಮಂಡಲಂನಲ್ಲಿ ಕಫೋರ್ಡ್‌ ಸಂಸ್ಥೆಯ ಕೆಲಸಗಳ ಬಗ್ಗೆ ತಿಳಿಯಲು ನಾನು ನನ್ನ ಸಹೋದ್ಯೋಗಿ ಡಾ.ಮಹೇಂದ್ರ ಹೋಗಿದ್ದೆವು (೧೯೯೬).

ಹಿಂದಿನ ದಿನ ರಾತ್ರಿ ಬೆಂಗಳೂರಿನಿಂದ ಹೊರಟು ಚೆನ್ನೈ ಮೂಲಕ ಒಂಗೋಲ್‌ಗೆ ಬಂದು ಅಲ್ಲಿಂದ ಮಾರ್ಕಾಪುರಕ್ಕೆ ಆ ಬೆಳಗ್ಗೆ ತಲುಪಿದ್ದೆವು. ತಿಂಡಿ ತಿನ್ನಲೆಂದು ರಸ್ತೆ ಬದಿಯ ಒಂದು ಗೂಡಂಗಡಿಯ ಹತ್ತಿರ ಬಂದಿದ್ದೆವು. ಆಗಿನ್ನೂ ಎಂಟು ಗಂಟೆ. ಆಗಲೇ ಎಲೆಯಲ್ಲಿ ಇಡ್ಲಿ ಚಟ್ನಿಗೆ ನನ್ನ ಮುಖದಲ್ಲಿ ಉದ್ಭವಿಸುತ್ತಿದ್ದ ಬೆವರು ಉಪ್ಪು ಸೇರಿಸುತ್ತಿತ್ತು. ಕಣ್ಣು ಬಿಡಲಿಕ್ಕೂ ಕಷ್ಟ ಪಡುತ್ತಿದ್ದೆ.

ನಮ್ಮ ಕಾರು ಸ್ಲೇಟು ಕಲ್ಲು ಗಣಿಗಳ ಬಳಿಗೆ ಹೋಗಲು ತೇಕುತ್ತಿತ್ತು. ರಂಗೇಗೌಡನಿಗೆ ಪರಿಚಯವಿದ್ದ ಒಬ್ಬ ಗಣಿ ಕಾರ್ಮಿಕನ ಮೂಲಕ ನಮಗೆ ಗಣಿಯ ಹತ್ತಿರ ಹೋಗಲು ಆಗಿತ್ತು. ʼಈಗೆಲ್ಲಾ ಮಕ್ಕಳನ್ನ ಗಣಿಯೊಳಗೆ ಬಿಡಲ್ಲ ಸಾರ್.‌ ತುಂಬಾ ಆಳಕ್ಕೆ ಹೋಗಿಬಿಟ್ಟಿವೆʼ ಆತ ಹೇಳುತ್ತಿದ್ದ. ʼಆಫೀಸರ್ ಗಳು ಯಾರೂ ಬರಲ್ಲ ಸಾರ್.‌ ಈಗೆಲ್ಲಾ ಮಕ್ಳು ಗಣೀಲಿ ಇಲ್ವಲ್ಲʼ ಅವ ತನ್ನ ಗಟ್ಟಿ ಹೇಳಿಕೆ ಕೊಟ್ಟಿದ್ದ‌.

ತೆರೆದ ಗಣಿಗಳೊಳಗೆ ಇಣುಕಲು ಯತ್ನಿಸಿದ ನನಗೆ ನಾಲ್ಕೈದು ಜನ ಎಚ್ಚರಿಸಿದರು. ಅಲ್ಲೇ ಇದ್ದ ಒಂದು ಕಂಬವನ್ನು ಹಿಡಿದುಕೊಂಡು ಜಾಗರೂಕತೆಯಿಂದ ಬಗ್ಗಿ ನೋಡಿದೆ. ಆಳದಲ್ಲೆಲ್ಲೋ ಸಣ್ಣದಾಗಿ ಕಲ್ಲು ಕುಟ್ಟುವ ಶಬ್ದ. ಒಂದಷ್ಟು ಜನ ಪದರ ಪದರವಾದ ಕಲ್ಲು ಹಿಡಿದು ದಾಟಿಸುತ್ತಿದ್ದರು. ಬಾವಿಯಿಂದ ನೀರು ಸೇದುವಂತೆ ರಾಟೆಗೆ ಕಟ್ಟಿದ್ದ ಹಗ್ಗದ ಮೂಲಕ ಒಬ್ಬ ಸಣ್ಣ ಗಂಟನ್ನು ಮೇಲೆಳೆಯುತ್ತಿದ್ದ. ʼಇದು ಬರೀ ಕಲ್ಲು ಸಾರ್‌. ಇದು ಸ್ಲೇಟ್‌ ಆಗಕ್ಕೆ ತುಂಬಾ ಕೆಲಸ ಇದೆ. ಇಲ್ಲೇ ಶೆಡ್‌ನಲ್ಲೇ ಕೆಲಸ. ಬನ್ನಿʼ ಆತ ಕರೆದೊಯ್ದ.

ಟಿನ್ ಶೆಡ್ನೊಳಗೆ ಕಾಲಿಡುತ್ತಿದ್ದಂತೆ ನನ್ನ ಕಣ್ಣಿಗೆ ಬಿದ್ದದ್ದು ಮಕ್ಕಳು. ಸ್ಲೇಟ್‌ ಕಲ್ಲನ್ನು ಕತ್ತರಿಸುವುದು, ಅದನ್ನು ಪಾಲೀಶ್‌ ಮಾಡಿ ಕಪ್ಪು ಬಣ್ಣ ಹಾಕುವವರಿಗೆ ತಲುಪಿಸುವುದು, ಅವನ್ನೆಲ್ಲಾ ಒಣಗಿಸಲು ಎತ್ತಿಡುವುದು. ಬಣ್ಣ ಒಣಗಿದ ಕಲ್ಲನ್ನು ಮರದ ಕಟ್ಟು ಹಾಕುವಲ್ಲಿಗೆ ತಂದು ಕೆಲಸ ಮುಗಿಸುವುದು. ಅಲ್ಲಿಂದ ಪ್ಯಾಕ್‌ ಮಾಡುವುದು… ರಂಗೇಗೌಡ ಮೊದಲೇ ಹೇಳಿದ್ದ. ನೋಡಬೇಕು. ತುಂಬಾ ಪ್ರಶ್ನೆಗಳನ್ನು ಕೇಳಬಾರದು. ನನಗೆ ತಡೆಯಲು ಆಗಲಿಲ್ಲ. ಕೇಳಿಯೇಬಿಟ್ಟೆ, ʼಈ ಮಕ್ಕಳು ಚೈಲ್ಡ್‌ ಲೇಬರ್‌ ಅಲ್ಲವಾ?ʼ ʼಅವರು ಗಣಿಯಲ್ಲಿಲ್ಲವಲ್ಲ ಸಾರ್‌. ಇದು ಸಿಂಪಲ್‌ ಕೆಲ್ಸ ಅದಕ್ಕೆ ಮಾಡಬಹುದು. ಯಾರೂ ಏನೂ ಕೇಳಲ್ಲ ʼಅವ ನನ್ನ ಬಾಯಿ ಮುಚ್ಚಿಸಿದ.

ʼಸ್ಲೇಟ್‌ ಮಾಡುವ ಮಕ್ಕಳಿಗೆ ಅದನ್ನು ಬರೆಯಲು ಬಳಸುವಂತೆ ಮಾಡುವ ಕೆಲಸ ಸಾರ್‌ ನಾನು ಯೋಚಿಸ್ತಿರೋದು. ಅದು ಅಲ್ಲವಾ ಸಾರ್‌ ಮಾಡಬೇಕಿರುವುದುʼ ದುಡಿಯುವ ಮಕ್ಕಳನ್ನು ಕುರಿತು ಅಲ್ಲಿನ ಕೆಲಸಗಾರ ಹೇಳಿದ ವ್ಯಾಖ್ಯಾನ ಕೇಳಿ ಬೆದರಿ ಹಿಂದೆ ಹೊರಟಾಗ ಬಿಸಿಲ ಬೆವರ ಮಧ್ಯ ರಂಗೇಗೌಡ ತಂಪು ಮಾತು ತಂದರು. ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದಗಳು ಕಣ್ಮುಂದೆ ಕುಣಿಯಲಾರಂಭಿಸಿದ್ದವು.

* * *

ಶ್ರೀನಿವಾಸಪುರದ ಬಳಿಯ ಕಮತಂಪಲ್ಲಿಯಲ್ಲಿರುವ ಆನಂದಾಶ್ರಮಕ್ಕೆ ನನ್ನನ್ನು ಎಪಿಡಿ (ಅಸೋಸಿಯೇಷನ್‌ ಆಫ್‌ ಪೀಪಲ್‌ ವಿತ್‌ ಡಿಸೆಬಿಲಿಟೀಸ್‌) ಸಂಸ್ಥೆಯ ಬಸವರಾಜ್‌ ಕರೆದೊಯ್ದಿದ್ದರು (೧೯೯೩). ಎಪಿಡಿ ಪರವಾಗಿ ಅಲ್ಲಿ ಕ್ಷೇತ್ರ ಕಾರ್ಯಕರ್ತರಾಗಿದ್ದ ಲಿಂಗಪ್ಪ ಎನ್ನುವವರೊಡನೆ ಕೆಲವು ಹಳ್ಳಿಗಳಲ್ಲಿ ಅಂಗವಿಕಲತೆಯಿಂದಿರುವ ಮಕ್ಕಳ ಕುಟುಂಬಗಳ ಭೇಟಿಗೆ ಹೋದೆವು.

ಅಪಘಾತಗಳಿಂದ ಕೈಕಾಲು ಕಳೆದುಕೊಂಡ ಮಕ್ಕಳು, ಪೋಲಿಯೋ ಅಥವಾ ಅಂತಹ ಲಕ್ಷಣಗಳಿಂದ ಕಾಲು ಕೈ ಸೆಳೆತವುಂಟಾಗಿರುವ ಮಕ್ಕಳು, ವಿವಿಧ ಅಂಗವಿಕಲತೆಯೊಂದಿಗೆ ಹುಟ್ಟಿದ ಮಕ್ಕಳು, ಬೆಳೆದಂತೆ ಕಾಣದ ರೋಗ ಕಾರಣಗಳಿಂದಾಗಿ ಅಂಗವಿಕಲರಾದ ಮಕ್ಕಳು, ಕಣ್ಣು ಇಲ್ಲದ, ಕಿವಿ ಕೇಳದ, ಮಾತನಾಡದ ಮಕ್ಕಳು, ಅದೆಷ್ಟು ಮಾನಸಿಕ ಅಸ್ವಸ್ಥರು, ಹಲವು ವಿಕಲತೆಗಳಿಂದಾಗಿ ಮಲಗಿದ್ದಲ್ಲೇ ಮಲಗಿರುವ ಮಕ್ಕಳು.

ಲಿಂಗಪ್ಪ ಹೇಳುತ್ತಿದ್ದರು ಇವರಲ್ಲಿ ಬಹುತೇಕ ಮಕ್ಕಳಿಗೆ ಯಾವುದೇ ಚಿಕಿತ್ಸೆ ಇಲ್ಲ… ಆದರೆ ಕುಟುಂಬಗಳಿಗೆ ಈ ಮಕ್ಕಳಿಗೆ ಎಲ್ಲಿಂದಾದರೂ ಏನಾದರೂ ಚಮತ್ಕಾರವಾಗಿ ಚಿಕಿತ್ಸೆ ಸಿಗುತ್ತದೆ. ನಮ್ಮ ಮಕ್ಕಳು ಸರಿ ಹೋಗುತ್ತಾರೆ ಎಂಬ ಆಸೆ. ಅದಕ್ಕಾಗಿ ಇವರು ಮಾಡದ ಕೆಲಸವಿಲ್ಲ. ಇಂಗ್ಲಿಷ್‌ ಔಷಧಿ, ನಾಟಿ ಔಷಧಿ, ಆಯುರ್ವೇದ, ಯುನಾನಿ, ಮಾಯಮಂತ್ರ, ಬಲಿ, ಅಂಜನ, ದೇವರು ದಿಂಡರು, ಸ್ವಾಮಿಗಳು… ಇನ್ನೂ ಏನೇನೋ.

ಬೇಕಿರುವುದು ಫಿಸಿಯೋತೆರಪಿ, ಸಾಧನ ಸಲಕರಣೆಗಳನ್ನು ಒದಗಿಸುವುದು,  ಪೋಷಕರಿಗೆ ಮಾರ್ಗದರ್ಶನ, ಆಪ್ತಸಮಾಲೋಚನೆ, ನೆರವು.  ಅಂಗವಿಕಲತೆ ಸರಿಪಡಿಸಲು ಔಷಧಿ ಇಲ್ಲ ಎಂದೆಷ್ಟೇ ಹೇಳಿದರೂ ಕೇಳುವವರು ಅಷ್ಟಿಲ್ಲ…

ಅಂದು ಕೆಲವು ಮನೆಗಳ ಜನ ನನ್ನನ್ಯಾರೋ ಹೊಸ ಎಕ್ಸಪರ್ಟ್ಎಕ್ಸ್ಂ ಬಂದಿದ್ದಾನೆ ಎಂಬಂತೆ ನೋಡುತ್ತಿದ್ದರು. ಒಂದೇ ಮನೆಯಲ್ಲಿ ಒಂದೇ ತಾಯಿ ತಂದೆಗೆ ಒಬ್ಬರಾದ ಮೇಲಂತೆ ಒಬ್ಬರು ಐವರು ಬಹು ಅಂಗವೈಕಲ್ಯತೆಯೊಂದಿಗಿರುವ ಮಕ್ಕಳು ಹುಟ್ಟಿದರೂ ಮುಂದಿನ ಮಗು ಸರಿಯಾಗಿ ಹುಟ್ಟಬಹುದು ಅಲ್ಲವೆ ಎಂದು ಆ ಮಕ್ಕಳ ಅಜ್ಜ ಕೇಳಿದಾಗ ನನಗೆ ಬಾಯಿ ಬಿಡಲಾಗಲಿಲ್ಲ.

ಲಿಂಗಪ್ಪ ಹೇಳಿದರು, ಇಲ್ಲೆಲ್ಲಾ ಒಳಕುಟುಂಬಗಳಲ್ಲೇ ವಿವಾಹ ಹೆಚ್ಚು. ಅಂತಹ ಕುಟುಂಬಗಳಲ್ಲಿ ಅಂಗವಿಕಲತೆಯಿರುವ ಮಕ್ಕಳು ಜನಿಸುವುದಂತೂ ಸಾಮಾನ್ಯ. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಆಗಬೇಕಿರುವುದು ಮದುವೆಗೆ ಜಾತಕ, ಕುಟುಂಬದ ಶ್ರೀಮಂತಿಕೆ, ಸಂಬಂಧ, ರಾಜಕೀಯ ಮುಖ್ಯವಲ್ಲ, ಬದಲಾಗಿ ವಿವಾಹ ಪೂರ್ವ ಆಪ್ತಸಮಾಲೋಚನೆ. ಆ ಮೂಲಕ ಮಕ್ಕಳಿಗೆ ಆರೋಗ್ಯ ಪೂರ್ಣವಾಗಿ ಜನಿಸುವ ಬದುಕುವ ಬೆಳೆಯುವ ಹಕ್ಕು ಖಾತರಿ ಮಾಡಬೇಕು.

* * *

ʼಶಾಲೆ, ಓದು ಎಂದರೆ ಬಿಡುಗಡೆʼ ಒಬ್ಬ ಹುಡುಗ ಹೇಳುತ್ತಿದ್ದ, ʼನಾನು ಹುಟ್ಟಿದಾಗಿನಿಂದ ಒಡೆಯರ ಮನೆಯಲ್ಲಿ ಜೀತದಲ್ಲಿದ್ದವನು. ಈ ಅಣ್ಣಂದಿರು ಬಂದು ನನ್ನ ಬೆಟ್ಟದಿಂದ ಕರೆದುಕೊಂಡು ಬಂದಾಗ ನನಗೆ ಭಯವಾಗಿತ್ತು. ನಾನು ಮೇಯಲು ಹೊಡೆದುಕೊಂಡು ಬಂದಿದ್ದ ಧಣಿಗಳ ದನಗಳು ಈಗ ಎಲ್ಲಿಯಾದರೂ ಹೋದರೆ, ಯಾರದಾದರೂ ಹೊಲಕ್ಕೆ ನುಗ್ಗಿದರೆ, ಬಿದ್ದು ಕಾಲು ಮುರಿದುಕೊಂಡರೆ… ನನಗೆ ಭಯವಾಗಿತ್ತು. ನಾನು ಹಿಂದೆ ಹೋಗದಿದ್ದರೆ ಧಣಿಗಳು ನನ್ನಪ್ಪನ ಕಾಲು ಮುರಿದರೆ, ಅಮ್ಮನನ್ನ ಹೊಡೆದರೆ, ನಮ್ಮ ಗುಡಿಸಿಲಿಗೆ ಬೆಂಕಿಯಿಟ್ಟರೆ, ಅಷ್ಟಕ್ಕೂ ಮಿಗಿಲಾಗಿ ನಮ್ಮಂತಹವರಿಗೆಲ್ಲಾ ಯಾಕೆ ಈ ಸ್ಕೂಲು, ಓದು… ಈಗ ಗೊತ್ತಾಗ್ತಾ ಇದೆ ಓದು ಅಂದ್ರೆ ಸ್ವಾತಂತ್ರ್ಯ, ಅವಕಾಶʼ.

ಆ ಹುಡುಗ ಅಷ್ಟು ದೊಡ್ಡ ಮಾತನಾಡುವಾಗ ನನಗೆ ಆಶ್ಚರ್ಯವಾಗಿರಲಿಲ್ಲ. ಅಷ್ಟು ಹೊತ್ತಿಗೆ ಸಾಕಷ್ಟು ಕಡೆ ರಂಗಾರೆಡ್ಡಿ ಜಿಲ್ಲೆ (ಆಂಧ್ರಪ್ರದೇಶ)ಯ ಹಳ್ಳಿಗಳಲ್ಲಿ ಎಂ.ವಿ. ಫೌಂಡೇಶನ್‌  ನಡೆಸುವ ಜೀತದಿಂದ ಬಿಡುಗಡೆಗೊಳಿಸಲಾದ ಮಕ್ಕಳಿಗೆ ೭ನೇ ಕ್ಲಾಸ್‌ ಪರೀಕ್ಷಾ ತಯಾರಿಯ ಕ್ಯಾಂಪ್‌ನಲ್ಲಿ ಚರ್ಚೆ ನಡೆದಿತ್ತು (೧೯೯೩). ಸಂಸ್ಥೆಯ ಶಾಂತಾ ಸಿನ್ಹಾ ಶಂಕರಪಲ್ಲಿ ಎಂಬಲ್ಲಿನ ಕ್ಯಾಂಪ್‌ನಲ್ಲಿ ಮಕ್ಕಳ ನಡುವೆ ಕುಳಿತು ಕುಶಲ ಕೇಳುತ್ತಿದ್ದರು.

ಗೋಪಿಕೃಷ್ಣ, ವೆಂಕಟ ರೆಡ್ಡಿ ಮತ್ತಿತರರು ಜೀತದಿಂದ ಹೊಸದಾಗಿ ಬಿಡಿಸಿಕೊಂಡು ಬಂದಿದ್ದ ಮಕ್ಕಳೊಡನೆ ಮಾತನಾಡಲು  ಹೋದರು. ಅಲ್ಲೇ ಒಂದಷ್ಟು ಜನ ಕುಳಿತಿದ್ದರು. ನಾನವರ ಬಳಿ ಹೋದೆ. ʼಅಯ್ಯಾ! ಮಾ ಬಿಡ್ಡ ಬಾಗುಂದಾ ಅಯ್ಯ. ಚೆಕ್ಕನ ಚದೋಸುಂದ? (ಅಯ್ಯಾ ನಮ್ಮ ಮಗಳು ಚೆನ್ನಾಗಿದ್ದಾಳಾ? ಚೆನ್ನಾಗಿ ಓದ್ಕೋತಾಳಾ?)ʼ ಒಬ್ಬ ಗಂಡಸು ಕೇಳಿದರು.

ಅವರ ಕೈಯಲ್ಲಿದ್ದ ಪುಟ್ಟ ಚೀಲದಲ್ಲಿ ಬಿಸ್ಕತ್‌, ಕೆಂಪು ಹಸಿರು ಟೇಪು, ಬಳೆ, ಜೊತೆಗೊಂದು ಪೆನ್ಸಿಲ್‌. ಆತ ಮುಂದುವರೆಸಿದರು, ʼನಮ್ಮಂತ ಬಡವರಿಗ್ಯಾಕೆ ಈ ಸ್ಕೂಲು ಓದು ಅಂತ ಇದ್ವಿ. ದಣೀರ ಮನೆ ಹೊಲ ಕೊಟ್ಟಿಗೆ ಕೆಲಸ ನಮದು ತಾನೆ. ಆಗ್ಲೆ ಮಗ್ಳನ್ನ ಕ್ಯಾಂಪ್‌ಗೆ ಹಿಡ್ಕೊಂಡು ಬಂದು ನಾಲ್ಕು ತಿಂಗಳಾಯ್ತು. ಬಿಡಲ್ವಂತೆ. ಆಗಿದ್ದಾಗೋಗಲಿ. ನಾನೂ ವಾರ ವಾರ ಬರ್ತೀನಿ. ಇವ್ಳು ಓದೋದಾದರೆ ಓದಲಿ. ಆ ದೇವರು ಏನು ಮಾಡಿಸ್ತಾನೋ ಹಾಗಾಗಲಿ. ನಮ್ಮ ಜೀತ ನಮಗೆ. ಇದರಲ್ಲ…ʼ 

ಮಕ್ಕಳ ಬದುಕು, ರಕ್ಷಣೆ, ಅಭಿವೃದ್ಧಿ, ಭಾಗವಹಿಸುವಿಕೆ ಹಕ್ಕುಗಳು ಎನ್ನುವುದು ಕೇವಲ ಪದಗಳಲ್ಲ. ಅವುಗಳ ಹಿಂದಿನ ಬೃಹತ್‌ ಧನಾತ್ಕಕ ತತ್ತ್ವ ಆಶಯ ಚುಟುಕು ಚುಟುಕಾಗಿ ತೆರೆದುಕೊಳ್ಳುತ್ತಿದ್ದ ಕಾಲ. ೧೯೯೦ರ ಆ ದಶಕದಲ್ಲಿ ನೂರಾರು ಜನ ನನ್ನಂತೆಯೇ ಈ ಹೊಸ ಕಲ್ಪನೆಗೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಿದ್ದರು. ಸರ್ಕಾರವೇ ಒಪ್ಪಿಕೊಂಡಿದ್ದ ವಿಶ್ವಸಂಸ್ಥೆಯ ಒಡಂಬಡಿಕೆಯಾಗಿದ್ದರೂ ಸರ್ಕಾರದ ಅನೇಕ ಅಧಿಕಾರಿಗಳಿಗೆ ಇದೊಂದು ಅರ್ಥವಾಗದ ಒಗಟಾಗಿತ್ತು.

ಮಕ್ಕಳ ಹಕ್ಕುಗಳನ್ನು ಕುರಿತು ಕನ್ನಡದಲ್ಲಿ ಸಿದ್ಧಮಾಡಿದ್ದ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನದ ನಾವು ಕೆಲವರು ಗೆಳೆಯರು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ ಬಳಿ ಹೋಗಿದ್ದೆವು (೧೯೯೪ ಇರಬೇಕು). ಆತ ಭಿತ್ತಿಪತ್ರಗಳ ಚಿತ್ರಗಳು, ಅದರಲ್ಲಿನ ಮಕ್ಕಳ ಹಕ್ಕುಗಳ ಒಡಂಬಡಿಕೆಯ ವಿಚಾರಗಳನ್ನು ಮೆಚ್ಚಿಕೊಂಡರು. ಶಾಲೆಗಳಲ್ಲಿ ಹಾಕಲು ಚೆನ್ನಾಗಿರುತ್ತದೆ ಎಂದೂ ಹೇಳಿದರು. ಹೆಚ್ಚಿನ ವಿವರಗಳನ್ನು ಅಪೇಕ್ಷಿಸಿದ ಅವರಿಗೆ ವಿಶ್ವಸಂಸ್ಥೆ, ಸರ್ಕಾರ ಒಪ್ಪಿಕೊಂಡಿರುವುದು ಎಲ್ಲವನ್ನೂ ಬಹಳ ಉತ್ಸಾಹದಿಂದಲೇ ಹೇಳಿದೆವು. ಥಟ್ಟನೆ ಬಂದ ಆತನ ಮಾತು ನಮ್ಮನ್ನು ಅಯೋಮಯಗೊಳಿಸಿತು, ʼಇದೆಲ್ಲಾ ಸರ್ಕಾರಕ್ಕೆ ಸಂಬಂಧಿಸಿದ ವಿಚಾರಗಳು. ನೀವ್ಯಾಕೆ ಎನ್.ಜಿ.ಓ.ಗಳು ಇದಕ್ಕೆ ತಲೆ ಹಾಕ್ತೀರ. ಆಗಲ್ಲ ಹೋಗಿʼ.

ಬೆಂಗಳೂರಿನ ಜಯಚಾಮರಾಜೇಂದ್ರ ರಸ್ತೆಯಲ್ಲಿರುವ ಸಿಮೆಂಟ್‌ ಬ್ಲಾಕ್‌ನಲ್ಲಿ ಮೈತ್ರಿ ಸರ್ವ ಸೇವಾ ಸಂಸ್ಥೆಯ ಆನ್ಸಲೆಂ ರೊಸಾರಿಯೋ ಅವರು ನಡೆಸುತ್ತಿದ್ದ ಮಕ್ಕಳ ಹಗಲು ತಂಗುದಾಣದಲ್ಲಿ ಸದಾ ಕಾಲ ಕನಿಷ್ಟ ಮೂವತ್ತು ನಲವತ್ತು ಮಕ್ಕಳು. ತಮಿಳು, ಉರ್ದು ವಾತಾವರಣದ ಮಧ್ಯದಲ್ಲಿ ಹಾಡು ಹೇಳಿಕೊಡುವ, ಆಟವಾಡಿಸುವ, ಅಕ್ಷರ ಕಲಿಸಲು ಯತ್ನಿಸುವ ಯುವಕರು. ಆ ಮಕ್ಕಳ ಪೋಷಕರಿಗೆ ಕುಡಿತ ಬಿಡಲು, ಮನೆಯಲ್ಲಿ ಹೆಂಡತಿ ಮಕ್ಕಳಿಗೆ ಹೊಡೆಯಬೇಡಿ ಅವರ ಖರ್ಚಿಗೆ ಹಣ ಕೊಡಿ ಎಂದು ಮನವೊಲಿಸುವ ಸಮಾಲೋಚನೆ.

ʼವಾಸು, ನೋಡಿಲ್ಲಿ. ನಮ್ಮ ಮಕ್ಕಳ ಆಸ್ಪತ್ರೆಗೆ ಬರೀ ಬೆಂಗಳೂರಲ್ಲಪ್ಪ ಸುತ್ತಲ ಎಲ್ಲ ತಾಲೂಕುಗಳು, ಜಿಲ್ಲೆಗಳಿಂದ ಮಕ್ಕಳನ್ನ ಕರೆದುಕೊಂಡು ಬರ್ತಾರೆ. ನಮ್ಮಲ್ಲಿ ಬೆಡ್‌ ಇಲ್ಲ, ಸೌಕರ್ಯ ಇಲ್ಲ ಅಂದರೂ ಬಿಡಲ್ಲʼ ಡಾ. ಆಶಾ ಬೆನಕಪ್ಪನವರೊಡನೆ ವಾಣಿವಿಲಾಸ ಆಸ್ಪತ್ರೆಯಲ್ಲಿ ಒಮ್ಮೆ ನಡೆಯುತ್ತಿದ್ದ ಮಾತುಕತೆಯಲ್ಲಿ ಹೇಳುತ್ತಿದ್ದರು.

ʼಇಲ್ಲಿನ ಹೆರಿಗೆ ಆಸ್ಪತ್ರೆಗೂ ಅಷ್ಟೆ. ನಿಮ್ಮ ನಿಮ್ಮ ಊರಿನಲ್ಲೇ ಡಾಕ್ಟರ್ಸ್‌ ಇದ್ದಾರೆ, ವ್ಯವಸ್ಥೆ ಇದೆ ಎಂದರೂ ಜನ ಬಿಡವೊಲ್ಲರು. ಇದೂ ಮಕ್ಕಳ ಹಕ್ಕುಗಳ ವಿಚಾರವೇ ಅಲ್ಲವೇ? ಬೆಂಗಳೂರಿಗೇ ಜನ ಬರುವಂತೆ ಮಾಡುವ ಬದಲು ಸರ್ಕಾರ ಜಿಲ್ಲೆಗಳಲ್ಲಿ ತಾಲೂಕುಗಳಲ್ಲಿ ವೈದ್ಯರನ್ನು ಸಾಕಷ್ಟು ಸಂಖ್ಯೆಯಲ್ಲಿ ನೇಮಿಸಿ, ವ್ಯವಸ್ಥೆ ಮಾಡಿದರೆ ಜನ ಇಲ್ಲಿಯ ತನಕ ಬಂದು ಚಿಕಿತ್ಸೆ ಸಿಗಲಿಲ್ಲ, ಸಮಯಕ್ಕೆ ಸಿಗಲಿಲ್ಲ ಅಂತ ಗಲಾಟೆ ಮಾಡುವುದನ್ನು ತಪ್ಪಿಸಬಹುದು. ನಮ್ಮಲ್ಲಿಗೆ ಬರುವ ರೋಗಿಗಳ ಸಂಖ್ಯೆಯೇ ಸಾಕು, ನಮ್ಮ ವ್ಯವಸ್ಥೆ ಕುಸಿದು ಬೀಳಲಿಕ್ಕೆʼ.  

ಬಾಗಲಕೋಟೆಯ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದಾವೃತ್ತವಾಗಿರುವ ಅಮರಗೋಳ ಹಳ್ಳಿಯ್ಯತ್ತ  ಬೂದೆಪ್ಪನವರೊಡನೆ ಹೆಜ್ಜೆ ಹಾಕಿದ್ದೆ (೧೯೯೬). ಅಲ್ಲಿಗೆ ಯಾವುದೇ ವಾಹನ ಸೌಕರ್ಯವಿರಲಿಲ್ಲ. ಹಿನ್ನೀರು ಹಿಂಜರಿದ ಕೆಸರಿನಲ್ಲೇ ಹೋಗಬೇಕಿತ್ತು. ಬೂದೆಪ್ಪ ಬಲವಂತವಾಗಿ ಕರೆದೊಯ್ಯುತ್ತಿದ್ದದ್ದು ಆ ಹಳ್ಳಿಗಳಲ್ಲಿ ಆಗುತ್ತಿದ್ದ ಬಾಲ್ಯವಿವಾಹಗಳು ಅದರಿಂದಾಗಿ ಹೆಣ್ಣುಮಕ್ಕಳು ತಮ್ಮ ಶಿಕ್ಷಣ, ಆರೋಗ್ಯ, ರಕ್ಷಣೆ ಕಳೆದುಕೊಂಡು ಹೆಚ್ಚೂ ಕಡಿಮೆ ಮನೆಗೆಲಸದ ಕೂಲಿಗಳಾಗುವುದು, ಮಕ್ಕಳು ಹೆರುವ ಯಂತ್ರಗಳಾಗುತ್ತಿದ್ದುದನ್ನು ಪ್ರಕರಣಗಳನ್ನೆದುರಿಟ್ಟು ಪರಿಚಯಿಸಲಿಕ್ಕೆ. ಮುಖ್ಯ ನನ್ನಂತಹವರಿಗೆ ನೋಡಿ ಈಗಲೂ ಬಾಲ್ಯವಿವಾಹಗಳಾಗುತ್ತಿವೆ, ಸಾಮೂಹಿಕ ವಿವಾಹಗಳಲ್ಲಿ ಬಾಲ್ಯವಿವಾಹಗಳು ಕದ್ದೂ ಮುಚ್ಚಿ ಅಲ್ಲದೆ ಬಹಿರಂಗವಾಗಿಯೂ ಮಾಡುತ್ತಿದ್ದಾರೆ ಎಂದು ಚುಚ್ಚಲು.  

ಇದೆಲ್ಲವೂ ಮಕ್ಕಳ ಹಕ್ಕುಗಳ ರಕ್ಷಣೆಯ ವಿಚಾರಗಳೇ. ಮಕ್ಕಳ ಹಕ್ಕುಗಳ ಪಾಠಗಳನ್ನು ಅದನ್ನು ಜಾರಿ ಮಾಡುವ ವಿಚಾರಗಳನ್ನು ದಿನದಿನ ಕಲಿಯುತ್ತಲೇ ಬಂದಿದ್ದೇನೆ. ಮಕ್ಕಳ ಹಕ್ಕುಗಳ ಒಡಂಬಡಿಕೆ, ಭಾರತ ಸಂವಿಧಾನ, ನೀತಿಗಳು, ಕಾಯಿದೆಗಳು, ಸರ್ಕಾರದ ಬೃಹತ್‌ ಕಾರ್ಯಕ್ರಮಗಳು, ಯೋಜನೆಗಳು, ಆಯವ್ಯಯದಲ್ಲಿ ಮಕ್ಕಳಿಗಾಗಿ ಮೀಸಲಿಡುವ ಹಣ… ಇವೆಲ್ಲದರ ಮಧ್ಯ ಸ್ವಯಂಸೇವಾ ಸಂಘಟನೆಗಳ ಚಿಕ್ಕಪುಟ್ಟ ಪ್ರಯೋಗಗಳು, ಪ್ರಯೋಜನಗಳು, ಆಂದೋಲನಗಳು, ಚಳವಳಿಗಳು. ಕಲಿಕೆಗೆ ವಿಪುಲವಾದ ಅವಕಾಶ.

ಇಷ್ಟೆಲ್ಲದರ ನಡುವೆ ಸರ್ಕಾರದ ಭಾಗವಾಗಿ ಮಕ್ಕಳ ಹಕ್ಕುಗಳ ಅನುಷ್ಠಾನ ಮತ್ತು ಅದರ ಉಸ್ತುವಾರಿ ಮಾಡುವ ಸಂದರ್ಭದಲ್ಲಿ ಮತ್ತು ಸ್ವೀಡನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾರ್ಯಾಗಾರದಲ್ಲಿ ಭಾಗಿಯಾದಾಗ, ಮಕ್ಕಳ ಹಕ್ಕುಗಳ ದೃಷ್ಟಿಕೋನ ಬೆಳೆಸಿಕೊಳ್ಳುವ ಇನ್ನೊಂದು ಹಂತಕ್ಕೆ ನಡೆದಿದ್ದೆ.

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು ವಾಸುದೇವ ಶರ್ಮ

November 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Anjali Ramanna

    ಬದಲಾಗಿದೆ ಆದರೆ ಬದಲಾಗಿಲ್ಲ ಮಕ್ಕಳ ಬದುಕು. Injustice anywhere is a threat to justice everywhere ಎನ್ನುವ Matin Luther King ನ ಮಾತು ನೆನಪಾಯ್ತು.
    ಅಂಜಲಿ ರಾಮಣ್ಣ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: